ಇತರೆ ಸಂಗಾತಿ
“ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ
ಹೊಸದೊಂದು ದಾರಿದೀಪವಾದ
‘ಹೊಲದಂಬಾರಿ”
ಬಯಲು ಕವಿಗೋಷ್ಠಿ

ರಾಣೇಬೆನ್ನೂರಿನ ಕೂನಬೇವು ಗ್ರಾಮದ ಚಂಸು ಪಾಟೀಲ್ ರವರ ಹೊಲದ ಮಣ್ಣಿನ ಮಡಿಲೊಳಗೆ ಜರುಗಿದ ” ಹೊಲದಂಬಾರಿ” ಅಪರೂಪದ ಬಯಲು ಕವಿಗೋಷ್ಠಿಯು ಯಶಸ್ವಿಯಾಗಿ ನಡೆಯಿತು.
ರಾಣೇಬೆನ್ನೂರಿನ ‘ಕಾಗದ ಸಾಂಗತ್ಯ ಸಾಂಸ್ಕೃತಿಕ ವೇದಿಕೆ’. ದಸರಾ ಹಬ್ಬದ ಸಾಂಪ್ರದಾಯಿಕ ಸಂಭ್ರಮಕ್ಕೆ ಮಣ್ಣಿನ ತೇವಾಂಶ ತುಂಬಲು ರೂಪುಗೊಂಡ ಪರಿಕಲ್ಪನೆಯ “ಹೊಲದಂಬಾರಿ”. ನಗರದ ಸದ್ದು-ಗದ್ದಲದಿಂದ ಆಚೆ ಬಂದು, ಕೂನಬೇವು ಗ್ರಾಮದ ರೈತನ ಹಸಿರು ಹೊಲದಂಗಳದಲ್ಲಿ ನಡೆದ ಈ ಬಯಲು ಕವಿಗೋಷ್ಠಿ ಸಮಕಾಲೀನ ಸಾಹಿತ್ಯ ವಲಯದಲ್ಲಿ ಹೊಸದೊಂದು ಚಿಂತನೆಯ ಕದ ತಟ್ಟಿದೆ.

ವಿಸ್ಮಯದ ಚಾಲನೆ:
ಕಾರ್ಯಕ್ರಮದ ಆರಂಭವೇ ಎಲ್ಲರ ನಿರೀಕ್ಷೆಗಳನ್ನು ತಲೆಕೆಳಗು ಮಾಡಿತ್ತು. ಯಾವುದೇ ರಾಜಕಾರಣಿಯ ಕೈಯಿಂದ ರಿಬ್ಬನ್ ಕತ್ತರಿಸುವ ಅಥವಾ ಗಣ್ಯರ ಸಮ್ಮುಖದಲ್ಲಿ ದೀಪ ಬೆಳಗಿಸುವ ಜಡ ಸಂಪ್ರದಾಯ ಇಲ್ಲಿರಲಿಲ್ಲ. ಬದಲಿಗೆ, ವೃತ್ತಿಯಿಂದ ಕೃಷಿಕರಾಗಿದ್ದು, ಪ್ರವೃತ್ತಿಯಿಂದ ಸಂವೇದನಾಶೀಲ ಕವಿಯಾಗಿ ಹಲವು ಕವನ ಸಂಕಲನಗಳನ್ನು ನಾಡಿಗೆ ಕಟ್ಟಿಕೊಟ್ಟಿರುವ ಹಿರಿಯ ಕೃಷಿ ಕವಿ ಚಂ.ಸು. ಪಾಟೀಲ್ ಅವರು ಹೊಲದಂಗಳಕ್ಕೆ ನೇಗಿಲೊಡನೆ ಬಂದಿಳಿದರು.
ಅವರು ಕಪ್ಪು ಮಣ್ಣಿನ ನೆಲದ ಮೇಲೆ ನೇಗಿಲಿನಿಂದ ಪ್ರೀತಿಯ ಒಂದು ಸಾಲು (ಗೆರೆ) ಎಳೆದಾಗ, ಅಲ್ಲಿ ನೆರೆದಿದ್ದ ಸಾಹಿತ್ಯಾಸಕ್ತರ ಕಣ್ಣುಗಳಲ್ಲಿ ಬೆರಗು ಮೂಡಿತ್ತು. ಬಿದಿರಿನ ತಟ್ಟೆಯಲ್ಲಿದ್ದ ನವಧಾನ್ಯಗಳ ಜೊತೆಗೆ, ಭಾಗವಹಿಸಿದ ಪ್ರತಿಯೊಬ್ಬ ಕವಿಯೂ ತಾವು ಕೈಬರಹದಲ್ಲಿ ಬರೆದು ತಂದಿದ್ದ ಕವಿತೆಯ ಸಾಲುಗಳ ಚೀಟಿಗಳನ್ನು ಆ ನೇಗಿಲ ಸಾಲಿಗೆ ಭಕ್ತಿಯಿಂದ ಬಿತ್ತಿದರು. ನಂತರ ಕೃಷಿಕರ ಒರಟು ಕೈಗಳು ಆ ಅಕ್ಷರ-ಧಾನ್ಯಗಳ ಮೇಲೆ ಮಣ್ಣು ಮುಚ್ಚಿದವು; ಮಣ್ಣಿನ ಕೊಡದಿಂದ ಹನಿ ನೀರೆರೆದು, “ಅಕ್ಷರ ಬಿತ್ತಿದ್ದೇವೆ, ಭಾವದ ಫಸಲು ತೆಗೆಯಲಿದ್ದೇವೆ” ಎಂದು ಘೋಷಿಸಿದಾಗ ಇಡೀ ಹೊಲದಂಗಳದಲ್ಲಿ ಅಪ್ಪಟ ಪ್ರಕೃತಿಯ ಚಪ್ಪಾಳೆ ಮೊಳಗಿತು.
ಚಾಲನೆ ನೀಡಿ ಮಾತನಾಡಿದ ಚಂ.ಸು. ಪಾಟೀಲ್, “ರೈತ ಹೊಲದಲ್ಲಿ ಕಾಳು ಬಿತ್ತಿದರೆ ಜಗತ್ತಿಗೆ ಅನ್ನವಾಗುತ್ತದೆ; ಅದೇ ನೆಲದ ಮೇಲೆ ಭಾವ ಬಿತ್ತಿದರೆ ಬದುಕಿಗೆ ಕಾವ್ಯವಾಗುತ್ತದೆ. ಅನ್ನ ಕೊಡುವ ಮಣ್ಣು ಮತ್ತು ಅರಿವು ಕೊಡುವ ಅಕ್ಷರ ಬೇರೆ ಬೇರೆಯಲ್ಲ. ಇವತ್ತು ಕವಿಗಳು ಎಸಿ ಹಾಲ್ ಬಿಟ್ಟು ನಮ್ಮ ಹೊಲದ ಬದುವಿಗೆ ಬಂದಿರುವುದು ಈ ನೆಲದ ಸಂಸ್ಕೃತಿಗೆ ಸಂದ ಬಹುದೊಡ್ಡ ಗೌರವ. ಕಾವ್ಯ ಮತ್ತು ಕೃಷಿ ಎರಡೂ ಸಮ್ಮಿಲನಗೊಂಡಿದೆ. ಒಬ್ಬ ಸೂಕ್ಷ್ಮ ಸಂವೇದನೆಯ ಕಲಾವಿದನ ಕಣ್ಣೋಟ ಮತ್ತು ಅಂಕಣಕಾರನ ಸಾಮಾಜಿಕ ಕಾಳಜಿ ಒಟ್ಟಾಗಿ ಬೆರೆತಾಗ ಇಂತಹದೊಂದು ನೈಸರ್ಗಿಕ, ಕಲಾತ್ಮಕ ಕಲ್ಪನೆ ಮೈದಳೆಯಲು ಸಾಧ್ಯ ಎಂಬುದನ್ನು ನಾಮದೇವ ಕಾಗದಗಾರರು ಸಾಬೀತುಪಡಿಸಿದ್ದಾರೆ. ಎಂದು ನುಡಿದರು.

ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಲೇಖಕ, ಕಲಾವಿದ ನಾಮದೇವ ಕಾಗದಗಾರರು ಮಾತನಾಡುತ್ತಾ
“ನಮ್ಮ ಬಹುತೇಕ ಸಾಹಿತ್ಯಿಕ ಚಟುವಟಿಕೆಗಳು ನಗರಕೇಂದ್ರಿತವಾಗುತ್ತಾ, ಜೀವಂತಿಕೆಯನ್ನು ಕಳೆದುಕೊಳ್ಳುತ್ತಿವೆ. ಕಾವ್ಯ ಹುಟ್ಟುವುದೇ ಮಣ್ಣಿನ ತೃಷೆಯಿಂದ, ಹಸಿರಿನ ಕಂಪಿನಿಂದ. ಆ ಕಾವ್ಯವನ್ನು ಮತ್ತೆ ಅದರ ಹುಟ್ಟೂರಾದ ನೆಲದ ಮಡಿಲಿಗೇ ಕರೆದೊಯ್ಯುವ ಹಂಬಲವೇ ‘ಹೊಲದಂಬಾರಿ’. ಕೃಷಿಕನ ಬೆವರು ಸುರಿಯುವ ಜಾಗದಲ್ಲಿ ಕವಿಯ ಸಾಲುಗಳು ಮೊಳೆಯಬೇಕು; ಆಗ ಮಾತ್ರ ಅಕ್ಷರಕ್ಕೆ ಪ್ರಾಮಾಣಿಕ ತೂಕ ಬರುತ್ತದೆ. ಯಾವುದೇ ಕೃತಕ ಚೌಕಟ್ಟುಗಳಿಲ್ಲದೆ ಮಣ್ಣಿನ ಮೇಲೆ ಕುಳಿತು ಕಾವ್ಯ ಸಂಭ್ರಮಿಸುವುದು ಬದುಕಿನ ಪರಮ ಸತ್ಯಕ್ಕೆ ಮುಖಾಮುಖಿಯಾದಂತೆ ಎಂದು ಹೇಳಿದರು.
ಪತ್ರಕರ್ತರಾದ ನಿಂಗರಾಜ ಗುದಗೇರ, ಕೆ.ಎಸ್ ನಾಗರಾಜ ಇತರರು ಉಪಸ್ಥಿತರಿದ್ದರು
ಈ ಗೋಷ್ಠಿಯಲ್ಲಿ ಹಿರಿಯ ಕವಿಮನಗಳ ಅನುಭವದ ಜೊತೆಗೆ ಕಾಲೇಜು ಯುವ ಕವಯಿತ್ರಿಯರ ಹೊಸ ಸಂವೇದನೆಗಳು ಮುಖಾಮುಖಿಯಾದರು.
ಭಾವದ ಫಸಲು ಎಂಬ ವಿಭಾಗದಲ್ಲಿ ಹಿರಿಯ ಕವಿಮನಗಳಾದ ಸಾಹಿತಿ ಡಾ. ಎಂ.ಈ.ಶಿವಕುಮಾರ ಹೊನ್ನಾಳಿ,
ಡಾ. ಲಕ್ಷ್ಮೀಕಾಂತ ಮಿರಜಕರ ಶಿಗ್ಗಾಂವಿ, ನಾಗರಾಜ ಹುಡೇದ ಹಾವೇರಿ, ರಮೇಶ ಬಡಿಗೇರ ಹಲಗೇರಿ, ಎಸ್.ಹೆಚ್.ಪಾಟೀಲ್ ರಾಣೇಬೆನ್ನೂರ, ದಾಕ್ಷಾಯಣಿ ಉದಗಟ್ಟಿ ರಾಣೇಬೆನ್ನೂರ ಅವರು ಭಾಗವಹಿಸಿ ಕವನ ವಾಚಿಸಿದರು. ಹಾಗೂ
ಕಾವ್ಯದ ನವ ಚಿಗುರು ವಿಭಾಗದಲ್ಲಿ ಯುವ ಕವಯಿತ್ರಿಯರು
ಸ್ಥಳೀಯ ಕೆ.ಎಲ್.ಇ.ಸಂಸ್ಥೆಯ ರಾಜರಾಜೇಶ್ವರಿ ಕಲಾ ಮತ್ತು ವಾಣಿಜ್ಯ ಮಹಿಳಾ ಮಹಾವಿದ್ಯಾಲಯದ ಅಂತಿಮ ವರ್ಷದ ಬಿ.ಎ. ವಿದ್ಯಾರ್ಥಿನಿಯರಾದ ಜಾಸ್ಮಿನ್.ಬಿ.ದೊಡ್ಡಮನಿ, ಅನುಪಾ ಕೋಗಿಲೇ, ಚೈತ್ರಾ ಪೂಜಾರ ಚಿಕ್ಕಕುರುವತ್ತಿ, ಸುಮಾ ರಾಮಣ್ಣನವರ ಚಿಕ್ಕಕುರುವತ್ತಿ ಹಾಗೂ ನಮ್ರತಾ ಚಂದ್ರಪ್ಪ ಭಂಗೇರ್, ವರ್ಷಾ ಬೆಳಕೇರಿ ಅವರು ಕವಿತೆಗಳನ್ನು ವಾಚಿಸಿದರು.
ಬದುವಿನ ಮೇಲೆ ಅರಳಿದ ಕಾವ್ಯದ ಮೆರುಗು
ಕಾರ್ಯಕ್ರಮಕ್ಕೆ ಯಾವುದೇ ಕೃತಕ ವೇದಿಕೆ ಇರಲಿಲ್ಲ, ಬದಲಿಗೆ ಹೊಲದ ಮಣ್ಣೇ ರಂಗಮಂಟಪವಾಗಿತ್ತು. ಮರದ ನೆರಳಿನಲ್ಲಿ, ಹೊಲದ ಒಡ್ಡು-ಬದುಗಳ ಮೇಲೆ ಆಸೀನರಾಗಿದ್ದರು.
ಕವಿಗಳು ಒಬ್ಬೊಬ್ಬರಾಗಿ ಬಯಲು ಗಾಳಿಯ ಲಯಕ್ಕೆ ತಕ್ಕಂತೆ ತಮ್ಮ ಕವನಗಳನ್ನು ವಾಚಿಸಿದರು. ಕೆಲವರು ಹಸಿರು ಜೋಳದ ಸಾಲುಗಳ ನಡುವೆ ಹೆಜ್ಜೆ ಹಾಕುತ್ತಾ ಕವಿತೆ ಓದಿದರೆ, ಇನ್ನು ಕೆಲವರು ಮಣ್ಣಿನ ಹೆಂಟೆಯ ಮೇಲೆ ಕುಳಿತು ರೈತನ ಬದುಕಿನ ಬವಣೆ, ಮಳೆ-ಬೆಳೆಯ ಸಂಕಷ್ಟ ಮತ್ತು ದಸರೆಯ ನೈಜ ಸಡಗರವನ್ನು ಕಾವ್ಯರೂಪದಲ್ಲಿ ಬಿಚ್ಚಿಟ್ಟರು. ಗಾಳಿಗೆ ತಲೆಯಾಡಿಸುತ್ತಿದ್ದ ಹಸಿರು ಪೈರುಗಳು, ತಂಪೆರೆಯುವ ಅಕ್ಟೋಬರ್ ಗಾಳಿ ಮತ್ತು ಹಿನ್ನೆಲೆಯಲ್ಲಿ ಕೇಳಿಬರುತ್ತಿದ್ದ ಪಕ್ಷಿಗಳ ಚಿಲಿಪಿಲಿ ಧ್ವನಿಗಳು ಕಾವ್ಯವಾಚನಕ್ಕೆ ನೈಸರ್ಗಿಕ ಸಂಗೀತದಂತೆ ಸಾಥ್ ನೀಡಿದವು. ಕಾವ್ಯವು ಕಾಗದದಿಂದ ನೇರವಾಗಿ ಗಾಳಿಯ ತರಂಗಗಳಿಗೆ, ಅಲ್ಲಿಂದ ಮಣ್ಣಿನ ಕಣಗಳಿಗೆ ಪ್ರವಹಿಸುವಂತಿತ್ತು ಆ ವಾತಾವರಣ ಹೊಸ ದಿಕ್ಕಿನ ಮುನ್ನುಡಿ.

ದಸರಾ ಹಬ್ಬವೆಂದರೆ ಕೇವಲ ಅರಮನೆಯ ವೈಭವವಷ್ಟೇ ಅಲ್ಲ; ಅದು ರೈತನ ಕಣಜ ತುಂಬುವ, ಭೂತಾಯಿಗೆ ಕೃತಜ್ಞತೆ ಸಲ್ಲಿಸುವ ಕೃಷಿ ಸಂಸ್ಕೃತಿಯ ಹಬ್ಬವೂ ಹೌದು ಎಂಬುದನ್ನು ‘ಹೊಲದಂಬಾರಿ’ ಅತ್ಯಂತ ಅರ್ಥಪೂರ್ಣವಾಗಿ ನೆನಪಿಸಿಕೊಟ್ಟಿದೆ.
ವಿನೂತನ ಪರಿಕಲ್ಪನೆ ಮತ್ತು ಕಾಗದ ಸಾಂಗತ್ಯದ ಈ ಪ್ರಯತ್ನವು, ಕೇವಲ ಸಭಾಂಗಣಗಳಿಗೆ ಸೀಮಿತವಾಗುತ್ತಿದ್ದ ಸಮಕಾಲೀನ ಸಾಹಿತ್ಯಿಕ ಚಟುವಟಿಕೆಗಳಿಗೆ ಹೊಸದೊಂದು ದಾರಿದೀಪವಾಗಿದೆ. ನೇಗಿಲಿನ ಗೆರೆಯಲ್ಲಿ ಬಿತ್ತಿದ ಆ ಅಕ್ಷರಗಳು ಕೇವಲ ಮಣ್ಣಿನೊಳಗೆ ಮಾತ್ರವಲ್ಲ, ಸಾಹಿತ್ಯಾಸಕ್ತರ ಎದೆಯಾಳದಲ್ಲೂ ಹೊಸ ಆಲೋಚನೆಗಳಾಗಿ ಮೊಳಕೆಯೊಡೆದಿವೆ. ಕಾವ್ಯವೆಂಬುದು ಬದುಕಿನಿಂದ ಪ್ರತ್ಯೇಕವಲ್ಲ, ಅದು ಮಣ್ಣಿನ ಗುಣ ಮತ್ತು ಬೆವರಿನ ಧ್ವನಿ ಎಂಬುದನ್ನು ‘ಹೊಲದಂಬಾರಿ’ ಸಾರಿತು.
ಡಾ. ಎಂ. ಈ. ಶಿವಕುಮಾರ್ ಹೊನ್ನಾಳಿ.




