ಸೌಹಾರ್ದ ಸಂಗಾತಿ ಜಯಲಕ್ಷ್ಮಿ ಕೆ “ಹಿಂದೂ ಮುಸ್ಲಿಂ ಸೌಹಾರ್ದತೆಯ ತಾಣ ಶಿಶುವಿನಹಾಳ” “ಲೋಕದ ಕಾಳಜಿ ಮಾಡುತ್ತೀನಂತಿ.. ನಿಂಗ್ಯಾರು ಬ್ಯಾಡಂದೋರು ಮಾಡಪ್ಪ ಚಿಂತಿ .. ಆನೆ ಅಂಬಾರಿ ಏರಬೇಕಂತಿ.. ಮಣ್ಣಲ್ಲಿ ಇಳಿಯುದ ತಣ್ಣಗ ಮರತಿ…” ಖ್ಯಾತ ಗಾಯಕ ಲುಂಗಿ ರಾಕ್ ಸ್ಟಾರ್ ರಘು ದೀಕ್ಷಿತ್ ರವರ ಕಂಠಸಿರಿಯಿಂದ ಮೂಡಿಬಂದು ಜನಮನ ಗೆದ್ದ ಈ ತತ್ವ ಪದದ ರಚನೆಕಾರರ ಊರೇ ಶಿಶುವಿನಹಾಳ. “ಕನ್ನಡದ ಕಬೀರ” ಎಂದೇ ಖ್ಯಾತರಾದ ಸಂತ ಶಿಶುನಾಳ ಶರೀಫರ ಸನ್ನಿಧಿ ಇರುವುದು ಹಾವೇರಿ ಜಿಲ್ಲೆಯ ಶಿಗ್ಗಾಂವಾ ತಾಲೂಕಿನ ಶಿಶುವಿನಹಾಳದಲ್ಲಿ. ಹಿಂದೂ ಮುಸ್ಲಿಂ ಭಾವೈಕ್ಯದ ಹರಿಕಾರರಾದ ಶರೀಫರ ನಾಡಿನಲ್ಲಿ ಒಂದೇ ಮಂದಿರದಲ್ಲಿ ಎರಡು ಧರ್ಮಿಯರು ನಡೆಸುವ ಪೂಜಾ ಕೈಂಕರ್ಯ ನೋಡುವುದೇ ಚೆನ್ನ! ಗುರು ಗೋವಿಂದ ಭಟ್ಟರ ಮೂರ್ತಿ ಒಂದೆಡೆ.. ಶಿಶುನಾಳ ಶರೀಫರ ಮೂರ್ತಿ ಇನ್ನೊಂದೆಡೆ. ಈ ಎರಡು ಮೂರ್ತಿಗಳ ನಡುವೆ ಶ್ವೇತ ಶಿಲೆಯಲ್ಲಿ ಕೆತ್ತಿದ ಆಶೀರ್ವಾದ ನೀಡುವ ಭಂಗಿಯಲ್ಲಿ ನಿಂತ ನಂದಿ, ಶಿವಲಿಂಗ. ಒಂದೆಡೆ ಹಣ್ಣು ಕಾಯಿ ಸೇವೆ, ಇನ್ನೊಂದೆಡೆ ಸಕ್ಕರೆ ಪ್ರಸಾದ ವಿತರಣೆ! ಹಿಂದೂ ಮುಸ್ಲಿಂ ಭಾವೈಕ್ಯತೆಯ ಜೊತೆ ಜೊತೆಗೆ ಗುರು ಶಿಷ್ಯ ಸಂಬಂಧದ ಪಾವಿತ್ರ್ಯತೆಯನ್ನು ಸಾರುವ ಅಪೂರ್ವ ಚಿತ್ರಣ ! ಎಂಥವರೂ ಭಾವಪರವಶರಾಗಬೇಕು ಹುಲಗೂರ ಶರೀಫರ ಈ ಸನ್ನಿಧಿಯಲ್ಲಿ. ವಿಜ್ಞಾನ ತಂತ್ರಜ್ಞಾನದಲ್ಲಿ ಪಳಗಿ ಆಧುನಿಕತೆಯ ತುತ್ತ ತುದಿಯನ್ನು ತಲುಪಿದ್ದೇವೆ ಎನ್ನುವ ಭ್ರಮೆಯಲ್ಲಿರುವ, ಜಾತಿ ಮತ ಪಂಥಗಳು ಎಂಬ ತ್ರಿಶಂಕುವಿನಿಂದ ಹೊರಬರಲಾಗದ ಸಂಕುಚಿತ ಮನೋಭಾವದವರು ಈ ದಿವ್ಯ ಕ್ಷೇತ್ರಕ್ಕೆ ಹೋಗಲೇಬೇಕು. ಅಲ್ಲಿನ ಪೂಜಾ ವಿಧಿ ವಿಧಾನಗಳನ್ನು, ಅಲ್ಲಿನ ಜನರು ಹೊಂದಿಕೊಂಡು ಬಾಳುವ ಪರಿಯನ್ನು ಕಣ್ತುಂಬಿಕೊಳ್ಳಲೇಬೇಕು. ಐದರಿಂದ ಆರು ಸಾವಿರದಷ್ಟು ಜನಸಂಖ್ಯೆಯನ್ನು ಹೊಂದಿರುವ ಪುಟ್ಟ ಊರದು. “ದೇಹವೇ ಮಸೀದಿ,ದೇಹವೇ ದೇಗುಲ ” ಎಂದು ಸಾರಿದ, ಸಾರಿದಂತೆಯೇ ಬದುಕಿ ಬಾಳಿದ ಸಂತ ಶರೀಫರ ನೆಲದಲ್ಲಿ ನಿಂತರೆ ಸಾಕು, ಕೋಮು ಸೌಹಾರ್ದತೆ ಸಾರುವ ಅವರ ತತ್ವಪದಗಳು, ಮಾನವ ಧರ್ಮ ಸಾರುವ ಅವರ ಪದಗಳ ಸಾರಗಳು, ಸ್ಮೃತಿ ಪಟಲದಲ್ಲಿ ಹಾಗೇ ತೇಲಿ ಬರುತ್ತವೆ. ಲೌಕಿಕ ದೃಶ್ಯಗಳ ಮೂಲಕ ಪಾರಮಾರ್ಥಿಕ ಸತ್ಯಗಳನ್ನು ಸರಳ ಸುಂದರ ಆಡು ಭಾಷೆಯಲ್ಲಿ ನಿರೂಪಿಸಿರುವ ಶರೀಫರು ಮೊದಲ ಸೂಫಿ ಕವಿ. ಆಕರ್ಷಕ ತತ್ವಪದಗಳ ಮೂಲಕ ಜನಮಾನಸದಲ್ಲಿ ಉಳಿದ ಸಿದ್ಧಪುರುಷ ಶರೀಫ ಇಸ್ಲಾಂ ಧರ್ಮದಲ್ಲಿ ಹುಟ್ಟಿ, ಹಿಂದೂ ಗುರುವನ್ನು ಪಡೆದು ಜಾತಿ ಮತಗಳ ಎಲ್ಲೆ ಮೀರಿ ಬೆಳೆದು ನಿಂತವರು. ” ಕೆಲಸವಿಲ್ಲದೆ ಅಲೆಯುವ ತಿರುಕ ” ಎಂದ ಹಿಂದೂ ಧರ್ಮೀಯರ ಮಾತಿಗಾಗಲಿ, ” ಕಾಫಿರ್ ” ಎಂದ ಮುಸಲ್ಮಾನರ ತೆಗಳಿಕೆಗಾಗಲಿ ಸಂತ ಶರೀಫರ ಮನ ವಿಚಲಿತಗೊಳ್ಳಲಿಲ್ಲ. ಏಕ ತಂತಿಯ ತಂಬೂರಿ ಹಿಡಿದು ತನ್ನ ತತ್ವಗಳನ್ನು ಪದಗಳ ಮೂಲಕ ಬೀದಿಬೀದಿಯಲ್ಲಿ ಸಾರಿದರು. ಯಾವ ಖಲೀಫನಿಂದಲೂ ನಿರ್ಮಿಸಲು ಸಾಧ್ಯವಾಗದ ಮತೀಯ ಸಾಮರಸ್ಯದ ದೇಗುಲದ ನಿರ್ಮಾಣಕ್ಕೆ ಕಾರಣಕರ್ತರಾದರು. ಗೂಢಾರ್ಥದಲ್ಲಿ, ರೂಪಕಗಳನ್ನು ಬಳಸಿ ಇವರು ರಚಿಸಿರುವಂತಹ ಕೋಡಗನ ಕೋಳಿ ನುಂಗಿತ್ತಾ, ಸೋರುತಿಹುದು ಮನೆಯ ಮಾಳಿಗಿ, ಬಿದ್ದಿಯಬ್ಬೇ ಮುದುಕಿ , ಹಾವು ತುಳಿದೇನೇ ಮಾನಿನಿ, ಇತ್ಯಾದಿ ತತ್ವಪದಗಳು ಕನ್ನಡಿಗರ ನಾಲಿಗೆಯಲ್ಲಿ ಸದಾ ಹರಿದಾಡುವ ನೀತಿ ಸಂಹಿತೆಗಳೇ ಸರಿ. ಸಮಯ ಸಂದರ್ಭಗಳಿಗೆ ಅನುಗುಣವಾಗಿ ಉಪಮೆಗಳನ್ನು ಬಳಸುತ್ತಾ ಪದ ರಚಿಸಿ ಹಾಡುತ್ತಿದ್ದ ಈ ಸಂತ ಮತೀಯ ಸಾಮರಸ್ಯದ ಹರಿಕಾರನಾಗಿ ನಮ್ಮೆಲ್ಲರ ಮನದಲ್ಲಿ ನೆಲೆ ನಿಂತ ಧೀಮಂತ. ಶಿಶುನಾಳ ಶರೀಫರು ಮತ್ತು ಅವರ ಗುರು ಗೋವಿಂದ ಭಟ್ಟರ ಸಮಾಧಿಗೆ ಜಾತಿ ಮತಗಳ ಹಂಗಿಲ್ಲದೆ ಪ್ರತಿದಿನ ಪೂಜೆ ನಡೆಯುತ್ತಿದ್ದು ಅದೊಂದು ಪವಿತ್ರ ಯಾತ್ರಾ ಸ್ಥಳವಾಗಿದೆ. ಶಿಶುನಾಳ ಶರೀಫರ ದೇಗುಲಕ್ಕೆ ಹೋಗುವವರು ಅಲ್ಲಿಂದ ಸುಮಾರು 20 -30 ಕಿಲೋ ಮೀಟರ್ ಅಂತರದಲ್ಲಿರುವ 11 ನೇ ಶತಮಾನದ ಚಾಲುಕ್ಯ ಶೈಲಿಯಲ್ಲಿ ನಿರ್ಮಾಣಗೊಂಡಿರುವ ಸಿದ್ಧೇಶ್ವರ ದೇವಾಲಯ, ಮುಕ್ತೇಶ್ವರ ದೇವಾಲಯಗಳನ್ನು ನೋಡಬಹುದು. ಸಮೃದ್ಧ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿರುವ ಈ ಹಾವೇರಿ ಜಿಲ್ಲೆಯ ಹಾನಗಲ್ ನಲ್ಲಿ ಕಲ್ಯಾಣ ಚಾಲುಕ್ಯರ ಕಾಲದ ತಾರಕೇಶ್ವರ ದೇಗುಲ, ಹುಕ್ಕೇರಿ ಮಠ, ಬಂಕಾಪುರದ ನಗರೇಶ್ವರ ದೇಗುಲ ಬಂಕಾಪುರದ ಕೋಟೆ ಇತ್ಯಾದಿ ಪ್ರೇಕ್ಷಣೀಯ ಸ್ಥಳಗಳಿವೆ. ಸಂತ ಕನಕದಾಸರ ಹುಟ್ಟೂರಾದ ಕಾಗಿನೆಲೆ ಇರುವುದೂ ಇಲ್ಲಿಯೇ. ‘ ಏಲಕ್ಕಿ ಕಂಪಿನ ನಾಡು ‘ ಎಂದೇ ಹೆಸರಾದ ಈ ನಾಡಿನಲ್ಲಿ ಎತ್ತ ಸಂಚರಿಸಿದರೂ ರಸ್ತೆಯ ಇಕ್ಕೆಲಗಳಲ್ಲಿರುವ ಹೊಲಗಳಲ್ಲಿನ ಬ್ಯಾಡಗಿ ಕೆಂಪು ಮೆಣಸಿನಕಾಯಿ ಮತ್ತು ಕುಸಬಿ ಎಣ್ಣೆ ಬೀಜದ ಹೊಲಗಳು ಕಣ್ಮನ ಸೆಳೆಯುವ ಆಕರ್ಷಣೆಗಳೇ ಸರಿ . ಆಧ್ಯಾತ್ಮಿಕ ಐತಿಹಾಸಿಕ ಮಹತ್ವದಿಂದ ಕೂಡಿರುವ ಕರ್ನಾಟಕದ ಪ್ರಸಿದ್ಧ ಪ್ರೇಕ್ಷಣೀಯ ಸ್ಥಳವಿದು. ಜಯಲಕ್ಷ್ಮಿ ಕೆ