ಮಾಲತಿಹೆಗಡೆಯವರ ಹೊಸ ಅಂಕಣ, ಪ್ರತಿನಿತ್ಯ ಪ್ರಕಟವಾಗಲಿದೆ
ಮುಚ್ಚಿದ ಬಾಗಿಲು-ತೆರೆಯದ ಕಿಟಕಿ
ಭಾಗ-13
ಅವರ ಒಡಲು ತಣ್ಣಗಾಗಲಿ..
ಭೂಮಿಯನ್ನು ತಾಯಿ ಎನ್ನುತ್ತೇವೆ. ನಮ್ಮೊಡಲನ್ನು ಅನುದಿನವೂ ತುಂಬಿಸಿಕೊಳ್ಳುವುದು ಭೂಮಿಯಲ್ಲಿ ಬೆಳೆದ ಬೆಳೆಯಿಂದಲೇ.. ವಿವೇಚನಾರಹಿತವಾಗಿ ನಾವು ಸುರಿಯುತ್ತಿರುವ ಪ್ಲಾಸ್ಟಿಕ್ ತ್ಯಾಜ್ಯಗಳಿಂದ, ರಾಸಾಯನಿಕಗಳಿಂದ , ಕಟ್ಟಡಗಳ ತ್ಯಾಜ್ಯದಿಂದ ನಾನಿನ್ನು ಬೆಳೆಯನ್ನು ಬೆಳೆಸುವ ಸಾಮರ್ಥ್ಯ ಕಳೆದುಕೊಂಡಿದ್ದೇನೆ ಎಂದು ಭೂಮಿ ಘೋಷಿಸಿದರೆ ನಾವುಳಿಯಲಾದೀತೆ? ಪ್ರಕೃತಿ ಮನುಜರ ಆಸೆ ಪೂರೈಸುತ್ತದೆ ದಿಟ. ದುರಾಸೆ ಮಾಡುತ್ತಿರುವ ಕಾರಣದಿಂದಲ್ಲವೇ ಇಂತಹ ಲಾಕ್ಡೌನ್ ಎದುರಿಸಬೇಕಾಗಿ ಬಂದಿದ್ದು. ಇದು ಪ್ರಕೃತಿ ನೀಡುತ್ತಿರುವ ಬಲವಾದ ಎಚ್ಚರಿಕೆ. ಈಗಲೂ ನಾವು ಎಚ್ಚೆತ್ತುಕೊಳ್ಳದಿದ್ದರೆ, ಜೀವನ ಶೈಲಿ ಬದಲಿಸಿಕೊಳ್ಳದಿದ್ದರೆ ಇನ್ನೂ ಕಠಿಣ ದಿನಗಳನ್ನು ಎದುರಿಸಬೇಕಾಗಿ ಬರಬಹುದು…
ಬದುಕು ಬದಲಾಗಬೇಕು ಎಂದು ವಿಚಾರ ಮಾಡುತ್ತಲೇ ಹುಡುಕಲಾರಂಭಿಸಿದೆ.. ಎಲ್ಲವೂ ಖಾಲಿಯಾದ ಬಿಂದಿ ಪ್ಯಾಕೆಟ್ಟುಗಳೇ..ಹಳೆಯ ಪರ್ಸು, ಬ್ಯಾಗು.. ಎಲ್ಲವನ್ನೂ ತಡಕಾಡಿದರೂ ಬಿಂದಿ( ಟಿಕಲಿ) ಪ್ಯಾಕೆಟ್ಟು ಸಿಗಲಿಲ್ಲ.. ನಾನು ಬಳಸುವ ಏಕೈಕ ಅಲಂಕಾರಿಕ ವಸ್ತು.. ಅದೂ ಖಾಲಿಯಾಯ್ತೇ ಅಕಟಕಟಾ. .. ಚಿಕ್ಕಂದಿನಲ್ಲಿ ಹಚ್ಚಿಕೊಳ್ಳುತ್ತಿದ್ದಂತೆ ಬಾಟ್ಲಿ ಕುಂಕುಮದ ಬಾಟ್ಲಿಯೂ ಇಲ್ಲ. ನಮ್ಮ ಅತ್ತೆಯಂತೆ ತೆಳ್ಳಗೆ ಗುಂಡಗೆ ಬೆಣ್ಣೆ ಸವರಿಕೊಂಡು ಪುಡಿ ಕುಂಕುಮವನ್ನೇ ಇಟ್ಟುಕೊಳ್ಳುವ ಕಲೆಯೂ ನನಗೆ ಸಿದ್ಧಿಸಿಲ್ಲ..ಅಯ್ಯೋ ನಾನು ಈಗ ಟಿಕಲಿ ಬಡವಂತೆ. ನಿಮ್ಮದೇ ಅದೃಷ್ಟ ಇಂತಹ ತಲೆಬಿಸಿ ಇಲ್ಲ ಎಂದು ಗಂಡ, ಮಕ್ಕಳಿಬ್ಬರ ಹಣೆ ದಿಟ್ಟಿಸುತ್ತಾ ಹಲುಬುತ್ತ ಕರುಬಿದೆ. .ಹಳೆ ಟಿಕಲಿಗಳನ್ನೆಲ್ಲ ಬಚ್ಚಲು ಮನೆಯ ಗೋಡೆಯ ಮೇಲೆ ಚಿತ್ತಾರದಂತೆ ಅಂಟಿಸುವ ಅಮ್ಮನ ನೆನಪಾಯಿತು. ಅವಳ ಬಳಿ ಟಿಕಲಿ ಖಾಲಿ ಆದರೆ ಅದನ್ನೇ ಕಿತ್ತು ಮತ್ತೆ ಹಣೆಗಿಟ್ಟುಕೊಳ್ಳಬಹುದಾ? ನಗು ಬಂತು.. ಅಷ್ಟರಲ್ಲಿ ಮಡಚಿಟ್ಟ ಸೀರೆ ಮಡಿಕೆಯೊಳಗಿಂದ ಎಂದೋ ಇಟ್ಟ ಟಿಕಲಿ ಪ್ಯಾಕೆಟ್ಟೊಂದು ಪಟ್ಟನೆ ಉದುರಿ ಸಿಕ್ಕಿಯೇ ಬಿಟ್ಟಿತು.. ಅಬ್ಬಾ ಬೋಳು ಹಣೆಯಲ್ಲಿ ಇರುವುದು ತಪ್ಪಿತಲ್ಲ ಇದು ಖರ್ಚಾಗುವಷ್ಟರಲ್ಲಿ ಧಡೂತಿ ದೇಹದ, ನಗುಮೊಗದ ಬೀದಿ ತುದಿಯ ಹೆಂಗಸು ಅಂಗಡಿ ಬಾಗಿಲು ತೆರೆಯಬಹುದು..ಎಂದು ಸಮಾಧಾನಪಟ್ಟುಕೊಂಡೆ.. ಬಿಂದಿಯಿಂದ ಬಾಣಲೆಯವರೆಗೆ ಚಪ್ಪಲಿಯಿಂದ ಮೊಬೈಲಿನವರೆಗೆ ಪ್ರತಿ ವಸ್ತುವಿಗೂ ನಾವು ಬಲವಾಗಿಯೇ ಅಂಟಿಕೊಂಡಿದ್ದೇವೆ. ದಿನವೂ ಅಂಗಡಿ ಬಾಗಿಲು ತೆರೆದು ‘ಬನ್ನಿ ಬನ್ನಿ ಏನು ಬೇಕು’ ಎಂದು ಕೇಳಿ ಮಾರಾಟ ಮಾಡುತ್ತಿದ್ದವರ ಚಹರೆಗಳು, ಆ ಅಂಗಡಿಗಳು ಇರುವ ಸ್ಥಳ ಎಲ್ಲವೂ ಮೆರವಣಿಗೆ ಹೊರಟಂತೆ ನೆನಪಾಗತೊಡಗಿದವು. ಬೀದಿ ಬದಿಯಲ್ಲಿ ತರಕಾರಿ ಮಾರುವ ಅಜ್ಜಿಯರು, ಪಾನಿಪುರಿ, ಬೆಲ್ ಪುರಿ ಮಾರುವ ಅಂಗಡಿಯವರು.. ಈಗ ಆದಾಯವೇ ಇಲ್ಲದ ಅವರ ಮನೆಯಲ್ಲಿ ಒಲೆ ಉರಿಯುತ್ತಿರಬಹುದೇ. ಅಥವಾ ಜಠರಾಗ್ನಿಯೇ ಕಿಚ್ಚಾಗಿ ಸುಡುತ್ತಿರಬಹುದೇ? ‘ಕಾಡಿನಿಂದ ನಾಡಿಗೆ ಮನ ಒಲಿಸಿ ಕರೆ ತಂದ ಆದಿವಾಸಿಗಳನೇಕರು ಆಹಾರ ಅರಸುತ್ತ ಮತ್ತೆ ಕಾಡಿನೆಡೆಗೆ ನಡೆದಿದ್ದಾರೆ’ ಎಂಬ ಸುದ್ದಿ ಓದುವಾಗ ಒಂದಿಷ್ಟು ಜನರು ಮತ್ತೆ ಗ್ರಾಮವಾಸಕ್ಕೆ ಮನಸ್ಸು ಮಾಡಲೇ ಬೇಕಾದ ಅನಿವಾರ್ಯ ಪರಿಸ್ಥಿತಿ ಬರಬಹುದು ಎನ್ನಿಸುತ್ತದೆ.
ಮನೆಯ ಮುಂದೆ ತರಕಾರಿ ಹಣ್ಣು ಮಾರುವವರು ಮೊದಲಿಗಿಂತ ಹೆಚ್ಚಾಗಿದ್ದಾರೆ. ಕಾರಣ ಅರಸುತ್ತ ಹೋದಾಗ ತಿಳಿದು ಬಂದ ವಿಷಯವೂ ಸ್ವಾರಸ್ಯಕರವಾಗಿದೆ. ಒಬ್ಬರು ಹೇಳುತ್ತಾರೆ.. ‘ನಾನು ಒಬ್ಬ ಟೈಲರ್.. ಪ್ರತಿವರ್ಷ ಈ ಸಮಯದಲ್ಲಿ ಮಕ್ಕಳಿಗೆ ಸಮವಸ್ತ್ರ ಹೊಲಿಯುತ್ತಿದ್ದೆ.. ಕೈತುಂಬಾ ಕೆಲಸ, ಸಂಪಾದನೆ ಇತ್ತು. ಈಗ ಹೊಲಿಯಲು ಬಟ್ಟೆಕೊಡುವವರಿಲ್ಲ. ಹಾಗೆಂದು ಮನೆಯಲ್ಲಿ ಖರ್ಚು ನಿಲ್ಲುವುದಿಲ್ಲ.. ಹಣ್ಣು ಮಾರುತ್ತಿದ್ದೇನೆ.
ಇನ್ನೊಬ್ಬರು ಬಡಗಿ ಕೆಲಸ ಸಿಗುತ್ತಿಲ್ಲ ಎಂದು ಬೈಕ್ ಮೇಲೆ ಬುಟ್ಟಿ ಕಟ್ಟಿಕೊಂಡು ತರಕಾರಿ ಮಾರುತ್ತಿದ್ದಾರೆ. ಕೆಲಸ ಇಲ್ಲ ಎಂದು ಕಂಗೆಡುವ ಜನರಿಗಿಂತ ದುಡಿಮೆಗೆ ಹೊಸ ದಾರಿ ಹುಡುಕಿಕೊಳ್ಳುವ ಇಂತವರೇ ಶ್ರೇಷ್ಠರು ಎನಿಸುತ್ತದೆ.. ಲಾಕ್ ಡೌನ್ ಆರಂಭದಲ್ಲಿ ಕಡಿಮೆ ತರಕಾರಿ, ಹಣ್ಣು ಬಳಸುತ್ತಿದ್ದೆ. ಈಗ ಧಾರಾಳವಾಗಿ ಮಾರುವವರು ಹೇಳಿದಷ್ಟು ಬೆಲೆಗೆ ಖರೀದಿಸಿ ಉಪಯೋಗಿಸುತ್ತಿದ್ದೇನೆ. ನೀವೂ ಹಾಗೇ ಮಾಡುತ್ತಿದ್ದೀರಾ? ಮಾರುವವರ ಮನೆಯ ಒಲೆಯೂ ಉರಿದು ಅವರ ಒಡಲೂ ತಣ್ಣಗಾಗಲಿ..
*******
ಮುಂದುವರಿಯುವುದು…
ಮಾಲತಿ ಹೆಗಡೆ