ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಭಾವವೆಂಬುದು ಅಮೂರ್ತವಾದ ಜೀವಧಾತು!. ಅದು ಯಾವಾಗ ಯಾರಲ್ಲಿ ಬಂದು ನೆಲೆಸುವುದೋ ಅರಿಯದು.
ಭಾವ: ಅಂತರಂಗದ ಅನಿಸಿಕೆಗಳು, ಪ್ರೀತಿ, ಕರುಣೆ, ಭಕ್ತಿ ಭಾವನೆಗಳು.
ಸೆಲೆ: ನೀರಿನ ಚಿಲುಮೆ, ಒರತೆ ಅಥವಾ ಉಗಮ ಸ್ಥಾನ.
ಯಾವುದಾದರೂ ಒಂದು ವಿಷಯ, ವಸ್ತು, ವ್ಯಕ್ತಿ ಅಥವಾ ನೆನಪು ನಮ್ಮಲ್ಲಿ ಅಪಾರವಾದ ಭಾವನೆಗಳನ್ನು ಅಥವಾ ಕಾವ್ಯದ ಕಲ್ಪನೆಗಳನ್ನು ಸೃಷ್ಟಿಸಿದಾಗ ಅದನ್ನು “ಭಾವಸೆಲೆ” ಎಂದು ಕರೆಯಲಾಗುತ್ತದೆ. ಉದಾಹರಣೆಗೆ: “ತಾಯಿಯ ಮಮತೆ ಪ್ರತಿಯೊಬ್ಬರಿಗೂ ಒಂದು ನಿರಂತರ ಭಾವಸೆಲೆ.” ಹಾಗೆಯೇ ಕವಯತ್ರಿ ಭಾರತಿಯವರ ಮನಸ್ಸು ಕೂಡ ಇದರ ಹೊರತಾಗಿಲ್ಲ.ಕಾರಣ..ಮಗಳೆಂಬ ಕುಡಿ ಉಸಿರು ಚಲ್ಲಿದಾಗ ಆಗುವ ದುಃಖ, ದುಮ್ಮಾನ,ದುಗುಡಗಳು,ಆತಂಕದ ನೆಲೆಯಾಗಿ ಒಂದಿಷ್ಟು ವರ್ಷ ಮಮತೆಯ ಮಡಿಲು ಬರಿದಾಗಿದ್ದನ್ನು ಕರುಗಿಸಿಕೊಳ್ಳಲಾಗದೇ ಒದ್ದಾಡಿದ ತಾಯಿ ಕರುಳು..ಭಾವದ ಪ್ರವಾಹದಲ್ಲಿ ತೇಲಿ ಹೋಗಿದ್ದಂತು ಸತ್ಯ.ಇದೆಲ್ಲವೂ ಜೀವನದ ಒಂದು ಭಾಗವೆಂದು ನಾವೆಲ್ಲ ಸಂತೈಸಬಹುದು..ಕವಯತ್ರಿ ತನ್ನ ಆಸರಿಕೆ,ನೋವು,ಬೇಸರಿಕೆಗಳನ್ನು ನಾಲ್ಕು ಗೋಡೆ ಮಧ್ಯೆ ತನ್ನನ್ನು ತಾನು ಸಂತೈಸಿಕೊಳ್ಳುತ್ತಾ ಸಾಹಿತ್ಯದ ಪ್ರಕಾರಗಳಲ್ಲಿ ಒಂದಾಗ ಪದ್ಯಕ್ಕೆ,ಮನದಾಳದಲ್ಲಿ ಸೆರೆಯಾದ ಭಾವಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ನೋವ ಮರೆಯಲು ‘ಭಾವಸೆಲೆ’ ನೆಲೆಯಾಗಿದ್ದಂತೂ ಚಮತ್ಕಾರವೇ ಸರಿ.

ಭಾರತಿ ಕೇದಾರಿ ನಲವಡೆ ವೃತ್ತಿಯಲ್ಲಿ ಶಿಕ್ಷಕರು.ಮಕ್ಕಳ ನಗುವಲ್ಲಿ ಅದರಲ್ಲೂ ಹೆಣ್ಣು ಮಕ್ಕಳಿಗಾಗಿ ಜೀವ ಮಿಡಿಯುವ ತಾಯಿಕರುಳು. ಮತ್ತು ಪ್ರತಿಭಾವಂತ, ಬಹುಮುಖ ಪ್ರತಿಭೆಯುಳ್ಳವರು. ಸಂಘಟನಾ ಕೌಶಲ್ಯ ಹೊಂದಿದವಳು, ನಿರೂಪಕಿ,ಒಳ್ಳೆಯ ಓದುಗಳು,ಸರಳ ಸಜ್ಜನ ಮನೋಭಾವದವಳು,ಸದಾ ಸಕ್ರಿಯವಾಗಿ ತನ್ನನ್ನು ತೊಡಗಿಸಿಕೊಳ್ಳುವ ಕಲೆ ಬಲ್ಲವಳು.”ಎಲ್ಲರೊಳಗೊಂದಾಗು ಮಂಕುತಿಮ್ಮನ ಕಗ್ಗದಂತೆ” ಸದಾ ನಗುಮೊಗದಿ ಬೆರೆಯುವ ,ವೈಜ್ಞಾನಿಕ ಚಿಂತನೆಯುಳ್ಳವಳು.ಹೀಗೆ ಹೇಳುವುದು ಮುಗಿಯದು.ಇಷ್ಟೆಲ್ಲ ಯಾಕೆ ವಿವರಿಸಿದೆ ಎಂದರೆ,”ಕವಿಯಾದವ ತನ್ನೊಳಗಿನ ಭಾವನೆಗಳನ್ನು ಅಭಿವ್ಯಕ್ತಿಸುವ ಕೌಶಲ್ಯ ಕರಗತಮಾಡಿಕೊಳ್ಳುವ ಇಚ್ಛೆಗೆ ಶರಣಾದರೆ ಸಾಕು” ಕವಿತೆಗಳು ಅನುಭವದಲ್ಲಿ ರಾರಾಜಿಸಿ ನಂತರ ಲೇಖನಿಯಿಂದ ಆವಿರ್ಭವಿಸಿದಾಗ ಗಮ್ಯ,ಅಗಮ್ಯಗಳು ಪರಸ್ಪರ ಒಪ್ಪಂದಕ್ಕೆ ಬಂದು ಕವಿಯ ಮೃದು ಮನಸ್ಸಿನಲ್ಲಿ ಝರಿಯಂತೆ ಸದಾ ಜಿನುಗುತ್ತಿರುತ್ತವೆ.ಇದು ನಾನು ಅರ್ಥೈಸಿದ ಭಾವನೆಗಳ ಒರತೆಯೆಂದರೆ ತಪ್ಪಾಗದು!.

ಕವಯತ್ರಿ ರಚಿತ “ಭಾವಸೆಲೆ” ಕವನಸಂಕಲನ ಒಟ್ಟು  61 ಕವನಗಳನ್ನು ಒಳಗೊಂಡಿದೆ.ಸುಂದರ ಭಾವ ಹಿಡಿದಿಟ್ಟಿರುವ ಮುಖಪುಟ ಕವಿಯ ಅಂತರಂಗವನ್ನು ಬಿಚ್ಚಿಟ್ಟಹಾಗಿದೆ.

ಭಾವ ಭಿತ್ತಿಯಲಿ ಚಿತ್ತ ಶುದ್ಧಿಯಲಿ ಶೋಧನೆ
ಮಾಗಿ ತೂಗಿದ ಒಲವಧಾರೆಯ ಸಂವೇದನೆ
ಸಂಜೀವಿನಿ ಇಹದ ಸಂತಸಕಿರಲು ಏಕೀ ವೇದನೆ
ಸಂತೃಪ್ತ ಭಾವದಿ ಆತ್ಮತೃಪೊತಿಯ ನಗೆ ಇರಲು
ಸದ ಪ್ರೀತಿಯ ನಿವೇದನೆ…..
                                –  ನಿವೇದನೆ

ಕವಿತೆ ಪ್ರಾರಂಭವಾಗುವುದೇ ನಿವೇದನೆಯ ಮೂಲಕ.ಮನುಷ್ಯ ಮನುಷ್ಯ ಸಂಬಂಧಗಳು ಯಾಂತ್ರಿಕವಾಗುತ್ತಿವೆ.ಅಂತರ್ಯುದ್ಧದ ಸುಳಿವು ಸದ್ದಿಲ್ಲದೆ ಮನದಲ್ಲಿ ಮನೆಮಾಡುತ್ತಿದೆ.ಒಬ್ಬರಿಗೊಬ್ಬರು ಅನಾಮಿಕರಂತೆ ವರ್ತಿಸುವ ಸಮಯದಲ್ಲಿ; ಕಾಪಿಡುವ ಮುನ್ಸೂಚನೆ ಬರುವುದಾದರೂ ಎಲ್ಲಿ? ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರೂ ತಮ್ಮ ತಮ್ಮ ಭಾವಶುದ್ದಿಯತ್ತ ಹೆಚ್ಚು ಮಾಗಿದರೆ,ಸಂಜೀವಿನಿಯಂತೆ ಇನ್ನೊಮ್ಮೆ ಬದುಕು ಹಸನಾಗುವುದು.ಆಗ ಜನ್ಮಜನ್ಮಕ್ಕಂಟಿದ ಮೋಹ,ಲೋಭದ ಮಾಯೆ ಕಳಚಿ ಆತ್ಮ ಸದ್ಗತಿ ಪಡೆಯುವಲ್ಲಿ ಸಹಕರಿಸಿರೆಂದು ನಿವೇದಿಸುವ ಕವಿತೆ ಅಪ್ಯಾಯಮಾನವಾದುದು.ಈ ಭಾವಕ್ಕೆ ಬುನಾದಿಯಾಗಿ ಇವರ ಕವಿತೆಗಳಾದ ರಂಗಿನಾಟ,ಸಹಕಾರ,ಬಾಂಧವ್ಯ, ಮಾನವೀಯತೆ.

ವಿಶ್ವಗುರುವಾಗಿಸಿದೆ ದೇಶವನು ಜಗದಲಿ ಇಂದು
ಪ್ರಾಮಾಣಿಕತೆಯನು ಮೈಗೂಡಿಸಿದೆ ಈ ಯೋಗಯೆಂದೆಂದು
ಕುಟುಂಬ ಸಮಾಜ ದೇಶವ್ಯಾಪಿಯಾಗಿಸಿದ ಸಿಂಧು
ತಾಳ್ಮೆ ಶಾಂತಿಯನು ಹೊಂದಿ ಆಗೋಣ ಬಂಧು
                                                         – ಚೇತನ

ನಮ್ಮ ದೇಶ ಸರ್ವಧರ್ಮದ ಶಾಂತಿಯ ತೋಟ.ವಿಶ್ವಗುರು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ಮಾತಿನಂತೆ, ಆರೋಗ್ಯ ನಮ್ಮ ಬದುಕಿನ ಮೂಲ ಮಂತ್ರವಾಗಬೇಕು.ಯೋಗ ಗುರು ಮಹರ್ಷಿ ಪತಂಜಲಿಯವರ ಕೊಡುಗೆಗಳು ವಿಶ್ವವೇ ಅಪ್ಪಿಕೊಂಡು ಆರೋಗ್ಯ ಪಡೆಯಲು ಆಲಸ್ಯವನ್ನು ದೂರ ಮಾಡಿದರೆ ದೇಹ ಪರಿಶುದ್ದವಾಗುವುದರೊಂದಿಗೆ ಕಲ್ಮಶಗಳನ್ನು ತೊಳೆದಂತೆಲ್ಲ ಶುದ್ದತೆ ಆಧ್ಯಾತ್ಮ ಚಿಂತನೆಗೆ ಸರ್ವರೋಗಗಳಿಗೆ ಮದ್ದು ಯೋಗಯೆಂಬುದನ್ನು ಮರೆಯಬಾರದು ಎಂದು ಸೂಕ್ಷ್ಮವಾಗಿ ತಿಳಿಹೇಳುವುದನ್ನು ಕವಯತ್ರಿ ಮರೆಯುವುದಿಲ್ಲ..

ಸಲಿಲದಿ ಮೂಡಿದ ಅಂಬರದ ಪ್ರತಿಬಿಂಬ
ಆಂತರ್ಯದ ಪ್ರೀತಿಯ ಅಭಿವ್ಯಕ್ತಿಯಲಿ ನಿನಬಿಂಬ
ಹೃದಯ ಮಂದಿರದಿ ನೀ ದೇವಿ ನಾ ಭಕ್ತ
ಇನ್ನಾದರೂ ಒಲವ ಕರೆಯ ಆಲಿಸಿದರೆ ನಾ ಶಕ್ತ
                                                   -ಅಮೃತ ಘಳಿಗೆ

ಕವಯತ್ರಿಯ ಪ್ರೀತಿಯು ಇಹಪರದ ಜೊತೆಗಿನ ಬಾಂಧವ್ಯ ಬೆಸುಗೆಯಂತೆ ಬೆಸೆದಿದ್ದಾರೆ.”ನೀನು ನನ್ನ ಚಳಿಗಾಲದ ಸೂರ್ಯ, ಪ್ರೀತಿಯ ಬೆಳಕಿನಲ್ಲಿ ನನ್ನ ಜೀವನ ಬೆಳೆಯುತ್ತದೆ.” ಎಂಬ ಮಾತಿನಂತೆ
ದಾಂಪತ್ಯಕ್ಕೂ ಮುಂಚೆ ಪ್ರೇಮಿಯಾಗಿರಬೇಕು‌.ಅದೊಂದು ‘ಅಮೃತಘಳಿಗೆ’ ಕಾರಣ ಪ್ರೀತಿ,ಪ್ರೇಮ ಎಲ್ಲವೂ ಆಯಾ ವಯಸ್ಸಿನ ಕಾಲಘಟ್ಟದಲ್ಲಿ ಅತ್ಯಂತ ಮಧುರವಾಗಿ ಮನವನ್ನು ಆವರಿಸುವ ಒಂದು ನಶೆ…ಅದು ಇದ್ದಷ್ಟು ಗಳಿಗೆ ಪ್ರೇಮಿಗಳು ಅಜರಾಮರರು.ನೋಟಗಳು ಸಮ್ಯಕ್ ಸ್ಮೃತಿಯನ್ನು ಉಚ್ಛ್ರಾಯ ಸ್ಥಿತಿಯಲ್ಲಿ ಇಡಲು ಸಾಧ್ಯವೆಂಬುದನ್ನು ಸರಳವಾಗಿ ಬಿಂಬಿಸಿದ್ದಾರೆ.

ವಿರಹ ವೇದನೆ,ಒಲವ ಕರೆ,ಕನವರಿಕೆ,ಒಂದಾಗಬಾರದೇ, ಭಾವಯಾನ, ಒಲವ ಪಯಣಿಗ,ಭಾವವೀಣೆ,ಒಲವಹಣತೆ,ಒಲವಸೆಲೆ,ಮಿಡಿದ ಶೃತಿ..ಪವಿತ್ತ ಸ್ನೇಹ,.ಈ ಎಲ್ಲ ಕವಿತೆಗಳು ಒಂದಿಲ್ಲೊಂದು ಶರಣಾಗತ ಪ್ರೇಮಭಾವಕ್ಕೆ ಮಣಿದ ಸೆಲೆಗಳು ಎಂದರೆ ತಪ್ಪಿಲ್ಲ.

ಕವನಸಂಕಲನದ ಶೀರ್ಷಿಕೆ ಹೊತ್ತ ಕವಿತೆ “ಭಾವಸೆಲೆ”

ಯಾರೂ ಶಾಶ್ವತವಲ್ಲದ ಈ ಲೋಕದ ಪಯಣದಿ
ಮತ್ತೊಬ್ಬರ ಕಣ್ಣಿರೊರೆಸುವ ಆಪತ್ಬಾಂಧವರಾಗಬೇಕಿದೆ ನಾವು
ಮನುಜಮತದಿ ನಡೆದಿರಲು ವಿಶ್ವಪಥಕೆ ಬೇಕಿದೆ ಒಲವಸೆಲೆ
ಇರುವುದೊಂದು ಜನುಮವನು ಸಾರ್ಥಕಗೊಳಿಸೋಣ ನಾವು
                                                                             – ಭಾವಸೆಲೆ

ಯಾರ ಜೀವನವೂ ಹೂವುಹಾಸಿಗೆಯಲ್ಲ!. ಹಾಗಂತ ನೋವುಗಳಿಂದ ತುಂಬಿದೆಯಂತನೂ ಅಲ್ಲ; ಏರಿಳಿತಗಳ ಹಾವು ಏಣಿಯಾಟದಂತೆ ಬದುಕು ಎಲ್ಲವನ್ನೂ ಅನುಭವಿಸುವಂತೆ ಪರಿಸ್ಥಿತಿ ನಿರ್ಮಾಣವಾಗುವುದನ್ನು ನಾವ್ಯಾರು ತಡೆಯಲು ನಮ್ಮಿಂದ ಸಾಧ್ಯವಿಲ್ಲ.
ಪರಸ್ಪರ ಸಹಕಾರ,ಸೌಹಾರ್ದ, ಸ್ನೇಹಪರತೆಯ ಒರತೆ ಹೃದಯದಲ್ಲಿ ಚಿಮ್ಮಿದರೆ ತಾನೆ ಮನುಷ್ಯ ಮಾಮವೀಯ ಗುಣಗಳನ್ನು ಹೊರಹೊಮ್ಮಿಸಲು ಸಾಧ್ಯ!.ಕವಿಯ ಕಾಳಜಿ ನೊಂದವರ ಪರವಾಗಿ,ಮನದಲ್ಲಿ ಖೇದನ್ನು ತುಂಬಿಕೊಂಡಷ್ಟು ಅಭಿವೃದ್ಧಿ ಶೂನ್ಯ ಎಂಬುದನ್ನು ಹೇಳಿರುವುದು ಇಂದಿನ ದಿನಮಾನದಲ್ಲಿ ಅನಿವಾರ್ಯ ಕೂಡ..ಭಾವಸೆಲೆ ಸದಾ ಹರಿವ ಝರಿಯಂತೆ ಜಿನುಗಿದರೆ ಮಾತ್ರ ಜೀವನ ಸುಂದರವೆನ್ನುವುದು ಕೂಡ ವಾಸ್ತವ.

ಬೆಳಗಲಿ ಭವಿಷ್ಯ ,ಜೇಡ,ಸುಯೋಗ,ಬಾಳರೈಲು,ಕವಿತೆಗಳು ಮನದ ಇಂಗಿತವನ್ನು ವ್ಯಕ್ತಪಡಿಸುತ್ತವೆ; ಕವಿಯ ಸಂವೇದನಾ ಶಕ್ತಿಯನ್ನು ಪ್ರಚುರಪಡಿಸುತ್ತವೆ.

ಬನ್ನಿ ಅಭಿಮಾನದ ನಾಡಗುಡಿಯ ಸೇವೆಗೆ
ಕನ್ನಡ ನುಡಿ ಹಬ್ವದ ಆಚರಣೆಯ ಸವಿಗೆ
ನಾಡನುಡಿಯನ್ನು ಸಂಭ್ರಮದಿ ಪೊರೆದು ನಾವೆಲ್ಲ
ಕನ್ನಡದ ಹಣತೆಯನ್ನು ಸದಾ ಆತ್ಮಾಭಿಮಾನದಿ ಬೆಳಗುವ.
                                       -ಕಸ್ತೂರಿ ಕಂಪು

ಎನಿತು ಮಧುರ ಕನ್ನಡ ನುಡಿಯು
ಮೋಹನ ಮುರುಳಿಯ ಇಂಪಿನ ಸುಧೆಯು
ಕನ್ನಡ ನಾಡ ಸೊಹಡಿನ ಶ್ರೀಗಂಧ
ನಮ್ಮ ಕರುನಾಡ ಹಿರಿಮೆಯ ಮಕರಂದ
                                       – ಕೈಂಕರ್ಯ

ಕವಯತ್ರಿ ಕನ್ನಡ ನಾಡುನುಡಿ,ದೇಶಪ್ರೇಮವನ್ನು ಮತ್ತು ಪ್ರಕೃತಿಯ ಒಳಾಂತರಂಗವನ್ನು,ತಾಯಿಯ ಪ್ರೀತಿ,ರೈತ,ನಲಿವಿನ ಸಂಸಾರ, ಬೆಳಕು,    ಕಸ್ತೂರಿಯ ಕಂಪು,ಕೈಂಕರ್ಯ,ಮೌಲ್ಯಗಳನ್ನು ಬಿತ್ತುವ ಕವಿತೆಗಳು ಓದುಗನ ಮನದಲ್ಲಿ ನೆಲೆನಿಲ್ಲಲು ಸಹಕಾರಿಯಾಗಿವೆ.

ಒಟ್ಟಾರೆ ಹೇಳುವುದಾದರೆ ” ಭಾವಸೆಲೆ” ಕವನಸಂಕಲನ  

ಭಾವನೆ ಮತ್ತು ಭಾವನೆಯಿಂದಾಗುವ ಪರಿಣಾಮಗಳು, ಪ್ರಧಾನವಾಗಿ ವರ್ತನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳ, ಮಧ್ಯೆ ಸಂಬಂಧಿತ ಭಿನ್ನತೆಯು ಕಾರಣವಾಗುತ್ತದೆ.ಒಂದು ಹೂವಿನ ತೋಟದಲ್ಲಿ ಯಾವ ಹೂವು ಚೆಂದ ಎಂದು ಪ್ರಶ್ನೆ ಮಾಡಿದರೆ? ಉತ್ತರ ನಿಖರವಾಗಿ ಸಿಗಲಾರದು. ಯಾವ ಹೂವು ಶ್ರೇಷ್ಠ? ಎಂದರೂ ಉತ್ತರಿಸಲಾಗದು.ಪ್ರತಿಯೊಂದು ಹೂವಿಗೂ ಅದರದೇ ಆದ ಗುಣ ಧರ್ಮವಿದೆ.ಹೀಗಿರುವಾಗ ಕವಿತೆಗಳೆಲ್ಲವೂ ಒಂದೇ ಗುಣಮಟ್ಟದಲ್ಲಿ ಇದೆಯೇ ಎಂಬ ಪ್ರಶ್ನೆಗೆ ಉತ್ತರವಿಲ್ಲ..ಅಲ್ಲಲ್ಲಿ ಪುರ್ನಬಳಕೆ,ಅರ್ಥ,ಸಾಲುಗಳಲ್ಲಿ ವ್ಯತ್ಯಾಸ, ಗದ್ಯ,ಪದ್ಯವೆಂಬ ವ್ಯತ್ಯಾಸ ನಮ್ಮಂತಹ ಕವಿಗಳಿಗೆ ಸಾರ್ವಕಾಲಿಕವಾಗಿ ನೆನಪಿಡುವ ವಿಷಯ ವಸ್ತುವು ಹೌದು!. ಇಲ್ಲಿ ವಿಮರ್ಶೆಯ ಚರ್ಚೆಯಿಲ್ಲ..ನಾನು ನನ್ನ ದೃಷ್ಟಿಯಲ್ಲಿ ‘ಭಾವಸೆಲೆ’ಯಷ್ಟೇ…ಅವರವರ ಓದಿನ ವಿವೇಚನೆಗೆ ಒಳಪಟ್ಟಿದ್ದು…ಇನ್ನು ಹೆಚ್ಚೆಚ್ಚು ಕವಿತೆಗಳು ಮಾಗಿ,ಬಾಗಿ ಬರಲೆಂದು ಹಾರೈಸುವೆ…


About The Author

Leave a Reply

You cannot copy content of this page

Scroll to Top