ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ, ಗಝಲ್

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು”

ಕಾವ್ಯ ಸಂಗಾತಿ ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” ಬೆಂದ ಜೀವದ ಬೇಗೆನಂದಿಸುವವರು ಯಾರುಹಸಿವಿನ ನರಳಾಟದಲ್ಲಿಸಾಯುತ್ತಿರುವವರು ನಾವು ಸಂಕಟದಲ್ಲಿ ಕೂಗಾಡಿದರೆಮೂರಡಿಯಲ್ಲಿ ಹೂಳುವರುತೋಪು ಬಂದೂಕುಗಳಿಲ್ಲದೆಹತವಾಗುತ್ತಿರುವ ಜೀವಗಳು ಹಸಿವಿನ ಚೀಲ ಬೆನ್ನು ಏರಿದೆಶಾಂತಿ ನೆಮ್ಮದಿಯ ವೇದಾಂತಗುನುಗುಟ್ಟುತ್ತಾ ಕಿವಿ ತಟ್ಟಿದೆಮೋಸ ವಂಚನೆ ಕೊರಳ ಉರುಳಾಗಿ ಬಿದ್ದಿವೆ ಬಾಳೊಂದು ಮಾಯೆ ಎಂದರು ಅನುಭಾವಿಗಳುಆಸೆಯೇ ದುಃಖಕ್ಕೆ ಮೂಲವೆಂದ ಬುದ್ಧಈ ಎಲ್ಲಕೂ ಕಡಿವಾಣ ಇಲ್ಲದ ಹಸಿವೆಂಬ ಮಾಯೆಮೆರೆಯುತ್ತಿದೆ ಏಕೆ? ಎಲುಬಿಲ್ಲದ ನಾಲಿಗೆಬಯಸುತ್ತಿದೆ ರುಚಿಹಸಿವು ತಣಿಸುವ ಮಂತ್ರವೇದಾಂತ ಯಾವುದಾದರೂ ಇದೆಯೇ ತಿಳಿಸು ಮನವೇ…ಒಮ್ಮೆ ತಿಳಿಸು ಮನವವೇ… ಮಾಜಾನ್ ಮಸ್ಕಿ

ಮಾಜಾನ್ ಮಸ್ಕಿ “ಬೆನ್ನಿಗೆ ಬಿದ್ದ ಹಸಿವು” Read Post »

ಕಾವ್ಯಯಾನ

ವಾಣಿ ಯಡಹಳ್ಳಿಮಠ್ ಅವರ ಗಜಲ್

ಕಾವ್ಯ ಸಂಗಾತಿ ವಾಣಿ ಯಡಹಳ್ಳಿಮಠ್ ಗಜಲ್ (ಲಕ್ಷ್ಮಣ ಶರೆಗಾರ ಸರ್ ಅವರ ಗಜಲ್ ಒಂದರಿಂದ ಪ್ರೇರಿತ )ನನಗೆಲ್ಲವೂ ಆದವನ ಮೇಲೆಯೇ, ಎಲ್ಲರಿಗಿಂತಹೆಚ್ಚು ಶಿಕಾಯತ್ ಇವೆಯೆಂದು ಯಾರಿಗೆ ಹೇಳಲಿಬೇಹಿಸಾಬ್ ಕೋಪದ ಹಿಂದೆಯೇ ಬೇಯಿಂತಹಾಇಷ್ಕ್ ಇದೆಯೆಂದು ಯಾರಿಗೆ ಹೇಳಲಿ ಸಾಗರದಷ್ಟು ಕೋಪವೇ ಇರಲಿದುನಿಯಾದ ಸಾವಿರ ಜನರ ಮೇಲೆ ಸಾಕಿಅವನೊಬ್ಬನ ಮುಂದೆ ರಚ್ಛೆ ಹಿಡಿದು,ಕೂಗಾಡುವುದುರೂಹ್ ನ ಆಸೆಯೆಂದು ಯಾರಿಗೆ ಹೇಳಲಿ ಹುರುಳಿಲ್ಲದ ರಸ್ಮ್,ರಿವಾಜ್ ಗಳುನಮ್ಮನು ಬಂಧಿಸಲೆತ್ನಿಸಿ ಸೋಲುತಿಹವು ಎಲ್ಲದಕ್ಕೂ ಮೀರಿದ,ಹೆಸರಿಡಲಾಗದ ಬಾಂಧವ್ಯಅವನೊಂದಿಗೆ ಬೆಸೆದಿದೆಯೆಂದು ಯಾರಿಗೆ ಹೇಳಲಿ ಎಲ್ಲವೂ, ಎಲ್ಲರೂ ತನ್ನ ಹಿಸಾಬ್ ನಂತೆಯೇನಡೆಯಬೇಕೆನ್ನುವುದು ಈ ಜಗತ್ತುಇದೆ ಖಾಯಾಲಿಯಲಿ ಅದೆಷ್ಟು ಖಾಬ್ ಗಳುಕಬ್ರಸ್ತಾನ್ ಸೇರಿವೆಯೆಂದು ಯಾರಿಗೆ ಹೇಳಲಿ ಅವನನು ನೆನೆಯಲೂ ಪರವಾನಗಿಯೇ ಇಲ್ಲ,  ಈ ವಾಣಿಗೆ ಈ ಜನುಮದಲಿಆದರೂ  ದೇವರೆದುರು ಕೈಮುಗಿವಾಗೊಮ್ಮೆ,ಅವನನೇ ಕೇಳುವೆಯೆಂದು ಯಾರಿಗೆ ಹೇಳಲಿ ವಾಣಿ ಯಡಹಳ್ಳಿಮಠ್

ವಾಣಿ ಯಡಹಳ್ಳಿಮಠ್ ಅವರ ಗಜಲ್ Read Post »

ನಿಮ್ಮೊಂದಿಗೆ

“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ

ಪ್ರಬಂಧ ಸಂಗಾತಿ ಕೆ.ಜಯಲಕ್ಷ್ಮಿ ಅವರ ಪ್ರಬಂಧ “ಹೀಗೊಂದು ಆಲೋಚನೆ…”  ಕಾಲೇಜುಗಳಲ್ಲಿ ಯಾರಾದರೂ ಉಪನ್ಯಾಸಕರು ರಜೆ ತೆಗೆದುಕೊಂಡ ಸಂದರ್ಭದಲ್ಲಿ ಅವರ ತರಗತಿಗಳಿಗೆ ಬೇರೆ ಉಪನ್ಯಾಸಕರು ಹೋಗುವುದು ಸರ್ವೇ ಸಾಮಾನ್ಯ. ಅದೊಂದು ದಿನ   ವಿಜ್ಞಾನ ವಿಭಾಗದ  ಉಪನ್ಯಾಸಕರು ರಜೆಯಲ್ಲಿದ್ದಾಗ ಅವರ ಪಿರೀಡ್ ಗೆ ನಾನು ಆ ತರಗತಿಗೆ ಹೋಗಿದ್ದೆ.  ಮಕ್ಕಳು ಟೈಮ್ ಟೇಬಲ್ ಗೆ ಅನುಗುಣವಾಗಿ ಪಠ್ಯ ಪುಸ್ತಕ ತರುತ್ತಾರಷ್ಟೇ? ಆ ದಿನ ನನ್ನ ಸಬ್ಜೆಕ್ಟ್ ಇರಲಿಲ್ಲವಾದ್ದರಿಂದ ನನ್ನ ಪಠ್ಯ ತಂದಿರಲಿಲ್ಲ. ಆದ ಕಾರಣ ನಾನು ಪಾಠ ಮಾಡುವಂತಿರಲಿಲ್ಲ.  ಮಕ್ಕಳಿಗೆ ಏನನ್ನಾದರೂ ಓದುವಂತೆ ಹೇಳಿ ಸುಮ್ಮನೆ ಅವರನ್ನು ಗಮನಿಸುತ್ತಿದ್ದೆ. ಓರ್ವ ವಿದ್ಯಾರ್ಥಿನಿ ಯಾವ ಪುಸ್ತಕವನ್ನೂ ತೆರೆಯದೆ ಸುಮ್ಮನೆ ಕುಳಿತು ಯೋಚನಾಮಗ್ನಳಾಗಿದ್ದಳು. ಕಾರಣ ಕೇಳಿದಾಗ ಅವಳು ಕೊಟ್ಟ ಉತ್ತರ ಹೀಗಿತ್ತು ” ನಾವು ಒಂದು ನಾಯಿಯನ್ನು ಬಹಳ ಪ್ರೀತಿಯಿಂದ ಸಾಕಿದ್ದೆವು. ಇತ್ತೀಚೆಗೆ ಅದು ರಾತ್ರಿ ಹೊತ್ತು ವಿಚಿತ್ರವಾಗಿ ಬೊಗಳಲು ಶುರು ಮಾಡಿದ್ದರಿಂದ ಅಕ್ಕ ಪಕ್ಕದ ಜನರ ನಿದ್ದೆಗೆ ಭಂಗವಾಗುತ್ತದೆ ಅಂತ ದೂರದ ಸಂಬಂಧಿಕರ ಮನೆಗೆ ಅದನ್ನು ಕಳುಹಿಸಿಕೊಟ್ಟೆವು. ಸರಪಳಿ ಸಹಿತ ಅದನ್ನವರು ತೆಗೆದುಕೊಂಡು ಹೋಗಬೇಕಾದರೆ ಅದು ನನ್ನನ್ನೇ ನೋಡುತ್ತಾ.. ನೋಡುತ್ತಾ.. ಹೋಗುತ್ತಿತ್ತು ಮತ್ತು ಅದರ ಕಣ್ಣಂಚಿನಲ್ಲಿ ಹನಿ ಜಿನುಗಿತ್ತು. ನಾಯಿಗಳು ಕೂಡಾ ನಮ್ಮ ಹಾಗೆ ದುಃಖದ ಸಂದರ್ಭದಲ್ಲಿ ಅಳುತ್ತವಾ?!ಬಹುಶಃ ಅದು ನನಗೆ ಏನೋ ಹೇಳುವುದಿತ್ತು ಅನಿಸುತ್ತೆ. ಆದರೆ ಪಾಪ! ಅದಕ್ಕೆ ಬಾಯಿ ಬರುವುದಿಲ್ಲವಲ್ಲಾ…ಒಂದು ವೇಳೆ ನಮ್ಮ ಹಾಗೆ ಮಾತನಾಡುವಂತಿದ್ದರೆ   ಅದು  ನನಗೆ ಏನು ಹೇಳಿ ಹೋಗುತ್ತಿತ್ತು?ಎಂದು ಆಲೋಚಿಸುತ್ತಿದ್ದೆ ಮೇಡಂ ”  ” ನಾಯಿಗಳಿಗೆ ಮಾತನಾಡುವ ಶಕ್ತಿ ಇದ್ದಿದ್ದರೆ ಹಗಲು ರಾತ್ರಿಯೆನ್ನದೆ ಬೀದಿಯುದ್ಧಕ್ಕೂ ಅವುಗಳ ದನಿಯೇ ಮೇಳಯಿಸುತ್ತಿತ್ತು,  ಈಗ ಓದು, ಆಮೇಲೆ   ಆ ಬಗ್ಗೆ ಆಲೋಚನೆ ಮಾಡುವಿಯಂತೆ ” ಎಂದು ಆ ಹುಡುಗಿಯನ್ನು ಓದಿಗೆ ಹಚ್ಚಿದೆನಾದರೂ   ಹೌದು,…ಆ ನಾಯಿ ಮಾತಾಡುವಂತಿದ್ದಿದ್ದರೆ ಏನು ಹೇಳಿ ಹೋಗುತ್ತಿತ್ತು….  ಇಷ್ಟು ಪ್ರೀತಿಯಿಂದ ಮಕ್ಕಳ ಹಾಗೆ ಬೆಳೆಸಿದ ನನ್ನನ್ನು ಗುರುತು ಪರಿಚಯ ಇಲ್ಲದವರ ಮನೆಗೆ ಕಳುಹಿಸುತ್ತಿದ್ದೀರಲ್ಲ.. ನನ್ನ ಮೇಲೆ ಕರುಣೆ ಬಾರದೇ? ಎಂದು ಹೇಳುತ್ತಿತ್ತೋ ಏನೋ.ಈಗ ಆ ವಿದ್ಯಾರ್ಥಿನಿಯ  ಆಲೋಚನೆ ನನ್ನ ತಲೆ ಕೊರೆಯತೊಡಗಿತ್ತು. ಹೌದು, ಪ್ರಾಣಿಗಳಿಗೆ ಬಾಯಿ ಬಂದಿದ್ದರೆ , ಅವುಗಳೂ ಮಾತನಾಡತೊಡಗಿದರೆ ಇಡೀ ಪ್ರಪಂಚದಲ್ಲಿ ಒಂದು ನೈತಿಕ ಕ್ರಾಂತಿಯೇ ಆಗುತ್ತಿತ್ತು . ಕೇವಲ ಮೂಕ ಸನ್ನೆಗಳಿಂದಲೇ ಪ್ರಾಣಿಗಳು ತಮ್ಮ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮೂಕ ಪ್ರಾಣಿಗಳು ನಮ್ಮ ಮಾತಿನ ಶೈಲಿಯನ್ನು ಗಮನಿಸಿಯೇ ನಮ್ಮ ಸಂತೋಷ , ದುಃಖ,ಸಮಸ್ಯೆ  ಎಲ್ಲವನ್ನೂ     ಅರ್ಥೈಸಿಕೊಳ್ಳಬಲ್ಲವು.ನಮ್ಮತ್ತ ಕರುಣಾಪೂರಿತ  ದೃಷ್ಟಿ ಹರಿಸುತ್ತಲೇ  ನಮ್ಮ ಮನಸ್ಸನ್ನು ಆಕರ್ಷಿಸುವ ಸಾಕು ಪ್ರಾಣಿಗಳು ನಮ್ಮ ಮಾನಸಿಕ ಒತ್ತಡವನ್ನು ಕುಗ್ಗಿಸಿ ದೇಹದ ಆರೋಗ್ಯ ಮಟ್ಟ ಸುಧಾರಣೆಗೆ, ಲವಲವಿಕೆಯ ಜೀವನಕ್ಕೆ ಸ್ಫೂರ್ತಿಯಾಗಬಲ್ಲವು. ಉದಾಹರಣೆಗೆ ನಾಯಿಗಳನ್ನೇ ತೆಗೆದುಕೊಳ್ಳೋಣ. ಕೇವಲ ತಮ್ಮ ಮುಖ ಭಾವದಿಂದಲೇ ಸಂತೋಷ, ದುಃಖ, ಭಯ, ಸಿಟ್ಟು, ಅಪರಾಧಿ ಭಾವ, ಏಕಾಂಗಿತನದ ನೋವು, ಕೃತಜ್ಞತಾ ಭಾವ ಎಲ್ಲವನ್ನೂ  ಸ್ಪಷ್ಟಪಡಿಸಬಲ್ಲ ವಿಶ್ವಾಸಾರ್ಹ ಜೀವಗಳು.  ನಾವು ಮನುಷ್ಯರು ಕೇಕೆ ಹಾಕಿ, ಅತ್ತು ಕರೆದು ಗೋಳಾಡಿ, ಕಿರುಚಿ ಹೇಳುವ ಅಷ್ಟೂ ವಿಚಾರಗಳನ್ನು ಕೇವಲ ಮುಖ ಭಾವದಿಂದಲೇ ವ್ಯಕ್ತಪಡಿಸುವ ಅವುಗಳಿಗೆ ಮಾತೇಕೆ ಬೇಕು? ನಾವು ಬೈದರೆ ತಿರುಗಿ ಕೂರುತ್ತವೆ.ಪ್ರೀತಿ ತೋರಿದರೆ ಖುಷಿ ಪಡುತ್ತವೆ.  ಅವುಗಳ ತಪ್ಪಿಗೆ ಹೊಡೆಯಲು ಹೋದರೆ ಕಣ್ಣು ಮುಚ್ಚಿ ತೆರೆದು ಮಾಡುವ ಮೂಲಕ ಕ್ಷಮೆಯಾಚಿಸುತ್ತವೆ. ಗುಡುಗು ಸಿಡಿಲು ಅಥವಾ ವಿಪರೀತ ಸದ್ದು ಬಂದಾಗ ಭಯದಿಂದ ತಾನು ಅಸುರಕ್ಷಿತ ಎನ್ನುವ ಭಾವನೆ ಎದುರಾಗಿ ಎಲ್ಲೋ ಹೋಗಿ ಮುದುಡಿಕೊಳ್ಳುತ್ತವೆ. ತಮ್ಮ ಆಹಾರದ ಬೇಡಿಕೆ ಪೂರೈಕೆ ಆದಾಗ ಬಾಲ ಅಲ್ಲಾಡಿಸಿ ಕೃತಜ್ಞತೆ ಹೇಳುತ್ತವೆ. ಇಡೀ ದಿನ ಮನೆ ಕಾದು ಸುಸ್ತಾದ ಸಂದರ್ಭದಲ್ಲಿ ಮನೆ ಮಂದಿ ಬಂದಾಗ ‘ ನನಗೆಷ್ಟು ಬೇಜಾರಾಗಿತ್ತು, ನೀವು ನನ್ನೊಬ್ಬನನ್ನು ಬಿಟ್ಟು ಹೋದಿರಿ ‘ ಎಂದು ತನ್ನದೇ ದನಿಯಲ್ಲಿ ನೋವನ್ನು ನಿವೇದಿಸಿಕೊಳ್ಳುತ್ತವೆ. ಕೆಲವೊಮ್ಮೆ ಮನೆಯೊಳಗೆ ಇರುವ ಬೆಕ್ಕಿನ ಬಗೆಗಿನ ತನ್ನ ಅಸಹನೆಯನ್ನು ಕೂಡಾ ನಾಯಿ ಸ್ಪಷ್ಟಪಡಿಸುವುದುಂಟು. ಸುಮ್ಮನೆ ಕುಳಿತಿದ್ದರೆ ತನ್ನ ತುಂಟ ನೋಟದಿಂದ ಆಟಕ್ಕೆ ಕರೆಯುವ ನಾಯಿಗೆ ನಮ್ಮ ಹಾಗೆ ಸದಾ ಸಂತೋಷವಾಗಿ ಇರಬೇಕು ಎನ್ನುವ ಹಂಬಲ ಉಂಟು . ಇನ್ನು ಬೆಕ್ಕು…ಅದು ಕೂಡಾ ತನ್ನ ವರ್ತನೆಯಿಂದಲೇ ಮನದ ಇಂಗಿತವನ್ನು ವ್ಯಕ್ತಪಡಿಸಬಲ್ಲ ಮುದ್ದು ಪ್ರಾಣಿ.ತನ್ನನ್ನು ಮುಟ್ಟಿದ ತಕ್ಷಣ ಮೈ ತೊಳೆದುಕೊಳ್ಳುವ ಬೆಕ್ಕು ತಾನು ಬಹಳ ಸ್ವಚ್ಛತೆಯ ಪ್ರಾಣಿ ಎಂಬುದನ್ನು ತನ್ನ ಕ್ರಿಯೆಯ ಮೂಲಕವೇ ವ್ಯಕ್ತಪಡಿಸುತ್ತದೆ.  ಆದರೆ ನಾಯಿಯಷ್ಟು ನಿಯತ್ತು ಇದಕ್ಕಿಲ್ಲ. ಎಲ್ಲೋ ಓದಿದ ನೆನಪು… ನಾಯಿ ನಾವು ಊಟ ಹಾಕುವ ಸಂದರ್ಭದಲ್ಲಿ ” ಇವನು ನನಗೆ ಅನ್ನ ನೀರು ಕೊಟ್ಟು ಸಾಕುತ್ತಿದ್ದಾನೆ, ಇವನೇ ನನ್ನ ಪಾಲಿನ ದೇವರು…” ಎಂದರೆ ಬೆಕ್ಕು ” ನಾನೇ ದೇವರು, ಅದಕ್ಕಾಗಿ ಇವ ನನಗೆ ಊಟ ಕೊಡುತ್ತಿದ್ದಾನೆ ” ಎಂದು ಭಾವಿಸುತ್ತದಂತೆ!!ಅದೇನೇ ಇರಲಿ, ಮಾತಿನ ಕಲೆಗಾರಿಕೆ ಇಲ್ಲದಿದ್ದರೆನಂತೆ.. ಮೂಕ ಪ್ರಾಣಿಗಳ ಭಾವಾಭಿನಯಕ್ಕೆ ಯಾವ ರಂಗ  ಕಲಾವಿದನೂ ಸಾಟಿಯಾಗಲಾರ. ನಮ್ಮ ಧ್ವನಿಯ ಏರಿಳಿತವನ್ನು ನಮ್ಮ ವರ್ತನೆಯನ್ನು ಅರ್ಥಮಾಡಿಕೊಳ್ಳಬಲ್ಲ ನಾಯಿ ಬೆಕ್ಕುಗಳು  ನಮ್ಮ ಸುಖ ದುಃಖಗಳಲ್ಲಿ ಅವುಗಳದೇ ಆದ ರೀತಿಯಲ್ಲಿ ಸ್ಪಂದಿಸಬಲ್ಲವು.ಮನೆಯ ಯಜಮಾನನ ಗೋರಿಯ ಮೇಲೆ ಬಿದ್ದು ಹೊರಳಾಡಿದ ನಾಯಿಯ  ವೇದನೆಗೆ ನಾವು  ಬೆರಗಾಗಿ ಮೂಕರಾಗಿ ನಿಂತುಬಿಟ್ಟಿಲ್ಲವೇ? ಮೂಕ ಪ್ರಾಣಿ ಆದರೇನಂತೆ, ಪುಟ್ಟ ಮಕ್ಕಳನ್ನು ತನ್ನ ಕಣ್ಣ ನೋಟದಿಂದಲೇ ಕಾಯುವ ನಾಯಿಗಳಿದ್ದಾವೆ. ಪಾಪ! ಕೆಲವೊಮ್ಮೆ ನಾವು ಕೊಟ್ಟ ಆಹಾರ ಅವುಗಳಿಗೆ ಇಷ್ಟವಿಲ್ಲದಿದ್ದರೂ  ನಮ್ಮ ತೃಪ್ತಿಗಾಗಿ ಅದನ್ನು ತಿನ್ನುವ ಮೂಲಕ ಒಂದು ಬಗೆಯ ಸೌಜನ್ಯ ತೋರುವ ಗುಣ ಮೂಕ ಪ್ರಾಣಿಗಳಿಗುಂಟು!! ಒಮ್ಮೆ ನಮ್ಮ ಮನೆಯ ಬೆಕ್ಕಿಗೆ ಜಿಲೇಬಿ ಕೊಟ್ಟೆ. ಬೇಡ ಅನ್ನುವ ರೀತಿಯಲ್ಲಿ ತಿರುಗಿ ಕುಳಿತಿತು.ನಾನು ಸುಮ್ಮನಾಗದೆ ಪದೇ ಪದೇ  ಅದರ ಎದುರು ಹಿಡಿದು ‘ತಿನ್ನು ಬಿಲ್ಲಿ’ ಎಂದು ಮುದ್ದಾಗಿ ಹೇಳಿದೆ. ಪಾಪ ಅದಕ್ಕೆ ಏನನಿಸಿತೋ ಏನೋ ದಾಕ್ಷಿಣ್ಯ ಕ್ಕೆ ಗಂಟು ಬಿದ್ದು ನನ್ನಿಂದ  ಜಿಲೇಬಿ ಪಡಕೊಂಡು   ಆಚೆ ಹೋಗಿ ಉಗಿದು ಬಂತದು!!ಬೇಸರ ಮಾಡಿಸಬಾರದು ಎನ್ನುವ ಕಾಳಜಿ ಅದಕ್ಕೂ ಇದೆ!!ಅಂದ ಮೇಲೆ ಅವುಗಳಿಗೆ ಮಾತೇಕೆ ಬೇಕು?   ನಿಷ್ಠೆ, ಪ್ರಾಮಾಣಿಕತೆ, ವಿಶ್ವಾಸಾರ್ಹತೆ ಇತ್ಯಾದಿಗಳಿಗೆ ಹೆಸರುವಾಸಿಯಾದ ನಾಯಿಗೆ ಮಾತನಾಡುವ ಕಲೆಗಾರಿಕೆ ದೇವರು ಕೊಟ್ಟಿದ್ದಿದ್ದರೆ… ಬಹುಶಃ ಕೆಲವು ಮನುಷ್ಯರಂತೆ ಅವುಗಳು ಕೂಡಾ ಸುಳ್ಳು, ಮೋಸ ವಂಚನೆಗಳ ಸುಳಿಗೆ ಸಿಲುಕುತ್ತಿದ್ದವು.  ಅವುಗಳು ಮಾತಿಲ್ಲದೆಯೇ ಜೀವನ ಸಾಗಿಸಬಲ್ಲವು ಎಂದೇ ದೇವರು ಅವುಗಳನ್ನು  ಮೂಕವಾಗಿಸಿರಬೇಕು. ದೇವರ ಸೃಷ್ಟಿ ನಿಯಮದ ಬಗ್ಗೆ ಅಥವಾ ಅದಕ್ಕೆ  ವಿರುದ್ದವಾಗಿ   ಆಲೋಚನೆ ಮಾಡುವುದಕ್ಕೂ  ನಾವು ಅರ್ಹರಲ್ಲ. ಜಯಲಕ್ಷ್ಮಿ ಮಡಿಕೇರಿ

“ಹೀಗೊಂದು ಆಲೋಚನೆ…”ಕೆ.ಜಯಲಕ್ಷ್ಮಿ ಅವರ ಪ್ರಬಂಧ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-24 ಅರ್ಜುನ ಉವಾಚ ವಿಶ್ವನಾಥ್ ಎನ್‌ ನೇರಳೆಕಟ್ಟೆ ಸುಧನ್ವ ಗೆದ್ದ…ಕೃಷ್ಹೃ ಹೃದಯವನು ಸುಧನ್ವ ಅಷ್ಟು ಬಲಯುತನಾದದ್ದು ಹೇಗೆ ಎನ್ನುವ ರಹಸ್ಯವನ್ನು ನನಗೆ ತಿಳಿಸಿದ ಶ್ರೀಕೃಷ್ಣ. ಸುಧನ್ವ ಏಕಪತ್ನೀವ್ರತಸ್ಥನಾಗಿದ್ದ. ತಂದೆಯ ಆಜ್ಞೆಯನ್ನು ಅವಗಣಿಸಿದವನಲ್ಲ. ಕೃಷ್ಣಪೂಜೆಗೆ ಉದಾಸೀನ ತೋರಿದವನಲ್ಲ. ಆತನ ಅಂತಃಸ್ಸತ್ವವೇ ಅವನಿಗೆ ಅಂತಹ ಶಕ್ತಿಯನ್ನು ಒದಗಿಸಿತ್ತು. ಇಂದ್ರ ಬ್ರಹ್ಮ ಶಿವಾದಿಗಳಿಗೂ ಯುದ್ಧದಲ್ಲಿ ಮಣಿವವನಲ್ಲ ಇವ ಎಂದ ಶ್ರೀಕೃಷ್ಣ. ಮೂರೂ ಲೋಕಗಳನ್ನು ಅಂಜಿಸುವ ಇವನ ಶೌರ್ಯವನ್ನು ಕಾಣುತ್ತಾ ಇರುವುದಷ್ಟೇ ಇನ್ನು ನಮ್ಮ ಕೆಲಸ ಎಂದ.ಆಗ ಸುಧನ್ವ ಕೃಷ್ಣನನ್ನು ದಿಟ್ಟತನದಿಂದ ಪ್ರಶ್ನಿಸಿದ. “ಅಂದು ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿದ ಹಾಗೆ ಇಂದು ಈ ಪಾರ್ಥನನ್ನು ರಕ್ಷಿಸುವ ತೆರದಲ್ಲಿ ಬಂದೆ. ನಾನೂ ನಿನ್ನ ಭಕ್ತನೇ. ನನ್ನ ಮೇಲೇಕೆ ನೀನು ಕೃಪೆದೋರದಿರುವೆ. ಇರಲಿ. ನಾನಂತೂ ಅನವರತ ನಿನ್ನ ಭಕ್ತನೇ. ಅದರಲ್ಲಿ ಸಂದೇಹವಿಲ್ಲ. ಈ ಯುದ್ಧದಲ್ಲಿ ನನ್ನ ಈ ದೇಹವನ್ನು ನಿನಗೊಪ್ಪಿಸದೆ ಬಿಡೆನು” ಅಂದ.ಸುಧನ್ವ ಎತ್ತಿದ ಆ ಪ್ರಶ್ನೆ ನನ್ನೊಳಗೆ ಯೋಚನೆಯನ್ನು ಮೂಡಿಸಿತು. ನಾನೂ ಕೃಷ್ಣನ ಭಕ್ತ. ಸುಧನ್ವನೂ ಹರಿಭಕ್ತ. ಹಾಗಿರುವಾಗ ಕೃಷ್ಣ ನನ್ನ ಪರವಾಗಿ ಮಾತ್ರವೇ ನಿಂತಿದ್ದಾನೇಕೆ?! ಸಂದರ್ಭಕ್ಕೆ ಹೊಂದುವ ರೀತಿಯಲ್ಲಿ ಕೃಷ್ಣವರ್ತನೆಯಿದೆ ಎನಿಸಿತು ನನಗೆ. ಈಗ ಕೃಷ್ಣ ನನ್ನ ಪರವಾಗಿರದೆ ಸುಧನ್ವನ ಪಕ್ಷ ವಹಿಸಿದರೆ ಯುದ್ಧದ ಗೆಲುವು ನನ್ನದಾಗುವುದಿಲ್ಲ. ಕುದುರೆ ಮುಂದಕ್ಕೆ ಚಲಿಸುವುದಿಲ್ಲ. ನಮ್ಮ ಅಶ್ವಮೇಧ ಯಾಗವದು ಸಂಪೂರ್ಣವಾಗುವುದಿಲ್ಲ. ಈ ಬಗೆಯ ದೂರಾಲೋಚನೆಯನ್ನು ಇರಿಸಿಕೊಂಡೇ ಆ ಕೃಷ್ಣದೇವ ನನಗೆ ನೆರವಾಗಿ ನಿಂತಿರಬೇಕು. ಔಚಿತ್ಯಪೂರ್ಣನಾಗಿದ್ದಾನೆ ಅಚ್ಯುತ ಎನಿಸಿತು ನನಗೆ ಆ ಕ್ಷಣದಲ್ಲಿ.ಆಗಲೇ ಸುಧನ್ವ ಬಿಟ್ಟ ಬಾಣ ನನ್ನ ರಥವನ್ನು ತಾಡಿಸಿತು. ಅದೆಂತಹ ಭೀಕರ ಹೊಡೆತ! ತಿರುಗಿ ತಿರುಗಿತು ರಥ. ಭಯದ ದನಿಯನ್ನೆಬ್ಬಿಸಿದವು ಕುದುರೆಗಳು. ನನಗೂ ಕೃಷ್ಣನಿಗೂ ಕಣ್ಣಿಗೆ ಕತ್ತಲೆ ಕವಿದಂತಾಯಿತು. ತಲೆ ತಿರುಗಿತು. ರಥದ ಚಕ್ರಗಳು ಕಳಚಿ ಬಿದ್ದ ಅನುಭವ. ಹಿಂದುಹಿಂದಕ್ಕೆ ಸರಿದುಹೋಯಿತು ನನ್ನ ರಥ.ನನ್ನ ಕೋಪವೀಗ ಮೇರೆಮೀರಿತು. ಇನ್ನಿವನ ಶೌರ್ಯವನ್ನು ಕೊನೆಗಾಣಿಸದಿದ್ದರೆ ನಮಗೆ ಉಳಿಗಾಲವಿಲ್ಲ ಎಂದು ತೋರಿತು. ಮೂರು ಬಾಣಗಳೊಳಗೆ ಅವನ ಪ್ರಾಣಹರಣ ಮಾಡುವ ಪ್ರತಿಜ್ಞೆಯನ್ನು ನೆನಪಿಸಿಕೊಂಡೆ. ಅತಿಶಕ್ತಿಯುತ ಬಾಣವನ್ನು ಬಿಲ್ಲಿಗೆ ಹೂಡಿದೆ. “ಸುಧನ್ವ ಮರಣವನು ನಿರ್ಣಯಿಸುವ ಬಾಣವಿದು” ಎಂದೆ ಅಸುರಾರಿಯಲ್ಲಿ. ಗೋವರ್ಧನ ಗಿರಿಯನ್ನೆತ್ತಿ ಗೋವುಗಳನ್ನು ಕಾಪಾಡಿ ಸಂಪಾದಿಸಿದ ಪುಣ್ಯವನ್ನು ಆ ಬಾಣಕ್ಕೆ ತುಂಬಿದ ಶ್ರೀಕೃಷ್ಣ. “ಈಗಲೇ ಅವನ ಶಿರವನ್ನು ಗುರಿಮಾಡಿ ಬಾಣ ಪ್ರಯೋಗಿಸು” ಎಂಬ ಸೂಚನೆ ಬಂತು ಕೃಷ್ಣನ ಕಡೆಯಿಂದ. ಬಾಣ ಬಿಟ್ಟೆ. ಅದೆಂತಹ ವೇಗದಲ್ಲಿ ಬಾಣ ಚಲಿಸುತ್ತಾ ಹೋಯಿತೋ ಅದೇ ವೇಗದಲ್ಲಿ ಅದು ತುಂಡಾಗಿ ಕೆಳಗೆ ಬಿತ್ತು. ಪ್ರತಿಬಾಣ ಪ್ರಯೋಗಿಸಿ ಗೆಲುವು ಪಡೆದಿದ್ದ ಸುಧನ್ವನ ಮುಖದಲ್ಲಿ ವೀರಭಾವದ ನಗುವಿತ್ತು.ಮೂರು ಬಾಣಗಳಲ್ಲಿ ಸುಧನ್ವನನ್ನು ಇನ್ನಿಲ್ಲವಾಗಿಸುತ್ತೇನೆ ಎಂದಿದ್ದವ ನಾನು. ಮೊದಲ ಬಾಣವದು ಇನ್ನಿಲ್ಲವಾಗಿತ್ತು. ಇನ್ನೆರಡು ಬಾಣಗಳಲ್ಲಿ ನಾನು ನನ್ನ ಪ್ರತಿಜ್ಞೆಯನ್ನು ಪೂರೈಸಬೇಕಿತ್ತು. ಅಮೋಘ ಶರವನ್ನು ತೆಗೆದೆ ಬತ್ತಳಿಕೆಯಿಂದ. ಹೆದೆಗೆ ಅದನ್ನು ಹೊಂದಿಸಿದೆ. ಆಗಲೇ ಶ್ರೀಕೃಷ್ಣ ಭೂಮಿಯನ್ನು ಕಾಯ್ದ ಪುಣ್ಯಫಲವನ್ನು ನನ್ನ ಆ ಶರದಲ್ಲಿ ತುಂಬಿದ. “ಕೃಷ್ಣ ಪರಮಾತ್ಮ, ನಿನ್ನ ಪುಣ್ಯವನ್ನು ಆ ಬಾಣದಲ್ಲಿ ತುಂಬಿರುವೆ. ಅದನ್ನು ಅರ್ಧಮಾರ್ಗದಲ್ಲಿಯೇ ಪತನಗೊಳಿಸದಿದ್ದರೆ ಪಾತಕಿಗೊದಗುವ ಹೀನಸ್ಥಿತಿ ನನಗೆ ಒದಗಲಿ” ಎಂದು ಪರಾಕ್ರಮದಿಂದ ಆರ್ಭಟಿಸಿದ ಸುಧನ್ವ. ಅವನ ಮಾತು ನಿಜವಾಯಿತು. ಅವನ ಸೇನೆಯಲ್ಲಿ ವಿಜಯದ ನಾದ ಮೊಳಗಿತು. ಗೆಲುವಿನ ಕೇಕೆ ಕೇಳಿಬಂತು.ನಿಷ್ಫಲಗೊಂಡ ಎರಡು ಬಾಣಗಳು ನನ್ನನ್ನು ಚುಚ್ಚತೊಡಗಿದವು. ಇನ್ನೊಂದೇ ಒಂದು ಬಾಣದಲ್ಲಿ ನಾನು ಸುಧನ್ವನ ಶಿರವನ್ನು ಕತ್ತರಿಸಬೇಕಿತ್ತು. ಕೃಷ್ಣ ಧೈರ್ಯ ತುಂಬಿದ. ‘ನನ್ನ ಶಕ್ತಿಯನ್ನೂ, ಯುದ್ಧ ಬದ್ಧತೆಯನ್ನೂ ನಿರ್ಧರಿಸುವ ಬಾಣವಿದು’ ಎಂದುಕೊಳ್ಳುತ್ತಲೇ ಬತ್ತಳಿಕೆಯಿಂದ ಶರವನ್ನು ತೆಗೆದೆ. ಈಗ ಶ್ರೀಕೃಷ್ಣ ಹಿಂದಿಗಿಂತಲೂ ಹೆಚ್ಚಿನ ಶಕ್ತಿಯನ್ನು ಆ ಬಾಣಕ್ಕೆ ತುಂಬುವ ಉಪಾಯ ಹೂಡಿದ. ಬ್ರಹ್ಮದೇವನನ್ನು ಆಹ್ವಾನಿಸಿ ಆ ಬಾಣದ ಒಂದು ತುದಿಯಲ್ಲಿ ಕೂರಿಸಿದ. ಇನ್ನೊಂದು ತುದಿಯಲ್ಲಿ ಶಿವ ಕುಳಿತುಕೊಳ್ಳುವಂತೆ ಮಾಡಿದ. ಬಾಣದ ಮಧ್ಯಭಾಗದಲ್ಲಿ ತಾನೇ ಕುಳಿತ ಶ್ರೀಕೃಷ್ಣ. ತ್ರಿಮೂರ್ತಿಗಳ ಅಸ್ತಿತ್ವದ ಸತ್ವವದು ದೊರಕಿತು ಆ ಬಾಣಕ್ಕೆ. ರಾಮಾವತಾರದಲ್ಲಿ ತಾನು ಸಂಪಾದಿಸಿದ ಪುಣ್ಯವನ್ನು ಆ ಬಾಣದಲ್ಲಿ ತುಂಬಿದ.ಕೃಷ್ಣನ ಪಾಂಚಜನ್ಯ ಮೊಳಗಿತು, ಕೋಟಿ ಕೋಟಿ ಸಿಡಿಲುಗಳು ಒಮ್ಮೆಯೇ ಸಿಡಿದಂತೆ. ಭೂಮಿಯೇ ಅಲ್ಲೋಲಕಲ್ಲೋಲವಾಯಿತು ಕೃಷ್ಣನೂದಿದ ರಣ ಶಂಖಧ್ವನಿಗೆ.ಆ ಕ್ಷಣವೇ ನನ್ನ ಕರ ಅರಳಿತು. ಶರ ಕೆರಳಿತು. ಶತ್ರುವಿನ ಶಿರವನ್ನು ಗುರಿಯಾಗಿರಿಸಿಕೊಂಡು ಉರಿಉರಿಯಿಂದ ಹೊರಟಿತದೋ ಘನಶರ!ಬಾಣದ ಭೀಕರತೆಯನ್ನು ಕಂಡು ಅಂಜಿದರು, ಅಳುಕಿದರು ಸುಧನ್ವನ ಸಕಲ ಸೈನಿಕರು. ಹಂಸಧ್ವಜಸುತನ ಮುಂಡವದು ರುಂಡದಿಂದ ಬೇರ್ಪಟ್ಟಿತು. ಕತ್ತರಿಸಲ್ಪಟ್ಟ ಶಿರ ಆಕಾಶಮಾರ್ಗದಲ್ಲಿ ಜಿಗಿದು, ಪರಪೀಡೆಯದು ತನ್ನದಲ್ಲ ಎಂಬ ಭಾವದಲ್ಲಿ ಬರುವ ಕಲೆಗಳಿಂದ ಕೂಡಿದ ಚಂದ್ರನಂತೆ ಬಂದುಬಿದ್ದಿತು ಕೃಷ್ಣನ ಪಾದಪದ್ಮಗಳಲ್ಲಿ. ಸಾವನ್ನಪ್ಪಿದ ಆ ಕ್ಷಣದಲ್ಲಿಯೂ ಸುಧನ್ವ ಶಿರವದು ಹರಿನಾಮಸ್ಮರಣೆಯನ್ನು ತೊರೆದಿರಲಿಲ್ಲ.ಸುಧನ್ವನ ತಲೆಯನ್ನು ಹಾಗೆಯೇ ಒಮ್ಮೆ ಎತ್ತಿಕೊಂಡ ಕೃಷ್ಣ ತನ್ನ ಮೂಗಿನ ಬಳಿಗೆ ಒಯ್ದು ಒಮ್ಮೆ ಆಘ್ರಾಣಿಸಿದ. “ನನ್ನ ಹೃದಯವನ್ನು ಗೆದ್ದ ಬಲ್ಮೆಗಾರ ನೀನು” ಎಂಬ ಗುಟ್ಟನ್ನು ಸುಧನ್ವನ ಕಿವಿಯಲ್ಲಿ ಕೃಷ್ಣ ಹೇಳಿದಂತೆ ತೋರಿತೆನಗೆ ಆ ದೃಶ್ಯ. ‘ಈ ವೀರ ಶಿರವದು ಸಂದಿತೆನಗೆ ಇಂದು’ ಎಂಬ ಕೃಷ್ಣಭಾವವೂ ಆ ನಡೆಯಲ್ಲಿ ಇದ್ದಂತೆ ತೋರಿತು.ಮಗನ ಸಾವನ್ನು ಸಹಿಸದಾದ ಹಂಸಧ್ವಜ ಬಗೆಬಗೆಯಲ್ಲಿ ಪ್ರಲಾಪಿಸಿದ. ಹೀಗಿದ್ದಾಗಲೇ ಸುಧನ್ವ ಸಹೋದರ ಎನಿಸಿಕೊಂಡ ಸುರಥ ತಮ್ಮವನ ಸಾವಿಗೆ ಸೇಡನ್ನು ತೀರಿಸಿಕೊಳ್ಳದಿರಲಾರೆ ಎಂಬ ಛಲವನ್ನು ಹೊತ್ತುನಿಂತಿದ್ದ. ಅವನೊಡನೆ ಹೋರಾಡದೆ ನಮ್ಮ ಗೆಲುವು ಪೂರ್ಣಗೊಳ್ಳದು ಎಂಬ ವಿಷಯ ನನಗೆ ಸ್ಪಷ್ಟವಾಯಿತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ

ಧಾರಾವಾಹಿ ಸಂಗಾತಿ-117 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಸುಮತಿಯ ಪರಿಸ್ಥಿತಿಯನ್ನು ಮಗಳಿಗೆ ಹೇಳಿದ ವೈದ್ಯರು ಫಿಸೀಷಿಯನ್ ಹಾಗೆ ಹೇಳಿದಾಗ ಬಹಳ ಮುಖ್ಯವಾದ ವಿಷಯವಿರಬೇಕೆಂದು ಮಗಳಿಗೆ ತಿಳಿಯಿತು… ಅದೇನೇ ಇದ್ದರೂ ನನಗೆ ಹೇಳಿ ಸರ್…. ನನ್ನ ಅಮ್ಮನಿಗೆ ಏನಾಗಿದೆ? ಎಂದು ಕೇಳಿದಾಗ, ವೈದ್ಯರು ಆ ಹುಡುಗಿಯ ಮುಖವನ್ನೇ ತದೇಕಚಿತ್ತವಾಗಿ ನೋಡುತ್ತಾ… ನಿನ್ನ ವಯಸ್ಸೆಷ್ಟು ಮಗು?… ನೀನು ಏನು ಓದುತ್ತಿರುವೆ? ಎಂದು ಕೇಳಿದರು.ವೈದ್ಯರ ಪ್ರಶ್ನೆಗೆ… ನನಗೀಗ ಹದಿನೆಂಟು ವರ್ಷ ವಯಸ್ಸು…. ನಾನು ಬಿ.ಎ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರುವೆ…. ಎಂದು ಹೇಳಿದಳು. ಆ ಹುಡುಗಿಯ ಮಾತನ್ನು ಆಲಿಸಿದ ವೈದ್ಯರು…. “ಮಗೂ ನಿನ್ನನ್ನು ನೋಡಿದರೆ ತಿಳುವಳಿಕೆ ಇರುವ ಹಾಗೂ ವಯಸ್ಸಿಗಿಂತ ಹೆಚ್ಚು ಪ್ರಬುದ್ಧತೆ ಹೊಂದಿರುವ ಹುಡುಗಿಯ ಹಾಗೆ ತೋರುತ್ತೀಯ… ನಾನು ಹೇಳುವ ವಿಷಯವು ಬಹಳ ಗಂಭೀರವಾದದ್ದು…. ಅದನ್ನು ನೀನು ಹೇಗೆ ತೆಗೆದುಕೊಳ್ಳುತ್ತೀಯ ಎನ್ನುವುದು ನನಗೆ ತಿಳಿಯದು…. ಆದರೂ ಹೇಳಲೇಬೇಕಾದ ಅನಿವಾರ್ಯತೆ ಇದೆ…. ನೀನು ಹೇಳಿದೆ ಮನೆಯಲ್ಲಿ ದೊಡ್ಡವರು ಯಾರು ಇಲ್ಲ ಎಂದು…. ಸುಮತಿಯ ಯೋಗ ಕ್ಷೇಮವನ್ನು ನೀನು ಮತ್ತು ನಿನ್ನ ತಂಗಿ ಈಗ ನೋಡಿಕೊಳ್ಳುತ್ತಿರುವಿರಿ ಎನ್ನುವುದು ನನಗೆ ಅರ್ಥವಾಯಿತು…. ನೋಡು ಮಗು… ನಿನ್ನ ತಾಯಿಯ ಸ್ಥಿತಿ ಸ್ವಲ್ಪ ಹೆಚ್ಚೇ ಗಂಭೀರವಾಗಿದೆ….. ಆಕೆಯ ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಕೋಶ, ಹೇಳಬೇಕೆಂದರೆ ನಿನ್ನ ತಾಯಿಯ ಶರೀರದ ಅಂತರಿಕ ಅಂಗಗಳಲ್ಲಿ ಊತ ಕಾಣಿಸಿಕೊಂಡಿದೆ…. ಬಹುತೇಕ ಎಲ್ಲಾ ಆಂತರಿಕ ಅಂಗಗಳು ವೈಫಲ್ಯವಾಗಿವೆ…. ತೀವ್ರವಾದ ಸಕ್ಕರೆ ಕಾಯಿಲೆಯ ಪರಿಣಾಮ ಹಾಗೂ ರಕ್ತದ ಒತ್ತಡಕ್ಕೆ ಚಿಕಿತ್ಸೆ ಪಡೆಯದೆ ಇರುವ ಕಾರಣದಿಂದ ನಿನ್ನ ತಾಯಿಯು ಈ ಸ್ಥಿತಿಗೆ ತಲುಪಿದ್ದಾರೆ…. ಇನ್ನು ನಾವು ಯಾವುದೇ ಚಿಕಿತ್ಸೆ ಕೊಟ್ಟರೂ ಅದು ಫಲಕಾರಿಯಾಗದು…. ಇಲ್ಲಿ ಈ ತಾಲ್ಲೂಕು ಆರೋಗ್ಯ ಕೇಂದ್ರದಲ್ಲಿ ಹೆಚ್ಚಿನ ಚಿಕಿತ್ಸೆ ದೊರಕಲಾರದು…. ಸ್ವಲ್ಪ ದಿನ ನಾವು ನಿನ್ನ ತಾಯಿಯ ಆರೈಕೆಯನ್ನು ಈ ಆಸ್ಪತ್ರೆಯಲ್ಲಿ ಮಾಡಬಹುದು…. ಹೆಚ್ಚಿನ ಚಿಕಿತ್ಸೆ ಬೇಕೆಂದರೆ ನೀನು ನಿನ್ನ ತಾಯಿಯನ್ನು ಬೆಂಗಳೂರಿನಲ್ಲಿರುವ ಕಿಡ್ನಿ ಫೌಂಡೇಶನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವಾರಕ್ಕೊಮ್ಮೆ ಡಯಾಲಿಸಿಸ್ ಮಾಡಿಸಿದರೆ ಇನ್ನೂ ಸ್ವಲ್ಪ ಕಾಲ ನಿನ್ನ ತಾಯಿ ಬದುಕುಳಿಯಬಹುದು…. ಈಕೆ ಇದೇ ಸ್ಥಿತಿಯಲ್ಲಿದ್ದರೆ ಇನ್ನಾರು ತಿಂಗಳಷ್ಟೇ ಜೀವಂತವಾಗಿ ಬದುಕಿರಲು ಸಾಧ್ಯ…. ಆದರೆ ಮೊದಲಿನಂತೆ ಲವಲವಿಕೆಯಿಂದ ಎದ್ದು ಓಡಾಡಲು ಅವರಿಂದ ಸಾಧ್ಯವಿಲ್ಲ…. ಹಾಸಿಗೆಯಲ್ಲಿಯೇ ದಿನ ಕಳೆಯಬೇಕಾದ ಪರಿಸ್ಥಿತಿ…. ಅವರಿಂದ ಶಿಕ್ಷಕ ವೃತ್ತಿಯನ್ನು ಮುಂದುವರಿಸಲು ಸಾಧ್ಯವಿಲ್ಲ…. ನೀನು ಮತ್ತು ನಿನ್ನ ತಂಗಿ ಸುಮತಿಯ ಆರೈಕೆಯನ್ನು ಮಾಡಬೇಕಾಗುತ್ತದೆ…. ದಿನೇ ದಿನೇ ಅವರ ಆರೋಗ್ಯ ಸ್ಥಿತಿಯು ಗಂಭೀರವಾಗುತ್ತಲೇ ಹೋಗುತ್ತದೆ…. ಯಾವುದೇ ಆಹಾರ ಪಥ್ಯದಿಂದಲೂ ಸುಮತಿಯ ಆರೋಗ್ಯ ಸುಧಾರಿಸುವುದಿಲ್ಲ…. ಆದರೂ ಅವರ ಆರೋಗ್ಯ ಸ್ಥಿತಿ ಇನ್ನೂ ಹದಗೆಡದಂತೆ ನೋಡಿಕೊಳ್ಳಲು ಪಥ್ಯದ ಆಹಾರವನ್ನು ಕೊಡುವುದು ಕೂಡ ಅನಿವಾರ್ಯ…. ನಾನು ಕೊಡುವ ವೈದ್ಯಕೀಯ ಚಿಕಿತ್ಸೆಯಿಂದ ಅವರ ಆರೋಗ್ಯ ಮೊದಲಿನಂತಾಗಲು ಸಾಧ್ಯವಿಲ್ಲ…. ಆದರೆ ತಾತ್ಕಾಲಿಕವಾಗಿ ಉಪಶಮನದ ಚಿಕಿತ್ಸೆಯನ್ನಷ್ಟೇ ನಾವು ಕೊಡಬಹುದು…. ನಿನ್ನ ತಾಯಿಯ ವಯಸ್ಸು ಕೂಡ ಬಹಳ ಚಿಕ್ಕದು…. ಕೇವಲ 54 ವರ್ಷವಷ್ಟೇ! …. ಜೀವನದಲ್ಲಿ ಬಹಳಷ್ಟು ನೋವುಗಳನ್ನು ಉಂಡವಳು, ಏಳುಬೀಳುಗಳನ್ನು ಕಂಡವಳು ನಿನ್ನ ಅಮ್ಮ…. ಬಹಳ ಮಾನಸಿಕ ಸ್ಥೈರ್ಯ ಉಳ್ಳವಳು ಕೂಡಾ…. ಆದರೆ ಈ ಸಕ್ಕರೆ ಕಾಯಿಲೆ ಅವಳನ್ನು ಬಹಳಷ್ಟು ಹೈರಾಣಾಗಿ ಮಾಡಿದ್ದು ಸುಳ್ಳಲ್ಲ…. ಇನ್ನೊಂದು ಮುಖ್ಯವಾದ ವಿಷಯವನ್ನು ನಿನಗೆ ಹೇಳಬೇಕಿದೆ ಮಗು…. ವಯಸ್ಸಿನಲ್ಲಿ ಬಹಳ ಚಿಕ್ಕವಳಾದ ನಿನಗೆ ಈ ವಿಷಯವನ್ನು ಹೇಗೆ ಹೇಳಬೇಕೆಂಬುದು ನನಗೆ ತಿಳಿಯುತ್ತಿಲ್ಲ…. ಆದರೆ ನಾನು ಹೇಳಲೇಬೇಕಾಗಿದೆ”…. ಎಂದು ಅವಳ ಮುಖವನ್ನೇ ಸೂಕ್ಷ್ಮವಾಗಿ ಗಮನಿಸುತ್ತಾ ವೈದ್ಯರು ನುಡಿದರು. ವೈದ್ಯರು ಹೇಳಿದ ಎಲ್ಲಾ ಸಂಗತಿಗಳನ್ನು ಕೇಳಿ ಈಗಾಗಲೇ ಆಘಾತಕ್ಕೆ ಒಳಗಾಗಿದ್ದ ಹುಡುಗಿ ಇನ್ನೂ ಏನು ಹೇಳುವರೋ ಎನ್ನುವ ಭಯ ಹಾಗೂ ಆತಂಕದಿಂದ ವೈದ್ಯರಡೆಗೆ ನೋಡಿದಳು. ಅವಳ ಆ ನೋಟವನ್ನು ಕಂಡು ವೈದ್ಯರ ಮನಸ್ಸು ಮರುಗಿತು. ಆದರೆ ಹೇಳದೆ ಬೇರೆ ಮಾರ್ಗವಿರಲಿಲ್ಲ….. “ಮಗೂ ನಿನ್ನ ಅಮ್ಮ ಮರಣ ಹೊಂದಿದ ಬಳಿಕ ಆಕೆಯ ಶವ ಶರೀರವನ್ನು ಹೆಚ್ಚು ಹೊತ್ತು ಇಟ್ಟುಕೊಳ್ಳುವಂತೆ ಇಲ್ಲ…. ಆಂತರಿಕ ಅಂಗಗಳ ವೈಫಲ್ಯದಿಂದಾಗಿ ಸುಮತಿಯ ಶರೀರದಲ್ಲಿ ದಿನೇ ದಿನೇ ನೀರು ತುಂಬಿಕೊಂಡು ಊತಕ್ಕೆ ಒಳಗಾಗುತ್ತದೆ…. ಕೆಲವೊಮ್ಮೆ ಆಕೆ ಬದುಕಿರುವಾಗಲೇ ಶರೀರದ ಕೆಲವು ಭಾಗಗಳು ಒಡೆದು ನೀರು ಜಿನುಗುವ ಸಾಧ್ಯತೆ ಇರುತ್ತದೆ…. ಅದನ್ನು ತಡೆಯಲು ಕೆಲವು ಮಾತ್ರೆಗಳನ್ನು ನಾನು ಬರೆದುಕೊಡುತ್ತೇನೆ…. ಆದರೆ ಮರಣ ಹೊಂದಿದ ಕೆಲವು ಗಂಟೆಗಳ ಬಳಿಕ ಶರೀರವು ಪೂರ್ತಿ ಊದಿಕೊಂಡು ಅಲ್ಲಲ್ಲಿ ಒಡೆಯುವ ಸಾಧ್ಯತೆಗಳು ಇರುತ್ತದೆ…. ಸೂಕ್ಷ್ಮಾಣುಗಳು ದೇಹದ ಒಳಗೆ ಸೇರಿಕೊಂಡು ದೇಹವು ಬೇಗ ಕೊಳೆಯಲು ಶುರುವಾಗುತ್ತದೆ…. ದುರ್ವಾಸನೆ ಬರುತ್ತದೆ… ಹಾಗಾಗಿ ಸಾಧ್ಯವಾದಷ್ಟು ಬೇಗ ಶವಸಂಸ್ಕಾರ ಮಾಡಬೇಕಾಗುತ್ತದೆ…. ಎಂದರು. ವೈದ್ಯರ ಮಾತನ್ನು ಕೇಳುತ್ತಾ ಕುಳಿತ ಹುಡುಗಿಯು ಕಣ್ಣಾಲಿಗಳು ತುಂಬಿ ಕೊಳಗಳಾದವು. ಗಂಟಲು ಬಿಗಿಯಿತು. ಕೇವಲ ಬಿಕ್ಕುಗಳಲ್ಲದೆ ಅವಳ ಬಾಯಿಂದ ಒಂದು ಪದವೂ ಆಚೆ ಬರಲಿಲ್ಲ. ಅಳುವನ್ನು ತಡೆದುಕೊಳ್ಳುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಳು. ಅವಳನ್ನು ಕಂಡ ವೈದ್ಯರ ಮನಸ್ಸು ಕರಗಿತು. ಕುಳಿತಲ್ಲಿಂದ ಎದ್ದು ಬಂದು ಅವಳ ತಲೆ ನೇವರಿಸುತ್ತಾ…. ನಿನಗೆ ಯಾವ ರೀತಿಯಲ್ಲಿ ಹೇಗೆ ಸಮಾಧಾನ ಮಾಡಬೇಕು ಎಂದು ನನಗೆ ತಿಳಿಯುತ್ತಿಲ್ಲ ಮಗುವೇ…. ವಿಧಿ ಎನ್ನುವುದು ಬಹಳ ಕ್ರೂರ…. ಇಂತಹಾ ಚಿಕ್ಕ ವಯಸ್ಸಿಗೇ ಅದೆಷ್ಟು ಘೋರವಾದ ಸಂಗತಿಗಳನ್ನು ನೀನು ಕೇಳಬೇಕಾಗಿ ಬಂತು…. ಸಮಾಧಾನ ಮಾಡಿಕೋ…. ನೀನು ಈ ಸ್ಥಿತಿಯಲ್ಲಿ ಸುಮತಿಯ ಬಳಿಗೆ ಹೋದರೆ ಅವಳು ಅಧೀರಳಾಗುವಳು…. ಧೈರ್ಯ ತಂದುಕೋ…. ಈ ಜಟಿಲ ಪರಿಸ್ಥಿತಿಯನ್ನು ಹೇಗಿದ್ದರೂ ನೀನು ಎದುರಿಸಲೇ ಬೇಕಾಗಿದೆ…. ಏನು ಹೇಳಬೇಕೆಂದು ನನಗೆ ತಿಳಿಯುತ್ತಿಲ್ಲ ಮಗುವೇ”…. ಎಂದು ಆ ಹುಡುಗಿಯ ತಲೆ ಸವರುತ್ತಾ ಸಮಾಧಾನ ಮಾಡಿ…. “ಆದಷ್ಟು ಬೇಗ ನಿನ್ನ ತಾಯಿಯ ಸಂಬಂಧಿಕರಿಗೆ ವಿಷಯ ತಿಳಿಸು….. ಬರುವವರು ಯಾರಾದರೂ ಇದ್ದರೆ ಬಂದು ನೋಡಿಕೊಂಡು ಹೋಗಲಿ…. ಈಗ ಕೆಲವು ಔಷಧಿಗಳನ್ನು ಬರೆದುಕೊಡುತ್ತೇನೆ ಅದನ್ನು ಆದಷ್ಟು ಬೇಗ ತಂದು ವಾರ್ಡಿನ ನರ್ಸಿಗೆ ಕೊಡು”…ಎಂದು ಹೇಳಿ, ಸುಮತಿಗೆ ಕೊಡಬೇಕಾದ ಒಂದಿಷ್ಟು ಔಷಧಿಗಳ ಹೆಸರುಗಳನ್ನು ಚೀಟಿಯಲ್ಲಿ ಬರೆದು ಅವಳ ಕೈಗಿತ್ತರು. ಆ ಹುಡುಗಿ ಯಾಂತ್ರಿಕವಾಗಿ ಕುಳಿತಲ್ಲಿಂದ ಎದ್ದು ವೈದ್ಯರು ಕೊಟ್ಟ ಚೀಟಿಯನ್ನು ಪಡೆದುಕೊಂಡು ಅವರಿಗೆ ನಮಸ್ಕರಿಸಿ, ಕೊಠಡಿಯಿಂದ ಆಚೆ ಬಂದಳು. ತನ್ನ ಸುತ್ತಲಿರುವ ಪ್ರತಿಯೊಂದು ವಸ್ತುಗಳು ಅಪರಿಚಿತವಾಗಿ ಅವಳಿಗೆ ಕಂಡಿತು. ಸ್ವಲ್ಪ ಹೊತ್ತು ಅಲ್ಲಿಯೇ ಇದ್ದ ಬೆಂಚಿನ ಮೇಲೆ ಕುಳಿತುಕೊಂಡು ತನ್ನನ್ನು ತಾನು ಸಮಾಧಾನ ಪಡಿಸಿಕೊಳ್ಳುವ ವ್ಯರ್ಥ ಪ್ರಯತ್ನ ಮಾಡಿದಳು.

Read Post »

You cannot copy content of this page

Scroll to Top