ಕಾವ್ಯ ಸಂಗಾತಿ
ಪರಿಮಳ ಐವರ್ನಾಡು ಹೊಂಬೆಳಕು
“ಖಳನಾಯಕನಾರು?”


ಚಿಗುರೊಡೆದ ಒಲವ ಕುಡಿಯನು
ಮುಚ್ಚಿಟ್ಟು ಬಚ್ಚಿಟ್ಟು ಹೃದಯದಲೇ ಕಾಪಿಟ್ಟು
ಪೂಜಿಸಿ ಆರಾದಿಸಿ ಮನದಲೇ ಶೃಂಗರಿಸಿ
ಪ್ರೀತಿಸಿದರೂ ಹೇಳಲು ಅಡ್ಡಗೋಡೆಯಾದುದೇನು
ಭಯವೋ?
ತಂಗಾಳಿಯಂದದಿ ತಂಪೆರೆದೊಲವು
ಕಣ್ಣೋಟದಲೇ ನಾಚಿಸಿದೊಲವು
ಕಿರುನಗೆಯಲಿ ಕೆನ್ನೆ ಕೆಂಪಾಗಿಸಿದೊಲವು
ಮೌನದಲ್ಲಿ ಮಾತಾಡಿಸಿದೊಲವು
ಒಲವು ಒಂದಾಗಲು ತಡೆಯಾದುದೇನು
ಪರಿಸ್ಥಿತಿಯೋ?
ತನ್ನವರ ಸಂತಸಕ್ಕೆ
ಮನೆತನದ ಗೌರವಕ್ಕೆ
ತನ್ನಾಸೆಯ ಬಲಿ ಕೊಟ್ಟು
ನಗುವ ಮುಖವಾಡ ಹೊತ್ತು
ಒಲವ ದೂರ ತಳ್ಳಿದ್ದೇನು
ಹಣೆಬರಹವೋ?
ಕೈಗೆಟುಕಿ ಜಾರಿದ
ಕನಸಿನ ದೋಣಿಯನು
ದಡಸೇರುವ ಮುನ್ನವೇ
ಮುಳುಗಿಸಿದ ಕ್ರೂರತೆಯೇನು
ಇಬ್ಬರ ನಡುವೆ ಬೆಳೆಸಿದ ಗೋಡೆಯೇನು
ದುರಾದೃಷ್ಟವೋ?
ನನ್ನದಾಗಬೇಕಿದ್ದ ನಿನ್ನನು
ನಿನ್ನದಾಗಬೇಕಿದ್ದ ನನ್ನನ್ನು
ಪರರ ಪಾಲಿಗಿಟ್ಟು
ನಗುತ ಅಳುವ ಕಲಿಸಿದ
ಒಲವಿಗಿಂತ ದೊಡ್ಡದಾದುದೇನು
ತ್ಯಾಗವೋ?
ಖಳನಾಯಕ ಯಾರಿಲ್ಲಿ ಹೇಳು
ಭಯವೋ,ಪರಿಸ್ಥಿತಿಯೋ
ಹಣೆಬರಹವೋ,ದುರಾದೃಷ್ಟವೋ
ತ್ಯಾಗವೋ ಸರಿಯಾದ ಸಮಯಕ್ಕೆ ಹೇಳದುಳಿದ
ಪ್ರೀತಿಯೋ?
ಖಳನಾಯಕನಾರು?
ಪರಿಮಳ ಐವರ್ನಾಡು ಹೊಂಬೆಳಕು



