ಮನುಷ್ಯ ಮೂಲತಃ ಅಂತಃಕರಣ ಜೀವಿ.  ಆತನು ಅನೇಕ ಅವಘಡಗಳನ್ನು,  ಕಷ್ಟದ ಸಂದರ್ಭಗಳನ್ನು, ಕಠಿಣ ಪರಸ್ಥಿತಿಗಳನ್ನು ಕಣ್ಣಾರೆ ಕಾಣುತ್ತಾನೆ.  ಕೆಲವು ಸಲ ಆತ ಸಹಾಯ ಮಾಡುವ ಮನಸ್ಸಿದ್ದರೂ ಅನೇಕ ಒತ್ತಡಗಳ ಕಾರಣದಿಂದ ಹಾಗೆ ನೋಡಿಕೊಂಡು ಹೋಗಿಬಿಡಬಹುದು.

 ಆದರೆ ಆತನ ಮನಸ್ಸಿನೊಳಗಿನ ಕರುಳ ಸಂಬಂಧ ಪದೇ ಪದೇ ಆತನನ್ನು ಪೀಡಿಸುತ್ತದೆ,  “ಅಯ್ಯೋ ಹೀಗಾಗಬಾರದಿತ್ತು ಆತನಿಗೆ, ಹೀಗಾದರೆ ಹೇಗೆ..? ಯಾರಾದರೂ ಆತನಿಗೆ ಸಹಾಯ ಮಾಡಲೇಬೇಕು..” ಎನ್ನುತ್ತಾ ಮರುಗುತ್ತಾನೆ.  ನನ್ನ ಕೈಯಲ್ಲಿ ಸಹಾಯ ಮಾಡಲು ಆಗಲಿಲ್ಲವಲ್ಲ ಎಂದು ನೊಂದುಕೊಳ್ಳುತ್ತಾನೆ. ತಾನು ವೃತ್ತಿಗೆ ತೆರಳುವ ಪಯಣದ  ಹಾದಿಯಲ್ಲಿ ನಡೆದ ಅಪಘಾತವಿರಬಹುದು, ಕಣ್ಣು, ಕಿವಿ, ಮೂಗು ಕಾಣದ ವಿಶೇಷ ಚೇತನರು ನಡೆದುಹೋಗುವ ಸಂದರ್ಭವಿರಬಹುದು, ಮನೆಯಲ್ಲಿ ಯಾರಿಗಾದರೂ ಕಾಯಿಲೆಯಾದರೆ ಅವರನ್ನು ಆರೈಕೆ ಮಾಡುವಲ್ಲಿ ವ್ಯತ್ಯಾಸವಾದರೆ, “ತನ್ನಿಂದ ಮಾಡಲಾಗಲಿಲ್ಲವಲ್ಲ” ಎನ್ನುವ ಕೊರಗಿರಬಹುದು. ಒಬ್ಬ ಗೆಳೆಯ ಯಾವುದೋ ಕಷ್ಟದಲ್ಲಿ ಸಿಲುಕಿ ಹಾಕಿಕೊಂಡು ಒದ್ದಾಡುತ್ತಿರುವಾಗ, ಆತನ ಆ ಸಂಕಷ್ಟಕ್ಕೆ ಸ್ಪಂದಿಸಲಾಗಲಿಲ್ಲವಲ್ಲ ಎನ್ನುವ ನೋವಿರುವುದು, ಆತನ ಒಳ ಮನಸ್ಸಿನ ಅಂತಃಕರಣದ ತಾಯ್ತನಕ್ಕೆ ಹಿಡಿದ ಕೈಗನ್ನಡಿಯನ್ನಬಹುದು.

ಬಾಲ್ಯದಿಂದಲೂ ನಮ್ಮ ಹಿರಿಯರು ನಮಗೆ ಅನೇಕ ಸಂಸ್ಕಾರಗಳನ್ನು ಕಲಿಸದೆ ಇರಬಹುದು. ಆದರೆ ಇನ್ನೊಬ್ಬರ ಕಷ್ಟಕ್ಕೆ ಹೃದಯ ಮಿಡಿಯುವ ವಾತ್ಸಲ್ಯವನ್ನು ನಮ್ಮೇಲ್ಲರ ಬಾಳಿನಲ್ಲಿ ಹಾಸುಹೊಕ್ಕಾಗಿದೆ.
 ಮಹಾಭಾರತ, ರಾಮಾಯಣದಲ್ಲಿ ಬರುವ   ಹಲವಾರು ಪಾತ್ರಗಳು ನಮ್ಮನ್ನು ಕಾಡುತ್ತವೆ. ಪಾತ್ರಗಳ ಸಂಕಷ್ಟಗಳನ್ನು ಕತೆಯ ರೂಪದಲ್ಲಿ ಕೇಳಿದಾಗ  ಮಮ್ಮಲ ಮರಿಗಿದ್ದೇವೆ. ಆಗ ಕಣ್ಣೀರು ಸುರಿಸಿದ ಪ್ರಸಂಗವೂ ಇದೆ.   ದಾನ ಶೂರ ಕರ್ಣ,  ತನ್ನವರನ್ನು ಕಳೆದುಕೊಂಡು ಒಂಟಿಯಾಗಿ ನಿಂತ ದುರ್ಯೋಧನ, ಪಗಡೆಯಾಟದಲ್ಲಿ ಎಲ್ಲವನ್ನು ಸೋತು ಕಾಡಿಗೆ ಹೋಗಬೇಕಾದ ಸಮಯದಲ್ಲಿ ಪಾಂಡವರು ಅನುಭವಿಸುವ ಚಡಪಡಿಕೆ…. ಇವು ಬಾಲ್ಯದಲ್ಲಿ ನಾವು ಕೇಳಿದ ಪೌರಾಣಿಕ ಕಥೆಗಳಾದರೆ, ಅಜ್ಜಿ ಹೇಳುತ್ತಿದ್ದ ಅನೇಕ ಕಥೆಗಳು ಕೂಡ ಕರುಣಾರಸವನ್ನು ಉಕ್ಕಿ ಹರಿಸುತ್ತಿದ್ದವು ಎಂದರೆ ತಪ್ಪಲ್ಲ.  ಏಳು ಮಕ್ಕಳ ತಾಯಿ, ಮಲತಾಯಿಯ ಅಟ್ಟಹಾಸಕ್ಕೆ ನಲುಗಿ ಹೋದ  ಸಿಂಡ್ರೇಲಾ ಮಲಮಗಳ ಕಷ್ಟಗಳು… ಹೀಗೆ ಅನೇಕ ಪಾತ್ರಗಳು ನಮ್ಮನ್ನು ಎಡೆಬಿಡದೆ ಕಾಡುತ್ತವೆ. ನಮ್ಮೊಳಗೆ ಸಂಸ್ಕಾರವನ್ನು, ಕರುಣಾರಸವನ್ನು, ವಾತ್ಸಲ್ಯವನ್ನು  ಬಿತ್ತಿವೆ. ಹಾಗಾಗಿ ನಮ್ಮೊಳಗಿನ ಪ್ರೀತಿ ಸದಾ ಜೀವಂತವಾಗಿರುತ್ತದೆ.

ನಿಮ್ಮ ಸುತ್ತಮುತ್ತ ಭಿಕ್ಷೆ ಬೇಡುವ ವಿಶೇಷ ಚೇತನರಿಗೆ, ವೃದ್ಧರಿಗೆ, ಹಸಿವಿನಿಂದ ಬಳಲಿದ ಅಸಹಾಯಕರಿಗೆ, ಸಾಧ್ಯವಾದಷ್ಟು ಸಹಾಯ ಮಾಡುವವರು ನಮಗೆ ಮಾರ್ಗದರ್ಶಕರಾಗುತ್ತಾರೆ. ದುಡ್ಡಿಗಿಂತಲೂ ಹಸಿವು ತೀರಿಸುವ ಒಂದು ಹಣ್ಣಾದರೂ ಕೊಡಿಸಿದಾಗ ಹಸಿದವರ  ಮುಖದಲ್ಲಿ ಮೂಡುವ ಸಾರ್ಥಕ ಭಾವ ವರ್ಣನಾತೀತ. ಇಂತಹ ಸಮಯದಲ್ಲಿ “ನನ್ನ ಕಷ್ಟಕ್ಕೆ ಆದರಲ್ಲ” ಎನ್ನುವ ಅವರ ಪ್ರೀತಿಯ ಹಾರೈಕೆ ನಮಗೆ ಶ್ರೀರಕ್ಷೆ.
ನಾವು ಕೆಲವು ಸಲ ನಮಗೆ ಬಂದ ಕಷ್ಟಗಳನ್ನು ಯಾರ ಮುಂದೆ ಹೇಳಿಕೊಳ್ಳುವುದಿಲ್ಲ. ಒಂಟಿಯಾಗಿ ಅನುಭವಿಸುತ್ತಿರುತ್ತೇವೆ. ನಮಗೆ ಗೊತ್ತಿಲ್ಲದೆ ಕಣ್ಣೀರು ತನ್ನಿಂದ ತಾನೇ ಬರುತ್ತದೆ. ಆಕಾಶದತ್ತ ಸುಮ್ಮನೆ ಶೂನ್ಯ ಮನಸ್ಸಿನಿಂದ ಏನನ್ನೋ ನೋಡುವಾಗ.. ಯಾರೋ ಬೆನ್ನ ಮೇಲೆ ಕೈಯಿಂದ ಸವರಿ, ಭುಜದ ಮೇಲೆ ಹೆಗಲಿಗೆ ಕೈಹಾಕುತ್ತಾರೆ,  ತಿರುಗಿ ನೋಡಿದರೆ ಪ್ರೀತಿಯ ಸ್ನೇಹಿತ “ನಿನ್ನ ಕಷ್ಟಕ್ಕೆ ನಾನಿದ್ದೇನೆ” ಎನ್ನುವ ಅಪರಿಮಿತ ವಾತ್ಸಲ್ಯ ಆತನದು.  “ಯಾಕೋ ಇವತ್ತು ನೀನು ಡಲ್ ಆಗಿದ್ದೀಯಾ..? ಎಂದಿಗಿಂತಲೂ ಇಂದು ಚೆನ್ನಾಗಿಲ್ಲ” ಎಂದು ಕಷ್ಟ ಸುಖವನ್ನು ವಿಚಾರಿಸುತ್ತಾನೆ.  ಅದಕ್ಕೆ ಹೇಳುವುದು ಕಣ್ಣು ಅರಿಯದಿದ್ದರೂ ಕರುಳು ತನ್ನ ಪ್ರೀತಿಯನ್ನು ಅರಿಯುತ್ತದೆ ಎಂದು.

ಮಗನ ಕಷ್ಟವನ್ನು ನೋಡಿ ವಾತ್ಸಲ್ಯವನ್ನು ಹರಸುವ ಪ್ರೀತಿಯ ತಾಯಿ, ತನಗೆ ಸಾಕಷ್ಟು ಕಷ್ಟವಿದ್ದರೂ  ಒಟ್ಟಾರೆ ಕುಟುಂಬದ ಆಸೆಯನ್ನು ಪೂರೈಸುವ ಅಪ್ಪನ ಮಮತೆ,  ಅಪ್ಪ ಹೋಗುವಾಗ ಜವಾಬ್ದಾರಿ ಹೊರಿಸಿ ಹೋಗಿದ್ದಾನೆ, ಆತನ ಮಾತನ್ನು ನಾನು ನೆರವೇರಿಸಲೇಬೇಕೆಂದು ಸಾಲು ಸೋಲುವಾದರೂ ಮಾಡಿ, ಸೋದರ ಸೋದರಿಯರನ್ನು ಒಂದು ದಡಕ್ಕೆ ಸೇರಿಸುವ ಹಿರಿಯಣ್ಣನ ತ್ಯಾಗದ ಪಾತ್ರ ಮರೆಯಲು ಸಾಧ್ಯವೇ..? ಇದು ಆತನ ಅಂತ:ಕರುಣದ ಅಪರಮಿತ ಪ್ರೀತಿ ಅಲ್ಲದೆ ಮತ್ತಿನ್ನೇನು..?  ಎಲ್ಲಿಂದಲೋ  ಇನ್ನೊಂದು ಮನೆಯಿಂದ ಬಂದು, ನನ್ನ ತಂದೆ ತಾಯಿಗಳ ಹೆಸರನ್ನು ಬೆಳಗಿಸಬೇಕು, ಇಂತಹ ಮನೆಯ ಮಗಳೆಂದು ಎಲ್ಲರೂ ಹಾರೈಸಬೇಕೆಂದು,   ತಾನು ಬಂದ ಮನೆಯನ್ನು ಬೆಳಗುವ ಸಲುವಾಗಿ ಇಡೀ ತನ್ನ ಬದುಕಿನಲ್ಲಿ ಹಗಲಿರುಳು ದುಡಿಯುವ ಹೆಂಡತಿ ಎಂಬ ಜೀವ ಮಾತೃ ವಾತ್ಸಲ್ಯಕ್ಕಾಗಿ ಎಲ್ಲರ ಒಳಿತನ್ನು ಬಯಸುವ ಅವಳ ತ್ಯಾಗಕ್ಕೆ ಕೊನೆಯುಂಟೇ..?!  ದೇಶಕ್ಕಾಗಿ ಯುದ್ಧ ಮಾಡುತ್ತಲೇ, ವೈರಿಗಳನ್ನು ಸೆದೆಬಡಿಯುತ್ತಲೇ ದೇಶದೊಳಗಿನ ನಮ್ಮೆಲ್ಲರನ್ನು ಕಾಪಾಡುವ ತ್ಯಾಗ ಮೂರ್ತಿಗಳು ನಮ್ಮ ಯೋಧರು ಅವರ ತ್ಯಾಗಕ್ಕೆ ಕರುಣೆಯೇ ಕಾರಣ….ಹೀಗೆ ಸಮಾಜದ ಒಳಿತಿಗಾಗಿ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಲೇ ಇತರರಿಗೆ ಸಹಾಯ ಮಾಡುತ್ತ, ತಮ್ಮ ವೃತ್ತಿಯಲ್ಲಿಯೂ ಪವಿತ್ರತೆ ಕಾಪಾಡಿಕೊಂಡ ಕರುಣಾಜನಕ ಹೃದಯಗಳು ಕಡಿಮೆಯೇ.. ಇದರಿಂದಾಗಿ ನಮ್ಮ ಸಮಾಜ ಆರೋಗ್ಯಕರವಾಗಿದೆ.

ಯಾರಷ್ಟೇ ದ್ವೇಷಿಸಿದರೂ ಎಷ್ಟೇ ಕೆಟ್ಟ  ಮನಸಿದೆ ಎಂದು ಭಾವಿಸಿದರೂ ಅವರೂ   “ಈಗಾಗಬಾರದಾಗಿತ್ತು” ಎನ್ನುವ  ಮನಸ್ಸು ಎಲ್ಲರೊಳಗೂ ಇರುತ್ತದೆ. “ಕಣ್ಣರಿಯದಿದ್ದರೂ ಕರುಳರಿಯುತ್ತದೆ” ಅದೇ ಅಲ್ಲವೇ ವಾತ್ಸಲ್ಯ. ಅದೇ ಅಲ್ಲವೇ ಒಲವಧಾರೆ.

————————————-

Leave a Reply

Back To Top