ದಾರಾವಾಹಿ

ಅದ್ಯಾಯ-07

ಒಂದೆರಡು ದಶಕಗಳ ಹಿಂದಿನವರೆಗೂ ಸೊಂಪಾಗಿ ಬೆಳೆಯುತ್ತಿದ್ದ ತೆಂಗು, ಕಂಗು, ಭತ್ತ ಮತ್ತು ವಿಶೇಷ ರುಚಿಗೆ ದೇಶದಾದ್ಯಂತ ಹೆಸರುವಾಸಿಯಾದ ಮುಷ್ಟಿ ಬದನೆಯ ಹೊಲಗದ್ದೆಗಳಿಂದಲೂನೂರಾರು ಕೃಷಿಕ ಕುಟುಂಬಗಳಿಂದಲೂ ಸಮೃದ್ಧವಾಗಿದ್ದ ಊರು ಕಡೆಪಾಡಿಬೆಟ್ಟು. ಇಲ್ಲಿನ ಸೂರ್ಯ ಮತ್ತು ಭಾಗೀರಥಿ ದಂಪತಿಯ ಸುಪುತ್ರ ಶಂಕರ. ಶಂಕರನಿಗಿಂತ ಹಿರಿಯವಳು ಕಮಲ. ಇವನ ನಂತರದವನು ರಮೇಶ. ಆ ಬಳಿಕದವಳು ಹೇಮ. ನಾಲ್ಕು ಮಕ್ಕಳಿಂದ ಕೂಡಿದ ಆರು ಮಂದಿಯ ತುಂಬು ಸಂಸಾರ ಸೂರ್ಯ ದಂಪತಿಯದ್ದು. ಸೂರ್ಯನ ಹಿರಿಯರು ಅಷ್ಟಿಷ್ಟು ಭೂಮಿ ಮಾಡಿಕೊಂಡು ಚೆನ್ನಾಗಿ ಬದುಕಿ ಬಾಳಿದವರು. ಸೂರ್ಯನ ಅಪ್ಪ ಕುಂಜಿರನೂ ತನ್ನ ಜೀವಿತಾವಧಿಯಲ್ಲಿ ಕಾಲು ಎಕರೆಯಷ್ಟು ಭೂಮಿಯನ್ನು ಖರೀದಿಸಿ ಹಿರಿಯರ ಭೂಮಿಗೆ ಕೂಡಿಸಿ ಬೇಸಾಯ ಮಾಡುತ್ತ ನಾಲ್ವರು ಮಕ್ಕಳಲ್ಲಿ ಮೂವರು ಹೆಣ್ಣು ಮಕ್ಕಳಿಗೆ ಸಂಪ್ರದಾಯಬದ್ಧವಾಗಿ ಮದುವೆ ಮಾಡಿಕೊಟ್ಟು ತನ್ನ ಜವಾಬ್ದಾರಿಯನ್ನು ನಿಭಾಯಿಸಿದ್ದ. ಅವನು ಗತಿಸಿದ ನಂತರ ಆಗಿನ ಭೂಕಾಯ್ದೆಯಂತೆ ಅಪ್ಪನ ಆಸ್ತಿ ಹಿರಿಯ ಮಗ ಸೂರ್ಯನಿಗೆ ದಕ್ಕಿತು.

ಸೂರ್ಯ ಪ್ರಾಮಾಣಿಕನಾದ ಶಿಸ್ತಿನ ಮನುಷ್ಯ. ದುರಾಸೆ, ಮೋಸ, ವಂಚನೆಗಳನ್ನು ಬಲ್ಲವನಲ್ಲ ಮತ್ತು ಅವುಗಳನ್ನು ಸಹಿಸಿದವನೂ ಅಲ್ಲ. ಆದ್ದರಿಂದ ಸ್ನೇಹಿತರು ಮತ್ತು ಬಂಧು ಬಳಗದವರೆಲ್ಲ ಅವನನ್ನು ಬಹಳವೇ ಗೌರವಿಸುತ್ತಿದ್ದರು. ಆದರೆ ಸಲುಗೆಯ ವಿಷಯಕ್ಕೆ ಬಂದಾಗ ಅಂತರವಿಟ್ಟುಕೊಂಡೇ ವ್ಯವಹರಿಸುತ್ತಿದ್ದರು. ಅವನೂ ಅಷ್ಟೇ ಯಾರೊಂದಿಗೂ ಹೆಚ್ಚಿಗೆ ಬೆರೆಯಲು, ವ್ಯರ್ಥ ಮಾತುಕಥೆಯಿಂದ ಕಾಲಾಹರಣ ಮಾಡಲು ಆಸಕ್ತಿ ತೋರಿದವನಲ್ಲ. ಅವನ ದೃಷ್ಟಿಯಲ್ಲಿ ಕಾಯಕವೇ ಕೈಲಾಸ. ಸೋಮಾರಿತನವೇ ಮೃತ್ಯು. ಇಂಥವನು ಒಂದು ಮುಂಜಾನೆ ಎದ್ದು ತನ್ನ ಹೊಲಗದ್ದೆಗಳತ್ತ ನಡೆದನೆಂದರೆ ಮರಳಿ ಗುಡಿಸಲು ಸೇರುವುದು ಹಕ್ಕಿಪಕ್ಷಿಗಳೆಲ್ಲ ಗೂಡು ಸೇರಿದ ನಂತರವೇ. ಬದುಕಿದ್ದಷ್ಟೂ ಕಾಲ ಒಪ್ಪೊತ್ತೂ ಕೆಲಸಕಾರ್ಯವಿಲ್ಲದೆ ಕುಳಿತವನಲ್ಲ. ಯಾವ ರೋಗ ರುಜಿನಗಳಿಂದಲೂ ಒಂದು ದಿನ ಮಲಗಿದವನಲ್ಲ. ತನ್ನ ಭೂಮಿಯಲ್ಲಿ ಕೆಲಸವಿದ್ದಾಗ ದುಡಿದ. ಇಲ್ಲದಿದ್ದಲ್ಲಿ ಇತರರ ಬೇಸಾಯದಲ್ಲಿ ಜೊತೆಯಾದ. ಕಡೆಪಾಡಿಬೆಟ್ಟಿನ ಯಾರದೇ ತೋಟಗಳ ತೆಂಗಿನಕಾಯಿ, ಅಡಕೆ, ಮಾವಿನ ಕಾಯಿಗಳನ್ನು ಕೊಯ್ದುಕೊಡುವುದರಲ್ಲಿ ಸೂರ್ಯ ಪ್ರಮುಖನಾಗಿದ್ದ. ಇಂಥವನಿಗೆ ಕೆಟ್ಟದೋ, ಒಳ್ಳೆಯದೋ ಒಂದು ಅಭ್ಯಾಸವಿತ್ತು. ದಿನಾ ಸಂಜೆ ಒಂದು ಮಡಕೆಯಷ್ಟು ಹುಳಿ ಹೆಂಡ ಅವನಿಗೆ ತಪ್ಪದೇ ಬೇಕಿತ್ತು. ಅದೂ ಚೂರೂ ಬೆರಕೆಯಿಲ್ಲದ ಶುದ್ಧ ಹೆಂಡ. ಅಕ್ಕಪಕ್ಕದ ತೋಟದವರು ತಮ್ಮ ತಾಳೆ ಮತ್ತು ತೆಂಗಿನಮರಗಳಲ್ಲಿ ಕುಯ್ಯುತ್ತಿದ್ದ ಸೊಗಸಾದ ಹೆಂಡವನ್ನು ಬೆಳ್ಳಂಬೆಳಗ್ಗೆ ಹೋಗಿ ಕೊಂಡು ತಂದು ಹುಳಿಗಟ್ಟಲು ಇಡುತ್ತಿದ್ದ. ಸಂಜೆ ಕೆಲಸ ಮುಗಿಸಿ ಹಿಂದಿರುಗಿದವನು ಸ್ನಾನ ಮಾಡಿ ಅಂಗಳದಲ್ಲಿ ಕುಡಿಯಲು ಕೂರುತ್ತಿದ್ದ. ಹದವಾಗಿ ಮತ್ತೇರುವ ಹೊತ್ತಿಗೆ ಗಂಧರ್ವನಂತೆ ಬದಲಾಗುತ್ತಿದ್ದ. ಅವನು ತನ್ನ ಸೊಗಸಾದ ಕಂಠದಿಂದ ಹಾಡುತ್ತಿದ್ದ ಪಾಡ್ದನದ ಹಾಡುಗಳಿಗೆ ಹೆಂಡತಿ, ಮಕ್ಕಳೊಂದಿಗೆ ನೆರಕರೆಯ ಮಂದಿಯೂ ಬಂದು ಕುಳಿತು ಅವನ ಸ್ವರ ಮಾಧುರ್ಯದ ತೌಳವ ಗಾನಸುಧೆಯನ್ನು ಆಸ್ವಾದಿಸುತ್ತ ಮೈಮರೆಯುತ್ತಿದ್ದರು. ಹೀಗೆ ಸುಮಾರು ಹೊತ್ತು ಕಳೆದ ಮೇಲೆ ಮತ್ತೆ ಅವನು ಮೊದಲ ಸೂರ್ಯನಾಗುತ್ತಿದ್ದ. ಬಳಿಕ ಹೆಂಡತಿ ಬಡಿಸಿದ್ದನ್ನು ಉಂಡು ಸುಖನಿದ್ರೆಗೆ ಜಾರುತ್ತಿದ್ದ. 

ಕಡೆಪಾಡಿಬೆಟ್ಟಿನ,‘ಹಿರಿಯಮನೆ’ಯ ರವೀಂದ್ರ ಬಳ್ಳಾಲರು ಆವತ್ತು ತಮ್ಮ ಮನೆಯಲ್ಲಿ ದೊಡ್ಡ ಮಟ್ಟದ ಸತ್ಯನಾರಾಯಣ ಪೂಜೆಯನ್ನು ಹಮ್ಮಿಕೊಂಡಿದ್ದರು. ಅದಕ್ಕೆ ಬೇಕಾದ ಹಿಂಗಾರ ಮತ್ತು ಸೀಯಾಳವನ್ನು ಕೊಯ್ದುಕೊಡಲು ಸೂರ್ಯನಿಗೆ ಸೂಚಿಸಿದ್ದರು. ಸೂರ್ಯ, ಬಲ್ಲಾಳರ ಓರಗೆಯವನೂ ಮೇಲಾಗಿ ಬಾಲ್ಯದ ಸ್ನೇಹಿತನೂ ಆದವನು. ಹಾಗಾಗಿ ಆವತ್ತು ಮುಂಜಾನೆ ತನ್ನೆಲ್ಲ ಕೆಲಸಕಾರ್ಯಗಳನ್ನು ಬದಿಗೊತ್ತಿ ಭಾಗೀರಥಿ ಬಡಿಸಿದ ನೀರುದೋಸೆ ಮತ್ತು ಕಾಯಿಹಾಲನ್ನು ಹೊಟ್ಟೆ ತುಂಬಾ ತಿಂದು ಬಲ್ಲಾಳರ ಮನೆಗೆ ನಡೆದಿದ್ದ. ಅರ್ಧ ಶತಮಾನದಷ್ಟು ಹಳೆಯ ತೆಂಗಿನ ಮರವೊಂದನ್ನು ಸಾವಕಾಶವಾಗಿ ಹತ್ತಿ ಮರದ ನೆತ್ತಿಯ ಮೇಲೆ ಮಡಲಿನೆಡೆಯಲ್ಲಿ ಹೋಗಿ ಕುಳಿತ. ಮೂಡಣದಲ್ಲಿ ಆಕಾಶ ರಂಗೇರುತ್ತಿತ್ತು. ಹಕ್ಕಿಗಳ ಕಲರವ ತೋಟವಿಡೀ ವ್ಯಾಪಿಸಿತ್ತು. ಸೂರ್ಯನ ಬೆವರಿದ ಒರಟು ಮೈಯನ್ನು ತಂಗಾಳಿಯು ಹದವಾಗಿ ಸವರುತ್ತ ಉಲ್ಲಾಸ ನೀಡುತ್ತಿತ್ತು. ಜಗತ್ತಿಗೆ ಬೆಳಕಾಗಲು ಆಗಮಿಸುತ್ತಿದ್ದ ನೇಸರನನ್ನು ಕಂಡು ಸೂರ್ಯ ಭಕ್ತಿಪರವಶನಾದ. ‘ಕಾಪಾಡು ದೇವಾ…!’ ಎಂದು ಕೈಯೆತ್ತಿ ಮುಗಿದ. ನಂತರ ಎಳೆಯ ಬೊಂಡದ ಗೊನೆಯೊಂದಕ್ಕೆ ಕೈತೂರಿಸಿ ಕೊಯ್ಯಲಣಿಯಾದ. ಅಷ್ಟರಲ್ಲಿ ಎಡಗೈಗೇನೋ ತಣ್ಣನೆ ತಗುಲಿತು. ಮರುಕ್ಷಣ ಉಗ್ರ ಫೂತ್ಕಾರವೊಂದು ಹೊಮ್ಮಿದ ಬೆನ್ನಿಗೆ ತೀಕ್ಷ್ಣವಾದ ಕಡಿತವೊಂದು ನಾಟಿತು!

ಸೂರ್ಯ ಒಮ್ಮೆಲೇ ಅವಕ್ಕಾದ. ಸೀಯಾಳದ ಗೊನೆಯ ಎಡೆಯೊಳಗೆ ದೊಡ್ಡ ನಾಗರಹಾವೊಂದು ಹೆಡೆಯೆತ್ತಿ ರೋಷದಿಂದ ಬುಸುಗುಡುತ್ತಿತ್ತು. ಹಾವನ್ನು ಕಂಡವನು, ‘ಅಯ್ಯೋ ಪರಮಾತ್ಮಾ…!’ಎಂದು ಉದ್ಗರಿಸಿದ. ಅವನ ಕೈ ನೋವಿನಿಂದ ಸಿಡಿಲಾರಂಭಿಸಿತು. ಅವುಡುಗಚ್ಚಿ ಸಹಿಸಿಕೊಂಡ. ಹಾವಿನ ಮೇಲೆ ಕೋಪ ಉಕ್ಕಿತು. ಸರಕ್ಕನೇ ಪರುಕತ್ತಿಯನ್ನೆತ್ತಿ ಅದನ್ನಲ್ಲೇ ಕತ್ತರಿಸಿ ಎಸೆಯಲು ಮುಂದಾದ. ಆದರೆ ನಾಗರಹಾವು ತನ್ನ ಕುಲದೇವರು ಎಂಬ ಸ್ಮರಣೆ ಬಂತು. ಆದ್ದರಿಂದ ಹಾವಿಗೆ ಭಕ್ತಿಯಿಂದ ಕೈಮುಗಿದು, ‘ನನ್ನಿಂದೇನಾದರೂ ತಪ್ಪಾಗಿದ್ದರೆ ಕ್ಷಮಿಸು ನಾಗ! ನಿನ್ನಿಚ್ಛೆ ಏನಿದೆಯೋ ಹಾಗೆಯೇ ಆಗಲಿ!’ ಎಂದು ಪ್ರಾರ್ಥಿಸಿದವನು ತನ್ನ ಕೆಲಸದತ್ತ ಗಮನ ಹರಿಸಿದ. ಎಳೆಯ ಸೀಯಾಳದ ಗೊನೆಯೊಂದನ್ನು ರಪರಪನೆ ಕತ್ತರಿಸಿ ಹಗ್ಗದಿಂದ ಕೆಳಕ್ಕಿಳಿಸಿ ತಾನೂ ಇಳಿಯತೊಡಗಿದ. ಹಾವು ದೇಹದ ಎಡಭಾಗಕ್ಕೆ ಕಚ್ಚಿತ್ತು. ಹಾಗಾಗಿ ಅವನ ಹೃದಯಕ್ಕೆ ವಿಷ ನುಗ್ಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಜೊತೆಗೆ ಸಾವಿನ ಭಯವೂ ಅವನನ್ನು ಕಾಡಿತೇನೋ. ಅರ್ಧ ಮರವನ್ನು ಕಷ್ಟದಿಂದ ಇಳಿದವನ ಕೈಕಾಲುಗಳು ತರತರನೇ ಕಂಪಿಸತೊಡಗಿ, ಕಣ್ಣುಗಳು ಮಂಜಾಗಿ ಕೈಯ ಹಿಡಿತ ಜಾರಿತು. ಮರುಕ್ಷಣ ರಪ್ಪನೆ ನೆಲಕ್ಕಪ್ಪಳಿಸಿಬಿಟ್ಟ. ಬಿದ್ದ ರಭಸಕ್ಕೆ ಸ್ಥಳದಲ್ಲೇ ಸಾವನ್ನಪ್ಪಿದ. ಸ್ವಲ್ಪದೂರದಲ್ಲಿ ಕೆಲಸ ಮಾಡುತ್ತಿದ್ದ ಆಳುಗಳು ಸದ್ದು ಕೇಳಿಸಿ ಓಡಿ ಬಂದರು. ಕಡಿದ ಬಾಳೆಯಂತೆ ಬಿದ್ದಿದ್ದ ಸೂರ್ಯನನ್ನು ಕಂಡವರು ಭೀತಿಯಿಂದ, ‘ಅಯ್ಯಯ್ಯೋ ದೇವರೇ…! ಓ, ಧಣಿಗಳೇ…!’ ಎಂದರಚುತ್ತ ಬಲ್ಲಾಳರ ಮನೆಯತ್ತ ಧಾವಿಸಿದರು. ಅಂಗಳದಲ್ಲಿ ಕುಳಿತು ಎಲೆಯಡಿಕೆ ಮೆಲ್ಲುತ್ತಿದ್ದ ಬಲ್ಲಾಳರಿಗೆ ಆಳುಗಳ ಬೊಬ್ಬೆ ಕೇಳಿಸಿ, ತಟ್ಟನೆದ್ದು ಅತ್ತ ನಡೆದರು. ಆದರೆ ಅಲ್ಲಿನ ದೃಶ್ಯವನ್ನು ಕಂಡು ಗರಬಡಿದಂತಾದರು. ತನ್ನ ಆಪ್ತ ಗೆಳೆಯನ ಸಾವು ಅವರಲ್ಲಿ ಅತೀವ ದುಃಖವನ್ನುಂಟು ಮಾಡಿತು. ತುಸುಹೊತ್ತಿನ ಬಳಿಕ ಕಣ್ಣೀರೊರೆಸಿಕೊಂಡು ಆಳೊಬ್ಬನನ್ನು ಸೂರ್ಯನ ಮನೆಗೆ ಅಟ್ಟಿದವರು ಮುಂದಿನ ಕಾರ್ಯದ ಬಗ್ಗೆ ಚಿಂತಿಸುತ್ತ ಮನೆಯತ್ತ ನಡೆದರು.

ವಿಷಯ ತಿಳಿದ ಭಾಗೀರಥಿ ಅಂಗಳದಲ್ಲೇ ಕುಸಿದುಬಿದ್ದಳು. ಶಂಕರನೂ, ಹೆಣ್ಣುಮಕ್ಕಳೂ ತಾಯಿಯನ್ನು ಹೊತ್ತೊಯ್ದು ಒಳಗೆ ಮಲಗಿಸಿ ಉಪಚರಿಸಿದರು. ಅವಳಿಗೆ ಪ್ರಜ್ಞೆ ಬರುತ್ತಲೇ ಮತ್ತೆ ಅವಳ ಅಳು ಮುಗಿಲು ಮುಟ್ಟಿತು. ಶಂಕರ ಅವಳನ್ನು ಅಕ್ಕಂದಿರೊಡನೆ ಬಿಟ್ಟು ಬಲ್ಲಾಳರ ಮನೆಗೆ ಧಾವಿಸಿದ. ಅಪ್ಪನ ಹೆಣವನ್ನು ಕಂಡು ಬಿಕ್ಕಿಬಿಕ್ಕಿ ಅತ್ತ. ಬಲ್ಲಾಳರು ಅವನನ್ನು ತಬ್ಬಿಕೊಂಡು ಸಮಾಧಾನಿಸಿ, ಹೆಣವನ್ನು ಅವನ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು. ತಮ್ಮ ತೋಟದ ಬಲಿತ ಮಾವಿನ ಮರವೊಂದನ್ನು ಕಡಿಸಿ ಕಾಟವನ್ನು ತಯಾರಿಸಿ ಸೂರ್ಯನ ದಹನ ಕ್ರಿಯೆ ನೆರವೇರಿಸಿದ ಬಳಿಕ ಅವನ ಉತ್ತರಕ್ರಿಯೆಯನ್ನೂ ವಿಜೃಂಭಣೆಯಿಂದ ಮಾಡಿ ಊರಿಗೆಲ್ಲ ಭೂರಿಭೋಜನ ಹಾಕಿಸಿ, ‘ಬಲ್ಲಾಳರು ಬಹಳ ಉದಾರ ಮನಸ್ಸಿನವರು!’ ಎಂದು ಜನರಿಂದ ಹೊಗಳಿಸಿಕೊಂಡ ನಂತರವೇ ಅವರಿಗೆ ಒಂದಿಷ್ಟು ತೃಪ್ತಿ, ಸಮಾಧಾನ ದೊರಕಿದ್ದು. ಇದಾದ ಒಂದು ತಿಂಗಳ ನಂತರ, ಸೂರ್ಯನ ಸಾವಿನಿಂದ ಮುಂದೂಡಲ್ಪಟ್ಟಿದ್ದ ಸತ್ಯನಾರಾಯಣ ಪೂಜೆಯನ್ನೂ ಅದ್ಧೂರಿಯಿಂದ ನೆರವೇರಿಸಿದರು.                        

                                                                            ***

ಅಪ್ಪ ಸಾಯುವಾಗ ಶಂಕರನಿಗೆ ಹದಿಮೂರು ವರ್ಷ. ಏಳನೆಯ ತರಗತಿಯಲ್ಲಿ ಕಲಿಯುತ್ತಿದ್ದ. ಅಕ್ಕ ಕಮಲ ಒಂಬತ್ತನೆಯ ತರಗತಿಯಲ್ಲೂ ರಮೇಶ ಮೂರನೆಯ ತರಗತಿಯಲ್ಲೂ ಇದ್ದರು. ಕೊನೆಯವಳು ಹೇಮ ಮೂರು ವರ್ಷದ ಮಗು. ಅಪ್ಪನ ಸಾವಿನ ನಂತರ ಭಾಗೀರಥಿ ಜೀವನೋತ್ಸಾಹವನ್ನೇ ಕಳೆದುಕೊಂಡಳು. ಹಾಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ತಿಲಾಂಜಲಿ ಬಿತ್ತು. ಕಮಲ ಅಕ್ಕಪಕ್ಕದ ಶೆಟ್ಟರ ಮತ್ತು ಬ್ರಾಹ್ಮಣರ ಹೊಲಗದ್ದೆಗಳಿಗೂ, ತೋಟದ ಕೆಲಸಕ್ಕೂ ಹೋಗುತ್ತ ದುಡಿಯತೊಡಗಿದಳು. ಶಂಕರನೂ ದುಡಿಯುವುದು ಅನಿವಾರ್ಯವಾಯಿತು. ಆದ್ದರಿಂದ ಅವನು ತನ್ನಿಷ್ಟದ ಮೋಟಾರು ಬೈಕ್ ರಿಪೇರಿಯ ಕೆಲಸ ಕಲಿಯಲು ಹೊರಟ. ಈಶ್ವರಪುರದ ಮೀನು ಮಾರುಕಟ್ಟೆಯ ಎದುರಿನ ಅನಂತರಾಮನ ಗ್ಯಾರೇಜಿಗೆ ಸೇರಿಕೊಂಡ. ಅತೀ ಚುರುಕು ಬುದ್ಧಿಯ ಶಂಕರ, ಸಿಡುಕು ಸ್ವಭಾವದ ಮುಂಗೋಪಿ ಅನಂತರಾಮನ ಕೈಯಿಂದ ಸ್ಪಾನರ್, ಕಟ್ಟಿಂಗ್ ಫ್ಲಾಯರ್‍ಗಳಿಂದ ತನ್ನ ಕೈಗಂಟುಗಳಿಗೆ ಸಟಸಟನೆ ಹೊಡೆಸಿಕೊಂಡರೂ ಧೃತಿಗೆಡದೆ ವರ್ಷದೊಳಗೆ ಜಾವಾ, ಯಝಿಡಿ, ಲಕ್ಷ್ಮೀ ಮೋಪೆಡ್, ಟಿ.ವಿ.ಎಸ್., ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್ ಮತ್ತು ಚೇತಕ್‍ಸ್ಕೂಟರ್‍ಗಳಂಥ ದ್ವಿಚಕ್ರ ವಾಹನಗಳನ್ನು ರಿಪೇರಿ ಮಾಡುವುದನ್ನು ಕಲಿತ. ಮೊದಲಮೊದಲು ಆ ಮೋಟಾರು ಬೈಕುಗಳನ್ನು ಸಲೀಸಾಗಿ ಚಲಾಯಿಸಿಕೊಂಡು ಮನೆಗೆ ಬಂದು ಹೋಗುತ್ತಿದ್ದವನು ಕೊನೆಗೆ ಊರು ಸುತ್ತುವವರೆಗೂ ಬೆಳೆದುಬಿಟ್ಟ.

ಆವಾಗ ಕಡೆಪಾಡಿಬೆಟ್ಟಿನಲ್ಲಿ ಯಾರ ಮನೆಯಲ್ಲೂ ಮೋಟಾರು ಬೈಕ್ ಇರಲಿಲ್ಲ. ಹಾಗಾಗಿ ತನ್ನ ಮಗ ಗುಡುಗುಡು ಬೈಕು ಓಡಿಸಿಕೊಂಡು ಬರುತ್ತಿದ್ದುದು ತಾಯಿಗೂ, ಒಡಹುಟ್ಟಿದವರಿಗೂ ಅಚ್ಚರಿ ಮತ್ತು ಹೆಮ್ಮೆಯ ವಿಷಯವಾಗಿತ್ತು. ಇಷ್ಟು ಸಣ್ಣಪ್ರಾಯದಲ್ಲಿ ತನ್ನ ಮಗ ಇಂಥ ಸಾಹಸದ ಕೆಲಸಕ್ಕೆ ತೊಡಗಿದ್ದನ್ನೂ ನೆರೆಕರೆಯವರ ಹೊಟ್ಟೆಕಿಚ್ಚನ್ನೂ ಕಾಣುತ್ತಿದ್ದ ಭಾಗೀರಥಿಯಲ್ಲಿ ಆತಂಕ ಹುಟ್ಟುತ್ತಿತ್ತು. ಆಗೆಲ್ಲಾ ಮಗನನ್ನು ಕರೆದು ಕೂರಿಸಿಕೊಂಡು,‘ಶಂಕರಾ ಜಾಗ್ರತೆ ಮಾಡು ಮಗಾ…ಮೋಟಾರನ್ನು ತುಂಬಾ ಜೋರಾಗಿ ಓಡಿಸಬೇಡ. ನೀನು ದಿನಕ್ಕೊಂದು ಗಾಡಿ ಬಿಟ್ಟುಕೊಂಡು ಬರುವಾಗ ನೆರೆಕರೆಯವರೆಲ್ಲ ಹೊಟ್ಟೆ ಉರಿಸಿಕೊಳ್ಳುತ್ತಾರೆ. ಅಂಥವರ ದೃಷ್ಟಿ ಒಳ್ಳೆಯದಲ್ಲ. ಅದಕ್ಕೆ ಪ್ರತಿ ಸೋಮವಾರ ಅನಂತೇಶ್ವರ ದೇವಸ್ಥಾನಕ್ಕೆ ಹೋಗಿ ಒಂದು ಕುಡ್ತೆ ಎಣ್ಣೆ ಕೊಟ್ಟು ದೀಪ ಹಚ್ಚುವ ಅಭ್ಯಾಸವಿಟ್ಟುಕೋ. ಅವನೇ ಕಾಪಾಡುತ್ತಾನೆ!’ ಎಂದು ಮಗನನ್ನು ಮಮತೆಯಿಂದ ಎಚ್ಚರಿಸಿ ದೃಷ್ಟಿ ತೆಗೆಯುತ್ತ ಇರುತ್ತಿದ್ದಳು. ಅಮ್ಮನ ಮಾತನ್ನು ನಮ್ರನಾಗಿ ಪಾಲಿಸುತ್ತಿದ್ದ ಶಂಕರನೂ ವಾರಕ್ಕೊಮ್ಮೆ ದೇವಸ್ಥಾನಕ್ಕೆ ಹೋಗುತ್ತಿದ್ದ. ಅಷ್ಟಲ್ಲದೇ ಪ್ರತೀ ಶನಿವಾರದಂದು ರಾತ್ರಿ ಮಗ ಮನೆಗೆ ಮರಳುತ್ತ ಇಪ್ಪತ್ತೋ, ಮೂವತ್ತೋ ರೂಪಾಯಿಗಳು ತನ್ನ ಮಡಿಲಿಗೆ ಬಂದು ಬೀಳುತ್ತಿದ್ದುದೂ ಭಾಗೀರಥಿಗೆ ಮಗನ ಮೇಲೆ ಹೆಚ್ಚು ಆಸ್ಥೆಯೂ ಕುಟುಂಬದ ಬಗ್ಗೆ ಭರವಸೆಯೂ ಮೂಡಲು ಕಾರಣವಾಯಿತು.

ಶಂಕರ ಹೀಗೆಯೇ ಬೆಳೆಯುತ್ತಿದ್ದ. ಆದರೆ ಅಪ್ಪನ ಸಾವು ಅವನನ್ನು ಒಳಗೊಳಗೇ ಕಂಗೆಡಿಸಿತ್ತು. ಆದ್ದರಿಂದ ವಿಶೇಷ ಗುರಿಯೊಂದು ಅವನಲ್ಲಿ ರೂಪುಗೊಳ್ಳುತ್ತಿತ್ತು. ಅಪ್ಪನಂತೆ ತಾನೂ ತನ್ನ ಕುಟುಂಬವನ್ನು ಬೀದಿಗೆಸೆದು ಸಾಯುವಂತಾಗಬಾರದು. ಹೇಗಾದರೂ ಸರಿ, ಈ ದರಿದ್ರ ಬಡತನದಿಂದ ಬಿಡುಗಡೆ ಪಡೆದು ಅಮ್ಮ ಮತ್ತು ಅಕ್ಕಂದಿರನ್ನು ಚೆನ್ನಾಗಿ ನೋಡಿಕೊಳ್ಳಬೇಕು.  ರವೀಂದ್ರ ಬಲ್ಲಾಳರ ಚಾಕರಿಯಲ್ಲಿದ್ದಾಗಲೇ ಅಪ್ಪ ತೀರಿಕೊಂಡಿದ್ದು. ಆದರೆ ಅವರು ಲೋಕದ ಕಣ್ಣು ಕಟ್ಟಿಗೆಂಬಂತೆ ಅಪ್ಪನ ಉತ್ತರಕ್ರಿಯೆಯನ್ನು ದೊಡ್ಡದಾಗಿ ಮಾಡಿಸಿ ಕೈತೊಳೆದುಕೊಂಡುಬಿಟ್ಟರು. ಅದನ್ನು ಹೊರತುಪಡಿಸಿ, ತಮ್ಮೊಂದಿಗೆ ಆಡಿ ಬೆಳೆದ ಆಪ್ತ ಸ್ನೇಹಿತನ ಕುಟುಂಬಕ್ಕೆ ಯಾವ ಸಹಾಯವನ್ನೂ ಮಾಡಲಿಲ್ಲ! ಎಂಬ ವಿಚಾರಗಳು ಅವನನ್ನು ಚುಚ್ಚುತ್ತಿದ್ದವು. ಹಾಗಾಗಿ, ಇಂದಲ್ಲ ನಾಳೆ ತಾನೂ ಅವರಂಥ ಶ್ರೀಮಂತ ಮಟ್ಟಕ್ಕೆ ಬೆಳೆದುತೋರಿಸಬೇಕು ಎಂದು ಯೋಚಿಸುತ್ತಿದ್ದ. ಆದ್ದರಿಂದಲೇ ತನ್ನ ಹದಿನೆಂಟನೆಯ ವಯಸ್ಸಿಗೆ ಈಶ್ವರಪುರದ ಪೇಟೆಯಲ್ಲಿ ಮೋಟಾರು ಬೈಕು ರಿಪೇರಿಯ ಸ್ವಂತ ಗ್ಯಾರೇಜೊಂದನ್ನು ತೆರೆದ.

ಆ ಗ್ಯಾರೇಜಿನಲ್ಲಿ ಸುಮಾರು ಹತ್ತು ವರ್ಷಗಳ ಕಾಲ ಅವಿರತವಾಗಿ ದುಡಿದ. ಕೈಯಲ್ಲಿ ಸ್ವಲ್ಪ ಕಾಸು ಕೂಡಿತು ಮತ್ತು ತನ್ನಲ್ಲಿಗೆ ಎನ್ಫೀಲ್ಡ್ ಬೈಕ್ ರಿಪೇರಿಗೆ ಬರುತ್ತಿದ್ದ ರಘುಪತಿಯೊಂದಿಗೆ ಸ್ನೇಹವೂ ಬೆಳೆಯಿತು. ಅವನೊಡನೆ ಸೇರಿ ರೀಯಲ್ ಎಸ್ಟೇಟ್ ಬ್ಯುಸಿನೆಸ್‍ಗೆ ಕೈ ಹಾಕಿದ. ಅಲ್ಲಿಂದ ಶಂಕರನ ನಕ್ಷತ್ರವೇ ಬದಲಾಗಿಬಿಟ್ಟಿತು. ಜೊತೆಗೆ ಅವನ ಒಳ್ಳೆಯ ಗುಣವೂ ಕಳೆದು ಹೋಯಿತು. ದುಡ್ಡಿನ ಜರೂರತ್ತಿದ್ದ ಅಥವಾ ಕುಡಿತಕ್ಕೆ ಬಿದ್ದು ಮನೆಮಠ ಮಾರಿಕೊಳ್ಳಲು ಹೊರಡುವವರನ್ನು ಗೆಳೆಯರಿಬ್ಬರೂ ಸೂಕ್ಷ್ಮವಾಗಿ ಗುರುತಿಸತೊಡಗಿದರು. ಅಂಥವರು ಜೀವಮಾನದಲ್ಲೇ ಕಂಡಿರದ ದೊಡ್ಡ ಮೊತ್ತವನ್ನು ಅವರಿಗೆ ತೋರಿಸಿ ಅಥವಾ ಉದಾರವಾಗಿ ನೀಡುತ್ತ ತಮ್ಮ ಬಲೆಗೆ ಕೆಡಹಿಕೊಳ್ಳುತ್ತಿದ್ದರು. ಅವರ ಹೊಲಗದ್ದೆ ಮನೆಮಾರುಗಳು ತಮ್ಮ ಹೆಸರಿಗೆ ವರ್ಗವಾಗುತ್ತಲೇ ಕೆಲವರ ಬಾಕಿ ಮೊತ್ತಕ್ಕೆ ಪಂಗನಾಮ ಬೀಳುತ್ತಿತ್ತು. ಹಠ ಬಿಡದೆ ಬೆನ್ನು ಹತ್ತುವವರನ್ನು ಗೆಳೆಯರು ಆಯಾಕಟ್ಟಿನ ಸ್ಥಳದಲ್ಲಿ ಹಿಡಿದು ಬಡಿದು ಜೀವ ಬೆದರಿಕೆಯೊಡ್ಡಿ ಓಡಿಸುತ್ತಿದ್ದರು. ಹಾಗಾಗಿ ಇವರಿಂದ ಮೋಸ ಹೋದವರು ಹತಾಶೆಯಿಂದ ಹಿಡಿ ಶಾಪ ಹಾಕಿಯೋ ಅಥವಾ ತಮ್ಮ ದೈವ ಭೂತಗಳಿಗೆ ದೂರು ನೀಡಿಯೋ ಸುಮ್ಮನಾಗುತ್ತಿದ್ದರು. ಹೀಗೆಯೇ ಅನೇಕ ಜಮೀನುಗಳನ್ನು ಇಬ್ಬರೂ ಸೇರಿ ಕಬಳಿಸುತ್ತ ಸಾಗಿದರು. ಆದರೆ ಇಂಥ ಸಂದರ್ಭದಲ್ಲೇ ಗೆಳೆಯರ ನಡುವೆ ದುಡ್ಡಿನ ವಿಷಯದಲ್ಲಿ ಮನಸ್ತಾಪವೆದ್ದುಬಿಟ್ಟಿತು. ಒಂದು ರಾತ್ರಿ ರೆಸ್ಟೋರೆಂಟೊಂದರಲ್ಲಿ ಕುಳಿತು ಕುಡಿಯುತ್ತ ಜಗಳವೂ ಹುಟ್ಟಿ ಒಬ್ಬರನ್ನೊಬ್ಬರು ಕತ್ತಿನಪಟ್ಟಿ ಹಿಡಿದು ಹೊಡೆದಾಡಿಕೊಂಡು ಬದ್ಧವೈರಿಗಳಾಗಿ ದೂರವಾಗಿಬಿಟ್ಟರು.

ಆದರೆ ಅಷ್ಟೊತ್ತಿಗಾಗಲೇ ಶಂಕರ ಸ್ವತಂತ್ರವಾಗಿ ವ್ಯವಹಾರಿಸುವಷ್ಟು ಅನುಭವವನ್ನೂ ಸಂಪತ್ತನ್ನೂ ಗಳಿಸಿದ್ದ. ತನ್ನೂರಿನ ಕಟ್ಟಡ ಕಾಮಗಾರಿ ಇಂಜಿನೀಯರ್‍ಗಳ ಮತ್ತು ಗುತ್ತಿಗೆದಾರರ ವಿಪರೀತ ದುಂದುವೆಚ್ಚದ ಶ್ರೀಮಂತ ಜೀವನ. ಸಿಮೆಂಟು, ಕಬ್ಬಿಣ ಮತ್ತಿತರ ಬಿಲ್ಡಿಂಗ್ ಮೆಟೀರಿಯಲ್ ಕಂಪನಿಗಳು ಅಂಥವರಿಗೆ ತಮ್ಮ ವಸ್ತುಗಳನ್ನೇ ಹೆಚ್ಚು ಹೆಚ್ಚು ಖರೀದಿಸುವಂತೆ ಪ್ರೋತ್ಸಾಹಿಸಲು ನೀಡುತ್ತಿದ್ದ ವಿವಿಧ ರೀತಿಯ ಉಡುಗೊರೆ, ಪ್ರಶಸ್ತಿಗಳು ಮತ್ತು ವಿದೇಶಿ ಸಾರಾಯಿಗಳು. ಕುಟುಂಬ ಸಮೇತ ಹೊರದೇಶಗಳಿಗೆ ಹಾರಿ ಹೋಗಿ ಮನಸೋಇಚ್ಛೆ ಮೋಜು ಮಸ್ತಿಯನ್ನನುಭವಿಸಬಹುದಾದ ಫಾರಿನ್ ಟೂರುಗಳು. ಇವೆಲ್ಲದರಿಂದ ಮತ್ತಷ್ಟು ಸ್ವೇಚ್ಛೆಯಾಗಿ ಬೆಳೆಯುತ್ತಿದ್ದ ಬಿಲ್ಡರ್‍ಗಳು ಪದೇಪದೇ ಕೊಂಡುಕೊಳ್ಳುತ್ತಿದ್ದ ಹೊಚ್ಚ ಹೊಸ ಮಾಡೆಲ್‍ನ ಐಷಾರಾಮಿ ಕಾರು, ಜೀಪು ಮತ್ತು ಬೈಕುಗಳು. ಇವನ್ನೆಲ್ಲ ಸಮೀಪದಿಂದ ಕಾಣುತ್ತ ಬರುತ್ತಿದ್ದ ಶಂಕರನಲ್ಲಿ ತಾನೂ ಅವರಂತೆಯೇ ಐಷಾರಾಮದಿಂದ ಬಾಳಬೇಕೆಂಬ ಹೆಬ್ಬಯಕೆ ಅದಾಗಲೇ ಮೂಡಿತ್ತು. ಆದ್ದರಿಂದ ಅವನು ಕೂಡಲೇ ವ್ಯವಹಾರ ಆರಂಭಿಸಿದವನು ಹಿಂದಿನಂತೆಯೇ ಈಶ್ವರಪುರ ಜಿಲ್ಲೆಯ ಒಳ ಹೊರಗಿನ, ಹಣದ ಆವಶ್ಯಕತೆಯಿರುವವರ ಮತ್ತು ಮೈಮುರಿದು ದುಡಿಯದ ಸೊಂಬೇರಿಗಳ ಮಂಡೆ ಗಿರ್ಮಿಟ್ ಮಾಡಿ ಎಕರೆಗಟ್ಟಲೆ ಹೊಲಗದ್ದೆ ಹಾಗೂ ಕಾಡುಗುಡ್ಡಗಳನ್ನು ಕವಡೆ ಕಿಮ್ಮತ್ತಿಗೆ ತನ್ನದಾಗಿಸುತ್ತ ಸಾಗಿದ. ಅಂಥ ಕುಟುಂಬದ ಸದಸ್ಯರಲ್ಲಿ ಯಾರಾದರೂ ಜಾಗ ಮಾರಲು ಅಥವಾ ಸಹಿ ಹಾಕಲು ತಕರಾರೆತ್ತಿದರೆ ಅವರ ಹಣೆ, ಮೂಗಿನ ಹೊಳ್ಳೆಗೆ ರಿವಾಲ್ವರ್ ಚುಚ್ಚಿ, ತೂರಿಸಿ ತನ್ನ ಕಾರ್ಯವನ್ನು ಸಾಧಿಸುವಷ್ಟು ಮುಂದುವರೆದುಬಿಟ್ಟ. ಹೀಗೆಲ್ಲ ದಕ್ಕಿಸಿಕೊಂಡ ಜಮೀನುಗಳಲ್ಲಿ ದೊಡ್ಡ ದೊಡ್ಡ ಮನೆ, ಬಂಗಲೆಗಳನ್ನೂ ವಸತಿ ಸಂಕೀರ್ಣಗಳನ್ನೂ ನಿರ್ಮಿಸುತ್ತ ಬೇಕಾಬಿಟ್ಟಿ ಬೆಲೆಗೆ ಮಾರುತ್ತಾ ಸಂಪಾದಿಸತೊಡಗಿದ. ಹೀಗಾಗಿಯೇ ಶಂಕರ ಇವತ್ತು ಈಶ್ವರಪುರದ ಯಶಸ್ವಿ ದಲ್ಲಾಳಿ ಮತ್ತು ಬಿಲ್ಡರ್‍ಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನದಲ್ಲಿ ಮೆರೆಯುತ್ತಿದ್ದಾನೆ.

ಇದೇ ಕಾಲಘಟ್ಟದಲ್ಲಿ ಶಂಕರನ ತಾಯಿ ಭಾಗೀರಥಿ ಗರ್ಭಕೋಶದ ಕ್ಯಾನ್ಸರ್‍ನಿಂದ ತೀರಿಕೊಂಡಳು. ಆದರೆ ಅವಳು ಜೀವಂತವಿದ್ದಾಗಲೇ ಅವಳ ಆಸೆಯಂತೆ ಅಕ್ಕ ಕಮಲಳಿಗೂ ಮತ್ತು ಕೊನೆಯ ಸಹೋದರಿ ಹೇಮಾಳಿಗೂ ಒಳ್ಳೆಯ ಕಡೆ ಸಂಬಂಧ ಹುಡುಕಿ ಅದ್ಧೂರಿಯ ಮದುವೆ ಮಾಡಿಕೊಟ್ಟ. ಇನ್ನೊಬ್ಬ ಸಹೋದರ ರಮೇಶ ಅಪ್ಪನಂತೆಯೇ ಶ್ರಮಜೀವಿಯಾಗಿ, ಅಪ್ಪ ಬಿಟ್ಟುಹೋದ ತೋಟ ಮತ್ತು ಹೊಲಗದ್ದೆಗಳಲ್ಲಿ ಬೇಸಾಯ ಮಾಡುತ್ತಾ ನೆಮ್ಮದಿಯಿಂದ ಬದುಕುತ್ತಿದ್ದಾನೆ. ಅಕ್ಕ, ತಂಗಿಯರ ಮದುವೆಯ ನಂತರ ಶಂಕರನೂ ಮದುವೆಗೆ ಮನಸ್ಸು ಮಾಡಿದ. ಮುಂಬೈ ಹೊಟೇಲ್ ಉದ್ಯಮಿ ಚಂದ್ರಹಾಸ ಮತ್ತು ಸರಸ್ವತಿ ದಂಪತಿಯ ಏಕೈಕ ಪುತ್ರಿ ವಿನೋದಾಳೊಂದಿಗೆ ಅವನ ಮದುವೆಯಾಯಿತು. ವಿನೋದಾ ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದವಳು. ಆದರೆ ಅವಳು ಹುಟ್ಟಿದ ಆರನೆಯ ವರ್ಷಕ್ಕೆ ಚಂದ್ರಹಾಸ, ಸರಸ್ವತಿಯರ ದಾಂಪತ್ಯ ಮುರಿದುಬಿತ್ತು. ಸರಸ್ವತಿಯು ಗಂಡನೊಂದಿಗೆ ತನ್ನ ಮಗಳನ್ನೂ ಬಿಟ್ಟು ಹೊರಟು ಹೋದಳು. ಹೆತ್ತವರ ಸ್ವಾರ್ಥದ ನಿರ್ಧಾರದಿಂದಾಗಿ ವಿನೋದಾ ಅಪ್ಪನ ಅಕ್ಕ ತಂಗಿಯರ ಮನೆಗಳಲ್ಲಿ ಬೆಳೆಯುವಂತಾಯಿತು. ಹಾಗಾಗಿ ಅವಳು ತಾಯಿಯ ಮಮತೆಯಿಂದ ಪೂರ್ಣ ವಂಚಿತಳಾಗಿದ್ದಳು. ಶಂಕರನನ್ನು ಮದುವೆಯಾದ ನಂತರ ಗಂಡನ ಶ್ರೀಮಂತಿಕೆಯೂ, ಅವನ ಸಾಂಗತ್ಯವೂ ಅವಳಲ್ಲಿ ಬದುಕಿನ ಬಗ್ಗೆ ಬಣ್ಣಬಣ್ಣದ ಕನಸುಗಳನ್ನು ಕಟ್ಟಿಕೊಳ್ಳುವಂತೆ ಮಾಡಿತು. ಆದರೆ ಶಂಕರ ಅವಳನ್ನು ಮದುವೆಯಾಗಲು ಮುಖ್ಯ ಕಾರಣಗಳಿದ್ದುವು. ಮೊದಲನೆಯದಾಗಿ ಅವಳ ಪಾಲಿಗೆ ಬರುವ ದೊಡ್ಡಮಟ್ಟದ ಆಸ್ತಿ ಹಾಗೂ ಅವಳ ಹಾಲು ಬೆಳದಿಂಗಳಿನಂಥ ಸೌಂದರ್ಯ. ಇದರಿಂದಾಗಿ ಅವರ ದಾಂಪತ್ಯ ಆರಂಭದ ಕೆಲವು ಕಾಲ ಬಹಳ ಸುಂದರವಾಗಿಯೇ ಕಳೆಯಿತು. ಬರಬರುತ್ತ ಶಂಕರನ ಅತಿರೇಕದ ಒರಟುತನ ಅವಳನ್ನು ಅಧೀರಳನ್ನಾಗಿಸತೊಡಗಿತು. ಅವನ ಧೂರ್ತ ಸ್ವಭಾವದಿಂದ ಅವಳು ರೋಸಿ ವಿರೋಧಿಸಿದಳೆಂದರೆ ಮೈಮೂಳೆ ಮುರಿಯುವಂಥ ಹೊಡೆತ ಬಡಿತವನ್ನೂ ಅವಳುಅನುಭವಿಸಬೇಕಾಗುತ್ತಿತ್ತು. ಇವೆಲ್ಲದರೊಂದಿಗೆ ಕೆಲವು ಬಾರಿ ಅವನ ಲಂಪಟತನವನ್ನೂ ಕಣ್ಣಾರೆ ಕಂಡವಳಿಗೆ ಇಂಥವನ ಜೊತೆ ಜೀವನಪೂರ್ತಿ ನರಳುವುದಕ್ಕಿಂತ ವಿಚ್ಛೇದನಪಡೆದು ಒಂಟಿಯಾಗಿ ಬದುಕುವುದೇ ಲೇಸು ಎಂದೆನ್ನಿಸತೊಡಗಿತು. ಆದರೆ ಅಷ್ಟೊತ್ತಿಗಾಗಲೇ ಅವರ ದಾಂಪತ್ಯದ ಸಾಕ್ಷಿಯಾಗಿ ಒಂದು ಗಂಡು ಮಗವೂ ಜನಿಸಿತ್ತು. ಆದ್ದರಿಂದ ತನ್ನ ಹೆತ್ತವರಿಂದ ತಾನು ಅನುಭವಿಸಿದ ಅಭದ್ರತೆ, ಏಕಾಂಗಿತನದ ನೋವು ತನ್ನ ಮಗುವಿಗೂ ದಕ್ಕುವುದುಬೇಡ ಎಂದು ಯೋಚಿಸಿದವಳು ಗಂಡನ ದುರ್ವತನೆಗಳನ್ನೆಲ್ಲ ಸಹಿಸಿಕೊಂಡು ಆದಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತ ಬದುಕತೊಡಗಿದಳು.

(ಮುಂದುವರೆಯುವುದು)

*************************************

ಗುರುರಾಜ್ ಸನಿಲ್

ಗುರುರಾಜ್ ಸನಿಲ್ ಉಡುಪಿ ಇವರು ಖ್ಯಾತ ಉರಗತಜ್ಞ, ಸಾಹಿತಿಯಾಗಿ ನಾಡಿನಾದ್ಯಂತ ಹೆಸರು ಗಳಿಸಿದವರು. .‘ಹಾವು ನಾವು’, ‘ದೇವರಹಾವು: ನಂಬಿಕೆ-ವಾಸ್ತವ’, ‘ನಾಗಬೀದಿಯೊಳಗಿಂದ’, ‘ಹುತ್ತದ ಸುತ್ತಮುತ್ತ’, ‘ವಿಷಯಾಂತರ’ ‘ಕಮರಿದ ಸತ್ಯಗಳು ಚಿಗುರಿದ ಸುದ್ದಿಗಳು’ ಮತ್ತು ಅವಿಭಜಿತ ದಕ್ಷಿಣ ಕನ್ನಡಜಿಲ್ಲೆಗಳ ನೈಸರ್ಗಿಕ ನಾಗಬನಗಳ ಉಳಿವಿನ ಜಾಗ್ರತಿ ಮೂಡಿಸುವ ‘ನಾಗಬನವೆಂಬ ಸ್ವರ್ಗೀಯ ತಾಣ’ , ‘ಗುಡಿ ಮತ್ತು ಬಂಡೆ’ ಎಂಬ ಕಥಾಸಂಕಲವನ್ನು ಹೊರ ತಂದಿದ್ದಾರೆ. ಇತ್ತೀಚೆಗೆ ‘ಆವರ್ತನ’ ಮತ್ತು ‘ವಿವಶ’ ಎರಡು ಕಾದಂಬರಿಗಳು ಬಂದಿವೆ.‘ಹಾವು ನಾವು’ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು 2010ನೇ ಸಾಲಿನ ‘ಮಧುರಚೆನ್ನ ದತ್ತಿನಿಧಿ ಪುಸ್ತಕ ಪ್ರಶಸ್ತಿ’ ನೀಡಿ ಗೌರವಿಸಿದೆ. ‘ ‘ಕರುಣಾ ಎನಿಮಲ್ ವೆಲ್‍ಫೇರ್ ಅವಾರ್ಡ್(2004)’ ‘ಕರ್ನಾಟಕ ಅರಣ್ಯ ಇಲಾಖೆಯ ‘ಅರಣ್ಯಮಿತ್ರ’(2013)’ ಕರ್ನಾಟಕ ಕಾರ್ಮಿಕ ವೇದಿಕೆಯು ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(2015)’ ಪಡೆದಿದ್ದಾರೆ. ಪ್ರಸ್ತುತ ಉಡುಪಿಯ ಪುತ್ತೂರಿನಲ್ಲಿ ವಾಸವಾಗಿದ್ದಾರೆ.

2 thoughts on “

  1. ಶಂಕರನ ಕೌಟುಂಬಿಕ ಹಿನ್ನೆಲೆ, ಬಡತನವನ್ನೇ ಕಂಡುಂಡ ಅವನು ತನ್ನ ಮುಂದಿನ ಜೀವನದ ಬಗೆಗೆ ತಳೆದ ನಿರ್ಧಾರ, ಮಹತ್ವಾಕಾಂಕ್ಷೆಯ ಹಾದಿಯಲ್ಲಿ ಅವನು ಮುಂದುವರಿದ ರೀತಿ… ಈ ಅಧ್ಯಾಯದಲ್ಲಿ ಚೆನ್ನಾಗಿ ಮೂಡಿಬಂದಿದೆ. ಪ್ರಬುದ್ಧ ನಿರೂಪಣಾ ಶೈಲಿ, ಆಯಾ ಸಂದರ್ಭಕ್ಕೆ ತಕ್ಕಂತೆ ಸಂಭಾಷಣೆಯನ್ನು ನಡೆಸಿಕೊಂಡು ಹೋಗುವ ಕಾದಂಬರಿಕಾರರ ನೈಪುಣ್ಯತೆ ಇಲ್ಲಿ ಗಮನ ಸೆಳೆಯುತ್ತದೆ. ಅಭಿನಂದನೆಗಳು

    1. ನಿಮ್ಮೆಲ್ಲರ ವಸ್ತುನಿಷ್ಠ ಅನಿಸಿಕೆ ಸಹಕಾರ ನನ್ನ ಬರಹಕ್ಕೆ ಸ್ಫೂರ್ತಿ ಅನಿತಾ ಅವರೇ ಧನ್ಯವಾದ…

Leave a Reply

Back To Top