ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಡುನಾಡಿನ ಅಣ್ಣಂದಿರೆ| ಗಡಿ
ಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲ
ಒಡ ಹುಟ್ಟಿದ ಕನ್ನಡ ಮಕ್ಕಳು||
-ಡಾ.ಜಯದೇವಿತಾಯಿ

ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು.
 ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು..

೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್‌ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು
೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು.

೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು.

ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು…  ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ)
 ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು  ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು.
 ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.
ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.
ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು.

ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್‌ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು.
 ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು.

ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು.

 ಏಕೀಕರಣವು  ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.
ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು  ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು.

ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.
ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.
ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು.

ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.
೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು.

ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು.
 ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.
ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್‌ಸಂಘಟನೆಯಾಗಿ ಕಂಡರು.

ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.
ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ.

ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.
ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.
ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.
ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ  ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು.

ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್‌ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.
ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ.

ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು  ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು.

ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ.

ಕರ್ನಾಟಕ ಏಕೀಕರಣದ ಇತಿಹಾಸವು  ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ.

ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನು
ಬಚ್ಚ ಬರಿಯ ನಿತ್ಯ- ನುಡಿಗನ್ನಡ
ಅಚ್ಚೊತ್ತಿಕೊಳ್ಳಲೇನ ಅಖಂಡ||
ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.

ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.


About The Author

Leave a Reply

You cannot copy content of this page

Scroll to Top