ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-10
ಆತ್ಮಾವಲೋಕನಕ್ಕಿದು ಸಕಾಲ..
ಉಳಿದೆಲ್ಲ ಕ್ಷೇತ್ರಗಳಲ್ಲಿಯೂ ದುಡಿಮೆ ನಿಂತರೂ ಕೃಷಿಕ್ಷೇತ್ರದಲ್ಲಿ ದುಡಿಮೆ ನಿಂತಿಲ್ಲ. ಅದನ್ನು ನಿಲ್ಲಿಸುವಂತಿರುವುದೂ ಇಲ್ಲ.ದಾಸ್ತಾನು ಮಾಡಬಹುದಾದ ಬೆಳೆ ಬೆಳೆಯುವ ರೈತರು ಈಗ ಅಷ್ಟಾಗಿ ಚಿಂತೆ ಮಾಡುತ್ತಿಲ್ಲ. ಈ ಬಿಡುವನ್ನು ಸ್ವಲ್ಪ ರಜೆಮೂಡಿನಲ್ಲಿ ಅನುಭವಿಸುತ್ತಿದ್ದಾರೆ. ತೋಟದ ಕೆಲಸವನ್ನು ನಿರ್ವ ಹಿಸುತ್ತಿದ್ದಾರೆ. ಆದರೆ ತರಕಾರಿ ಹೂವು, ಹಣ್ಣು ಬೆಳೆದವರು ಸಂಕಷ್ಟಕ್ಕೆ ಸಿಲುಕಿದ್ದಾರೆ ಅಲ್ಪಾವಧಿಯಲ್ಲಿ
ಬರುವ ಬೆಳೆಗೆ ಬೇಸಿಗೆಯಲ್ಲಿ ಉತ್ತಮ ಧಾರಣೆ ದೊರೆಯುತ್ತಿತ್ತು ( ಜಾತ್ರೆ ,ತೇರು ಸಮಾರಂಭಗಳು ಈ ಸಮಯದಲ್ಲಿ ನಡೆಯುತ್ತಿದ್ದವು) ಲಾಕ್ ಡೌನ್ ಅವರ ಎಲ್ಲ ಲೆಕ್ಕಾಚಾರವನ್ನು ತಲೆಕೆಳಗಾಗಿಸಿದೆ. ಬಳಕೆದಾರ ರಿಗೆ ಕೊರತೆಯಾಗದಷ್ಟು ಹಣ್ಣು ತರಕಾರಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಅಗ್ಗದ ಬೆಲೆಯಲ್ಲಿಯೇ ದೊರಕುತ್ತಿರುವ ತರಕಾರಿ ಹಣ್ಣುಗಳನ್ನು ಕೊಳ್ಳುವಾಗ ಬೆಳೆದವರಿಗೆ ಸಿಕ್ಕುವುದೆಷ್ಟು ಎಂಬ ಪ್ರಶ್ನೆ ಪ್ರಜ್ಞಾವಂತರ ಮನದಲ್ಲಿ ಏಳುತ್ತಿದೆ. ಕೆಲವು ಧೈರ್ಯಸ್ಥ ರೈತರು ತಾವು ಬೆಳೆದ ಹಣ್ಣು ತರಕಾರಿಗಳನ್ನು ವಿಡಿಯೋ ಮಾಡಿ ಆನ್ಲೈನ್ ಮೂಲಕವೇ ಮಾರಿ ಲಾಭಗಳಿಸಿಕೊಂಡರೆ ಕೆಲವು ರೈತರು ವಾಹನಗಳಲ್ಲಿ ಹಣ್ಣು ತರಕಾರಿ ತುಂಬಿಕೊಂಡು ಮಾರುತ್ತಿದ್ದಾರೆ. ಕೆಲವರು ಬೆಳೆ ವಿನಿಮಯದ ಮೂಲಕ ಸಮಸ್ಯೆ ಗೆ ಪರಿಹಾರ ಹುಡುಕಲೆತ್ನಿಸುತ್ತಿದ್ದಾರೆ. ಹಲವರು ಹತಾಶೆಯಿಂದ ಬೆಳೆದ ಬೆಳೆಯನ್ನು ಬುಲ್ಡೊಜರ್ ಹಚ್ಚಿ ನೆಲಸಮ ಮಾಡುತ್ತಿದ್ದಾರೆ.
ಈಗ ಕೃಷಿಕರು ಆತ್ಮ ವಿಮರ್ಶೆ ಮಾಡಿಕೊಳ್ಳಲು ಸಕಾಲ. ಈಗ ಬೆಳೆದ ಒಂದು ಬೆಳೆಗೆ ಸೂಕ್ತ ಬೆಲೆ ದೊರೆಯದಿದ್ದರೂ ಮತ್ತೆ ಬೆಳೆಯಲು ಬೇಕಾದ ಭೂಮಿ ನಿಮ್ಮ ಬಳಿ ಇದ್ದೇ ಇದೆ.( ನಿರುದ್ಯೋಗದ ಭೀತಿ ಇಲ್ಲ) ನಿಮ್ಮ ಊರಿನ ಹವಾಮಾನಕ್ಕೆ ಸೂಕ್ತವಾದ, ಲಭ್ಯವಿದ್ದ ನೀರು ಗೊಬ್ಬರದಲ್ಲಿ ಬೆಳೆಯಬಹುದಾದ ಬೆಳೆಯನ್ನು ಬೆಳೆಯಲು ವಿಚಾರ ಮಾಡಿ.ಅದಕ್ಕೆ ಸ್ಥಳೀಯವಾದ ಮಾರುಕಟ್ಟೆಯೂ ಇದ್ದರೆ ಅನುಕೂಲ. ಇರುವ ಜಮೀನಿನಲ್ಲಿ ಆಹಾರ ಧಾನ್ಯ ತೋಟಗಾರಿಕೆ ಬೆಳೆ, ವಾಣಿಜ್ಯ ಬೆಳೆ… ಹೀಗೆ ಎಲ್ಲವುಗಳನ್ನೂ ಬೆಳೆಯಲೆತ್ನಿಸಿ. ಒಂದು ಬೆಳೆ ಕೈಕೊಟ್ಟರೆ ಇನ್ನೊಂದು ಬೆಳೆ ಕೈಹಿಡಿಯಬಹುದು. ಪ್ರತಿ ಊರಿನಲ್ಲಿರುವ ರೈತರು ಬಗ್ಗಟ್ಟಾಗಿ ಯಾರ ಹೊಲದಲ್ಲಿ ಏನೇನು ಬೆಳೆದರೆ ಒಟ್ಟಾಗಿ ಮಾರುಕಟ್ಟೆ ಹುಡುಕಬಹುದು ಎನ್ನುವುದನ್ನು ವಿಚಾರ ಮಾಡಿ. ಪ್ರತಿ ಬೆಳೆಯನ್ನು ಉತ್ತಮ ಬೆಳೆ ಬರುವವರೆಗೆ ಸಂಸ್ಕರಿಸಿ ದಾಸ್ತಾನು ಇಡುವುದು ಹೇಗೆ, ಮೌಲ್ಯವರ್ಧನೆ ಮಾಡುವುದು ಹೇಗೆ? ಮಧ್ಯವರ್ತಿಗಳ ಕಾಟವಿಲ್ಲದೇ ಬೆಳೆದ ಬೆಳೆಯನ್ನು ಗ್ರಾಹಕರಿಗೆ ತಲುಪಿಸುವುದು ಹೇಗೆ? ಎಂಬುದನ್ನು ಊರ ಜನರು ಒಟ್ಟಾಗಿ ವಿಚಾರ ಮಾಡಿ ಉತ್ತರ ಕಂಡುಕೊಳ್ಳಬೇಕಿದೆ.. ಬೆಳೆ ಬೆಳೆಯಲು ಖರ್ಚು ಕಡಿಮೆ ಮಾಡಿಕೊಂಡರೆ ಬಂದಿದ್ದೆಲ್ಲವೂ ಲಾಭವೇ ಎನ್ನುವ ರೈತರನ್ನು ನಾಳೆ ಪರಿಚಯಿಸುತ್ತೇನೆ…
ಮುಂದುವರಿಯುವುದು.
********
ಮಾಲತಿ ಹೆಗಡೆ