ಪ್ರಬಂಧ ಸಂಗಾತಿ
ಕೆ.ಜಯಲಕ್ಷ್ಮಿ
ಅವರ ಪ್ರಬಂಧ
“ಹೀಗೊಂದು ಆಲೋಚನೆ…”


ಕಾಲೇಜುಗಳಲ್ಲಿ ಯಾರಾದರೂ ಉಪನ್ಯಾಸಕರು ರಜೆ ತೆಗೆದುಕೊಂಡ ಸಂದರ್ಭದಲ್ಲಿ ಅವರ ತರಗತಿಗಳಿಗೆ ಬೇರೆ ಉಪನ್ಯಾಸಕರು ಹೋಗುವುದು ಸರ್ವೇ ಸಾಮಾನ್ಯ. ಅದೊಂದು ದಿನ ವಿಜ್ಞಾನ ವಿಭಾಗದ ಉಪನ್ಯಾಸಕರು ರಜೆಯಲ್ಲಿದ್ದಾಗ ಅವರ ಪಿರೀಡ್ ಗೆ ನಾನು ಆ ತರಗತಿಗೆ ಹೋಗಿದ್ದೆ. ಮಕ್ಕಳು ಟೈಮ್ ಟೇಬಲ್ ಗೆ ಅನುಗುಣವಾಗಿ ಪಠ್ಯ ಪುಸ್ತಕ ತರುತ್ತಾರಷ್ಟೇ? ಆ ದಿನ ನನ್ನ ಸಬ್ಜೆಕ್ಟ್ ಇರಲಿಲ್ಲವಾದ್ದರಿಂದ ನನ್ನ ಪಠ್ಯ ತಂದಿರಲಿಲ್ಲ. ಆದ ಕಾರಣ ನಾನು ಪಾಠ ಮಾಡುವಂತಿರಲಿಲ್ಲ. ಮಕ್ಕಳಿಗೆ ಏನನ್ನಾದರೂ ಓದುವಂತೆ ಹೇಳಿ ಸುಮ್ಮನೆ ಅವರನ್ನು ಗಮನಿಸುತ್ತಿದ್ದೆ. ಓರ್ವ ವಿದ್ಯಾರ್ಥಿನಿ ಯಾವ ಪುಸ್ತಕವನ್ನೂ ತೆರೆಯದೆ ಸುಮ್ಮನೆ ಕುಳಿತು ಯೋಚನಾಮಗ್ನಳಾಗಿದ್ದಳು. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಹೀಗಿತ್ತು ” ನಾವು ಒಂದು ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದೆವು. ಇತ್ತೀಚೆಗೆ ಅದು ರಾತ್ರಿ ಹೊತ್ತು ವಿಚಿತ್ರವಾಗಿ ಬೊಗಳಲು ಶುರು ಮಾಡಿದ್ದರಿಂದ ಅಕ್ಕ ಪಕ್ಕದ ಜನರ ನಿದ್ದೆಗೆ ಭಂಗವಾಗುತ್ತದೆ ಅಂತ ದೂರದ ಸಂಬಂಧಿಕರ ಮನೆಗೆ ಅದನ್ನು ಕಳುಹಿಸಿಕೊಟ್ಟೆವು. ಸರಪಳಿ ಸಹಿತ ಅದನ್ನವರು ತೆಗೆದುಕೊಂಡು ಹೋಗಬೇಕಾದರೆ ಅದು ನನ್ನನ್ನೇ ನೋಡುತ್ತಾ.. ನೋಡುತ್ತಾ.. ಹೋಗುತ್ತಿತ್ತು ಮತ್ತು ಅದರ ಕಣ್ಣಂಚಿನಲ್ಲಿ ಹನಿ ಜಿನುಗಿತ್ತು. ನಾಯಿಗಳು ಕೂಡಾ ನಮ್ಮ ಹಾಗೆ ದುಃಖದ ಸಂದರ್ಭದಲ್ಲಿ ಅಳುತ್ತವಾ?!ಬಹುಶಃ ಅದು ನನಗೆ ಏನೋ ಹೇಳುವುದಿತ್ತು ಅನಿಸುತ್ತೆ. ಆದರೆ ಪಾಪ! ಅದಕ್ಕೆ ಬಾಯಿ ಬರುವುದಿಲ್ಲವಲ್ಲಾ…ಒಂದು ವೇಳೆ ನಮ್ಮ ಹಾಗೆ ಮಾತನಾಡುವಂತಿದ್ದರೆ ಅದು ನನಗೆ ಏನು ಹೇಳಿ ಹೋಗುತ್ತಿತ್ತು?ಎಂದು ಆಲೋಚಿಸುತ್ತಿದ್ದೆ ಮೇಡಂ ” ” ನಾಯಿಗಳಿಗೆ ಮಾತನಾಡುವ ಶಕ್ತಿ ಇದ್ದಿದ್ದರೆ ಹಗಲು ರಾತ್ರಿಯೆನ್ನದೆ ಬೀದಿಯುದ್ಧಕ್ಕೂ ಅವುಗಳ ದನಿಯೇ ಮೇಳಯಿಸುತ್ತಿತ್ತು, ಈಗ ಓದು, ಆಮೇಲೆ ಆ ಬಗ್ಗೆ ಆಲೋಚನೆ ಮಾಡುವಿಯಂತೆ ” ಎಂದು ಆ ಹುಡುಗಿಯನ್ನು ಓದಿಗೆ ಹಚ್ಚಿದೆನಾದರೂ ಹೌದು,…ಆ ನಾಯಿ ಮಾತಾಡುವಂತಿದ್ದಿದ್ದರೆ ಏನು ಹೇಳಿ ಹೋಗುತ್ತಿತ್ತು…. ಇಷ್ಟು ಪ್ರೀತಿಯಿಂದ ಮಕ್ಕಳ ಹಾಗೆ ಬೆಳೆಸಿದ ನನ್ನನ್ನು ಗುರುತು ಪರಿಚಯ ಇಲ್ಲದವರ ಮನೆಗೆ ಕಳುಹಿಸುತ್ತಿದ್ದೀರಲ್ಲ.. ನನ್ನ ಮೇಲೆ ಕರುಣೆ ಬಾರದೇ? ಎಂದು ಹೇಳುತ್ತಿತ್ತೋ ಏನೋ.ಈಗ ಆ ವಿದ್ಯಾರ್ಥಿನಿಯ ಆಲೋಚನೆ ನನ್ನ ತಲೆ ಕೊರೆಯತೊಡಗಿತ್ತು.
ಹೌದು, ಪ್ರಾಣಿಗಳಿಗೆ ಬಾಯಿ ಬಂದಿದ್ದರೆ , ಅವುಗಳೂ ಮಾತನಾಡತೊಡಗಿದರೆ ಇಡೀ ಪ್ರಪಂಚದಲ್ಲಿ ಒಂದು ನೈತಿಕ ಕ್ರಾಂತಿಯೇ ಆಗುತ್ತಿತ್ತು . ಕೇವಲ ಮೂಕ ಸನ್ನೆಗಳಿಂದಲೇ ಪ್ರಾಣಿಗಳು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮೂಕ ಪ್ರಾಣಿಗಳು ನಮ್ಮ ಮಾತಿನ ಶೈಲಿಯನ್ನು ಗಮನಿಸಿಯೇ ನಮ್ಮ ಸಂತೋಷ , ದುಃಖ,ಸಮಸ್ಯೆ ಎಲ್ಲವನ್ನೂ
ಅರ್ಥೈಸಿಕೊಳ್ಳಬಲ್ಲವು.ನಮ್ಮತ್ತ ಕರುಣಾಪೂರಿತ ದೃಷ್ಟಿ ಹರಿಸುತ್ತಲೇ ನಮ್ಮ ಮನಸ್ಸನ್ನು ಆಕರ್ಷಿಸುವ ಸಾಕು ಪ್ರಾಣಿಗಳು ನಮ್ಮ ಮಾನಸಿಕ ಒತ್ತಡವನ್ನು ಕುಗ್ಗಿಸಿ ದೇಹದ ಆರೋಗ್ಯ ಮಟ್ಟ ಸುಧಾರಣೆಗೆ, ಲವಲವಿಕೆಯ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಉದಾಹರಣೆಗೆ ನಾಯಿಗಳನ್ನೇ ತೆಗೆದುಕೊಳ್ಳೋಣ. ಕೇವಲ ತಮ್ಮ ಮುಖ ಭಾವದಿಂದಲೇ ಸಂತೋಷ, ದುಃಖ, ಭಯ, ಸಿಟ್ಟು, ಅಪರಾಧಿ ಭಾವ, ಏಕಾಂಗಿತನದ ನೋವು, ಕೃತಜ್ಞತಾ ಭಾವ ಎಲ್ಲವನ್ನೂ ಸ್ಪಷ್ಟಪಡಿಸಬಲ್ಲ ವಿಶ್ವಾಸಾರ್ಹ ಜೀವಗಳು. ನಾವು ಮನುಷ್ಯರು ಕೇಕೆ ಹಾಕಿ, ಅತ್ತು ಕರೆದು ಗೋಳಾಡಿ, ಕಿರುಚಿ ಹೇಳುವ ಅಷ್ಟೂ ವಿಚಾರಗಳನ್ನು ಕೇವಲ ಮುಖ ಭಾವದಿಂದಲೇ ವ್ಯಕ್ತಪಡಿಸುವ ಅವುಗಳಿಗೆ ಮಾತೇಕೆ ಬೇಕು? ನಾವು ಬೈದರೆ ತಿರುಗಿ ಕೂರುತ್ತವೆ.ಪ್ರೀತಿ ತೋರಿದರೆ ಖುಷಿ ಪಡುತ್ತವೆ. ಅವುಗಳ ತಪ್ಪಿಗೆ ಹೊಡೆಯಲು ಹೋದರೆ ಕಣ್ಣು ಮುಚ್ಚಿ ತೆರೆದು ಮಾಡುವ ಮೂಲಕ ಕ್ಷಮೆಯಾಚಿಸುತ್ತವೆ. ಗುಡುಗು ಸಿಡಿಲು ಅಥವಾ ವಿಪರೀತ ಸದ್ದು ಬಂದಾಗ ಭಯದಿಂದ ತಾನು ಅಸುರಕ್ಷಿತ ಎನ್ನುವ ಭಾವನೆ ಎದುರಾಗಿ ಎಲ್ಲೋ ಹೋಗಿ ಮುದುಡಿಕೊಳ್ಳುತ್ತವೆ. ತಮ್ಮ ಆಹಾರದ ಬೇಡಿಕೆ ಪೂರೈಕೆ ಆದಾಗ ಬಾಲ ಅಲ್ಲಾಡಿಸಿ ಕೃತಜ್ಞತೆ ಹೇಳುತ್ತವೆ. ಇಡೀ ದಿನ ಮನೆ ಕಾದು ಸುಸ್ತಾದ ಸಂದರ್ಭದಲ್ಲಿ ಮನೆ ಮಂದಿ ಬಂದಾಗ ‘ ನನಗೆಷ್ಟು ಬೇಜಾರಾಗಿತ್ತು, ನೀವು ನನ್ನೊಬ್ಬನನ್ನು ಬಿಟ್ಟು ಹೋದಿರಿ ‘ ಎಂದು ತನ್ನದೇ ದನಿಯಲ್ಲಿ ನೋವನ್ನು ನಿವೇದಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆಯೊಳಗೆ ಇರುವ ಬೆಕ್ಕಿನ ಬಗೆಗಿನ ತನ್ನ ಅಸಹನೆಯನ್ನು ಕೂಡಾ ನಾಯಿ ಸ್ಪಷ್ಟಪಡಿಸುವುದುಂಟು. ಸುಮ್ಮನೆ ಕುಳಿತಿದ್ದರೆ ತನ್ನ ತುಂಟ ನೋಟದಿಂದ ಆಟಕ್ಕೆ ಕರೆಯುವ ನಾಯಿಗೆ ನಮ್ಮ ಹಾಗೆ ಸದಾ ಸಂತೋಷವಾಗಿ ಇರಬೇಕು ಎನ್ನುವ ಹಂಬಲ ಉಂಟು . ಇನ್ನು ಬೆಕ್ಕು…ಅದು ಕೂಡಾ ತನ್ನ ವರ್ತನೆಯಿಂದಲೇ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮುದ್ದು ಪ್ರಾಣಿ.ತನ್ನನ್ನು ಮುಟ್ಟಿದ ತಕ್ಷಣ ಮೈ ತೊಳೆದುಕೊಳ್ಳುವ ಬೆಕ್ಕು ತಾನು ಬಹಳ ಸ್ವಚ್ಛತೆಯ ಪ್ರಾಣಿ ಎಂಬುದನ್ನು ತನ್ನ ಕ್ರಿಯೆಯ ಮೂಲಕವೇ ವ್ಯಕ್ತಪಡಿಸುತ್ತದೆ. ಆದರೆ ನಾಯಿಯಷ್ಟು ನಿಯತ್ತು ಇದಕ್ಕಿಲ್ಲ. ಎಲ್ಲೋ ಓದಿದ ನೆನಪು… ನಾಯಿ ನಾವು ಊಟ ಹಾಕುವ ಸಂದರ್ಭದಲ್ಲಿ ” ಇವನು ನನಗೆ ಅನ್ನ ನೀರು ಕೊಟ್ಟು ಸಾಕುತ್ತಿದ್ದಾನೆ, ಇವನೇ ನನ್ನ ಪಾಲಿನ ದೇವರು…” ಎಂದರೆ ಬೆಕ್ಕು ” ನಾನೇ ದೇವರು, ಅದಕ್ಕಾಗಿ ಇವ ನನಗೆ ಊಟ ಕೊಡುತ್ತಿದ್ದಾನೆ ” ಎಂದು ಭಾವಿಸುತ್ತದಂತೆ!!ಅದೇನೇ ಇರಲಿ, ಮಾತಿನ ಕಲೆಗಾರಿಕೆ ಇಲ್ಲದಿದ್ದರೆನಂತೆ.. ಮೂಕ ಪ್ರಾಣಿಗಳ ಭಾವಾಭಿನಯಕ್ಕೆ ಯಾವ ರಂಗ ಕಲಾವಿದನೂ ಸಾಟಿಯಾಗಲಾರ. ನಮ್ಮ ಧ್ವನಿಯ ಏರಿಳಿತವನ್ನು ನಮ್ಮ ವರ್ತನೆಯನ್ನು ಅರ್ಥಮಾಡಿಕೊಳ್ಳಬಲ್ಲ ನಾಯಿ ಬೆಕ್ಕುಗಳು ನಮ್ಮ ಸುಖ ದುಃಖಗಳಲ್ಲಿ ಅವುಗಳದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲವು.ಮನೆಯ ಯಜಮಾನನ ಗೋರಿಯ ಮೇಲೆ ಬಿದ್ದು ಹೊರಳಾಡಿದ ನಾಯಿಯ ವೇದನೆಗೆ ನಾವು ಬೆರಗಾಗಿ ಮೂಕರಾಗಿ ನಿಂತುಬಿಟ್ಟಿಲ್ಲವೇ? ಮೂಕ ಪ್ರಾಣಿ ಆದರೇನಂತೆ, ಪುಟ್ಟ ಮಕ್ಕಳನ್ನು ತನ್ನ ಕಣ್ಣ ನೋಟದಿಂದಲೇ ಕಾಯುವ ನಾಯಿಗಳಿದ್ದಾವೆ. ಪಾಪ! ಕೆಲವೊಮ್ಮೆ ನಾವು ಕೊಟ್ಟ ಆಹಾರ ಅವುಗಳಿಗೆ ಇಷ್ಟವಿಲ್ಲದಿದ್ದರೂ ನಮ್ಮ ತೃಪ್ತಿಗಾಗಿ ಅದನ್ನು ತಿನ್ನುವ ಮೂಲಕ ಒಂದು ಬಗೆಯ ಸೌಜನ್ಯ ತೋರುವ ಗುಣ ಮೂಕ ಪ್ರಾಣಿಗಳಿಗುಂಟು!! ಒಮ್ಮೆ ನಮ್ಮ ಮನೆಯ ಬೆಕ್ಕಿಗೆ ಜಿಲೇಬಿ ಕೊಟ್ಟೆ. ಬೇಡ ಅನ್ನುವ ರೀತಿಯಲ್ಲಿ ತಿರುಗಿ ಕುಳಿತಿತು.ನಾನು ಸುಮ್ಮನಾಗದೆ ಪದೇ ಪದೇ ಅದರ ಎದುರು ಹಿಡಿದು ‘ತಿನ್ನು ಬಿಲ್ಲಿ’ ಎಂದು ಮುದ್ದಾಗಿ ಹೇಳಿದೆ. ಪಾಪ ಅದಕ್ಕೆ ಏನನಿಸಿತೋ ಏನೋ ದಾಕ್ಷಿಣ್ಯ ಕ್ಕೆ ಗಂಟು ಬಿದ್ದು ನನ್ನಿಂದ ಜಿಲೇಬಿ ಪಡಕೊಂಡು ಆಚೆ ಹೋಗಿ ಉಗಿದು ಬಂತದು!!ಬೇಸರ ಮಾಡಿಸಬಾರದು ಎನ್ನುವ ಕಾಳಜಿ ಅದಕ್ಕೂ ಇದೆ!!ಅಂದ ಮೇಲೆ ಅವುಗಳಿಗೆ ಮಾತೇಕೆ ಬೇಕು?
ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಇತ್ಯಾದಿಗಳಿಗೆ ಹೆಸರುವಾಸಿಯಾದ ನಾಯಿಗೆ ಮಾತನಾಡುವ ಕಲೆಗಾರಿಕೆ ದೇವರು ಕೊಟ್ಟಿದ್ದಿದ್ದರೆ… ಬಹುಶಃ ಕೆಲವು ಮನುಷ್ಯರಂತೆ ಅವುಗಳು ಕೂಡಾ ಸುಳ್ಳು, ಮೋಸ ವಂಚನೆಗಳ ಸುಳಿಗೆ ಸಿಲುಕುತ್ತಿದ್ದವು. ಅವುಗಳು ಮಾತಿಲ್ಲದೆಯೇ ಜೀವನ ಸಾಗಿಸಬಲ್ಲವು ಎಂದೇ ದೇವರು ಅವುಗಳನ್ನು ಮೂಕವಾಗಿಸಿರಬೇಕು. ದೇವರ ಸೃಷ್ಟಿ ನಿಯಮದ ಬಗ್ಗೆ ಅಥವಾ ಅದಕ್ಕೆ ವಿರುದ್ದವಾಗಿ ಆಲೋಚನೆ ಮಾಡುವುದಕ್ಕೂ ನಾವು ಅರ್ಹರಲ್ಲ.
ಜಯಲಕ್ಷ್ಮಿ ಮಡಿಕೇರಿ





Veryy beautifully penned ✨
Very nice write up.True facts explained in simple manner. Good creativity..