ಕಾವ್ಯ ಸಂಗಾತಿ
ಅನ್ನಪೂರ್ಣ ಸು ಸಕ್ರೋಜಿ ಪುಣೆ
“ರಾವಣನ ಪ್ರಶ್ನೆ”


ಉರಿಯುತ್ತಿರುವಾಗ ರಾವಣನು
ನಕ್ಕು ಸಮೂಹವ ನೋಡಿದನು
ನಿಮ್ಮ ನಿಮ್ಮ ಚಾರಿತ್ರ್ಯವ ಪರೀಕ್ಷಿಸಿ
ಎಂದು ಅಟ್ಟಹಾಸದಿ ನುಡಿದನು//
ಮಾಡಿರುವೆನು ನಾನು ಅಪರಾಧ
ಸೀತೆಯ ಅಪಹರಣವ ಮಾಡಿದರೆ
ಆದರೆ ಮೀರಲಿಲ್ಲ ಎಂದೂ ನಾನು
ಮರ್ಯಾದೆಯ ಎಲ್ಲೆಯ ಗೆರೆಗಳನು//
ಹಗಲಿರುಳು ಎನ್ನದೆ ರಸ್ತೆಯಲಿ
ಅಬಲೆಯರ ಮಾನ ಕಳೆಯುವಿರಿ
ಸಭ್ಯತೆಯ ಮುಖವಾಡ ತೊಟ್ಟು
ವರ್ಷವರ್ಷವೂ ನನ್ನ ಸುಡುವಿರಿ//
ನಿಮ್ಮಂಥ ಮಾನವರಿಗಿಂತ
ರಾಕ್ಷಸನಾದ ನಾನೇ ಮೇಲು
ಸೀತೆ ನನ್ನ ಸನ್ನಿಧಿಯಲಿದ್ದರೂ
ಅವಳ ಮಾನಕ್ಕೆ ಧಕ್ಕೆ ಮಾಡಲಿಲ್ಲ//
ವರದಕ್ಷಿಣೆಯ ದುರಾಸೆಗಾಗಿ
ಸಾವಿರಾರು ಸೀತೆಯರ ಸುಡುವಿರಿ
ವಂಶದ ಕುಡಿಯಾಸೆಯ ಬೆನ್ನೇರಿ
ಗರ್ಭದ ಮೊಗ್ಗುಗಳ ಕೊಲ್ಲುವಿರಿ//
ನನ್ನನು ಕಳಂಕಿತನೆಂದು ಕರೆಯಲು
ನಿಮಗೇನು ಹಕ್ಕಿದೆ ಹೇಳಿ
ಮೊದಲು ನಿಮ್ಮ ಚಾರಿತ್ರ್ಯ ತಿದ್ದಿ
ನಂತರ ನನ್ನನು ದೂಷಿಸಿರಿ//
ನಿಮ್ಮ ಆನಂದ ಸಂತೋಷಕ್ಕಾಗಿ
ವರ್ಷವರ್ಷವೂ ನನ್ನ ಸುಡಿರಿ
ಆದರೆ ಸುಡುವ ಮುನ್ನ ಒಮ್ಮೆ
ನಿಮ್ಮೊಳಗಿನ ರಾಮನ ತೋರಿಸಿರಿ//
ಅನ್ನಪೂರ್ಣ ಸು ಸಕ್ರೋಜಿ ಪುಣೆ



