ಕವಿತೆ
ಜಗ… ಸೋಜಿಗ
ವಿದ್ಯಾಶ್ರೀ ಅಡೂರ್
ಯಾರು ಇಲ್ಲ ಎಂಬ ಭಾವ
ಬಿಟ್ಟುಬಿಡಿರಿ ಎಲ್ಲ ಬೇಗ
ದೇವನೊಬ್ಬ ಸಲಹುತಿಹನು
ಹೆಜ್ಜೆ ಹೆಜ್ಜೆಗೇ
ಗೋಡೆ ಸಂಧಿಲಿರುವ ಜೇಡ
ಮರಳಿ ಕಟ್ಟಿ ತನ್ನ ಗೂಡ
ಗೊಡವೆಯಿರದೆ ಬದುಕುತಿಹುದು
ಹೊಟ್ಟೆಪಾಡಿಗೇ
ಮೊಟ್ಟೆಯಿಟ್ಟು ಮಾಯವಾಗೋ
ಅಟ್ಟಿಉಣುವ ಜೀವಗಳಿಗೆ
ಹುಟ್ಟುಸಾವು ಮೂಲವರುಹೋ
ಶಕ್ತಿಯಾವುದು
ಬಾಯಿಬರದೆ ಇರುವ ಮೂಕ
ಹಸುವು ಕೂಡ ತನ್ನ ಪ್ರಸವ
ಹಲ್ಲುಕಚ್ಚಿ ಸಹಿಸಿ ಕರುಳ
ಬಳ್ಳಿ ಹರಿವುದೂ
ಎಷ್ಟು ಕಡಿದರೂನು ಚಿಗುರಿ
ಮತ್ತೆ ಮತ್ತೆ ಟಿಸಿಲು ಒಡೆದು
ಬದುಕೋ ಭರವಸೆಯ ಗಿಡಕೆ
ಯಾರು ಕೊಟ್ಟರೂ
ಇಟ್ಟಜಾಗದಲ್ಲಿ ತನ್ನ
ಬೇರನಿಳಿಸಿ ಗಟ್ಟಿಗೊಳುವ
ಪುಟ್ಟಬೀಜಕಿಹರೆ ಸಾಟಿ
ಯಾರು ದಿಟ್ಟರೂ
ಅಕ್ಕಿಬೆಂದು ಅನ್ನವಾಗಿ
ನಿನ್ನೆದಿಂದು ಹಳಸಿಹೋಗಿ
ಭವದಬದುಕು ಇಷ್ಟೇ ಎಂದು
ಸಾರುತಿರುವುದು
ಅರಿವ ಸೊಡರು ಹಚ್ಚಿ ಒಳಗೆ
ಹೊರಗೆ ಮಿಣುಕು ಬೆಳಕು ಬೀರೆ
ಸುತ್ತ ಕವಿದ ಕತ್ತಲೆಲ್ಲ
ಇಂಗಿ ಪೋಪುದು.
************
ತುಂಬಾ ಉತ್ತಮ ಕವನ ಅಭಿನಂದನೆಗಳು ವಿದ್ಯಾಶ್ರೀ
Suuuuuper