ಸುಕುಮಾರ ಗೈರ್ ಮುರದಫ್ ಗಜ಼ಲ್

ಕಾವ್ಯ ಸಂಗಾತಿ

ಸುಕುಮಾರ

ಗೈರ್ ಮುರದಫ್ ಗಜ಼ಲ್

ಮಂಜು ಕರಗಿ ನೀರು ಬಟ್ಟಲಾಗಿದೆ ಒಣಗಲೊಲ್ಲದ ಚಕ್ಷುಗಳು
ಯಂತ್ರೋಪಕರಣಗಳ ಆರ್ಭಟಕೆ ನಲುಗಿವೆ ನೊಗಕಾಣದ ಬಂಡಿ ರಾಸುಗಳು

ಕಾರಣವ ಹುಡುಕದಾದೆ ಆಧುನಿಕತೆಯ ಲಾಸ್ಯವೋ ಪಾರಂಪರ್ಯತೆಯ ಹಾಸ್ಯವೋ
ಸ್ವಾಭಾವಿಕತೆ ನಶಿಸಿ ಕೃತಕ ಭಾವನೆಗಳ ಆಗರವಾಗಿವೆ ಕಳೆಗುಂದಿದ ಮೊಗಗಳು

ಹೃನ್ಮನಗಳು ಹುಟ್ಟಬೇಕು ನಾಡ ಸೊಗಡನ್ನು ಸೆರೆ ಹಿಡಿಯಲು
ಜಾಡು ಸಿಗದ ಹಾಗೆ ಹಬ್ಬಿವೆ ಅರ್ಥಹೀನ ಅನ್ವೇಷಣೆಗಳು

ತಳಹಿಡಿದ ಅನ್ನವಾಗಿದೆ ಬೆಂದು ಅರಳಬೇಕಾದ ಗ್ರಾಮೀಣ ವೈಶಿಷ್ಯ
ನಖ ಇಲ್ಲದ ಬಗ್ಗಗಳಾಗಿವೆ ಮೌಢ್ಯತೆಯನು ಸಹಿಸುತ್ತಿರುವ ಮಿಕಗಳು

ಕಾಲಚಕ್ರವೇ ತಿಳಿಸುವುದೇನೋ ಬದಲಾವಣೆಯ ವಕ್ರ ಪರಿಣಾಮಗಳನು ಕುಮಾರ
ಗಾಡಿಚಕ್ರ ತುಕ್ಕಿಡಿಯದ ಹಾಗೆ ಸಂಬಾಳಿಸುತ್ತಿರುವರು ಹೈರಾಣಾದ ಸುಮನಗಳು


ಸುಕುಮಾರ

Leave a Reply

Back To Top