ಅಂಕಣ ಬರಹ

ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಕವಿತೆಯ

ಹೊಳಹುಗಾಣುತ್ತದೆ

ಹೇಮಲತಾ ವಸ್ತ್ರದ.

ಪರಿಚಯ:

ಎಂಎ, ಎಂಇಡಿ, ಪಿಜಿ ಡಿಪ್ಲೋಮಾ ಇನ್ ಇಂಗ್ಲಿಷ್. ವಿಜಯಪುರ ಗ್ರಾಮೀಣ ಶಾಲೆಯಲ್ಲಿ ಸಹ ಶಿಕ್ಷಕಿಯಾಗಿದ್ದಾರೆ.

ಊರು: ಸಿಂದಗಿ.  ಜಿಲ್ಲೆ: ವಿಜಯಪುರ.

ಕೃತಿಗಳು:

ಅವ್ವನಿಗೊಂದು ಪತ್ರ (ಕವನಸಂಕಲನ).

ಪೃಥ್ವಿಯೊಡಲು(ಕಥಾಸಂಕಲನ)(ಅಚ್ಚಿನಲ್ಲಿದೆ).

ಗಜಲ್ ಸಂಕಲನಅಚ್ಚಿನಲ್ಲಿದೆ.

ಅಕ್ಕನಾಗಮ್ಮ (ನಾಟಕ)(ಅಚ್ಚಿನಲ್ಲಿ)

ಶೈಕ್ಷಣಿಕ, ಸಾಹಿತ್ಯಕ ಲೇಖನಗಳು.

ಮಕ್ಕಳ ಕಥೆಗಳು, ಕವನಗಳು.

ಕ್ರೀಯಾಸಂಶೋದನೆ

(ಬಾಲಕಾರ್ಮಿಕಪದ್ಧತಿ).

ಗುಲ್ಬರ್ಗಾ ವಿಶ್ವವಿದ್ಯಾಲಯ ದ ಎಂಎ ಮೂರನೇ ಸೆಮ್ (ಆಧುನಿಕ ಕಾವ್ಯ ಸಂಗ್ರಹ-೨೦೧೨) ಗೆ ಕನ್ನಡಗಜಲ್ಗಳು, ಕವನಗಳು ಪಠ್ಯವಾಗಿವೆ.

 ಪ್ರಜಾವಾಣಿ, ಮಯೂರ, ವಿಜಯಕರ್ನಾಟಕ ಇತ್ಯಾದಿ ಪತ್ರಿಕೆಗಳಲ್ಲಿ ಕವನ, ಗಜಲುಗಳು ಮತ್ತು ಲೇಖನಗಳು ಪ್ರಕಟವಾಗಿವೆ.

ಚಂದನ ದೂರದರ್ಶನದ  ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ.‌

ಅಕ್ಕಮಹಾದೇವಿ ವಿ.ವಿ, ಗುಲ್ಬರ್ಗ ವಿ.ವಿ,

ಕನ್ನಡ ಸಾಹಿತ್ಯ ಪರಿಷತ್ತು, ಶರಣ ಸಾಹಿತ್ಯ ಪರಿಷತ್ತು ಇತ್ಯಾದಿಗಳಲ್ಲಿ ಉಪನ್ಯಾಸ.

ವಿಜಯಪುರ ಆಕಾಶವಾಣಿಯಲ್ಲಿ ಚಿಂತನಗಳ ಪ್ರಸಾರ. ಕಥೆ, ಕವನಗಳ ಪ್ರಸಾರವಾಗಿವೆ.

ಸಂದ ಗೌರವಗಳು :

ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ (2018). ಹಾಗೂ

ಶಿಕ್ಷಣ ಕ್ಷೇತ್ರದ ‘ಗುರುಶ್ರೇಷ್ಠ ‘ ಪುರಸ್ಕಾರ.(2017)


ಸಂದರ್ಶನ:

ಧಮಿನಿಸಲ್ಪಟ್ಟ ಎಲ್ಲದಕ್ಕೂ ದನಿಯಾಗುವ ಹಂಬಲ ನನ್ನ ಕವಿತೆಗೆ

ನೀವು ಕವಿತೆಗಳನ್ನು ಯಾಕೆ ಬರೆಯುವಿರಿ?

 ಬರೆದಾದ ಮೇಲಿನ ನನ್ನ ತುಡಿತ ಕಡಿಮೆಯಗುವುದಕ್ಕೆ.  ಸಿಗುವ ತೃಪ್ತಿ, ಸಮಾಧಾನಕ್ಕೆ,. ಕಿಂಚಿತ್ ಆದರೂ ಸಮಾಜದ ಋಣ ತೀರಿಸಬಹುದು(ಭ್ರಮೆ) ಎಂಬುದಕ್ಕೆ. ಮುಖ್ಯವಾಗಿ ದಮನಿಸಲ್ಪಟ್ಟ ಎಲ್ಲದಕ್ಕೂsss ದನಿಯಾಗುವ ಹಂಬಲಕ್ಕೆ ಬರೆಯುತ್ತೇನೆ.

ಕವಿತೆ ಹುಟ್ಟುವ ಕ್ಷಣ ಯಾವುದು?

 ಇಂಥಹದ್ದೆ  ಕ್ಷಣ ಎನ್ನಲಾಗದು. ಒಮ್ಮೊಮ್ಮೆ ಪಾತ್ರೆ ತಿಕ್ಕುವಾಗಲೂ ಹೊಳಹುಗಾಣುತ್ತದೆ.

ನಿಮ್ಮ ಕವಿತೆಗಳಲ್ಲಿ ‌ಪದೇ ಪದೇ ಕಾಡುವ ವಿಷಯ ಯಾವುದು? ಕವಿತೆಗಳ ವಸ್ತು ಯಾವುದು?

ಬದುಕಿನ ಎಲ್ಲ ಮೂರ್ತ ಮತ್ತು ಅಮೂರ್ತಗಳು. ಸ್ವಲ್ಪ ಹೆಚ್ಚು ಅನ್ನುವಂತಿರುವುದು ಸ್ತ್ರೀ ಸಂವೇದನೆಗಳ ಅಭಿವ್ಯಕ್ತಿ.

ಗೊತ್ತಿದ್ದೂ ಏನೂ ಮಾಡಲಾಗದ ಅಸಹಾಯಕತೆ, ನೋವಿಗೆ ತುತ್ತಾದ ಜೀವಗಳ ಕಣ್ಣೋಟ ತುಂಬ ಕಾಡುತ್ತವೆ.

ಕವಿತೆಗಳಲ್ಲಿ ಬಾಲ್ಯ,ಹರೆಯ ಇಣುಕಿದೆಯಾ?

ಇಣುಕಿದೆ. ಬಾಲ್ಯ ಮತ್ತು ಹರೆಯದ ಪ್ರಭಾವವೇ ಅಂತಹದ್ದು.

ಪ್ರಸ್ತುತ ರಾಜಕೀಯ ಸನ್ನಿವೇಶಕ್ಕೆ ಕವಿಯಾಗಿ ಹೇಗೆ ಪ್ರತಿಕ್ರಿಯಿಸುವಿರಿ?

ಸ್ವಾರ್ಥ, ದುರಾಸೆ ಮತ್ತು ನಿರ್ಲಜ್ಯ ರಾಜಕಾರಣವಿಂದು ವಿಜ್ರಂಭಿಸುತ್ತಿದೆ. ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಪೂಜೆ ಯಾವತ್ತಿಗೂ ಅಪಾಯಕಾರಿಯೇ. ಇದರಿಂದ ದೋಷಗಳು ಕಾಣಿಸದೇ ಹೋಗುತ್ತವೆ. ರಾಷ್ಟ್ರದ ಬೆಳವಣಿಗೆಗಾಗಿ ಮೌಲ್ಯಯುತ ದೂರಾಲೋಚನೆಗಳಿರುವ ಯೋಜನೆಗಳು ಮತ್ತು ಪ್ರಾಮಾಣಿಕ ಪ್ರಯತ್ನದ ಕೊರತೆ ಕಾಣುತ್ತಿದೆ. ಬರಿ ಕಲ್ಯಾಣ ಯೋಜನೆಗಳಿಂದ ಬಲಿಷ್ಠ ರಾಷ್ಟ್ರ ಕಟ್ಟಲಾಗದು. ಪ್ರಸ್ತುತ ರಾಜಕೀಯ ವ್ಯವಸ್ಥೆಯೆ ಅಪಮೌಲ್ಯಗೊಂಡಿದೆ.

ದೇವರು ಧರ್ಮದ ಬಗ್ಗೆ ನಿಮ್ಮ ನಿಲುವೇನು?

 ಶರಣ ಧರ್ಮ ನನ್ನದು. ಜಾತಿಯಲ್ಲಿ ನಂಬಿಕೆಯಿಲ್ಲ. ಮೂರ್ತ ಕಲ್ಪನೆಗಳಲ್ಲ ನನ್ನ ದೇವರು. ಮಾನವೀಯತೆಯ ಸಾಕಾರವನ್ನು ದೇವರೆನ್ನಬಹುದೇನೊ.

ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಹೇಗಿದೆ?

ಪ್ರಸ್ತುತ ಸಾಂಸ್ಕೃತಿಕ ವಾತಾವರಣ ಪರವಾಗಿಲ್ಲ ಅನಿಸುವಂತಿದೆ ಅಷ್ಟೆ. ತಾರತಮ್ಯದ ಕಸ ತೆಗೆಯಬೇಕಿದೆ. ಸಾಂಸ್ಕೃತಿಕ ಶ್ರೀಮಂತಿಕೆ ಕರಗಿದೆ.

ಸಾಹಿತ್ಯದ ರಾಜಕೀಯದ ಬಗ್ಗೆ ನಿಮಗೆ ಏನನಿಸುತ್ತದೆ?

ರಾಜಕಾರಣದಲ್ಲಿ ಸಾಹಿತ್ಯ ಇರಬೇಕೆ ವಿನಾ ಸಾಹಿತ್ಯದಲ್ಲಿ ರಾಜಕಾರಣವಿರಬಾರದು. ಸಾಹಿತಿ ಮಾತ್ರ ಮುನ್ನೆಲೆಗೆ ಬರುತ್ತಾನೆ. ಸಾಹಿತ್ಯ ದಿವಾಳಿಯಾಗುತ್ತದೆ. ಇಂದು ಸಾಹಿತ್ಯ ವಲಯದ ರಾಜಕಾರಣದ ಕುರಿತು ವಿಷಾದವಿದೆ.

ದೇಶದ ಚಲನೆಯ ಬಗ್ಗೆ ನಿಮಗೇ‌ನನಿಸುತ್ತಿದೆ?

  ನಿಜಕ್ಕೂ ದೇಶದ ಚಲನೆ ಹಿಮ್ಮುಖವಾಗಿದೆ ಎನಿಸುತ್ತಿದೆ. ಬಂಡವಾಳಶಾಹಿ ಗಹಗಹಿಸುತ್ತಿದೆ. ಅಸಹಿಷ್ಣುತೆ ಎಲ್ಲ ವಲಯಗಳಲ್ಲಿ ಹೆಚ್ಚಾಗಿದೆ. ಇಂಥ ಮನಸ್ಥಿತಿ ದೇಶಕ್ಕೆ ಮಾರಕ. ಸಾಮಾನ್ಯರ ಬದುಕು ಅಸಹನೀಯವಾಗಿದೆ. ವ್ಯವಸ್ಥೆ ಹದಗೆಟ್ಟಿದೆ.ಅಶನ ವಸನಕ್ಕೂ ಪರದಾಡುವಂತಾಗಿದೆ.

ಸಾಹಿತ್ಯದ ಬಗ್ಗೆ ನಿಮ್ಮ ಕನಸುಗಳೇನು?

 ಮನಸ್ಸುಗಳನ್ನು ಕಟ್ಟುವ ಕೃತಿ ರಚಿಸಬೇಕು ಎಂಬ ಕನಸಿದೆ.

ಕನ್ನಡ ಇಂಗ್ಲಿಷ್ ಭಾಷೆಯಲ್ಲಿ ನಿಮ್ಮ ಇಷ್ಟದ ಕವಿಗಳಾರು?

 ಕನ್ನಡದಲ್ಲಿ  ಕವಿಯಾಗಿ ಜಿ ಎಸ್ ಎಸ್, ನಿಸಾರ್ ಅಹಮ್ಮದ ಅವರು ಇಷ್ಟ. ಸಾಹಿತಿಯಾಗಿ ಶಿವರಾಮ ಕಾರಂತ, ಪೂರ್ಣಚಂದ್ರ ತೇಜಸ್ವಿ, ತ್ರಿವೇಣಿ, ಕೊಡಗಿನ ಗೌರಮ್ಮ ಇಷ್ಟ.

ಶರ್ಲಾಕ್ ಹೋಮ್, ಟಾಲ್ಸ್ಟಾಯ್,  ಕೀಟ್ಸ್ ಇಷ್ಟ.

ರವೀಂದ್ರನಾಥ ಟ್ಯಾಗೋರ, ಗಾಲಿಬ್, ರೂಮಿ, ಕಮಲಾದಾಸ ಅವರ ಸಾಹಿತ್ಯ ಹೆಚ್ಚು ಆಕರ್ಷಿಸುತ್ತದೆ.

ನೀವು ಓದಿದ ಪುಸ್ತಕಗಳಾವವು?

ಅಮೇರಿಕಾದ ಕಪ್ಪುಗುಲಾಮ ಫ್ರೆಡೆರಿಕ್ ಡಗ್ಲಾಸ್ ನ ಆತ್ಮಕಥೆ ಕಪ್ಪುಕುಲುಮೆ, ಅಮೃತ ನೆನಪುಗಳು ಮತ್ತು ಸಿಂಗಾರೆವ್ವ ಮತ್ತು ಅರಮನೆ ಇನ್ನೊಮ್ಮೆ ಓದಿದೆ.

ನಿಮಗೆ ಇಷ್ಟದ ಕೆಲಸ ಯಾವುದು?

 ಕಲಿಸುವುದು ಮತ್ತು ಕೃಷಿಯಲ್ಲಿ ತೊಡಗುವುದು.

ನಿಮ್ಮ ಇಷ್ಟದ ಸ್ಥಳಯಾವುದು ?

  ಸಮುದ್ರ ಮತ್ತು ಹೊಲದಲ್ಲಿರುವ ಪುಟ್ಟಮನೆ.

ನಿಮ್ಮ ಇಷ್ಟದ ಸಿಮಿಮಾ ಯಾವುದು?

 ಬೆಟ್ಟದ ಜೀವ, ಕರಾಟೆ ಕಿಡ್

ಮರೆಯಲಾಗದ ಘಟನೆಯಾವುದು ?

ಅವ್ವ ಮತ್ತು ಪತಿಯ ಸಾವು.

************************************************************************

ಹರಪನಹಳ್ಳಿ ಹುಟ್ಟೂರು. ಹರಪನಹಳ್ಳಿ ತಾಲೂಕಿನ ಮೈದೂರು-ಚಿಗಟೇರಿ ಬೆಳೆದ ಊರು. ಪಿಯು ಓದಿದ್ದು ಕೊಟ್ಟೂರಿನಲ್ಲಿ. ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ.ಎ., ಕವಿವಿಯಲ್ಲಿ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿ. ದಾವಣಗೆರೆ, ಸದಾಶಿವಗಡ ಮತ್ತು ಭಟ್ಕಳದಲ್ಲಿ ಕನ್ನಡ ಉಪನ್ಯಾಸಕರಾಗಿ ಕೆಲಸ ನಿರ್ವಹಿಸಿ, 1997 ರಿಂದ ಕಾರವಾರದಲ್ಲಿ ಪತ್ರಕರ್ತರಾಗಿ ಕೆಲಸ ಮಾಡುತ್ತಿದ್ದಾರೆ. ಜನವಾಹಿನಿ, ಜನಾಂತರಂಗ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ ಇವರು, ಈ ಟಿವಿ ಕನ್ನಡ ನ್ಯೂಸ್ ಚಾನೆಲ್ಲಿಗೆ ವರದಿಗಾರಿಕೆ ಬಳಿಕ ಈಗ ಉದಯವಾಣಿ , ಬೆಳಗಾವಿಯ ಲೋಕದರ್ಶನ ಪತ್ರಿಕೆಗೆ ವರದಿಗಾರರಾಗಿದ್ದಾರೆ. 2009ರಲ್ಲಿ ‘ಕಡಲದಂಡೆಗೆ ಬಂದ ಬಯಲು’ ಎಂಬ ಕಥಾ ಸಂಕಲನ, 2013ರಲ್ಲಿ ‘ಬಿಸಿಲ ಬಯಲ ಕಡಲು’ ಎಂಬ ಕವಿತಾ ಸಂಕಲನ ಪ್ರಕಟಣೆ.2019 ರಲ್ಲಿ ‘ವಿರಹಿದಂಡೆ’ ಕವಿತಾ ಸಂಕಲನ ಪ್ರಕಟಿಸಿದ್ದಾರೆ. ಕಾರವಾರ ತಾಲೂಕಿನ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.‌

Leave a Reply

Back To Top