ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ

ಮುಚ್ಚಿದ ಬಾಗಿಲು-ತೆರೆಯದ ಕಿಟಕಿ

ಭಾಗ-1

ಆಯ್ಕೆ ಬೆಳೆಗಾರರ ಕೈಯಲ್ಲಿಯೇ ಇದೆ

ಮೈಸೂರಿನ ನೈಸರ್ಗಿಕ ಕೃಷಿಕ ಕೈಲಾಸಮೂರ್ತಿಯವರು ನಿಸರ್ಗದೊಂದಿಗೆ ಒಡನಾಡುತ್ತ ತಮ್ಮ ಬಾಳ ಇಳಿಸಂಜೆಯನ್ನು ಅರ್ಥಪೂರ್ಣವಾಗಿ ಕಳೆಯುತ್ತಿರುವವರು. ಮನಸೊಬಾ ಪುಕುವೋಕಾ ಅವರ ಪ್ರಭಾವಕ್ಕೊಳಗಾದವರು.. ಬೆಳೆಗಿಂತ ಹೆಚ್ಚು ಕಳೆ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತೇನೆ ಎಂದು ತಮ್ಮ ಬಗ್ಗೆ ತಾವೇ ತಮಾಷೆ‌ ಮಾಡಿಕೊಳ್ಳುವ ಕೈಲಾಸಮೂರ್ತಿಯವರ ಬಿತ್ತನೆಯಿಂದ ಬೆಳೆದ ಭತ್ತದ ಕೃಷಿ ನೋಡಲು ಕೆಲ ಕಾಲದ ಹಿಂದೆ ಅವರ ಗದ್ದೆಗೆ ಹೋಗಿದ್ದೆ. ‘ಮುಂಗಾರಿನಲ್ಲಿ ಬೆಳೆದ ಭತ್ತದ ತೆನೆಗಳನ್ನು ಕೊಯ್ದು ಉಳಿದ ಹುಲ್ಲನ್ನು ಮಣ್ಣಿಗೇ ಬೆರೆಸಿದ್ದೇವೆ. ಹಿಂಗಾರಿಯಲ್ಲಿ ಅದೇ ಗದ್ದೆಯಲ್ಲಿ ಉದ್ದು ಸಾಸಿವೆ ಬೆಳೆದು ಕಾಲು ಕೊಯ್ದು ಅದನ್ನೂ ಮಣ್ಣಿಗೇ ಸೇರಿಸಿ ಉತ್ತಿ ಭತ್ತ ಬಿತ್ತನೆ ಮಾಡುತ್ತೇವೆ. ನಾವು ಭೂಮಿಗೆ ಗೊಬ್ಬರ ಹಾಕೋದಿಲ್ಲ. ಕಳೆ ತೆಗೆಯೋದಿಲ್ಲ, ಕೀಟನಾಶಕ ಹೊಡೆಯೋದಿಲ್ಲ. ಹೇಗಿದೆ ನೋಡಿ ನಮ್ಮ ಗದ್ದೆಯಲ್ಲಿ ಫಸಲು’..ಎಂದು ಹೆಮ್ಮೆಯಿಂದ ಹೇಳುವ ಕೈಲಾಸಮೂರ್ತಿ ಯವರ ಹೊಲ ಹಸಿರಿನಿಂದ ಕಂಗೊಳಿಸುತ್ತಿತ್ತು! ಇವರ ತೋಟದಲ್ಲಿ ಬೆಳೆದಿರುವ ಮಾವು, ಹಲಸು, ಪರಂಗಿ, ಬಾಳೆ, ಪಪ್ಪಾಯ.. ಸೇರಿದಂತೆ ಎಲ್ಲ ಬೆಳೆ ಬೆಳೆಯುವುದಕ್ಕೂ ಇದೇ ಶಿಸ್ತು. ಕಳೆ ತೀರಾ ಹೆಚ್ಚಾಗದಂತೆ ಕೊಯ್ದು ಅವುಗಳನ್ನೇ ಬೆಳೆಗೆ ಮುಚ್ಚಿಗೆ ಮಾಡುತ್ತಾರೆ. ಅಲ್ಪ ಪ್ರಮಾಣದ ನೀರು ಕೊಡುತ್ತಾರೆ. ಅದ್ಬುತ ಬೆಳೆ ತೆಗೆಯುತ್ತಾರೆ. ಕಳೆಗಿಡಗಳು ಮಣ್ಣಿನ ಜೀವಂತಿಕೆಯನ್ನು ಹೆಚ್ಚಿಸುತ್ತವೆ ಅವುಗಳ ಬುಡದಲ್ಲಿರುವ ಸೂಕ್ಷ್ಮಾಣು ಜೀವಿಗಳು ಮಣ್ಣನ್ನು ಫಲವತ್ತಾಗಿಸುತ್ತವೆ. ಬೆಳೆದ ಬೆಳೆದ ಬೆಳೆ ಸುರಕ್ಷಿತವಾದ ವಿಷಮುಕ್ತ ಆಹಾರ. ‘ಯಾರಿಗೇ ಧಾನ್ಯ, ಹಣ್ಣು, ತರಕಾರಿ ಮಾರುವಾಗ ನನಗೆ ಅಳುಕಿರುವುದಿಲ್ಲ. ಮುಂದಿನ ತಲೆಮಾರಿಗೆ ಸುಸ್ಥಿತಿಯಲ್ಲಿ ಭೂಮಿಯನ್ನು ಕೊಡುತ್ತೇನೆ.ಎಂಬ ಸಮಾಧಾನವೂ ಇದೆ ಎನ್ನುತ್ತಾರೆ’ ಕೈಲಾಸಮೂರ್ತಿ ಯವರು. ಮನೆ ಪಕ್ಕದಲ್ಲಿ ಸೋಲಾರ ಶಕ್ತಿಯಿಂದ ನಡೆಸಬಹುದಾದ ಮಿಲ್ಲ ಹಾಕಿಸಿಕೊಂಡಿದ್ದಾರೆ. ಈ ರೈತರು ತಾವು ಬೆಳೆಸಿದ ಪತ್ರವನ್ನು ಅಕ್ಕಿ ಮಾಡಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನೂ ಕೂಡಾ ಮಾಡುತ್ತಿದ್ದಾರೆ.


ಇವರ ಕೃಷಿ ಸಾಧನೆಗೆ ಹಲವು ಪ್ರಶಸ್ತಿ, ಪುರಸ್ಕಾರಗಳು ಸಂದಿವೆ. ಇವರ ತೋಟಕ್ಕೆ ದೇಶ ವಿದೇಶದಿಂದ ನೈಸರ್ಗಿಕ ಕೃಷಿ ಅಧ್ಯಯನಕ್ಕೆಂದೇ ಜನರು ಬರುತ್ತಾರೆ.

ಲಾಕ್ ಡೌನ್ ಅವಧಿಯಲ್ಲಿ ಮತ್ತೊಮ್ಮೆ ಅವರನ್ನು ಮಾತನಾಡಿಸಿದೆ. ಹೇಗಿದ್ದೀರಿ ಸರ್?…
ಚೆನ್ನಾಗಿದ್ದೇವೆ ಮೇಡಂ.ನಮ್ಮ ಬದುಕಿಗೆ ಅಗತ್ಯವಾದ ಬಹುತೇಕ ಬೆಳೆಗಳನ್ನೆಲ್ಲ ನಾವೇ
ಬೆಳೆದುಕೊಳ್ಳುವುದರಿಂದ ಮಾರುಕಟ್ಟೆಯ ಅವಲಂಬನೆ ನಮಗಿಲ್ಲ. ಯಾವುದೇ ಬೆಳೆ ಬೆಳೆಯಲು ನಾನು ಮಾಡುವ ಖರ್ಚು ಅತ್ಯಂತ ಕಡಿಮೆಯಾಗಿರುವುದರಿಂದ ಬೆಳೆ ಬಂದಿದ್ದಷ್ಟೂ ಲಾಭವೇ!, ತೋಟದಲ್ಲಿ ಬೆಳೆದ ಹಣ್ಣು ತರಕಾರಿಯನ್ನು ಕೊಯ್ದು ತರುವಾಗ ನಮಗೆ ಬೇಕಾದುದಷ್ಟನ್ನು ಇಟ್ಟುಕೊಂಡು ಉಳಿದದ್ದನ್ನು ಪರಿಚಿತರಿಗೆ ಸ್ನೇಹಿತರಿಗೆ ಹಂಚಿಬಿಡುತ್ತೇನೆ. ಕೊಯಿಲು ಮಾಡದೇ ಬಿಟ್ಟಿದ್ದನ್ನು ಪ್ರಾಣಿ ಪಕ್ಷಿಗಳು ತಿನ್ನುತ್ತವೆ. ಬೇಸಿಗೆಯಲ್ಲಿ ಅವುಗಳಿಗೂ ಅಹಾರದ ಕೊರತೆ ಇರುತ್ತದೆ. ಅದು ಕೂಡಾ ಧನ್ಯತೆ ಮೂಡಿಸುವ ಕೆಲಸವೇ… ಎಂದರು.

ಇಂತಹ ನೈಸರ್ಗಿಕ ಕೃಷಿ ಪ್ರಯೋಗವನ್ನು ಎಲ್ಲ ಕೃಷಿಕರೂ ಕೈಗೊಳ್ಳಬಹುದು. ಆರಂಭದಲ್ಲಿ ಅಷ್ಟು ಲಾಭದಾಯವವೆನಿಸದಿದ್ದರೂ ಕಡಿಮೆ ವೆಚ್ಚದಿಂದಾಗಿ ಕೃಷಿಕಾರ್ಯ ಹೊರೆ ಆಗುವುದಿಲ್ಲ ಎನ್ನುವುದನ್ನು ಖಾತ್ರಿಯಾಗಿ ಹೇಳಬಹುದು. ಆದರೆ ಕ್ರಮೇಣ ಇಡೀ ತೋಟ, ಗದ್ದೆಯ ಚಿತ್ರಣವನ್ನೇ ಬದಲಿಸಬಹುದಾದ ಸಾಧ್ಯತೆಯನ್ನು ಕೈಲಾಸಮೂರ್ತಿಯವರು ತಮ್ಮ ತೋಟ ಗದ್ದೆಯನ್ನು ಆಧಾರಸಮೇತವಾಗಿ ತೋರಿಸಿ ಹೇಳುತ್ತಾರೆ..

ರಾಸಾಯನಿಕ ಗೊಬ್ಬರ, ಕೀಟನಾಶಕ, ಕಳೆನಾಶಕಗಳ ಬಲದಲ್ಲಿ ಬೆಳೆ ಬೆಳೆಯುವ ಪಂಜಾಬ್ ಹಸಿರುಕ್ರಾಂತಿಯ ಮುಂಚೂಣಿಯಲ್ಲಿ ನಿಂತಿದೆ. ತತ್ಪರಿಣಾಮವಾಗಿ ಅಲ್ಲಿ ಸರಿಸುಮಾರಾಗಿ ಪ್ರತಿ ಮನೆಯಲ್ಲೂ ಕ್ಯಾನ್ಸರ್ ರೋಗಿಗಳಿದ್ದಾರೆ.


ಕೃಷಿಕರೇ ಆಯ್ಕೆ ಇನ್ನೂ ನಿಮ್ಮ ಕೈಯಲ್ಲೇ ಇದೆ. ವಿಷಕೃಷಿ, ಬರಡಾಗುತ್ತಿರುವ ಭೂಮಿ, ಬತ್ತುತ್ತಿರುವ ಜಲಮೂಲ, ಹದಗೆಡುವ ಆರೋಗ್ಯವೇ? ಅಥವಾ ನಿರ್ವಿಷ ಅನ್ನ ,ಫಲವತ್ತಾದ ಭೂಮಿ,ಶುದ್ಧ ಗಾಳಿ, ನೀರು, ಸುಸ್ಥಿರ ಕೃಷಿಯೇ?

ಕೊರೋನಾ ವಿಷಕೃಷಿಯ ಬಾಗಿಲು ಮುಚ್ಚುವಂತಾಗಲಿ.

ಮುಂದುವರಿಯುವುದು…

**********


Leave a Reply

Back To Top