ಕಾವ್ಯ ಸಂಗಾತಿ ಸುಮಲತಾ ಗಡಿಯಪ್ಪನವರ “ಮಾಯದ ಸೆರಗು ಮತ್ತು ಬದಲಾದ ಮಡಿಲು” ಯುಗಗಳು ಉರುಳಿದರೂ ಮರೆಯದ ಆಸರೆ,ಅಮ್ಮನ ಸೀರೆಯ ಆ ಒಂದು ಸೆರಗು;ಅದರೊಳು ಅಡಗಿತ್ತು ಜಗದೊಳಗಿನ ಮಮತೆ,ಕಣ್ಣೀರ ಒರೆಸುತ್ತಿದ್ದ ದಿವ್ಯ ಬೆರಗು. ಬಿಸಿ ಪಾತ್ರೆಗೆ ಹಿಡಿಕೆಯಾಗಿದ್ದ ಆ ತುದಿ,ಮಗುವಿನ ಮುಖದ ಮಸಿ ತೊಳೆಯುವ ನದಿ;ನಾಚಿಕೆಗೆ ಅಡಗುದಾಣ, ಚಳಿಗೆ ಹೊದಿಕೆ,ಅಮ್ಮನ ಸೆರಗೊಂದೇ ಬಾಳಿನ ಅಸ್ತಿತ್ವದ ನಂಬಿಕೆ. ಗಂಟು ಹಾಕಿದರೆ ಕಳೆದುದ ಕರುಣಿಸುವ ಮಾಯೆ,ಕಾಸು ಬಚ್ಚಿಟ್ಟ ಚಲಿಸುವ ಬ್ಯಾಂಕಿನ ಛಾಯೆ;ಸುಡುವ ಕಣ್ಣಿಗೆ ಉಸಿರಿನ ಬಿಸಿ ಒತ್ತುವ ಸಾಂತ್ವನ,ಆ ಸೆರಗಿನ ನೆರಳಲ್ಲೇ ಅರಳಿತ್ತು ಧನ್ಯ ಬಾಲ್ಯದ ಜಗತ್ತಿನ ಪಯಣ. ಆದರೆ… ಕಾಲದ ಚಕ್ರ ಉರುಳಿದೆ ಇಂದು,ಉಡುಗೆ ತೊಡುಗೆಯ ರೂಪ ಬದಲಾಗಿದೆ ಅಂದು;ಜೀನ್ಸಿನ ಜೇಬಲಿ ಜಾಗವಿಲ್ಲ ಆ ಸೆರಗಿಗೆ,ಆಧುನಿಕತೆಯ ಓಟದಲಿ ಕಳೆದುಹೋಯಿತೇ ಆ ನೆರಳಿಗೆ? ಬಟ್ಟೆಯ ಸೆರಗು ಇಲ್ಲದಿರಬಹುದು ಜೀನ್ಸಿನ ಅಂಚಿನಲ್ಲಿ,ಆದರೆ ಅಮ್ಮನ ಮಮತೆ ಎಂದೂ ಕಮ್ಮಿಯಾಗದು ನೆನಪಿನಲ್ಲಿ;ಸೆರಗಿನ ಗಂಟಿನ ಹಣವೀಗ ಬ್ಯಾಂಕಿನ ಖಾತೆಯಾಗಿದೆ,ಕಣ್ಣೀರ ಒರೆಸುತ್ತಿದ್ದ ಕೈಗಳು ಈಗ ಹೆಗಲಿಗೆ ಹೆಗಲು ನೀಡಿದೆ. ರೂಪ ಬದಲಾದರೂ ಕರುಳಿನ ಕುಡಿ ಪ್ರೀತಿ ಬದಲಾಗದು,ಅಮ್ಮನ ಅಪ್ಪುಗೆಯ ಬೆಚ್ಚನೆಯ ಆಶ್ರಯ ಎಂದೂ ಮುಗಿಯದು;ಸೀರೆಯ ಸೆರಗಿಗೆ ತಲೆಬಾಗುತ್ತಲೇ ಇಂದಿನ ತಾಯ್ತನವನ್ನೂ ಗೌರವಿಸೋಣ,ಯುಗ ಯಾವುದೇ ಆದರೂ ಅಮ್ಮನ ಪ್ರೀತಿಯೇ ಜಗದ ಶಕ್ತಿ ಎನ್ನೋಣ. ಸುಮಲತಾ ಗಡಿಯಪ್ಪನವರ