ಧಾರಾವಾಹಿ ಸಂಗಾತಿ-24
ಅರ್ಜುನ ಉವಾಚ
ವಿಶ್ವನಾಥ್ ಎನ್ ನೇರಳೆಕಟ್ಟೆ
ಸುಧನ್ವ ಗೆದ್ದ…ಕೃಷ್ಹೃ ಹೃದಯವನು

ಸುಧನ್ವ ಅಷ್ಟು ಬಲಯುತನಾದದ್ದು ಹೇಗೆ ಎನ್ನುವ ರಹಸ್ಯವನ್ನು ನನಗೆ ತಿಳಿಸಿದ ಶ್ರೀಕೃಷ್ಣ. ಸುಧನ್ವ ಏಕಪತ್ನೀವ್ರತಸ್ಥನಾಗಿದ್ದ. ತಂದೆಯ ಆಜ್ಞೆಯನ್ನು ಅವಗಣಿಸಿದವನಲ್ಲ. ಕೃಷ್ಣಪೂಜೆಗೆ ಉದಾಸೀನ ತೋರಿದವನಲ್ಲ. ಆತನ ಅಂತಃಸ್ಸತ್ವವೇ ಅವನಿಗೆ ಅಂತಹ ಶಕ್ತಿಯನ್ನು ಒದಗಿಸಿತ್ತು. ಇಂದ್ರ ಬ್ರಹ್ಮ ಶಿವಾದಿಗಳಿಗೂ ಯುದ್ಧದಲ್ಲಿ ಮಣಿವವನಲ್ಲ ಇವ ಎಂದ ಶ್ರೀಕೃಷ್ಣ. ಮೂರೂ ಲೋಕಗಳನ್ನು ಅಂಜಿಸುವ ಇವನ ಶೌರ್ಯವನ್ನು ಕಾಣುತ್ತಾ ಇರುವುದಷ್ಟೇ ಇನ್ನು ನಮ್ಮ ಕೆಲಸ ಎಂದ.
ಆಗ ಸುಧನ್ವ ಕೃಷ್ಣನನ್ನು ದಿಟ್ಟತನದಿಂದ ಪ್ರಶ್ನಿಸಿದ. “ಅಂದು ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿದ ಹಾಗೆ ಇಂದು ಈ ಪಾರ್ಥನನ್ನು ರಕ್ಷಿಸುವ ತೆರದಲ್ಲಿ ಬಂದೆ. ನಾನೂ ನಿನ್ನ ಭಕ್ತನೇ. ನನ್ನ ಮೇಲೇಕೆ ನೀನು ಕೃಪೆದೋರದಿರುವೆ. ಇರಲಿ. ನಾನಂತೂ ಅನವರತ ನಿನ್ನ ಭಕ್ತನೇ. ಅದರಲ್ಲಿ ಸಂದೇಹವಿಲ್ಲ. ಈ ಯುದ್ಧದಲ್ಲಿ ನನ್ನ ಈ ದೇಹವನ್ನು ನಿನಗೊಪ್ಪಿಸದೆ ಬಿಡೆನು” ಅಂದ.
ಸುಧನ್ವ ಎತ್ತಿದ ಆ ಪ್ರಶ್ನೆ ನನ್ನೊಳಗೆ ಯೋಚನೆಯನ್ನು ಮೂಡಿಸಿತು. ನಾನೂ ಕೃಷ್ಣನ ಭಕ್ತ. ಸುಧನ್ವನೂ ಹರಿಭಕ್ತ. ಹಾಗಿರುವಾಗ ಕೃಷ್ಣ ನನ್ನ ಪರವಾಗಿ ಮಾತ್ರವೇ ನಿಂತಿದ್ದಾನೇಕೆ?! ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕೃಷ್ಣವರ್ತನೆಯಿದೆ ಎನಿಸಿತು ನನಗೆ. ಈಗ ಕೃಷ್ಣ ನನ್ನ ಪರವಾಗಿರದೆ ಸುಧನ್ವನ ಪಕ್ಷ ವಹಿಸಿದರೆ ಯುದ್ಧದ ಗೆಲುವು ನನ್ನದಾಗುವುದಿಲ್ಲ. ಕುದುರೆ ಮುಂದಕ್ಕೆ ಚಲಿಸುವುದಿಲ್ಲ. ನಮ್ಮ ಅಶ್ವಮೇಧ ಯಾಗವದು ಸಂಪೂರ್ಣವಾಗುವುದಿಲ್ಲ. ಈ ಬಗೆಯ ದೂರಾಲೋಚನೆಯನ್ನು ಇರಿಸಿಕೊಂಡೇ ಆ ಕೃಷ್ಣದೇವ ನನಗೆ ನೆರವಾಗಿ ನಿಂತಿರಬೇಕು. ಔಚಿತ್ಯಪೂರ್ಣನಾಗಿದ್ದಾನೆ ಅಚ್ಯುತ ಎನಿಸಿತು ನನಗೆ ಆ ಕ್ಷಣದಲ್ಲಿ.
ಆಗಲೇ ಸುಧನ್ವ ಬಿಟ್ಟ ಬಾಣ ನನ್ನ ರಥವನ್ನು ತಾಡಿಸಿತು. ಅದೆಂತಹ ಭೀಕರ ಹೊಡೆತ! ತಿರುಗಿ ತಿರುಗಿತು ರಥ. ಭಯದ ದನಿಯನ್ನೆಬ್ಬಿಸಿದವು ಕುದುರೆಗಳು. ನನಗೂ ಕೃಷ್ಣನಿಗೂ ಕಣ್ಣಿಗೆ ಕತ್ತಲೆ ಕವಿದಂತಾಯಿತು. ತಲೆ ತಿರುಗಿತು. ರಥದ ಚಕ್ರಗಳು ಕಳಚಿ ಬಿದ್ದ ಅನುಭವ. ಹಿಂದುಹಿಂದಕ್ಕೆ ಸರಿದುಹೋಯಿತು ನನ್ನ ರಥ.
ನನ್ನ ಕೋಪವೀಗ ಮೇರೆಮೀರಿತು. ಇನ್ನಿವನ ಶೌರ್ಯವನ್ನು ಕೊನೆಗಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೋರಿತು. ಮೂರು ಬಾಣಗಳೊಳಗೆ ಅವನ ಪ್ರಾಣಹರಣ ಮಾಡುವ ಪ್ರತಿಜ್ಞೆಯನ್ನು ನೆನಪಿಸಿಕೊಂಡೆ. ಅತಿಶಕ್ತಿಯುತ ಬಾಣವನ್ನು ಬಿಲ್ಲಿಗೆ ಹೂಡಿದೆ. “ಸುಧನ್ವ ಮರಣವನು ನಿರ್ಣಯಿಸುವ ಬಾಣವಿದು” ಎಂದೆ ಅಸುರಾರಿಯಲ್ಲಿ. ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿ ಸಂಪಾದಿಸಿದ ಪುಣ್ಯವನ್ನು ಆ ಬಾಣಕ್ಕೆ ತುಂಬಿದ ಶ್ರೀಕೃಷ್ಣ. “ಈಗಲೇ ಅವನ ಶಿರವನ್ನು ಗುರಿಮಾಡಿ ಬಾಣ ಪ್ರಯೋಗಿಸು” ಎಂಬ ಸೂಚನೆ ಬಂತು ಕೃಷ್ಣನ ಕಡೆಯಿಂದ. ಬಾಣ ಬಿಟ್ಟೆ. ಅದೆಂತಹ ವೇಗದಲ್ಲಿ ಬಾಣ ಚಲಿಸುತ್ತಾ ಹೋಯಿತೋ ಅದೇ ವೇಗದಲ್ಲಿ ಅದು ತುಂಡಾಗಿ ಕೆಳಗೆ ಬಿತ್ತು. ಪ್ರತಿಬಾಣ ಪ್ರಯೋಗಿಸಿ ಗೆಲುವು ಪಡೆದಿದ್ದ ಸುಧನ್ವನ ಮುಖದಲ್ಲಿ ವೀರಭಾವದ ನಗುವಿತ್ತು.
ಮೂರು ಬಾಣಗಳಲ್ಲಿ ಸುಧನ್ವನನ್ನು ಇನ್ನಿಲ್ಲವಾಗಿಸುತ್ತೇನೆ ಎಂದಿದ್ದವ ನಾನು. ಮೊದಲ ಬಾಣವದು ಇನ್ನಿಲ್ಲವಾಗಿತ್ತು. ಇನ್ನೆರಡು ಬಾಣಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಬೇಕಿತ್ತು. ಅಮೋಘ ಶರವನ್ನು ತೆಗೆದೆ ಬತ್ತಳಿಕೆಯಿಂದ. ಹೆದೆಗೆ ಅದನ್ನು ಹೊಂದಿಸಿದೆ. ಆಗಲೇ ಶ್ರೀಕೃಷ್ಣ ಭೂಮಿಯನ್ನು ಕಾಯ್ದ ಪುಣ್ಯಫಲವನ್ನು ನನ್ನ ಆ ಶರದಲ್ಲಿ ತುಂಬಿದ. “ಕೃಷ್ಣ ಪರಮಾತ್ಮ, ನಿನ್ನ ಪುಣ್ಯವನ್ನು ಆ ಬಾಣದಲ್ಲಿ ತುಂಬಿರುವೆ. ಅದನ್ನು ಅರ್ಧಮಾರ್ಗದಲ್ಲಿಯೇ ಪತನಗೊಳಿಸದಿದ್ದರೆ ಪಾತಕಿಗೊದಗುವ ಹೀನಸ್ಥಿತಿ ನನಗೆ ಒದಗಲಿ” ಎಂದು ಪರಾಕ್ರಮದಿಂದ ಆರ್ಭಟಿಸಿದ ಸುಧನ್ವ. ಅವನ ಮಾತು ನಿಜವಾಯಿತು. ಅವನ ಸೇನೆಯಲ್ಲಿ ವಿಜಯದ ನಾದ ಮೊಳಗಿತು. ಗೆಲುವಿನ ಕೇಕೆ ಕೇಳಿಬಂತು.
ನಿಷ್ಫಲಗೊಂಡ ಎರಡು ಬಾಣಗಳು ನನ್ನನ್ನು ಚುಚ್ಚತೊಡಗಿದವು. ಇನ್ನೊಂದೇ ಒಂದು ಬಾಣದಲ್ಲಿ ನಾನು ಸುಧನ್ವನ ಶಿರವನ್ನು ಕತ್ತರಿಸಬೇಕಿತ್ತು. ಕೃಷ್ಣ ಧೈರ್ಯ ತುಂಬಿದ. ‘ನನ್ನ ಶಕ್ತಿಯನ್ನೂ, ಯುದ್ಧ ಬದ್ಧತೆಯನ್ನೂ ನಿರ್ಧರಿಸುವ ಬಾಣವಿದು’ ಎಂದುಕೊಳ್ಳುತ್ತಲೇ ಬತ್ತಳಿಕೆಯಿಂದ ಶರವನ್ನು ತೆಗೆದೆ. ಈಗ ಶ್ರೀಕೃಷ್ಣ ಹಿಂದಿಗಿಂತಲೂ ಹೆಚ್ಚಿನ ಶಕ್ತಿಯನ್ನು ಆ ಬಾಣಕ್ಕೆ ತುಂಬುವ ಉಪಾಯ ಹೂಡಿದ. ಬ್ರಹ್ಮದೇವನನ್ನು ಆಹ್ವಾನಿಸಿ ಆ ಬಾಣದ ಒಂದು ತುದಿಯಲ್ಲಿ ಕೂರಿಸಿದ. ಇನ್ನೊಂದು ತುದಿಯಲ್ಲಿ ಶಿವ ಕುಳಿತುಕೊಳ್ಳುವಂತೆ ಮಾಡಿದ. ಬಾಣದ ಮಧ್ಯಭಾಗದಲ್ಲಿ ತಾನೇ ಕುಳಿತ ಶ್ರೀಕೃಷ್ಣ. ತ್ರಿಮೂರ್ತಿಗಳ ಅಸ್ತಿತ್ವದ ಸತ್ವವದು ದೊರಕಿತು ಆ ಬಾಣಕ್ಕೆ. ರಾಮಾವತಾರದಲ್ಲಿ ತಾನು ಸಂಪಾದಿಸಿದ ಪುಣ್ಯವನ್ನು ಆ ಬಾಣದಲ್ಲಿ ತುಂಬಿದ.
ಕೃಷ್ಣನ ಪಾಂಚಜನ್ಯ ಮೊಳಗಿತು, ಕೋಟಿ ಕೋಟಿ ಸಿಡಿಲುಗಳು ಒಮ್ಮೆಯೇ ಸಿಡಿದಂತೆ. ಭೂಮಿಯೇ ಅಲ್ಲೋಲಕಲ್ಲೋಲವಾಯಿತು ಕೃಷ್ಣನೂದಿದ ರಣ ಶಂಖಧ್ವನಿಗೆ.
ಆ ಕ್ಷಣವೇ ನನ್ನ ಕರ ಅರಳಿತು. ಶರ ಕೆರಳಿತು. ಶತ್ರುವಿನ ಶಿರವನ್ನು ಗುರಿಯಾಗಿರಿಸಿಕೊಂಡು ಉರಿಉರಿಯಿಂದ ಹೊರಟಿತದೋ ಘನಶರ!
ಬಾಣದ ಭೀಕರತೆಯನ್ನು ಕಂಡು ಅಂಜಿದರು, ಅಳುಕಿದರು ಸುಧನ್ವನ ಸಕಲ ಸೈನಿಕರು. ಹಂಸಧ್ವಜಸುತನ ಮುಂಡವದು ರುಂಡದಿಂದ ಬೇರ್ಪಟ್ಟಿತು. ಕತ್ತರಿಸಲ್ಪಟ್ಟ ಶಿರ ಆಕಾಶಮಾರ್ಗದಲ್ಲಿ ಜಿಗಿದು, ಪರಪೀಡೆಯದು ತನ್ನದಲ್ಲ ಎಂಬ ಭಾವದಲ್ಲಿ ಬರುವ ಕಲೆಗಳಿಂದ ಕೂಡಿದ ಚಂದ್ರನಂತೆ ಬಂದುಬಿದ್ದಿತು ಕೃಷ್ಣನ ಪಾದಪದ್ಮಗಳಲ್ಲಿ. ಸಾವನ್ನಪ್ಪಿದ ಆ ಕ್ಷಣದಲ್ಲಿಯೂ ಸುಧನ್ವ ಶಿರವದು ಹರಿನಾಮಸ್ಮರಣೆಯನ್ನು ತೊರೆದಿರಲಿಲ್ಲ.
ಸುಧನ್ವನ ತಲೆಯನ್ನು ಹಾಗೆಯೇ ಒಮ್ಮೆ ಎತ್ತಿಕೊಂಡ ಕೃಷ್ಣ ತನ್ನ ಮೂಗಿನ ಬಳಿಗೆ ಒಯ್ದು ಒಮ್ಮೆ ಆಘ್ರಾಣಿಸಿದ. “ನನ್ನ ಹೃದಯವನ್ನು ಗೆದ್ದ ಬಲ್ಮೆಗಾರ ನೀನು” ಎಂಬ ಗುಟ್ಟನ್ನು ಸುಧನ್ವನ ಕಿವಿಯಲ್ಲಿ ಕೃಷ್ಣ ಹೇಳಿದಂತೆ ತೋರಿತೆನಗೆ ಆ ದೃಶ್ಯ. ‘ಈ ವೀರ ಶಿರವದು ಸಂದಿತೆನಗೆ ಇಂದು’ ಎಂಬ ಕೃಷ್ಣಭಾವವೂ ಆ ನಡೆಯಲ್ಲಿ ಇದ್ದಂತೆ ತೋರಿತು.
ಮಗನ ಸಾವನ್ನು ಸಹಿಸದಾದ ಹಂಸಧ್ವಜ ಬಗೆಬಗೆಯಲ್ಲಿ ಪ್ರಲಾಪಿಸಿದ. ಹೀಗಿದ್ದಾಗಲೇ ಸುಧನ್ವ ಸಹೋದರ ಎನಿಸಿಕೊಂಡ ಸುರಥ ತಮ್ಮವನ ಸಾವಿಗೆ ಸೇಡನ್ನು ತೀರಿಸಿಕೊಳ್ಳದಿರಲಾರೆ ಎಂಬ ಛಲವನ್ನು ಹೊತ್ತುನಿಂತಿದ್ದ. ಅವನೊಡನೆ ಹೋರಾಡದೆ ನಮ್ಮ ಗೆಲುವು ಪೂರ್ಣಗೊಳ್ಳದು ಎಂಬ ವಿಷಯ ನನಗೆ ಸ್ಪಷ್ಟವಾಯಿತು.
ಡಾ. ವಿಶ್ವನಾಥ ಎನ್ ನೇರಳಕಟ್ಟೆ




