ಕಾವ್ಯ ಸಂಗಾತಿ
ಶರಣಪ್ಪ ತಳ್ಳಿ ಕುಪ್ಪಿಗುಡ್ಡ
“ನೆನಪು ಕೊಯ್ದ ಕಂಬನಿ”


ತಲ್ಲಣಗಳೆಲ್ಲ ಮೀರಿದ
ಮೇಲೆ—
ಕದ ತಟ್ಟಿದೆ ನೀನು;
ದೀಪ ಹಚ್ಚುವ ತವಕವೇ ಇರಲಿಲ್ಲ ನನಗೆ,
ನೀನು ಹೊತ್ತಿಸಿದ ಬೆಳಕಿಗೆ
ಕತ್ತಲೆ ಗೋಳಾಡಿ ಕರಗಿತು.
ಒಡೆದು ಗಾಯಗೊಂಡ
ಅಪರಾಹ್ನದ ಕನಸಿಗೆ,
ಬಂದೆರಗಿದ ತಂಗಾಳಿ
ತಲೆ ಸವರಿದಂತಿತ್ತು;
ಇಂಗಿಹೋದ ಒಣ ಹಂಗು
ಕಂಬಳಿಯ ಮರೆಯಲ್ಲಿ
ಮುತ್ತೈದೆಯಂತೆ
ಪಿಸುಗುಟ್ಟಿತು.
ನೆನಪು ಕೊಯ್ದ ಕಂಬನಿ,
ಟಪಕ್ಕನೆ ಉದುರಿ
ತೆರೆಯ ಮರೆಯಲ್ಲಿ
ನೆಲ ಹಿಡಿಯಿತು;
ಹಳಸಲು ಪ್ರೀತಿಯ
ಹಿಲಾಲು ಒಗೆದು
ಇಸ್ತ್ರಿ ಹಾಕಿ ನೀನು
ಲೇಪನ ಹಚ್ಚಿದರೂ—
ಲವಲವಿಕೆಯೇ ಲೇವಡಿ ಮಾಡಿತು!
ನೀನು ಬಂದದ್ದು
ತುಸು ತಡವಾಯ್ತೇನೋ…?
ಕತ್ತಲು ಮುಸುಕಿದ ತೇವದಲಿ
ಒಣಗಿಹೋದ ಶಬ್ದಗಳು
ಗದ್ಗದಿಸಿ ಬಿಕ್ಕಳಿಸಿದವು;
ಬಹು ಬಿರಿಯಾದ ಎದೆಯೊಳಗೆ
ಉತ್ತರವಿಲ್ಲದ ಪ್ರಶ್ನೆಗಳು
ಮತ್ತೆ ನರಳಿಸಿದವು.
ಶರಣಪ್ಪ ತಳ್ಳಿ ಕುಪ್ಪಿಗುಡ್ಡ




Truthful feeling s all ways tach the heart. .it. Nice.