ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-7
ಸಮಾನತೆಯೋ ಸಹಬಾಳ್ವೆಯೋ?
ಲಾಕ್ ಡೌನ್ ಶುರುವಾದಾಗಿನಿಂದ ಕಿಟಕಿ ಬಾಗಿಲುಗಳು ಸದಾ ಮುಚ್ಚಿಯೇ ಇದ್ದರೂ ಅದೆಲ್ಲಿಂದ ಬರುತ್ತದೆಯೋ ಇಷ್ಟೊಂದು ಧೂಳು ಎನ್ನುತ್ತಾ ಗೊಣಗಾಡಿಕೊಂಡು ಸ್ವಚ್ಛತಾ ಕಾರ್ಯ ಶುರು ಮಾಡಿದೆ. ಅಷ್ಟರಲ್ಲಿ ಒಬ್ಬ ಗೆಳತಿ ಪೋನ್ ಮಾಡಿದಳು. ಬೆಳಿಗ್ಗೆ ಹತ್ತು ಗಂಟೆಯ ಒಳಗೆ ಮನೆಯ ಎಲ್ಲಾ ಕೆಲಸ ಮುಗಿದು ಹೋಗುತ್ತದೆಯೆ ಈಗ. ನನ್ನ ಗಂಡನೂ ಮನೆಯಲ್ಲಿಯೇ ಇರುವುದರಿಂದ ಅರ್ಧ ಮನೆಕೆಲಸ ಅವನಿಗೆ ತಗುಲಿ ಹಾಕ್ತೇನೆ… ನೀನೂ ಹಾಗೇ ಮಾಡು… ಎಂದಳು!. ‘ಮಹರಾಯ್ತಿ ನಮ್ಮ ಮನೆಯವರು ಆಫೀಸಿಗೆ ಹೋಗುತ್ತಾ ಇದ್ದಾರೆ’ ಎಂದೆ. ಮುಂದೆ ವಿಷಯ ಬದಲಾಯಿತು. ಇಂದು ಸಮಾನತೆ ಸಾಧಿಸುವುದೆಂದರೆ ಅನೇಕರು ಪತಿ ಪತ್ನಿ ಮನೆಗೆಲಸವನ್ನು ಅರ್ಧರ್ಧ ಮಾಡುವುದು ಎಂಬಂತೆ ನಡೆದುಕೊಳ್ಳುವುದನ್ನು ನೋಡಿ ನನಗೆ ನಗುವೂ, ವಿಷಾಧವೂ ಒಟ್ಟಿಗೇ ಆಗುತ್ತದೆ. ( ಕೆಲವು ಯುವ ದಂಪತಿಗಳು ಇದೇ ವಿಷಯದಲ್ಲಿ ಕಾದಾಡಿ ವಿವಾಹ ವಿಚ್ಛೇದನಕ್ಕೂ ಮುಂದಾಗಿದ್ದಾರೆ) ಇಬ್ಬರೂ ತಿಳುವಳಿಕೆಯಿಂದ ಹಾಗೆ ಕೆಲಸ ಮಾಡಿದರೆ ಸಂತೋಷ, ಒಳ್ಳೆಯದು. ಹಾಗಲ್ಲದಿದ್ದರೆ ದೈಹಿಕ ಮಾನಸಿಕ, ಬೌದ್ದಿಕ ಆಧಾರದ ಮೇಲೆ ಮನೆಕೆಲಸದ ಹಂಚಿಕೆ ಮಾಡಿಕೊಂಡರಾಯ್ತು ಅಷ್ಟೇ. ಸುಖವಾಗಿ, ಸಂತೋಷವಾಗಿ ಬದುಕುವುದು ಮುಖ್ಯ. ಈ ಸಮಯದಲ್ಲಿ ಗಂಡಸರನೇಕರು ಮನೆಗೆಲಸ ಕಲಿಯುತ್ತಿದ್ದೇವೆ.. ಪತ್ನಿಯರ ಕಷ್ಟವನ್ನು ಅರಿಯುತ್ತಿದ್ದೇವೆ ಎಂದು ಪತ್ರಿಕೆಗಳಲ್ಲಿ ಫೇಸ್ ಬುಕ್ಕಿನಲ್ಲಿ ಕೆಲವು ಗಂಡಸರು ಬರೆದುಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಟೈಂಪಾಸಿಗಾಗಿ ಹೆಂಡತಿಗೆ ಬೈಯುವುದು, ಹೊಡೆಯುವುದು, ಚಿತ್ರಹಿಂಸೆ ಕೊಡುವುದು… ಮಾಡುತ್ತಿದ್ದಾರೆ. .. ಸಾವು ನಮ್ಮ ಸುತ್ತಲೂ ಗಿರಕಿ ಹೊಡೆಯುತ್ತಿದೆಯೇನೋ ಎಂದು ಭ್ರಮಿಸುವ ಈ ಹೊತ್ತಿನಲ್ಲಿಯೂ ಜಗಳಗಳು ಬೇಕಾ?
ಒಂದೈದು ನಿಮಿಷ ಕಣ್ಮುಚ್ಚಿ ಕುಳಿತುಕೊಳ್ಳಿ. ನಿಮಗೆ ಯಾರ ನೆನಪು ಬಂದು ಮನಸ್ಸು ಕೃತಜ್ಞತೆಯಿಂದ ನಮಿಸುತ್ತದೆ ಎಂಬುದನ್ನು ಗಮನಿಸಿ. ಆಗ ನಿಮ್ಮ ಕಷ್ಟ ಕಾಲದಲ್ಲಿ ನಿಮ್ಮ ಜೊತೆಗಿದ್ದ, ನಿಮ್ಮನ್ನು ಸಂಕಷ್ಟದಿಂದ ಪಾರು ಮಾಡಿದವರ ನೆನಪು ಬರುತ್ತದೆ.. ಈ ಕಷ್ಟ ಕಾಲದಲ್ಲಿ ಹೆಂಡತಿ ಗಂಡನಿಗೆ ಅಥವಾ ಗಂಡ ಹೆಂಡತಿಗೆ ಸಹಾಯ ಸಹಕಾರ ನೀಡಿ ಬದುಕಬೇಕು. ಆಗ ಕಷ್ಟ ಕಳೆದರೂ ಜೀವನಪರ್ಯಂತ ಒಬ್ಬರಿಗೆ ಇನ್ನೊಬ್ಬರ ಬಗ್ಗೆ ಪ್ರೀತ್ಯಾದರಗಳು ಇಮ್ಮಡಿಯಾಗುತ್ತವೆ.
ಒಂದೆರಡು ತಲೆಮಾರಿನ ಹಿಂದಿನವರ ಬದುಕನ್ನು ಗಮನಿಸಿದರೆ ಮುಂಬಾಗಿಲಿಗೆ ಗಂಡಸರು ಯಜಮಾನರಾದರೆ ಹಿಂಬಾಗಿಲಿಗೆ ಮಹಿಳೆಯರು ಯಜಮಾನ್ತಿಯರಾಗಿದ್ದರು.
ಗಂಡಸರ ಕಾರಬಾರು ಗಂಡಸರಿಗೆ. ಹೆಂಗಸರ ಪಾರುಪತ್ಯ ಹೆಂಗಸರಿಗೆ. ಅದೂ ಬಂದು ಬಗೆಯ ಹೊಂದಾಣಿಕೆಯೇ ಆಗಿತ್ತಲ್ಲವೇ? ಅದಕ್ಕೆ ಸಹಬಾಳ್ವೆ ಎನ್ನಬಹುದು…
********
ಮುಂದುವರಿಯುವುದು…
ಮಾಲತಿ ಹೆಗಡೆ
Thumba ಚೆನ್ನಾಗಿದೆ ಮುಂದುವರೆದ ಭಾಗದ ನಿರೀಕ್ಷೆ ಮೂಡಿಸಿರುವ ನಿಮಗೆ ಅಭಿನಂದನೆ