ಸುತ್ತ ಮುತ್ತ ಹಲವಾರು ಜನ ಇದ್ದರೂ ಕೆಲವೊಮ್ಮೆ ನಾನು ಒಂಟಿ ಅನ್ನಿಸಿ ಬಿಡುತ್ತದೆ. ಮಾನಸಿಕವಾಗಿ ನಾವು ಹಲವಾರು ಬಾರಿ ಒಂಟಿ ಅಂದುಕೊಳ್ಳುತ್ತೇವೆ ಅಲ್ಲವೇ? ಅದೆಷ್ಟೋ ಬಾರಿ ಒಂಟಿತನವೇ ನನಗೆ ಬಹಳ ಅಪ್ಯಾಯಮಾನ ಎನಿಸುತ್ತದೆ. ಬಹಳ ಜನರಿಗೆ ಒಂಟಿತನವೆಂದರೆ ಬೋರ್. ಒಂಟಿಯಾಗಿ ಬದುಕಲು ಸಾಧ್ಯವೇ ಇಲ್ಲ ಎಂದು ಅಂದುಕೊಂಡವರು ಇನ್ನ ಎಷ್ಟೋ ಜನ. ಆದರೆ ನಿಜವಾದ ಒಂಟಿತನದ ಸುಖವನ್ನು ಅನುಭವಿಸಿದವರು ಬಹಳ ಕಡಿಮೆ ಜನ. ಅದೆಷ್ಟೋ ಮಂದಿ ಮದುವೆಯಾಗುವ ಮೊದಲು ನಮಗೊಂದು ಜೋಡಿ ಬೇಕು,  ಉತ್ತಮವಾದ ವಧು ಅಥವಾ ವರ ಸಿಗಬೇಕು ಎಂದೆಲ್ಲ ಆಸೆ ಪಡುತ್ತಾರೆ. ಆದರೆ ಮದುವೆಯಾಗಿ ಒಂದೆರಡು ವರ್ಷಗಳ  ಬಳಿಕ ಅವರ ಆಸೆಗಳೆ ಬೇರೆಯಾಗಿರುತ್ತವೆ. “ನಾನು ಯಾಕಾದರೂ ಮದುವೆಯಾದೆನೋ ಏನೋ.. ನಾನು ಒಬ್ಬನೇ ಅಥವಾ ಒಬ್ಬಳೇ ಇರಬೇಕಾಗಿತ್ತು. ನನ್ನ ಯಾವ ಆಸೆ ಆಕಾಂಕ್ಷೆಗಳು ಈಡೇರಲಿಲ್ಲ,  ನನ್ನ ಯಾವ ಕನಸುಗಳು ಕೂಡ ನನಸಾಗಲಿಲ್ಲ. ಬದುಕಿನಲ್ಲಿ ನಾನು ಅಂದುಕೊಂಡಿದ್ದೆ ಒಂದು ಆದದ್ದೆ ಇನ್ನೊಂದು. ನಾನು ಮದುವೆಯಾಗಬಾರದಾಗಿತ್ತು” ಎಂದೆಲ್ಲ ಯೋಚಿಸುತ್ತಾ ಇರುತ್ತಾರೆ. ಆದರೆ ಆಗ ಕಾಲ ಮಿಂಚಿ ಹೋಗಿರುತ್ತದೆ. ಕಟ್ಟಿಕೊಂಡದ್ದನ್ನು ಇಷ್ಟವಿಲ್ಲದಿದ್ದರೂ ಸಮಾಜಕ್ಕಾಗಿ ಜೊತೆಗೆ ಬಾಳುವವರು ಸಮಾಜದಲ್ಲಿ ಅದೆಷ್ಟೋ ಮಂದಿ ಇದ್ದಾರೆ. ಎರಡು ಕುಟುಂಬಗಳ ಮರ್ಯಾದೆ ಉಳಿಸಲು ತನ್ನ ಬದುಕನ್ನು ಬಲಿ ಕೊಟ್ಟು, ಇಷ್ಟವಿಲ್ಲದ ಹುಡುಗಿಯ ಜೊತೆಗೆ ಅಥವಾ ಇಷ್ಟವೇ ಇಲ್ಲದ ಹುಡುಗನೊಂದಿಗೆ ಯಾಂತ್ರಿಕವಾಗಿ ಬದುಕುತ್ತಿರುವ, ಹೊರ ಜಗತ್ತಿಗೆ ಮಾತ್ರ ನಗುಮುಖದಿಂದ ವ್ಯವಹರಿಸುತ್ತಿರುವ, ಒಳಗೊಳಗೆ ನಿತ್ಯ ಬೇಯುತ್ತಿರುವ ಮಾನವ ಮನಗಳು ಅದೆಷ್ಟೋ. ಒಂದಷ್ಟು ಸಿರಿವಂತರು ಎಂದು ಹಣೆ ಪಟ್ಟಿ ಕಟ್ಟಿಕೊಂಡವರು ಮತ್ತು ಧೈರ್ಯವಂತರು ಡಿವೋರ್ಸ್ ಎಂಬ ಸರ್ಟಿಫಿಕೇಟ್ ಅನ್ನು ಪಡೆದು ಬದುಕಿನಲ್ಲಿ ಏನೋ ಒಂದು ರೀತಿಯಲ್ಲಿ ಬದುಕುತ್ತಿದ್ದರೆ ಇನ್ನುಳಿದ ಇತರ ಎಲ್ಲರ ಕಥೆ ಅತ್ತ ಒಂಟಿತನಕ್ಕೂ ಹೋಗಲಾಗದೆ, ಇತ್ತ ಸಂಸಾರದ ಒಳಗೂ ಬದುಕಲಾಗದೆ ಕೆಲವರು ಆತ್ಮಹತ್ಯೆಗೆ ಶರಣಾದರೆ ಇನ್ನು ಕೆಲವರು ಹೊಸದಾದ ಹೊರಗೊಂದು ಅನೈತಿಕ ಎಂದು ಹೇಳುವ ಸಂಬಂಧವಿಟ್ಟುಕೊಂಡು ಅದರಲ್ಲಿ ಸುಖ ಕಂಡರೆ,  ಇನ್ನು ಕೆಲವರು “ಇದೇ ನನ್ನ ಬದುಕು,  ದೇವರು ನನಗೆ ಕಷ್ಟವನ್ನೆ ಇಟ್ಟಿದ್ದಾರೆ, ಈ ಬದುಕು ಇರುವವರೆಗೂ ನನ್ನ ಕಷ್ಟವನ್ನು ಕೇಳುವವರು ಯಾರು ಇಲ್ಲ, ನನ್ನದೊಂದು ಯಾವ ತರದ ಬದುಕೊ ಯಾರಿಗೂ ತಿಳಿಯದು, ನಾನು ಯಾಕಾದರೂ  ಬದುಕಿದ್ದೇನೋ ಏನೋ…” ಎಂದು ತನ್ನ ದುರದೃಷ್ಟವನ್ನು ಮತ್ತು ಆ ದೇವರನ್ನು ಹಳಿಯುತ್ತಾ, ಇನ್ನು ಕೆಲವರು ಜ್ಯೋತಿಷ್ಯ ದೇವರು ದೈವಗಳು ಇವುಗಳ ಮೇಲೆ ನಂಬಿಕೆ ಇಟ್ಟು ಹಲವಾರು ಪೂಜೆ ಪುನಸ್ಕಾರಗಳನ್ನು ಮಾಡುತ್ತಾ ಮುಂದೊಂದು ದಿನ ನನ್ನ ಬದುಕು ಸರಿ ಹೋಗಬಹುದು ಎನ್ನುವ ಭರವಸೆಯಿಂದ ಬದುಕುತ್ತಿರುತ್ತಾರೆ.
          ಇನ್ನು ಕೆಲವರು ಹಾಗಲ್ಲ ತಮ್ಮ ಮಾನಸಿಕ ಒಂಟಿತನ ಮರೆತು ದಿಟ್ಟತನದಿಂದ ಸಮಾಜವನ್ನು ಎದುರಿಸಿ, ಸಮಾಜ ಸೇವಕರಾಗಿ , ಯಾರಿಗೂ ಹೆದರದೆ, ಸಮಾಜದಲ್ಲಿ ತನ್ನ ಬದುಕನ್ನು ಹೊರೆಯಾಗಿಸಿಕೊಳ್ಳದೆ,  ವ್ಯಾಪಾರವನ್ನು ಆರಂಭಿಸಿ ಹಲವಾರು ಜನರಿಗೆ ಕೆಲಸ ಕೊಟ್ಟು ತನ್ನಿಂದಾಗಿ ಅವರಿಗೂ ಉದ್ಯೋಗವನ್ನು ಕೊಡುವುದರ ಜೊತೆಗೆ ಅವರ ಬಾಳನ್ನು ಕಟ್ಟಿಕೊಟ್ಟಿರುತ್ತಾರೆ. ಹಲವಾರು ಸಾಮೂಹಿಕ ವಿವಾಹಗಳನ್ನು ಮಾಡಿಸಿಕೊಡುವುದು, ಬಡವರಿಗೆ ಸಹಾಯ ಮಾಡುವುದು, ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಸಹಕಾರ ನೀಡುವುದು, ಆಸ್ಪತ್ರೆಗಳಲ್ಲಿ ರೋಗಿಯ ಜೊತೆಗೆ ಕಳೆಯುತ್ತಿರುವವರಿಗೆ ಊಟ ಉಪಚಾರ ಹಣ್ಣುಗಳನ್ನು ನೀಡುವುದು, ಮನೆಯ ಯಜಮಾನನಿಗೆ ಆದ ತೊಂದರೆಯಿಂದ ಕಷ್ಟಪಡುತ್ತಿರುವ ಹಲವಾರು ಬಡವರ ಮನೆಗಳನ್ನು ಗುರುತಿಸಿ ಅವರಿಗೆ ಸಹಾಯ ಮಾಡುವುದು, ಬಡವರಿಗೆ ಮನೆಗಳನ್ನು ಕಟ್ಟಿಸಿ ಕೊಡುವುದು, ಬಡವರ ಮಕ್ಕಳನ್ನು ಯಾವುದೇ ಖರ್ಚಿಲ್ಲದೆ ಕಲಿಸುವಂತಹ ಶಾಲೆಗಳನ್ನು ತೆರೆಯುವುದು, ಎಸ್ ಎಸ್ ಎಲ್ ಸಿ ಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ವಿವಿಧ ರೀತಿಯ ಟೆಕ್ನಿಕಲ್ ಕೋರ್ಸ್ ಗಳನ್ನು ಮಾಡಿಸಿ ಅವರು ಕೂಡ ಜೀವನದಲ್ಲಿ ನೆಲೆ ನಿಲ್ಲುವ ಹಾಗೆ ಮಾಡುವುದು, ಅನಾಥ ಮಕ್ಕಳನ್ನು ತಂದು ಸಾಕುವುದು, ಮನೆಯಿಂದ ಹೊರದೂಡಲ್ಪಟ್ಟ ಹಿರಿಯರನ್ನು ಅಜ್ಜ ಅಜ್ಜಿಯರನ್ನು ತಂದು ವೃದ್ದಾಶ್ರಮವನ್ನು ನಡೆಸುತ್ತಾ ಹಿರಿಯರನ್ನು ನೋಡಿಕೊಂಡು ಅವರ ಆಶೀರ್ವಾದವನ್ನು ಪಡೆದುಕೊಳ್ಳುವುದು, ವಿಧವೆಯರು,  ಬಡವರು, ಯಾರು ಇಲ್ಲದಂತಹ ಒಂಟಿಯಾದ ಜನರು ಇವರಿಗೆ ಸರಕಾರದಿಂದ ಸಿಗಬಹುದಾದಂತಹ ಸೌಲಭ್ಯಗಳ ಬಗ್ಗೆ ತಿಳಿ ಹೇಳಿ ಅವನ್ನು ಕೊಡಿಸುವುದು, ಬಡವರ ಕೈಯಲ್ಲಿರುವ ಒಂದಷ್ಟು ಹಣವನ್ನು ಉಳಿಸಿ, ಅದರ ಮೇಲೆ ಅವರಿಗೆ ಸಾಲವನ್ನು ಕೊಟ್ಟು ಅವರ ಜೀವನ ಮುಂದೆ ಬರುವ ಹಾಗೆ ನೋಡಿಕೊಳ್ಳುವುದು, ಬಡ ಹೆಣ್ಣು ಮಕ್ಕಳಿಗೆ ಮತ್ತು ಹುಡುಗರಿಗೆ ಅವರ ಜೀವನಕ್ಕೆ ಬೇಕಾದ ಉದ್ಯೋಗವನ್ನು ನೀಡುವುದು, ಆಕ್ಸಿಡೆಂಟ್ ನಿಂದ ಕೈ ಕಾಲುಗಳನ್ನು ಕಳೆದುಕೊಂಡವರಿಗೆ ಉದ್ಯೋಗಗಳನ್ನು ನೀಡುವುದು ಹಾಗೆಯೇ ಅವರಿಗೆ ಉಪಯುಕ್ತವಾಗುವಂತಹ ಆರ್ಟಿಫಿಶಿಯಲ್ ಪರಿಕರಗಳನ್ನು ಒದಗಿಸುವುದು, ಬೇರೆ ಬೇರೆ ಸ್ಥಳಗಳಿಗೆ ಹೋಗಿ ಭಾಷಣವನ್ನು ಮಾಡಿ ಜೀವನದಲ್ಲಿ ನೊಂದವರಿಗೆ ಸಾಂತ್ವನ ಹೇಳುವುದು, ಬದುಕಿನಲ್ಲಿ ಇನ್ನೊಂದು ಸಾಯಲು ಹೊರಟಂತಹ ಅನೇಕ ಮನಸ್ಸುಗಳನ್ನು ಕೌನ್ಸಲಿಂಗ್ ಮಾಡಿ ಅವರು ಜೀವನದಲ್ಲಿ ಒಳ್ಳೆಯವರಾಗಿ ಬದುಕಲು ಅವರಿಗೆ ಸಹಾಯ ಮಾಡುವುದು, ಒಂಟಿಯಾಗಿಯೇ ಟ್ರೆಕಿಂಗ್ , ಪ್ರವಾಸ ಕೈಗೊಂಡು ಅಲ್ಲಿನ ಬಡ ಜನರೊಂದಿಗೆ ಬೆರೆತು ಅವರ ಕಷ್ಟಗಳನ್ನು ಆಲಿಸಿ ಅವರಿಗೆ ಸಣ್ಣಪುಟ್ಟ ಸಹಾಯ ಮಾಡುವುದು, ಕುಡಿತದ ಚಟವನ್ನು ಬಿಡಿಸಿ ಅವರನ್ನು ಮತ್ತೆ ಸರಿಯಾದ ಮಾನವರಾಗಿ ಬದುಕುವಂತೆ ಮಾಡಿ ಅವರ ಜೀವನ ಮಟ್ಟವನ್ನು ಸುಧಾರಿಸುವುದು, ಜೀವನದಲ್ಲಿ ನೊಂದವರಿಗೆ ತಮ್ಮ ಬರಹದ ಮೂಲಕ ಪ್ರೇರಣೆಯುಕ್ತ ನುಡಿಗಳನ್ನು ನೀಡಿ ಅವರ ಬದುಕನ್ನು ಉತ್ತಮಪಡಿಸುವಂತೆ ಮಾಡುವುದು ಇವನ್ನೆಲ್ಲ ಸದ್ದಿಲ್ಲದೆ ಮಾಡುತ್ತಾ ಇರುತ್ತಾರೆ. ಇಂತಹ ಜನ ಮಾನಸಿಕ ಶಾಂತಿಯನ್ನು ಈ ಕೆಲಸಗಳ ಮೂಲಕ ಪಡೆಯುತ್ತಾರೆ.  ಆದ್ದರಿಂದ ಇವರು ಯಾವ ರಾಜ್ಯೋತ್ಸವ ಪ್ರಶಸ್ತಿಗೂ ಅರ್ಜಿ ಹಾಕುವುದಿಲ್ಲ. ಕಾರಣ ಅವರಿಗೆ ಪ್ರಶಸ್ತಿ ಪುರಸ್ಕಾರಗಳು ಬೇಡ. ಇವೆಲ್ಲವೂ ಕೂಡ ಸಮಾಜ ಸೇವೆ ಆಗಿದ್ದು ಈ ರೀತಿ ಜನರು ತಮ್ಮ ಕಷ್ಟವನ್ನು ಮರೆಯುತ್ತಾ ಸದಾ ಕಾಲ ನಗುನಗುತ್ತಾ ನಮ್ಮೆಲ್ಲರ ಮಧ್ಯದಲ್ಲಿ ಓಡಾಡುತ್ತಿರುತ್ತಾರೆ. ಕವಿಗಳಾದರೆ ಹಲವು ಕವಿಗಳನ್ನು ಬೆಳೆಸುವುದು, ಅವರಿಗೆ ಬೇಕಾದಂತಹ ಕಾರ್ಯಕ್ರಮಗಳನ್ನು ಮಾಡಿ ಆ ಮೂಲಕ ಅವರನ್ನು ಬೆಳೆಸುವುದು ಮತ್ತು ಅವಕಾಶಗಳನ್ನು ನೀಡುವುದು, ಅವರಿಗಾಗಿ ಪ್ರಶಸ್ತಿಗಳನ್ನು ಕೊಡ ಮಾಡುವುದು, ದಾನಿಗಳ ಸಹಾಯ ಪಡೆದು ಅದನ್ನು ಉತ್ತಮವಾದ ಕಾರ್ಯಗಳಿಗೆ ಬಳಸಿಕೊಳ್ಳುವುದು ಈ ರೀತಿ ಮಾಡಿಕೊಂಡು ಬದುಕುವಂತಹ ಅದೆಷ್ಟೋ ಜನರು ನಮ್ಮ ನಿಮ್ಮ ಮಧ್ಯದಲ್ಲಿದ್ದಾರೆ. ಅವರಿಗೆ ಅವರ ಮನಸ್ಸಿನ ಒಂಟಿತನ ಎಂದು ಕಾಡಲೇ ಇಲ್ಲ ಅಂತಲ್ಲ. ಆ ಒಂಟಿತನವನ್ನು ಮರೆಯಲು ಅವರು ಜಂಟಿಯಾಗಿ ಇದೆಲ್ಲ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇದರಿಂದ ಅವರು ಜೀವನದಲ್ಲಿ ಉತ್ತಮವಾದ ಸಾಧನೆಯನ್ನು ಮಾಡುತ್ತಾ ಮೇಲೇರುತ್ತಿರುತ್ತಾರೆ. ಇದೇ ನಿಜವಾದ ಬದುಕು ಅಲ್ಲವೇ? ಇಲ್ಲಿ ಯಾವ ನಾಟಕವೂ ಇಲ್ಲ. ನಿತ್ಯ ಬದುಕು. ಎದುರಿಸಲೇ ಬೇಕು ಹೇಗಾದರೂ. ಬದುಕನ್ನು ಅದು ಬಂದಂತೆ ಸ್ವೀಕರಿಸುವುದು. ಒಂದು ಗಿಡವನ್ನು ಅರ್ಧ ಕಡಿದು ಬಿಟ್ಟರೆ ಅದು ಅದೇ ಸ್ಥಿತಿಯಲ್ಲಿ ಅಲ್ಲೇ ಉಸಿರಾಡುತ್ತ ಬದುಕುವುದಿಲ್ಲವೇ? ಹಾಗೆಯೇ.


    ಬಂದಿರುವ ಎಡರು ತೊಡರುಗಳನ್ನೆಲ್ಲ ಮೆಟ್ಟಿ ನಿಂತು, ಜೀವನದಲ್ಲಿ ನಾನು ಏನು ಬೇಕಾದರೂ ಸಾಧನೆ ಮಾಡಬಲ್ಲೆ ಎನ್ನುವಂತಹ ಗುರಿ ಇಟ್ಟುಕೊಂಡು,  ಆ ಗುರಿಯ ಕಡೆಗೆ ಮುಖ ಮಾಡುತ್ತಾ ತನ್ನ ನೋವುಗಳನ್ನೆಲ್ಲ ಮರೆತು ಪರರ ಕಡೆಗೆ ಗಮನವಿಟ್ಟು “ನನ್ನ ಈ ಆಗಮನದಿಂದ ಈ ಧರೆಯಲ್ಲಿ ಒಂದಷ್ಟು ಉತ್ತಮ ಕಾರ್ಯಗಳು ನಡೆಯಬೇಕಿದೆ ” ಎಂದುಕೊಂಡು ಆ ದಿಸೆಯಲ್ಲಿ ಹೆಜ್ಜೆ ಹಾಕಿದಂತಹ ಮಹಾನ್ ಆತ್ಮಗಳು ನಮ್ಮ ನಿಮ್ಮೊಡನೆ ಹಲವಾರು ಜನರು ಈಗಲೂ ಇದ್ದಾರೆ ಮತ್ತು ಅವರು ಮಹಾನ್ ವ್ಯಕ್ತಿಗಳೇ ಆಗಿ ಹೋಗಿದ್ದಾರೆ. ಇಂತಹ ಮಹಾನ್ ವಿರಾಟ್ ಸ್ವರೂಪಕ್ಕೆ ಜಾತಿ ಮತ ಧರ್ಮಗಳ ಹಂಗಿಲ್ಲ. ಮಾಡುವ ಕಾರ್ಯ ಒಂದೇ.  ಎಲ್ಲರಿಂದಲೂ ಶ್ಲಾಘನೀಯಕ್ಕೆ ಒಳಗಾಗಲ್ಪಡುವುದು. ಉತ್ತಮ ಕಾರ್ಯವನ್ನು ಮಾಡಿದಾಗ ಮತ್ತು ಮನಸ್ಸು ಉತ್ತಮವಾಗಿದ್ದಾಗ ಎಲ್ಲರೂ ಆ  ಜನರನ್ನು ಹೊಗಳುತ್ತಾರೆ. ಯಾರು ಕೆಟ್ಟದಾಗಿ ಯೋಚಿಸುತ್ತಾನೆ ಮತ್ತು ಕೆಟ್ಟದಾಗಿ ವರ್ತಿಸುತ್ತಾನೆ ಅವನನ್ನು ಯಾವ ಜಾತಿ ಧರ್ಮದ ಜನರು ಕೂಡ ಗೌರವಿಸುವುದಿಲ್ಲ. ಅಂತಹ ಜನರಿಗೆ ಒಂಟಿತನವು ಹೆಚ್ಚಾಗಿ ಕಾಡುತ್ತದೆ.
   ನಿಜವಾಗಿ ಬದುಕಲು ಕಲಿತವನಿಗೆ ಕೆಲವೊಂದು ಸಲ ಒಂಟಿತನವೇ ಸಂತಸಮಯವಾಗಿ ಕಾಣುತ್ತದೆ. ಅವನ ಕಾರ್ಯಗಳಿಗೆ ಕೊನೆಯೇ ಇಲ್ಲ, ಒಂದರ ಬಳಿಕ ಮತ್ತೊಂದು ಅವನನ್ನು ಕರೆಯುತ್ತಿರುತ್ತವೆ. ಒಂದೆಡೆ ವ್ಯಾಪಾರ, ಮತ್ತೊಂದೆಡೆ ಪರರಿಗೆ ಸಹಾಯ, ಇನ್ನೊಂದು ಕಡೆ ಮತ್ತೆ ಇನ್ಯಾರಿಗೋ ಇನ್ನೊಂದು ಸಹಾಯ, ಮಾಡಿದ ಸಹಾಯವನ್ನು ನೆನೆದು ಗೌರವಿಸಲು ಬಂದವರ ಬಳಿ ಅದನ್ನು ನಯವಾಗಿ ತಿರಸ್ಕರಿಸಿ ಆ ಹಣವನ್ನು ಇನ್ಯಾರೋ ಬಡವರಿಗೆ ನೀಡಲು ಸೂಚನೆ ಕೊಟ್ಟಾಗ ಅವರು ಒಪ್ಪಿ ಅವರ ಕೈಯಲ್ಲೇ ಕೊಡಿಸುವ, ಆ ಮೂಲಕ ಅವರೂ ಸಮಾಜಸೇವೆ ಮಾಡುವ ಹಾಗೆ ಮಾಡುವ ಹೀಗಿನ ಕಾರ್ಯಗಳಲ್ಲಿ ಅವರು ಸದಾ ಬ್ಯುಸಿ. ಒಂದಲ್ಲ ಒಂದು ಉತ್ತಮ ಕಾರ್ಯಗಳು ಅವರನ್ನು ಕಾಯುತ್ತಾ ಇರುವುದರಲ್ಲಿ ಸಂದೇಹವೇ ಇಲ್ಲ. ಆಗ ಜೀವನ ಒಬ್ಬರೇ ಇದ್ದರೂ ಕೂಡಾ ಬೋರ್ ಆಗದು. ಹಲವಾರು ಜನ ಲೈಫ್ ಬೋರ್ ಅನ್ನುವುದನ್ನು ಕೇಳಿದ್ದೇವೆ. ಪರರ ಹಿತಕ್ಕಾಗಿ ಒಳ್ಳೆ ಕಾರ್ಯ ಮಾಡುವವನ ಬದುಕು ಎಂದೂ ಬೋರ್ ಆಗದು ಅಲ್ಲವೇ? ಪೂರ್ತಿ ಸಮಯ ಆಗದಿದ್ದರೂ ಒಂದಿಷ್ಟು ಸಮಯವನ್ನು ಸಮಾಜದ ಕಾರ್ಯಕ್ಕಾಗಿ ಮೀಸಲಿಟ್ಟು, ನಮ್ಮ ಬದುಕನ್ನು ಹಸನುಗೊಳಿಸೋಣ. ಬಂದಾಗ ಏನೂ ತರಲಿಲ್ಲ, ಹೋಗುವಾಗ ಮನೆ ಮಠ ಆಸ್ತಿ ಎಲ್ಲಾ ಇನ್ಯಾರದೋ ಪಾಲಾಗುತ್ತದೆ ಅಷ್ಟೇ ಬದುಕು ಅಲ್ಲವೇ? ಒಂದಿಷ್ಟು ಮನಸ್ಸಿನ ಸಂತೋಷಕ್ಕಾಗಿ ಬಾಳೋಣ. ನೀವೇನಂತೀರಿ?

———————[

Leave a Reply

Back To Top