ಗಝಲ್ ಲೋಕ

ಗಝಲ್ ಲೋಕ’ ಬಸವರಾಜ್ ಕಾಸೆಯವರ ಅಂಕಣ. 
ಗಝಲ್ ಪ್ರಕಾರದ ಬಗ್ಗೆ ಸಂಪೂರ್ಣ ಮಾಹಿತಿನೀಡಬಲ್ಲ ಮತ್ತು ಹಲವರಿಗೆ ತಿಳಿದಿರದ ಗಝಲ್ ರಚನೆಯ ಹಿಂದಿರುವ ನಿಯಮಗಳನ್ನುತಿಳಿಸುವಪ್ರಯತ್ನ ಇಲ್ಲಿದೆ

ಗಝಲ್ ಲೋಕ

ಆರನೇ ಅದ್ಯಾಯ

Close-Up Photo of Red Flowers

ಈ ಸಂಭಾಷಣೆ

ಹತ್ತಾರು ಗಜಲ್ ಸಂಕಲನ ಹೊರ ತಂದಿರುವ ಒಬ್ಬರು ಖ್ಯಾತ ಗಜಲಕಾರರು ಮತ್ತು ಇನ್ನೊಬ್ಬರು ಅಷ್ಟಿಷ್ಟು ಹೆಸರು ಮಾಡುತ್ತಿರುವ ಗಜಲ್ ನಿಪುಣರ ನಡುವೆ ಒಮ್ಮೆ ನಡೆದ ಸಂಭಾಷಣೆ…

“ಏನು ಸರ್ ಇದು ಗಜಲ್ ಅಂತೀರಾ, ಆದರೆ ಕಾಫಿಯಾ ರಧೀಪ್ ಏನು ಇಲ್ಲ… ಅದು ಹೇಗೆ ಇದು ಗಜಲ್ ಆಗುತ್ತೆ”

“ಅದು ಹಾಗೆ ಗಜಲ್ ಆಗುತ್ತದೆ, ನನ್ನದು ಒಂಥರಾ ಮುಕ್ತ ಗಜಲ್”

“ಅದು ಯಾವುದು ಸರ್ ಮುಕ್ತ ಗಜಲ್, ಹಾಗೂ ಒಂದು ವಿಧ ಇದೀಯಾ??? ಆದರೆ ನನ್ನ ಇಷ್ಟು ವರ್ಷಗಳ ಅಧ್ಯಯನದಲ್ಲಿ ಅಂತಹ ಒಂದು ವಿಧ ನಾನು ಕೇಳೇ ಇಲ್ವಲ್ಲ”

“ಇರಬಹುದು, ಇಲ್ಲದೆಯೂ ಇರಬಹುದು… ಇದೊಂದು ತರಹ ನನ್ನ ವಿಶೇಷ ಗಜಲ್”

“ಏನು ಸರ್ ಅಡ್ಡ ಗೋಡೆ ಮೇಲೆ ದೀಪ ಇಡೋದು ಅಂದರೆ ಇದೇನಾ…!!! ಗಜಲ್ ನಿಯಮ ಗುಣಲಕ್ಷಣಗಳು ಪಾಲನೆಯಾಗದ ಬರಹಕ್ಕೆ ವಿಶೇಷ ಮುಕ್ತ ಗಜಲ್ ಅಂತೀರಿ”

“ಇದನ್ನು ಯಾರಿಗಾದರೂ ಹೊಸಬರಿಗೆ ಹೇಳಿ, ನನ್ನ ಅಂತಹ ದೊಡ್ಡ ಗಜಲಕಾರರಿಗೆ ಕೇಳುವ ಮಾತು ಇದಲ್ಲ”

“ಅಂದರೆ ಜನಪ್ರಿಯರಾದ ಕೂಡಲೇ ನಿಯಮವೆಲ್ಲಾ ಗಾಳಿಗೆ ತೂರಿ ಹೇಗೆ ಬರೆದರೂ ನಡಿದೀತು ಎನ್ನುವುದು ನಿಮ್ಮ ನೀತಿನಾ?”

“ನಿಮಗೆ ಹಾಗೆ ಅನಿಸಿದರೆ ಹಾಗೆ ಅಂದುಕೊಳ್ಳಿ ಪರವಾಗಿಲ್ಲ… ನಾನು ಅಷ್ಟು ಎಲ್ಲಾ ಇಲ್ಲದೇನೇ ಈ ಮಟ್ಟಕ್ಕೆ ಬೆಳೆದಿಲ್ಲ, ಎಷ್ಟೆಲ್ಲಾ ನನ್ನ ಅಭಿಮಾನಿಗಳು ಎದ್ದು ಬಿದ್ದು ಓದಿ ವಾವ್ ಸೂಪರ್ ಅಂತ ಇರಲಿಲ್ಲ”

“ಖ್ಯಾತರಾದ ಮೇಲೆ ನೀವು ಮಾಡಿದೆಲ್ಲಾ ಸರಿ, ಬರೆದಿದ್ದು ಎಲ್ಲಾ ಸೂಪರ್ ಎನ್ನುವವರು ಇದ್ದದ್ದೇ ಬಿಡಿ”

“ಓದುಗರಿಗೆ ಮುಖ್ಯ ಅದರ ವಿಷಯ ವಸ್ತು ಮತ್ತು ಅದನ್ನು ನಾವು ಭಾವಗಳಲ್ಲಿ ಅದ್ದಿ ತೆಗೆದು ಪ್ರಸ್ತುತಪಡಿಸುವ ರೀತಿ ಮಾತ್ರ… ಇವೆಲ್ಲಾ ನಿಮಗೆ ಗೊತ್ತಾಗಲ್ಲ, ಸುಮ್ಮನೆ ಎದ್ದು ಹೋಗಿ ತಲೆ ತಿನ್ನೋದು ಬಿಟ್ಟು”

“ಓದುಗರಿಗೆ ಏನು ಮುಖ್ಯ ಅನ್ನುವ ನಿಮ್ಮ ಮಾತು ಸರಿ, ಆದರೆ ಓದುಗರಿಗೆ ನಿಯಮಗಳ ಬಗ್ಗೆ ಗೊತ್ತಿರಲ್ಲ… ಆದ್ದರಿಂದ ನೀವು ಗಜಲ್ ಅಂತ ಹಾದಿ ತಪ್ಪಿಸುವ ಬದಲು ಕವನ ಅಥವಾ ಪದ್ಯದ ಪ್ರಕಾರ ಅಂತ ಹೇಳಿ”

“ನೋಡಪಾ ನಾನು ನಿಯಮಗಳನ್ನು ಒಪ್ಪಿಕೊಳ್ಳಲ್ಲ, ಆದರೆ ಲಕ್ಷಣಗಳನ್ನು ಮಾತ್ರ ಅನುಸರಿಸುವೆ… ಆದ್ದರಿಂದ ಗಜಲ್ ಚೌಕಟ್ಟು ಮತ್ತು ದ್ವಿಪದಿ ಅಲ್ಲೇ ಇದೆ ಅಲ್ವಾ”

“ಹಾಗಾದರೆ ಅದು ದ್ವಿಪದಿಗಳು ಅಂತ ಹೇಳಿಕೊಳ್ಳಿ… ಉರ್ದುನಿಂದ ಬಂದ ಪರ್ಧಗೂ ಕೂಡ ಅಷ್ಟೇ ಪ್ರಾಮುಖ್ಯತೆ ಇದೆ. ಸಾಹಿತ್ಯದ ಎಲ್ಲಾ ಪ್ರಕಾರಗಳು ಒಂದಕ್ಕಿಂತ ಒಂದು ಉತ್ತಮವಾದುದೇ… ಇನ್ನೂ ನೀವು ಹೇಳುವ ಚೌಕಟ್ಟಿನಲ್ಲಿಯೇ ಪರ್ಧ ಕೂಡ ಬರುತ್ತೆ. ಅಷ್ಟು ಇದ್ದ ಮಾತ್ರಕ್ಕೆ ಅದು ಗಜಲ್ ಆದೀತೆ “

“ನೋಡಿ ನನಗೆ ಇಂತಹ ಪ್ರಶ್ನೆಗಳು ಇಷ್ಟ ಆಗಲ್ಲ, ಪಿತ್ತ ನೆತ್ತಿಗೇರಿಸಬೇಡಿ. ನಿಮಗೆ ಕವನ ಎನಿಸಿದರೆ ಕವನ, ಪರ್ಧ ಎನಿಸಿದರೆ ಪರ್ಧ ಅಂತಾನೇ ಅಂದುಕೊಳ್ಳಿ. ಅದರಿಂದ ನನಗೇನು ತೊಂದರೆ ಇಲ್ಲ”

“ಏನು ಸರ್ ಹೀಗೆ ಹೇಳತೀರಾ, ನಿಮ್ಮನ್ನೇ ಅನುಸರಿಸುವ ನೂರಾರು ಹೊಸ ಗಜಲಕಾರರ ಕಥೆ ಹೇಗೆ”

“ಅವೆಲ್ಲವೂ ನನಗೆ ಬೇಕಿಲ್ಲ, ಇನ್ನೂ ಬರತೀನಿ”

ಈ ಸಂಭಾಷಣೆ ಕೇಳಿದ ನಂತರ ನಿಮಗೆ ಗೊತ್ತಾಗಿರುತ್ತೆ ಕೆಲವು ವಿಷಯಗಳು ಆದ್ದರಿಂದ ಇದನ್ನು ವಿವರಿಸುವ ಗೋಜಿಗೆ ಹೋಗುವುದಿಲ್ಲ. ಯಾರನ್ನೇ ಒಬ್ಬರನ್ನು ಅನುಸರಿಸುವ ಬದಲು ಹತ್ತಾರು ಬೇರೆ ಬೇರೆ ಬರಹಗಾರರು ಬರೆದ ಕೃತಿಗಳ ಸತತ ಅಧ್ಯಯನ ಮಾತ್ರ ಯಾವುದೇ ಒಂದು ಸಾಹಿತ್ಯದ ಪ್ರಕಾರದ ಬಗ್ಗೆ ತಿಳಿದುಕೊಳ್ಳಲು ಅತಿ ಉಪಯುಕ್ತ. ಹೆಚ್ಚಿನ ಖ್ಯಾತನಾಮರು ಯಾರು ಆ ಬಗ್ಗೆ ಉಚಿತವಾಗಿ ತಿಳಿಸಿ ಕೊಡುವ ಕೆಲಸ ಮಾಡುವುದಿಲ್ಲ. ಪ್ರಸ್ತುತ ಹೆಚ್ಚಿನವರು ಯಾವುದಾದರೂ ಒಂದು ರೀತಿಯ ಪ್ರತಿಫಲ ಅಪೇಕ್ಷೆಯಲ್ಲಿ ಇರುವುದು ಬಹು ಬೇಸರಕರ ಸಂಗತಿ. ತನ್ನ ಹೊಸ ಪುಸ್ತಕಕ್ಕೆ ಮುನ್ನುಡಿ ಬರೆದು ಕೊಡಿ ಸರ್ ಎಂದು ಹೋದ ಒಬ್ಬ ಉದಯನ್ಮೋಖ ಬರಹಗಾರನಿಗೆ ಒಬ್ಬ ದೊಡ್ಡ ಸಾಹಿತಿ ಕೇಳಿದ್ದು ಕೇವಲ ಹತ್ತು ಸಾವಿರ ಗೌರವಧನ ಮಾತ್ರ.

ಒಂದು ಉತ್ತಮ ಗಜಲ್ ರೂಪಗೊಳ್ಳಲು ವಿಷಯ ವಸ್ತು ಮತ್ತು ಪ್ರಸ್ತುತಪಡಿಸುವ ರೀತಿಯೊಂದಿಗೆ ಅದರ ನಿಯಮಗಳು ಅಷ್ಟೇ ಮುಖ್ಯವಾಗಿರುತ್ತವೆ. ಯಾವುದೇ ಬರಹವಾದರೂ ಅದು ಖಂಡಿತವಾಗಿಯೂ ಆಯಾ ಸಾಹಿತ್ಯ ಪ್ರಕಾರದ ಗುಣಲಕ್ಷಣಗಳಿಗೆ ನಿಷ್ಠೆಯಿಂದ ಕೂಡಿದ್ದು ಅದಕ್ಕೆ ಬದ್ಧವಾಗಿ ಇರಬೇಕು. ಆ ಕ್ಷಣಕ್ಕೆ ಮತ್ತು ಕೆಲವರಿಗೆ ಚೆನ್ನಾಗಿ ಇದೆ ಎನಿಸಿದರೂ ದೀರ್ಘಕಾಲದಲ್ಲಿ ನಿಷ್ಠವಾಗಿರದ ಬರಹ ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತದೆ. ಸಾಹಿತ್ಯದ ಯಾವುದೇ ವಿಧ ತೆಗೆದುಕೊಂಡರೂ ಸಹ ಪ್ರತಿಯೊಂದು ತನ್ನದೇ ಆದ ಲಕ್ಷಣಗಳನ್ನು ಹೊಂದಿದ್ದೂ ಅದರಿಂದಲೇ ಅದು ಇತರೆ ವಿಧಗಳಿಗಿಂತ ಪ್ರತ್ಯೇಕವಾಗಿ ತನ್ನನ್ನು ತಾನು ಗುರುತಿಸಿಕೊಂಡು ಅಸ್ತಿತ್ವ ಪಡೆದು ವಿಶೇಷ ಎನಿಸಿಕೊಳ್ಳುತ್ತದೆ, ಅಂತೆಯೇ ಗಜಲ್ ಸಹ…

********

ಬಸವರಾಜ ಕಾಸೆ

3 thoughts on “ಗಝಲ್ ಲೋಕ

  1. ನಮಸ್ತೇ ಸರ್ ಜೀ
    ನೀವು ವಾಸ್ತವ ಚಿತ್ರಣ ತೆರೆದಿಟ್ಟಿದ್ದೀರಿ…
    ಹೀಗೆಯೇ ತಮ್ಮ ಸಾಹಿತ್ಯ ಪಯಣ ಸಾಗಲಿ…
    ಧನ್ಯವಾದಗಳು..

  2. ದೀಪದ ಅಡಿಭಾಗದ ನೆರಳು ಕಾಣದ ಹಾಗೆ ತಾನು ತನ್ನ ನೆರಳನ್ನು ಅರಿಯದ ಪರಿಸ್ಥಿತಿ ಗಳ ಪರಿಣಾಮ ಹೀಗೆ ಮಾಡುತ್ತವಬುದು ಕಟು ಸತ್ಯ.ಈ ಲೇಖನ ಓದಿದರೂ ಅಂತಹವರು ಬದಲಾಗಲಾರರು.#ಉತ್ತಮ ಸಂದೇಶ ನೀಡಿದ್ದೀರಿ.

  3. ಹೌದು ಸರ್, ತಾವು ವಾಸ್ತವ ತೆರೆದಿಟ್ಟೀದ್ದೀರಿ. ಏನೇ ಆಗಲಿ ಒಂದು ಕ್ರಮಬದ್ಧ ನಿಯಮಪಾಲನೆ ಬೇಕು ಅದನ್ನು ಪಾಲಿಸಲು ಆಳವಾದ ಅಧ್ಯಯನ ಮಾತ್ರ ಸಹಕಾರಿಯಾಗಬಲ್ಲದು. ಓದಿ ಸಂತಸವಾಯಿತು.

Leave a Reply

Back To Top