ಕಾವ್ಯ ಸಂಗಾತಿ
ಅನನ್ಯ ಎಚ್ ಸುಬ್ರಹ್ಮಣ್ಯ
“ಕಾಣದ ನೆರಳು”


ಕಣ್ಣಿಗೆ ಕಾಣದ ಸತ್ಯದ ಹಿಂದೆ,
ಬೆನ್ನೇರಿ ಬರುವ ಅಗೋಚರ ಚಂದ;
ರೂಪವಿಲ್ಲದ ರೂಪಿಗೆ ನಾವಿಲ್ಲಿ ಮಣಿದಿದ್ದೇವೆ,
ಇಲ್ಲದ ಅಸ್ತಿತ್ವವ ಜೀವದೊಳಗೆ ತಂದಿದ್ದೇವೆ.
ಮುಟ್ಟಲಾಗದ ಆಕಾಶವ ಸ್ಪರ್ಶಿಸಲು ಕೈಚಾಚಿ,
ಕತ್ತಲೆಯಲಿ ಕಣ್ಣುಗಳನ್ನು ಬಿಟ್ಟು ಪರಿತಪಿಸಿ;
ನಂಬಿಕೆಯೆಂಬ ಕಗ್ಗತ್ತಲ ದಾರಿಯಲಿ ಸಾಗುತ,
ಕಾಣದ ದೇವರ ನೆರಳನೆ ಮೈತುಂಬಾ ಹೊತ್ತು
ಗಾಳಿಯಂತೆ ಆತ, ಇರುವುದೆಲ್ಲದರಲಿ ವ್ಯಾಪಿಸಿ,
ಆದರೆ ಯಾರ ಕಣ್ಣಿಗೂ ಎಂದೂ ಕಾಣದೆ ಮುಚ್ಚಿ;
ಸುಂಟರಗಾಳಿಯಲಿ ಸಿಲುಕಿದ ಒಂಟಿ ಮರ ದೇವನೆ?
ಅಥವಾ ನಮ್ಮೊಳಗಿನ ಅಂಜಿಕೆಯೆ ಆತನ ನಾಮವೆ?
ಸಂಕಟದ ಕಡಲು ಉಕ್ಕಿ ಬಂದಾಗ ಈ ಬದುಕಿನಲಿ,
ಯಾರೂ ಇಲ್ಲದ ಏಕಾಂತದ ಆ ಕತ್ತಲು ಗೂಡಿನಲಿ;
ಮನಸ್ಸು ಕೈಮುಗಿದು ಬೇಡುವುದು ಯಾರಿಗೆ?
ಕಾಣದೆಯೇ ಆ ಸ್ಪರ್ಶವಿರುವುದೇಕೆ ಒಳಗೆ?
ಕಣ್ಣಿಗೆ ಕಾಣದ್ದೇ ಇಲ್ಲಿ ದೊಡ್ಡ ಸತ್ಯವಾಗಿಹುದು,
ಉಸಿರು ಕಣ್ಣಿಗೆ ಕಾಣದು, ಆದರೂ ಜೀವವಿಹುದು;
ದೇವರು; ಕಾಣದಿದ್ದರೇನು, ನಂಬಿಕೆಯ ಕಣ್ಣಲಿ,
ಅವನಿಲ್ಲದ ಕ್ಷಣವಿಲ್ಲ ಈ ಜಗತ್ತಿನ ಹಾದಿಯಲಿ.
ಕಾಣದ ದೇವರ ನೆರಳೂ ಇಲ್ಲದ ಕತ್ತಲೆಯ ಕಡಲಲಿ,
ಬೆಳಕಿಗಾಗಿ ಹಂಬಲಿಸಿ ಕರಗಿತು ಮನುಜನ ನೆರಳು;
ಕೊನೆಗೆ ಉಳಿದದ್ದು ದೇವರು ನಂಬಿಕೆಯೂ ಅಲ್ಲ
ಬ್ರಹ್ಮಾಂಡದ ಅಂತಿಮ ಶೂನ್ಯದೊಂದಿಗೆ ನಮ್ಮದೇ ಕರಗಿಹೋದ ಪ್ರಜ್ಞೆ ಮಾತ್ರ ಉಳಿಯಿತು.
ಅನನ್ಯ ಎಚ್ ಸುಬ್ರಹ್ಮಣ್ಯ




ಧನ್ಯವಾದಗಳು ಸರ್ ನನ್ನ ಕವನವನ್ನು ಪ್ರಕಟ ಮಾಡಿರುವುದಕ್ಕೆ