“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ
ಮಕ್ಕಳ ಸಂಗಾತಿ ಜಯಲಕ್ಷ್ಮಿ .ಕೆ “ಮಕ್ಕಳು ಮತ್ತು ಸ್ವಾತಂತ್ರ್ಯ.” ನನ್ನ ಗೆಳತಿಯೊಬ್ಬಳ ಜೊತೆಗೆ ಮೈಸೂರಿನ ಬಟ್ಟೆ ಮಳಿಗೆಯೊಂದಕ್ಕೆ ಹೋಗಿದ್ದೆ.ಆಕೆಯ ಅವಳಿ ಮಕ್ಕಳ ಹುಟ್ಟುಹಬ್ಬ ಸ್ವಾತಂತ್ರ್ಯ ದಿನಾಚರಣೆಯಂದೇ ಆಗಿದ್ದುದರಿಂದ ಮಕ್ಕಳ ಬಟ್ಟೆಯ ಆಯ್ಕೆಯ ಸಂಪೂರ್ಣ ಸ್ವಾತಂತ್ರ್ಯವನ್ನು ಅವರಿಗೇ ಬಿಡಲಾಗಿತ್ತು. ಮಕ್ಕಳು ಇಷ್ಟ ಪಟ್ಟ ಬಟ್ಟೆಗಳು ( ತಾಯಿಗೆ ಇಷ್ಟ ಆಗದಿದ್ದರೂ )ಖರೀದಿ ಮಾಡಲೇಬೇಕಾದ ಅವಿವಾರ್ಯತೆಯಲ್ಲಿದ್ದಳು ನನ್ನ ಗೆಳತಿ. ಮಕ್ಕಳು ಬಟ್ಟೆ ಆರಿಸಿದ್ದೇ ಆರಿಸಿದ್ದು… ಕೊನೆಗೂ ಆಯ್ಕೆ ಮುಗಿಯಿತು. ಬಹು ಹೊತ್ತು ಅಲ್ಲೇ ನಿಂತಿದ್ದರಿಂದ ದಣಿವು ಹಸಿವು ಎರಡೂ ಆಗಿತ್ತು. ಬಟ್ಟೆ ಮಳಿಗೆಯಿಂದೀಚೆ ಬಂದ ತಕ್ಷಣ ಏನಾದರೂ ತಿನ್ನೋಣ ಎಂದೆನಿಸಿತ್ತು. ಮತ್ತೆ ಹೋಟೆಲ್ ನ ಆಯ್ಕೆ.. ಅಲ್ಲಿ ತಿನಿಸಿನ ಆಹಾರದ ಆಯ್ಕೆ ಎಲ್ಲ ಸ್ವಾತಂತ್ರ್ಯ ಮಕ್ಕಳದ್ದೇ ಆಗಿತ್ತು. ಅಲ್ಲಿಂದ ಮರಳಿ ಮನೆಗೆ ಬಂದರೆ ಅಲ್ಲೂ ಮಕ್ಕಳಿಗೆ ನೀಡುತ್ತಿದ್ದ ಅತಿಯಾದ ಸ್ವಾತಂತ್ರ್ಯ ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಇಬ್ಬರಿಗೂ ಪ್ರತ್ಯೇಕ ಮೊಬೈಲ್.. ಮೊಬೈಲ್ ಗೇಮ್ ಜೊತೆ ಜೊತೆಗೇ ಮಕ್ಕಳ ಆಯ್ಕೆಯ ಟಿ ವಿ ಸೀರಿಯಲ್ ವೀಕ್ಷಣೆ!! ಇಷ್ಟೆಲ್ಲಾ ಆದ ಮೇಲೂ ಒಂದರ್ದ ಗಂಟೆ ಓದಿಕೊಳ್ಳಿ ಎಂದು ಹೇಳಿದ್ದಕ್ಕೆ ” ನಮಗೆ ಸ್ವಾತಂತ್ರ್ಯಾನೇ ಇಲ್ಲ ” ಎನ್ನುತ್ತಾ ಸಿಟ್ಟು ಮಾಡಿಕೊಂಡು ಆ ಮಕ್ಕಳು ನಿದ್ದೆ ಮಾಡಿದವು!! ಇವನ್ನೆಲ್ಲ ನೋಡಿ ಸ್ವಾತಂತ್ರ್ಯ ಎನ್ನುವ ಪದದ ಅರ್ಥವೇನು ಎಂದು ಯೋಚಿಸತೊಡಗಿದೆ. ನಮ್ಮ ಬಾಲ್ಯದಲ್ಲಿ, (ಬಾಲ್ಯದಲ್ಲಿ ಅನ್ನುವುದಕ್ಕಿಂತ ದುಡಿದು ಗಳಿಸುವ ಹಂತಕ್ಕೆ ನಾವು ತಲುಪುವವರೆಗೂ ಎಂದೇ ಹೇಳಬಹುದು )ಬಟ್ಟೆ, ಊಟ ವಸತಿ ಈ ಎಲ್ಲವುಗಳ ಆಯ್ಕೆ ಅಪ್ಪ ಅಮ್ಮ ಅಥವಾ ಮನೆಯ ಹಿರಿಯರದ್ದೇ ಆಗಿತ್ತು. ಆಗ ನಮಗೆ ಸ್ವಾತಂತ್ರ್ಯ ಬೇಕು ಎಂದು ಅನಿಸುತ್ತಲೇ ಇರಲಿಲ್ಲ. ಸ್ವಾತಂತ್ರ್ಯ ಎಂದರೆ ನೆನಪಾಗುತ್ತಿದ್ದದ್ದು ಆಗಸ್ಟ್ 15 ರ ಸಂಭ್ರಮ! ಅಷ್ಟೇ. ಅಗತ್ಯ ವಸ್ತುಗಳನ್ನು ಕೇಳಲೂ ಭಯಪಡುತ್ತಿದ್ದ ಕಾಲವದು. ಆದರೆ ಇಂದಿನ ಎಲೆಕ್ಟ್ರಾನಿಕ್ ಯುಗದಲ್ಲಿ ಕೇಳಿದ ವಸ್ತುಗಳನ್ನು ತೆಗೆದು ಕೊಡದಿದ್ದರೆ ಮಕ್ಕಳು ಏನು ಮಾಡಿಕೊಳ್ಳುವರೋ ಎಂದು ಭಯಪಡುವ ಸ್ಥಿತಿ ಪೋಷಕರದ್ದು . ಹೊರಗಿನ ನಿಯಂತ್ರಣದಿಂದ ಮುಕ್ತವಾಗಿ ನಮ್ಮ ಮನ ದಿಚ್ಚೆಯಂತೆ ಬದುಕುವ ನಿರಾಳ ಸ್ಥಿತಿಯನ್ನು ಸ್ವಾತಂತ್ರ್ಯ ಎನ್ನಬಹುದು. ನಮ್ಮ ಜೀವನ ಇನ್ನೊಬ್ಬರ ಅಧೀನದಲ್ಲಿ ಇಲ್ಲದೆ ನಮ್ಮ ಸ್ವಂತಿಕೆಯನ್ನು ಯಾರೂ ಪ್ರಶ್ನಿಸಲಾಗದ ಸ್ಥಿತಿಯಲ್ಲಿ ನಾವಿದ್ದರೆ ನಾವು ಸ್ವತಂತ್ರರು ಎಂದು ಅರ್ಥ. ಒಂದು ದೇಶ ತನ್ನದೇ ಆದ ಕಾನೂನುಗಳನ್ನು ರಚಿಸಿಕೊಂಡು ಅವುಗಳನ್ವಯ ಆಡಳಿತವನ್ನು ಸುಸೂತ್ರವಾಗಿ ನಡೆಸುತ್ತಿದ್ದರೆ ಅದನ್ನು ಸ್ವತಂತ್ರ ದೇಶವೆನ್ನುತ್ತೇವೆ. ವ್ಯಕ್ತಿಯೊಬ್ಬ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದು,ಊಟ ವಸತಿ ವಸ್ತ್ರಗಳ ವಿಚಾರದಲ್ಲಿ ತನ್ನ ಆಯ್ಕೆಯಾನುಸಾರ ಬದುಕುತ್ತಿದ್ದಾನೆಂದರೆ ಅದು ಅವನ ವೈಯಕ್ತಿಕ ಸ್ವಾತಂತ್ರ್ಯ. ಚಿತ್ತ ಚಂಚಲತೆಯನ್ನು ಹೊಂದಿರದೆ ತನ್ನ ಭಾವನೆಗಳನ್ನು ಇತರರ ಅಭಿಪ್ರಾಯಗಳಿಗೆ ಅನುಗುಣವಾಗಿ ಬದಲಾಯಿಸಿಕೊಳ್ಳದೆ ಸ್ವಾಭಿಮಾನದಿಂದ ಬದುಕುವ ವ್ಯಕ್ತಿ ಭಾವನಾತ್ಮಕವಾಗಿ ಸ್ವತಂತ್ರವಾಗಿದ್ದಾನೆ ಎಂದರ್ಥ. ತಮ್ಮ ಎಲ್ಲ ಬೇಡಿಕೆಗಳ ಪೂರೈಕೆಗೆ ಪೋಷಕರನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಭೂತ ವರ್ತಮಾನ,ಭವಿಷ್ಯಗಳ ಬಗೆಗೆ ಕಿಂಚಿತ್ತೂ ಚಿಂತನೆ ಮಾಡಲಾಗದ ಎಳೆ ಮಕ್ಕಳು ಕೇಳುವ ಸ್ವಾತಂತ್ರ ಯಾವ ವರ್ಗದ್ದು ಎನ್ನುವುದೇ ಒಂದು ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆ! ಮಿತಿಮೀರಿದ ಸ್ವಾತಂತ್ರ್ಯ ಸ್ವೇಚ್ಛಾಚಾರಕ್ಕೆ ಎಡೆ ಮಾಡಿಕೊಡುತ್ತದೆ ಎನ್ನುವ ಒಂದು ಮಾತಿದೆ. ಮಕ್ಕಳಿಗಾಗಲಿ ದೊಡ್ಡವರಿಗಾಗಲಿ ಬದುಕಲು ಸ್ವಾತಂತ್ರ್ಯ ಬೇಕು. ಆದರೆ ಆ ಸ್ವಾತಂತ್ರ್ಯ ಕಡಿವಾಣವಿಲ್ಲದ ಕುದುರೆಯಂತಾಗಬಾರದು. ಮಕ್ಕಳ ವಿಚಾರಕ್ಕೆ ಬಂದಾಗ ತುಂಬಾ ಚಿಂತನೆ ಮಾಡಬೇಕಾದ ಅಂಶವಿದು. ಇಂದು ನಾವು ಅವರಿಗೆ ನೀಡುವ ಸ್ವಾತಂತ್ರ್ಯ ನಾಳಿನ ಅವರ ಬಾಳ ಹಾದಿಗೆ ಕಂಟಕವಾಗಬಾರದು. ಮನೆಯಲ್ಲಿ ಮಕ್ಕಳ ತಾಳಕ್ಕೆ ತಕ್ಕಂತೆ ಕುಣಿಯುವ ಅಸಹಾಯಕ ಸ್ಥಿತಿ ಪೋಷಕರದ್ದು. ಶಾಲೆಯಲ್ಲಿ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ಹೇಳಲಿಕ್ಕೂ ಹೆದರುವ ಪರಿಸ್ಥಿತಿ ಶಿಕ್ಷಕರದ್ದು. ಬೇರೆಯವರ ಮಕ್ಕಳು.. ತಿದ್ದಿ ಬುದ್ಧಿ ಹೇಳಿದರೆ ಸಂಬಂಧವೆಲ್ಲಿ ಹಾಳಾಗುವುದೋ ಎನ್ನುವ ಆತಂಕ ಸಮಾಜದ್ದು. ಅಗತ್ಯಕ್ಕೂ ಮೀರಿ ಮಕ್ಕಳ ಹಕ್ಕುಗಳನ್ನು ಎತ್ತಿ ಹಿಡಿದ ಕಾನೂನು. ಇವೆಲ್ಲವುಗಳ ನಡುವೆ ಸರಿ ತಪ್ಪುಗಳ ವಿಮರ್ಶೆ ಮಾಡಲಾಗದ ಸ್ಥಿತಿಯ ಮಕ್ಕಳು. ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎನ್ನುವಂತೆ ಮಕ್ಕಳನ್ನು ತಿದ್ದುವ ಹೊಣೆಗಾರಿಕೆ ಯಾರದ್ದು ಎನ್ನುವುದೇ ಯಾರ ಚಿಂತನೆಗೂ ನಿಲುಕದ ವಿಚಾರ. ಬೆಳೆಯುವ ಮಕ್ಕಳಿಗೆ ಸ್ವಾತಂತ್ರ್ಯ ಬೇಕು. ದೇಹ ಮನಸುಗಳನ್ನು ಆರೋಗ್ಯವಾಗಿರಿಸುವಷ್ಟು ಆಟವಾಡಲು, ತಮ್ಮಲ್ಲಿನ ಬುದ್ಧಿಶಕ್ತಿ ಯನ್ನು ಒರೆಗೆ ಹಚ್ಚಲು, ಕ್ರಿಯಾಶೀಲತೆಯನ್ನು ಸೂಕ್ತ ರೀತಿಯಲ್ಲಿ ಬಳಸಿಕೊಳ್ಳಲು,ಸುಪ್ತ ಪ್ರತಿಭೆಗಳನ್ನು ಸೂಕ್ತ ವೇದಿಕೆಗಳಲ್ಲಿ ಅನಾವರಣಗೊಳಿಸಲು,ಮನದ ಕುತೂಹಲಕ್ಕೆ ಉತ್ತರವನ್ನು ಕಂಡುಕೊಳ್ಳಲು ಸ್ವಾತಂತ್ರ್ಯ ಬೇಕು. ಈ ಎಲ್ಲ ಸಂದರ್ಭಗಳಲ್ಲಿಯೂ ಮಕ್ಕಳಿಗೆ ನೀಡುವ ಸ್ವಾತಂತ್ರ್ಯಕ್ಕೆ ಒಂದು ಎಲ್ಲೆ ಇರಬೇಕು. ಮಕ್ಕಳ ಇಚ್ಛೆಯಂತೆಯೇ ಎಲ್ಲವೂ ನಡೆಯಲಿ ಎನ್ನುವ ಭಾವಕ್ಕೆ ಸ್ವಾತಂತ್ರ್ಯ ಎನ್ನುವುದಿಲ್ಲ. ಇಂದು ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ನಾಳಿನ ಅವರ ಬದುಕಿಗೆ ಮಾರಕವಾಗಬಾರದು. ಮಿತಿಮೀರಿದ ಸ್ವಾತಂತ್ರ್ಯ ಅಪಾಯಕಾರಿ ಎನ್ನುವ ಮಾತು ಮಕ್ಕಳ ವಿಚಾರಕ್ಕೆ ಹೇಳಿ ಮಾಡಿಸಿದಂತಿದೆ. ಮಕ್ಕಳಿಗೆ ನಾವು ನೀಡುವ ಸ್ವಾತಂತ್ರ್ಯ ಅವರ ಭವಿಷ್ಯಕ್ಕೆ ಉರುಳಾಗಬಾರದು. ಕುಸಿಯುತ್ತಿರುವ ಶೈಕ್ಷಣಿಕ ಮೌಲ್ಯದ ಜೊತೆ ಜೊತೆಗೆ ಮಕ್ಕಳ ನೈತಿಕ ಮೌಲ್ಯಗಳೂ ಕುಸಿದರೆ ಅವರ ಮುಂದಿನ ಬಾಳಿಗೆ ದಾರಿ ತೋರುವವರು ಯಾರು ಎನ್ನುವುದು ಹಿರಿಯರಾದ ನಮ್ಮೆಲ್ಲರ ಚಿಂತನೆಯಾಗಬೇಕು. ಇದು ಇಂದಿನ ಅವಶ್ಯ ಕೂಡ. ಅಸುರಕ್ಷಿತ ಸಂಬಂಧಗಳು, ಹಾನಿಕಾರಕ ಹವ್ಯಾಸಗಳು, ಮಿತಿ ಮೀರಿದ ಹಠ . ಬಯಸಿದ್ದೆಲ್ಲ ಸಿಗಲೇಬೇಕು ಎನ್ನುವ ಮನೋ ಭಾವ, ಶಿಸ್ತಿಲ್ಲದ ಜೀವನ ಕ್ರಮ.. ವೈಭವೀ ಬದುಕಿಗೆ ಹಾತೊರೆದು ಅವರು ತುಳಿಯುವ ಅಡ್ಡದಾರಿ ಇವೆಲ್ಲವೂ ಬಾಲ್ಯದಲ್ಲಿ ನಾವು ನೀಡಿದ ಸ್ವಾತಂತ್ರ್ಯದ ಪರಿಣಾಮವೇ ಏನೋ ಎಂದೆನಿಸುತ್ತದೆ. ಹಾಗೆಂದು ನಮ್ಮ ಮುಷ್ಟಿಯಲ್ಲಿಯೇ ಮಕ್ಕಳಿರಬೇಕು.. ಮಕ್ಕಳು ಹೆಜ್ಜೆ ಹೆಜ್ಜೆಗೂ ನಮ್ಮ ಮಾತಿನಂತೆಯೇ ನಡೆಯಬೇಕು ಎನ್ನುವ ಹಿರಿಯರ ಕಠಿಣ ನಿಲುವು ಕೂಡಾ ಸರಿಯಲ್ಲ. ಬಹುಶಃ ವಯೋಮಾನಕ್ಕೆ ಅನುಗುಣವಾಗಿ ಮಕ್ಕಳ ಮಾನಸಿಕ ಬೆಳವಣಿಗೆಗೆ ಅಡ್ಡಿ ಆಗದ ರೀತಿಯಲ್ಲಿ ಸ್ವಾತಂತ್ರ್ಯ ನೀಡುವುದು ಉತ್ತಮ. ಯಾವ ಹಂತದಲ್ಲಿ ಯಾವ ಸ್ವಾತಂತ್ರ್ಯ ನೀಡಬೇಕು ಎನ್ನುವುದು ಪೋಷಕರ ವಿವೇಚನೆಗೇ ಬಿಟ್ಟದ್ದು. ಜಯಲಕ್ಷ್ಮಿ ಕೆಮಡಿಕೇರಿ.
“ಮಕ್ಕಳು ಮತ್ತು ಸ್ವಾತಂತ್ರ್ಯ.” ವಿಶೇಷ ಲೇಖನ ಜಯಲಕ್ಷ್ಮಿ .ಕೆ Read Post »

