ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ.
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ
ಗಝಲ್ ಲೋಕ
ಐದನೇ ಅದ್ಯಾಯ
ಮನಸೂರೆಗೊಳ್ಳುವ ಗಜಲ್
ಗಜಲ್ ಗದ್ಯ ಮಿಶ್ರಿತ ಪದ್ಯವೇ
ಗಜಲ್ ಗದ್ಯವೇ, ಪದ್ಯವೇ ಅಥವಾ ಗದ್ಯ ಮಿಶ್ರಿತ ಪದ್ಯವೇ ಎಂಬುದು ಇತ್ತೀಚಿನ ಕನ್ನಡ ಗಜಲಗಳನ್ನು ನೋಡಿದಾಗ ಸಾಕಷ್ಟು ಗೊಂದಲವಾಗುತ್ತದೆ. ಯಾಕೆಂದರೆ ಹೆಚ್ಚಿನ ಗಜಲಗಳು ಗದ್ಯ ಮಿಶ್ರಿತ ಪದ್ಯಗಳಾಗಿ ಕಂಡು ಬರುತ್ತವೆ. ಆದರೆ ಮೂಲತಃ ಗಜಲ್ ಎನ್ನುವುದು ಲಯಬದ್ಧವಾಗಿದ್ದೂ ಗೇಯತೆಯನ್ನು ಹೊಂದಿರಬೇಕು… ಪ್ರತಿಮೆ, ರೂಪಕ, ಉಪಮಾನ, ಉಪಮೇಯ, ಅಲಂಕಾರ ಮೊದಲಾದ ಕಾವ್ಯಾತ್ಮಕ ಅಂಶಗಳನ್ನು ಅತ್ಯಂತ ಕಲಾತ್ಮಕವಾಗಿ ದುಡಿಸಿಕೊಂಡು ಸುಮಧುರ ಪದಗಳೊಂದಿಗೆ ಛಂದೋಬದ್ದವಾಗಿ ಕಟ್ಟಿ ಕೊಟ್ಟು ಸುಲಭವಾಗಿ ಹಾಡಲು ಬರುವಂತಿರಬೇಕು. ಆದರೆ ಮುಖ್ಯವಾದ ಗಜಲನ ಈ ಲಕ್ಷಣವನ್ನೇ ಮರೆತಿರುವ ಕನ್ನಡದ ಖ್ಯಾತ ಗಜಲಕಾರರು ಹೆಸರು ಬಂದಂತೆ ತಾವು ರಚಿಸಿದ್ದೆಲ್ಲಾ ಗಜಲ್ ಎನ್ನತೊಡಗುತ್ತಾರೆ. ಅವರನ್ನು ಅನುಸರಿಸುವ ಉದಯೋನ್ಮುಖ ಗಜಲಕಾರರು ಇನ್ನೂ ಕೆಳ ಹಂತಕ್ಕೆ ಹೋಗಿ ಅತ್ಯಂತ ಕಳಾಹೀನ ಬರಹಗಳನ್ನು ಕೊಟ್ಟು ಬಿಡುತ್ತಾರೆ.. ಅದರಲ್ಲಿ ಸಾರವೂ ಇರುವುದಿಲ್ಲ ಮತ್ತು ಸತ್ವವೂ ಇರುವುದಿಲ್ಲ. ಇದರಿಂದ ಕಳೆಗುಂದುವ ಗಜಲ್ ಹಂತಹಂತವಾಗಿ ಸೊರಗಿ ಮೂಲ ಲಕ್ಷಣಗಳನ್ನು ಮತ್ತು ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಅಪಾಯವಿದೆ.
ಗಜಲ್ ಗಾಯನ
ಹಾಗಿದ್ದರೆ ಗಜಲ್ ಹಾಡಲು ಮಾತ್ರವೇ ಎಂದೆನಿಸಿದರೆ ಖಂಡಿತ ಸರಿ ಹೋಗುವಂತಿಲ್ಲ. ಬರೆದಿದ್ದೂ ಎಲ್ಲಾ ಗಜಲ್ ಆಗಲ್ಲ, ಅಂತೆಯೇ ಗಜಲ್ ಆದವು ಎಲ್ಲಾ ಹಾಡುವಂತೆ ಇರುವುದಿಲ್ಲ. ನಾವು ಹಾಡುವಂತೆ ಬರೆದರೆ ಅದನ್ನು ಆಗ ಕನಿಷ್ಠ ಪಕ್ಷ ಮನಸೂರೆಗೊಳ್ಳುವಂತೆ ವಾಚಿಸುವ ಮೂಲಕ ವಿಶಾಲ ಅವಕಾಶಗಳನ್ನು ತೆರೆದಿಡಬಹುದಾಗಿದೆ. ರಾಗ ತಾಳ ಭಾವಗಳನ್ನು ಹೊಂದುವುದು ಆ ಗಜಲನ ನಿಜವಾದ ಸಾಮರ್ಥ್ಯವಾಗಿರುತ್ತದೆ. ಅದರಿಂದಲೇ ಉರ್ದು ಮತ್ತು ಹಿಂದಿ ಗಜಲಗಳು ಯಶಸ್ಸು ಕಂಡಿದವು. ಗಜಲ್ ಹಾಡಿನ ರೂಪ ಪಡೆಯದಿದ್ದರೆ ಇಂದು ಗಜಲ್ ಕಂಡ ಗೆಲುವು, ಜನಪ್ರಿಯತೆ ಅದಕ್ಕೆ ನಿಜವಾಗಿಯೂ ದಕ್ಕುತ್ತಿರಲಿಲ್ಲ. ಗೀತೆಯ ಮಹೋನ್ನತ ಧಾಟಿಯನ್ನು ಹೊಂದಿದ್ದರಿಂದಲೇ ಬಹುತೇಕ ಹಿಂದಿ ಮತ್ತು ಉರ್ದು ಗಜಲಗಳು ಗೀತೆಗಳಾಗಿ ಜನಮಾನಸದಲ್ಲಿ ಅಚ್ಚಳಿಯದಂತೆ ನೆಲೆ ನಿಂತವು.
ಅದು ಎಂತಹ ಮೋಡಿ
ಆಹಾ!! ಎಂತಹ ಅದ್ಬುತ ಗೀತೆ ಎಂದು ಮೈ ದಡವಿ ಮೆಲ್ಲಗೆ ಮನ ಸ್ಪರ್ಶಿಸುವ ಹಳೆಯ ಹೆಚ್ಚಿನ ಹಿಂದಿ ಗೀತೆಗಳು ಗಜಲಗಳೇ ಎಂದರೆ ಗಜಲನ ರಸಸ್ವಾದ ಸರಳವಾಗಿ ಅರ್ಥವಾದೀತು. ಆ ಭಾಷೆ ಬಲ್ಲದವನು ಸಹ ತಲೆ ತೂಗಿ ಆಸ್ವಾದಿಸುವಂತೆ ಮಾಡುವ ತಾಕತ್ತು ಗಜಲನ ಗೇಯತೆಗೆ ಇರಬೇಕು. ಭಾವಗೀತೆಯ ಗುಣಗಳನ್ನು ಹೊಂದಿರುವ ಗಜಲಗಳು ಅದಕ್ಕಿಂತ ಗಾಢವಾದ ಭಾವ ತೀವ್ರತೆ ಮತ್ತು ಅಗಾಧವಾದ ಗಾಂಭೀರ್ಯದ ಮೂಲಕ ಹಿಡಿದಿಡುವ ಕೌಶಲ್ಯವೇ ಗಜಲಗಳ ಮೆರುಗಾಗಿ ಬೆರಗು ಹುಟ್ಟಿಸುತ್ತದೆ. ಸನಿಹ ವಿರಹಗಳ ವಿಕಾಸ ಮತ್ತು ತಲ್ಲಣಗಳು ಹೀಗೆ ಇನ್ನೂ ಯಾವುದೇ ವಿಷಯ ವಸ್ತುವಾದರೂ ಸಹ ಜೀವ ಪಡೆದಂತೆ ಭಾಸವಾಗಿ ನಮ್ಮನ್ನೇ ಆವರಿಸಿಕೊಳ್ಳುವ ಗಜಲ್ ಎಂಬ ಪ್ರೇಮ ಕಾವ್ಯ ಆ ಮೂಲಕ ಮತ್ತೆ ಮತ್ತೆ ತನ್ನ ಲಕ್ಷಣಗಳನ್ನು ಪ್ರಖರವಾಗಿ ಸಾಬೀತು ಮಾಡುತ್ತಲೇ ಬಂದಿದೆ.
ಗಜಲ್ ಮಾಂತ್ರಿಕರು
ಈ ಸಮಯದಲ್ಲಿ ಗಜಲ್ ಗಾಯನದ ಮೂಲಕ ಎಲ್ಲರ ಮನ ತಟ್ಟಿ ಗಜಲ್ ಮಾಂತ್ರಿಕರೆಂದೆ ಇತಿಹಾಸದಲ್ಲಿ ಉಲ್ಲೇಖಿಸಲ್ಪಡುವ ಕೆಲವು ಮಹಾನ್ ವ್ಯಕ್ತಿಗಳ ಕುರಿತು ಹೇಳಲೇಬೇಕಾಗುತ್ತದೆ. ಅಂತಹವರಲ್ಲಿ ಮೊದಲಿಗರೆಂದರೆ ಅದು ವಿಶ್ವವಿಖ್ಯಾತ ಗಜಲ್ ಚಕ್ರವರ್ತಿ ಎಂದೇ ಹೆಸರಾದ ಜಗಜೀತ್ ಸಿಂಗ್.
ಅವರದೇ ಆದ ಶೈಲಿಯಲ್ಲಿ ಗಜಲ್ ಗೀತೆಗಳನ್ನು ಪ್ರಸ್ತುತಪಡಿಸಿ ದೇಶ ವಿದೇಶಗಳ ಕೋಟಿ ಕೋಟಿ ಜನರ ಹೃದಯ ತಟ್ಟಿ ಒಂದು ತಲೆಮಾರಿನ ಅಭಿಮಾನವನ್ನೇ ಪಡೆದ ಜಗಜೀತ್ ಸಿಂಗ್ ಅವರು ಗಜಲ್ ಗಾಯನಕ್ಕೆ ಕೀರ್ತಿ ಶಿಖರವಾಗಿದ್ದಾರೆ. ಪದೇ ಪದೇ ಮೆಲುಕು ಹಾಕುವಂತೆ ಹಾಡಿ ವಿಭಿನ್ನ ವಿನೂತನವಾಗಿ ಗಜಲ್ ಸವಿ ಸ್ವಾದ ಉಣಬಡಿಸಿ ಒಂದು ಅತ್ಯುತ್ತಮ ಸಂಗೀತ ಪರಂಪರೆಯನ್ನೇ ಪ್ರತಿಪಾದಿಸಿದ ಇವರ ಗಜಲ್ ಗಾಯನಕ್ಕೆ ಮರುಳು ಆಗದವರೇ ಇಲ್ಲ ಎಂದರೆ ಅದು ಅತಿಶಯೋಕ್ತಿಯಲ್ಲ. “ದಿ ಅನ್ಪರ್ಗೆಟಬಲ್ಸ”, “ಸಮ್ ವನ್ ಸಮ್ ವೇರ್” “ವಕ್ರತುಂಡ ಮಹಾಕಾಯ” ಮೊದಲಾದ ಗಜಲ್ ಆಲ್ಬಮಗಳ ಮೂಲಕ ಜಗದ ಮನ್ನಣೆ ಗಳಿಸಿದ ಅವರು ಹಿಂದಿ ಚಿತ್ರರಂಗದ ಬಹು ಮುಖ್ಯ ಗಾಯಕರಾಗಿದ್ದರು.
ಮೋಹಕ ರೂಪದ ಸುಂದರಿ ಸುರಯ್ಯಾ ನಟಿಯಾಗಿ ಮಾತ್ರವಲ್ಲದೆ ಗಜಲ್ ಗಾಯನಗಳ ಮೂಲಕ ಮಾಧುರ್ಯದ ರಾಣಿ ಎಂದೇ ಖ್ಯಾತರಾದರು. ಎಲ್ಲ ತರಹದ ಗೀತೆಗಳನ್ನು ಹಾಡಿದ ಮಹಮ್ಮದ್ ರಫೀ ಅವರು ಗಜಲಗಳಿಗೆ ಮತ್ತು ಖವ್ವಾಲಿಗಳಿಗೂ ಹೊಸ ರೂಪ ನೀಡಿದರು. ಭಾರತೀಯ ಗಜಲ್ ಪರಂಪರೆಯ ಮತ್ತೋರ್ವ ಬಹು ದೊಡ್ಡ ಗಾಯಕಿಯಾದ ಬೇಗಂ ಅಕ್ತರ್ ತಮ್ಮ ಸುಮಧುರ ಕಂಠದಿಂದ ಅಕ್ಷರಶಃ ರಾಣಿಯ ಹಾಗೆ ಮೆರೆದರು. ಈ ಯಾದಿಯಲ್ಲಿ ಇನ್ನೂ ಹೇಳಲೇಬೇಕಾದ ಗಜಲ್ ಮಾಂತ್ರಿಕ ಗಾಯಕರೆಂದರೆ ಅದು ಗಜಲ್ ಕಿಂಗ್ ಮೆಹದಿ ಹಸನ್, ಗಜಲ್ ಉಸ್ತಾದ ಗುಲಾಂ ಅಲಿ, ಆಶಾ ಭೋಸ್ಲೆ, ಹರಿಹರನ್ ಇತರರು.. ಇಂದಿಗೂ ಸಹ ಗಜಲ್ ಗೀತೆಗಳು ಹಿಂದಿ ಚಿತ್ರರಂಗವನ್ನು ಆಳುತ್ತಲ್ಲಿವೆ
ಕನ್ನಡದಲ್ಲಿ ಗಜಲ್ ಗೀತೆಗಳು
ಕನ್ನಡದಲ್ಲಿ ಗಜಲ್ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿದ ಮೊದಲಿಗರೆಂದರೆ ಅದು ಗವಾಯಿಗಳು. ಅವರ ನಂತರ ರವಿ ಹಂದಿಗನೂರ ಅವರು ಗಜಲ್ ಗಾಯನದ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಜಲ್ ಗಾಯನದ ಛಾಪನ್ನು ಕನ್ನಡದಲ್ಲಿ ಮೂಡಿಸಿದರು. ಆದರೂ ಸಹ ಕನ್ನಡದಲ್ಲಿ ಗಜಲ್ ಗಾಯನ ಪ್ರಭಾವಿಸುವಷ್ಟು ಮಟ್ಟಿಗೆ ಇದುವರೆಗೂ ಬೆಳೆದೇ ಇಲ್ಲ. ಇನ್ನೂ ಕನ್ನಡ ಚಿತ್ರರಂಗವಂತೂ ಇದನ್ನು ಇನ್ನೂ ಸಮರ್ಥವಾಗಿ ಬಳಸಿಕೊಳ್ಳುವ ಪ್ರಯತ್ನವನ್ನು ಸಹ ಮಾಡಿಲ್ಲ. ಅಪರೂಪಕ್ಕೆ ಎಂಬಂತೆ ಉದಾಹರಣೆಗೆ ಒಂದೋ ಎರಡೋ ಅಷ್ಟೇ ಗಜಲಗಳು ಕನ್ನಡ ಚಿತ್ರರಂಗದಲ್ಲಿ ಗೀತೆಗಳಾಗಿ ಮೂಡಿ ಬಂದಿವೆ. ಅಂತಹ ಒಂದು ಅತ್ಯಂತ ಜನಪ್ರಿಯ ಗೀತೆ ಎಂದರೆ ವಿ. ಲಕ್ಷ್ಮಣರಾವ್ ರಚಿತ ರಮೇಶ ಅರವಿಂದ ಅವರ ಆಕ್ಸಿಡೆಂಟ್ ಚಿತ್ರದ ಗೀತೆ “ಬಾ ಮಳೆಯೇ ಬಾ”. ಇನ್ನೂ ಮೇಲಾದರೂ ಹೆಚ್ಚಿನ ಗಜಲಗಳು ಗೀತೆಗಳಾಗಿ ಚಾಲ್ತಿಗೆ ಬಂದು ಆ ಮೂಲಕ ಕಮರ್ಷಿಯಲ್ ಯಶಸ್ಸನ್ನು ಸಹ ಸಾಧಿಸಬೇಕಿದೆ, ಅಂತೆಯೇ ಗಜಲಕಾರರು ತಮ್ಮ ಗಜಲಗಳಿಗೆ ಗುಣಮಟ್ಟದ ಲಯ ಗೇಯತೆಗಳನ್ನು ಒದಗಿಸಬೇಕಿದೆ
******
ಬಸವರಾಜ ಕಾಸೆ