ಡಾ ಸುರೇಶ ನೆಗಳಗುಳಿಯವರ ಗಜಲ್

ಕಾವ್ಯ ಸಂಗಾತಿ

ಡಾ ಸುರೇಶ ನೆಗಳಗುಳಿಯವರ ಗಜಲ್

ಬೇಸರಾಗಿದೆ ದಾರಿ ದೀಪ ಉರಿಯುವುದಿಲ್ಲ ನನ್ನವಳು ಇಲ್ಲವಲ್ಲ
ಕತ್ತಲಲಿ ತಾರೆಯನು ಹುಡುಕಿ ಸೋತಿಹೆನಲ್ಲ ನನ್ನವಳು ಇಲ್ಲವಲ್ಲ

ನೆನಪುಗಳ ಸುರುಳಿಗಳು ಬಿಚ್ಚ ತೊಡಗಿದವಲ್ಲ ಯಾಕಾಯ್ತ ಹೀಗೆ ಹೇಳಿ
ತಲೆಯೊಳಗೆ ಇದ್ದದ್ದು ಎಲ್ಲವೂ ಹೋಯ್ತಲ್ಲ ನನ್ನವಳು ಇಲ್ಲವಲ್ಲ

ಕೆಲವು ಹೂಗಳು ಕೆಲವು ಕಾಲ ಮಾತ್ರ ಅರಳುವವಲ್ಲ ರಾತ್ರಿ ರಾಣಿಯಂತೆ
ಮುದುಡಿ ಮುನಿದಂತಿರುವ ಭಾವ ಕಾಣುವುದಲ್ಲ ನನ್ನವಳು ಇಲ್ಲವಲ್ಲ

ಮೇಲೆ ಆಗಸದಲ್ಲಿ ಬಲುದೂರ ಮಿಣುಕಿತ್ತು ಭ್ರಮೆ ಪಡುವ ಹಾಗೆ ಅವಳೆಂದು
ಬರಿದೆ ಮಿಂಚುವ ಹುಳವು ಎಂದೆ ತೋರುವುದಲ್ಲ ನನ್ನವಳು ಇಲ್ಲವಲ್ಲ

ಕತ್ತಲಾದಂತಿಹುದು ಗ್ರಹಣ ಹಿಡಿದಂತಾಗಿ ಅಡಗಿರುವ ರೇಶ್ಮೆ ಹುಳವಾದೆ
ಸುರೇಶನೆಂದನು ನಯನ ಮಂಪರಾಗುವುದಿಲ್ಲ ನನ್ನವಳು ಇಲ್ಲವಲ್ಲ


ಡಾ ಸುರೇಶ ನೆಗಳಗುಳಿ

Leave a Reply

Back To Top