ಧಾರಾವಾಹಿ ಸಂಗಾತಿ-39 ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ ಅರ್ಜುನ ಉವಾಚ ಅರಮನೆಯ ತೊರೆದಳು, ಅರಣ್ಯವನು ಸೇರಿದಳು “ದುಃಖಿ ನೀನಾಗದೆ ಆ ಜಾನಕಿಯನ್ನು ಗಂಗಾನದಿಯ ದಡದಲ್ಲಿರುವ ಕಾಡಿನಲ್ಲಿ ಬಿಟ್ಟುಬರಬೇಕು. ಕಾಡಿನಲ್ಲಿ ಋಷಿಪತ್ನಿಯರ ಸಂಗದಲ್ಲಿ ಕಾಲವನ್ನು ಕಳೆಯುವ ಬಯಕೆಯನ್ನು ಹಿಂದೊಮ್ಮೆ ನನ್ನಲ್ಲಿ ತೋಡಿಕೊಂಡಿದ್ದಳು. ಈಗ ಅದನ್ನೇ ನೆಪವಾಗಿಸಿಕೊಂಡು ಅವಳನ್ನಿಲ್ಲಿಂದ ಕರೆದೊಯ್ದು ಕಾನನದಲ್ಲಿ ಬಿಟ್ಟು ಬಾ” ರಾಮನುಡಿಯದು ಕರ್ಣಕಠೋರವಾಯಿತು ಲಕ್ಷ್ಮಣನ ಪಾಲಿಗೆ.ಅಣ್ಣನ ಆಜ್ಞೆಯನ್ನು ಅವಗಣಿಸಲಾಗದ ಅನಿವಾರ್ಯತೆ ಒಂದೆಡೆಯಲ್ಲಿ. ಅಣ್ಣ ಹೇಳಿದಂತೆಯೇ ನಡೆದುಕೊಂಡರೆ ತಾಯಿಯನ್ನು ವಧಿಸಿದ ಮಹಾಪಾತಕಿಯಂತಾಗುತ್ತೇನೆ ತಾನು ಎಂಬ ಅಳುಕು ಇನ್ನೊಂದೆಡೆಯಲ್ಲಿ. ಅತ್ತಿಗೆಯನ್ನು ಕಾನನದಲ್ಲಿ ಬಿಟ್ಟು ಬರುವೆನೋ, ಬಾರೆನೋ ಎಂಬ ಇಬ್ಬಂದಿತನವದು ಸಂಕಟಕ್ಕೀಡುಮಾಡಿತು ಸುಮಿತ್ರೆಯ ಸುತನನ್ನು. ಶರೀರ ಅದುರಿತು. ಚದುರಿತು ಶೋಕಭಾವ ಮನದ ತುಂಬ. ಕೊರಳು ಬಿಗಿಯಿತು. ಸುರಿಯಿತು ದುಃಖಸೂಚಿತ ಅಶ್ರು ಕಣ್ಣಿನಿಂದ.ಈ ಸ್ಥಿತಿಯಲ್ಲಿ ಲಕ್ಷಣನಿರಬೇಕಾದರೆ ಶ್ರೀರಾಮನ ಕಠೋರ ಕಣ್ಣುಗಳು ಕಠಿಣಾತಿಕಠಿಣವಾಗಿ ದಿಟ್ಟಿಸಿದವು ತಮ್ಮನನ್ನು. “ನಾನೇ ಅವಳನ್ನು ತೊರೆಯುವ ನಿರ್ಧಾರ ಮಾಡಿರುವಾಗ ನಿನಗೇನು ಸಮಸ್ಯೆ! ಹೋಗು ಅವಳನ್ನು ಬಿಟ್ಟು ಬಾ ಅರಣ್ಯದಲ್ಲಿ” ಎಂದು ದಯೆಯಿಲ್ಲದೆ ನುಡಿದ ಶ್ರೀರಾಮ. ಪ್ರಜೆಗಳಿಗನುಗುಣವಾಗಿ ನಡೆದುಕೊಳ್ಳಬೇಕೆಂಬ ಒತ್ತಡವೇ ಅವನನ್ನು ಆ ಬಗೆಯಲ್ಲಿ ಕಾರುಣ್ಯಶೂನ್ಯನಾಗಿಸಿತೋ ಏನೋ!ನೋವಿನ ಭಾವದಿಂದಲೇ ರಥವನ್ನು ಸಿದ್ಧಪಡಿಸಿದ ಲಕ್ಷ್ಮಣ. ಸೀತೆಯಿದ್ದ ರಾಜಮಂದಿರಕ್ಕೆ ಬಂದ. ಅವಳ ಮೊಗವನ್ನು ನೋಡುವ ಧೈರ್ಯ ಬರಲಿಲ್ಲ ಅವನಿಗೆ. ತಲೆಬಾಗಿಸಿಯೇ ನಿಂತು ಅವಳಲ್ಲಿ “ಮಾತೆಯೇ, ಕಾನನಕ್ಕೆ ಹೋಗಬೇಕೆಂದು ಬಯಸಿದವಳು ನೀನು. ನಿನ್ನಿಚ್ಛೆಯನ್ನು ಪೂರೈಸಲೆಂದು ಈಗ ನನ್ನಣ್ಣ ಶ್ರೀರಾಮ ನಿನ್ನನ್ನು ಕಾಡಿಗೆ ಕಳುಹಿಸುವ ಮನಸ್ಸು ಮಾಡಿದ್ದಾನೆ. ರಥವನ್ನೇರು. ಈಗಲೇ ಪಯಣ ಆರಂಭವಾಗಲಿ” ಎಂದು ಶೋಕಛಾಯೆಯನ್ನು ಬೀರಿ ನುಡಿದ ಲಕ್ಷ್ಮಣಆ ಕ್ಷಣದಲ್ಲಿ ಅವಳ ಮನಸ್ಸಿಗಾದ ಸಂತಸವದು ಲಕ್ಷö್ಮಣನ ನಿಜಭಾವವನ್ನು ತೋರಗೊಡಲೇ ಇಲ್ಲ. ಅತಿಯಾಗಿ ಸಂಭ್ರಮಿಸಿದಳು ಧರಣಿಸುತೆ. ತನ್ನ ಮನದಿಚ್ಛೆಯನ್ನು ತನ್ನ ಮನದೊಡೆಯ ಇಷ್ಟು ಬೇಗ ಪೂರೈಸಿದ ಎಂಬ ಸಂತೃಪ್ತಿ ಅವಳದಾಯಿತು. ನಿಜವನ್ನು ತಿಳಿಯದೆಯೇ ಹರ್ಷದಲ್ಲಿ ನಲಿಯುತಿರುವ ಸೀತೆಯನ್ನು ಕಂಡು ಇನ್ನಷ್ಟು ಮರುಗಿದ ಲಕ್ಷö್ಮಣ.ಆಶ್ರಮದ ಋಷಿಪತ್ನಿಯರಿಗೆ ಕೊಡಲೆಂದು ಅನೇಕಾನೇಕ ವಸ್ತುಗಳನ್ನು ತೆಗೆದಿಟ್ಟುಕೊಂಡಳು. ಶ್ರೀರಾಮನ ಪಾದುಕೆಗಳನ್ನು ಜೊತೆಗಿರಿಸಿಕೊಂಡಳು. ಅರಮನೆಯ ಗುರು ಹಿರಿಯರಿಗೆ ವಂದಿಸಿದಳು. ಅನುನಯದಿಂದ ಎಲ್ಲರನ್ನೂ ಮಾತನಾಡಿಸಿದಳು. ಅಯೋಧ್ಯೆಗೆ ವಿದಾಯ ಹೇಳಿದಳು ಸೀತೆ. ಲಕ್ಷö್ಮಣ ನಡೆಸುತ್ತಿದ್ದ ರಥವದು ಸೀತೆಯನ್ನು ಅಯೋಧ್ಯೆಯಿಂದ, ಶ್ರೀರಾಮನಿಂದ ದೂರ ದೂರ ದೂರವಾಗಿಸಿತು.ರಥದಲ್ಲಿದ್ದ ಪತಾಕೆಯದು ನೋಡಲಾರೆ ಜಾನಕಿಯ ಈ ಹೀನಸ್ಥಿತಿಯನ್ನು ಎಂಬAತೆ ತಲೆಯನ್ನು ಕೊಡಹುತ್ತಿತ್ತು. ‘ಯುದ್ಧದಲ್ಲಿ ಶತ್ರುಗಳನ್ನು ಕೊಂದು ಮೆರೆಯಲೆಂದು ಏರುತ್ತಿದ್ದ ರಥವಿದು. ಇಂದು ಸೀತಾಮಾತೆಯನ್ನು ಕಾಡಿಗೆ ಕಳುಹಿಸಿಬರಲು ಇದನ್ನು ಏರುವಂತಾಯಿತಲ್ಲಾ!’ ಎಂಬ ಯೋಚನೆ ಲಕ್ಷö್ಮಣನಲ್ಲಿ ಮೂಡಿತು. ಮರುಕಪಟ್ಟ ಸೌಮಿತ್ರಿ. ‘ಹೇಗೆ ಇವಳನ್ನು ಕಾಡಿಗೆ ಬಿಟ್ಟುಬರುವೆನೋ! ಯಾಕೆ ಈ ಕಾರ್ಯವನ್ನು ನನಗೆ ವಹಿಸಿದನೋ ನನ್ನಣ್ಣ!’ ಎಂದು ಹಾಗೆಯೇ ಹಲುಬಿದ.ಆಗಲೇ ನರಿಯ ಕೂಗು ಕೇಳಿಬಂತು. ಕುಳಿತಿದ್ದ ಮೃಗಗಳು ಮೇಲೆದ್ದು ರಥದ ಮುಂದುಗಡೆ ದಾರಿಯನ್ನು ದಾಟಿದವು. ಸೀತೆಯ ಬಲದ ಕಣ್ಣು ಅದುರಿತು. ಏನಿದು ಈ ಬಗೆಯ ಅಪಶಕುನಗಳು ಎನಿಸಿತು ಅವಳಿಗೆ. ಹೇಳಿಕೊಂಡಳು ಲಕ್ಷö್ಮಣನಲ್ಲಿ. ಆ ಕ್ಷಣದಲ್ಲಿ ಅವಳಲ್ಲಿ ಮೂಡಿಬಂದದ್ದು ರಾಮಯೋಚನೆ. ತನ್ನೊಡೆಯ ಶ್ರೀರಾಮನಿಗೆ ಒಳ್ಳೆಯದೇ ಆಗಲಿ; ಕೆಡುಕು ಅವನನ್ನು ಬಾಧಿಸದಿರಲಿ ಎಂದು ಬಯಸಿದಳು ಭೂಮಿಸುತೆ.ರಥವೀಗ ಬಹುದೂರ ಸಾಗಿಬಂದಿತ್ತು. ಸೀತಾಮಾತೆಯ ಕಣ್ಣೆದುರಿಗೆ ಈಗ ಕಂಡವಳು ಗಂಗಾಮಾತೆ. ಪರಮ ನಿಷ್ಕಲ್ಮಶ ಪರಿಯಲ್ಲಿ ಪರಮ ಪಾವನೆಯಾಗಿ ಹರಿಯುತ್ತಿದ್ದಳು. ರಥದಿಂದಿಳಿದ ಲಕ್ಷö್ಮಣ ಸೀತೆ ಗಂಗಾನದಿಗೆ ನಮಸ್ಕರಿಸಿದರು. ದೋಣಿಯನ್ನೇರಿದ ಅವರನ್ನು ಗಂಗಾಮಾತೆ ತನ್ನ ಬೆನ್ನಮೇಲೆಯೇ ಹೊತ್ತು ಇನ್ನೊಂದು ತೀರಕ್ಕೆ ಸೇರಿಸಿದಳು.ಆ ತೀರದಲ್ಲಿದ್ದದ್ದು ದಟ್ಟವಾದ ಕಾಡು. ಭಯ ಮೂಡಿಸುವಂತಿತ್ತು ಆ ನಿಬಿಡ ಕಾನನದ ನಿಲುವು. ರಾಮಕಾಂತೆಯ ಕಾಂತಿವೆತ್ತ ಕಣ್ಣಿಗೆ ಆ ಕಾಂತಾರ ತೋರಿತು ಭೀಕರವಾಗಿ. ರಾಮನಾಮವನ್ನು ಜಪಿಸತೊಡಗಿದಳು ಭೀತಿಗೆ ಈಡಾಗಿ. ಅಂಜಿದಳು. ಅಳುಕಿದಳು.“ಇಲ್ಲಿ ಮುನಿಗಳ ಆಶ್ರಮಗಳು ಕಾಣಿಸುತ್ತಿಲ್ಲ. ಋಷಿಪತ್ನಿಯರು ಕಣ್ಣಿಗೆ ತೋರುತ್ತಿಲ್ಲ. ಹೋಮಧೂಮಗಳಿಲ್ಲ. ಋಷ್ಯಾಶ್ರಮಕ್ಕೆ ನನ್ನನ್ನು ಕರೆದೊಯ್ಯದೆ ಮನಕ್ಕೆ ಶ್ರಮವನ್ನು ನೀಡುವ ಈ ದಟ್ಟ ಕಾಡಿಗೇಕೆ ಕರೆತಂದೆ ನನ್ನನ್ನು?” ಎಂದು ಕೇಳಿದಳು ಲಕ್ಷö್ಮಣನಲ್ಲಿ.ಅವನು ಮೌನಿಯಾಗಿರುವಾಗಲೇ “ಪರಮ ಪಾವನರಾದ ನನ್ನ ಪತಿಯನ್ನು ತೊರೆದುಬಂದ ನನಗೆ ಪುಣ್ಯಾಶ್ರಮ ಕಣ್ಣಿಗೆ ಬೀಳುವುದಾದರೂ ಹೇಗೆ!” ಎಂದು ಹೇಳಿದಳು.ಧಿಕ್ಕರಿಸಿ ತೊರೆದ ಶ್ರೀರಾಮನನ್ನು ಹೊಗಳುವ ಅವಳ ಮುಗ್ಧತೆ ಇನ್ನಿಲ್ಲದ ದುಃಖ ಮೂಡಿಸಿತು ಲಕ್ಷö್ಮಣನಲ್ಲಿ. ಅವನ ಅಧರಗಳು ಅದುರಿದವು. ಕಣ್ಣೀರ ಹನಿಗಳು ಸುರಿದವು. ಉದರದೊಳಗೆ ಕತ್ತಿಯಾಡಿಸಿದಂತಹ ಅನುಭವ ಅವನದ್ದಾಯಿತು. ಹೃದಯ ಕರಗಿತು. ಮನವು ಮರುಗಿತು. ಎದೆಯೊಳಗಿನ ಮಾತು ಹೊರಬರದಾಯಿತು. ‘ಹೇಗೆ ಹೇಳದಿರಲಿ ನಿಜವಿಚಾರವನ್ನು ಈ ಮುಗುದೆಗೆ!’ ಎಂದು ಅತೀವ ವೇದನೆಗೊಳಗಾದ ರಾಮನ ಪ್ರಿಯ ಅನುಜ ಲಕ್ಷö್ಮಣ.ಸಂತಸದ ಸೀತೆಯನ್ನು ಸೋತ ಸೀತೆಯಾಗಿಸುವ ಮಾತುಗಳದೋ ಹೊರಬಂದವು ಲಕ್ಷö್ಮಣನಿಂದ. “ಮಾತೆಯೇ, ಇದುವರೆಗೂ ನಾನು ನಿನ್ನಿಂದ ಮುಚ್ಚಿಟ್ಟ ವಿಚಾರವಿದು. ಲೋಕಾಪವಾದಕ್ಕೆ ಹೆದರಿ ನಿನ್ನನ್ನು ತೊರೆದು ಕಳುಹಿಸಿದ್ದಾನೆ ಶ್ರೀರಾಮ. ನಿನ್ನನ್ನು ಕಾಡಿನಲ್ಲಿಯೇ ಬಿಟ್ಟುಹೋಗುವ ಹೊಣೆಯನ್ನವನು ವಹಿಸಿದ್ದು ನನಗೆ. ಅವನ ಆಜ್ಞೆಯನ್ನು ಮೀರಲಾಗದೆ ನಿನ್ನನ್ನು ಈ ದಟ್ಟ ಕಾನನಕ್ಕೆ ಕರೆತಂದಿದ್ದೇನೆ. ಇನ್ನು ಎಲ್ಲಿಗಾದರೂ ಹೋಗು ನೀನು” ಎಂದ ಕಣ್ಣೀರು ಹರಿಸುತ್ತ, ಸುಮಿತ್ರಾಸುತ. ಡಾ.ವಿಶ್ವನಾಥ್ ಎನ್ ನೇರಳೆಕಟ್ಟೆ
