ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಸುಮಾ ಒಡವೆಗಳ ಡಬ್ಬಿಯನ್ನೆಲ್ಲ ತೆರೆದಿಟ್ಟು ಕನ್ನಡಿಯ ಮುಂದೆ ನಿಂತಿದ್ದಳು. ಒಂದೊಂದು ಡಬ್ಬಿಯಲ್ಲೂ ಒಂದೊಂದು ಬಗೆಯ ಬಂಗಾರ. ಒಳ್ಳೆಯ ತೂಕದ ಲಕ್ಷ್ಮಿಹಾರ.. ಹವಳ, ವಜ್ರ, ಟೆಂಪಲ್ ಜ್ಯುವೆಲರಿ.. ದೇವರ ದಯೆಯಿಂದ ಸಣ್ಣ ವಯಸ್ಸಿನಲ್ಲಿಯೇ ಒಳ್ಳೆಯ ಜಾಬ್ ಸಿಕ್ಕಿತ್ತು.. ಕಷ್ಟಪಟ್ಟು ದುಡಿದು, ದುಡ್ಡು ಕೂಡಿ ಹಾಕಿ ಬೇಕೆನಿಸಿದ ಒಡವೆಯನ್ನೆಲ್ಲ ಕೊಂಡುಕೊಂಡಿದ್ದಳು.. ಆಗೆಲ್ಲ ಬಂಗಾರದ ರೇಟು ಈಗಿನಷ್ಟು ಇರಲಿಲ್ಲ ಬಿಡಿ.. ಆದರೂ ಯಾಕೋ ಯಾವುದನ್ನು ತೆಗೆದು ಹಾಕಿಕೊಂಡರೂ ಮನಸ್ಸಿಗೆ ಸಮಾಧಾನವಿಲ್ಲ.

“ಛೇ! ಈ ಮದುವೆ ಫಂಕ್ಷನ್ನಿಗೆ ಏನಾದರೂ ಹೊಸದಾಗಿ ಕಾಣಿಸಿಕೊಳ್ಳಬೇಕು. ಕಳೆದ ಸಲದ ಒಡವೆಯನ್ನೇ ಹಾಕಿಕೊಂಡು ಹೋದರೆ ಜನ ಏನಂದುಕೊಂಡಾರು?”

ಕನ್ನಡಿ ನೋಡುತ್ತಾ ತನಗೇ ತಾನು ಪ್ರಶ್ನೆ ಹಾಕಿಕೊಂಡಳು.

ಅಷ್ಟರಲ್ಲಿ ಕೋಣೆಯೊಳಗೆ ಬಂದ ಗಂಡ ಅವಿನಾಶ್, ಅವಳ ಅವತಾರ ನೋಡಿ ನಗುತ್ತಾ ಕೇಳಿದ.

“ಏನೇ ಸುಮಾ, ಮದುವೆಗೆ ಹೋಗಬೇಕೋ ಅಥವಾ ಒಡವೆ ಅಂಗಡಿ ತೆರೆಯಬೇಕೋ? ಇಷ್ಟೊಂದು ಡಬ್ಬಿಗಳನ್ನೆಲ್ಲ ಮುಂದೆ ಇಟ್ಕೊಂಡು ಏನು ಹುಡುಕ್ತಿದ್ದೀಯಾ?”

ಸುಮಾ ಅವನತ್ತ ತಿರುಗಿ ನೋಡಿದಳು.

“ನಿಮಗೇನು ಗೊತ್ತು? ಹೆಂಗಸರ ಕಷ್ಟ! ಪ್ರತಿ ಸಲ ಅದೇ ರೀತಿ ರೆಡಿಯಾಗಿ  ಹೋದರೆ ನೋಡಿದೋರು ಏನಂದುಕೊಳ್ತಾರೋ?”

ಅವಿನಾಶ್ ನಗುತ್ತಾ, “ನೋಡಿದೋರು ಏನಂದುಕೊಳ್ತಾರೋ ಗೊತ್ತಿಲ್ಲ. ಆದರೆ ಈ ಒಡವೆಗಳನ್ನೆಲ್ಲ ನೋಡಿದ ಮೇಲೆ ನನಗೆ ಮಾತ್ರ ಬ್ಯಾಂಕ್ ಲಾಕರ್ ನೆನಪಾಗ್ತಿದೆ. ಇವನ್ನೆಲ್ಲ ಲಾಕರಿನಿಂದ ತರುವುದು, ಸೇಫಾಗಿ ಧರಿಸಿ ಮತ್ತೆ ಲಾಕರಿಗೆ  ತೆಗೆದುಕೊಂಡು ಹೋಗಿಇಡೋದೇ ದೊಡ್ಡ ಕೆಲಸ! ಮತ್ತೆ ಆ ಲಾಕರ್ ಕೀ ಎಲ್ಲಾದ್ರೂ ಇಟ್ಟು ಮರೆತರೆ ಅಷ್ಟೇ ಕಥೆ ” ಎಂದ.

“ಆಯ್ತು ಬಿಡಿ, ನಿಮ್ಮ ಹತ್ರ ಹೇಳಿ ಪ್ರಯೋಜನವಿಲ್ಲ!” ಎಂದು ಸುಮಾ ಮುಖ ತಿರುಗಿಸಿದಳು.

ಕೊನೆಗೆ ಒಂದು ದೊಡ್ಡ ಜುಮಕಿಯನ್ನು ಕಿವಿಗೆ ಹಾಕಿಕೊಂಡಳು. ಕನ್ನಡಿಯಲ್ಲಿ ನೋಡಿಕೊಂಡಾಗ ಚೆನ್ನಾಗಿಯೇ ಕಾಣಿಸುತ್ತಿತ್ತು. ಆದರೆ ಐದಾರು ನಿಮಿಷ ಕಳೆಯುವಷ್ಟರಲ್ಲಿ ಕಿವಿ ಎಳೆಯತೊಡಗಿತು.

“ಅಬ್ಬಾ! ಈ ಒಡವೆ ಹಾಕಿಕೊಂಡು ನಗುವುದಕ್ಕೂ ಕಷ್ಟ. ಮದುವೆ ಮನೆಯಲ್ಲಿ ಊಟ ಮಾಡೋದೋ, ಕಿವಿ ಹಿಡಿದುಕೊಂಡು ಕೂರೋದೋ!”

ಅಂತ ಗೊಣಗುತ್ತಾ ಜುಮಕಿಯನ್ನು ತೆಗೆದಿಟ್ಟು, ನಿತ್ಯ ಧರಿಸುವ  ಪುಟ್ಟ ಮುತ್ತಿನ ಕುಡುಕನ್ನು ಕಿವಿಗೆ ಹಾಕಿಕೊಂಡಳು.

ಅವಿನಾಶ್ ಅವಳನ್ನು ಗಮನಿಸುತ್ತಲೇ ಇದ್ದ.

“ಅದೇನಾಯ್ತು? ಇಷ್ಟು ಹೊತ್ತು ಬಂಗಾರಕ್ಕಾಗಿ ಯುದ್ಧ ಮಾಡ್ತಿದ್ದವಳು ಈಗ ಈ ಪುಟ್ಟ ಮುತ್ತಿನ ಕುಡುಕಿಗೆ ಶರಣಾದೆಯಲ್ಲ?”

ಸುಮಾ ಕಿವಿಯನ್ನು ಮುಟ್ಟಿ ನೋಡಿಕೊಂಡು ನಿಟ್ಟುಸಿರು ಬಿಟ್ಟಳು.

“ದೊಡ್ಡ ಒಡವೆ ಹಾಕಿಕೊಂಡರೆ ಚೆನ್ನಾಗಿ ಕಾಣಬಹುದು. ಆದರೆ ಕಿವಿಗೆ ಹಿತವಾಗಿರಬೇಕಲ್ಲ! ಬಂಗಾರಕ್ಕಿಂತ ಈ ಪುಟ್ಟ ಕುಡುಕೇ ವಾಸಿ.”

ಅವಿನಾಶ್ ತಕ್ಷಣ ಹೇಳಿದ.

“ಅಂದರೆ ಬಂಗಾರ ಲಾಕರಿನಲ್ಲಿರಲಿ, ನೆಮ್ಮದಿ ಕಿವಿಯಲ್ಲಿರಲಿ ಅಂತಾಯ್ತು!”

ಸುಮಾ ಅವನತ್ತ ನೋಡಿ ನಕ್ಕಳು.

“ನಿಮಗೆ ತಮಾಷೆ ಮಾಡೋದೇ ಕೆಲಸ!”

“ತಮಾಷೆ ಅಲ್ಲ ಮೇಡಂ. ಬದುಕಿನ ಅರ್ಧ ಸಮಸ್ಯೆಗಳಿಗೆ ಪರಿಹಾರ ಇಷ್ಟೇ. ಯಾವುದರಿಂದ ನೆಮ್ಮದಿ ಸಿಗುತ್ತೋ ಅದನ್ನೇ ಆಯ್ಕೆ ಮಾಡಿಕೊಳ್ಳಬೇಕು!”

ಸುಮಾ ಏನೂ ಹೇಳದೆ ನಗುತ್ತಾ ಹೊರಡಲು ಸಿದ್ಧಳಾದಳು.

—

ಮದುವೆ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಸಂಜೆಯಾಗಿತ್ತು. ಅವಿನಾಶ್ ಸೋಫಾದ ಮೇಲೆ ಕುಳಿತು ಟಿವಿ ನೋಡುತ್ತಿದ್ದರೆ, ಸುಮಾ ಅಡುಗೆಮನೆಗೆ ಹೋಗಿ ನಾಲ್ಕು ತುತ್ತು ಮಜ್ಜಿಗೆ ಅನ್ನ ತಿಂದು ಬಂದು ಅವನ ಪಕ್ಕ ಕುಳಿತಳು.

“ಏನಾಯ್ತು? ಮದುವೆ ಮನೆಯಲ್ಲಿ ಸರಿಯಾಗಿ ಊಟ ಮಾಡಿಲ್ವಾ?” ಅವಿನಾಶ್ ಕೇಳಿದ.

“ಊಟಕ್ಕೇನೂ ಕಡಿಮೆ ಇರಲಿಲ್ಲ. ಪಲಾವ್, ಪನ್ನೀರ್, ಪೂರಿ,  ಬಾದೂಷಾ , ಕೇಸರಿ ಬಾತು… ಎಲ್ಲವೂ ಇತ್ತು. ಆದರೆ ನನ್ನ ಹೊಟ್ಟೆ ಅದನ್ನೆಲ್ಲ ತಿಂದರೆ ಹಠ ಮಾಡುತ್ತಪ್ಪಾ.  ಅದಕ್ಕೆ ಬಂದು ಮಜ್ಜಿಗೆ ಅನ್ನ ತಿಂದೆ .”

“ಹಾಗಾದರೆ ರಾಜಭೋಜನಕ್ಕಿಂತ  ಮಜ್ಜಿಗೆ ಅನ್ನಕ್ಕೇ ನಿನ್ನ ವೋಟ್ ಅಂತಾಯ್ತು?”

“ಹೌದು. ತಿನ್ನೋಕೆ ಎಲ್ಲ ಚೆನ್ನಾಗಿರುತ್ತೆ. ಆದರೆ ತಿಂದ ಮೇಲೆ ಹೊಟ್ಟೆ ನಮ್ಮದೂ ಒಂದು ಮಾತಿದೆ ಅಂತ ನೆನಪಿಸುತ್ತದೆ!”

ಅವಿನಾಶ್ ಜೋರಾಗಿ ನಕ್ಕ.

“ನಿಜ ಕಣೇ! ಚಿಕ್ಕ ವಯಸ್ಸಿನಲ್ಲಿ ನಾಲಿಗೆ ಹೇಳಿದ್ದೆಲ್ಲ ಕೇಳ್ತೀವಿ. ವಯಸ್ಸಾದ ಮೇಲೆ ಹೊಟ್ಟೆ ಹೇಳೋದನ್ನೂ ಕೇಳಬೇಕಾಗುತ್ತೆ!”

“ನಿಮಗೂ ಈಗ ಜ್ಞಾನೋದಯ ಆಗ್ತಿದೆಯಲ್ಲ!” ಎಂದು ಸುಮಾ ಕಿಚಾಯಿಸಿದಳು.

ಇಬ್ಬರೂ ನಕ್ಕರು.

ಸ್ವಲ್ಪ ಹೊತ್ತಿನ ನಂತರ ಸುಮಾ ಗಂಭೀರವಾಗಿ ಕೇಳಿದಳು.

“ಅವಿನಾಶ್, ನಿಮಗೊಂದು ಪ್ರಶ್ನೆ ಕೇಳಲಾ?”

“ಕೇಳು.”

“ವಯಸ್ಸಾದಂತೆ ನಮ್ಮ ಆಸೆಗಳು ಕಡಿಮೆಯಾಗುತ್ತವೆಯಾ?”

ಅವಿನಾಶ್ ಟಿವಿ ಆಫ್ ಮಾಡಿ ಅವಳತ್ತ ತಿರುಗಿದ.

“ಆಸೆಗಳು ಕಡಿಮೆಯಾಗುತ್ತವೋ ಗೊತ್ತಿಲ್ಲ. ಆದರೆ ಯಾವುದು ನಿಜವಾಗಿಯೂ ಬೇಕು, ಯಾವುದು ಸುಮ್ಮನೆ ಬೇಕೆನಿಸುತ್ತೆ ಅನ್ನೋದು ಅರ್ಥವಾಗುತ್ತೆ.”

ಸುಮಾ ಅವನ ಮಾತುಗಳನ್ನು ಆಸಕ್ತಿಯಿಂದ ಕೇಳುತ್ತಿದ್ದಳು.

“ಹೇಗೆ?” ಎಂದು ಕೇಳಿದಳು.

“ನೋಡು ಸುಮಾ, ಹಿಂದೆ ನಿನಗೆ ದೊಡ್ಡ ದೊಡ್ಡ ಒಡವೆಗಳೆಂದರೆ ತುಂಬಾ ಇಷ್ಟವಾಗಿತ್ತು. ಈಗ ಕಿವಿಗೆ ನೋವಾಗುತ್ತೆ ಅಂತ ಮುತ್ತಿನ ಕುಡುಕು ಹಾಕಿಕೊಂಡು ಆರಾಮವಾಗಿದ್ದೀಯ. ಮದುವೆ ಮನೆಯಲ್ಲಿ ಎಷ್ಟೆಲ್ಲ ತಿಂಡಿ ಇದ್ದರೂ ಕೊನೆಗೆ ಹೊಟ್ಟೆಗೆ ಹಿತವಾಗುತ್ತೆ ಅಂತ ಮಜ್ಜಿಗೆ ಅನ್ನವನ್ನೇ ಆಯ್ದುಕೊಂಡೆ. ಬದಲಾವಣೆ ನಿನ್ನ ಆಸೆಗಳಲ್ಲಿ ಅಲ್ಲ, ನಿನ್ನ ಆದ್ಯತೆಗಳಲ್ಲಿ!”

ಸುಮಾ ಕ್ಷಣಕಾಲ ಮೌನವಾದಳು.

“ನಿಜ ಹೇಳ್ತಿದ್ದೀರಾ. ಹಿಂದೆ ಚೆನ್ನಾಗಿ ಕಾಣಿಸಿಕೊಳ್ಳಬೇಕು ಅಂತ ಯೋಚಿಸುತ್ತಿದ್ದೆ. ಈಗ ಆರಾಮವಾಗಿರಬೇಕು ಅಂತ ಅನಿಸುತ್ತೆ. ಹಿಂದೆ ಬಗೆಬಗೆಯ ತಿಂಡಿ ತಿಂದರೆ ಖುಷಿ ಅಂತಿದ್ದೆ. ಈಗ ಹೊಟ್ಟೆ ಹಗುರವಾಗಿದ್ದರೆ ಅದೇ ಸಂತೋಷ.”

ಅವಿನಾಶ್ ಮುಗುಳ್ನಕ್ಕ.

“ಅದಕ್ಕೇ ಹೇಳೋದು, ಬದುಕಿನ ಸುಖವೆಲ್ಲ ದುಬಾರಿ ವಸ್ತುಗಳಲ್ಲಿಲ್ಲ. ಕೆಲವೊಮ್ಮೆ ಸಣ್ಣಪುಟ್ಟ ಸಂಗತಿಗಳಲ್ಲೇ ದೊಡ್ಡ ನೆಮ್ಮದಿ ಇರುತ್ತೆ.”

“ಹಾಗಾದರೆ ಬದುಕಿನ ಕೊನೆಗೆ ನಮಗೆ ಬೇಕಾಗೋದು ಮುತ್ತಿನ ಕುಡುಕು, ಮಜ್ಜಿಗೆಯನ್ನ ಅಷ್ಟೇನಾ?” ಎಂದು ನಗುತ್ತಾ ಕೇಳಿದಳು.

“ಅಷ್ಟೇ ಅಲ್ಲ. ಅದನ್ನ ಆರಾಮವಾಗಿ ಅನುಭವಿಸೋಕೆ ಆರೋಗ್ಯ ಬೇಕು, ಮನಸ್ಸಿಗೆ ನೆಮ್ಮದಿ ಬೇಕು, ಇವಿಷ್ಟು ಇದ್ದರೆ ಸಾಮಾನ್ಯ ಬದುಕೂ ಸುಂದರವಾಗಿರುತ್ತೆ.”

ಕಿವಿಯಲ್ಲಿ ಮುತ್ತಿನ ಕುಡುಕು ಮೆಲ್ಲಗೆ ಹೊಳೆಯುತ್ತಿತ್ತು. ಹೊಟ್ಟೆಯಲ್ಲಿ ಮಜ್ಜಿಗೆಯನ್ನದ ತೃಪ್ತಿಯಿತ್ತು. ಪಕ್ಕದಲ್ಲಿ ಮನಸ್ಸಿಗೆ ಹತ್ತಿರವಾದ ಜೀವವಿತ್ತು.

ಆ ಕ್ಷಣ ಅವಳಿಗೆ ತಾನು ಗಳಿಸಬೇಕಾದ್ದು ಇನ್ನೇನೂ ಇಲ್ಲವೆನಿಸಿತು.

ಬದುಕಿನ ಮೊದಲಾರ್ಧದಲ್ಲಿ ಏನೇನೋ ಗಳಿಸಬೇಕೆಂದು ಓಡುತ್ತೇವೆ. ಕಾಲ ಕಳೆದಂತೆ ಯಾವುದರಿಂದ ನೆಮ್ಮದಿ ಸಿಗುತ್ತದೆ, ಯಾವುದರಿಂದ ಸುಮ್ಮನೆ ಹೊರೆ ಹೆಚ್ಚುತ್ತದೆ ಎಂಬುದು ಅರ್ಥವಾಗತೊಡಗುತ್ತದೆ.

ಕೊನೆಗೂ ಬದುಕಿನ ಅತಿದೊಡ್ಡ ಐಶ್ವರ್ಯವೆಂದರೆ ಕಿವಿಗೊಂದು ಮುತ್ತಿನ ಕುಡುಕು, ಹೊಟ್ಟೆ ತಂಪಾಗಲು ಮಜ್ಜಿಗೆಯನ್ನ, ಮನಸ್ಸಿಗೊಂದಿಷ್ಟು ನೆಮ್ಮದಿ…


About The Author

Leave a Reply

You cannot copy content of this page

Scroll to Top