ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ಬಹುದಿನಗಳ
‘
ಮನದ ಮುಂದಣ‘ ಆಸೆಗೆ
ಕಾಲ ಕೂಡಿ ಬಂತು
ಕಡಲ ರಾಣಿ ಗೋವಾಕೆ ಹೊರಟೆ
ನಸುಕಿನ ಜಾವದಿ
ವಿಶಾಲ ಕಡಲಿನ ಮರಳು
ಹಾಸಿಗೆಯಲಿ
ಅವರಿಟ್ಟ ಹೆಜ್ಜೆಗುರುತುಗಳ
ಮೇಲೆ ಕುಳಿತೆನು.

ಅವರು ತಡರಾತ್ರಿ ಕುಡಿದು
ತಿಂದುಂಡು ತೆರಳಿರಬೇಕು
ನಲಿದು ನರ್ತಿಸಿ ತೆಪ್ಪೆಜ್ಜೆಳಿಟ್ಟರಬೇಕು..
ಚೆಲ್ಲಿದ್ದ ಪದಾರ್ಥಗಳನು
ಭಕ್ಷಿಸಿ ಮಲಗಿದ್ದ ನಾಯಿಗಳು
ಕುಕ್ಕಿ ಹೆಕ್ಕುತ್ತ ಹಾರುತ್ತಿರುವ
ಕಾಗೆಗಳು
ಜನಗಳ ಹೊತ್ತು ಕಡಲನ್ನು ತಿರುಗಿ
ದಣಿದು ನಿಂತ ಬೋಟುಗಳು
ಮತ್ತು ನಾನು ಅಲ್ಲಿದ್ದೆವು
ಭೋರ್ಗರೆದು ಕರೆವ ಕಡಲಿಗೆ
ಮುಂಜಾವು ಸಾಕ್ಷಿಯಾಗಿತ್ತು!

ನೀಲ ಗಗನ
ನೀಲಿ ಕಡಲೊಡಗೂಡಿ
ಮುತ್ತಿನ ಸರಮಾಲೆಯಾಗಿ
ಮುತ್ತಿಕ್ಕಿದ ಗೋವಾ!
ಅಹಾ ಅಹಾ! ವ್ಹಾ ವ್ಹಾ!
ಕಣ್ಗೆಲ್ಲ ಶೃಂಗಾರದ ಓಗರ
ಎಲ್ಲೆಲ್ಲೂ ಮನೋಹರ
ಹೊತ್ತೇರುತ್ತಿದ್ದಂತೆಯೆ
ಯುವ–ನವ ಮನಗಳ ಸಾಗರ
ಬಲು ಸುಂದರ!

ಗಾಳಿಗೆ ಸೋಕಿದ ಅಲೆಗಳು
ತಳುಕು ಬಳುಕಿನಲಿ
ತೀವ್ರವಾಗಿ ಬಂದಪ್ಪಳಿಸಿ                                                        

 ತೀರದಲಿ ಹಾಲುಕ್ಕಿಸುವ ನಿನಾದ                                    
ಮುಸ್ಸಂಜೆಯಾಗುತ್ತಿದ್ದಂತೆ      
ತಂಪಾದ ಮರಳಿನಲಿ
ಮನಸ್ಸು ಮರುಳಾಗುತ್ತವೆ
ಅರಳುತ್ತವೆ ಕೆರಳತ್ತವೆ..
ಹೆಂಡ–ಹೆಣ್ಣಿನಲಿ
ತೇಲಿ–ತೇಲಿ ಹೋಗುತ್ತವೆ..
ವಾರಧಿ ಮಾತ್ರ ಲೆಕ್ಕಿಸದೇ
ಅರ್ಭಟಿಸಿ ಬೊಬ್ಬಿಡುತ್ತ
ಭೋರ್ಗರೆಯುತ್ತ
ಒಂದೇ ಸಮನೇ ದಡಮುಟ್ಟುವ
ಆಟ ಆಡುತ್ತಿದೆ.!

ನೀಲಿ ಡಾಲ್ಫಿನ್ ವೀಕ್ಷಣೆಗೆ
ತಕ್ಷಣ ಕುಳಿತಿತು ಮನವು
ಎತ್ತ ನೋಡಿದಡತ್ತ ನೀರೇ ನೀರು
ಆಳದ ಅಲೆಗಳ ಬೃಹತ್ತೇರು..
ತೇಲುವ ದೋಣಿ ಹೊಯ್ದಾಡುತಿತ್ತು
ಡಾಲ್ಫಿನ್ ಕಣ್ಣಿಗೆ ಕಾಣದಾಗಿತ್ತು
ಭಯವು ಮಾತ್ರ ಆವರಿಸಿತ್ತು
ನಿರಾಸೆಯಲಿ ದೋಣಿ ಮರಳುವ
ಹೊತ್ತಿಗೆ ತಕ್ಷಣ ಜಿಗಿದವು ಡಾಲ್ಫಿನ್ನು
ನನಗಾಯಿತು ಸ್ವರ್ಗಕೆ ಮೂರೆ ಗೇಣು!!

ತೀರದಂಚಿನಲಿ ಬೆಳ್ಳಿ ನೀರು
ತುಟಿಯಂಚಿನಲಿ ಹೀರುವ ಬೀರು
ಗ್ರಂಥಾಲಯದಂತೆಯೇ                                                                                                 

ಒಪ್ಪ–ಓರಣವಾಗಿಟ್ಟ ಬಾರು                    ‌‌‌                          
ವಿಶ್ವ–ವಿದ್ಯಾಲಯಗಳೇನು?
ವಿಷಯಂಗಳ ವಿದ್ಯಾಲಯವೇ            ‌                                                                       

ಹುಟ್ಟಿ ತೊಳಗಿ–ಬೆಳಗುತ್ತಿದೆ                                        
ಮೋಹದ ಮಾಯೆ ಅಲ್ಲಿ ಮಡುಗಟ್ಟಿದೆ.

ಗದ್ದೆಯಲ್ಲಿ ಗುದ್ದಲಿಯಿಂದ
ಗುದ್ದಾಡಿ ದಣಿದು ಬಂದವರಂತೆ
ಕೈ–ಕಾಲು ಮೈ–ತಲೆಗಳ
ಮಸಾಜು ಬೇರೆ ಕೇಡು
ಅದು ನೆಪ ಮಾತ್ರವಿರಬೇಕು
ಅಲ್ಲಿ ಹೆಣ್ಣು–ಗಂಡಿನ ತನು–ಮನವೆಲ್ಲ
ಕಾಮಸ್ಪರ್ಶಕ್ಕೆ–ಪ್ರೇಮಪಾಶಕೆ
ಹಾತೊರೆದಿದೆ
ಬೇಂದ್ರೆ ಅಜ್ಜ ಹೇಳಿದ
ಕುರುಡು ಕಾಂಚಾಣ ಕುಣಿ–ಕುಣಿದಿದೆ!

ಕಿರಿಯರು–ಹಿರಿಯರು
ಕರಿಯರು–ಬಿಳಿಯರು
ಈ ದೇಶ–ಹೊರದೇಶವೆಂಬ
ವರ್ಣ–ಬೇಧವಿರದಲೇ
ಧಾವಿಸಿ ಕೂಡಿದ ಕೂಟ
ನುಗ್ಗಿ ಬರುವ ಧೈತ್ಯೆಲೆಗಳಿಗೆ
ಒಪ್ಪಿ–ಅಪ್ಪಿಕೊಳ್ಳುವ ಆಟ
ನವರಸಗಳ ಒಲವಿನ ಮಾಟ
ಮೋಜು–ಮಸ್ತಿಯ ಚೆಲ್ಲಾಟ!!

ಜಾತಿ–ಧರ್ಮ ಮತ–ಪಂಥ
ಸಿದ್ಧಾಂತಗಳ ವಾದವಿಲ್ಲ
ಹೋರಾಟ–ಹಾರಾಟ        
ಚಿರಾಟಗಳ ಪರಿವಿಲ್ಲ
ಕಾವ್ಯ–ಕಥೆಗಳ ಸೊಲ್ಲಿಲ್ಲ
ಬರೀ ಮೋಹದ ನಾದವಿದೆ
ಕಾಮದ ಹಸಿವಿದೆ
ಕ್ಷಣಿಕ ಸುಖ–ಸ್ವರ್ಗವೇ  
ತೇಲಾಡಿ ಹೊಯ್ದಾಡಿದೆ.

ಒಂದಂತೂ ಸತ್ಯ
‘
ಸಾಸಿವೆಯಷ್ಟು ಸುಖಕ್ಕೆ
ಸಾಗರದಷ್ಟು ದು:ಖವೆಂದು‘
ಅಲ್ಲಿ ಸಾರಿ ಹೇಳಿದಂತಿದೆ!!

          

About The Author

Leave a Reply

You cannot copy content of this page

Scroll to Top