ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-6 ಹೌರಾ ಬ್ರಿಜ್ ಹತ್ರ ಬಂದು ನಿಂತು ಸ್ವಲ್ಪ ಹೊತ್ತು ಫೋಟೊ ಶೂಟ್ ಎಲ್ಲಾ ಆಗುವಾಗ, ಅಲ್ಲಿವರೆಗೆ ಸರ್ಕಸ್ ಮಾಡಿ ಬಂದಿದ್ದು ಸಾಕಾಗಿ ಹೋಯ್ತೇನೊ. ಇನ್ನು ಸಾಕು. ವಾಪಸ್ ಹೋಗೋಣ ಅಂದರು ಸತೀಶ್. ನೀರಿನಲ್ಲಿ ನಕ್ಷತ್ರ ಮೀನು, ಜೆಲ್ಲಿ ಮೀನು ಇನ್ನೇನೇನೊ ನೋಡುತ್ತಾ ಮಕ್ಕಳು ಮುಂದೆ ಹೋಗಿದ್ದರು.ನೀವು ಮುಂದೆ ಹೋಗಿ ನೋಡಿ ಬನ್ನಿ. ನಾವಿಲ್ಲೇ ಕೂತಿರ್ತೇವೆ ಎಂದು ಸರಸ್ವತಿಗೆ ಹೇಳಿದೆ. ಅಲ್ಲೇ ಒಂದು ಬಂಡೆಯ ಮೇಲೆ ಕೂತು ಸಮುದ್ರ ನೋಡುತ್ತಾ ಇದ್ದಾಗ ನಮ್ಮ ಮ್ಯಾನೇಜರ್ ಬಂದು, ನೀವಿಲ್ಲೇ ಇದ್ದೀರಾ? ಮುಂದೆ ಹೋಗಿ ಬನ್ನಿ ಸರ್ ಎಂದು ಹೇಳಿದರು. ಅವರಿಗೆ ಆಗ್ತಿಲ್ಲ. ಅದಕ್ಕೆ ಇಲ್ಲೇ ಕೂತೆವು ಅಂದೆ. ಯಾಕೆ? ಏನಾಯ್ತು? ಎಂದು ಗಾಬರಿಯಾದರು. ಏನಿಲ್ಲ. ಈಗ ಏನೂ ಆಗಿದ್ದಲ್ಲ. ಒಂದೂವರೆ ವರ್ಷದ ಹಿಂದೆ ಬ್ರೈನ್ ಸ್ಟ್ರೋಕ್ ಆದ ವಿಷಯ ಹೇಳಿದೆ. ನನಗೆ ಗೊತ್ತೇ ಆಗಿಲ್ಲ. ನೀವು ಮೊದಲೇ ಹೇಳಿದ್ದರೆ ನಾನಿಲ್ಲಿ ಅವರ ಜೊತೆ ಇದ್ದು ನೋಡಿಕೊಳ್ತಾ ಇದ್ದೆ. ನೀವು ಹೋಗಿ ಬರಬಹುದಿತ್ತು, ಈಗ ಹೋಗಿ ನಾನಿಲ್ಲಿರ್ತೇನೆ ಅಂದರು. ಅಷ್ಟರೊಳಗೆ ಎಲ್ಲರೂ ವಾಪಸ್ ಬರುತ್ತಾ ಇದ್ದರು. ಅಲ್ಲೊಂದಿಷ್ಟು ಹೊತ್ತು ಮತ್ತೆ ಫೋಟೊ ಶೂಟಿಂಗ್ ಆಯಿತು. ನಂತರ ನಾವು ಹೋಗಿದ್ದು ಲಕ್ಷ್ಮಣಪುರ ಬೀಚ್ ಗೆ. ಸೂರ್ಯ ಮುಳುಗೋದನ್ನು ನೋಡಲು ಅಲ್ಲಿ ತುಂಬಾ ಜನ ಬರ್ತಾರೆ. ಸಂಜೆ ಐದೂವರೆಗೆ ಸೂರ್ಯಾಸ್ತ. ನಾವು ಬೇಗ ಹೋಗಿ ಕೂತರೆ ಒಳ್ಳೆಯ ದ್ರಶ್ಯ ನೋಡಲು ಸಿಗುತ್ತೆ ಅಂತ ಮತ್ತೆ ಬಸ್ಸಿನಲ್ಲಿ ನೀಲ್ ದ್ವೀಪದ ಪಶ್ಚಿಮಕ್ಕಿರುವ ಆ ಬೀಚ್ ತಲುಪುವಾಗ ಐದು ಗಂಟೆ. ಸಣ್ಣ ಚಿರೋಟಿ ರವೆಯಂತ ಮರಳು, ಪುಸ್ ಪುಸ್ ಜಾರುತ್ತಾ ಹೆಜ್ಜೆ ಇಟ್ಟಲ್ಲೇ ಇದ್ದ ಹಾಗೆ, ಮುಂದೆ ಸಾಗುತ್ತಲೇ ಇಲ್ಲ. ಅಂತೂ ಹೋಗಿ ಸೂರ್ಯಾಸ್ತ ಆಗುವ ಜಾಗಕ್ಕೆ ಹೋಗಿ ಸೇರಿದೆವು. ಕಲ್ಲಿನ ಬೆಂಚ್ ತರ ಮಾಡಿ ಇಟ್ಟಿದ್ದಾರೆ. ಜಾಗ ಸಿಕ್ಕಿದಲ್ಲಿ ಕೂತೆವು. ಪಕ್ಕದಲ್ಲಿ ಚಾ ಅಂಗಡಿ. ಯಾವತ್ತೂ ಚಾ ಕುಡಿಯದ ನನಗೆ ಆವತ್ತು ಚಹಾದ ಪರಿಮಳ ತುಂಬಾ ಇಷ್ಟವಾಗಿ ಎಲ್ಲರೊಂದಿಗೆ ನಾನೂ ಚಹಾ ಕುಡಿದೆ. ಇನ್ನೂ ಹತ್ತು ಹದಿನೈದು ನಿಮಿಷ ಬಾಕಿ ಇತ್ತು. ನಮ್ಮ ಜೊತೆಯಲ್ಲಿ ಬಂದವರಲ್ಲಿ ನವವಿವಾಹಿತ ಜೋಡಿ ಒಂದಿತ್ತು. ನಮ್ಮ ಮಕ್ಕಳಿಗೆ ಈ ಬೀಚ್ ಲ್ಲಿ ಅವರಿಬ್ಬರೂ ಸ್ನೇಹಿತರಾದರು. ಎಲ್ಲರೂ ಜೊತೆ ಸೇರಿ ನಗುತ್ತಾ ಹರಟುತ್ತಾ ಹಾಯಾಗಿ ಸಮುದ್ರದ ಬಳಿ ಇದ್ದರು. ಆ ಜಾಗದಲ್ಲಿ ಸಮುದ್ರ ಸ್ವಲ್ಪ ಆಳವಾಗಿದೆ, ತುಂಬಾ ಮುಂದೆ ಹೋಗೋದೆಲ್ಲ ಬೇಡ. ಸೂರ್ಯಾಸ್ತ ನೋಡಿದ ಕೂಡಲೇ ರೆಸಾರ್ಟ್ ಗೆ ಹೊರಡೋದು ಎಂದು ಬರುವಾಗ ಬಸ್ಸಿನಲ್ಲೇ ಹೇಳಿದ್ದರು. ಸೂರ್ಯ ಉರಿಯುತ್ತಾ ಇದ್ದವನೇ.. ಇದ್ದಕ್ಕಿದ್ದ ಹಾಗೆ ಸುತ್ತಲೂ ಆಕಾಶ ಕೆಂಪು ಕೆಂಪಾಗಿ ಮೆಲ್ಲ ಮೆಲ್ಲನೆ ಆ ಕೆಂಪಿನೊಳಗೆ ಜಾರುತ್ತಾ ಸಮುದ್ರವನ್ನೂ ಕೆಂಪಾಗಿಸುತ್ತಾ.. ಸಮುದ್ರದ ನೀರು ನೀಲಿ ಹಸುರಿನ ಜೊತೆ ಕೆಂಪನ್ನೂ ಸೇರಿಸಿ ವರ್ಣರಂಜಿತ. ಅಬ್ಬಾ ನೋಡಲು ಕಣ್ಣುಗಳೇ ಸಾಲುವುದಿಲ್ಲ! ನೋಡನೋಡುತ್ತಿದ್ದಂತೆಯೇ ಸೂರ್ಯ ಸಮುದ್ರದೊಳಗೆ ಕರಗಿಯೇ ಹೋದ. ನೋಡಲು ಕೂತವರ ಮುಖದ ಮೇಲಿನ ಭಾವನೆಗಳ ಜೊತೆ ಆಕಾಶದ ರಂಗೂ ಸೇರಿ ಸುತ್ತಮುತ್ತೆಲ್ಲ ಕೆಂಪಾದವೋ ಎಲ್ಲಾ ಕೆಂಪಾದವೋ.. ಆ ನೀಲಿ ಸಾಗರ, ಸುತ್ತಲಿದ್ದ ಹಸುರು ಮರಗಳು, ಕೂತ ನಾವಷ್ಟೂ ಜನರೂ ಕೆಂಪಾದೆವು!! ಸಂಜೆಯಾ ರಾಗಕೆ ಬಾನು ಕೆಂಪೇರಿದೆ!! ಅಕ್ಷರಶಃ ಕೆಂಪೇರಿತ್ತು. ಎದ್ದು ಬರಲು ಯಾರಿಗೂ ಮನಸ್ಸಿಲ್ಲ.ಹಾಗೇ ಕಾಲೆಳೆದು ನಡೆದು ಬರುವಾಗ ಮಸುಕು ಕತ್ತಲಲ್ಲಿ ಕೆಂದಾಳೆ ಸೀಯಾಳವನ್ನು ಮಾರುತ್ತಾ ನಿಂತವನನ್ನು ದಾಟುವಾಗ ಒಮ್ಮೆಲೇ ಎಲ್ಲರಿಗೂ ಎಳನೀರು ಕುಡಿಯುವ ಬಯಕೆಯಾಯಿತು. ಅದ್ಭುತ ರುಚಿಯ ಆ ಕೆಂದಾಳೆಯ ನೀರು ಒಂದೇ ಚಿಟಿಕೆ ಉಪ್ಪು ಬೆರೆಸಿದ ಹಾಗೆ ಇತ್ತು. ನಮ್ಮನ್ನು ನೋಡಿ ಇನ್ನೂ ಕೆಲವರು ಸೇರಿದರು. ನೋಡ ನೋಡುತಿದ್ದಂತೆ ಅವನ ಸೈಕಲಲ್ಲಿದ್ದ ಅಷ್ಟೂ ಎಳನೀರು ಮಾರಾಟವಾಗಿ ಹೋಯಿತು. ಬಸ್ಸು ಹತ್ತುವುದರೊಳಗೆ ದೊಡ್ಡವಳು.. ಅಮ್ಮಾ ಅಮ್ಮಾ ಅಮ್ಮಾ ನೋಡಿಲ್ಲಿ ಇವಳು ಜೆನಿಶಾ.. ಇದು ಇವಳ ಗಂಡ ಪ್ರವೀಣ್. ಎಂದು ಪರಿಚಯ ಮಾಡಿ ಕೊಟ್ಟಳು.ಶ್… ಏನಿದು.. ಇದು, ಗಂಡ. ಹಾಗೆಲ್ಲಾ ಅನ್ನಬಾರದು ಅಂದೆ.ಆಯ್ತಮ್ಮಾ ನೀನು ಕೂತ್ಕೊ ಎಂದು ಅವರ ಹರಟೆಯಲ್ಲಿ ಅವರು ಮಗ್ನರಾದರು. ಅಷ್ಟರವರೆಗೆ ಇಬ್ಬರು ಹುಡುಗಿಯರು ಒಬ್ಬ ಹುಡುಗ ಒಬ್ಬರಿಗೊಬ್ಬರು ಕೀಟಲೆ ಮಾಡಿಕೊಂಡಿದ್ದವರಿಗೆ ಈಗ ಇನ್ನಿಬ್ಬರು ಸೇರಿ ಅವರ ಲೋಕವೇ ಬೇರೆಯಾಯ್ತು. ಈ ರೆಸಾರ್ಟ್ ತುಂಬಾ ದೊಡ್ಡದಾಗಿದ್ದು ಪ್ರತ್ಯೇಕ ಕಾಟೇಜ್ ಗಳು ತುಂಬಾ ಚೆನ್ನಾಗಿದ್ದವು. ಸುತ್ತಲೂ ಮರಗಿಡಗಳು, ನಮ್ಮನ್ನು ಬಾರ್ಜಲ್ಲಿ ಕರೆದುಕೊಂಡು ಬಂದು ಹೌರಾ ಬ್ರಿಜ್ ನೋಡಲು ಹೋದಾಗ ನಮ್ಮ ಲಗ್ಗೇಜ್ ಗಳು ಇಲ್ಲಿ ಈ ರೆಸಾರ್ಟಲ್ಲಿ ಬಂದು ಕೂತಿದ್ದವು. ನಮ್ಮ ನಮ್ಮ ಕಾಟೇಜ್ ಯಾವುದೆಂದು ನಮಗೆ ತಿಳಿಸಿ, ನಮ್ಮ ಲಗ್ಗೇಜ್ ಗಳನ್ನು ಅಲ್ಲಿನ ಹುಡುಗರು ತಂದಿರಿಸಿದರು. ನಾವೆಲ್ಲಾ ಮತ್ತೊಮ್ಮೆ ಸ್ನಾನ ಮಾಡಿ ಶುಚಿಯಾಗಿ ಎಂಟು ಗಂಟೆಗೆ ರೆಸ್ಟೋರೆಂಟ್ ಗೆ ಬರಬೇಕು ಎಂದು ಹೇಳಿದ್ದರಿಂದ ಅಲ್ಲೇ ಹೋಗಿ ಕೂತೆವು. ಮಾರನೆ ದಿನದ ಕಾರ್ಯಕ್ರಮದ ಬಗ್ಗೆ ತಿಳಿಸಲು ರಾಕೇಶ್ ಮತ್ತು ದರ್ಶನ್ ನಿಂತಿದ್ದರು.ನಾಳೆ ನೀಲ್ ಐಲ್ಯಾಂಡ್ ಲ್ಲಿರುವ ಡೈವಿಂಗ್ ಸ್ಪಾಟ್ ಲ್ಲಿ ಸ್ಕೂಬಾ ಡೈವಿಂಗ್, ಸ್ನೊರ್ಕ್ಲಿಂಗ್, ಗಾಜಿನ ತಳದ ದೋಣಿಯಲ್ಲಿ ಸಮುದ್ರಯಾನ ಮುಂತಾದ ಚಟುವಟಿಕೆಗಳಿಗಾಗಿ ಕರೆದುಕೊಂಡು ಹೋಗುತ್ತೇವೆ. ಸ್ಕೂಬಾ ಡೈವಿಂಗ್ ಮಾಡುವಆಸಕ್ತಿ ಉಳ್ಳವರು ತಯಾರಾಗಿರಿ. ಮದ್ಯಾಹ್ನದವರೆಗೆ ಸಮುದ್ರದ ಬಳಿ ಕಾಲ ಕಳೆದು ಊಟದ ನಂತರ ಮತ್ತೆ ನಾವು ಹಡಗಿನಲ್ಲಿ ಪೋರ್ಟ್ ಬ್ಲೇರ್ ಗೆ ಹೋಗುವವರಿದ್ದೇವೆ ಎಂದು ತಿಳಿಸಿದರು. ರಾತ್ರಿ ಒಳ್ಳೆಯ ನಿದ್ರೆ ಅತೀ ಅವಶ್ಯಕ, ಸಾಕಷ್ಟು ನೀರು ಕುಡಿಯುತ್ತಾ ಇರಿ. ಮತ್ತು ನಾಳೆ ಬೆಳಗಿನ ಉಪಹಾರದಲ್ಲಿ ಎಣ್ಣೆ ಪದಾರ್ಥವನ್ನು ಸೇವಿಸಬೇಡಿ. ಬ್ರೆಡ್, ಬನ್ ಮತ್ತು ಹಣ್ಣುಗಳನ್ನು ಸೇವಿಸಿದರೆ ಒಳ್ಳೆಯದು ಎಂದು ಸೂಚನೆಗಳನ್ನು ಕೊಟ್ಟರು. ಬೆಳಿಗ್ಗೆ ನಿಗದಿತ ಸಮಯಕ್ಕೆ ತಯಾರಾಗಿ ನಮ್ಮ ಸಾಮಾನುಗಳ ಜೊತೆಗೆ ರೆಸ್ಟೋರೆಂಟ್ ಗೆ ಬಂದು ಉಪಹಾರ ಸೇವಿಸಿ ಲಗ್ಗೇಜ್ ಗಳನ್ನು ಅಲ್ಲಿಯೇ ಬಿಟ್ಟು ನಾವೆಲ್ಲರೂ ಬಸ್ಸಿನಲ್ಲಿ ಸಮುದ್ರ ತೀರಕ್ಕೆ ಹೋದೆವು. ಈ ನನ್ನ ಪ್ರವಾಸ ಕಥನದಲ್ಲಿ ನಮ್ಮ ಸುಖಪ್ರವಾಸದ ಬಗ್ಗೆ ನಿಮಗೆ ನನಗೆ ನೆನಪಿದ್ದಷ್ಟು ತಿಳಿಸುತಿದ್ದೇನೆ. ಪ್ರವಾಸ ವೆಂದರೆ ಸಾಹಸ ಎಂದುಕೊಂಡವರಿಗೆ ನೀರಸವೆನಿಸಬಹುದು.ಸಾಮಾನ್ಯವಾಗಿ ನಾವು ಸಂಸಾರದ ಏಕತಾನತೆಯಿಂದ ಬಿಡುಗಡೆ ಹೊಂದಲು ಒಂದಿಷ್ಟು ಸಮಯವನ್ನು ಬೇರೆ ವಾತಾವರಣದಲ್ಲಿ ಕಳೆಯಲು ಎಂದು ಹೋಗುತ್ತೇವೆ. ಆದರೆ ಬಂದ ಮೇಲೆ ಹೋದ ಖುಷಿಗಿಂತ ಕಿರಿಕಿರಿಯೇ ಜಾಸ್ತಿ ಅನಿಸಿ, ಯಾಕಾದರೂ ಹೋಗಬೇಕಿತ್ತೋ! ಅನಿಸುವುದೂ ಇದೆ. ನಾವು ಅಂಡಮಾನ್ ಗೆ ಹೋಗಿ ಬಂದು ಒಂದು ವರ್ಷದ ಮೇಲಾಯ್ತು. ಬಂದ ಕೂಡಲೇ ಬರೆಯಬೇಕು ಎಂದುಕೊಂಡಿದ್ದೆ. ಏನು ಬರೆದರೂ ನಮ್ಮ ಮಧುರ ಅನುಭವಕ್ಕಿಂತ ಸಪ್ಪೆ ಅನಿಸುತಿತ್ತು. ಹಾಗಾಗಿ ಕೈ ಬಿಟ್ಟಿದ್ದೆ. ಅದಾದ ಸ್ವಲ್ಪ ದಿನಕ್ಕೆ ಕೊರೊನಾ, ಲಾಕ್ ಡೌನ್ ಎಂದು ಬೇರೆಯೇ ಪ್ರಪಂಚದಲ್ಲಿದ್ದಂತೆ ದಿನ ಕಳೆದ ಮೇಲೆ ಅಂಡಮಾನ್ ನೆನಪು ಮರೆತೇ ಹೋಗಿತ್ತು. ಇತ್ತೀಚೆಗೆ ರೇಖಾ ಗೌಡ ಅವರು ಪೂರ್ಣ ಚಂದ್ರ ತೇಜಸ್ವಿಯವರ ಅಂಡಮಾನ್ ಪ್ರವಾಸ ಮತ್ತು ನೈಲ್ ಮಹಾನದಿ ಎಂಬ ಪುಸ್ತಕ ಓದಿ ಅಂಡಮಾನ್ ಬಗ್ಗೆ ಬಹಳ ಆಸೆಯಿಂದ ಬರೆದಿದ್ದರು. ಆಗ ನಾವು ಹೋಗಿ ಬಂದ ವಿಷಯ ಹೇಳಿದ್ದೆ ಅವರಿಗೆ. ನೀವು ನಿಮ್ಮ ಅನುಭವ ಬರೆಯಿರಿ ಎಂದು ತುಂಬಾ ಒತ್ತಾಯಿಸಿದರು. ಬರೆಯಲು ಶುರು ಮಾಡಿದಾಗ ಏನೂ ಸರಿಯಾಗಿ ನೆನಪಿರಲಿಲ್ಲ. ಆಮೇಲಾಮೇಲೆ ಒಂದೊಂದೇ ನೆನಪಾಗಲು ತೊಡಗಿತು. ನಾನೂ ಐದಾರು ದಿನಗಳಿಂದ ಅಂಡಮಾನ್ ಲ್ಲೇ ಇದ್ದಂತೆ ಅನಿಸುತ್ತಿದೆ. (ಮುಂದುವರೆಯುತ್ತದೆ..) ********* ಶೀಲಾ ಭಂಡಾರ್ಕರ್.
ಅಂಕಣ ಬರಹ ಕಾಲೆಳೆವ ಕೈಗಳೇ ಮೆಟ್ಟಿಲಾಗಲಿ ಸಾಮಾನ್ಯವಾಗಿ ಕಾಲೆಳುವುದು ಅಥಬಾ ಲೆಗ್ ಪುಲ್ಲಿಂಗ್ ಎಂದರೆ ಕೀಟಲೆ ಮಾಡುವುದು ಅಥವಾ ಇಲ್ಲದ್ದನ್ನು ಇದೆ ಎಂದು ತಮಾಷೆಗಾಗಿ ನಂಬಿಸುವುದು ಎಂದರ್ಥವಿದೆ. ಆದರೆ ಇಲ್ಲಿ ಕಾಲೆಳುವುದೆಂದರೆ ಹಗುರ ಅರ್ಥದಲ್ಲಿ ಇಲ್ಲ. ಮುನ್ನಡೆವವನ ದಾರಿಗೆ ಅಡ್ಡ ಹಾಕುವುದಿ ಎಂಬರ್ಥದಲ್ಲಿ ಬಳಸಲಾಗಿದೆ. ಬಹಳ ಹಿಂದೆ ಕೇಳಿದ್ದ ಕಥೆಯೊಂದು ನೆನಪಾಗುತ್ತಿದೆ. ಒಂದು ಕಾಡಿನಲ್ಲಿ ಒಂದು ಬಾವಿ. ಆ ಬಾವಿಯಲ್ಲಿ ನೂರಾರು ಕಪ್ಪೆಗಳು. ಬಾವಿಯನ್ನೇ ಪ್ರಪಂಚವೆಂದುಕೊಂಡು ನೆಮ್ಮದಿಯಿಂದಿದ್ದವು. ಒಮ್ಮೆ ಅಲ್ಲಿದ್ದ ಒಂದು ಕಪ್ಪೆಗೆ ಯಾಕೋ ಆ ಬಾವಿಯ ಜಗತ್ತು ಬೇಸರವೆನಿಸಿ ಒಂದು ಬಾರಿಯಾದರೂ ಹೊರಗೆ ಹೋಗಿ ನೋಡಬೇಕೆನಿಸಿತಂತೆ. ಸರಿ ಅದಕ್ಕಾಗಿ ಇನ್ನಿಲ್ಲದ ಪ್ರಯತ್ನ ಮಾಡತೊಡಗಿತು. ಇಷ್ಟಿಷ್ಟೇ ಎತ್ತರಕ್ಕೆ ಜಿಗಿಯುತ್ತ ಜಿಗಿಯುತ್ತಾ ಹೊರಗೆ ಹಾರಲು ಅಭ್ಯಾಸ ಮಾಡಿಕೊಳ್ಳತೊಡಗಿತು. ಉಳಿದ ಕಪ್ಪೆಗಳು ಮೊದ ಮೊದಲು ಆಶ್ಚರ್ಯದಿಂದ ಅದನ್ನೇ ಗಮನಿಸುತ್ತಿದ್ದವು ನಂತರ ತಾವೂ ಹಾರಲು ಪ್ರಯತ್ನ ಮಾಡತೊಡಗಿದವಂತೆ. ಆದರೆ ಯಾವಾಗ ಅವುಗಳಿಗೆ ಆ ಕಪ್ಪೆ ಬಾವಿಯಿಂದ ಹೊರಗೆ ಹೋಗಲು ಪ್ರಯತ್ನ ಮಾಡುತ್ತಿದೆಯೆಂದು ತಿಳಿಯಿತೋ ಆ ಕ್ಷಣದಿಂದಲೇ ಆ ಕಪ್ಪೆ ಮೇಲೆ ಜಿಗಿಯಲು ಹೋದರೆ ಅದರ ಕಾಲೆಳೆದು ಕೆಳಗೆ ಬೀಳಿಸತೊಡಗಿದವು. ಪ್ರತೀ ಬಾರಿ ಆ ಕಪ್ಪೆ ಮೇಲೆ ಜಿಗಿಯಲು ಪ್ರಯತ್ನಿಸುವುದು, ಪ್ರತೀ ಬಾರಿ ಉಳಿದ ಕಪ್ಪೆಗಳು ಅದರ ಕಾಲೆಳೆದು ಕೆಳಗೆ ಬೀಳಿಸುವುದು…ಕೊನೆಗೂ ಆ ಕಪ್ಪೆಗೆ ಬಾವಿಯಿಂದ ಹೊರಬರಲಾಗದೆ ಅದು ಕೊನೆಯವರೆಗೂ ಕೂಪ ಮಂಡೂಕವೇ ಆಗಿ ಜೀವನ ಸವೆಸಬೇಕಾಯಿತಂತೆ… ಇದು ಈ ಕಥೆಯ ಹಳೆಯ ವರ್ಷನ್ ..ಹೊಸ ವರ್ಷನ್ ನಲ್ಲಿ ಆ ಕಪ್ಪೆ ತನ್ನ ಕಾಲೆಳೆವ ಇತರ ಕಪ್ಪೆಗಳ ಕೈಗಳ ಮೇಲೆ ಬೆನ್ನ ಮೇಲೆ ಜಿಗಿ ಜಿಗಿದು ಆ ಬಾವಿಯಿಂದ ಹೊರಜಿಗಿದು ವಿಶಾಲ ಜಗತ್ತಿಗೆ ಬಂದಿತಂತೆ.. ಕಾಲೆಳೆಯುವುದೂ ,ಕಾಲೆಳೆಸಿಕೊಳ್ಳುವುದೂ ಬರೀ ಮನುಷ್ಯವರ್ಗಕ್ಕಷ್ಟೇ ಸೀಮಿತವಾಗಿಲ್ಲ ಎನ್ನುವುದನ್ನ ಹೇಳುವ ಈ ಕಥೆ ಕಾಲೆವ ಕೈಗಳ ಬಗ್ಗೆ ಎಚ್ಚರಿಕೆಯನ್ನೂ ಕೊಡುತ್ತದೆ. ಏನಾದರೂ ಹೊಸತನ್ನು ಆಲೋಚಿಸುವ , ಮಾಡ ಬಯಸುವ ವ್ಯಕ್ತಿಗೆ ಸುತ್ತಮುತ್ತಲ ಜನರಿಂದ ಪ್ರೋತ್ಸಾಹ ಎಷ್ಟು ಸಿಗುತ್ತದೋ ಅದರ ಎರಡರಷ್ಟು ಕುಹಕ, ಕೊಂಕುಗಳೂ ,ಅಡ್ಡಿ ಆತಂಕಗಳೂ ಎದುರಾಗುತ್ತವೆ. ಮಾತೆ ಸಾವಿತ್ರಿ ಬಾಯಿ ಫುಲೆಯವರು ಅಕ್ಷರ ಕಲಿತು ಇನ್ನಿತರ ಮಹಿಳೆಯರಿಗೆ ಅಕ್ಷರ ಕಲಿಸಲು ಹೋದಾಗ ಅವರದೇ ಸುತ್ತಮುತ್ತಲಿದ್ದ ಜನರು ಹೇಗೆಲ್ಲಾ ಅವರ ಹಾದಿಯಲ್ಲಿ ತಡೆಯಾದರು .ಹೇಗೆ ಆ ಮಾತೆ ಎಲ್ಲವನ್ನೂ ಎದುರಿಸಿ ತನ್ನ ಗುರಿ ತಲುಪಿದರು ಎನ್ನುವುದು ಜಗತ್ತಿಗೆ ಗೊತ್ತಿರುವ ಸಂಗತಿ. ನಾವು ಕೆಲಸ ಮಾಡುವ ಸ್ಥಳವನ್ನೇ ತೆಗೆದುಕೊಳ್ಳೋಣ . ನಮಗೊಪ್ಪಿಸಿದ ಕೆಲಸವನ್ನು ಹೊಸರೀತಿಯಲ್ಲಿ ಮಾಡಲು ಹೋದಾಗ ಓ.ಇವರೇನು ಮಹಾ ಮಾಡುವುದು ನಾವು ಮಾಡದ್ದನ್ನ ಎನ್ನುತ್ತಲೇ ನಿಮಗಿಲ್ಲಿನ ಸಂಗತಿ ಗೊತ್ತಿಲ್ಲ ಬಿಡಿ ..ನಾವು ನಿಮಗಿಂತ ಹಳಬರು ಇದೆಲ್ಲಾ ಮಾಡಿ ಕೈ ಬಿಟ್ಟಾಯಿತು..ಸುಮ್ಮನೇ ಯಾಕೆ ಕಷ್ಟಪಡುತ್ತೀರಿ..ನಮ್ಮಂತಿರಿ ಎನ್ನುವ ಉಚಿತ ಉಪದೇಶದ ಜೊತೆಗೇ ತಮ್ಮಲ್ಲಿನ ಅಸಹನೆ , ಅಸಡ್ಡೆಗಳಿಂದ ಕಾಲೆಳೆಯತೊಡಗುವುದು ತೀರಾ ಸಹಜವಾಗಿಬಿಟ್ಟಿದೆ. ಹೆಣ್ಣು ಬಹುಶಃ ಮೊದಲ ಬಾರಿ ಮನೆಯಿಂದ ಹೊರ ಹೆಜ್ಜೆ ಇಟ್ಟಾಗಲೂ ಅದೆಷ್ಟೋ ಕೈಗಳು ಆಕೆಯ ಕಾಲೆಳೆಯಲು ಅಷ್ಟೇ ಏಕೆ ಕಾಲು ಮುರಿಯಲೂ ಪ್ರಯತ್ನಿಸಿರಲಿಕ್ಕಿಲ್ಲ ! ಅಕ್ಕ, ಭಕ್ತೆ ಮೀರಾ ಇವರೆಲ್ಲಾ ಕಾಲೆಳೆವವರ ನಿರ್ಲಕ್ಷಿಸಿ ಹೊರಟಾಗಲೇ ತಮ್ಮ ಗಮ್ಯ ಸೇರಲಾಗಿದ್ದು. ಕಾಲೆಳೆವ ಕೈಗಳಿಗೆ ಶರಣಾದರೆ ಅಲ್ಲಿಗೆ ನಮ್ಮ ಪಯಣ ಮುಗಿದಂತೆಯೇ ಸರಿ. ಸಾಗುವ ಹಾದಿ ಸರಿಯಿದೆ ,ಅದರಿಂದ ಯಾರಿಗೂ ತೊಂದರೆ ಆಗಲಾರದ ದೃಢ ವಿಶ್ವಾಸವಿದ್ದಲ್ಲಿ ಯಾವ ಕೈಗಳಿಗೂ ಅದನ್ನು ತಡೆಯಲು ಸಾಧ್ಯವಿಲ್ಲ. ಮುನ್ನಡೆವವರ ಕಾಲೆಳೆವುದರಲ್ಲಿ , ಬೀಳಿಸಿ ಬಿದ್ದಾಗ ನೋಡಿ ನಗುವುದರಲ್ಲಿ ಹೆಚ್ಚುಗಾರಿಕೆಯೇನಿಲ್ಲ. ಆದರೆ ಮುನ್ನಡೆವವನಿಗೆ ಈ ಕೈಗಳು ಬಂಧನವಾಗಬಾರದು. ಬದಲಿಗೆ ಪ್ರೇರಣೆಯಾಗಬೇಕು. ಮುನ್ನುಗ್ಗುವ ಛಲ ಮೂಡಿಸಬೇಕು.ಕಾಲೆವ ಕೈಗಳಿಗೆ ,ಮನಸುಗಳಿಗೆ ಆಯಾಸವಾಗಿ ಹಾಗೇ ಪಕ್ಕಕ್ಕೆ ಒರಗುವಂತಾಗಬೇಕು.. ಹಾಗಾಗಿಯೇ… ಅವರಿವರ ಕಾಲೆಳೆದು ಮೇಲೇರುವುದ ತಡೆದು ಬೀಗುವುದು ತರವಲ್ಲವಯ್ಯ ಕಾಲೆಳೆವಕೈಯನೇ ಮೆಟ್ಟಿಲಾಗಿಸಿ ಮೇಲೇರುವರಿಹರು ಕಾಲೆಳೆದವನೀನುಕೂಪದಲೆಕೊಳೆವೆ ನೋಡಯ್ಯ ಎನ್ನುವಂತೆ ಕಾಲೆಳೆವ ಕೈಗಳನ್ನೇ ಮೇಲೇರುವ ಮೆಟ್ಟಿಲಾಗಿಸಿಕೊಳ್ಳುವ ಚಾಕಚಕ್ಯತೆ ನಮಗಿರಬೇಕು. Obstacles are stepping stones , not stopping stones. ಕೂಪಮಂಡೂಕಗಳಿಗೆ ಆ ಕೂಪವೇ ಜಗತ್ತು.ತಾವು ಅದರಿಂದಾಚೆಗೆ ಹೋಗಲು ಪ್ರಯತ್ನಿಸುವುದಿಲ್ಲ ಇತರರನ್ನೂ ಹೋಗಲು ಬಿಡುವುದಿಲ್ಲ. ಹೀನ ಸಂಪ್ರದಾಯಗಳು ,ಮೂಢನಂಬಿಕೆ , ಅರ್ಥವಿಲ್ಲದ ಕಟ್ಟುಪಾಡುಗಳು ಈ ಸಮಾಜದಲ್ಲಿ ಸದಾ ಇದನ್ನೆಲ್ಲ ಮೀರಿ ಹೋಗುವವರ ಸಹಿಸಲಾಗದೆ ಮತ್ತೆ ಮತ್ತೆ ಕೆಳಗೆಳೆಯುತ್ತಲೇ ಇರುತ್ತವೆ. ಅಸಹನೆ, ಅಸಹನೆ, ಕುಹಕ ,ಮತ್ಸರ, ವಿಕೃತಮನೋಭಾವಗಳೆಂಬ ಕಾಲೆಳೆವ ಕೈಗಳಿಗೆ ಬಲಿಯಾದರೆ ಅಲ್ಲಿಗೆ ಕಥೆ ಮುಗಿದಂತೆಯೇ.. ಅದರಲ್ಲಿಯೂ ಹೆಣ್ಣುಮಕ್ಕಳೇ ಹೆಚ್ಚಾಗಿ ಈ ಕಾಲೆಳೆಯುವಿಕೆಗೆ ಬಲಿಯಾಗುವುದು.ಆದಿ ಕಾಲದಿಂದಲೂ ಅವಳನ್ನು ಸಂಕೋಲೆಗಳಲ್ಲಿ ಕಟ್ಟಿ ಹಾಕಿದ್ದಾಗಿದೆ.ಈಗ ಈ ಆಧುನಿಕ ಜಗತ್ತಿನಲ್ಲಿ ಹೆಣ್ಣುಗಳು ತಮ್ಮ ಬುದ್ಧಿಶಕ್ತಿ , ಚಾಕಚಕ್ಯತೆಗಳನ್ನುಪಯೋಗಿಸಿ ಕೊಂಡು ಎಲ್ಲಾ ಅಡೆತಡೆಗಳನ್ನೂ ಮೀರಿ ಎಲ್ಲಾ ರಂಗಗಳಲ್ಲಿಯೂ ತಮ್ಮ ಹೆಜ್ಜೆಯೂರುತ್ತಿರುವಂತಹಾ ಸಂದರ್ಭದಲ್ಲಿಯೂ ಸಹಾ ಅವರನ್ನು ಪ್ರೋತ್ಸಾಹಿಸುವವರಂತೆಯೇ ಹೀಯಾಳಿಸುವ ,ಆತ್ಮ ಸ್ಥೈರ್ಯ ಕುಗ್ಗಿಸುವ ಮನೋಭಾವವನ್ನು ತಮ್ಮ ಮಾತು ಮತ್ತು ಕೃತಿಗಳಲ್ಲಿ ತೋರಿಸುತ್ತಾ ಕಾಲೆಳೆವವರೂ ಇದ್ದಾರೆ. ಆನೆಯೋ ಸಿಂಹವೋ ತನ್ನ ಹಾದಿಯಲ್ಲಿ ತಾನು ನಡೆಯುತ್ತಿದ್ದರೆ ಅವನ್ನು ತಡೆದು ನಿಲ್ಲಿಸಲು ಸಾಧ್ಯವಿದೆಯೆ? ನಮ್ಮ ನಿಲುವೂ ಅದೇ ಆಗಿದ್ದರೆ ಖಂಡಿತಾ ಕಾಲೆಳೆವ ಕೈಗಳು ಸೋಲುತ್ತವೆ ಮತ್ತು ಸೋಲಲೇ ಬೇಕು. ನಮ್ಮ ಹಾದಿಯಲ್ಲಿ ನಾವು ಆತ್ಮವಿಶ್ವಾಸದಿಂದ ಸಾಗೋಣ. ಕಾಲೆಳೆವ ಕೈಗಳ ಸೋಲಿಸೋಣ. ಗೆಲುವಿನ ಹಾದಿಯಲಿ ಹೆಜ್ಜೆಯಿರಿಸುತ್ತ ದೃಢತೆಯೆಂಬ ಹಣತೆಯ ಬೆಳಕನ್ನು ಹರಡೋಣ *********************************** ಶುಭಾ ಎ.ಆರ್ (ದೇವಯಾನಿ) – ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—21 ಆತ್ಮಾನುಸಂಧಾನ ವಿದ್ಯಾರ್ಥಿ ನಿಲಯದಲ್ಲಿ ಪ್ರಪ್ರಥಮ ರಂಗಪ್ರವೇಶ ಅಂಕೋಲೆಯ ಲಕ್ಷ್ಮೇಶ್ವರ ಭಾಗದ ವಿದ್ಯಾರ್ಥಿ ನಿಲಯದಲ್ಲಿ ಮೊದಲ ಮಳೆಗಾಲ ಕಳೆದಿತ್ತು. ನವೆಂಬರ್ ತಿಂಗಳಲ್ಲಿ ವಿದ್ಯಾರ್ಥಿ ನಿಲಯವು ಅಂಬಾರಕೊಡ್ಲ ರಸ್ತೆಗೆ ಹೊಂದಿಕೊಂಡಿದ್ದ ಎರಡಂತಸ್ತಿನ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ವಿಶಾಲವಾದ ಕಂಪೌಂಡಿನಲ್ಲಿರುವ ಕಟ್ಟಡದ ನೆಲ ಅಂತಸ್ತಿನಲ್ಲಿ ಸಾಕಷ್ಟು ವಿಶಾಲವಾದ ಕೋಣೆಗಳು, ಮೊದಲ ಮಹಡಿಯಲ್ಲಿಯೂ ಅಷ್ಟೇ ವಿಶಾಲ ಕೋಣೆಗಳು ತುಂಬಾ ಅನುಕೂಲಕರವಾಗಿದ್ದವು. ಈ ಕಟ್ಟಡದ ಮಾಲಿಕರು ಯಾರೋ ನಮಗೆ ತಿಳಿದಿರಲಿಲ್ಲ. ಆದರೆ ಬಹುಕಾಲದಿಂದ ಈ ಭವ್ಯ ಬಂಗಲೆ ಯಂಥ ಮನೆಯಲ್ಲಿ ಯಾರೂ ವಾಸಿಸುತ್ತಿರಲಿಲ್ಲ. ಸುತ್ತ ಮುತ್ತಲ ಮನೆಯವರು ಇದು ‘ಭೂತ ಬಂಗಲೆ….. ಅಲ್ಲಿ ದೆವ್ವಗಳ ಕಾಟವಿದೆ…’ ಇತ್ಯಾದಿ ಮಾತನಾಡಿಕೊಳ್ಳುತ್ತಿದ್ದರು. ನಾವು ಬಂದು ನೆಲೆಸಿದ ಕೆಲದಿನಗಳವರೆಗೆ ನಮಗೂ ಅಂಥ ಭ್ರಮೆಯ ಅನುಭವಗಳೂ ಆದವು. ಮಧ್ಯರಾತ್ರಿಯ ನಂತರ ಯಾರೋ ಮಹಡಿಯ ಮೇಲೆ ನಡೆದಾಡಿದ… ಏನೋ ಮಾತಾಡಿದ ಸಪ್ಪಳ ಕೇಳಿ ಬಂತಾದರೂ ಕೆಲವೇ ದಿನಗಳಲ್ಲಿ ನಾವು ಅದಕ್ಕೆ ಹೊಂದಿಕೊಳ್ಳುತ್ತ ಕ್ರಮೇಣ ಮರೆತೇ ಬಿಟ್ಟೆವು. (ಈಗ ಅದೇ ಕಟ್ಟಡವನ್ನು ಬೇರೆ ಯಾರೋ ಕೊಂಡು ನವೀಕರಿಸಿ ‘ಹರ್ಷ ನಿವಾಸ’ ಎಂದು ಹೆಸರಿಟ್ಟು ವಾಸಿಸುತ್ತಿದ್ದಾರೆ). ನಾವು ಈ ಕಟ್ಟಡಕ್ಕೆ ಬಂದು ನೆಲೆ ನಿಂತ ಕೆಲವೇ ದಿನಗಳಲ್ಲಿ ವಸತಿನಿಲಯದ ಮೊದಲಿನ ಮೇಲ್ವಿಚಾರಕರಾಗಿದ್ದ ‘ಮಾಜಾಳಿಕರ’ ಎಂಬುವವರು ವರ್ಗವಾಗಿ ಬೇರೆ ಮೇಲ್ವಿಚಾರಕರು ಆಗಮಿಸಿದರು. ಹೊಸದಾಗಿ ನಮ್ಮ ವಸತಿನಿಲಯದ ಮೇಲ್ವಿಚಾರಕರಾಗಿ ಆಗಮಿಸಿದ ಲಿಂಗು ಹುಲಸ್ವಾರ ಎಂಬುವವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಮೂಲತಃ ಕಾರವಾರದವರಾದ ಲಿಂಗು ಹುಲಸ್ವಾರ ತಮ್ಮ ಯುವ ಸ್ನೇಹಿತರ ಸಂಘಟನೆ ಮಾಡಿಕೊಂಡು ಕಾರವಾರದಲ್ಲಿ ರಂಗ ಚಟುವಟಿಕೆಗಳಲ್ಲಿ ಕ್ರಿಯಾಶೀಲರಾಗಿ ಇದ್ದವರು. ಅವರು ನಮ್ಮ ವಿದ್ಯಾರ್ಥಿನಿಲಯದ ವಿದ್ಯಾರ್ಥಿಗಳಲ್ಲಿ ರಂಗಾಸಕ್ತಿಯನ್ನು ಪ್ರೇರೆಪಿಸುವುದಕ್ಕಾಗಿ ಇಲ್ಲಿಯೂ ನಾಟಕವೊಂದನ್ನು ಆಡಿಸುವ ಆಸಕ್ತಿ ತೋರಿದರು. ಆದರೆ ಹಾಸ್ಟೆಲಿನ ಯಾವ ವಿದ್ಯಾರ್ಥಿಯೂ ಈ ಹಿಂದೆ ನಾಟಕಗಳಲ್ಲಿ ಅಭಿನಯಿಸಿದ ಅನುಭವ ಹೊಂದಿರಲಿಲ್ಲ. ಆದರೂ ಲಿಂಗು ಹುಲಸ್ವಾರ ಅವರು ಅಲ್ಪಸ್ವಲ್ಪ ಪ್ರತಿಭೆ ಮತ್ತು ಅಭಿನಯದ ಆಸಕ್ತಿಯುಳ್ಳ ವಿದ್ಯಾರ್ಥಿಗಳನ್ನು ಆಯ್ದು ತರಬೇತಿ ನೀಡುವ ಸಂಕಲ್ಪ ಮಾಡಿದರು. ಕಾರವಾರದ ತಮ್ಮ ಪರಿಚಯದ ಕೆಲವು ಯುವಕರನ್ನು ಕರೆಸಿಕೊಂಡು ನಾಟಕ ನಿರ್ದೇಶನದ ನೆರವು ಪಡೆದರು. ಹಾಸ್ಟೆಲಿನ ಆಯ್ದ ವಿದ್ಯಾರ್ಥಿಗಳ ತಂಡ ‘ಸಂಸಾರ’ ಎಂಬ ಸಾಮಾಜಿಕ ನಾಟಕವೊಂದನ್ನು ಪ್ರಯೋಗಿಸುವುದೆಂದು ತೀರ್ಮಾನವಾಯಿತು. ನನ್ನ ನೆನಪಿನಲ್ಲಿ ಉಳಿದಿರುವಂತೆ ಲಿಂಗು ಹುಲಸ್ವಾರ ಅವರೇ ನಾಟಕದ ಮುಖ್ಯ ಪಾತ್ರ ನಿರ್ವಹಿಸಿದ್ದರು. ಉಳಿದಂತೆ ನಾಗೇಶದೇವ ಅಂಕೋಲೆಕರ, ಲಕ್ಷ್ಮಣ ಹುಲಸ್ವಾರ, ಶಂಕರ ಹುಲಸ್ವಾರ, ಹುಲಿಯಪ್ಪ ನಾಯ್ಕ, ನಾರಾಯಣ ವೆಂಕಣ್ಣ ಆಗೇರ, ಲೋಕಪ್ಪ ಬರ‍್ಕರ್ ಮುಂತಾದವರು ನಾಟಕದಲ್ಲಿ ಪಾತ್ರ ನಿರ್ವಹಿಸಿದ್ದರು. ನನಗೆ ಒಂದು ಹಾಸ್ಯ ಸ್ತ್ರೀ ಪಾತ್ರದಲ್ಲಿ ಅಭಿನಯಿಸುವ ಅವಕಾಶ ನೀಡಿದ್ದರು. ಮಾರುತೇಶ ಬಾಬು ಮಾಂಡ್ರೆ ಎಂಬುವವರು ಬರೆದ ‘ಸಂಸಾರ’ ಎಂಬ ಸಾಮಾಜಿಕ ನಾಟಕವನ್ನು ಬನವಾಸಿಯಲ್ಲಿ ನಾನು ಮೂರನೆಯ ತರಗತಿಯಲ್ಲಿ ಓದುತ್ತಿರುವಾಗ ಗಮನಿಸಿದ್ದೆ. ಬನವಾಸಿಯಲ್ಲಿ ನಮ್ಮ ಗುರುಗಳಾದ ಪಿ.ಜಿ. ಪಾತಃಕಾಲ ಎಂಬುವವರ ನಾಯಕತ್ವದಲ್ಲಿ ಪ್ರಯೋಗಗೊಂಡ ‘ಸಂಸಾರ’ ನಾಟಕದಲ್ಲಿ ನಮ್ಮ ತಂದೆಯವರು ಮುಖ್ಯ ಸ್ತ್ರೀ ಪಾತ್ರಧಾರಿಯಾಗಿದ್ದರು ಎಂಬುದನ್ನು ಹಿಂದೆ ಪ್ರಸ್ತಾಪಿಸಿದ್ದೇನೆ. ಈ ನಾಟಕವು ಅಲ್ಲಿ ಜನಾಗ್ರಹದ ಮೂಲಕ ಎರಡು-ಮೂರು ಬಾರಿ ಪ್ರಯೋಗಗೊಂಡಿತ್ತು. ಹೀಗಾಗಿ ಪ್ರಸ್ತುತ ನಾಟಕದ ಸ್ಥೂಲ ಚಿತ್ರಣವೊಂದು ನನ್ನ ಮನಸ್ಸಿನ ಮೂಲೆಯಲ್ಲಿ ಸುಪ್ತವಾಗಿತ್ತು. ಇಷ್ಟಾಗಿಯೂ ನಾನು ಮೊಟ್ಟ ಮೊದಲ ಬಾರಿಯ ಸ್ತ್ರೀ ಪಾತ್ರ ನಿರ್ವಹಣೆಯಲ್ಲಿ ಸಫಲನಾಗಲಿಲ್ಲ ಎಂಬುದು ನಿಜ. ಮೂಲಭೂತವಾಗಿ ನನ್ನೊಳಗಿರುವ ಸಭಾ ಕಂಪ ಮತ್ತು ಕೀಳರಿಮೆಯ ಕಾರಣದಿಂದ ಅಂಜುತ್ತಲೇ ರಂಗ ಪ್ರವೇಶಿಸಿದ ನಾನು ಸಂದರ್ಭಕ್ಕೆ ಸರಿಯಾಗಿ ಕಂಠಪಾಠ ಮಾಡಿದ ಸಂಭಾಷಣೆಗಳನ್ನು ಒಪ್ಪಿಸಿದ್ದಲ್ಲದೆ ಹಾಸ್ಯ ಪಾತ್ರಕ್ಕೆ ತಕ್ಕಂತೆ ನಟಿಸುವುದು ಸಾಧ್ಯವೇ ಆಗಿರಲಿಲ್ಲ. ಬಹುತೇಕ ನನ್ನ ಸ್ನೇಹಿತರು ಕೂಡ ನನ್ನಂತೆಯೇ ಅಳುಕಿನಿಂದಲೇ ರಂಗ ಪ್ರವೇಶದ ಮೊದಲ ಅನುಭವ ಪಡೆದರಲ್ಲದೆ ನಾಟಕದ ಪಠ್ಯಕ್ಕೆ ನ್ಯಾಯ ನೀಡಲಾಗದೆ ಒಟ್ಟಾರೆ ನಾಟಕವು ಸಾಮಾನ್ಯ ರಂಗ ಪ್ರಯೋಗವಾಗಿಯೇ ಪ್ರದರ್ಶನಗೊಂಡಿತು. ವಿದ್ಯಾರ್ಥಿ ನಿಲಯದ ಎರಡು ವರ್ಷಗಳನ್ನು ಕಳೆಯುವಾಗ ನಾರಾಯಣ ವೆಂಕಣ್ಣ ಆಗೇರ ತನ್ನ ಎಸ್.ಎಸ್.ಎಲ್.ಸಿ ಪರೀಕ್ಷೆ ಮುಗಿಸಿದ ಕಾರಣ ಊರಲ್ಲಿಯೇ ಉಳಿದ. ತನ್ನ ತಂದೆ ತೀರಿಕೊಂಡುದರಿಂದ ಊರಿಗೆ ಹೋದ ಕೃಷ್ಣ ಆಗೇರ ಮರಳಿ ವಿದ್ಯಾರ್ಥಿ ನಿಲಯಕ್ಕೆ ಬಾರದೆ ಹನೇಹಳ್ಳಿಯ ಹೈಸ್ಕೂಲು ಸೇರಿಕೊಂಡ. ಉಳಿದ ನಾವು ಕೂಡ ವಿದ್ಯಾರ್ಥಿ ನಿಲಯದ ಆಶ್ರಯದಿಂದ ಹೊರಬಂದು ಮತ್ತೆ ನಮ್ಮ ನಮ್ಮ ಮನೆ ಸೇರಿಕೊಂಡು ಅಲ್ಲಿಂದಲೇ ಓದು ಮುಂದುವರಿಸಿದೆವು. ****************************************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-5 ಹ್ಯಾವ್ಲೊಕ್ ಲ್ಲಿ ನಮ್ಮ ರೆಸಾರ್ಟ್ ಹಿಂಭಾಗದ ಸಣ್ಣ ಖಾಸಗಿ ಬೀಚ್ ನ ಉದ್ದಕ್ಕೂ ಸರಸ್ವತಿ ಮತ್ತು ನಾನು ಎಷ್ಟು ದೂರ ನಡೆದೆವೋ ವಾಪಸ್ಸು ಬರಬೇಕೆಂದೇ ಅನಿಸಲಿಲ್ಲ. ಮಕ್ಕಳು ಅಲ್ಲಿ ಇಲ್ಲಿ ಓಡಾಡಿಕೊಂಡು ಮೊಬೈಲಲ್ಲಿ, ಕ್ಯಾಮರಾದಲ್ಲಿ ಫೋಟೊ ತೆಗೆದುಕೊಳ್ಳುವುದರಲ್ಲೇ ಮಗ್ನರಾಗಿದ್ದರು. ಗಣೇಶಣ್ಣ ಸತೀಶ್ ಇಬ್ಬರೂ ಅಲ್ಲಿದ್ದ ಬೆಂಚ್ ಮೇಲೆ ಆರಾಮಾಗಿ ಅಲೆಗಳನ್ನು ನೋಡುತ್ತಾ ಕೂತರು. ನಾವು ತಿರುಗಿ ಬಂದರೂ ಮಕ್ಕಳಿಗೆ ರೂಮು ಸೇರಲು ಮನಸ್ಸೇ ಇಲ್ಲ. ಇನ್ನೂ ಸ್ವಲ್ಪ ಇನ್ನೂ ಸ್ವಲ್ಪ ಹೊತ್ತು ಎಂದು ಅಲ್ಲೇ ಇದ್ದುದರಿಂದ ನಾವೂ ಅಲ್ಲೇ ಕೂತು, ಅದು ಇದು ಮಾತು ಹಾಡು ಎಂದು ಹತ್ತೂವರೆಯವರೆಗೆ ಸಮಯ ಕಳೆದು, ಮರುದಿನ ಬೆಳಿಗ್ಗೆ ಎಂಟು ಗಂಟೆಯ ಒಳಗೆ ತಯಾರಾಗಲು ಹೇಳಿದುದರಿಂದ ಮಕ್ಕಳನ್ನು ಹೊರಡಿಸಿ ನಮ್ಮ ನಮ್ಮ ಕಾಟೇಜ್ ಸೇರಿದೆವು. ನಮ್ಮ ಮಕ್ಕಳು ಇಬ್ಬರಿದ್ದುದರಿಂದ ಎಲ್ಲಾ ಕಡೆ, ಅವರಿಗೆ ಪ್ರತ್ಯೇಕ ಕೊಠಡಿ ಅಥವಾ ಕಾಟೇಜ್ ಸಿಗುತಿತ್ತು. ಆದರೆ ಶ್ರೀಪಾದನಿಗೆ ಮಾತ್ರ ಪ್ರತೀ ಸಲವೂ ಅಪ್ಪ ಅಮ್ಮನ ಜೊತೆಯೇ ಅವರ ಕೋಣೆಯೊಳಗೆ ಇನ್ನೊಂದು ಹಾಸಿಗೆ ಹಾಸಿ ಕೊಡುತಿದ್ದರು. ಆ ಒಬ್ಬಳೇ ಬಂದ ಹುಡುಗಿಗೆ ಒಬ್ಬಳಿಗೇ ಒಂದು ಕೋಣೆ. ಇದು ಅನ್ಯಾಯ ಎಂದು ಶ್ರೀಪಾದನಿಗಿಷ್ಟು ಕೀಟಲೆ ಮಾಡುತಿದ್ದರು ಈ ಹುಡುಗಿಯರು. ಇನ್ನೊಮ್ಮೆ ಎಲ್ಲಾದರೂ ಹೋಗುವಾಗ ಅವನ ಟಿಕೇಟ್ ಬೇರೆಯೇ ತಗೊಳ್ಳಿ ಎಂದು ಅವನ ಅಪ್ಪ ಅಮ್ಮನಿಗೆ ಇವರ ಸಲಹೆ. ಪ್ರತಿಯೊಂದು ಕೋಣೆಗೂ ಪ್ರತೀ ದಿನ ಎರಡು ಲೀಟರಿನ ನೀರಿನ ಬಾಟಲ್ ಒದಗಿಸುತಿದ್ದರು. ಬೆಳಗ್ಗಿನ ತಿಂಡಿ ಮತ್ತು ರಾತ್ರಿಯ ಊಟ ನಾವು ಉಳಿದುಕೊಳ್ಳುವ ಹೊಟೇಲ್ ಅಥವಾ ರೆಸಾರ್ಟ್ ಗಳಲ್ಲೇ ಆಗುತಿತ್ತು. ಮದ್ಯಾಹ್ನದ ಊಟವನ್ನು ಆದಷ್ಟು ಒಳ್ಳೆಯ ಹೊಟೇಲ್ ಹುಡುಕಿ ಕರೆದುಕೊಂಡು ಹೋಗುತಿದ್ದರು. ಊಟ ತಿಂಡಿಗೆ ಎಲ್ಲೂ ಯಾವ ತೊಂದರೆಯೂ ಆಗಲಿಲ್ಲ. ಬೆಳಿಗ್ಗೆ ಎದ್ದು ಏಳೂವರೆಗೆ ತಯಾರಾಗಿ ಬೆಳಗಿನ ಉಪಹಾರ ತೆಗೆದುಕೊಂಡು ನಾವು ಹೋಗಲಿದ್ದಿದ್ದು ಅಂಡಮಾನ್ ನಲ್ಲಿ ಮಾತ್ರವಲ್ಲ ಇಡೀ ಏಷಿಯಾದಲ್ಲೇ ಸುಂದರ ರಾಧಾನಗರ್ ಬೀಚ್ ಗೆ. ಅಲ್ಲಿ ಸ್ನಾನ ಮಾಡಲು, ಸಮುದ್ರದಲ್ಲಿ ಆಟವಾಡಲು ಅನುಕೂಲಕರ ವಾತಾವರಣವಿದೆ. ಬಟ್ಟೆ ಬದಲಿಸಲು ವ್ಯವಸ್ಥೆಯೂ ಇತ್ತು. ನಮಗೆ ಅಲ್ಲಿ 12 ರ ವರೆಗೆ ಸಮಯವಿತ್ತು. ಎಲ್ಲರೂ ಮನಸೋ ಇಚ್ಛೆ ಸಮಯ ಕಳೆದರು. ಅಂಡಮಾನಿನ ಸಮುದ್ರದ ಬಗ್ಗೆ ಯೋಚಿಸುವಾಗ ಮೊದಲೆಲ್ಲ.. ಕಾಲಾಪಾನಿ ಎಂಬ ಶಬ್ದವೊಂದು ಭೀಕರವಾಗಿ ಕಿವಿಯೊಳಗೆ ಮೊಳಗುತಿದ್ದುದರಿಂದ ನನಗೇನೋ ಆ ನೀರು ವಿಷಪೂರಿತ, ಗಲೀಜು, ಕರ್ರಗೆ.. ಹೀಗೆ ಏನೇನೋ ಕಲ್ಪನೆಗಳಿದ್ದವು. ಆದರೆ., ಬಂಗಾಳ ಕೊಲ್ಲಿಯ ಸೌಂದರ್ಯಕ್ಕೆ ಸಾಠಿಯೇ ಇಲ್ಲ ಎಂಬುದು ಸ್ವತಃ ನೋಡಿದ ಮೇಲೆ ತಿಳಿಯಿತು. ತಿಳಿ ನೀಲಿ, ತಿಳಿ ಹಸಿರು, ನೀರಿನ ಮೇಲೆ ಬಿಳಿ ನೊರೆಯ ಸಾಲು ಷಿಫಾನ್ ಸೀರೆಯ ಮೇಲೆ ಕಸೂತಿ ಹೊಲಿದಂತೆ ನೋಡಲು ಅತೀ ಸುಂದರ. ತಿಳಿಯಾದ ನೀರು, ಎಲ್ಲೆಲ್ಲೂ ಶುಭ್ರ, ಸ್ವಚ್ಛ, ಸಣ್ಣ ಮರಳು. ಎಳೆ ಬಿಸಿಲಿನ ನಮ್ಮ ಆ ಬೆಳಗಿನ ಸಮಯ. ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತಿತ್ತು. ಎಷ್ಟೇ ವರ್ಣಿಸಿದರೂ ಆ ನೀರಿನ ಸೊಬಗಿನ ಮುಂದೆ ಶಬ್ದಗಳು ಸಪ್ಪೆಯಾಗುತ್ತವೆ. ಹ್ಯಾವ್ಲೊಕಿಂದ ಹತ್ತು ಕಿ.ಮೀಟರ್ ದೂರದ ರಾಧಾನಗರ ಬೀಚ್ ಗೆ ನಮ್ಮನ್ನು ಬಸ್ಸಿನಲ್ಲಿ ಕರೆತಂದಿದ್ದರು. ಸಾವಕಾಶವಾಗಿ ಒಂದಿಷ್ಟು ಸಮಯವನ್ನು ಯಾವುದೇ ಗಡಿಬಿಡಿಗಳಿಲ್ಲದೆ ಕಳೆದೆವು. ಹ್ಯಾವ್ಲೊಕ್ ದ್ವೀಪಕ್ಕೆ ಬರುವವರೆಗೆ ಟೂರ್ ಮ್ಯಾನೇಜರ್ ಜೊತೆ ನಮ್ಮ ಪ್ರವಾಸದಲ್ಲಿ ಜೊತೆಗೂಡಿದ್ದು ನಮ್ಮನ್ನು ಪೋರ್ಟ್ ಬ್ಲೇರ್ ವಿಮಾನ ನಿಲ್ದಾಣದಿಂದ ಕರೆದೊಯ್ಯಲು ಬಂದ ವಿಜಯ್ ಅನ್ನುವ ಹುಡುಗ. ಅಲ್ಲಿಂದ ಮುಂದೆ.. ನಾವು ಹಡಗಿನಲ್ಲಿ ಪ್ರಯಾಣ ಮಾಡಿ ಹ್ಯಾವ್ಲೊಕ್ ದ್ವೀಪಕ್ಕೆ ಬಂದು ತಲುಪಿದಾಗ ಅಲ್ಲಿ ನಮಗೆ ರೆಸಾರ್ಟ್ ಮತ್ತಿತರ ಎಲ್ಲಾ ವ್ಯವಸ್ಥೆ ಮಾಡಿದ್ದು ದರ್ಶನ್. ಮೂಲತಃ ತಮಿಳುನಾಡಿನವರು. ಅವರ ತಂದೆ ಎಷ್ಟೋ ವರ್ಷಗಳ ಹಿಂದಿನಿಂದ ಅಂಡಮಾನ್ ನಲ್ಲಿ ನೆಲೆಸಿ ಟೂರಿಸಂ ನಡೆಸುತಿದ್ದಾರೆ. ಓದು ಮುಗಿಸಿ ದರ್ಶನ್ ಈಗ ಅಪ್ಪನ ಜೊತೆ ಸೇರಿದ್ದಾನೆ. ವ್ಯವಸ್ಥಿತವಾಗಿ, ಪ್ರತಿಯೊಂದು ಸಣ್ಣ ಸಣ್ಣ ವಿಷಯಗಳನ್ನೂ ಮರೆಯದೆ ನಮ್ಮ ಪ್ರವಾಸವನ್ನು ಅತ್ಯಂತ ಸುಖಮಯವಾಗುವಂತೆ ಮಾಡಿದ ಕೀರ್ತಿ ನಿರ್ಮಲಾ ಟ್ರಾವೆಲ್ಸ್ ಜೊತೆಗೆ ವಿಜಯ್ ಮತ್ತು ದರ್ಶನ್ ಅವರದು. ಪೋರ್ಟ್ ಬ್ಲೇರ್ ನಷ್ಟು ಮುಂದುವರಿದಿಲ್ಲವಾದುದರಿಂದ ಈ ಸಣ್ಣ ದ್ವೀಪಗಳಲ್ಲಿ ಇರುವುದರಲ್ಲೇ ಒಳ್ಳೆಯ ಹೋಟೆಲಲ್ಲಿ ಮದ್ಯಾಹ್ನದ ಊಟಕ್ಕೆ ವ್ಯವಸ್ಥೆ ಮಾಡಿಸಿದ್ದರು. ಶುಚಿ-ರುಚಿಯಾದ ಊಟದ ನಂತರ ನಮ್ಮ ಪ್ರಯಾಣ ಮುಂದುವರಿಯಿತು. ನಾವು ಇಂದು ಹೋಗಿ ಸೇರಬೇಕಿರುವುದು ಮತ್ತೊಂದು ದ್ವೀಪಕ್ಕೆ. ಎರಡೂ ದ್ವೀಪಗಳು ಒಂದರಿಂದೊಂದು ಬೇರ್ಪಟ್ಟು ಇರೋದ್ರಿಂದ ಸಮುದ್ರ ಯಾನ ಮಾತ್ರವೇ ಇಲ್ಲಿಯ ಸಂಪರ್ಕ ಸಾಧನ. ಸರಕಾರಿ ಫೆರ್ರಿಯಲ್ಲಿ ನಮ್ಮ ಬಸ್ಸಿನ ಜೊತೆಗೆ ನಮ್ಮ ಪ್ರಯಾಣ ನೀಲ್ ಐಲ್ಯಾಂಡ್ ಗೆ. ನೀಲ್ ಐಲ್ಯಾಂಡ್ ಈಗ ಶಹೀದ್ ದ್ವೀಪವೆಂದು ಮರುನಾಮಕರಣಗೊಂಡಿದೆ. ಬಾರ್ಜ್ ಅಥವಾ ಫೆರ್ರಿಯಲ್ಲಿ ಒಂದೂವರೆ ಗಂಟೆ ಪ್ರಯಾಣ ಮಾಡಿ ನಾವು ನೀಲ್ ದ್ವೀಪದ ಸಮುದ್ರದೊಳಗಿನ ಹವಳದ ಗಿಡಗಳನ್ನು ಮತ್ತು ನೈಸರ್ಗಿಕ ಸೇತುವೆಯನ್ನು ನೋಡಲು ಹೋದೆವು. ನೈಸರ್ಗಿಕವಾಗಿ ಕಲ್ಲುಗಳ ರೂಪದಲ್ಲಿ ಹವಳದ ದಿಂಡಿನಂತಹ ರಚನೆಗಳು ಪ್ರತೀ ಹೆಜ್ಜೆ ಹೆಜ್ಜೆಗೂ ಸಿಗುತಿದ್ದವು. ಉಬ್ಬರವಿಲ್ಲದ ಸಮುದ್ರ ತೀರವದು, ಕಲ್ಲು ಬಂಡೆಗಳಂತ ರಚನೆಗಳು. ಅಲೆಗಳ ಬಡಿತಕ್ಕೆ ನೈಸರ್ಗಿಕವಾಗಿ ಸಮುದ್ರದೊಳಗೆ ಇಂತಹ ಅನೇಕ ಆಕಾರಗಳ ಸೃಷ್ಟಿಯಾಗಿದೆ. ಕಲ್ಲುಗಳ ಮೇಲಿನಿಂದ, ನೀರಿನೊಳಗೆ ತುಂಬಾ ದೂರ ನಡೆದು ಹೋದ ಮೇಲೆ ನೋಡಲು ಸಿಕ್ಕಿದ್ದು ಇಂತಹ ಹವಳದ ಕಲ್ಲುಗಳಿಂದಲೇ ರಚಿತವಾದ ನೈಸರ್ಗಿಕ ಸೇತುವೆ. ಪಶ್ಚಿಮ ಬಂಗಾಳಕ್ಕೂ ಅಂಡಮಾನ್ ಗೂ ವಿಶೇಷ ನಂಟು. ಅನೇಕ ವರ್ಷಗಳದು. ಸೆಲ್ಯುಲರ್ ಜೈಲಿನ ಸಂಬಂಧವೆಂದೂ ಹೇಳಬಹುದು. ಬಂಗಾಳದ ಅನೇಕ ಕ್ರಾಂತಿಕಾರಿ ಹೋರಾಟಗಾರರನ್ನು ಶಿಕ್ಷೆಗೆಂದು ಅಂಡಮಾನ್ ಜೈಲಿಗೆ ಖೈದಿಗಳನ್ನಾಗಿ ಕರೆತಂದಿದ್ದರಿಂದ, ಬಂಗಾಳದ ಜನತೆಗೆ ತಮ್ಮ ಪೂರ್ವಜರ ಬಗ್ಗೆ ಅಪಾರ ಹೆಮ್ಮೆ ಮತ್ತು ಗರ್ವ. ಅಂಡಮಾನ್ ದ್ವೀಪ ಬಂಗಾಳದ ಜನತೆಗೆ ತೀರ್ಥಕ್ಷೇತ್ರಕ್ಕೆ ಸಮ. ಈಗಲೂ ಅಂಡಮಾನ್ ದ್ವೀಪ ಸಮೂಹಗಳಲ್ಲಿ ಬಂಗಾಳಿಗಳು ನೆಲೆಯೂರಿದ್ದಾರೆ. ಅಲ್ಲಿಯೇ ತಮ್ಮ ವ್ಯಾಪಾರ, ಕಸುಬುಗಳನ್ನು ಕೈಗೊಳ್ಳುತಿದ್ದಾರೆ. ನೈಸರ್ಗಿಕವಾಗಿ ರಚನೆಯಾದ ಸೇತುವೆಗೆ ಬಂಗಾಳದ ಜನರು ಮೊದಲಿಗೆ ರಬೀಂದ್ರ ಸೇತು ಎಂದು ಕರೆದರು. ಕಾಲಾನಂತರ ಕಲ್ಕತ್ತಾದ ಹೌರಾ ಬ್ರಿಜ್ ಗೆ ಹೋಲಿಸಿ ಇದನ್ನೂ ಹೌರಾ ಬ್ರಿಜ್ ಎಂದೇ ಕರೆಯುತ್ತಾರೆ. – ಅಂಡಮಾನ್ ಆಲ್ಬಂ (ಮುಂದುವರೆಯುವುದು..) ******************** ಶೀಲಾ ಭಂಡಾರ್ಕರ್.
ಅಂಕಣ ಬರಹ ಯಾರಿಗೆ ಯಾರುಂಟು ಯಾರಿಗೆ ಯಾರುಂಟು ಎರವಿನ ಸಂಸಾರ ನೀರ ಮೇಲಣ ಗುಳ್ಳೆ ನಿಜವಲ್ಲ ಹರಿಯೆ.. ಶುದ್ಧ ವೈರಾಗ್ಯ ಮೂಡಿಸುವ ಈ ದಾಸರ ಪದವನ್ನು ಬಹುಶಃ ಹಳೆಯ ತಲೆಮಾರಿನವರು ಅದೆಷ್ಟು ಸಲ ಗುಣುಗುಣಿಸಿರಬಹದೋ ಏನೋ.. ನಿಜವೆ ? ಈ ಪ್ರಪಂಚದಲ್ಲಿ ಯಾರಿಗೂ ಇಲ್ಲವೆ? ಲೌಕಿಕ ವ್ಯಾಪಾರಿಗಳಾದ ನಾವುಗಳು ಕಟ್ಟಿಕೊಂಡ ಸಂಸಾರ , ಕೈಕೊಂಡ ವೃತ್ತಿ , ಗೆಳೆಯರು ,ಬಂಧುಗಳು ಇವರೆಲ್ಲ ಏನೂ ಅಲ್ಲವೆ? ನೀರಿನೊಳಗಿದ್ದರೂ ನೀರನ್ನು ಸೋಕಿಸಿಕೊಳ್ಳದ ಕಮಲಪತ್ರದಂತಹ ಬದುಕು ಸಾಮಾನ್ಯರಿಗೆ ಸಾಧ್ಯವಾಗುತ್ತದಾ? ಈ ಮಾತುಗಳು ,ದಾಸವಾಣಿ ಇವೆಲ್ಲ ಇಂದಿನ ತಂತ್ರಜ್ಞಾನದ ಯುಗದ ಜನತೆಗೆ ಬೇಕೆ? ನಾವು ಬದುಕುವುದು ಕೇವಲ ನಮಗಾಗಿ ಎಂದರೆ ತಮ್ಮ ಮಕ್ಕಳಿಗಾಗಿ ..ಮುಂದಿನ ಮೂರು ತಲೆಮಾರುಗಳಿಗಾಗಿ ಆಸ್ತಿ ಸಂಪಾದಿಸುವ ಜನರೆಲ್ಲ ಕೇವಲ ತಮಗಾಗಿಯೇ ಬದುಕಿದ್ದಾರೆಯೆ? ನಾನು ಹೋದರೂ ನನ್ನ ಮಕ್ಕಳು ಸುಖದಿಂದ ಇರಲಿ ಎನ್ನುವ ನಿಜ ಕಾಳಜಿ, ಅಥವಾ ನನ್ನ ಮುಂದಿನ ಹತ್ತು ತಲೆಮಾರಿನವರಿಗೆ ಕಷ್ಟ ಬರಬಾರದು ಎಂಬ ದುರಾಸೆ ಮಿಶ್ರಿತ ಕಾಳಜಿಯಿರುವುದರಿಂದಲೇ ಅಲ್ಲವೆ ಬ್ಯಾಂಕ್ ಡಿಪಾಸಿಟ್ , ಒಡವೆ, ಮನೆ , ಫ್ಲಾಟ್, ಜಮೀನು ಎಂದೆಲ್ಲ ಗಳಿಸುತ್ತಿರುವುದು. ಇರುವುದೊಂದೇ ಬದುಕು , ಈ ಬದುಕು ನನ್ನದು ಮಾತ್ರಾ ಇತರರ ಬಗ್ಗೆ ನಾನು ಯೋಚಿಸುವುದಿಲ್ಲ ಎನ್ನುವುದು , ನನ್ನ ಕುಟುಂಬಕ್ಕಾಗಿ ನಾನು ನನ್ನ ಆಸೆಗಳನ್ನು ತ್ಯಾಗ ಮಾಡುವುದಿಲ್ಲ ಎನ್ನುವುದು ಒಂದು ರೀತಿಯಲ್ಲಿ ಸ್ವಾರ್ಥಪರತೆಯಾಗುತ್ತದೆ. ಒಂದು ಕುಟುಂಬ ವ್ಯವಸ್ಥೆಯಲ್ಲಿರುವ ಗಂಡು ಹೆಣ್ಣು ಇಬ್ಬರಿಗೂ ಸಮಾನ ಜವಾಬ್ದಾರಿಗಳಿರುತ್ತವೆ. ಒಂದು ವೇಳೆ ಗಂಡು ತನ್ನ ಜವಾಬ್ದಾರಿ ಮರೆತರೂ ಹೆಣ್ಣು ಆ ಕುಟುಂಬಕ್ಕಾಗಿ ತನ್ನೆಲ್ಲ ಶಕ್ತಿ ಧಾರೆಯೆರೆಯುತ್ತಾಳೆ. ನಾನಿಲ್ಲದಿದ್ದರೂ ಜಗತ್ತು ಹಾಗೇ ನಡೆಯುತ್ತದೆ.ನಾನಿಲ್ಲವಾದರೂ ನನ್ನ ಪ್ರೀತಿ ಪಾತ್ರರು ಹಾಗೇ ಬದುಕುತ್ತಾರೆ ..ಹಾಗಿದ್ದಾಗ ನಾನೇಕೆ ನನ್ನ ಆಸೆ , ಗುರಿ ಏನೆಲ್ಲ ತ್ಯಾಗ ಮಾಡಬೇಕು ಎಂಬ ಯೋಚನೆಗಳಿರುವವರೂ ನಮ್ಮ ಮಧ್ಯೆ ಇಲ್ಲದಿಲ್ಲ. ಈ ಭೂಮಿ ನಮಗಾಗಿ ಅದೆಷ್ಟಲ್ಲಾ ಹೂ ,ಹಣ್ಣು ಹಸಿರು ಕೊಟ್ಟು ಆಧಾರವಾಗಿದೆಯಲ್ಲ.ಅದೂ ನನಗೇಕೆ ಬೇಕು ಇವೆಲ್ಲ ..ನನಗಿಷ್ಟ ಬಂದಂತೆ ನಾನಿರುವೆ ಎಂದು ಸುಮ್ಮನಿದ್ದರೆ ನಮ್ಮ ಗತಿ ದೇವರೇ ಗತಿ! ಇಟ್ಟರೆ ಸಗಣಿಯಾದೆ ತಟ್ಟಿದರೆ ಉರುಳಾದೆ ಸುಟ್ಟರೆ ನೊಸಲಿಗೆ ವಿಭೂತಿಯಾದೆ ಎನ್ನುವ ಮೂಕ ಗೋವು ಸಹಾ ತನ್ನ ಹಾಲೆಲ್ಲಾ ಕೇವಲ ತನ್ನ ಕಂದನಿಗಿರಲಿ ಎಂದೂ ಆಶಿಸಿಲ್ಲ.ಅದಕ್ಕೆ ಇಷ್ಟ ಇರುತ್ತದೋ ಇಲ್ಲವೋ ಆದರೂ ಕರುವಿನ ಪಾಲುಗಿಂತ ಹೆಚ್ಚು ಹಾಲನ್ನು ನಮಗೆ ನೀಡುತ್ತಿದೆ. ಒಂದು ಮನೆ , ಗಂಡ – ಹೆಂಡತಿ, ಇಬ್ಬರು ಪುಟ್ಟ ಮಕ್ಕಳಿದ್ದರು. ಗಂಡ ಅಸಾಧ್ಯ ಬುದ್ಧಿವಂತ. ಆಗಾಗ ಜಗಳವಾದಾಗಲೆಲ್ಲ ಹೆಂಡತಿಗೆ ಹೇಳುತ್ತಿದ್ದ “. ಏನು ಮಾಡ್ಲಿ ಹೇಳು…ಒಂದು ವೇಳೆ ನಾನೇನಾದರೂ ನಿನ್ನ ಮದುವೆಯಾಗಿಲ್ಲದಿದ್ದರೆ ..ಎಲ್ಲೋ ಹೋಗಿ ಏನೋ ಮಾಡಿ…ಏನೋ ಆಗಿರುತ್ತಿದ್ದೆ…ಆದ್ರೆ .ನಿನ್ನ ಮದುವೆಯಾಗಿಬಿಟ್ನೆ??” ಹೆಂಡತಿಯೂ ಸೋಲುತ್ತಿರಲಿಲ್ಲ..” ನೀನು ಬರೀ ನಿನ್ನ ಬಗ್ಗೆ ಹೇಳ್ತೀಯಲ್ಲ..ನನಗೂ ಒಂದಷ್ಟು ಆಸೆಗಳಿದ್ದವು..ನಿನ್ನ ಮದುವೆಯಾಗಿ ನಾನೂ ಅವಕ್ಕೆಲ್ಲ ಎಳ್ಳು ನೀರು ಬಿಡಲಿಲ್ಲವ …” ಎಂದು ವಾದ ಮಾಡುತ್ತಿದ್ದಳು. ಗಂಡ – ಹೆಂಡತಿಯರ ಈ ವಾದಗಳನ್ನು ಕೇಳುತ್ತಾ ಮಕ್ಕಳು ಒಳಗೊಳಗೇ ಆತಂಕ ಪಡುತ್ತಿದ್ದವು.ಇವರಿಬ್ಬರೂ ಹೀಗೇ ಜಗಳವಾಡಿಕೊಂಡು ಮನೆ ಬಿಟ್ಟು ಹೋದರೆ ನಮ್ಮ ಗತಿಯೇನು ಎಂದು. ಗಂಡನಿಗೆ ಅರ್ಥವಾಗದಿದ್ದರೂ ಮಕ್ಕಳ ಈ ಆತಂಕ ಹೆಂಡತಿಗರ್ಥವಾಯಿತು. ನಮ್ಮನ್ನೇ ನಂಬಿರುವ ಈ ಮಕ್ಕಳ ಮನಸ್ಸಿಗೆ ನೋವು ಮಾಡಬಾರದೆಂದು ಗಂಡನಿಗೆ ಅರ್ಥ ಮಾಡಿಸಿದಳು. ಒಂದು ಸಂಸಾರ ಎಂದು ಕಟ್ಟಿಕೊಂಡ ಕ್ಷಣದಿಂದಲೇ ನಮ್ಮ ಕೆಲವೊಂದು ಆದ್ಯತೆಗಳು ನಮಗೇ ಅರಿವಿಲ್ಲದಂತೆ ಬದಲಾಗಿ ಬಿಡುತ್ತವೆ. ಬಹಳಷ್ಟು ಸಂದರ್ಭಗಳಲ್ಲಿ ನಾವುಗಳು ನಮ್ಮ ಆಸಕ್ತಿಯ ಕ್ಷೇತ್ರವನ್ನು ಮರೆತೇ ಬಿಡಬೇಕಾಗುತ್ತದೆ. ದುರದೃಷ್ಟವಶಾತ್ ಇದು ಕೇವಲ ಹೆಣ್ಣು ಮಕ್ಕಳಿಗೆ ಮಾತ್ರಾ ಅನಿವಾರ್ಯವಾಗಿಬಿಟ್ಟಿದೆ. ಗಂಡು ತನಗನಿಸಿದ್ದನ್ನ ಯಾವಾಗ ಬೇಕಾದರೂ ಸಾಧಿಸುವಷ್ಟು ಸ್ವತಂತ್ರವನ್ನು ಸ್ವಯಂ ತೆಗೆದುಕೊಂಡು ಬಿಟ್ಟಿದ್ದರೆ ಹೆಣ್ಣು ಮನೆ , ಮಕ್ಕಳು ಅವರ ಓದುಬರಹ ,ಆರೋಗ್ಯ ಮನೆಯಲ್ಲಿನ ಹಿರಿಯರ ಆರೈಕೆ ಎಂದು ನೂರಾರು ಜವಾಬ್ದಾರಿಗಳನ್ನ ತನ್ನ ಕೋಮಲಭುಜಗಳ ಮೇಲೆ ಹೊತ್ತು ಇದೇ ನನ್ನ ಬದುಕು ಎಂದುಕೊಂಡು ಹಾದಿ ಸವೆಸುತ್ತಾಳೆ. ಗಂಡು ಮನೆಯ ಜವಾಬ್ದಾರಿಯನ್ನ ಸಮವಾಗಿ ನಿಭಾಯಿಸಿದ್ದರೆ ಹೆಣ್ಣಿಗೆ ಅದೂ ಏನಾದರೊಂದು ಸಾಧಿಸಬೇಕೆಂಬ ಆಕಾಂಕ್ಷೆಯಿರುವ ಹೆಣ್ಣಿಗೆ ಸಂಸಾರ ಹೊರೆಯೆನಿಸುವುದಿಲ್ಲ. ಮನೆ ಹೊರಗು ಒಳಗುಗಳೆರಡನ್ನೂ ನಿಭಾಯಿಸುವ ಕುಶಲತೆ ಆಕೆಗಿದೆ. ಆದರೆ ಯಾವುದೋ ಒಂದು ಘಳಿಗೆಯಲ್ಲಿ…ಛೇ ..ಇದೆಂತಹ ಬದುಕು ನನ್ನದು ..ನನಗಾಗಿ ನಾನು ಬದುಕದೆ ಈ ಮನೆ ,ಗಂಡ ಮಕ್ಕಳಿಗಾಗಿ ಬದುಕುತ್ತಿದ್ದೇನಲ್ಲ..ಹಾಗಾದರೆ ನನಗಾಗಿ ಬದುಕುವುದಾದರೂ ಯಾವಾಗ ಎನಿಸಿಬಿಟ್ಟರೆ ಅಲ್ಲಿಗೆ ಮುಗಿಯಿತು ಆ ಕುಟುಂಬದ ಸರ್ವನಾಶ !! ಹೆಣ್ಣಿಗೆ ಹೀಗೆಂದೂ ಅನಿಸದಂತೆ ನೋಡಿಕೊಳ್ಳುವ ಗುರುತರ ಹೊಣೆ ಗಂಡುಗಳಿಗಿದೆ. ಕುಟುಂಬ ಒಂದು ಮಧುರ ಬಂಧ! ಏನೂ ಸರಯಿಲ್ಲದಿದ್ದಾಗ, ತೀರಾ ಹಿಂಸೆಯಾಗುತ್ತಿದ್ದಾಗ ಪರಸ್ಪರರ ಒಪ್ಪಿಗೆ ಮೇರೆಗೆ ಬೇರಾದರೂ ಮಕ್ಕಳ ಜವಾಬ್ದಾರಿ ತಪ್ಪಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮ್ಮ ನಮ್ಮ ತಾಯ್ತಂದೆಯರನ್ನೇ ತೆಗೆದುಕೊಳ್ಳೋಣ. ಅವರಲ್ಲಿ ಯಾರಾದರೊಬ್ಬರು ಅಥವಾ ಇಬ್ಬರೂ ನನ್ನ ದಾರಿ ನನಗೆ ನಾನಿಲ್ಲದೆಯೂ ಇವರೆಲ್ಲ ಇದ್ದೇ ಇರುತ್ತಾರೆ ..ನನ್ನ ಆಕಾಂಕ್ಷೆಯೇ ಮುಖ್ಯ ಎಂದು ಹೊರಟು ಬಿಟ್ಟಿದ್ದರೆ ನಾವುಗಳು ಈಗ ಇರುವಂತೆ ಇರಲು ಸಾಧ್ಯವಾಗುತ್ತಿತ್ತೆ? ( ವ್ಯತಿರಿಕ್ತ ಉದಾಹರಣೆಗಳಿವೆ ..ಇಲ್ಲಿ ಮಾತು ಸಾಮಾನ್ಯವಾಗಿ ಕುಟುಂಬದ ಕುರಿತು ಬಂದಿದೆ). ನಿಜ , ನಾನಿಲ್ಲದೆಯೂ ಲೋಕ ಇದ್ದೇ ಇರುತ್ತದೆ..ನನ್ನವರೂ ಬದುಕಿ ಬಾಳಿಯೇ ಬಾಳುತ್ತಾರೆ. ಆದರೆ ನಾನಿಲ್ಲದಾಗ ನನ್ನವರನ್ನು ಬದುಕಲು ಸಿದ್ಧ ಮಾಡುವುದಿದೆಯಲ್ಲ..ಅದೇ ನಮ್ಮೆಲ್ಲರ ಹೊಣೆಗಾರಿಕೆ.ನಾನಿಲ್ಲದ ಮೇಲೆ ಮನೆ ಮಾಡುವುದೇಕೆ ಎಂದು ಯಾರಾದರೂ ಯೋಚಿಸಿದ್ದರೆ ಜನಸಾಲದ ಹೊರೆಯಲ್ಲಿ ನಲುಗಿ ಮನೆ ಕಟ್ಟುತ್ತಲೇ ಇರಲಿಲ್ಲ.ಒಂದು ವೇಳೆ ಸಾಲ ತೀರಿಸಿದ ಮರು ದಿನವೇ ಆತ ಸತ್ತರೂ ಅಯ್ಯೋ ನಾನು ಕಟ್ಟಿಸಿದ ಮನೆಯಲ್ಲಿ ಬಹಳ ದಿನ ಬದುಕಲಿಲ್ಲ ಎಂದು ಕೊರಗುತ್ತ ಸಾಯಲಾರ.ಬದಲಾಗಿ ನಾನು ಹೋದರೂ ನನ್ನವರಿಗೊಂದು ನೆಲೆ ಇದೆ ಎಂದು ನೆಮ್ಮದಿಯಿಂದ ಸಾಯುತ್ತಾನೆ.ಆಸ್ತ ಮಾಡದವನು ಮಕ್ಕಳನ್ನು ಚೆನ್ನಾಗಿ ಓದಿಸಿದವನು ನಾನಿಲ್ಲದೆಯೂ ನನ್ನವರು ಬದುಕಲು ಗಟ್ಡಿಗರಾಗಿದ್ದಾರೆ ಎಂದು ನಿರಾಳವಾಗಿ ಸಾಯುತ್ತಾನೆ. ಇದೆಲ್ಲ ಇಲ್ಲದವನೂ ಸಹಾ ನಾನು ಹೋದರೇನು ನನ್ನ ಹೆಂಡತಿ ಮಕ್ಕಳು ನನ್ನಂತೆಯೇ ದಿನಾ ದುಡಿದು ತಿನ್ನುತ್ತಾರೆ ಎಂಬ ಭಾವದಲ್ಲಿ ಸಾಯುತ್ತಾನೆ. ಇಲ್ಲಿ ನಾವು ಯಾರೂ ನಮಗಾಗಿ ಬದುಕುವುದಿಲ್ಲ..ಆದರೆ ನಾವೇ ಅಂಟಿಸಿಕೊಂಡ ಬಂಧಗಳಿಗಾಗಿ ಬದುಕುತ್ತೇವೆ.ಹಣ ,ಕೀರ್ತಿ..ಹೀಗೇ ಹತ್ತಾರು ಕಾರಣಗಳಿಂದ ಕುಟುಂಬದ ಜವಾಬ್ದಾರಿ ತೊರೆದ ಬಹಳಷ್ಟು ಬದುಕು ಒಂದು ಹಂತದಲ್ಲಿ ಪ್ರಸಿದ್ಧಿಗೆ ಬಂದರೂ ನಂತರ ಮೂರಾಬಟ್ಟೆಯಾಗಿರುವ ಉದಾಹರಣೆಗಳೂ ನಮ್ಮ ಕಣ್ಣ ಮುಂದಿವೆ. ಗಂಡಿರಲಿ ಹೆಣ್ಣಿರಲಿ..ಕುಟುಂಬ ವ್ಯವಸ್ಥೆ ಗೆ ಒಳಪಟ್ಟ ಮೇಲೆ ಪರಸ್ಪರರ ಗೌರವಿಸುತ್ತಾ ಮನೆ ಕುಟುಂಬ ಎನ್ನುವುದು ಇಬ್ಬರ ಪಾಲಿಗೂ ಹೊರೆಯಾಗದಂತೆ ನಡೆದುಕೊಳ್ಳುವುದು ತೀರಾ ಅನಿವಾರ್ಯ. ಹೀಗೆ ರಾಜಿಯಾಗಲು ಸಾಧ್ಯವಿಲ್ಲದವರು ಸಂಸಾರ ಕಟ್ಡಿಕೊಳ್ಳುವ ಮುನ್ನ ನೂರು ಬಾರಿ ಯೋಚಿಸಬೇಕಿದೆ.ನಮ್ಮ ಬದುಕನ್ನು ನಾವು ಹಾಳುಗೆಡವಬಹುದು ಆದರೆ ನಮ್ಮನ್ನು ನಂಬಿದವರ ಬದುಕನ್ನು ಹಾಳುಗೆಡವಲು ನಮಗಾವ ಅಧಿಕಾರವೂ ಇರುವುದಿಲ್ಲ.. ನಾವು ಬದುಕುವುದು ಕೇವಲ ನಮಗಾಗಿ ಅಲ್ಲ..ನಮ್ಮವರಿಗಾಗಿಯೂ ಹೌದು..ಅದಕ್ಕಾಗಿ ಒಂದಷ್ಟು ನಮ್ಮ ಆಸೆಗಳನ್ನ ಹತ್ತಿಕ್ಕಿಕೊಳ್ಳಲೇಬೇಕಾಗುತ್ತದೆ. ಒಂದು ಹಕ್ಕಿಯೂ ಸಹಾ ತನ್ನ ಮರಿಗಳಿಗೆ ರೆಕ್ಜೆ ಮೂಡಿ ಅವು ಪುರ್ರನೆ ಬಾನಿನಲ್ಲಿ ಹಾರುವ ಸಾಮರ್ಥ್ಯ ಪಡೆವವರೆಗೂ ಕಾಳಜಿಯಿಂದ ಅವುಗಳನ್ನ ಪಾಲಿಸುತ್ತದೆ. ಹಿಂಡಿನಲ್ಲಿ ವಾಸಿಸುವ ಪ್ರಾಣಿಗಳೂ ತಮ್ಮ ಹಿಂಡಿನಲ್ಲಿ ಯಾವುದಾದರೊಂದು ಪ್ರಾಣಿಸಂಕಷ್ಟಕ್ಕೆ ಸಿಲುಕಿದಾಗ ಜೀವದ ಹಂಗು ತೊರೆದು ಅದನ್ನು ಕಾಪಾಡಿದ ಉದಾಹರಣೆಗಳೂ ಇವೆ. ಹೀಗಿರುವಾಗ ನಾವು ಮನುಷ್ಯರು! ಹೇಳಿ ಕೇಳಿ ಸಮಾಜ ಜೀವಿಗಳು..ಕುಟುಂಬ ವ್ಯವಸ್ಥೆಯನ್ನ ಒಪ್ಪಿಕೊಂಡವರು ನನಗಾಗಿ ನಾನು ಬದುಕುತ್ತೇನೆಂದು ಎಲ್ಲ ತೊರೆದು ಅಷ್ಟು ಸುಲಭವಾಗಿ ನಮ್ಮಿಷ್ಟದ ಹಾದಿಯಲ್ಲಿ ಹೋಗಿಬಿಡಲಾಗುತ್ತದೆಯೆ? ಮಕ್ಕಳು ತಮ್ಮ ಅಪ್ಪ- ಅಮ್ಮದಿರು ಇಲ್ಲವಾದಾಗಲೂ ಅವರ ಬಗ್ಗೆ ಕೃತಜ್ಞತೆಯಿಂದ ಪ್ರೀತಿಯಿಂದ ನೆನೆವಂತೆ ನಮ್ಮ ಬಾಳಿರಬೇಕು.ಇಂದಿನ ಫಾಸ್ಟ್ ಜನರೇಷನ್ ರವರು ಇದನ್ನ ಒಪ್ಪುವರೋ ಇಲ್ಲವೊ ತಿಳಿಯದು. ಎಷ್ಟೆಲ್ಲ ಜವಾಬ್ದಾರಿಯುತವಾಗಿ ಮಕ್ಕಳನ್ನು ಬೆಳೆಸಿದರೂ ಮುಂದೆ ಆ ಮಕ್ಕಳು ತಮ್ಮ ತಂದೆ ತಾಯಿಯರನ್ಮು ಹೀನಾಯವಾಗಿ ಕಾಣುವ ,ಅನಾಥಾಶ್ರಮಕ್ಕೆ ತಳ್ಳುವುದೂ ನಡೆಯುತ್ತಲೇ ಇದೆ. ಹಾಗೆಂದು ಎಲ್ಲೋ ಕೆಲವರು ಹೀಗೆ ಮಾಡುತ್ತಾರೆಂದು ಎಲ್ಲಾ ಅಪ್ಪ – ಅಮ್ಮದಿರು ತಮ್ಮ ಮಕ್ಕಳನ್ನ ಓದಿಸದೆ ಒಳ್ಳೆಯ ಸಂಸ್ಕಾರ ಕೊಡದೆ ಬೆಳೆಸಲು ಇಚ್ಛಿಸುವುದೆಲ್ಲಿಯಾದರೂ ಇದೆಯೆ? ನಮ್ಮ ಮುಂದಿನ ಪೀಳಿಗೆಗೆ ಶುದ್ಧ ಗಾಳಿ ಶುದ್ಧ ನೀರು ,ಶುದ್ಧ ಭೂಮಿಯನ್ನು ಉಳಿಸೋಣವೆಂದು ಆಶಿಸುವ ನಾವುಗಳು ಅಂತೆಯೇ ಈ ಶುದ್ಧ ಜಗತ್ತಿನಲ್ಲಿ ಎಲ್ಲಾ ರೀತಿಯಿಂದಲೂ ಬದುಕಲು ಅರ್ಹರಾದ ಪೀಳಿಗೆಯನ್ನು ಬೆಳೆಸುವುದೂ ಅಷ್ಟೇ ಮುಖ್ಯ. ತಾನು ಬಾಡಿ ಮಣ್ಣ ಸೇರಿ ಹೋಗುತ್ತೇನೆಂದು ಮಲ್ಲಿಗೆ ಪರಿಮಳ ಸೂಸುವುದ ನಿಲ್ಲಿಸುವುದಿಲ್ಲ. ತಾನು ಹೇಗಿದಗದರೂ ಆರಿ ಕತ್ತಲಾವರಿಸಿಬಿಡುತ್ತದೆಂದು ಒಂದು ಹಣತೆ ಎಣ್ಣೆ ಬತ್ತಿ ಎಲ್ಲಾ ಇದ್ದರೂ ಬೆಳಕು ಕೊಡದೆ ಸುಮ್ಮನಿರುವುದಿಲ್ಲ. ಬದುಕೂ ಅಷ್ಟೇ ..ಮಲ್ಲಿಗೆಯಂತಾಗಲಿ, ಉರಿವ ಹಣತೆಯಂತಾಗಲಿ.ಇರುವಷ್ಟು ದಿನ ಸುತ್ತಮುತ್ತ ಪರಿಮಳವನ್ನೂ ,ಬೆಳಕನ್ನೂ ಚೆಲ್ಲುವಂತಾಗಲಿ. ******************************* ಶುಭಾ ಎ.ಆರ್ (ದೇವಯಾನಿ) ಕಾಲೇಜು ದಿನಗಳಿಂದ ದೇವಯಾನಿ ಹೆಸರಿನಲ್ಲಿ ಕಥೆ ,ಕವನ , ಅನುವಾದಿತ ಕಥೆ , ಪ್ರಬಂಧ ಬರೆಯುತ್ತಿದ್ದು ತುಷಾರ, ಮಯೂರ ,ಕಸ್ತೂರಿ , ಪ್ರಜಾವಾಣಿ, ವಿಕ್ರಮ , ಉತ್ಥಾನ, ಉದಯವಾಣಿ, ತರಂಗ ,ವಿಜಯ ಕರ್ನಾಟಕ ಮುಂತಾದ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೃತ್ತಿಯಿಂದ ಗಣಿತ ವಿಜ್ಞಾನ ಪ್ರೌಢಶಾಲಾ ಶಿಕ್ಷಕಿ.ಇಪ್ಪತ್ತನಾಲ್ಕು ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಪಠ್ಯಪುಸ್ತಕ ಸಮಿತಿಯ ಸದಸ್ಯರಾಗಿ ಹಲವಾರು ಸಂಪನ್ಮೂಲ ಸಾಹಿತ್ಯವನ್ನು ರಚಿಸಿದ್ದು ಹಲವಾರು ರಾಜ್ಯಮಟ್ಟದ ತರಬೇತಿಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಶಾಲಾ ಮಕ್ಕಳಿಗಾಗಿ ” ಧರೆಯನುಳಿಸುವ ಬನ್ನಿರಿ, ಮೂರು ವೈಜ್ಞಾನಿಕ ನಾಟಕಗಳು” , “ತುಟಿ ಬೇಲಿ ದಾಟಿದ ನಗು” ಕವನ ಸಂಕಲನ , “ತುಂಡು ಭೂಮಿ ತುಣುಕು ಆಕಾಶ” ಕಥಾ ಸಂಕಲನ ಪ್ರಕಟಿಸಿದ್ದು ಅನುವಾದಿತ ಕಥಾ ಸಂಕಲನ ಅಚ್ಚಿನಲ್ಲಿರುತ್ತದೆ
ಈಗ ಬಸವಣ್ಣನವರು ಪೂರ್ವಪಕ್ಷ ಮತ್ತು ಪ್ರತಿಪಕ್ಷಗಳಿಗೆ ಈ ಎರಡು ಹೆಸರುಗಳನ್ನು ಪ್ರಶ್ನಾರ್ಥಕವಾಗಿಯೇ ಬಳಸಿ ಏನನ್ನು ಸೂಚಿಸುತ್ತಿದ್ದಾರೆ ಎಂಬುದನ್ನು ಹೀಗೆ ಪಟ್ಟಿ ಮಾಡಿಯೇಬಿಡಬಹುದು.
ಅಂಕಣ ಬರಹ ಹೊಸ್ತಿಲಾಚೆಗಿನ ರಂಗಜೀವಿ ಬದುಕ ರಂಗವನ್ನು ಆತ್ಮ ತೊರೆದಿತ್ತು. ಮನೆಯ ಉದ್ದದ ಚಾವಡಿಯಲ್ಲಿ ಅತ್ತೆಯ ಶರೀರ ಮಲಗಿತ್ತು. ತಲೆಯ ಬದಿಯಲ್ಲಿ ತೆಂಗಿನ ಕಾಯಿಯ ಒಂದು ಭಾಗದೊಳಗೆ ದೀಪ ಮೌನವಾಗಿ ಉರಿಯುತ್ತಿತ್ತು. ರಾಶಿ ಮೌನಗಳನ್ನು ದರದರನೆ ಎಳೆತಂದು ಕಟ್ಟಿ ಹಾಕಿದ ರಾಕ್ಷಸ ಮೌನ ಘೀಳಿಡುತ್ತಿತ್ತು. ಎದೆ ಒತ್ತುವ, ಕುತ್ತಿಗೆ ಒತ್ತುವ ನಿರ್ವಾತಕ್ಕೆ ಅಂಜಿ ಮುಂಬಾಗಿಲಿಗೆ ಬಂದೆ. ಶರೀರವನ್ನು ಉದ್ದಕ್ಕೆ ನೆಲಕಂಟಿಸಿ ಮುಖವನ್ನು ಅಡ್ಡಕ್ಕೆ ಬಾಗಿಸಿ ‘ಪೀಕು’ ಮಲಗಿದ್ದಾಳೆ. ನಾನು ಅಲ್ಲಿರುವುದು ತಿಳಿದಿಲ್ಲವೇ? ಯಾವಾಗಲೂ ನಡಿಗೆಯ ಪದತರಂಗವನ್ನು ಗಬಕ್ಕೆಂದು ಹಿಡಿದು ಕಣ್ಣಲ್ಲಿ ಕಣ್ಣಿಟ್ಟು ಹುಡುಕಾಟ ನಡೆಸುವವಳು ತಾನೇ ವ್ರತ ಹಿಡಿದಂತೆ ಒರಗಿದ್ದಾಳೆ. ನನ್ನ ಕಂಠದಿಂದ ಸ್ವರ ಹೊರಡುತ್ತಿಲ್ಲ. ಎಂದಿನ ಲಾಲಿತ್ಯದಲ್ಲಿ ” ಪೀಕು ಪೀಕೂ.. ಪೀ….ಕೂ” ಎನ್ನುವ ಭಾವ, ಶಬ್ದ, ಸ್ವರ ಒಣಗಿ ಹೋಗಿದೆ. ಮತ್ತೆ ಒಳನಡೆದೆ. ಮನೆಯ ಹಿರಿಯ ಜೀವ ಮನೆ ತೊರೆದು ನಡೆದಿದ್ದರು. ಕಾಲದ ಹೆಜ್ಜೆಗೆ ಸ್ಪಂದಿಸಿ, ಮೌನ ಒಡೆದು ಮಾತು ತೇಕಿ ತೆವಳಿ ನಡೆ ಆರಂಭಿಸಿತ್ತು.ಆದರೆ ಪೀಕು ಮಾತ್ರ ಚಾವಡಿಯ ಮೆಟ್ಟಲಿನ ಕೆಳಗೆ ಕೂತು ಪೇಲವ ದೃಷ್ಟಿಯಿಂದ ಒಳಗೆ ದಿಟ್ಟಿಸುತ್ತ ಮತ್ತೆ ನೆಲಕ್ಕೊರಗುತ್ತಿದ್ದಾಳೆ. ನಾಲ್ಕು ದಿನವಾಯಿತು. ಒಂದಗುಳು ಅನ್ನ,ನೀರು ಮುಟ್ಟಿಲ್ಲ. ಅಕ್ಕನ ಸಾವಿಗೆ ದಿಗಿಲಾಗಿ ಓಡಿ ಬಂದ ಮಾತಿಲ್ಲದ, ಶ್ರವಣಾತೀತ ದೇವತೆ, ತಾರಕ್ಕನೂ ಇದೀಗ ಹೌದೋ ಅಲ್ಲವೋ ಎಂಬಂತೆ ಕಣ್ಣಲ್ಲಿ ತೆಳುವಾಗಿ ನೀರು ತುಂಬಿ ಪೀಕುವಿನ ಬಳಿ ಹೋಗಿ “ವ್ಯಾವ್ಯಾ. ವ್ಯಾ…ವ್ಯಾ ” ಎಂದು ಕೈ,ಕಣ್ಣು ಬಾಯ ಸನ್ನೆಯಲ್ಲಿ ಆಡುತ್ತಿದ್ದಾರೆ. ಯಾವತ್ತೂ ಸ್ಪಂದಿಸುವ ಪೀಕು ಅದೂವುದೂ ನನಗಲ್ಲ ಎಂಬಂತಿದ್ದಾಳೆ. ನಾನೂ ಹಲವಾರು ಬಾರಿ ಮೈ ಸವರಿ ಮಾತನಾಡಿಸಿಯಾಗಿದೆ. ರೂಮಿನಲ್ಲಿ ನಿಶ್ಚಲವಾಗಿ ಕೂತ ನನ್ನನ್ನು, ಸರ್ರೆಂದು ಬಂದ ತಾರಕ್ಕ ಕಣ್ಣು ಉರುಟುರುಟು ತಿರುಗಿಸಿ ನೋಟದಲ್ಲಿಯೇ ಗದರಿಸ ತೊಡಗಿದರು. ನಾನು ಪೀಕು ಬಳಿ ಬಂದೆ. ಆ ಕಪ್ಪು ತುಪ್ಪಳದ ಮೈ ಎತ್ತಿ ಮಡಿಲಲ್ಲಿ ತುಂಬಿ ನೇವರಿಸ ತೊಡಗಿದೆ. ಅನತಿ ದೂರದ ದಂಡೆಯಲ್ಲಿ ಕೂತ ” ಚಿನ್ನು” ಫಟ್ಟೆಂದು ಹಾರಿ ನನ್ನ ಬಳಿ ಬಂದಳು. ಅದಕ್ಕೂ ಪೀಕು ಸ್ಪಂದಿಸಲಿಲ್ಲ. ಹಾಗೆ ಅಂಗಳದಲ್ಲಿ ನಾನು, ‘ಪೀಕು’ ಮತ್ತು ‘ಚಿನ್ನು’ ನಡುವೆ ಶಬ್ದದ ಹೊಸ್ತಿಲಿನ ಆಚೆಗಿನ ಸಾವಿರದ ಮಾತುಗಳು ವಿನಿಮಯಗೊಳ್ಳುತ್ತಿದ್ದವು. ಹೊತ್ತು ದಣಿ ದಣಿದು ಕಂತುತ್ತಿತ್ತು. ಮೆಲ್ಲಗೆ ಎದ್ದ ಪೀಕು ದಯನೀಯವಾದ ನೋಟ ಹರಿಸಿ ಪಕ್ಕದ ಪಾತ್ರೆಯಲ್ಲಿದ್ದ ನೀರನ್ನು, ತನ್ನ ನೀಳ ನಾಲಿಗೆ ಹೊರ ಚಾಚಿ, ಮೆಲ್ಲಗೆ ಕುಡಿಯತೊಡಗಿದಳು. ಚಿನ್ನು ನೆಗೆಯುತ್ತ ಮನೆಯೊಳಗೆ ಓಡಿದಳು. ಈ ಹಳ್ಳಿಮನೆಯಲ್ಲಿ ಆಟವಾಡಿ ನನಗೆ ರಸಾನುಭವ ಉಣಬಡಿಸಿದ ಚಿನ್ನು ಹಾಗೂ ಪೀಕು ಎಂಬ ಎರಡು ಪಾತ್ರಗಳನ್ನು ಪರಿಚಯಿಸಲೇ ಬೇಕು.ಕೃಷ್ಣೇಗೌಡರ ಆನೆ, ನಾಯಿ ಕಥೆಯಂತಹ ನಾಟಕ ಕಟ್ಟೋಣದಲ್ಲಿ ಚಿನ್ನು ಪೀಕುರಂತವರ ಪ್ರತ್ಯಕ್ಷ, ಪರೋಕ್ಷ ಪಾತ್ರಾಭಿನಯ ಸಾಮಾನ್ಯವೇ? ಹಸಿರುತೋಟದ ನಡುವೆ, ಆಗಸ ಮತ್ತು ಅಂಗಳದ ನಡುವೆ ಹೆಂಚಿನ ಮಾಡು. ಅಂಗಳರಂಗದ ಇಂಚಿಂಚೂ ಬಳಸಿಕೊಂಡು ಹೊಸ್ತಿಲಿನಾಚೆಗೆ ಮತ್ತು ಈಚೆಗೆ ಜೀವಾಭಿನಯ. ಪೀಕು ಎಂಬ ನಾಯಿ, ಅದಾಗಲೇ ಆ ಮನೆಗೆ, ಪರಿಸರಕ್ಕೆ ಹಳಬಳಾಗಿದ್ದಳು. ನಂತರ ಪ್ರವೇಶ ಪಡೆದ ಬಿಳೀದೇಹದ ಬೆಕ್ಕು-ಪುಟಾಣಿ ಚಿನ್ನು.ಚಿನ್ನು ವಿಪರೀತ ಕೀಟಲೆ. ನಮ್ಮ ಬೆರಳುಗಳೊಂದಿಗೆ, ಮಲಗಿದಾಗ ತಲೆಗೂದಲಿನೊಂದಿಗೆ ಆಟವಾಡಿ ತರಲೆ ಮಾಡುವ ತುಂಟಿ. ಪೀಕು ಹಾಗೂ ಚಿನ್ನು ಇವರ ನಡುವಿನ ಕೋಪ, ಮುನಿಸು, ಕೀಟಲೆಗಳನ್ನೊಳಗೊಂಡ ಆಟದಂತಹ ಜಗಳ ನಡೆಯುತ್ತಲೇ ಇತ್ತು. ಇದು ಮನರಂಜನೆ. ಆದರೆ ತುಸು ಭಯ ಹುಟ್ಟಿಸುತ್ತಿತ್ತು. ಅದೊಂದು ಘಟನೆಯಂತೂ ಅಚ್ಚರಿ, ಭಯ, ದುಃಖ ಎಲ್ಲವನ್ನೂ ಜೊತೆಜೊತೆಯಾಗಿಸಿತ್ತು.ಚಿನ್ನುಗೆ ಮನೆಯ ಒಳಗಿನ ಅಧಿಪತ್ಯವಾದರೆ ಪೀಕುವಿನ ಸಾಮ್ರಾಜ್ಯ ಹೊರಗಡೆ. ಎರಡೂ ಸಾಮ್ರಾಜ್ಯಗಳ ನಡುವೆ ಮನೆಯ ಹೊಸ್ತಿಲು. ಪುಟ್ಟ ದೇಹದ ಬಿಳಿ ಬಣ್ಣದ ಚಿನ್ನು ಎಲ್ಲರ ಮುದ್ದು. ಮನೆ ಮಂದಿ ಹಾಲ್ ನಲ್ಲಿ ಕುರ್ಚಿ, ಸೋಫಾಗಳಲ್ಲಿ ಕೂತರೆ ಅಡುಗೆ ಮನೆಯಲ್ಲಿ ತೂಕಡಿಸುತ್ತಿದ್ದವಳು ಮೊಲದಂತೆ ನೆಗೆಯುತ್ತ ಓಡಿಬರುತ್ತಿದ್ದಳು. ಕಾಲಿಗೆ ಮುಖ ಉಜ್ಜಿ ಸಣ್ಣನೆಯ ಸ್ವರದಲಿ ಮಿಯ್ಯಾಂವ್ ಎಂದು ಆಲಾಪಿಸಿ ಎಂದು ತನ್ನ ಮುಖ ಎತ್ತಿ ನಮ್ಮ ಮುಖವನ್ನೇ ನೋಡಿ ಕಣ್ಣು ಮಿಟುಕಿಸುತ್ತ ಒಂದೇ ನೆಗೆತಕ್ಕೆ ಸೋಫಾ ಏರುತ್ತಿದ್ದಳು. ನೇರವಾಗಿ ಮಡಿಲ ಬಿಸಿಗೆ ತವಕಿಸಿ ತನ್ನ ಹಕ್ಕು ಎಂಬಂತೆ ಕೂತು ಬಿಡುತ್ತಿದ್ದಳು. ಹೊಸಿಲ ಹೊರಗಿನ ಪೀಕುವಿಗೆ ಆಗಲೇ ತಳಮಳ. ಕಾಲಿನಿಂದ ನೆಲ ಕೆರೆಯುತ್ತ,ಬೊಗಳುತ್ತ, ಅಳುತ್ತ ತನ್ನ ಪ್ರತಿಭಟನೆ, ಅಸಹನೆ ತೋರ್ಪಡಿಸುತ್ತಿತ್ತು. ಹೊಸತಾಗಿ ಬಂದ ಈ ಲಾವಣ್ಯವತಿ, ತನಗಾಗಿ ಮುಡಿಪಾಗಿದ್ದ ಅಷ್ಟೂ ಪ್ರೀತಿಯನ್ನೂ ಕಸಿದುಕೊಂಡರೆ!. ಚಿನ್ನುವಿಗೆ ಇದೊಂದು ಆಟದಂತೆ. ಕೂತವರ ಮಡಿಲಿನಿಂದ ಜಾರಿದರೂ ಹೋಗುವುದು ನೇರ ಹೊಸಿಲಿನ ಬಳಿ. ಹೊಸಿಲ ಮೇಲೆ, ಅಥವಾ ಹೊಸಿಲಿನಿಂದ ಹೊರಗೆ ತಪಸ್ವಿಯಂತೆ ಕೂತು ಪೀಕುವನ್ನೇ ನೋಡುವುದು. ಅವಳಿಗೆ ಅದುವರೆಗಿನ ಸಿಟ್ಟು ಮತ್ತಷ್ಟು ಹೆಚ್ಚಿ ತನ್ನನ್ನು ಕಟ್ಟಿ ಹಾಕಿದ ಸರಪಳಿ ಕತ್ತರಿಸಿ ಹಾಕಿ ಇವಳ ಹಿಡಿದು ಬಿಡುವೆ ಎನ್ನುವಂತೆ ಸರಪಳಿ ಎಳೆಯುತ್ತಾಳೆ ಈ ಸರಪಳಿಯ ಅಳತೆ ಚಿನ್ನುವಿಗೆ ಸರಿಯಾಗಿ ಗೊತ್ತಿದೆ. ಅವಳು ಅಳತೆ ಪಟ್ಟಿ ಹಿಡಿದು ದೂರ ಅಳೆದು, ಕರಾರುವಾಕ್ಕಾಗಿ , ಪೀಕುವಿನ ಕಾಲು,ಮುಖ ತಾಗಿತು ಅನ್ನುವಷ್ಟು ಹತ್ತಿರ ಆದರೂ ತಾಗದಂತೆ ಕೂತು ಬಿಡುತ್ತಿದ್ದಳು. ಕೆಲವೊಮ್ಮೆ ಬೊಗಳಿ ತನ್ನನ್ನು ಕಟ್ಟಿದ ಸರಪಳಿ ಎಳೆದು ಎಳೆದು ಸುಸ್ತಾಗಿ ಪಚಪಚ ಎಂದು ನೀರು ಕುಡಿಯುತ್ತಿದ್ದಳು. ಅವಳನ್ನು ಸಾಕಷ್ಟು ಗೋಳುಹೊಯ್ಸಿದ ನಂತರವೇ ಈ ಪುಟಾಣಿ ಚಿನ್ನು ಹೊಸಿಲು ಬಿಟ್ಟು ಹೊರಡುತ್ತಿದ್ದದ್ದು. ಇದು ಯಾವುದೋ ಒಂದು ದಿನದ ಲಕಥೆಯಲ್ಲ. ಇದು ಎಂದೂ ಮುಗಿಯದ ಧಾರವಾಹಿ. ಎಷ್ಟು ಎತ್ತಿ ತಂದರೂ ಚಿನ್ನು ಕುಳಿತು ಕೊಳ್ಳುವುದು ಅಲ್ಲೇ. ಕೆಲವೊಮ್ಮೆ ನಿಧಾನವಾಗಿ ತನ್ನ ಎದುರಿನ ಕಾಲು ಮುಂದೆ ತಂದು ಮಲಗಿದ್ದ ಪೀಕುವನ್ನು ಮುಟ್ಟಿ ಎಚ್ಚರಿಸಿ ಥಟ್ಟೆಂದು ಓಡಿ ಒಂದು ತನ್ನ ಜಾಗದಲ್ಲಿ ಕೂತು ನುರಿತ ಆಟಗಾರಳಂತೆ ಕದನ ಆರಂಭಿಸುವುದೂ ಇದೆ. ಅದೊಂದು ದಿನ ಮನೆಯೊಳಗೆ ಮನೆಮಂದಿ ಹರಟೆಯಲ್ಲಿದ್ದಾಗ ಥಟ್ಟೆಂದು ಪೀಕು ಮನೆಯೊಳಗೇ ಬಂದು ಬಿಟ್ಟಳು ಹಾಗೆಲ್ಲ ಅತಿಕ್ರಮ ಪ್ರವೇಶ ಮಾಡುವ ಹೆಣ್ಣಲ್ಲ ಅದು. ಹೀಗೆ ಏಕಾಏಕಿ ಬಂದು ನಮ್ಮ ಮುಖವನ್ನು ಆತಂಕದಲ್ಲಿ ನೋಡಿದಂತೆ ನೋಡಿ ಹೊರಗೋಡಿದಳು. ಹಿಂತಿರುಗಿ ನೋಡಿ ನಾವು ಅವಳನ್ನು ಹಿಂಬಾಲಿಸುತ್ತಿಲ್ಲವೆಂದು ಮತ್ತೆ ಓಡಿ ಒಳಬಂದು ಬಾಲವನ್ನು ನನ್ನ ಮೈಗೆ ಸವರಿ, ಮುಖನೋಡುತ್ತ ತನ್ನ ಭಾಷೆಯಲ್ಲೇ “ಹ್ಹುಂ ಹ್ಹೂಂ… ಬೌ…..”ಎನ್ನುತ್ತ ಹೊರಗೋಡುತ್ತ ಚಡಪಡಿಸುತ್ತಿದ್ದಳು. ಇದನ್ನು ನೋಡಿದ ಅತ್ತೆ ಮಗನಿಗೆ” ಏನೋ ಆಗಿದೆ. ಅವಳ ಹಿಂದೆ ಹೋಗು. ಹಾವು ಗೀವು ಬಂದಿರಬೇಕು. ಎಲ್ಲಿ ಬಡಿದು ಹಾಕಿ ತೋರಿಸಲು ಬಂದಿದ್ದಾಳೋ..”ಎಂದು ಮಣಮಣಿಸುತ್ತಿದ್ದರು. ನಾನೂ,ನನ್ನವರೂ ಓಡಿದೆವು. ಪೀಕು ನಮ್ಮನ್ನು ಬಟ್ಟೆ ಒಗೆಯವ ಬಾವಿ ಕಟ್ಟೆಯ ಹತ್ತಿರ ಕರೆದೊಯ್ದಳು. ಹಳ್ಳಿಯ ಮನೆಯಲ್ಲಿ ಪಾತ್ರೆ, ಬಟ್ಟೆ ಎಲ್ಲವನ್ನೂ ತೊಳೆಯಲು ಮನೆಯ ಹೊರಗಡೆ, ಅನತಿ ದೂರದ ಬಾವಿಕಟ್ಟೆಯ ಸಮೀಪವೇ ವ್ಯವಸ್ಥೆಯಾಗಿತ್ತು. ಅಲ್ಲಿಂದ ತೊಳೆದ ನೀರು ಹರಿದು ತೆಂಗಿನ ಮರದ ಬುಡಕ್ಕೆ ಹೋಗುತ್ತಿತ್ತು. ಸತತ ನೀರು ಹೋಗಿ ಅಲ್ಲಿ ಆಳ ಗುಂಡಿಯಂತೆ ಆಗಿತ್ತು. ಕಪ್ಪನೆ ಕೆಸರು ಮಣ್ಣು ತುಂಬಿಕೊಂಡಿದೆ. ಪೀಕು ಅದರ ಸಮೀಪ ಕರೆದೊಯ್ದು ನಮ್ಮ ಮುಖವನ್ನೂ, ಆ ಹೊಂಡವನ್ನೂ ನೋಡಿ ಆಕಾಶಕ್ಕೆ ಮುಖ ಎತ್ತರಿಸಿ ದೀರ್ಘ ಆಲಾಪ ತೆಗೆಯತೊಡಗಿದಳು.ನನ್ನವರು ಕೂತು ನೀರು, ಮಣ್ಣು, ಕೆಸರು ತುಂಬಿದ ಆ ಜಾಗವನ್ನೇ ತದೇಕ ದೃಷ್ಟಿಯಿಂದ ನೋಡುತ್ತಿದ್ದಾಗ ಕಪ್ಪು ತುಸು ಅಲುಗಿದಂತೆ ಕಾಣಿಸಿತು. ಕೂಡಲೇ ತಮ್ಮ ಕೈಯನ್ನು ಕೆಸರಿನೊಳಗೆ ಹಾಕಿ ಕಪ್ಪು ಕೆಸರಿನ ಮುದ್ದೆ ಹೊರತೆಗೆದರು. ನೀರು ಸುರಿದರು. ನಾನು ವಿಸ್ಮಯ ನೇತ್ರ ಳಾಗಿ ನೋಡುತ್ತಿದ್ದೇನೆ. ಚಿನ್ನುವಿನ ಪುಟ್ಟ..ನಿಶ್ಚಲವಾದ ದೇಹ. ಅಳು ಒತ್ತರಿಸಿ ಬಂತು” ಅಯ್ಯೋ ನಮ್ಮ ಚಿನ್ನು ಏನಾಯಿತು. ಸತ್ತು ಹೋಯಿತೇ ” ಪೀಕು ಅಪರಾಧಿಯಂತೆ ದೂರಹೋಗಿ ನಿಂತು ನನ್ನ ನೋಡುತ್ತಿದ್ದಾಳೆ. ” ಇಲ್ಲ ಜೀವ ಇದೆ” ನನ್ನವರ ಮಾತಿನಿಂದು ತುಸು ಗೆಲುವಾಗಿ ಕೈಯಲ್ಲಿ ಸತ್ತಂತಿರುವ ಆ ಜೀವ ಹಿಡಿದು ಒಳಗೋಡಿ ಬಂದೆ. ಬೆಚ್ಚನೆಯ ಟವಲಿನಿಂದ ಮೈ ಒರೆಸಿ ದೇಹ ಬೆಚ್ಚಗಾಗಿಸಲು ಪ್ರಯತ್ನಿಸಿದೆ. ಹಾಗೇ ಬಿದ್ದಿತ್ತು. ಸ್ವಲ್ಪ ಹೊತ್ತು ಬಿಟ್ಟು ಕಣ್ಣು ನಿಧಾನವಾಗಿ ತೆರೆದು ನೋಡಿ ಹಾಗೇ ಮಲಗಿತು.ನಾವು ಒಳ ಹೊರಗೆ ಹೋಗುವಾಗೆಲ್ಲ ಎಂದಿನ ಗತ್ತು ತೋರದೆ ಪೀಕು ಅಪರಾಧಿಯಂತೆ ಕಳ್ಳ ನೋಟ ಬೀರುತ್ತಿದ್ದಳು ಆ ದಿನವೆಲ್ಲ ಚಿನ್ನುವನ್ನು ಗಮನಿಸುವುದೇ ಕೆಲಸ. ಸಂಜೆಯ ಸಮಯ ತೇಲಿದಂತೆ ಎದ್ದು ಹಾಲು ಕುಡಿದಳು. ಮರುದಿನ ಚಿನ್ನು ಸುಸ್ತಾದಂತೆ ಕಂಡರೂ ಆರೋಗ್ಯ ವಾದಳು. ನಂತರ ಒಂದಷ್ಟು ಕಾಲ ಚಿನ್ನು ಹೊಸಿಲ ಮೇಲೆ ಕೂತು ಅಣಕಿಸುವ, ಪೀಕುವನ್ನು ಛೇಡಿಸುವ ಆಟ ಸ್ಥಗಿತಗೊಳಿಸಿದಳು. ಹೊರಹೋಗಬೇಕಾದರೂ ಪೀಕುವಿನ ಸಮೀಪದಿಂದ ಓಡಿಕೊಂಡು ಗಡಿ ದಾಟುತ್ತಿದ್ದಳು. ಪೀಕೂ ಮೊದಲಿನಂತೆ ಕಾಲುಕೆರೆದು ಆರ್ಭಟಿಸುತ್ತಿರಲಿಲ್ಲ. ಮೌನವಾಗಿ ಕೂತು ಓಡುವ ಚಿನ್ನುವನ್ನು ಗಮನಿಸುತ್ತಿದ್ದಳು. ಇದಾಗಿ ಹಲವು ದಿನಗಳ ನಂತರ ಮತ್ತೆ ಚಿನ್ನುವಿಗೆ ತುಂಟತನದ ಆಸೆ ಹೆಚ್ಚಿ, ಕಟ್ಟಿ ಹಾಕಿದ ಪೀಕುವಿನ ಬಳಿ ಅಂತರ ಇಟ್ಟು ಕೂರುತ್ತಿದ್ದಳು. ಆದರೆ ಇದು ಮೊದಲಿನಷ್ಟು ಉಮೇದು ಹೊಂದಿರಲಿಲ್ಲ. ಕೆಲ ನಿಮಿಷಕ್ಕೆ ಈ ಆಟ ಮುಗಿದು ಬಿಡುತ್ತಿತ್ತು. ಅಂತಹ ಪೀಕು ಮನೆಯೊಡತಿಯ ಅಗಲಿಕೆಗೆ ಮೌನವಾದಳು. ಅವಳ ಮೌನಕ್ಕೆ ಚಿನ್ನು ಶ್ರುತಿ ಹಿಡಿದಳು. ಪೀಕು ನಿಧಾನವಾಗಿ ಸಹಜಸ್ಥಿತಿಯತ್ತ ಬರುತ್ತಿದ್ದಂತೆ ಚಿನ್ನೂ ಗೆಲುವಾದಳು. ರಂಗದಲ್ಲಿ ಭಾವನೆಗಳ ಜೊತೆಯಲ್ಲಿ ಕಲಾವಿದರು ಆಟ ಆಡುತ್ತೇವೆ. ಜಗತ್ತಿನ ಶ್ರೇಷ್ಠ ಜೀವಿ ಮಾನವ. ನಮಗೆ ನೋವು ನಲಿವು ಎರಡನ್ನೂ ತೀವ್ರವಾಗಿ ಅನುಭವಿಸುವ ಶಕ್ತಿ ಇದೆ. ಅದನ್ನೇ ರಂಗದಲ್ಲಿ ಅಭಿನಯಿಸಿ ತೋರುತ್ತೇವೆ. ಆದರೆ ಇಂತಹ ಅದೆಷ್ಟೋ ಘಟನೆಗಳು,ಪ್ರಾಣಿ ಪ್ರಪಂಚದ ವರ್ತನೆಗಳು, ನಮ್ಮ ತಿಳುವಳಿಕೆ ಎಷ್ಟು ಅಪೂರ್ಣ ಎಂದು ನೆನಪಿಸುತ್ತದೆ. ಪ್ರಾಣಿಗಳೂ ಅದೆಷ್ಟು ಆಳವಾಗಿ ನೋವು ನಲಿವು ಕ್ರೋಧ, ಮುನಿಸುಗಳನ್ನು ತೋರಬಲ್ಲವು. ಅವುಗಳ ರಂಗಸ್ಥಳ ಬಹಳ ದೊಡ್ಡದು. ನೈಜವಾದುದು. ಸಹಜವಾದುದು. ಆ ಪರಿಕರಗಳಲ್ಲಿ ಯಾವುದೇ ಮುಖವಾಡಗಳಿಲ್ಲ. ಕೆಲವೊಮ್ಮೆ ಈ ಅಭಿನಯದ ಆಟ ಅವುಗಳಿಗೆ ಪ್ರಾಣಾಪಾಯಕಾರಿಯೂ ಹೌದು. *********************************** ಪೂರ್ಣಿಮಾ ಸುರೇಶ್ ರಂಗಭೂಮಿ ಹಾಗೂ ಕಿರುತೆರೆ ಕಲಾವಿದೆ.ಕವಯತ್ರಿ. ಕನ್ನಡ,ತುಳು,ಕೊಂಕಣಿ ಭಾಷೆ ಯ ಸಿನೇಮಾಗಳಲ್ಲಿ ಅಭಿನಯ. ಕೊಂಕಣಿ ಸಿನೇಮಾ ” ಅಂತು” ವಿನ ಅಭಿನಯಕ್ಕೆ ರಾಷ್ಟ್ರಮಟ್ಟದ Hyssa Cini Global Award Best supporting actor ದೊರಕಿದೆ. ” ಸಿರಿ” ಏಕವ್ಯಕ್ತಿ ಪ್ರಸ್ತುತಿ 30 ಯಶಸ್ವೀ ಪ್ರದರ್ಶನ ಕಂಡಿದೆ.ಮಂಗಳೂರು ವಿಶ್ವವಿದ್ಯಾನಿಲಯದ ಕೊಂಕಣಿ ಅಧ್ಯಯನ ಪೀಠದ ಸದಸ್ಯೆ. ಪ್ರಸ್ತುತ ರಾಜ್ಯ ಕೊಂಕಣಿ ಸಾಹಿತ್ಯ ಅಕಾಡಮಿ ಸದಸ್ಯೆ. “ಅಮೋಘ ಎಂಬ ಸಂಸ್ಥೆ ಹುಟ್ಟುಹಾಕಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ. ಆಕಾಶವಾಣಿ ಕಲಾವಿದೆ.ಇದುವರೆಗೆ 3 ಕವನ ಸಂಕಲನ ಸೇರಿದಂತೆ 6 ಪುಸ್ತಕಗಳು ಪ್ರಕಟಗೊಂಡಿವೆ. GSS ಕಾವ್ಯ ಪ್ರಶಸ್ತಿ,ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ,GS Max ಸಾಹಿತ್ಯ ಪ್ರಶಸ್ತಿ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸುವಿಕೆ
ಅಂಕಣ ಬರಹ . ರಾಮಕೃಷ್ಣ ಗುಂದಿ ಅವರ ಆತ್ಮಕಥೆ—20 ಆತ್ಮಾನುಸಂಧಾನ ಸಂಸ್ಕೃತವನ್ನು ಓದಗೊಡದ ಸಂಸ್ಕೃತ ಮೇಷ್ಟ್ರು ನಾನು ‘ಜೈಹಿಂದ್’ ಹೈಸ್ಕೂಲು ವಿದ್ಯಾರ್ಥಿಯಾಗಿ ಪ್ರವೇಶ ಪಡೆದ ಬಳಿಕ ವಿಷಯ ಆಯ್ಕೆಯ ಸಂದರ್ಭದಲ್ಲಿ ಒಂದು ತಪ್ಪು ಮಾಡಿದೆ. ಬಾಲ್ಯದಿಂದಲೂ ಯಕ್ಷಗಾನದ ಪ್ರಭಾವಕ್ಕೆ ಪಕ್ಕಾಗುವ ವಾತಾವರಣದಲ್ಲಿ ಬೆಳೆದ ನಾನು ಹಿರಿಯ ಅರ್ಥಧಾರಿಗಳು ಅರ್ಥ ಹೇಳುವಾಗ ಮಾತಿನ ಮಧ್ಯೆ ಅಲ್ಲಲ್ಲಿ ಬಳಸುವ ಸಂಸ್ಕೃತ ಶ್ಲೋಕಗಳನ್ನು ಕೇಳುವಾಗ ಅದು ತುಂಬ ಅದ್ಭುತವೆನ್ನಿಸುತ್ತಿತ್ತು. ಇಂಥ ಸಂಸ್ಕೃತ ಉಕ್ತಿಗಳನ್ನು ಮಾತಿನ ಮಧ್ಯೆ ಬಳಸುವವರು ತುಂಬಾ ಜಾಣರು, ಬಹಳಷ್ಟು ಓದಿಕೊಂಡ ಬುದ್ಧಿವಂತರು ಎಂದು ಬಲವಾಗಿ ನಂಬಿಕೊಂಡಿದ್ದೆ. ಇದರಿಂದಾಗಿ ಸಂಸ್ಕೃತ ಭಾಷೆಯ ಕುರಿತು ಗಂಭೀರವಾದ ವ್ಯಾಮೋಹವೊಂದು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ನನ್ನೊಳಗೆ ಜಾಗೃತವಾಗುತ್ತಿತ್ತು. ಮತ್ತು ಸಂಸ್ಕೃತ ಸುಲಭ ಓದಿಗೆ ದಕ್ಕುವ ವಿಷಯವಲ್ಲದೆಯೂ ಹೆಚ್ಚಿನ ಅಂಕಗಳನ್ನು ಪರೀಕ್ಷೆಯಲ್ಲಿ ಪಡೆಯುವುದು ಸಾಧ್ಯ ಎಂಬ ಗೆಳೆಯರ ನಡುವಿನ ವದಂತಿಯನ್ನು ನಿಜವೆಂದು ನಂಬಿ ಎಂಟನೆ ತರಗತಿಗೆ ವಿಷಯ ಆಯ್ಕೆಯ ಸಂದರ್ಭದಲ್ಲಿ ಸಂಸ್ಕೃತವನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡೆ. ಆದರೆ ತರಗತಿಗಳು ಆರಂಭವಾದ ಬಳಿಕ ಸಂಸ್ಕೃತ ವಿಷಯ ಆಯ್ಕೆಯ ನನ್ನ ಒಲವು ತಪ್ಪು ಎಂಬುದರ ಅರಿವಾಗತೊಡಗಿತು. ನಾನು ನನ್ನೆಲ್ಲ ಪಠ್ಯಗಳ ಜೊತೆಯಲ್ಲಿ ಸಂಸ್ಕೃತ ಪಠ್ಯವನ್ನು ಖರೀದಿಸಿ ತರಗತಿಗೆ ಹೋಗಲಾರಂಭಿಸಿದೆ. ಆದರೆ ಅದು ಏಕೋ ಸಂಸ್ಕೃತ ತರಗತಿಯಲ್ಲಿ ನನ್ನ ಉಪಸ್ಥಿತಿ ನಮ್ಮ ತರಗತಿಯ ಸಂಸ್ಕೃತ ಮೇಷ್ಟ್ರಿಗೆ ಹಿತವಾಗಿ ಕಾಣಲಿಲ್ಲ. ಬಹುತೇಕ ಬ್ರಾಹ್ಮಣ, ಗೌಡ, ಸಾರಸ್ವತ ಬ್ರಾಹ್ಮಣ ಇತ್ಯಾದಿ ಮೇಲ್ಜಾತಿಯ ಬೆಳ್ಳುಂಬೆಳಗಿನ ವಿದ್ಯಾರ್ಥಿ ಸಮುದಾಯದ ನಡುವೆ ಕಪ್ಪು ಬಣ್ಣದ ಒಬ್ಬನೇ ಒಬ್ಬ ವಿದ್ಯಾರ್ಥಿ ಇಡಿಯ ತರಗತಿಗೆ ಕಳಂಕದ ‘ಕಪ್ಪು ಚುಕ್ಕೆ’ ಎಂಬಂತೆ ನಮ್ಮ ಗುರುಗಳ ಕಣ್ಣಿಗೆ ಕಂಡಿರಬೇಕು. ಅವರು ತರಗತಿಯಲ್ಲಿ ತುಂಬ ವಿಶಿಷ್ಟವೆನ್ನಿಸುವ ದೃಷ್ಟಿಯಲ್ಲಿ ನನ್ನನ್ನು ನೋಡತೊಡಗಿದರು. ಅವರು ನನ್ನೆಡೆಗೆ ಬೀರುವ ನೋಟದಲ್ಲಿಯೇ “ಎಲಾ ಶೂದ್ರ ಮುಂಡೇದೆ ನೀನೂ ಸಂಸ್ಕೃತವ ಕಲೀತಿಯೇನೋ…?” ಎಂಬ ತಿರಸ್ಕಾರದ ದೃಷ್ಟಿ ಇರುವುದು ನನ್ನ ಅರಿವಿಗೆ ನಿಲುಕಲಿಲ್ಲ. “ಈ ಶೂದ್ರನಿಗೆ ಸಂಸ್ಕೃತವನ್ನು ಹೇಳಿಕೊಟ್ಟು ತಾನು ಪೂಜ್ಯ ಮನು ಮಹರ್ಷಿಯ ಘನ ಶಾಪಕ್ಕೆ ಪಕ್ಕಾದೆನಲ್ಲಾ…” ಎಂಬ ಅವರೊಳಗಿನ ಚಡಪಡಿಕೆಯನ್ನು ಅರ್ಥ ಮಾಡಿಕೊಳ್ಳುವ ಬುದ್ಧವಂತಿಕೆಯೂ ಅಂದು ನನಗಿರಲಿಲ್ಲ. ಈ ಶ್ರೀಪಾದರೆಂಬ ಸಂಸ್ಕೃತ ಶಿಖಾಮಣಿಗಳು ನಾನು ಸಂಸ್ಕೃತವನ್ನು ಬಿಟ್ಟು ಬಿಡುವಂತೆ ಬಾಯಿಬಿಟ್ಟು ಹೇಳಲಾಗದ ಸಂಕಟಕ್ಕೆ ವಾಮ ಮಾರ್ಗವೊಂದನ್ನು ಹಿಡಿದರು. ಚಡಪಡಿಕೆ ಸಂಕಟಗಳ ನಡುವೆಯೇ ಸಂಸ್ಕೃತ ವಚನ ವಿಭಕ್ತಿಗಳ ಕುರಿತು ಪಾಠ ಆರಂಭಿಸಿ ಸಂಸ್ಕೃತದಲ್ಲಿರುವ ಏಕವಚನ, ದ್ವಿವಚನ, ಬಹುವಚನಗಳನ್ನು ತಿಳಿಸಿ ನಾಮಪದ, ಸರ್ವನಾಮಗಳನ್ನು ಮೂರು ವಚನಗಳಲ್ಲಿ ಮತ್ತು ಸಂಸ್ಕೃತದ ಎಂಟು ವಿಭಕ್ತಿಗಳಲ್ಲಿ ರೂಪಾಂತರಿಸಿ ನಡೆಸಲು ಶ್ರುತಿ ಸ್ಮೃತಿ ಪರಂಪರೆಯ ಮೂಲಕ ಗುರುಕುಲದ ವಿದ್ಯಾಭ್ಯಾಸಕ್ಕೆ ಅನುಕೂಲಕರವಾಗಿ ಬಳಸಿದ,“ರಾಮಃ ರಾಮೌ ರಾಮಾಃ…” (ರಾಮ, ಇಬ್ಬರು ರಾಮರು, ಅನೇಕ ರಾಮರು) ಇತ್ಯಾದಿ ಉದಾಹರಣೆಯ ಶ್ಲೋಕ ಮಾದರಿಯೊಂದನ್ನು ಕಂಠಪಾಠ ಮಾಡಲು ತಿಳಿಸಿದರು. ಮತ್ತು ಮರುದಿನವೇ ಪಾಠ ಒಪ್ಪಿಸಲು ತಾಕೀತು ಮಾಡಿದ್ದರು. ವಸತಿ ನಿಲಯದ ನಿರ್ಜನ ಮೂಲೆಯಲ್ಲಿ, ಆಟದ ಬಯಲಿನಲ್ಲಿ, ಸ್ನಾನಕ್ಕೆ ನಿಂತಾಗಲೂ ಈ “ರಾಮಃ ರಾಮೌ…” ಪಠ್ಯ ಹಿಡಿದು ಕಂಠಪಾಠ ಮಾಡಿದೆ. ಆದರೆ ತರಗತಿಯಲ್ಲಿ ಗುರುಗಳು ನನ್ನನ್ನೆ ಎದ್ದು ನಿಲ್ಲಿಸಿ ಪಾಠ ಒಪ್ಪಿಸಲು ತಿಳಿಸಿದಾಗ ಒಂದಕ್ಷರವೂ ನನ್ನ ಬಾಯಿಂದ ಹೊರ ಬಾರದೆ ನಗೆಪಾಟಲಾದೆ. ಗುರುಗಳು ಇದನ್ನೇ ಅಸ್ತçವಾಗಿ ನಿತ್ಯವೂ ಬಳಸತೊಡಗಿದರು. ಅದೇನೋ ಹೇಳುವಂತೆ “ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ” ಪ್ರಯೋಗಿಸುವಂತೆ ನಿಷ್ಕುರಣೆಯಿಂದ ಅಸ್ತ್ರ ಪ್ರಯೋಗ ಮಾಡಿದರು. ಅಷ್ಟಕ್ಕೆ ನಿಲ್ಲದೆ ವೈಷ್ಣವಾಸ್ತ್ರ, ನೀಲಕಂಠಾಸ್ತ್ರಗಳನ್ನೂ ನೆರವಿಗೆ ತೆಗೆದುಕೊಂಡವರಂತೆ ಬೇರೆ ಬೇರೆ ದೃಷ್ಟಾಂತಗಳನ್ನು ಹೇಳಿ ನನ್ನನ್ನು ಹಿಂಸೆಗೀಡು ಮಾಡಿದರು. ಗುರುಗಳ ವ್ಯಂಗ್ಯೋಕ್ತಿಗಳು, ಸಹಪಾಠಿಗಳ ಅಪಹಾಸ್ಯದ ನಗುವಿನೊಡನೆ ಹತ್ತೆಂಟು ದಿನಗಳ ಕಾಲ ತೀವೃವಾದ ಹಿಂಸೆಯನ್ನು ಅನುಭವಿಸಿದೆ. ತರಗತಿ ಆರಂಭ ಆಗುತ್ತಿದ್ದಂತೆಯೇ ನನ್ನನ್ನು ಮೊದಲು ಎದ್ದು ನಿಲ್ಲಿಸುವುದು, ಹಲವು ಪ್ರಶ್ನೆಗಳನ್ನು ನನ್ನೊಬ್ಬನಿಗೇ ಕೇಳುವುದು… ಇತ್ಯಾದಿ ಆಕ್ರಮಣಗಳಿಂದ ಭಯ ನಾಚಿಕೆಯಲ್ಲಿ ನಾನು ನಿತ್ಯವೂ ಸಂಸ್ಕೃತ ತರಗತಿಯಲ್ಲಿ ಬೆವರಿಳಿದು ಬಸವಳಿಯುತಿದ್ದೆ. ಇದನ್ನು ನೋಡಿ ನೋಡಿ ಗುರುಗಳು ಹಿಂಸಾರತಿಯ ಆನಂದವನ್ನು ಅನುಭವಿಸುತ್ತಿದ್ದರು. ನನಗೆ ಸಂಸ್ಕೃತದ ಸಹವಾಸ ಸಾಕು ಅನಿಸಿತು. ಕೊಂಡು ತಂದ ಪುಸ್ತಕವನ್ನು ಸಹಪಾಠಿಯೊಬ್ಬನಿಗೆ ಅರ್ಧ ಬೆಲೆಗೆ ಮಾರಿ ಕೈತೊಳೆದುಕೊಂಡೆ. ಸಂಸ್ಕೃತವನ್ನು ಬಿಟ್ಟು ‘ಎಡಿಷನಲ್ ಕನ್ನಡ’ ಆಯ್ದುಕೊಂಡೆ ಗುರುಗಳು ನಿರಾಳವಾದರು. ಆದರೆ ಸಂಸ್ಕೃತದ ಕುರಿತಾದ ನನ್ನ ಪ್ರೀತಿ ನನ್ನೊಳಗೆ ಸುಪ್ತವಾಗಿ ಉಳಿದುಕೊಂಡಿತ್ತು. ಮುಂದೆ ಜಿ.ಸಿ. ಕಾಲೇಜಿನಲ್ಲಿ ಪದವಿ ತರಗತಿಯನ್ನು ಓದುವಾಗ ಪ್ರೊ.ಎಂ.ಪಿ.ಭಟರಲ್ಲಿ ವಿನಂತಿಸಿಕೊಂಡು ಸಂಸ್ಕೃತವನ್ನು ಮೈನರ್ ವಿಷಯವಾಗಿ ಆಯ್ದುಕೊಂಡೆ. ಮತ್ತು ಮೂರು ವರ್ಷಗಳಲ್ಲಿಯೂ ಸಂಸ್ಕೃತದಲ್ಲಿ ಪ್ರಥಮ ದರ್ಜೆಯಲ್ಲೇ ಉತ್ತೀರ್ಣನಾಗಿದ್ದೆ. ಹಾಗೆಂದು ಸಂಸ್ಕೃತದ ವಿಶೇಷ ಪಾಂಡಿತ್ಯವೇನೂ ದಕ್ಕಲಿಲ್ಲ. ಪರೀಕ್ಷೆಯಲ್ಲಿ ಕನ್ನಡದಲ್ಲಿಯೇ ಉತ್ತರಿಸುವ ಅವಕಾಶವಿದ್ದುದರಿಂದ ಹೆಚ್ಚಿನ ಅಂಕ ಗಳಿಕೆಗೆ ಪೂರಕವಾಯಿತು ಅಷ್ಟೆ. ಆದರೂ ಸಂಸ್ಕೃತದ ಒಂದಿಷ್ಟು ಕಾವ್ಯಾಭ್ಯಾಸ, ಅರಿವಿನ ವಿಸ್ತಾರವನ್ನು ಹೆಚ್ಚಿಸಿದ್ದು ನಿಜವೇ. ಯಕ್ಷಗಾನ ಕಲಾವಿದನಾಗಿ ಪಾತ್ರ ನಿರ್ವಹಿಸುವಾಗ ಒಂದಿಷ್ಟು ಶ್ಲೋಕಗಳನ್ನು ನಿರರ್ಗಳವಾಗಿ ಮಾತಿನ ಮಧ್ಯೆ ಪ್ರಯೋಗಿಸಲು ಅನುಕೂಲವಾದದ್ದು ಕೂಡ ಸಂಸ್ಕೃತದ ಕಲಿಕೆಯ ಪ್ರಯೋಜನ ಎಂಬುದನ್ನು ಮರೆಯಬಾರದು. ಅದಕ್ಕಾಗಿ ನನ್ನ ಪ್ರೀತಿಯ ಪ್ರಾಧ್ಯಾಪಕರಲ್ಲಿ ಒಬ್ಬರಾದ ಪ್ರೊ.ಎಂ.ಪಿ.ಭಟ್ ಅವರಿಗೆ ನಾನು ಸದಾ ಋಣಿಯಾಗಿರುವೆ. ********************** ರಾಮಕೃಷ್ಣ ಗುಂದಿ ಕನ್ನಡದ ಖ್ಯಾತ ಕತೆಗಾರ. ಅವಾರಿ, ಕಡಲಬೆಳಕಿನ ದಾರಿ ಗುಂಟ, ಅತಿಕ್ರಾಂತ, ಸೀತೆ ದಂಡೆ ಹೂವೇ …ಈ ನಾಲ್ಕು ಅವರ ಕಥಾ ಸಂಕಲನಗಳು. ಅವರ ಸಮಗ್ರ ಕಥಾ ಸಂಕಲನ ಸಹ ಈಚೆಗೆ ಪ್ರಕಟವಾಗಿದೆ.ಯಕ್ಷಗಾನ ಕಲಾವಿದ. ಕನ್ನಡ ಉಪನ್ಯಾಸಕರಾಗಿ ಅಂಕೋಲಾದ ಜೆ.ಸಿ.ಕಾಲೇಜಿನಲ್ಲಿ ಸೇವೆ ಪ್ರಾರಂಭಿಸಿ, ಕಾರವಾರದ ದಿವೇಕರ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. ಯಕ್ಷಗಾನ ಅಕಾಡೆಮಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಮಗ ಅಮೆರಿಕಾದಲ್ಲಿ ಸಾಫ್ಟ್‌ವೇರ್ ಎಂಜಿನಿಯರ್. ಅಗೇರ ಸಮುದಾಯದಿಂದ ಬಂದ ಗುಂದಿ ಅವರು ಅದೇ ಜನಾಂಗದ ಬಗ್ಗೆ ಪಿಎಚ್ಡಿ ಪ್ರಬಂಧ ಮಂಡಿಸಿ, ಡಾಕ್ಟರೇಟ್ ಸಹ ಪಡೆದಿದ್ದಾರೆ . ದಲಿತ ಜನಾಂಗದ ಕಷ್ಟ ನಷ್ಟ ನೋವು, ಅವಮಾನ, ನಂತರ ಶಿಕ್ಷಣದಿಂದ ಸಿಕ್ಕ ಬೆಳಕು ಬದುಕು ಅವರ ಆತ್ಮಕಥನದಲ್ಲಿದೆ. ಮರಾಠಿ ದಲಿತ ಸಾಹಿತಿಗಳ,ಲೇಖಕರ ಒಳನೋಟ , ಕನ್ನಡ ನೆಲದ ದಲಿತ ಧ್ವನಿಯಲ್ಲೂ ಸಹ ಇದೆ. ರಾಮಕೃಷ್ಣ ಗುಂದಿ ಅವರ ಬದುಕನ್ನು ಅವರ ಆತ್ಮಕಥನದ ಮೂಲಕವೇ ಕಾಣಬೇಕು. ಅಂತಹ ನೋವಿನ ಹಾಗೂ ಬದುಕಿನ ಚಲನೆಯ ಆತ್ಮಕಥನವನ್ನು ಸಂಗಾತಿ ..ಓದುಗರ ಎದುರು, ಕನ್ನಡಿಗರ ಎದುರು ಇಡುತ್ತಿದೆ
ಇನ್ನು ‘ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು’. ಹಾಗೇ ಅಕ್ಷರಗಳಿಂದಲೇ ಕೂಗಿ ಕರೆಯಬೇಕು ಎಲ್ಲಾ ಎಚ್ಚರಗಳಿಗೆ. ಅಪಾಯಗಳ ಬಾಯಿಗೆ ಆಹಾರವಾಗುವ ಮುನ್ನ .
ಅಂಕಣ ಬರಹ ಖ್ಯಾತ ಲೇಖಕಿ ಶೀಲಾ ಭಂಡಾರ್ಕರ್ ಅವರಿಂದ ಅಂಡಮಾನ್ ಪ್ರವಾಸದ ವಿಶಿಷ್ಟ ಅನುಭವಗಳ ಸರಣಿಬರಹ……….. ಅದ್ಯಾಯ-4 ಬೆಳಗಿನ ಜಾವ ಐದೂವರೆಗೆ ಇಲ್ಲಿಯ ಏಳುವರೆಯಷ್ಟು ಬೆಳಕು ಮತ್ತು ಎಳೆ ಬಿಸಿಲು. ಒಳ್ಳೆಯ ನಿದ್ರೆಯಾಗಿ ತಾಜಾತನ ತುಂಬಿಕೊಂಡಂತೆ ಮೈ ಮನಸ್ಸು ಉಲ್ಲಸಿತವಾಗಿತ್ತು. ಮನೆಯಲ್ಲಿದ್ದರೆ ಹಲವಾರು ಕೆಲಸಗಳು ಸಾಲಾಗಿ ಧಬಧಬನೆ ಮೈ ಮೇಲೆ ಬಿದ್ದ ಹಾಗೆ ಧಾವಿಸಿ ಬರುತಿದ್ದವು. ಇಲ್ಲಿ ಯಾವ ಕೆಲಸದ ಗೊಡವೆಯೂ ಇಲ್ಲದೆ ಹಾಯಾಗಿ ಆ ಬೆಳಗಿನ ಜಾವವನ್ನು ಆನಂದಿಸಿದೆ. ಸ್ನಾನಾದಿಗಳನ್ನು ಮುಗಿಸಿ ಬೆಳಗಿನ ಉಪಹಾರವೂ ಆಯಿತು. ಈ ದಿನ ಮೊದಲಿಗೆ ತಿರಂಗಾ ಪಾರ್ಕ್, ನಂತರ ಮ್ಯೂಸಿಯಂ ಮತ್ತು ಗವರ್ನಮೆಂಟ್ ಸಾಮಿಲ್. ಇಷ್ಟಾದ ಮೇಲೆ ನಮ್ಮ ಮೊದಲ ಹಡಗಿನ ಪ್ರಯಾಣ. ಸ್ವರಾಜ್ ದ್ವೀಪಕ್ಕೆ. ಹ್ಯಾವ್ಲೊಕ್ ಐಲ್ಯಾಂಡ್ ನ ಸ್ವದೇಶಿ ಹೆಸರು. ನೇತಾಜಿ ಸುಭಾಷ್ ಚಂದ್ರ ಬೋಸ್ ರ ಸ್ಮರಣಾರ್ಥವಾಗಿ ಸ್ವರಾಜ್ ದ್ವೀಪವೆಂದು ನಾಮಕರಣವಾಗಿದೆ. ತಿರಂಗಾ ಪಾರ್ಕ್ ನಲ್ಲಿ ಸ್ವಲ್ಪ ಹೆಚ್ಚು ಹೊತ್ತು ಕಳೆಯಲು ಬಿಟ್ಟಿದ್ದರು. ಮಕ್ಕಳೆಲ್ಲಾ ದೊಡ್ಡದಾದ ಆ ಪಾರ್ಕ್ ನ ಮೂಲೆ ಮೂಲೆಗಳಲ್ಲೂ ಫೋಟೊಗಳನ್ನು ಕ್ಲಿಕ್ಕಿಸುತಿದ್ದರು. ಸಮುದ್ರದ ದಂಡೆಯ ಮೇಲಿನ ಆ ಪಾರ್ಕ್ ಸುಂದರವಾಗಿತ್ತು. ಅಲ್ಲಿಂದ ಮ್ಯೂಸಿಯಂ ಗಳ ಕಟ್ಟಡ ಹತ್ತಿರಲ್ಲೇ ಇತ್ತು. ಅಂಡಮಾನ್ ನ ಜನ ಜೀವನ, ಅಲ್ಲಿಯ ಆದಿವಾಸಿಗಳ ಬಗ್ಗೆ ಚಿತ್ರಗಳು, ಸಮುದ್ರದಾಳದ ಜೀವ ಜಂತುಗಳ ಪರಿಚಯ, ಹವಳದ ಗಿಡಗಳು ಹೀಗೆ ಹಲವಾರು ವಸ್ತುಗಳು ಮ್ಯೂಸಿಯಮ್ ನಲ್ಲಿ ನೋಡಲು ಸಿಕ್ಕಿದವು. ಸಮುದ್ರಿಕಾ ಮರೈನ್ ಮ್ಯೂಸಿಯಮ್, ಪ್ರಾಣಿಶಾಸ್ತ್ರ ವಿಭಾಗ, ಮಾನವ ಶಾಸ್ತ್ರ, ಮತ್ಸ್ಯ, ಗುಡ್ಡಗಾಡು ಇವುಗಳ ಪ್ರತ್ಯೇಕ ಮ್ಯೂಸಿಯಮ್ ಗಳು ಹತ್ತಿರದಲ್ಲೇ ಇದ್ದುದರಿಂದ ಸುಮಾರು ಒಂದು ಗಂಟೆಗೂ ಹೆಚ್ಚಿನ ಸಮಯ ಇಲ್ಲಿ ಸುಂದರವಾಗಿ ಕಳೆಯಿತು. ಅಲ್ಲಿಂದ ಗವರ್ನಮೆಂಟ್ ಸಾಮಿಲ್, ಮರದ ಕೆತ್ತನೆಯ ಹಲವಾರು ಪೀಠೋಪಕರಣಗಳು, ಹಲವಾರು ಅಲಂಕಾರಿಕ ವಸ್ತುಗಳು. ನೋಡಿ ಕಣ್ತುಂಬಿಕೊಂಡೆವಷ್ಟೆ. ಅವುಗಳನ್ನು ಇಲ್ಲಿ ತರುವುದೂ ಕಷ್ಟ. ಮತ್ತೊಂದು.. ಪ್ರವಾಸಿಗರೆಂದು ಬೆಲೆಯೂ ಕೈಗೆಟಕದಷ್ಟಿತ್ತು. ಈ ಕಾರ್ಖಾನೆಯು 19 ನೆ ಶತಮಾನದಲ್ಲಿ 1883 ರಲ್ಲಿ ಕಟ್ಟಲ್ಪಟ್ಟಾಗ ಭಾರತದಲ್ಲಷ್ಟೇ ಅಲ್ಲ ಏಷಿಯಾದಲ್ಲೇ ಅತೀ ದೊಡ್ಡ ಮರದ ಕಾರ್ಖಾನೆಯಾಗಿತ್ತು. ಇದು ಅತ್ಯಂತ ಪುರಾತನವಾಗಿದ್ದು ಹಲವಾರು ಜಾತಿಯ ಮರದ ತೊಲೆಗಳನ್ನು, ಹಲಗೆಗಳನ್ನು ಇಲ್ಲಿ ಯಂತ್ರದ ಸಹಾಯದಿಂದ ಕೊಯ್ಯುವ ಈ ಕಾರ್ಖಾನೆಯಲ್ಲಿ ವರ್ಷಕ್ಕೆ ಸುಮಾರು 20000 ತೊಲೆಗಳನ್ನು ಸಂಗ್ರಹಿಸಿ ಪೋರೈಸಲಾಗುತ್ತದೆ. ಬ್ರಿಟಿಷರು ಈ ಕಾರ್ಖಾನೆಯನ್ನು ಸ್ಥಾಪಿಸಿ ಇಲ್ಲಿಂದ ದೊಡ್ಡ ಪ್ರಮಾಣದಲ್ಲಿ ಮರಗಳ ತೊಲೆಗಳನ್ನು, ಹಲಗೆಗಳನ್ನು ಲಂಡನ್ , ನ್ಯೂಯಾರ್ಕ್ ಮುಂತಾದ ಪಟ್ಟಣಗಳಿಗೆ ರಫ್ತು ಮಾಡುತಿದ್ದರು. 1942 ರಲ್ಲಿ ಜಪಾನಿಯರ ಬಾಂಬ್ ದಾಳಿಗೆ ತುತ್ತಾಗಿದ್ದ ಈ ಕಾರ್ಖಾನೆಯನ್ನು ಮತ್ತೆ ಪುನರ್ ನಿರ್ಮಿಸಲಾಯಿತು. ಬೆಳಿಗ್ಗೆ ನಾವು ಹೊರಡುವಾಗಲೇ ನಮ್ಮ ಲಗ್ಗೇಜ್ ಗಳನ್ನು ತಂದು ಲಾಂಜ್ ಲ್ಲಿ ಇಟ್ಟಿದ್ದುದರಿಂದ, ನಮಗಿಂತ ಮೊದಲೇ ಅವುಗಳು ನಮ್ಮ ಹಡಗು ನಿಲ್ದಾಣ ಅಥವಾ ಬಂದರಿನ ಬಳಿ ನಮಗಾಗಿ ಕಾಯುತಿದ್ದವು. ಟ್ರಾಲಿಗಳಲ್ಲಿ ತುಂಬಿಸಿ ತಳ್ಳಿಕೊಂಡು ಒಂದೆರಡು ಫರ್ಲಾಂಗ್ ದೂರ ನಡೆಯುವುದಿತ್ತು. ಸಾಮಾನುಗಳ ಟ್ರಾಲಿ ತಳ್ಳುವ ಕೆಲಸ ಶ್ರೀಪಾದ ಮತ್ತು ಧಾತ್ರಿಯದು. ಅವರೇ ಸ್ವಇಚ್ಛೆಯಿಂದ ಅದನ್ನು ಮಾಡುತಿದ್ದರು. ಹಡಗಿನ ಸ್ಟೋರೇಜ್ ಒಳಗೆ ನಮ್ಮ ಲಗ್ಗೇಜ್ ಗಳನ್ನು ಇಟ್ಟು ಹಡಗಿನ ಒಳಗೆ ಪ್ರವೇಶಿಸಿ ನೋಡಿದರೆ ವಿಮಾನದಲ್ಲಿರುವಂತೆಯೇ ಆಸನಗಳು. ಎರಡೂವರೆ ಗಂಟೆಗಳ ಪ್ರಯಾಣವಿತ್ತು ಪೋರ್ಟ್ ಬ್ಲೇರ್ ನಿಂದ ಸ್ವರಾಜ್ ದ್ವೀಪಕ್ಕೆ.ಗಾಜಿನ ಕಿಟಕಿಗಳಿಂದ ಸಮುದ್ರವನ್ನು ವೀಕ್ಷಿಸಬಹುದು. ಸಮುದ್ರದ ಮೇಲೆ ಹಡಗು ತೇಲುತ್ತಾ ಬಳುಕುತ್ತಾ ಸಾಗುವಾಗ ಏನೋ ಹೊಸ ಅನುಭವ. ದೊಡ್ಡ ಅಲೆಗಳು ಬಂದಾಗ ಹಡಗನ್ನೇ ಎತ್ತಿ ಎಸೆದಂತಾದಾಗ ಜೋರಾಗಿ ಕಿರುಚಬೇಕೆನಿಸುತ್ತದೆ. ಆದರೂ ಹಡಗಿನ ಪ್ರಯಾಣವೊಂದು ವಿಶಿಷ್ಟ ಆನಂದವನ್ನು ನೀಡಿತು. ಪ್ರಯಾಣದಲ್ಲಿನ ಹೊಟ್ಟೆ ತೊಳಸುವಿಕೆ, ತಲೆ ಸುತ್ತುವುದು ಇವೆಲ್ಲಾ ಸಾಮಾನ್ಯವಾಗಿ ಎಲ್ಲರ ಅನುಭವಕ್ಕೆ ಬರುತ್ತದೆ. ನಮಗೆ ಆ ದಿನ ಮದ್ಯಾಹ್ನದ ಊಟವನ್ನು ಪ್ಯಾಕ್ ಮಾಡಿ ತಂದು ಎಲ್ಲರಿಗೂ ಹಂಚಿದ್ದರು. ಒಬ್ಬೊಬ್ಬರಿಗೂ ಎರಡು ಚಪಾತಿ ಮತ್ತು ಪಲ್ಯ. ಮತ್ತು ವೆಜ್ ಪಲಾವ್ ಮತ್ತು ಸಲಾಡ್, ಜೊತೆಗೆ ಜ್ಯೂಸ್ ಕೊಟ್ಟಿದ್ದರು. ಪ್ರಯಾಣ ಸ್ವಲ್ಪ ಅಭ್ಯಾಸ ಆದ ಮೇಲೆ ಸೇವಿಸಲು ಹೇಳಿದ್ದರಿಂದ ಯಾರಿಗೂ ತಿನ್ನುವ ಅವಸರವಿರಲಿಲ್ಲ. ಅಲ್ಲದೇ ಹೊಟ್ಟೆ ಸಂಕಟವಾಗಿ ವಾಂತಿ ಬಂದರೆ ಎಂದು ಪೇಪರ್ ಬ್ಯಾಗ್ ಗಳನ್ನೂ ಇಟ್ಟಿದ್ದರು. ಹಡಗು ಸಾಗುತ್ತಿರುವಾಗ ಮಧ್ಯದಲ್ಲಿ ಜೋರಾದ ಗಾಳಿ ಬೀಸುವುದು, ದೊಡ್ಡ ದೊಡ್ಡ ಅಲೆಗಳು ಸಮುದ್ರದ ಅಡಿಯಿಂದ ಉಕ್ಕುವುದು ಮುಂತಾದ ಪ್ರತಿಕೂಲ ವಾತಾವರಣ ಉಂಟಾದಾಗ ವಿಮಾನದಲ್ಲಿದ್ದಂತೆಯೇ ಇಲ್ಲಿಯೂ ಮೈಕ್ ನಲ್ಲಿ ಹೇಳುತ್ತಾರೆ. ಸಣ್ಣಗೆ ಭಯವಾದರೂ ಕೂಡ ಪ್ರತಿಯೊಂದು ಕ್ಷಣವನ್ನೂ ಯಥೇಚ್ಛವಾಗಿ ಆನಂದಿಸಿದ್ದನ್ನು ಮಾತ್ರ ಮರೆಯುವಂತಿಲ್ಲ. ಮಾರ್ಗ ಮಧ್ಯದಲ್ಲಿ ಹಲವಾರು ಚಿಕ್ಕ ಚಿಕ್ಕ ದ್ವೀಪಗಳು ನೋಡಲು ಸಿಗುತ್ತವೆ. ಅಲ್ಲಿ ಜನ ಸಂಚಾರವಾಗಲಿ, ವಾಸವಾಗಲಿ ಕಾಣಲಿಲ್ಲ. ಎರಡೂವರೆ ಗಂಟೆಗಳ ಹಡಗಿನ ಪ್ರಯಾಣ ಮುಗಿಯುವುದರೊಳಗೆ ಎಲ್ಲರೂ ಊಟ ಮಾಡಿ ಮುಗಿಸಿದರು. ಸ್ವರಾಜ್ ದ್ವೀಪವನ್ನು ತಲುಪಿದಾಗ ನಮಗಾಗಿ ಬಸ್ ಕಾದು ನಿಂತಿತ್ತು. ಲಗ್ಗೇಜ್ ಗಳನ್ನೆಲ್ಲಾ ಅವರೇ ಎತ್ತಿ ಬಸ್ಸಿನ ನಾಲ್ಕು ಸೀಟಿನಲ್ಲಿ ಜೋಡಿಸಿ, ನಮ್ಮನ್ನೂ ಕೂರಿಸಿ ನಮಗಾಗಿ ಮೊದಲೇ ಕಾದಿರಿಸಿದ್ದ ರೆಸಾರ್ಟ್ ಗೆ ಕರೆತಂದರು. ಸುಂದರವಾದ ಜಾಗ, ಒಳ್ಳೆಯ ವಾತಾವರಣ, ಪಕ್ಕದಲ್ಲೇ ರೆಸ್ಟೋರೆಂಟ್ ಇತ್ತು. ನಮ್ಮ ಸಾಮಾನುಗಳನ್ನು ನಮ್ಮ ನಮ್ಮ ಕೋಣೆಯ ಒಳಗೆ ತಂದಿಟ್ಟರು. ಪರಸ್ಪರ ಪರಿಚಯಕ್ಕಾಗಿ ಎಲ್ಲರನ್ನೂ ಒಂದೇ ಸ್ಥಳದಲ್ಲಿ ಕರೆದು ನಿಲ್ಲಿಸಿದಾಗ, ಎಲ್ಲರೂ ಅವರವರ ಕುಟುಂಬವನ್ನು ಪರಿಚಯಿಸಿದರು. ಹದಿನಾರು- ಹದಿನೇಳು ವಯಸ್ಸಿರಬಹುದು, ಒಬ್ಬಳೇ ಹುಡುಗಿಯೊಬ್ಬಳು ನಮ್ಮ ಜೊತೆ ಬಂದಿದ್ದಳು. ಅವಳು ಇದು ಎರಡನೇ ಬಾರಿ ಅಂಡಮಾನ್ ಪ್ರವಾಸಕ್ಕೆ ಬರುವುದಂತೆ. ಯಾರೊಂದಿಗೂ ಮಾತಿಲ್ಲ, ಅವಳಷ್ಟಕ್ಕೆ ಅವಳು ಒಬ್ಬಳೇ ಇರುತಿದ್ದಳು. ಒಂದು ರೀತಿಯ ಖಿನ್ನತೆ ಅವಳನ್ನು ಕಾಡುತ್ತಿದೆಯೇನೋ ಅನಿಸುವಷ್ಟು ನಿರ್ಲಿಪ್ತಳಾಗಿ ಇರುತಿದ್ದಳು. ನಾವು ಉಳಿದುಕೊಂಡ ಆ ರೆಸಾರ್ಟ್ ನ ಹಿಂಭಾಗದಲ್ಲಿ ಖಾಸಗಿ ಬೀಚ್ ಇತ್ತು. ಸಣ್ಣದಾದ ತೀರ. ಅತಿಯಾದ ಅಲೆಗಳ ಅಬ್ಬರವಿಲ್ಲ. ಅಲ್ಲಿ ಹೋಗಿ ಕೂತ ನಮಗೆ ಎದ್ದು ಬರಲು ಮನಸ್ಸೇ ಬರಲಿಲ್ಲ. ರಾತ್ರಿ ಎಂಟರಿಂದಲೇ ಊಟ ಶುರು. ಯಾರಿಗೆ ಯಾವಾಗ ಬೇಕೋ ಹೋಗಿ ಊಟ ಮಾಡಬಹುದಿತ್ತು. ನಾವು ಊಟವಾದ ಮೇಲೆ ಮತ್ತೆ ಸಮುದ್ರ ತೀರಕ್ಕೆ ಹೋಗಿ ಕೂತೆವು. ಸಂಜೆಯ ಕತ್ತಲ ನೀರವತೆ, ಸಮುದ್ರದ ಸಣ್ಣನೆ ಮೊರೆತ, ಬೀಸುವ ಹಿತವಾದ ಉಪ್ಪು ನೀರಿನ ಗಾಳಿ, ಚಂದ್ರನ ಮೃದುವಾದ ಬೆಳಕು ಈ ಸಮಯವಿಲ್ಲೇ ನಿಲ್ಲಬಾರದೇ ಅನಿಸುವಂತಿತ್ತು. (ಮುಂದುವರೆಯುವುದು..) ************************* ಶೀಲಾ ಭಂಡಾರ್ಕರ್.
