ಮದಿರಾ ಪ್ರಿಯರ ಹಳವಂಡಗಳು
ಗೌರಿ.ಚಂದ್ರಕೇಸರಿ
ಸಾವಿನಂತಹ ಘೋರಾತಿ ಘೋರ ಪರಿಸ್ಥಿತಿಯಲ್ಲೂ ತಮಾಷೆಗಳನ್ನು ಹುಟ್ಟು ಹಾಕಬಲ್ಲಂತಹ ಎದೆಗಾರಿಕೆ, ಹಾಸ್ಯ ಪ್ರಜ್ಞೆ ಇರುವುದು ನಮ್ಮ ಜನರಿಗೇನೇ ಎಂಬುದು ನನ್ನ ಅಭಿಪ್ರಾಯ. ಕಳೆದ ವರ್ಷ ಬಂದು ಹೋದ ಜಲ ಪ್ರಳಯ, ಈಗಿನ ಕೊರೋನಾದ ಬಗ್ಗೆ ದಿನಕ್ಕೆ ನೂರಾರು ಟಿಕ್ ಟಾಕ್, ಟ್ರೋಲುಗಳು ಬಂದು ಬೀಳುತ್ತವೆ ಮುಖ ಪುಸ್ತಕ, ವಾಟ್ಸಾಪ್ನಲ್ಲಿ. ನೊಂದು ಬೆಂದ ಮನಸುಗಳಿಗೆ ಇವುಗಳಿಂದ ಸ್ವಲ್ಪವಾದರೂ ಉಪಶಮನ ದೊರೆಯುವುದಂತೂ ಹೌದು.
ಕೊರೋನಾದ ರುದ್ರ ತಾಂಡವಕ್ಕೆ ಕಡಿವಾಣ ಹಾಕಲು ಲಾಕ್ ಡೌನ್ ಘೋಷಣೆಯಾಗುತ್ತಿದ್ದಂತೆಯೇ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಹಳವಂಡಗಳು ಆರಂಭವಾದವು. ದಿನವಿಡೀ ಅಡುಗೆ ಮನೆಯಲ್ಲೇ ಬೇಯಿಸುತ್ತ, ತಾವೂ ಬೇಯುವ ಸಂಕಟ ಹೆಂಗಸರಿಗೆ. ಬೆಳಗಾಗುತ್ತಿದ್ದಂತೆಯೇ ಮನೆಯಿಂದ ಕಾಲ್ಕಿತ್ತು ಹುಡುಗಿಯರ ಕಾಲೇಜಿನತ್ತ ಠಳಾಯಿಸುತ್ತಿದ್ದ ಹುಡುಗರಿಗೆ ಕ್ಷಣವೊಂದು ಯುಗವಾಗಿ ಹೋದಂತಾಗಿತ್ತು. ಅಲ್ಪ ಸ್ವಲ್ಪ ಅನುಕೂಲವಾಗಿರುವುದು ಮಕ್ಕಳಿಗೆ. ಕಣ್ಣಿ ಬಿಚ್ಚಿದ ಕರುಗಳಂತಾಗಿ ಹೋಗಿವೆ ಮಕ್ಕಳು. ಆದರೆ ಈ ಗಂಡಸರು ಮಾತ್ರ ಜೀವನದಲ್ಲಿ ಏನನ್ನೋ ಕಳೆದುಕೊಂಡವರಂತೆ ಜಿಗುಪ್ಸೆಗೆ ಒಳಗಾಗಿದ್ದರೆಂಬುದು ನಮ್ಮ ಹೆಂಗಸರ ಅಂಬೋಣ. ಲಾಕ್ ಡೌನ್ ಜೊತೆ ಜೊತೆಗೆ ಮದ್ಯದಂಗಡಿಗಳಿಗೂ ಬೀಗ ಬಿದ್ದಾಗ ಗಂಡಸರೆಲ್ಲ ಅಕ್ಷರಶ: ಹತಾಶರಾಗಿ ಹೋಗಿದ್ದರು. ಮದಿರಾ ಪ್ರಿಯರ ಸ್ಥಿತಿಯನ್ನು ನೆನೆದರೆ ಕರುಳು ಹಿಂಡಿದಂತಾಗುತ್ತಿದೆ. ಬಡವ ಬಲ್ಲಿದರೆನ್ನದೇ ಮದಿರೆಯೊಂದೇ ತಮ್ಮ ಜೀವನದ ಥ್ರಿಲ್ ಎಂದುಕೊಂಡವರಿಗೆ ಜೀವನವೇ ನೀರಸವಾಗಿ ಹೋಗಿತ್ತು. ಈ ಕೊರೋನಾ ಎನ್ನುವ ಹೆಮ್ಮಾರಿಗೆ ಶಾಪ ಹಾಕುತ್ತಿರುವ ನಾಲಿಗೆಗಳೆಷ್ಟೋ, ಮದಿರೆಯ ಸರಬರಾಜನ್ನು ಮುಂದೂಡುತ್ತಾ ಹೋದ ಸರ್ಕಾರವನ್ನು ತೆಗಳಿದವರೆಷ್ಟೋ ಬಲ್ಲವರಾರು? ಇಂಥ ಪರಿಸ್ಥಿತಿಯನ್ನು ಹಿಂದೆಂದೂ ಕಂಡಿರದ ಹನಿ ನೀರಾವರಿ ಮಾಡುವವರು ತಲೆ ಮೇಲೆ ಕೈ ಹೊತ್ತು ಕುಳಿತು ಬಿಟ್ಟಿದ್ದರು. ನಿತ್ಯ ಬರುವ ವಾರ್ತೆಗಳನ್ನು ಕಣ್ಣಲ್ಲಿ ಕಣ್ಣಿಟ್ಟು ಎಣ್ಣೆ ಅಂಗಡಿಗಳೇನಾದರೂ ಬಾಗಿಲು ತೆರೆಯುವ ವಿಚಾರವನ್ನು ಹೇಳುತ್ತಾರೇನೋ ಎಂದು ಬಕ ಪಕ್ಷಿಗಳಂತೆ ಕಾಯುತ್ತಿದ್ದರು. ಆದರೆ ಎಣ್ಣೆ ಅಂಗಡಿಗಳಿಗೂ ಲಾಕ್ ಡೌನ್ ಎಂದು ಗೆರೆ ಕೊರೆದಂತೆ ಹೇಳಿದಾಗ ಮದಿರಾ ಪ್ರಿಯರ ಅಂತರಂಗದ ಅಳಲು ಏನೆಂಬುದು ಅವರಿಗಷ್ಟೇ ಗೊತ್ತು.
ಲಾಕ್‌ಡೌನ್ ಸಮಯದಲ್ಲಿ ಒಮ್ಮೆ ಹೀಗೇ ಆಯಿತು. ಹಿಂದಿನ ವಠಾರದಲ್ಲಿ ಗಲಾಟೆಯಾಗುತ್ತಿತ್ತು. ಕುತೂಹಲಕ್ಕೆಂದು ಹೋಗಿ ನೋಡಿದಾಗ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಆ ವ್ಯಕ್ತಿಯ ಮೇಲೆ ಬಂದಿರುವುದು ದೇವರೋ, ದೆವ್ವವೋ ಎಂದು ಪ್ರಶ್ನಿಸಲಾಗಿ ಅವನಿಗೆ ಬಡಿದುಕೊಂಡಿರುವುದು ಬಾಟಲಿಯ ದಯ್ಯ ಎಂದು ತಿಳಿದಿತ್ತು. ಪ್ರತಿನಿತ್ಯ ವಾರ್ತೆಗಳನ್ನು ನೋಡುವಾಗ ಕೈಯ್ಯಲ್ಲೊಂದು ಹಗ್ಗವನ್ನು ಹಿಡಿದುಕೊಳ್ಳುವುದು, ವಾರ್ತಾ ವಾಚಕರು ಇನ್ನೂ ಒಂದು ವಾರ ಎಣ್ಣೆ ಅಂಗಡಿಗಳಿಗೆ ಬೀಗ ಎನ್ನುತ್ತಲೇ ಇವನು ಹಗ್ಗವನ್ನು ಹಿಡಿದುಕೊಂಡು ನೇಣು ಬಿಗಿದುಕೊಳ್ಳಲು ಕೋಣೆಗೆ ಓಡುವುದು. ಮನೆಯವರೆಲ್ಲ ಓಡಿ ಹೋಗಿ ಅವನನ್ನು ಹಿಡಿದುಕೊಳ್ಳುವುದು. ಮದಿರೆ ಇಷ್ಟೊಂದು ಅನಿವಾರ್ಯವೆ ಮನುಷ್ಯನಿಗೆ ಎನ್ನಿಸಿತು. ಪ್ರಿಯತಮ/ಮೆ ಕೈ ಕೊಟ್ಟಾಗಲೋ ಸಾಲದ ಶೂಲ ಇರಿಯುವಾಗಲೋ ಆತ್ಮಹತ್ಯೆಗೆ ಮೊರೆ ಹೋಗುತ್ತಾರೆಂದರೆ ಇರಬಹುದೇನೋ ಎಂದು ಅಂದುಕೊಳ್ಳುಬಹುದು. ಆದರೆ ಯಕಶ್ಚಿತ್ತ್ ಒಂದು ಕಾಲು ಲೋಟದಷ್ಟು ಕಹಿ ಒಗರಿನ, ಗಂಟಲಲ್ಲಿ ಕೊಳ್ಳಿಯನ್ನು ಇಟ್ಟಂತಾಗುವ ದ್ರವಕ್ಕೋಸ್ಕರ ಜೀವನವನ್ನೇ ಕಳೆದುಕೊಳ್ಳಲು ಮುಂದಾಗುವುದಾ? ಎಂದುಕೊಂಡಿದ್ದೆ.
ಇನ್ನು ಕೆಲ ಮದಿರಾ ಭಕ್ತರು ಒಂದು ಹೆಜ್ಜೆ ಮುಂದೆ ಹೋಗಿ ಎಣ್ಣೆಯಂಗಡಿಗಳಿಗೇ ಕನ್ನ ಕೊರೆದರು. ಅಂದರೆ ಮದಿರಾ ಪ್ರಿಯಾಣಾಂ ನ ಲಜ್ಜಾ ನ ಭಯಂ ಅನ್ನಬಹುದೇನೋ. ಕೆಲ ಹೆಣ್ಣು ಮಕ್ಕಳೂ ಇದಕ್ಕೆ ಹೊರತಾಗಿಲ್ಲವೇನೋ. ಇಂಥ ಬಿಗಿ ಪರಿಸ್ಥಿತಿಯಲ್ಲೂ ಇಬ್ಬರು ಹುಡುಗಿಯರು ಹೇಗೋ ಎಣ್ಣೆಯನ್ನು ಹೊಂಚಿಕೊಂಡು ಪೋಲೀಸರ ಕಾರ್ಯಕ್ಕೆ ಅಡ್ಡಿ ಮಾಡಿದ್ದು ಕೇಳಿ ಹೆಂಗಸರು ಗಂಡಸರಿಗಿಂತ ಚಾಲಾಕಿಗಳು ಎಂಬುದನ್ನು ಸಾಬೀತು ಪಡಿಸಿದರು.ಕುಡಿತಕ್ಕೆ ಅನಿವಾರ್ಯಗಳನ್ನು ಸೃಷ್ಠಿಸಿಕೊಳ್ಳುವವರಿಗೆ ಕಾರಣಗಳಿಗೆ ಕೊರತೆಯೇ? ನಿತ್ಯ ಗಂಟಲಲ್ಲಿ ಎಣ್ಣೆ ಇಳಿಯದಿದ್ದರೆ ಮನೆಗೆ ಹೋಗಲು ಭಯವಂತೆ. ಘಟವಾಣಿ ಹೆಂಡತಿಯರ ಜೊತೆ ಏಗಲು, ಆಫೀಸಿನ ಕೆಲಸದ ಒತ್ತಡವನ್ನು ನೀಗಲು, ಆದ ಸಂತೋಷವನ್ನು ಸಂಭ್ರಮಿಸಲು, ದು:ಖವನ್ನು ಭರಿಸಲು ಹೀಗೆ ಕುಡಿತಕ್ಕೆ ಕಾರಣಗಳ ಸರಮಾಲೆಯೇ ಬಿಚ್ಚಿಕೊಳ್ಳುತ್ತದೆ. ಈಗ ಹಾಲಿ ಒಕ್ಕರಿಸಿರುವ ಕೊರೋನಾದ ಭಯ ಇವರಿಗಿಲ್ಲ. ಅದನ್ನು ಮೀರಿದ ಭಯವೆಂದರೆ ಎಣ್ಣೆ ಅಂಗಡಿಗಳನ್ನು ಬ್ಯಾನ್ ಮಾಡಿ ಬಿಡುವರೇನೋ ಎಂಬ ಚಿಂತೆ.
ಮದ್ಯ ಪ್ರಿಯರ ಹಳವಂಡಗಳೇನೇ ಇರಲಿ ಆದರೆ ಅವರ ಹೆಂಡಂದಿರು ಮಾತ್ರ ಇಷ್ಟು ದಿನ ನಿರಾಳವಾಗಿದ್ದರು. ಮನೆಯ ಒಂದು ದಿನದ ಖರ್ಚಿಗಾಗುವಷ್ಟು ದುಡ್ಡು ಗಂಡಸರ ಕುಡಿತಕ್ಕೇ ಹೋಗುತ್ತಿತ್ತು. ಅದು ಲಾಕ್‌ಡೌನ್ ಸಮಯದಲ್ಲಿ ಮಿಕ್ಕಿತು.. ಪರಮಾತ್ಮ ಒಳಗೆ ಇಳಿಯುತ್ತಿದ್ದಂತೆಯೇ ಹೆಂಡತಿಯ ಮೇಲೆ ರೋಪು ಹಾಕುತ್ತಿದವರೆಲ್ಲ ಆಗ ಮೆತ್ತಗಾಗಿ ಬಿಟ್ಟಿದ್ದರು. ಲಾಕ್ ಡೌನ್‌ನಿಂದಾಗಿರುವ ಲಾಭಗಳು ಯಾರಿಗುಂಟು ಯಾರಿಗಿಲ್ಲ? ಅಡುಗೆ ಮನೆಯ ಕೆಲಸವೊಂದು ಹೆಚ್ಚಾಗಿದೆ ಎನ್ನುವುದೊಂದನ್ನು ಬಿಟ್ಟರೆ ಆದದ್ದೆಲ್ಲ ಒಳಿತೇ ಆಗಿದೆ ಹೆಣ್ಣು ಮಕ್ಕಳಿಗೆ. ಫಲವತ್ತಾಗಿ ಬೆಳೆದಿದ್ದ ಗಂಡಸರ ಗಡ್ಡ-ಮೀಸೆ ಕ್ರಾಪುಗಳ ಜೊತೆಗೇ ಮದಿರೆ ಇಲ್ಲದೆ ಸೋತು ಹೋಗಿರುವ ಅವರ ಹ್ಯಾಪು ಮೋರೆಯನ್ನು ಕಂಡು ಅಯ್ಯೋ ಎನ್ನಿಸಿದರೂ ಒಳಗೊಳಗೇ ಇವರಿಗೆ ಇದು ಆಗಬೇಕಾದ್ದೇ ಎಂದುಕೊಂಡವರೇ ಹೆಚ್ಚು.
ರಾಮಾಯಣ. ಮಹಾಭಾರದ ಕಾಲದಿಂದಲೂ ಎಲ್ಲದಕೂ ಕಾರಣಳು ಹೆಣ್ಣೇ ಎಂದು ಹೇಳುತ್ತ ಬಂದಿದ್ದಾರೆ ನಮ್ಮ ಗಂಡಸರು. ಈಗ ಹೇಳಲಿ ನೋಡೋಣ, ಅವರ ಕುಡಿತಕ್ಕೆ ಕಲ್ಲು ಬಿದ್ದಿದ್ದು ಹೆಣ್ಣಿನಿಂದಲೇ ಅಂತ? ಅದಕ್ಕೆ ಕಾರಣ ಕೊರೋನಾ ಆಗಿರುವಾಗ ಹೇಗೆ ತಾನೇ ಹೇಳಿಯಾರು? ಯಾರಿಗೆ ಗೊತ್ತು? ಕೊರೋನಾ ಕೂಡ ಹೆಣ್ಣೇ ಅಂದರೂ ಅಂದಾರು ಗಂಟಲಾರಿದವರು.
********