ಕಾವ್ಯ ಸಂಗಾತಿ
ಸಂತೋಷಕುಮಾರ ಅತ್ತಿವೇರಿ
“ದಾಂಪತ್ಯ ದಶಕ”


ಜೀವ ತಂತು ದಾಟಿ ಬಂತು
ಹತ್ತು ಮೈಲಿಗಲ್ಲನು
ಗಟ್ಟಿಯಾಗಿ ಸಾಗಿಸುತ್ತ
ಬಾಳ ಸುಖದ ತೇರನು
ಎರಡು ಮುತ್ತು ಮುದದಿ ಹೆತ್ತು
ಮಧುರ ಪ್ರೇಮ ಕಾಣ್ಕೆಗೆ
ನೀಡಿ ನೀನೆ ಸಾಕ್ಷಿಯಾದೆ
ಸಹಯೋಗದ ಬಾಳ್ವೆಗೆ
ಕ್ಷುದ್ರ ಮೂಲದಿಂದಗಾಧ
ಸೃಷ್ಟಿಗರ್ಭ ವಿಸ್ಮಯ
ಎನಿತು ಬಾಳೊ ಏಸು ಒಡಲೊ
ತನಗೆ ತಾನೆ ತನ್ಮಯ
ಉದಧಿ ತಲದಿ ನಭದ ತುದಿಗೆ
ಸಚೇತನದ ಸರಿಗಮ
ಫಲ ಹೇತುಕ ಪರಿಣಾಮದ
ಗೌಣ ಭಾವ ಸಂಭ್ರಮ
ನಿತ್ಯ ನಲಿವ ಅಪ್ರಮೇಯ
ಜೀವಕೋಟಿಯಂತೆಯೇ
ನಮ್ಮದೊಂದು ಪಾಲು ಇರಲಿ
ಜಗದ ಸಂತೆಯಂತೆಯೇ
ಸಂತೋಷಕುಮಾರ ಅತ್ತಿವೇರಿ



