ಕಾವ್ಯ ಸಂಗಾತಿ
ವಾಣಿ ಯಡಹಳ್ಳಿಮಠ
ಗಜಲ್


ಅಳುವವರನು ನೋಡಿಯೂ ನಗುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ
ನೋಯುವರೆಂದು ತಿಳಿದೂ ಸತಾಯಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ
ತಮ್ಮ ಕಷ್ಟವನ್ನಷ್ಟೇ ಪುಂಖಾನುಪುಂಖವಾಗಿ ಊದುವರು
ಅನ್ಯರ ಅಳಲು ಕೇಳಲು ಒಲ್ಲೆನ್ನುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ
ನೀ ಬಯಸುವ ಪ್ರೀತಿ, ಗೌರವ ಬೇರೆಯವರಿಗೂ ನೀಡಬೇಕಲ್ಲವೇ
ಕೊಡದದ್ದನ್ನು ಪಡೆಯುವ ಮನಸು ಹೊಂದಿರುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ
ಎಲ್ಲರಿಗೂ ಅವರವರ ಅಭಿಮಾನ ಎಲ್ಲದಕ್ಕಿಂತಲೂ ಮಿಗಿಲು ನಿಜ
ನಾ ಸ್ವಾಭಿಮಾನದ ಮಾತಾಡಿದರೇ ಮುನಿಯುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ
ಜಗದ ರೀತಿ, ರಿವಾಜುಗಳು ಅದೇಕೋ ವಾಣಿಗೆ ತಿಳಿಯಲಾಗಲೇ ಇಲ್ಲ
ನನ್ನೀ ಮನಸ್ಥಿತಿ ನೋಡಿ ನಿಂದಿಸುವವರಿದ್ದಾರಿಲ್ಲಿ ಅದ್ಯಾಕೆ ಹೀಗೆ…
ವಾಣಿ ಯಡಹಳ್ಳಿಮಠ



