ಅಂಕಣ ಸಂಗಾತಿ

ಹನಿಬಿಂದು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ

ನಮ್ಮನ್ನು ನಾವೇ ತಿದ್ದಿಕೊಳ್ಳಬೇಕಿದೆ

  ಇನ್ನೊಂದು ವಾರದಲ್ಲಿ ನಾಡ ಹಬ್ಬ ದಸರಾ ಪ್ರಾರಂಭವಾಗುತ್ತದೆ. ಮಕ್ಕಳಿಗೆ ಶಾಲೆಯಲ್ಲಿ ದಸರಾ ರಜೆ ಘೋಷಿಸಲಾಗಿದೆ. ಕಾನ್ವೆಂಟ್ ಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೂ ಮುಂದಿನ ವಾರದಿಂದ ರಜೆ. ಇಂತಹ ರಜಾ ದಿನಗಳಲ್ಲಿ ವಿದ್ಯಾರ್ಥಿಗಳು ಅಲ್ಲಿ ಇಲ್ಲಿ ಸುತ್ತಲೂ ಅದರ ಜೊತೆಗೆ ನದಿಗೆ ಸ್ನಾನಕ್ಕೆ ಹೋಗುವುದು, ತಮಗೆ ಗೊತ್ತಿಲ್ಲದ ಹೊಸ ಜಾಗದಲ್ಲಿ ನೀರಿನಾಳ ತಿಳಿಯದೆ ಈಜಾಡಲು ಹೋಗುವುದು ಹಾಗೆ ಗೊತ್ತಿಲ್ಲದ ರಸ್ತೆಯಲ್ಲಿ ಬಂಧುಗಳ ಮತ್ತು ಕಾರುಗಳನ್ನು ಪರವಾನಗಿಲ್ಲದೆ ಓಡಿಸುವುದು ಇಂತಹ ಕೆಲಸಗಳನ್ನು ಮಾಡುತ್ತಿರುತ್ತಾರೆ. ಇವೆಲ್ಲ ಜೀವಕ್ಕೆ ಅಪಾಯ ತಂದುಕೊಡುವ ಕೆಲಸಗಳು.
   ಯಾವುದೇ ವಿದ್ಯಾರ್ಥಿಯಾಗಲಿ 18 ವರ್ಷಕ್ಕಿಂತ ಮೊದಲು ಪರವಾನಗಿ ಇಲ್ಲದೆ ಯಾರ ವಾಹನಗಳನ್ನು ಓಡಿಸುವಂತಿಲ್ಲ ಹಾಗೆ ವಾಹನ ಕೊಟ್ಟವರ ಮೇಲೆ ದಂಡ ವಿಧಿಸಲಾಗುತ್ತದೆ. ಬೇರೆ ಊರಿಗೆ ಬಂದುಗಳ ಮನೆಗೆ ಹೋಗುವಾಗ ಅಲ್ಲಿ ಅವರ ಮೊಬೈಲ್ ಫೋನನ್ನು ತೆಗೆದುಕೊಂಡು ತಮಗೆ ಬೇಕಾದ ಹಾಗೆ ಸಿಕ್ಕಿಸಿದ್ದನ್ನೆಲ್ಲ ಒತ್ತಿ, ನೋಡಬಾರದ್ದನ್ನೆಲ್ಲ ನೋಡಿ ತಮ್ಮ ಬದುಕಿನಲ್ಲಿ ಹಾಳಾಗುವ ಮಕ್ಕಳು ಅದೆಷ್ಟೋ ಇದ್ದಾರೆ. ಪೋಷಕರು ಈ ಬಗ್ಗೆ ತುಂಬಾ ಜಾಗರೂಕರ ಆಗಿರಬೇಕು. ತಮ್ಮ ಮಕ್ಕಳನ್ನು ಬಂಧುಗಳೊಡನೆ ಬಿಡುವಾಗ ಅವರು ಯಾವ ರೀತಿಯ ಜನ ಅವರ ನಡತೆ ಇವುಗಳನ್ನೆಲ್ಲ ನೋಡಿ ಅವರ ಜೊತೆ ತಮ್ಮ ಮಕ್ಕಳನ್ನು ಬೆರೆಯಲು ಬಿಡಬೇಕು. ಅದರಲ್ಲೂ ಪ್ರೌಢಶಾಲಾ ವಿಭಾಗದಲ್ಲಿ ಓದುತ್ತಿರುವ ಮಕ್ಕಳದ್ದು ಟೀನೇಜ್ ಮತ್ತು ಟರ್ನಿಂಗ್ ಪಾಯಿಂಟ್ ಆ ಸಮಯದಲ್ಲಿ ಕುತೂಹಲ ಹೆಚ್ಚಾಗಿರುತ್ತದೆ ಇಂತಹ ಸಮಯದಲ್ಲಿ ಮಗುವೊಂದು ದಾರಿ ತಪ್ಪಿದರೆ ತಾನೇನು ಮಾಡುತ್ತಿದ್ದೇನೆ ಎನ್ನುವಷ್ಟು ತಿಳುವಳಿಕೆ ಆ ವಯಸ್ಸಿನಲ್ಲಿ ಇರುವುದಿಲ್ಲ. ನಾನು ಹೇಗಾದರೂ ಬದುಕಬಲ್ಲೆ ನಾನೆನಾದರೂ ಮಾಡಬಲ್ಲೆ ನನ್ನ ಜೀವನವನ್ನು ನಾನು ಜೀವಿಸಬಲ್ಲೆ ಎನ್ನುವಂತಹ ಭಂಡ ಧೈರ್ಯ ಚಲನಚಿತ್ರಗಳನ್ನು ನೋಡಿ ಸಾಮಾಜಿಕ ಜಾಲತಾಣಗಳನ್ನು ಬಳಸಿ ತಮ್ಮದೇ ಲೋಕದಲ್ಲಿ ವಿಹರಿಸುತ್ತಿರುವ ವಿದ್ಯಾರ್ಥಿಗಳಿಗೆ ಅನ್ನಿಸುತ್ತದೆ.
  ಪೋಷಕರು ಕೂಡ ಎಂತಹ ಸಮಯದಲ್ಲಿ ಬಹಳ ನಾಜ್ಯುಕಾಗಿ ಅವರನ್ನು ವಿಚಾರಿಸಿಕೊಳ್ಳಬೇಕು. ಸ್ವಲ್ಪ ಹೆಚ್ಚು ಕಡಿಮೆ ನಾವೇ ದೊಡ್ಡವರು ಎನ್ನುವ ಹಾಗೆ ವರ್ತಿಸುವ ಈ ಮಕ್ಕಳನ್ನು ತಮ್ಮ ಮನಸ್ಸಿಗೆ ಬಂದ ಹಾಗೆ ಥಳಿಸುವ ಹಾಗೂ ಇಲ್ಲ. ಈಗಂತೂ ಸಾಮಾಜಿಕ ಜಾಲತಾಣಗಳು ಮತ್ತು ಟಿವಿಯ ನ್ಯೂಸ್ ಚಾನೆಲ್ ಗಳು ಸತ್ತ ಹೆಣಗಳನ್ನು ಮತ್ತು ಸಾಯುವ ವಿಧಾನವನ್ನು ಲೈವ್ ಆಗಿ ತೋರಿಸುತ್ತಿರುವುದರಿಂದ ಎರಡನೇ ತರಗತಿಯ ಮಗುವಿಗೂ ಸುಯಿಸೈಡ್ ಮಾಡಿಕೊಳ್ಳುವ ವಿಧಾನ ತಿಳಿದಿದೆ. ಹೆತ್ತವರನ್ನು ಬಗ್ಗಿಸಲು ಇದೊಂದೇ ವಿಧಾನ ಎಂದು ಮಕ್ಕಳು ಆಟವಾಡುವಂತೆ ಮಾಡಲು ಹೋಗಿ ತಮ್ಮ ಅಮೂಲ್ಯವಾದ ಜೀವವನ್ನು ಕಳೆದುಕೊಳ್ಳುತ್ತಾರೆ. ಆದ ಕಾರಣ ಮಗುವಿನ ಪ್ರತಿಯೊಂದು ನಡವಳಿಕೆಯನ್ನು ತಿದ್ದುವಾಗಲು ಪ್ರತಿ ಹೆಜ್ಜೆಯಲ್ಲೂ ತುಂಬಾ ಜಾಗರೂಕರಾಗಿರಬೇಕು. ಸಾಯುವುದು ಸುಲಭ ಈಗಿನ ಜನಾಂಗಕ್ಕೆ, ಆದರೆ ಬದುಕುವುದು ಕಷ್ಟ. ಪೋಷಕರು ಓದು ಎಂದು ಒಂದೆರಡು ಮಾತನಾಡಿದರು ಕೂಡಾ ಮಕ್ಕಳು ಸಾಯಲು ಮುಂದೆ ಮುಂದೆ ನೋಡುವುದಿಲ್ಲ. ಸಾವು ಎನ್ನುವುದರ ಬಗ್ಗೆ ಭಯ ಬರುವ ಬದಲು ಫೈಟಿಂಗ್ ಸೀನನ್ನೇ ನೋಡುತ್ತಾ ಬೆಳೆದ ಮಕ್ಕಳ ಮನಸ್ಸಿನಲ್ಲಿ ಸಾವಿನ ಬಗ್ಗೆ ಭಯವಿಲ್ಲ.  ಬದಲಾಗಿ ತಮ್ಮನ್ನು ಹೆತ್ತು ಹೊತ್ತು ಸಾಕಿ ಸಲಹಿದ ಪೋಷಕರಿಗೆ ಬುದ್ಧಿ ಕಲಿಸುವ ಕೆಲಸದಲ್ಲಿ ತೊಡಗಿರುತ್ತಾರೆ ಅವರು. ಇನ್ನು ಮೇಲೆ ನಮಗೆ ಹೇಗೆ ಬುದ್ಧಿ ಹೇಳುತ್ತಾರೆ ನೋಡುತ್ತೇನೆ. ನಾನು ಬದುಕಿದ್ದರಲ್ಲವೇ ಇವರು ನನಗೆ ಬುದ್ಧಿವಾದ ಹೇಳುವುದು ಅಂದುಕೊಂಡು ಸಾವಿಗೆ ಸಿದ್ಧರಾಗುತ್ತಾರೆ. ತಮ್ಮ ಸಾವಿನ ಪರಿಣಾಮ ಪೋಷಕರಲ್ಲಿ ಹೇಗಿರಬಹುದು ಎಂಬುದನ್ನು ಅವರು ಎಂದು ಊಹೆ ಕೂಡ ಮಾಡುವುದಿಲ್ಲ.


   ಆದ್ದರಿಂದ ರಜೆಯಲ್ಲಿ ಮಕ್ಕಳನ್ನು ಎಲ್ಲೇ ಹೊರಗೆ ಬಿಡುವಾಗ ಪೋಷಕರು ಬಹಳವೇ ಗಮನವಿಟ್ಟು ನೋಡಿಕೊಳ್ಳುತ್ತಿರಬೇಕು. ಅದರಲ್ಲೂ ಇಂದಿನ ಕಾಲದಲ್ಲಿ ಹೆಣ್ಣು ಮಕ್ಕಳನ್ನು ಕಣ್ಣಲ್ಲಿ  ಕಣ್ಣಿಟ್ಟು ನೋಡಿಕೊಳ್ಳಬೇಕು ಯಾಕೆಂದರೆ ಹೊರಗಡೆ ಪ್ರಪಂಚ ಹೆಣ್ಣು ಮಕ್ಕಳನ್ನು ನೋಡುವ ದೃಷ್ಟಿಗೆ ಬೇರೆ. ಅದು ಹೆಣ್ಣು ಮಕ್ಕಳೆಂದರೆ ವಯಸ್ಸಿಗೆ ಬಂದ ಹೆಣ್ಣು ಮಕ್ಕಳಿಗೆ ಆಗಬೇಕೆಂದಿಲ್ಲ ಇತ್ತೀಚೆಗೆ ನಾವು ನೋಡುವಂತಹ ಮಾಧ್ಯಮಗಳಲ್ಲಿ ಓದುವಂತಹ ಪತ್ರಿಕೆಗಳಲ್ಲಿ ಬಂದಂತಹ ವಿಚಾರಗಳನ್ನು ನೋಡುವಾಗ ಸಣ್ಣ ಮಗುವಿನ ಹಿಡಿದು ಹಣ್ಣು ಹಣ್ಣು ಮುದುಕಿಯವರೆಗೂ ಹೆಂಗಸರನ್ನು ಕಾಮದ ದೃಷ್ಟಿಯಲ್ಲಿ ನೋಡಲಾಗುತ್ತದೆ. ಒಂದು ಕಾಲದಲ್ಲಿ ಪಡ್ಡೆ ಹುಡುಗರು ಎಂದು ಕರೆಸಿಕೊಳ್ಳುತ್ತಿದ್ದವರು ಮಾತ್ರ.  ಆದರೆ ಇಂದು ಇಡೀ ಸಮಾಜವೇ ಪಡ್ಡೆಯಾಗಿಬಿಟ್ಟಿದೆ ಏನೋ ಅನ್ನಿಸುತ್ತದೆ. ಗಾಂಧೀಜಿಯವರು ರಾಮರಾಜ್ಯದ ಕನಸು ಕಂಡಿದ್ದರು ಕೂಡ ಅರ್ಧ ರಾತ್ರಿಯಲ್ಲಿ ಹೆಣ್ಣು ಮಕ್ಕಳು ಓಡಾಡುವ ಸ್ವಾತಂತ್ರ್ಯ ಭಾರತದಲ್ಲಿ ಸಿಗಬೇಕು ಎನ್ನುವ ನಂಬಿಕೆ ಅವರಿಗಿದ್ದರೂ ಕೂಡ ಇಂದು ಅಂತಹ ಯಾವುದೇ ನಂಬಿಕೆಯು ಸತ್ಯವಾಗಲಿಲ್ಲ. ಕಾರಣ ರಾತ್ರಿಯೆ ಏನು ಹಗಲಲ್ಲಿ ಕೂಡ ಹೆಣ್ಣು ಮಕ್ಕಳು ಒಬ್ಬೊಬ್ಬರೇ ಓಡಾಡುವುದು ಬಹು ಕಷ್ಟದ ವಿಚಾರ. ಮದಿರೆ ಒಂದು ಕಡೆಯಾದರೆ ಹಲವಾರು ರೀತಿಯ ಬೇಡದ ವಿಷ ಪದಾರ್ಥಗಳು ಮನುಷ್ಯನ ಜೀವನದಲ್ಲಿ ನಶೆಯನ್ನು ಹೆಚ್ಚಿಸಲು ಇಂದು ಲಭ್ಯವಿದೆ. ಅದಕ್ಕೆಲ್ಲ ಮತ್ತೇನು ಬೇಡ ಹಣ ಇದ್ದರೆ ಆಯ್ತು. ಹಿಂದಿನ ಕಾಲದಲ್ಲಿ ಜನರಿಗೆ ಹಣ ಮಾಡುವುದು ಕಷ್ಟವಿತ್ತು ಆದರೆ ಇಂದು ಕಸದಲ್ಲೂ ಕೂಡ ಹಣ ತೆಗೆಯುವವರಿದ್ದಾರೆ. ಹಾಗಾಗಿ ಎಲ್ಲಾ ಕಡೆ ಸಿಗುತ್ತದೆ ಹಣದ ಜೊತೆಗೆ ಬೇಡದ ವಸ್ತುಗಳು ಕೂಡ ನಮ್ಮನ್ನು ಹುಡುಕಿಕೊಂಡು ಬಂದು ಹಾಳು ಮಾಡುತ್ತವೆ. ಗಂಡಸರು ಮಾತ್ರವಲ್ಲ ಹೆಣ್ಣು ಮಕ್ಕಳು ಕೂಡ ಇಂತಹ ನಶೆಯ ವಿಷ ವಸ್ತುವಿಗೆ ದಾಸರಾಗಿ ತಮ್ಮ ಬಟ್ಟೆಗಳನ್ನೆಲ್ಲ ಬಿಚ್ಚಿ ನಡು ರಸ್ತೆಯಲ್ಲಿ ಓಡಾಡುವ ದೃಶ್ಯವನ್ನು ಕೂಡ ನಾವು ಮಾಧ್ಯಮಗಳ ಮೂಲಕ ತಿಳಿದುಕೊಂಡವರಾಗಿದ್ದೇವೆ.
   ಕೆಲವೊಮ್ಮೆ ನನಗೆ ಕನ್ಫ್ಯೂಸ್ ಆಗುತ್ತದೆ ನಾವು ಮುಂದುವರಿಯುತ್ತಿರುವ ದೇಶದಲ್ಲಿದ್ದೇವೆಯೋ ಅಥವಾ ಮತ್ತೆ ಹಿಂದೆ ಹಿಂದೆ ಹೋಗುತ್ತಿದ್ದೇವೆಯೋ ಎಂದು! ವಿದ್ಯೆ ಬುದ್ಧಿ ಹೆಚ್ಚಿದಷ್ಟೂ ಮಾನವನ  ಕಳ್ಳತನ, ಕೊಲೆ, ಸುಲಿಗೆ ಹೆಚ್ಚಿದೆ. ಪರಿಸರ ನಾಶದ ಪ್ರಮಾಣವನ್ನು ಅತ್ಯಧಿಕವಾಗಿದೆ. ನಮ್ಮನ್ನು ನಾವೇ ಸರಿ ಮಾಡಬೇಕು ಅಲ್ಲದೆ ಬೇರೆ ಯಾರಿಲ್ಲ, ನೀವೇನಂತೀರಿ?

———————————

ಹನಿಬಿಂದು

ಹೆಸರು- ಪ್ರೇಮಾ ಆರ್ ಶೆಟ್ಟಿ ಕಾವ್ಯನಾಮ- ಹನಿ ಬಿಂದುನೂರಕ್ಕೂ ಅಧಿಕ ರಾಷ್ಟ್ರ, ರಾಜ್ಯ, ಅಂತರರಾಜ್ಯ, ಜಿಲ್ಲಾ ಮಟ್ಟದ ಕವಿಗೋಷ್ಠಿಗಳಲ್ಲಿ ಅಧ್ಯಕ್ಷರಾಗಿ, ಕವಿಯಾಗಿ, ಭಾಗವಹಿಸಿದ ಅನುಭವ.ವಿದ್ಯಾರ್ಹತೆ – ಕನ್ನಡ ಮತ್ತು ಆಂಗ್ಲ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ, ಬಿಎಡ್.ವೃತ್ತಿ – ಪದವೀಧರ ಆಂಗ್ಲ ಭಾಷಾ ಶಿಕ್ಷಕರು ಪ್ರವೃತ್ತಿ – ಫ್ಯಾಷನ್ ಡಿಸೈನಿಂಗ್, ಲೇಖಕಿ, ಕವಯತ್ರಿ, (ಕನ್ನಡ, ತುಳು, ಇಂಗ್ಲಿಷ್ ವಿಷಯಗಳಲ್ಲಿ) ಅಂಕಣಗಾರ್ತಿ (ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ) , ಚಿಂತಕಿ,ಸ್ಪೋಕನ್ ಇಂಗ್ಲಿಷ್ ಬೋಧಕಿ. ಮೋಟಿವೇಟರ್,, ಲಿಟರೇಚರ್ ಆಫ್ ಹನಿಬಿಂದು ಇದು ಇವರ ಬ್ಲಾಗ್. , ತುಳು ಕಲ್ಪುಗ ಚಾನೆಲ್ ನ ಫೇಸ್ಬುಕ್, ಇನ್ಸ್ಟಾ ಗ್ರಾಂ, ಯೂ ಟ್ಯೂಬ್ ನಿರ್ವಾಹಕಿ. ಕಲಿಕಾರ್ಥಿ, ವಿದ್ಯಾರ್ಥಿ ಪ್ರೇರಕಿ.ಪ್ರಕಟಿತ ಕೃತಿ – ಭಾವ ಜೀವದ ಯಾನ (ಕವನ ಸಂಕಲನ)ಪ್ರತಿಲಿಪಿಯಲ್ಲಿ ಬರಹಗಾರ್ತಿ – ಮೂವತ್ತಾರು ಸಾವಿರಕ್ಕೂ ಹೆಚ್ಚು ಜನರಿಂದ ಓದಲ್ಪಟ್ಟಿರುವರು.

Leave a Reply

Back To Top