ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com

ನಮ್ಮ ಪ್ರೇಮ ಸತ್ತ ದಿನ
ಕವಿಗಳು ಹೇಳುವ ಹಾಗೆ
ಯಾವ ಗುಡುಗು ಮಿಂಚು
ಧಾರಾಕಾರ ಮಳೆಯೂ
ಬರಲಿಲ್ಲ..!

ಕಣ್ಣು ಕೋರೈಸುವ ಹಾಗೆ
ಅಸಂಖ್ಯ ನಕ್ಷತ್ರಗಳ ನಡುವೆ
ತಣ್ಣಗೆ ಮಲಗಿತ್ತು
ನಿರ್ಜೀವಗೊಂಡ ನಮ್ಮ ಪ್ರೇಮ..!

ದುಃಖಿಸಬೇಕಿತ್ತು
ನಾವು ಆ ದಿನ
ಒಟ್ಟಿಗೆ ಇಬ್ಬರೂ ಕೂಡಿ
ಆದರೆ
ಬರಲಿಲ್ಲ ಅವಳು ಇತ್ತ
ಒಂದು ಕ್ಷಣವೂ
ಪಾಪ ಅವಳಿಗೆ
ಬಿಡುಗಡೆ ಬೇಕಿತ್ತು
ನನಗದರ ಬಂಧನ ಬೇಕಿತ್ತು..!

ಈ ವಿರೋಧಾಭಾಸದಲ್ಲಿ
ಮಣ್ಣು ಮಾಡಲು ಮನಸ್ಸೊಪ್ಪದೆ
ಹಟಕ್ಕೆ ಬಿದ್ದು ಕೂತಿದ್ದೆ
ದನಿಯೆತ್ತಿ ಒಂಟಿಯಾಗಿ ಪ್ರತಿಭಟಿಸಿದ್ದೆ
ದೊಡ್ಡ ಹೋರಾಟಗಾರನಂತೆ
ಆದರೂ
ಪ್ರಯೋಜನವಾಗಲಿಲ್ಲ..!

ನಮ್ಮಿಬ್ಬರ ಪರಸ್ಪರ
ಆರೋಪ ಪ್ರತ್ಯಾರೋಪಗಳ
ನಡುವೆಯೂ
ಯಾವ ಮರಣೋತ್ತರ ಪರೀಕ್ಷೆಗಳಿಲ್ಲದೆ
ಪ್ರೇಮವನ್ನು
ಸಾಂಗವಾಗಿ ಸಮಾಧಿ ಮಾಡಿದ ಮೇಲೆ
ಅಲ್ಲೊಂದು ಕೆಂಪು ಗುಲಾಬಿಯನ್ನೋ
ಘಮಿಸುವ ಮಲ್ಲಿಗೆಯನ್ನೋ ನೆಟ್ಟು
ಕೈ ತೊಳೆದುಕೊಳ್ಳುವ
ಕನಿಷ್ಠ ಸೌಜನ್ಯವನ್ನು ನಾವು ತೋರಲಿಲ್ಲ..!

ಈಗಂತೂ ವರ್ಷಗಳೇ ಉರುಳಿವೆ  
ಪ್ರೇಮವಿರದ ಹೃದಯದ ಅಟ್ಟಣಿಗೆಯಲ್ಲಿ
ಧೂಳಿಡಿದ ಅದರ ನೆನಪುಗಳನ್ನಷ್ಟೇ  ಜತನವಾಗಿ ಜೋಡಿಸಿಟ್ಟಿದ್ದೆವೆ..!
ಎದುರು ಸಿಕ್ಕರೆ
ಅಪರಿಚಿತರಂತೆ ಸೋಗು ಹಾಕಿ
ಮುಂದೆ ನಡೆದುಬಿಡುತ್ತೇವೆ..!

ಆದರೆ
ನಮ್ಮ ಪ್ರೇಮವನ್ನು ಕಂಡು
ನಿತ್ಯ ಹಲುಬುತ್ತಿದ್ದ
ಈ ಜನ ಮಾತ್ರ
ನಾವು ಬೇರಾದ ನಂತರವೂ
ಸಮಾಧಾನಗೊಳ್ಳದೆ
ತಮ್ಮ ಸಂಶಯಾಸ್ಪದ ಕಂಗಳಲ್ಲಿ
ಎಂದೋ ಸಮಾಧಿಯಾಗಿರುವ
ನಮ್ಮ ಪ್ರೇಮವನ್ನು
ನಾವು ಹೋದಲ್ಲಿ ಬಂದಲ್ಲಿ
ಭೇಟಿಯಾಗುತ್ತಿದ್ದ ಜಾಗಗಳಲ್ಲಿ
ಈಗಲೂ ತನಿಖೆ ನಡೆಸುತ್ತಿದ್ದಾರೆ..!

ಪಾಪ
ಪ್ರೇಮದ ಕುರಿತು ನಮಗಿಂತಲೂ
ಜನರಿಗೆ  
ತುಂಬಾ ಖಾತ್ರಿ ಇರಬೇಕು
ಸತ್ತ ನಂತರವೂ ಅದು
ಬದುಕುಳಿದು ಬಿಡುವ
ಹಲವು ಸಾಧ್ಯತೆಗಳ ಬಗ್ಗೆ..!

ಆದರೆ ನಾವು ಹಾಗಲ್ಲ
ನಮ್ಮ ಹಳೆಯ ಡೈರಿಯನ್ನು
ಆಗಾಗ
ವಿಷಾದದಲ್ಲಿ ತಿರುವು ಹಾಕುತ್ತಾ
ಆತ್ಮ ವಿಲಾಪದಲ್ಲಿ
ಪ್ರತಿನಿತ್ಯ ಪ್ರೇಮಸತ್ತ ದಿನವನ್ನು
ಆಚರಿಸುತ್ತೇವೆ…!


About The Author

Leave a Reply

You cannot copy content of this page

Scroll to Top