ಶರಣ ಸಂಗಾತಿ
ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಸಾವಿಲ್ಲದ ಶರಣರು
ದಿಟ್ಟ ಗಣಾಚಾರಿ ಶರಣೆ
ಅಮುಗೆ ರಾಯಮ್ಮ

ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಜಿಲ್ಲೆಯ ಪುಳಜೆ ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮಳಂತೆ ಈಕೆಯೂ ಆಚಾರ ಶೀಲ ವ್ರತ ನೇಮ ಶೀಲ ಮತ್ತು ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ.
ಒಬ್ಬ ದಿಟ್ಟ ಹೆಣ್ಣು ಮಗಳು ಗಣಾಚಾರಿ
ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ.
• ಪತಿ: ಶಿವಶರಣರಾದ ಅಮುಗೆ ದೇವಯ್ಯ.
• ಕಾಯಕ:
ಇವರ ಕುಟುಂಬವು ನೆಯ್ಗೆಯ (ನೇಕಾರ) ಕಾಯಕದಲ್ಲಿ ತೊಡಗಿತ್ತು.
• ಜೀವನ :
ಬಸವಣ್ಣನವರ ಕಾಯಕ ದಾಸೋಹ ಮತ್ತು ಸಮ ಸಮಾಜದ ಪರಿಕಲ್ಪನೆಯ ಪ್ರಭಾವಕ್ಕೆ ಒಳಗಾಗಿ ಪತಿಯೊಂದಿಗೆ ಕಲ್ಯಾಣಕ್ಕೆ ತೆರಳಿ, ಅಲ್ಲಿನ ಕ್ರಾಂತಿಯ ನಂತರ ಪುಳುಜೆಗೆ (ಪುಳಜೆ) ಬಂದು ಅಲ್ಲಿಯೇ ಐಕ್ಯರಾದರು ಎಂದು ಇತಿಹಾಸ ಹೇಳುತ್ತದೆ.
ವಚನ ಸಾಹಿತ್ಯಕ್ಕೆ ಕೊಡುಗೆ
• ವಚನಗಳ ಸಂಖ್ಯೆ: ಇವರ ಸುಮಾರು ೧೧೬ ವಚನಗಳು ಲಭ್ಯವಾಗಿವೆ.ಅಕ್ಕ ಮಹಾದೇವಿ ಅಕ್ಕಮ್ಮ ನೀಲಮ್ಮರ ನಂತರ ಅತಿ ಹೆಚ್ಚು ವಚನಗಳನ್ನು ಬರೆದ ಶರಣೆಯರಲ್ಲಿ ಇವರೂ ಒಬ್ಬರು.
• ವಚನಾಂಕಿತ: ಇವರ ವಚನಗಳ ಅಂಕಿತನಾಮ “ಅಮುಗೇಶ್ವರಲಿಂಗ” ಅಥವಾ “ಮಹಾಲಿಂಗ ಅಮುಗೇಶ್ವರಲಿಂಗ”.
• ವಚನಗಳ ಶೈಲಿ: ರಾಯಮ್ಮನವರ ವಚನಗಳಲ್ಲಿ ಗಾಢವಾದ ಲಿಂಗನಿಷ್ಠೆ, ಆತ್ಮನಿರೀಕ್ಷೆ, ಕೆಚ್ಚು ಮತ್ತು ಧೈರ್ಯ ಎದ್ದು ಕಾಣುತ್ತವೆ. ಕೇವಲ ಬಾಹ್ಯ ಆಚಾರಗಳನ್ನು ಪಾಲಿಸುತ್ತಾ ಅಧರ್ಮವಾಗಿ ನಡೆಯುವವರನ್ನು, ಕಾಷಾಯ ವಸ್ತ್ರ ತೊಟ್ಟು ಕಾಮವಿಕಾರಗಳಲ್ಲಿ ಮುಳುಗುವ ಕಪಟ ವೇಷಧಾರಿಗಳನ್ನು ತಮ್ಮ ವಚನಗಳಲ್ಲಿ ಕಟುವಾಗಿ ಟೀಕಿಸಿದ್ದಾರೆ.
ಅಮುಗೆದೇವಯ್ಯ
‘ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು’.
ಇನ್ನೊಂದು ವಚನವನ್ನು ನೋಡೋಣ
ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ ?
ಆಡಿನ ಮರಿಯು ಆನೆಯಾಗಬಲ್ಲುದೆ ?
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ
ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ.
ವಚನ ವಿಶ್ಲೇಷಣೆ :
ಈ ವಚನದಲ್ಲಿ ಅಮುಗೆ ರಾಯಮ್ಮನವರು ಸಮಾಜದಲ್ಲಿ ಧರ್ಮದ ಹೆಸರಿನಲ್ಲಿ, ವೇಷಭೂಷಣಗಳ ಮೂಲಕ ಜನರನ್ನು ವಂಚಿಸುವ ಡಾಂಭಿಕ ಭಕ್ತರನ್ನು ಅತ್ಯಂತ ಕಠೋರವಾದ ಉಪಮೆಗಳ ಮೂಲಕ ಟೀಕಿಸಿದ್ದಾರೆ.
೧. ಬಾಹ್ಯ ಬದಲಾವಣೆ ಆಂತರಿಕ ಸತ್ಯವಾಗಲಾರದು (ಮೊದಲ ಮೂರು ಸಾಲುಗಳು):
• “ಕಾಗೆಯ ಮರಿಯು ಕೋಗಿಲೆಯಾಗಬಲ್ಲುದೆ?”: ಕಾಗೆ ಮತ್ತು ಕೋಗಿಲೆ ಎರಡೂ ಕಪ್ಪಗಿದ್ದರೂ, ಕಾಗೆಯು ಕೋಗಿಲೆಯಂತೆ ಮಧುರವಾಗಿ ಹಾಡಲು ಸಾಧ್ಯವಿಲ್ಲ.
• “ಆಡಿನ ಮರಿಯು ಆನೆಯಾಗಬಲ್ಲುದೆ?”: ಸಣ್ಣದಾದ ಆಡಿನ ಮರಿ ಎಂದಿಗೂ ಆನೆಯಷ್ಟು ಭವ್ಯ ಹಾಗೂ ಬಲಿಷ್ಠವಾಗಲು ಸಾಧ್ಯವಿಲ್ಲ.
• “ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ?”: ಸೀಳನಾಯಿಯು ಸಿಂಹದ ಚರ್ಮ ಹೊದ್ದರೂ ಸಿಂಹದ ಗಾಂಭೀರ್ಯ ಮತ್ತು ಶೌರ್ಯವನ್ನು ಹೊಂದಲು ಸಾಧ್ಯವಿಲ್ಲ.
• ಈ ಮೂರು ನಿಸರ್ಗದ ಉದಾಹರಣೆಗಳ ಮೂಲಕ ರಾಯಮ್ಮನವರು ಹೇಳುವುದೇನೆಂದರೆ, ಕೇವಲ ವೇಷ ಬದಲಾಯಿಸಿದ ತಕ್ಷಣ ಒಬ್ಬ ವ್ಯಕ್ತಿಯ ಮೂಲ ಗುಣ ಅಥವಾ ಯೋಗ್ಯತೆ ಬದಲಾಗುವುದಿಲ್ಲ.
೨. ಡಾಂಭಿಕತೆಯ ಖಂಡನೆ
• “ಅರಿವು ಆಚಾರ ಸಮ್ಯಜ್ಞಾನವನರಿಯದೆ ನಾಮವ ಹೊತ್ತುಕೊಂಡು ತಿರುಗುವ”: ನಿಜವಾದ ಭಕ್ತನಿಗೆ ಮೂರು ಗುಣಗಳು ಮುಖ್ಯ – ಅರಿವು (ಆತ್ಮಜ್ಞಾನ), ಆಚಾರ (ಶುದ್ಧ ನಡೆ), ಮತ್ತು ಸಮ್ಯಜ್ಞಾನ (ಸದಸದ್ವಿವೇಕ ಬುದ್ಧಿ). ಆದರೆ, ಇವು ಯಾವುದನ್ನೂ ಅರಿಯದೆ ಕೇವಲ ಹಣೆಗೆ ವಿಭೂತಿ ಧರಿಸಿ, ಕೊರಳಿಗೆ ಲಿಂಗ ಅಥವಾ ರುದ್ರಾಕ್ಷಿ ನೇತುಹಾಕಿಕೊಂಡು ತಾನು ದೊಡ್ಡ ಭಕ್ತನೆಂದು “ನಾಮ” (ವೇಷ) ಹೊತ್ತು ತಿರುಗುವವರನ್ನು ರಾಯಮ್ಮ ಇಲ್ಲಿ ಪ್ರಶ್ನಿಸುತ್ತಾರೆ.
೩. ಕಟು ನಿಷ್ಠುರತೆ
• “ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ”: ಅಂತರಂಗ ಶುದ್ಧಿ ಇಲ್ಲದೆ ಕೇವಲ ಬಹಿರಂಗದ ಪ್ರದರ್ಶನ ಮಾಡುವ ಅಂತಹ ಮೂರ್ಖರ (ಗಾವಿಲರ) ಮುಖವನ್ನು ನೋಡುವುದು ಕೂಡ ಪಾಪ ಎಂದು ರಾಯಮ್ಮನವರು ಅತ್ಯಂತ ನಿಷ್ಠುರತೆಯಿಂದ ಹೇಳುತ್ತಾರೆ. ಅಂತಹವರ ಭಕ್ತಿಯನ್ನು ತಮ್ಮ ಆರಾಧ್ಯದೈವ “ಅಮುಗೇಶ್ವರ” ಎಂದಿಗೂ ಒಪ್ಪಲಾರ ಎಂಬುದನ್ನು ಸ್ಪಷ್ಟಪಡಿಸುತ್ತಾರೆ.
ಈ ವಚನದ ಮೂಲಕ ಅಮುಗೆ ರಾಯಮ್ಮನವರು “ನುಡಿದಂತೆ ನಡೆ, ನಡೆದಂತೆ ನುಡಿ” ಎಂಬ ಶರಣ ತತ್ವವನ್ನು ಎತ್ತಿಹಿಡಿಯುತ್ತಾರೆ. ಭಕ್ತಿ ಎಂಬುದು ಪ್ರದರ್ಶನದ ವಸ್ತುವಲ್ಲ; ಅದು ಅಂತರಂಗದ ಶುದ್ಧಿ ಮತ್ತು ಜ್ಞಾನದ ಸಂಕೇತವಾಗಿರಬೇಕು ಎಂಬ ವೈಚಾರಿಕ ಸಂದೇಶವನ್ನು ಈ ವಚನ ನಮಗೆ ನೀಡುತ್ತದೆ.
ಆಯ್ದಕ್ಕಿ ಲಕ್ಕಮ್ಮನಂತೆ ದಿಟ್ಟ ವಚನಕಾರ್ತೆ ತನ್ನ ಗಂಡನೊಂದಿದೆ ಕಾಯಕ ದಾಸೋಹ ಮಾಡಿ ಕೊನೆಗೆ ನಡೆದ ಕಲ್ಯಾಣ ಕ್ರಾಂತಿಯ ನಂತರ ವಚನ ಸಾಹಿತ್ಯ ಸಂರಕ್ಷಣೆಗೆ ನಿಂತು ಸಿದ್ಧರಾಮ ಚೆನ್ನ ಬಸವಣ್ಣ ಅಕ್ಕನಾಗಮ್ಮನವರ ಜೊತೆಗೂಡಿ ವಚನಗಳ ಕಟ್ಟನ್ನು ಹೊತ್ತುಕೊಂಡು ಸೋಮಿದೇವನ ಸೈನಿಕರನ್ನು ಎದುರಿಸುತ್ತಾ ಸೊಲ್ಲಾಪುರದ ಪುಳಜೆಗೆ ಬಂದು ಅಲ್ಲಿಯೇ ನೆಲೆಸಿ ಕೊನೆಗೆ ಅಲ್ಲಿಯೇ ಐಕ್ಯಳಾದ ಸಾವಿಲ್ಲದ ಮಹಾಶರಣೆ ಅಮುಗೆ ರಾಯಮ್ಮಳ ಜೀವನ ಸಂಘರ್ಷ ನಿಷ್ಠುರತೆ ನಮಗೆ ಇಂದಿಗೂ ಮಾದರಿಯಾಗಿವೆ.
_______________________
ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ




