ಸ್ವಾತ್ಮಗತ

ಅಭಿವೃದ್ಧಿಯಾಗಬೇಕಾದ ‘ಹೆಳವರು’..!

ಅಭಿವೃದ್ಧಿಯಾಗಬೇಕಾದ ‘ಹೆಳವರು’..!

ಇವರ ಒಟ್ಟು ಸಂಖ್ಯೆ ಸುಮಾರು 80 ಸಾವಿರಬಹುದು. ಇದಿಷ್ಟೇ ಈ ಜಾನಂಗದ ಜನರಿಗೆ 180 ಕ್ಕೂ ಹೆಚ್ಚು ಬೆಡಗುಗಳು ಅಥವಾ ಕುಲಗಳು ಇರಬಹುದು. ಅಂದರೆ, ಪ್ರತಿ 444 ಜನರಿಗೆ ಒಂದು ‘ಕುಲ’ವಾಯಿತು..!

ಅಲ್ಪಸ್ವಲ್ಪ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದರೂ ಇವರ ಮೂಲ ವೃತ್ತಿ ಭಿಕ್ಷಾಟನೆಯಾಗಿದೆ. ಈ ಜನಾಂಗ ಇವರ ಮೂಲ ಕಸುಬಾದ ಭಿಕ್ಷಾಟನೆ ಬಿಟ್ಟಿಲ್ಲ.ಅದೂ ಈ ಜನರು ಎಲ್ಲರ ಮನೆಗೆ ಅಂದರೆ ಕಂಡ, ಕಂಡವರ ಮನೆಗೆ ಭಿಕ್ಷಾಟನೆಗೆ ಹೋಗುವುದಿಲ್ಲ. ತಮ್ಮ ಒಕ್ಕಲು ಮನೆಯವರ ಮನೆಗೆ ಮಾತ್ರ ಭಿಕ್ಷಾಟನೆಗೆ ಹೋಗುತ್ತಾರೆ ಅಷ್ಟೇ…

ಇವರು ಅಂಗವಿಕಲರಲ್ಲ. ಆದರೂ ಅಂಗವೈಕಲ್ಯತೆಗೆ ಸಮಾನವಾದ ಪದದಿಂದ ಇವರನ್ನು ಸಂಬೋಧಿಸಲಾಗುತ್ತದೆ…

ಅವರೇ ಈ ಹೆಳವರು…–

ಗ್ರಾಮೀಣ ಪ್ರದೇಶದಲ್ಲಿ ಹೆಳವ ಎಂದರೆ ಸ್ವಾಧೀನ ಕಳೆದುಕೊಂಡ ಕಾಲನ್ನು ಹೊಂದಿರುವವನೆಂದರ್ಥ. ಹೆಳವ ಎಂಬುದು ಒಂದು ‘ಬುಡಕಟ್ಟು ಸಮುದಾಯದ’ ಹೆಸರು ಮಾತ್ರ. ಈ ಸಮುದಾಯಕ್ಕೆ ಹೆಳವ ಎಂಬ ಹೆಸರು ಬಂದಿದ್ದಕ್ಕೆ ಹಲವಾರು ಐತಿಹ್ಯಗಳಿವೆ. ಪುರಾಣಗಳಲ್ಲಿ ಉಲ್ಲೇಖವಾಗಿರುವಂತೆ ವ್ಯವಸಾಯ ಮಾಡುವ ಒಂದು ಕುಟುಂಬದಲ್ಲಿ 6 ಮಂದಿ ಗಂಡು ಮಕ್ಕಳಿರುತ್ತಾರೆ. ಅದರಲ್ಲಿ ಒಬ್ಬನಿಗೆ ಕಾಲು ಊನವಾಗಿರುತ್ತದೆ. ಆದರೆ, ಉಳಿದ ಐವರಿಗೆ ಈತನನ್ನು ಕಂಡರೆ ಆಗಿಬರುತ್ತಿರಲಿಲ್ಲ.


ಏಕೆಂದರೆ ನಾವೆಲ್ಲಾ ದುಡಿದು ತಂದಿದ್ದನ್ನು ಈತ ತಿನ್ನುತ್ತಾನೆ ಎಂಬ ಅಲಕ್ಷ್ಯ ಅವರಿಗಿತ್ತು. ಆದರೆ, ತಾಯಿಗೆ ಮಾತ್ರ ಈ ಊನ ಮಗನನ್ನು ಕಂಡರೆ ಎಲ್ಲಿಲ್ಲದ ಅಕ್ಕರೆ. ಇದರಿಂದ ಆಕ್ರೋಶಗೊಂಡ ಐವರು ಅಣ್ಣತಮ್ಮಂದಿರು ಕುಂಟ ಸೋದರನನ್ನು ಹತ್ಯೆ ಮಾಡಲೂ ಮುಂದಾಗುತ್ತಾರೆ. ಆದರೆ, ಮನೆಯಲ್ಲಿ ಸಾಕಿದ್ದ ಬಸವ(ಎತ್ತು) ಪ್ರತಿ ಸಂದರ್ಭದಲ್ಲೂ ಕುಂಟನ ನೆರವಿಗೆ ಬರುತ್ತದೆ.


ಕಡೆಗೊಂದು ದಿನ ಆಸ್ತಿ ಪಾಲು ಮಾಡುವ ಸಂದರ್ಭದಲ್ಲಿ ಮನೆಯ ಹಿರಿಯರೆಲ್ಲಾ ಮಕ್ಕಳನ್ನು ಕೂರಿಸಿ ಐವರು ಮಕ್ಕಳಿಗೆ ಆಸ್ತಿ ಪಾಲು ಮಾಡುತ್ತಾರೆ. ಕುಂಟನಿಗೆ ಸ್ವಂತಕ್ಕೆ ದುಡಿದು ತಿನ್ನುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಆತನ ಮುದ್ದಿನ ಎತ್ತು ಮತ್ತು ಗಂಟೆಯನ್ನು ನೀಡುತ್ತಾರೆ. ಈತ ಪ್ರತಿ ವರ್ಷ ಸುಗ್ಗಿ ಕಾಲದಲ್ಲಿ ಎತ್ತಿನ ಮೇಲೆ ಸವಾರಿ ಮಾಡಿ ಗಂಟೆಯನ್ನು ಬಾರಿಸುತ್ತಾ ಐವರು ಸೋದರರ ಮನೆಗೆ ಹೋಗಿ ತನ್ನ ಪಾಲಿನ ಕಾಳು ಕಡ್ಡಿಯನ್ನು ಭಿಕ್ಷಾ ರೂಪದಲ್ಲಿ ತಂದು ತಿನ್ನಬೇಕೆಂಬ ಷರತ್ತು ವಿಧಿಸುತ್ತಾರೆ.


ಕಾಲಕ್ರಮೇಣ ಈ ಕುಂಟನ ವಂಶವೃಕ್ಷ ಬೆಳೆಯಿತಾದರೂ ಕುಟುಂಬದಲ್ಲಿ ಯಾರೂ ಊನಗೊಂಡವರಿರಲಿಲ್ಲ. ಆದರೆ, ಅಪ್ಪ ಮಾಡಿದ ಭಿಕ್ಷಾಟನೆಯನ್ನು ಮಕ್ಕಳು, ಅವರ ಮಕ್ಕಳು ಮುಂದುವರೆಸುತ್ತಾ ಬಂದರು. ಇದು ಮುಂದೊಂದು ದಿನ ದೊಡ್ಡ ಸಂಸಾರವಾಗಿ ರೂಪುಗೊಂಡಿದೆ. ಇದೇ ಕಾರಣಕ್ಕಾಗಿ ಈ ಕುಟುಂಬ ಅಥವಾ ವಂಶವನ್ನು ‘ಹೆಳವ’ ಎಂದು ಕರೆಯಲಾಯಿತು ಎಂಬ ಪ್ರತೀತಿ ಪುರಾಣಗಳಲ್ಲಿ ದಾಖಲಾಗಿದೆ..!

ಭಿಕ್ಷಾಟನೆ ಒಕ್ಕಲಿಗರ ಅಥವಾ ಕೃಷಿಕರ ಮನೆಯಲ್ಲಿ ಭಿಕ್ಷೆ ಎತ್ತುವ ಈ ಕಾಯಕ ಇಂದಿಗೂ ಮುಂದುವರೆದಿದೆ…

ಎತ್ತಿನ ಮೇಲೆ ಸವಾರಿ ಮಾಡುತ್ತಾ ಇಡೀ ಕುಟುಂಬದೊಂದಿಗೆ ಊರಿಂದ ಊರಿಗೆ ಅಲೆಯುತ್ತಾ ಬಂದಿದ್ದ ಈ ಸಮುದಾಯವನ್ನು ಅಲೆಮಾರಿಗಳೆಂದು ಪರಿಗಣಿಸಲಾಗಿದೆ. ಇವರನ್ನು ಬುಡಕಟ್ಟು ವರ್ಗದವರೆಂದು ಹೇಳಲಾಗುತ್ತಿದ್ದರೂ ಕಾಡು ಮೇಡುಗಳಲ್ಲಿ ಜೀವಿಸುವುದಿಲ್ಲ. ಜನವಸತಿ ಪ್ರದೇಶಗಳಲ್ಲಿ ಜನರೊಂದಿಗೆ ಬೆರೆತು ಜೀವನ ಸಾಗಿಸುತ್ತಿದ್ದಾರೆ. ಅಲೆಮಾರಿಗಳು ಎಂದು ಕರೆಯಿಸಿಕೊಂಡಿದ್ದರೂ ಇತ್ತೀಚಿನ ದಿನಮಾನದಲ್ಲಿ ಹೆಳವರು ಒಂದು ಊರಿನಲ್ಲಿ ನೆಲೆ ನಿಂತಿದ್ದಾರೆ. ಆ ಊರಿನಿಂದಲೇ ತಮ್ಮ ಭಿಕ್ಷಾಟನೆ ಕಾಯಕವನ್ನು ನಡೆಸುತ್ತಿದ್ದಾರೆ…

ಈ ಸಮುದಾಯದ ಹೆಚ್ಚು ಜನ ರಾಜಧಾನಿ ಬೆಂಗಳೂರು ನಗರ ಜಿಲ್ಲೆಯಲ್ಲೇ ವಾಸವಾಗಿದ್ದರೆ. ಅಂದರೆ, ಈ ಜಿಲ್ಲೆಯಲ್ಲಿ ಸುಮಾರು 14 ಸಾವಿರದಷ್ಟು ಜನ ಇದ್ದಾರೆ. ಅದೇ ರೀತಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಸುಮಾರು 12 ಸಾವಿರದಷ್ಟಿದ್ದಾರೆ…

ಉಳಿದಂತೆ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಹರಿದು ಹಂಚಿ ಹೋಗಿರುವ ಸಮುದಾಯದ ಒಟ್ಟು ಕುಟುಂಬಗಳ ಸಂಖ್ಯೆ ಸುಮಾರು 14 ಸಾವಿರ ಇದ್ದರೆ, ಜನಸಂಖ್ಯೆ ಸುಮಾರು 80 ಸಾವಿರ…

ಈ ಸಮುದಾಯದಲ್ಲಿ ಪ್ರಮುಖವಾಗಿ ಎತ್ತಿನ ಹೆಳವರು, ಗಂಟೆ ಹೆಳವರು ಮತ್ತು ಚಾಪೆ ಹೆಳವರು ಎಂದು ಗುರುತಿಸಲಾಗಿದೆ…

ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಎತ್ತಿನ ಹೆಳವರು ಕಂಡುಬಂದರೆ, ದಕ್ಷಿಣ ಕರ್ನಾಟಕದಲ್ಲಿ ಗಂಟೆ ಹೆಳವರಿದ್ದಾರೆ. ಅದೇ ರೀತಿ ಬೀದರ್, ಗುಲ್ಬರ್ಗಾ, ಬಳ್ಳಾರಿ ಮತ್ತು ಶಿವಮೊಗ್ಗ, ಗದಗ ಸುತ್ತಮುತ್ತಲಿನ ಪ್ರದೇಶಗಳ ಜಿಲ್ಲೆಗಳಲ್ಲಿ ಚಾಪೆ ಹೆಳವರು ಜೀವಿಸುತ್ತಿದ್ದಾರೆ…

ಎತ್ತಿನ ಹೆಳವರು ಮತ್ತು ಗಂಟೆ ಹೆಳವರು ಚಾಪೆ ಹೆಳವರಿಗಿಂತ ಮೇಲ್ದರ್ಜೆಯವರೆಂದು ಹೇಳಲಾಗುತ್ತದೆ. ಏಕೆಂದರೆ, ಎತ್ತಿನವರು ಮತ್ತು ಗಂಟೆ ಹೆಳವರ ಸಂಪ್ರದಾಯಗಳಲ್ಲಿ ಬಹುತೇಕ ಸಾಮ್ಯತೆ ಕಂಡುಬರುತ್ತದೆ. ಗಂಟೆ ಹೆಳವರು ತಮ್ಮ ಬಗಲಲ್ಲಿ ದೊಡ್ಡ ಜೋಳಿಗೆ ಹಿಡಿದು ಗಂಟೆ ಬಾರಿಸುತ್ತಾ ನಿಗದಿತ ಒಕ್ಕಲುಗಳಿಗೆ ಅಂದರೆ ಕೃಷಿ ಮಾಡುವ ಒಂದು ಸಮುದಾಯದ ಮನೆಗಳಿಗೆ ಹೋಗಿ ಭಿಕ್ಷೆ ಎತ್ತುತ್ತಾರೆ. ಅವರು ಬಾರಿಸುವ ಗಂಟೆಯನ್ನು ಅವರ ಒಕ್ಕಲುಗಳೇ ಕೊಡಿಸಿರುತ್ತಾರೆ. ಅವರು ಕೊಡಿಸಿದ ಗಂಟೆಯನ್ನು ಅದೇ ಒಕ್ಕಲುಗಳಲ್ಲಿ ಬಾರಿಸಬೇಕು. ಒಂದು ಒಕ್ಕಲಿನ ಗಂಟೆಯನ್ನು ಮತ್ತೊಂದು ಒಕ್ಕಲಲ್ಲಿ ಬಾರಿಸಿದರೆ ಅದು ಅಪರಾಧವಾದಂತೆ…

ಆದರೆ, ಎತ್ತಿನ ಹೆಳವರು ಎತ್ತಿನ ಮೇಲೆ ಸವಾರಿ ಮಾಡಿಕೊಂಡು ಭಿಕ್ಷಾಟನೆ ಮಾಡುತ್ತಾರೆ. ಇದೊಂದು ವೈರುಧ್ಯ ಬಿಟ್ಟರೆ ಎರಡೂ ಪಂಗಡಗಳಲ್ಲಿ ಒಂದೇ ರೀತಿಯ ಸಂಪ್ರದಾಯವಿದೆ…

ಆದರೆ, ಭಿಕ್ಷಾಟನೆಯಲ್ಲಿ ತೊಡಗಿದರೂ ಚಾಪೆ ಹೆಳವರು ಹಂದಿಯನ್ನು ಸಾಕುತ್ತಾರೆ. ಇವರಿಗೆ ಇಂತಹದ್ದೇ ಒಕ್ಕಲಲ್ಲಿ ಭಿಕ್ಷೆ ಬೇಡಬೇಕೆಂಬ ನಿಬಂಧನೆಯೂ ಇಲ್ಲ. ಹೀಗಾಗಿ ಈ ಸಮುದಾಯ ಕೀಳು ಎಂಬ ಸಂಪ್ರದಾಯ ಕೆಲವರಲ್ಲಿ ಇದೆ…

ಎತ್ತಿನ ಮತ್ತು ಗಂಟೆ ಹೆಳವರ ಮಧ್ಯೆ ವೈವಾಹಿಕ ಸಂಬಂಧಗಳು ಇವೆಯಾದರೂ ಈ ಪಂಗಡಗಳು ಚಾಪೆ ಹೆಳವರ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳುವುದಿಲ್ಲ…

ಕೆಲವೇ ಕೆಲವು ಸಾವಿರದಷ್ಟು ಜನಸಂಖ್ಯೆ ಇರುವ ಈ ಮೂರು ಪಂಗಡಗಳಲ್ಲಿ ಅರಳಿ ಕುಲ, ಬಳಗಾರ ಕುಲ, ಬೆಳಗೂಗಿನವರು, ಬೇವಿನವರು, ಬೊಮ್ಮ, ಮಂಗಲವರು, ಮುತ್ತಿನ ಸತ್ತರಗಿಲವರು, ಮನೆಗಲವರು, ವಜಮೂನಿಯವರು, ಸಂಕಲವರು, ಸದರಿನವರು, ಹಾವುಲವರು, ಬಂಡಿಕುಲ, ಬಂಗಾರ ಕುಲ, ಗಂಟ ಕುಲ, ಜ್ಯೋತಿಕುಲ ಹೀಗೆ ಬರೋಬ್ಬರಿ 180 ಕ್ಕೂ ಅಧಿಕ ಬೆಡಗುಗಳಿವೆ…

ಇವರನ್ನು ‘ಕುಲ ಕೊಂಡಾಡುವರು’ ಎಂತಲೂ ಕರೆಯಲಾಗುತ್ತದೆ. ಏಕೆಂದರೆ, ಕೈಲೊಂದು ದಪ್ಪನೆಯ ಪುಸ್ತಕ. ಆ ಪುಸ್ತಕದಲ್ಲಿ ಭಿಕ್ಷಾಟನೆಗೆ ಹೋಗುವ ಒಕ್ಕಲುಗಳ ವಂಶವಾಳಿಯನ್ನು ನಮೂದಿಸಿರುತ್ತಾರೆ. ಇದನ್ನೇ ಭಿಕ್ಷಾಟನೆ ಸಂದರ್ಭದಲ್ಲಿ ಹೇಳಿ ಭಿಕ್ಷೆ ನೀಡುವಂತೆ ಮನವೊಲಿಸುತ್ತಾರೆ. ಇಂತಹ ಬೃಹತ್ ಪುಸ್ತಕಕ್ಕೆ ‘ಚಿಪ್ಪೋಡು’ ಎನ್ನಲಾಗುತ್ತದೆ…

ಅನಾದಿ ಕಾಲದಿಂದಲೂ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿಯುತ್ತಾ ಬಂದಿರುವ ಹೆಳವರ ಪರಿಸ್ಥಿತಿಯಲ್ಲಿ ಪ್ರಸ್ತುತ ಯಾವುದೇ ಬದಲಾವಣೆ ಕಾಣಲು ಸಾಧ್ಯವಾಗಿಲ್ಲ. ಕೃಷಿಯನ್ನು ಅವಲಂಬಿಸಿದ್ದ ಒಕ್ಕಲುಗಳಲ್ಲಿ ಬಹುತೇಕ ಮಂದಿ ವೃತ್ತಿಯನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೇ ಪರ್ಯಾಯ ಉದ್ಯೋಗ ಮಾಡುತ್ತಿದ್ದಾರೆ. ಹೀಗಾಗಿ ಈ ಒಕ್ಕಲುಗಳನ್ನೇ ನಂಬಿದ್ದ ಹೆಳವರಿಗೆ ಭಿಕ್ಷೆ ಇಲ್ಲವಂತಲ್ಲ, ಈ ಜನರು ಈಗ ಕಡಿಮೆಯಾಗಿದೆ ಅಷ್ಟೇ…

ಹೀಗಾಗಿ ಭಿಕ್ಷಾಟನೆಯೂ ಕಡಿಮೆಯಾಗುತ್ತದೆ. ಬಹುತೇಕ ಕುಟುಂಬಗಳು ಕೂಲಿ ನಾಲಿ ಬದುಕು ಸವೆಸುವಂತಹ ದುಸ್ಥಿತಿ ಬಂದೊದಗಿದೆ. ಆದರೆ, ಉತ್ತರ ಕರ್ನಾಟಕದ ಕೆಲವು ಪ್ರದೇಶಗಳಲ್ಲಿ ಬೆರಳೆಣಿಕೆಯಷ್ಟು ಕುಟುಂಬಗಳು ಮೂಲ ವೃತ್ತಿಯನ್ನು ಬಿಡದೇ ಮುಂದುವರೆಸಿಕೊಂಡು ಬಂದಿವೆ. ಇನ್ನೂ ಕೆಲವರು ಅಲ್ಪಸ್ವಲ್ಪ ಕೃಷಿ ಭೂಮಿ ಹೊಂದಿ ಕೃಷಿಯತ್ತ ವಾಲಿದ್ದಾರೆ…

ಇನ್ನು ಶೈಕ್ಷಣಿಕವಾಗಿ ಒಂದೊಂದೇ ಹೆಜ್ಜೆ ಮುಂದೆ ಬರುತ್ತಿರುವ ಸಮುದಾಯದ ಕೆಲವರು ನ್ಯಾಯಾಧೀಶರು, ವಕೀಲರು, ವೈದ್ಯ ವೃತ್ತಿ ಸೇರಿದಂತೆ ಮತ್ತಿತರೆ ಉನ್ನತ ಹುದ್ದೆಗೇರಿದ್ದಾರೆ. ಆದರೆ, ಇಂತಹವರ ಸಂಖ್ಯೆ ಗೌಣವಾಗಿದೆ. ಆದರೆ, ಸಾಮಾಜಿಕವಾಗಿ ತೀರಾ ಹಿಂದುಳಿದಿರುವ ಈ ಸಮುದಾಯಕ್ಕೆ ರಾಜಕೀಯ ಪ್ರಾತಿನಿಧ್ಯ ಎಂಬುದು ಮರೀಚಿಕೆಯೇ ಎನ್ನಬಹುದು…

ತೀರಾ ಕೆಳಸ್ತರದ ಜೀವನ ಸಾಗಿಸುತ್ತಿರುವ ಸಮುದಾಯವನ್ನು ಸರ್ಕಾರಗಳು ಇತರೆ ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ ಸೇರಿಸಿವೆ. ಆದರೆ, ಇದರಿಂದಾಗಿ ಇತರೆ ಸಮುದಾಯಗಳ ಜತೆ ಮೀಸಲಾತಿ ವಿಚಾರದಲ್ಲಿ ಸ್ಪರ್ಧಿಸಲಾಗದೇ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗುತ್ತಿದೆ…

ಸಮಾಜದಲ್ಲಿ ತೀರಾ ಹಿಂದುಳಿದಿರುವ ಹೆಳವರು ಬುಡಕಟ್ಟು ವರ್ಗಕ್ಕೆ ಸೇರಿದವರಾಗಿದ್ದಾರೆ. ಆದರೆ, ಇವರನ್ನು ಇತರೆ ಹಿಂದುಳಿದ ವರ್ಗಕ್ಕೆ ಸೇರಿಸಿರುವುದರಿಂದ ಸೂಕ್ತ ರೀತಿಯಲ್ಲಿ ಸರ್ಕಾರದ ಯಾವುದೇ ಮೀಸಲಾತಿ ಸೌಲಭ್ಯಗಳು ಸಿಗಂತಾಗಿವೆ. ಈ ಹಿನ್ನೆಲೆಯಲ್ಲಿ ಹೆಳವರು ಸೇರಿದಂತೆ ಎಲ್ಲಾ ಬುಡಕಟ್ಟು ಸಮುದಾಯಗಳಿಗೆ ಎಸ್ಸಿ, ಎಸ್ಟಿ ಮಾದರಿಯಲ್ಲಿ ಪ್ರತ್ಯೇಕ ವರ್ಗವನ್ನು ರೂಪಿಸಿ ಪ್ರತ್ಯೇಕ ಮೀಸಲಾತಿ ನೀಡಬೇಕು. ಈ ಮೂಲಕ ಇವರಿಗೆ ಸಂವಿಧಾನಬದ್ಧವಾದ ಸೌಲಭ್ಯಗಳನ್ನು ಕಲ್ಪಿಸಿ ಅವರ ಶ್ರೇಯೋಭಿವೃದ್ಧಿಗೆ ನಾಂದಿ ಹಾಡಬೇಕಿದೆ…

(ಡಾ.ಎ.ಎಸ್. ಪ್ರಭಾಕರ. ಬುಡಕಟ್ಟು ಅಧ್ಯಯನ ವಿಭಾಗದ ಮಾಹಿತಿ ಹೆಕ್ಕಿ ತೆಗೆಯಲಾಗಿದೆ, ಕನ್ನಡ ವಿಶ್ವವಿದ್ಯಾಲಯ)

******

ಕೆ.ಶಿವು ಲಕ್ಕಣ್ಣವರ

Leave a Reply

Back To Top