ಅಂಕಣ ಬರಹ

ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು

Pin by Michelle Lin on India #1 Cattle Breeds | Animal statues, Image, Cow  png

ನಗೆಯ ಮಾರಿತಂದೆ ವಚನಕಾರರಲ್ಲಿ ತನ್ನ ಕಾಯಕದಿಂದಲೇ ಗಮನ ಸೆಳೆಯುವವನು. ಜನರನ್ನು ನಗಿಸುವುದೇ ಈತನ ಕಾಯಕ. ಈತನ ಕಾಲವನ್ನು ೧೧೬೦ ಎಂದು ಕವಿಚರಿತಕಾರರು ಹೇಳಿದ್ದಾರೆ.೧ ಡಿ. ಎಲ್. ನರಸಿಂಹಾಚಾರ್ಯರೂ ಇದೇ ಕಾಲವನ್ನು ಅನುಮೋದಿಸಿ ಬಸವಣ್ಣನವರ ಸಮಕಾಲೀನನಾಗಿದ್ದನೆಂದು ಹೇಳಯತ್ತಾರೆ.೨ ಅದರೊಂದಿಗೆ ತನ್ನ ನಗೆಯ ಕಾಯಕದಿಂದ ಶಿವನನ್ನೇ ಒಲಿಸಿ ಕೈಲಾಸಕ್ಕೆ ಹೋದನೆಂಬುದನ್ನೂ ಡಿ. ಎಲ್. ಎನ್ ಹೇಳುತ್ತಾರೆ.೩ ಈತ ತನ್ನ ವಚನಗಳಲ್ಲಿ ಕುಂಬಾರಿಕೆಯ ಬಗೆಗೆ ಪ್ರಸ್ತಾಪ ಮಾಡುವುದರಿಂದ ಕುಂಬಾರನಾಗಿರಬಹುದೆಂಬುದನ್ನು ವಿದ್ವಾಂಸರು ಹೇಳುತ್ತಾರೆ. ನಗೆಯ ಮಾರಿತಂದೆಯ ವಚನಗಳ ಅಂಕಿತ ಆತುರವೈರಿ ಮಾರೇಶ್ವರ. ವಿಶೇಷವಾದ ಒಂದು ತನ್ನ ಕಾಲದಲ್ಲಿನ ಅಂಶದ ಬಗೆಗೆ ವಚನವೊಂದರಲ್ಲಿ ಪ್ರಸ್ತಾಪ ಮಾಡುತ್ತಾನೆ. ವಚನಗಳ ಕಟ್ಟುಗಳನ್ನು ಎತ್ತಿನ ಬಂಡಿಗಳ ಮೇಲೆ ಹೇರಿಕೊಂಡು ಊರಿಂದ ಊರಿಗೆ ಶಿವಶರಣರು ಪ್ರಯಾಣ ಮಾಡುತ್ತಿದ್ದ ಚಿತ್ರವನ್ನು ಕೊಟ್ಟಿದ್ದಾನೆ. ಆ ವಚನ ಹೀಗಿದೆ

ಸಮತೆಯ ಸಮಾಧಾನವ ಹೇಳುವ ಪುಸ್ತಕ ಎತ್ತಿನ ಮೇಲೆ
ಹೊಯಿವ ದೊಣ್ಣೆ ಕೈಯಲ್ಲಿ ಲೇಸಾಯಿತ್ತು ಈತನಿರುವು
ಮಾತಿನಲ್ಲಿ ಆಗಮ ಮನದಲ್ಲಿ ತೂತಿನ ಕುಡಿಕೆಯ ಆಶೆ
ಇದು ನೀತಿಯಲ್ಲ ಆತುರವೈರಿ ಮಾರೇಶ್ವರ ೪

ಈ ವಚನದ ಮೊದಲ ಸಾಲು ಬಹುಮುಖ್ಯವಾದದ್ದು. ಅನಂತರದ ಸಾಲುಗಳು ಶೌಚವಿಲ್ಲದ ವ್ಯಕ್ತಿಗಳನ್ನು ಖಂಡಿಸುತ್ತಾನೆ. ಇವನ ವಚನಗಳ ಭಾಷೆ ಬಹಳ ಸರಳ ಮತ್ತು ನೇರವಾದದ್ದು. ಅಲ್ಲಲ್ಲಿ ರೂಪಕ, ದೃಷ್ಟಾಂತ ಮತ್ತು ಸಂಬಂಧ ಸೂಚಕವಾದ ವಿಶಿಷ್ಟ ರಚನೆಗಳನ್ನು ಮಾಡಿದ್ದಾನೆ. ತನ್ನ ಕಾಲದ ಸಾಮನ್ಯರಿಗೆ ಅರ್ಥವಾಗುವ ಮಟ್ಟದಲ್ಲಿ ದೈವ, ಧರ್ಮಗಳ ಜೊತೆಗೆ ನಡೆ, ನುಡಿಯ ಶುಚಿತ್ವದ ಬಗೆಗೆ ಹೇಳುತ್ತಾನೆ. ವಚನಕಾರರೆಲ್ಲರ ಮೂಲ ಧ್ಯೇಯವೇ ವ್ಯಕ್ತಿಯ ಆಂತರಿಕ ಮತ್ತು ಬಾಹ್ಯ ಶುಚಿತ್ವ. ಈ ಅಂಶಗಳನ್ನೇ ನಗೆಯ ಮಾತಿತಂದೆಯು ಸಾರಿ ಹೇಳುತ್ತಾನೆ. ಅವನದೊಂದು ವಚನವು ಹೀಗಿದೆ

ಬಾಯಾರಿ ರಸ ಬತ್ತಿದವಂಗೆ ಪಾಯಸದ ಗಡಿಗೆಯ
ತಂದಿರಿಸಿದಡೆ ಬಾಯಾರು ಹಿಂಗುವುದೇ ?
ಸಕಲ ಸುಖದಲ್ಲಿ ಇಹಂಗೆ ಸಕಳೇಶ್ವರನ ಅಕಲ ಬಲ್ಲನೆ ?
ಇಂತಿವರೆಲ್ಲರು ಅಖಿಳರೊಳಗೆ ಅಡಗಿ
ಸುಖದುಃಖವ ಭೋಗಿಸುವ
ಪ್ರಕೃತಿ ವಿಧರಿಗೇಕೆ ಅಕಳಂಕನ ಮಾತು
ಆತುರವೈರಿ ಮಾರೇಶ್ವರ ೫

ಇಲ್ಲಿ ಬಾಯಾರಿಕೆಯಿಂದ ಬಳಲುತ್ತಿರುವ ವ್ಯಕ್ತಿಗೆ ಪಾಯಸವನ್ನು ಕೊಡುವ ಚಿತ್ರಣವನ್ನು ಕೊಟ್ಟು ದೈವವೆನ್ನುವುದು, ಆತ್ಮಜ್ಞಾನವೆನ್ನುವುದು ಬಾಯಾರಿಗೆಯನ್ನು ತೊಡೆಯುವ ಪರಿಶುದ್ಧವಾದ ನೀರಿನ ಹಾಗೆ ಎಂದು ಸೂಚಿಸುತ್ತಾನೆ. ಈ ವಚನ ಬಹಳ ಮುಖ್ಯವೆನ್ನಿಸುವುದು ಮೂರು ಮುಖ್ಯ ಅಂಶಗಳಿಂದ

ಬಾಯಾರಿಕೆಯನ್ನು ಹಿಂಗಿಸಲು ನೀರು ಹೇಗೆ ಮುಖ್ಯವೋ ಹಾಗೇ ಆತ್ಮಜ್ಞಾನಕ್ಕೆ ದೈವದ ಅಗತ್ಯವಿದೆ. ಬಾಯಾರಿಕೆಯ ತೀವ್ರತೆ ಎಷ್ಟು ಪ್ರಮಾಣದಲ್ಲಿ ಇರುತ್ತದೋ ಅಷ್ಟೇ ಪ್ರಮಾಣದಲ್ಲಿ ಕಾಣುವ ಕುತೂಹಲ, ಪರಾತ್ಪರ ವಸ್ತುವೊಂದು ಇದೆಯೆಂಬ ನಂಬಿಕೆ ಇದ್ದವಗೆ ಕಾಣುತ್ತದೆ. ಅದನ್ನು ಕಾಣಿಸುವವರು ಶಿವಶರಣರು. ದೇಹಸುಖ ಎನ್ನುವುದನ್ನು ಮೊದಲು ತೊರೆಯಬೇಕು. ಅದೇ ಬಹುದೊಡ್ಡ ಸಮಸ್ಯೆ ಪರಾತ್ಪರ ವಸ್ತುವನ್ನು ಕಾಣಲು ಎಂಬ ಭಾವ ನಗೆಯ ಮಾತಿತಂದೆಯಲ್ಲಿದೆ. ಕೇವಲ ದೇಹಸುಖವನ್ನಷ್ಟೇ ಬೊಟ್ಟು ಮಾಡದೆ ಸಕಲ ಸುಖ ಎಂದು ಮಾನಸಿಕ, ಭೌತ್ತಿಕ, ಬೌದ್ಧಿಕ ಮತ್ತು ಲೌಕಿಕ ಸುಖದ ಪ್ರಕಾರಗಳನ್ನೆಲ್ಲಾ ತೊರೆದವನಿಗೆ ಕಾಣುತ್ತಾನೆ ಎಂಬ ಆಶಯ ಇವನಲ್ಲಿದೆ. ಮತ್ತೊಂದು ವಿಚಿತ್ರ ಸನ್ನಿವೇಶವೊಂದನ್ನು ಹೇಳುತ್ತಾನೆ. ಇದು ಬೆರಗಾಗಿಸುವುದು. ಒಳಗೊಂದು ಹೊರಗೊಂದು ಇರುವವರು ಮತ್ತು ಏಕತ್ರವಾಗಿರುವವರ ಚಿತ್ರವನ್ನು ಏಕಕಾಲದಲ್ಲಿ ಕೊಡುತ್ತಾನೆ. ಎಲ್ಲಾ ಕಾಲಘಟ್ಡದ ಸಮಸ್ಯೆಯೆಂದರೆ ಇದೇ. ಯಾರು ಒಳ್ಳೆಯವರು, ಯಾರು ಕೆಟ್ಟವರು. ಏಕೆ ಒಳ್ಳೆಯವರು ಏಕೆ ಕೆಟ್ಟವರು ಈ ಪ್ರಶ್ನೆಗಳು ಪ್ರತಿಯೊಬ್ಬರನ್ನೂ ಕಾಡಿಯೇ ಇರುತ್ತದೆ. ಅನುಕೂಲಸಿಂಧುತತ್ವದ ಹೊರತಾಗಿ ನಿಂತವರಿಗೆ ಮಾತ್ರ ಸತ್ಯದ ಜೊತೆಗೆ ಮನುಷ್ಯನೊಳಗಿನ ರೂಕ್ಷತೆ ಕಣ್ಣಿಗೆ ಢಾಳಾಗಿ ಕಾಣಸಿಗುತ್ತದೆ. ಅಂತಹಾ ಅಂಶವು ನಗೆಯ ಮಾತಿತಂದೆಗೆ ಕಂಡಿದೆ. ಲೌಕಿಕ ಮತ್ತು ಮಾನಸಿಕ ಸುಖಗಳಿಗೆ ತೆರೆದುಕೊಂಡವರು, ಕಾಲಚಕ್ರದಿಂದ ಬಿಡುಗಡೆ ಹೊಂದಿರುವ ಅಖಿಳರೊಳಗೆ ಸೇರಿಕೊಂಡು ವೇಷದಲ್ಲಿ ಇರುವುದನ್ನು ಗಮನಿಸಿದ್ದಾನೆ. ಅದಕ್ಕೆ ಬಹುದೊಡ್ಡ ಪ್ರತಿರೋಧವಂತೂ ಇವನಲ್ಲಿ ಇದೆ. ಪ್ರಕೃತಿ ವಿಧರು ಎಂದು ಹೆಣ್ಣಿನ ಬಗೆಗೆ ಆಸೆ ಇರುವವರನ್ನು ಕುರಿತು ಮಾತನಾಡಿದ್ದಾನೆನ್ನುವುದು ಮೇಲು ನೋಟಕ್ಕೆ ಕಂಡರೂ, ಎರಡು ರೀತಿಯ ಅರ್ಥವನ್ನು ಇಲ್ಲಿ ಹೇಳಬಹುದು. ಒಂದು ಅಕಳಂಕನನನ್ನು ಕಾಣಬೇಕಾದರೆ ಹಿಂದಿನ ವರ್ತನೆಗಳು, ಆಚರಣೆಗಳು, ಬದಲಾಗಿರಬೇಕು. ಆಗ ದೈವ ಪ್ರಕೃತಿಯಷ್ಟೇ ಸಹಜವಾಗಿ ಒಳಗೆ ಲೀನವಾಗಿರುತ್ತದೆ. ಅಂತಹವುಗಳನ್ನು ಬಿಡಬೇಕೆಂದು ಮತ್ತೊಂದು ಅರ್ಥದಲ್ಲಿ ಪ್ರಕೃತಿ – ಪುರುಷ ಸಂಬಂಧದಿಂದಲೂ ಹೇಳಿರಬಹುದು. ಮೇಲಿನ ವಚನಗಳಲ್ಲಿನ ಪುರುಷ ವಾಚಕ ಸರ್ವನಾಮ ಪದಗಳನ್ನು ಗಮನಿಸಿ. ಇವೆಲ್ಲವೂ ನೇರವಾಗಿ ಪುರುಷ ಸಮಾಜ ಎರಡು ತನದಲ್ಲಿನ ಸ್ಥಿತಿಯಿಂದ ಬಿಡುಗಡೆ ಗೊಳ್ಳಬೇಕೆಂದು ನೇರವಾಗಿಯೇ ಹೇಳುತ್ತಿದೆ.

ಈ ವಚನದ ಮೊದಲ ಎರಡು ಸಾಲುಗಳನ್ನೊಮ್ಮೆ ಗಮನಿಸಿ. ಅವು ಪಡೆದುಕೊಳ್ಳುವ ಒಳಪ್ರಾಸಗಳು ವಿಶೇಷವಾಗಿ ಗಮನ ಸೆಳೆಯುತ್ತದೆ. ಪ್ರಶ್ನಾರ್ಥಕ ಚಿಹ್ನೆ ಇರುವಲ್ಲಿಗೆ ಒಂದೊಂದು ಸಾಲೆಂದು ವಿಭಾಗಿಸಿಕೊಂಡು ಗಮನಿಸಿದರೆ, ಮೊದಲ ಸಾಲಿನಲ್ಲಿ ಬಾಯಾರಿ, ಬತ್ತು, ಎಂದು ಏರ್ಪಡುವ ಒಳಪ್ರಾಸವು, ಎರಡನೆಯ ಸಾಲಿನಲ್ಲಿ ಸಕಲ, ಸುಖ, ಸಕಳೇಶ, ಅಕಳ ಹೀಗೆ ಸರಾಗವಾಗಿ ಓದಿಸಿಕೊಂಡು ಹೋಗಿಬಿಡುತ್ತದೆ. ಮತ್ತು ಪ್ರಶ್ನಾರ್ಥಕ ಚಿಹ್ನೆಯಲ್ಲಿ ಸಾಲು ಕೊನೆಯಾಗುವಾಗ ಓದುಗನ ಒಳಗೆ “ಇಲ್ಲ” ಎಂಬ ಉತ್ತರ ತಾನೇ ತಾನಾಗಿ ಉಂಟಾಗುತ್ತದೆ. ಇದು ವಚನವೊಂದು ಓದುಗನನ್ನು ಒಳಗೊಳ್ಳುವ ಪರಿ.


ಅಡಿಟಿಪ್ಪಣಿ

೧. ಕರ್ಣಾಟಕ ಕವಿಚರಿತೆ. ಆರ್ ನರಸಿಂಹಾಚಾರ್ಯ. ಕನ್ನಡ ಸಾಹಿತ್ಯ ಪರಿಷತ್ತು. ಪು ೨೨೨ (೨೦೧೫)
೨. ಪೀಠಿಕೆಗಳು ಲೇಖನಗಳು. ಡಿ. ಎಲ್. ನರಸಿಂಹಾಚಾರ್ಯ. ಡಿ ವಿ ಕೆ ಪ್ರಕಾಶನ. ಪು ೪೫೯ (೨೦೦೫)
೩. ಪೂರ್ವೋಕ್ತ
೪. ಬಸವಯುಗದ ವಚನ ಮಹಾಸಂಪುಟ ೧. ಡಾ. ಎಂ ಎಂ ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೧೨೫೪ ಪು ೧೩೨೯ (೨೦೧೬)
೫. ಬಸವ ಯುಗದ ವಚನ ಮಹಾಸಂಪುಟ ೧. ಡಾ. ಎಂ. ಎಂ. ಕಲಬುರ್ಗಿ. ಕನ್ನಡ ಪುಸ್ತಕ ಪ್ರಾಧಿಕಾರ. ವ ಸಂ ೧೨೩೦. ಪು ೧೩೨೭ (೨೦೧೬)

*********************************************

ಆರ್.ದಿಲೀಪ್ ಕುಮಾರ್

ಹುಟ್ಟಿದ್ದು ೧೯೯೧ ಮಾರ್ಚಿ ೧೬ ಮೈಸೂರಿನಲ್ಲಿ. ಸದ್ಯ ಚಾಮರಾಜನಗರದಲ್ಲಿ ತಾಯಿ ಮತ್ತು ತಮ್ಮನೊಂದಿಗೆ ವಾಸವಾಗಿದ್ದಾರೆ. ಪದವಿಪೂರ್ವ ಶಿಕ್ಷಣದಿಂದ ಬಿ.ಎಡ್ ವರೆಗಿನ ಶಿಕ್ಷಣವನ್ನು ಚಾಮರಾಜನಗರದಲ್ಲಿಯೇ ಪೂರ್ಣಗೊಳಿಸಿ, ಕೊಳ್ಳೇಗಾಲ, ಗುಂಡ್ಲುಪೇಟೆ ಮತ್ತು ಚಾಮರಾಜನಗರದ ಕಾಲೇಜುಗಳಲ್ಲಿ ನಾಲ್ಕು ವರ್ಷಗಳು ಕನ್ನಡ ಭಾಷಾ ಉಪನ್ಯಾಸಕರಾಗಿ ಸೇವೆಸಲ್ಲಿಸಿದ್ದಾರೆ. ಸಂಗೀತ, ಸಾಹಿತ್ಯ ಮತ್ತು ಚಿತ್ರಕಲೆಗಳಲ್ಲಿ ಸಮಾನವಾದ ಆಸಕ್ತಿಯಿದ್ದು, ಸದ್ಯದಲ್ಲಿ ಕಾವ್ಯರಚನೆ, ಅನುವಾದ, ಸಂಶೋಧನೆ ಮತ್ತು ಸಾಹಿತ್ಯ ವಿಮರ್ಶೆಯಲ್ಲಿ ಸಕ್ರಿಯರಾಗಿದ್ದಾರೆ. ಹಲವು ದಿನಪತ್ರಿಕೆಗಳು ಮತ್ತು ಅಂತರ್ಜಾಲ ಪತ್ರಿಕೆಗಳಲ್ಲಿ ಬರೆಹಗಳು ಪ್ರಕಟವಾಗಿವೆ. ಕಾವ್ಯ ಕಮ್ಮಟ ಮತ್ತು ಕಥಾ ಕಮ್ಮಟಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ೨೦೧೯ ರಲ್ಲಿ ಪ್ರಕಟವಾಗಿರುವ ‘ಹಾರುವ ಹಂಸೆ’ ಮೊದಲನೆಯ ಕವನ ಸಂಕಲನವಾಗಿದೆ.

Leave a Reply

Back To Top