ಕಾವ್ಯ ಸಂಗಾತಿ
ಶಿವಲೀಲಾ ಹುಣಸಗಿ ಯಲ್ಲಾಪುರ
“ಹೊತ್ತು ಸಾಗುವವರಿಗೆ ಶವವಾಗು!”


ನೀನಗೇನು ದಕ್ಕಿತು
ನಿನ್ನದೆನ್ನುವ ಕಿಂಚಿತ್ತು ಭಾವವೆ
ದಹಿಸಿದಷ್ಟು ಸುಲಭವಾಗಿ
ನೇವರಿಸಿ ಸರಿದಷ್ಟು ಗಾಢವಾಗಿ
ಅಯ್ಯೋ, ಬಿಡು ಅದೇ ಮಾತು
ಅದೇ ಕಥೆ! ಸೊಗಸಿಲ್ಲದ ಭಾವಗೀತೆ
ಅತ್ತು ಕರೆದಷ್ಟು ಉಮ್ಮಳಿಸಿತು
ಸಿಟ್ಟು,ಸೆಡುವು ನೆಲ ಸಮವಾತು.
ಆದರೆ,ನಿನಗೇನೂ ಪರಕಾಗಿಲ್ಲ
ಬಿಟ್ಟು ಹೋದ ಜಾಡುಗಳೆಲ್ಲ
ಜಂಜಾಟದ ಬೇರುಗಳಾಗಿ ಇಳೆ ಸೇರಿ
ಮೌನದ ಗಾಯ ಮಾಸಲಿಲ್ಲ
ಹೋಗಲಿ ಬಿಡು ನಿನಗೇನು ಬೇಕಿತ್ತು
ದೈಹಿಕ ತೃಷೆ ಮಣ್ಣಾಗದಿದ್ದಿತೆ
ಮುಖವಾಡಗಳು ಕಳಚಿ ಬಿದ್ದಾಗಿದೆ
ಬಣ್ಣ ಮಾಸಲು ಸಮಯ ಬೇಕೆ
ಇನ್ನಾದರೂ ದೂರ ಹೋಗಿ ಬಿಡು
ನಿನ್ನೊಳಗೆ ನಾನಿಲ್ಲವೆಂಬ ಸತ್ಯ
ಅರಿವಿಗೆ ಬಂದರೆ ಸಾಕಲ್ಲವೆ
ಮಸ್ತಕದ ಪುಟ ತಿರುವಿ ನೋಡಬೇಕೆ
ಕೊನೆಗೂ,ನಾನಿಲ್ಲದ ಬದುಕು ನಿನ್ನಾಯ್ಕೆ
ಹೊಸದೆನಿಲ್ಲ ಬಿಡು ಲೋಕ ಬಲ್ಲವಗೆ
ಹಳೆ ನೀರು ಮುಂದಾಗಬೇಕು
ಹೊಸ ನೀರು ಹಳತಾಗಲು ಕಾಯಬೇಕು
ಎಲ್ಲ ಕಳಚುವ ಮುನ್ನ ಎಚ್ಚರಾಗು
ನಿನ್ನದಲ್ಲದ ಚಿಂತೆಗೆ ಚಿತೆ ಕಟ್ಟು
ಹೊತ್ತು ಸಾಗುವವರಿಗೆ ಶವವಾಗು
ಮಣ್ಣಲಿ ಉಳುವವಗೆ ಹೊರೆಯಾಗದಿರು
ಮತ್ತೆ ಸಿಗುವ ಹಂಬಲವಿಲ್ಲ
ಯಾವ ಜನ್ಮದ ನಂಟುಬೇಕಿಲ್ಲ
ಇದ್ದಾಗಲೇ ಸಾವ ಕಂಡವರಿಗೆ
ಮತ್ತೆ ಹುಟ್ಟುವ ಕನಸಿಲ್ಲ…..
ಶಿವಲೀಲಾ ಹುಣಸಗಿ ಯಲ್ಲಾಪುರ




ಚೆಂದದ ಅರ್ಥಪೂರ್ಣವಾದ ಕವಿತೆ ಅಭಿನಂದನೆಗಳು
ಬಿ.ಕೆ.ಜಯಶ್ರೀ ಹಾಸನ