Category: ಗಝಲ್

ಈಶ್ವರಲಿಂಗ ಸಂಪಗಾವಿ ಕಕ್ಕೇರಿ-ಹೊಸ ಕವಿತೆ

ಮುರದ್ಧಫ್ ಗಜ಼ಲ್.

ಮುಳ್ಳುಗಳೆಡೆಯಲಿ ನಗುತಿಹ ಹೂವೇ ಜೀವನ ಪಾಠವ ಕಲಿಸುವೆಯಾ
ಸುಳ್ಳುಗಳ ಗೂಡಲಿ ಹಗೆಯ ನೋವೇ ಬವಣೆ ಕಾಟವ ಬಲಿಸುವೆಯಾ

ಹಳ್ಳ ದಿನ್ನೆಗಳ ಹತ್ತಿ ಇಳಿದು ಜೀವನದಿ ಗುರಿಯ ಸೇರುವ ಛಲ ಬೇಕಲ್ಲ
ಸೊಲ್ಲು ಸೊಲ್ಲಿಗೆ ಬಣ್ಣದ ಚಿತ್ತಾರವ ಬಿಡಿಸುತ ಭಾವವ ಸುಲಿಸುವೆಯಾ

ಕಳ್ಳ ಬೆಕ್ಕಿನಂತೆ ಕಣ್ಣುಮುಚ್ಚಿ ಹಾಲನು ಕುಡಿವ ಚಪಲಕೆ ಒಳಗಾದೆಯಲ್ಲ
ತಳ್ಳು ಗಾಡಿಯ ಮೇಲಿನ ವ್ಯಾಪಾರ ಬದುಕು ಆಸೆಗಳ ಕೊಲಿಸುವೆಯಾ

ಸಿಳ್ಳೆ ಹೊಡೆಯುವುದರಲ್ಲಿ ಮನುಜನಾ ಅವಸ್ಥೆಗಳ ಆಟ ಮುಗಿವುದು
ಮಳ್ಳ ಬುದ್ಧಿಯ ತೋರದೆ ಕ್ಷಣಕ್ಷಣಕೂ ಹೆಜ್ಜೆಗಳ ನಾದ ನಿಲಿಸುವೆಯಾ

ಅಳ್ಳು ಹುರಿದಂತೆ ಮಾತಾಡಿ ಪರರ ಮನ ಕಲಕುವ ಚಪಲಬೇಡ ಈಶ
ಗುಳ್ಳೆ ನರಿಯಂಥ ವರ್ತನೆಯ ಮೋಸದ ದಾರಿಯಲಿ ಚಲಿಸುವೆಯಾ

ಈಶ್ವರಲಿಂಗ ಸಂಪಗಾವಿ ಕಕ್ಕೇರಿ. ೧೮-೧೧-೨೦೨೩

Back To Top