ಕಾವ್ಯ ಸಂಗಾತಿ
ಟಿ. ದಾದಾಪೀರ್ ತರೀಕೆರೆ
“ನಾನು ಸಂಭ್ರಮಿಸುತ್ತೇನೆ”


ಬರಗಾಲದ ತತ್ತರಕ್ಕೆ
ಹಸಿರು ಒಣಗಿ ಬಣ್ಣ ಕಳೆದುಕೊಳ್ಳುವ ಟೈಮಿನಲ್ಲಿ
ನಿನ್ನ ಸೀರೆಯೊಳಗೆ ಬೆರೆತ ನಿನ್ನ ನಗುವಿನ ಬಣ್ಣ
ಒಂದಷ್ಟು ನೆಮ್ಮದಿ, ಭರವಸೆ ಮೂಡಿಸುವಂತಿದ್ದರೆ
ನಾನು ಸಂಭ್ರಮಿಸುತ್ತೇನೆ
ಮಳೆ ಹೋಯ್ತು ಅನ್ನೊ ನೋವು ಆಕಾಶಕ್ಕೆ ಮುಖ ಮಾಡಿರುವಾಗ
ದುತ್ತನೆ ಎದುರಾಗುವ ನಿನ್ನ
ಕಂಡ ಕೂಡಲೆ ಮನಸು ತೇವ ಆಗುವುದಾದರೆ
ನಾನು ಸಂಭ್ರಮಿಸುತ್ತೇನೆ
ಕವಿತೆ ಯಾಗುವ ಜುಮುಕಿಗಳ ಝಲಕ್,
ಬಳೆಗಳ ಮಧುರ ರಾಗ
ಮಿಸುಕಾಡದ ನೆರಿಗೆಗಳ ಮೌನ ಸಲ್ಲಾಪ
ಗಾಳಿ ಬೀಸುವ ಸೆರಗು
ಮೋಡಗಳ ಸೀಳಿ ಬರುವ ನಿನ್ನ ಉತ್ಸಾಹ ಕಂಡು
ಕ್ಯಾಲೆಂಡರ್ ನಲ್ಲಿ ಮಳೆ ನಕ್ಷತ್ರಗಳು ಕಾಣುವುದಾದರೆ
ನಾನು ಸಂಭ್ರಮಿಸುತ್ತೇನೆ
ಕಡುಗಪ್ಪು ಹೆರಳು
ಬೆಳ್ಳಿ ಮಿಂಚೊಂದು ಮೂಡುವಂತ ಮಲ್ಲಿಗೆ ಹೂ ಸರ
ಕತ್ತರಿಗೆ ಸಿಕ್ಕಿ ಹೋಳಾದ
ನಿನ್ನ ಹುಬ್ಬುಗಳು
ಕಾಮನ ಬಿಲ್ಲಿನ ಆಸೆ
ಬಿತ್ತುವುದಾದರೆ
ಬರಡು ನೆಲದ ಮೇಲೆ ನಿಂತು ನಿನ್ನ ಸಂಭ್ರಮಿಸುತ್ತೇನೆ
ಟಿ. ದಾದಾಪೀರ್ ತರೀಕೆರೆ



