“ಸಾಧನೆಗೆ ವಯಸ್ಸಿನ ಹಂಗಿಲ್ಲ”ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರ ಬರಹ

ವಯಸ್ಸು ಹೆಚ್ಚುತ್ತಿದ್ದಂತೆ ನಮ್ಮ ಕಾಲುಗಳ ಬಲ ಕಡಿಮೆಯಾಗಿ ನಡಿಗೆ ನಿಧಾನವಾಗುತ್ತದೆ ಎಂಬ ಜಗತ್ತಿನ ಹೇಳಿಕೆಯನ್ನು ಸುಳ್ಳು ಮಾಡುವಂತೆ ಮೀನಾಕ್ಷಿ ಅಮ್ಮ ತಮ್ಮ ಎಪ್ಪತ್ತೈದನೇ ವಯಸ್ಸಿನಲ್ಲಿ ಭಾರತೀಯ ಪ್ರಾಚೀನ ಯುದ್ಧ ಕಲೆಯ ಒಂದು ಭಾಗವಾಗಿರುವ ಕೇರಳದ ಕಳರಿಪಯಟ್ ವಿದ್ಯೆಯ
ತರಬೇತಿ ನೀಡುತ್ತಿರುವ ಅತ್ಯಂತ ಹಿರಿಯ ಗುರುವಾಗಿ ಮಾರ್ಗದರ್ಶಕರಾಗಿ ಆದರ್ಶಪ್ರಾಯರಾಗಿದ್ದಾರೆ. ಅವರ ಪಾಲಿಗೆ ಏರುತ್ತಿರುವ ವಯಸ್ಸು ಒಂದು ಸಂಖ್ಯೆ ಅಷ್ಟೇ.

ಏಳರ ಚಿಕ್ಕ ವಯಸ್ಸಿನಲ್ಲಿ ತನ್ನ ತಂದೆಯೊಂದಿಗೆ ಈ ಕೌಶಲವನ್ನು ಮೊಟ್ಟ ಮೊದಲ ಬಾರಿ ನೋಡಿದಾಗ ಆಕೆಯ ಕಳರಿಪಯಟ್ ವಿದ್ಯೆಯ ಕಲಿಕೆಯ ಪಯಣ ಆರಂಭವಾಗಿದ್ದು. ಮುಂದೆ ಈ ವಿದ್ಯೆಯನ್ನು ತನ್ನ ಬದುಕಿನ ಭಾಗವಾಗಿಸಿಕೊಂಡ ಆಕೆ ಸಾಮಾಜಿಕವಾಗಿ ಎಲ್ಲ ರೀತಿಯ ಅಡೆ-ತಡೆಗಳನ್ನು ನಿಯಂತ್ರಣಗಳಿಗೆ ಹಿಮ್ಮಟ್ಟದೆ ಈ ವಿದ್ಯೆಯ ಪ್ರತಿಯೊಂದು ಪಟ್ಟುಗಳನ್ನು ತನ್ನದಾಗಿಸಿಕೊಂಡಳು. ಸಂಪ್ರದಾಯಕ್ಕೆ ವಿರುದ್ಧವಾಗಿ ಮೀನಾಕ್ಷಿ ಅಮ್ಮ ಸವಾಲೆನಿಸುವಂತೆ ಈ ವಿದ್ಯೆಯನ್ನು ಸಂಪೂರ್ಣವಾಗಿ ಕರಗತ ಮಾಡಿಕೊಂಡು ಈ ವಿದ್ಯೆಯನ್ನು ಮುಂದಿನ ಜನಾಂಗಕ್ಕೆ ಉಳಿಸುವುದಕ್ಕೆ ಅಹರ್ನಿಶಿ ಕಾರ್ಯನಿರ್ವಹಿಸುವುದಾಗಿ ತೀರ್ಮಾನಿಸಿದರು. .

ಇದೀಗ ಆಕೆಯ ತರಬೇತಿ ಶಾಲೆ ಗುರುಕುಲದಲ್ಲಿ 150ಕ್ಕೂ ಹೆಚ್ಚು ಬಾಲಕರು ಮತ್ತು ಬಾಲಕಿಯರು ಈ ವಿದ್ಯೆಯನ್ನು ಕಲಿಯುತ್ತಿದ್ದಾರೆ. ಕಳರಿಪಯಟ್ಟು ಕೇವಲ ಮಾರ್ಷಲ್ ಆರ್ಟ್ ನ ಒಂದು ಭಾಗ ಎಂದು ಆಕೆ ಭಾವಿಸದೆ ಇದು ವೈಯುಕ್ತಿಕ ತಿಳುವಳಿಕೆಯ ಆತ್ಮ ಸಾಧನೆಯ ಮಾರ್ಗವಾಗಿದೆ. ಹೆಣ್ಣು ಮಕ್ಕಳ ಆತ್ಮ ನಿರ್ಭರತೆ ಮತ್ತು ಸಬಲೀಕರಣಕ್ಕೆ ಕಳರಿಪಯಟ್ಟು ವಿದ್ಯೆಯು ಅತ್ಯವಶ್ಯಕ ಎಂದು ಆಕೆ ಹೇಳುವರು. ಕತ್ತಿವರಸೆ, ಕೋಲು ತಿರುಗಿಸುವ ಮತ್ತು ಆತ್ಮ ರಕ್ಷಣಾ ಕಲೆಯ ತಂತ್ರಗಳನ್ನು ಕಲಿಸುವ ಅವರ ಸಂಸ್ಥೆಯಲ್ಲಿ
ವಿದ್ಯಾರ್ಥಿಗಳು ಬದುಕಿನಲ್ಲಿ ಬರುವ ಯಾವುದೇ ಸವಾಲುಗಳನ್ನು ಸ್ವೀಕರಿಸಲು ಮತ್ತು ಎದುರಿಸಲು ಸಜ್ಜಾಗಿರುವಂತೆ ತರಬೇತಿಯನ್ನು ಪಡೆಯುತ್ತಾರೆ.

ಮದುವೆಯ ನಂತರವೂ ಮೀನಾಕ್ಷಿ ಅಮ್ಮ ತಾವು ನಿರಂತರವಾಗಿ ಕಳರಿ ಪಯಟ್ ಕಲೆಯ ಅಭ್ಯಾಸವನ್ನು
ಮಾಡುತ್ತಿದ್ದರು… ಸಾಮಾಜಿಕವಾಗಿ ಇನ್ನೂ ಒಪ್ಪಿತವಾಗದ ಕಾರಣ ಆಕೆ ಮನೆಯ ನಾಲ್ಕು ಗೋಡೆಗಳ ಒಳಗೆ ತನ್ನ ಅಭ್ಯಾಸವನ್ನು ಮುಂದುವರಿಸಿದಳು. ಆದರೆ ಮೀನಾಕ್ಷಿ ಅಮ್ಮಳ ಪತಿಯ ಕನಸು ಕಳರಿ ಪಯಟ್ಟು ವಿದ್ಯೆಯನ್ನು ಸರ್ವರಿಗೂ ಕಲಿಸುವ ಮೂಲಕ ಅವರನ್ನು ಸ್ವರಕ್ಷಣೆಗೆ ಅನುವು ಮಾಡಬೇಕು ಎಂಬುದಾಗಿತ್ತು. ಯಾವುದೇ ರೀತಿಯ ಜಾತಿ, ಲಿಂಗ, ವರ್ಣ ವರ್ಗಭೇದಗಳಿಲ್ಲದೆ ಎಲ್ಲರೂ ಈ ವಿದ್ಯೆಯನ್ನು ಕಲಿಯಲಿ ಎಂಬ ಆಶಯವನ್ನು ಹೊತ್ತ ಆತ ತನ್ನ ಪತ್ನಿಗೆ ಸಂಪೂರ್ಣ ಬೆಂಬಲವಾಗಿ ನಿಂತರು. ಸಾಕಷ್ಟು ಸಾಮಾಜಿಕ ಅವಮಾನಗಳನ್ನು ಸಹಿಸಿಯೂ ಕೂಡ ತಮ್ಮ ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ, ತಮ್ಮ ಧ್ಯೇಯ ಸಾಧನೆಯ ಏಕೈಕ ಉದ್ದೇಶವನ್ನು ಸಾಧಿಸಲು ದಂಪತಿಗಳು ಜೊತೆಯಾಗಿ ಕಾರ್ಯನಿರ್ವಹಿಸಿದರು.

ಇದೀಗ ಆ ದಂಪತಿಗಳ ಕನಸು ಸಹಕಾರವಾಗಿದ್ದು ಮೀನಾಕ್ಷಿ ಅಮ್ಮ ತನ್ನ ಗುರುಕುಲದಲ್ಲಿ ಬರುವ ಯಾವುದೇ ಆಸಕ್ತ ವಿದ್ಯಾರ್ಥಿಗೆ ಯಾವುದೇ ರೀತಿಯ
ಜಾತಿ,ವರ್ಗ,ವರ್ಣಗಳ ತಾರತಮ್ಯವಿಲ್ಲದೆ ತರಬೇತಿ ನೀಡುತ್ತಿದ್ದು ಕಳರಿಪಯಟ್ಟು ವಿದ್ಯೆಯು ಇನ್ನೂ ಜೀವಂತವಾಗಿರಲು ಕಾರಣವಾಗಿರುವುದಲ್ಲದೆ ಅಸಂಖ್ಯಾತ ಜನರಿಗೆ ಈ ವಿದ್ಯೆ ಕಲಿಸುವ ಮೂಲಕ ಅವರಲ್ಲಿರುವ ಧೈರ್ಯ, ಸಾಹಸ ಮತ್ತು ಆತ್ಮ ವಿಶ್ವಾಸಗಳನ್ನು ಹೆಚ್ಚಿಸಿದ್ದಾರೆ.

ಕಳರಿ ಪಯಟ್ಟು ವಿದ್ಯೆಯನ್ನು ಕಲಿಸುವಲ್ಲಿ ಆಕೆಯ ಮಹತ್ತರ ಕಾಣಿಕೆಯನ್ನು ಗುರುತಿಸಿರುವ ಕೇಂದ್ರ ಸರ್ಕಾರವು ಆಕೆಗೆ ದೇಶದ ಅತ್ಯುನ್ನತ ಗೌರವಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ…. ಆದಾಗ್ಯ್ವು ಕೂಡ ಆಕೆಯ ನಿಜವಾದ ಸಾಧನೆಯ ಗೆಲುವು ಯಾವುದೇ ರೀತಿಯ ಲಿಂಗ ಭೇದವಿಲ್ಲದೆ ಆಕೆಯ ವಿದ್ಯಾರ್ಥಿಗಳಲ್ಲಿ ಆತ್ಮ ನಿರ್ಭರತೆ ಮತ್ತು ವಿಶ್ವಾಸವನ್ನು ಮೂಡಿಸಿದೆ ಎಂದರೆ ಅಚ್ಚರಿಯೇನಲ್ಲ.

75ರ ಇಳಿ ವಯಸ್ಸಿನಲ್ಲಿಯೂ ಕೂಡ 60ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿರುವ ಆಕೆಯ ಸಾಮರ್ಥ್ಯ ಮತ್ತು ಕಳರಿಪಯಟ್ಟು ವಿದ್ಯೆಯೆಡೆಗೆ ಇರುವ ಆಸಕ್ತಿ ಕಿಂಚಿತ್ತು ಕಡಿಮೆಯಾಗಿಲ್ಲ. ಚಿಕ್ಕಂದಿನಲ್ಲಿ ಇದ್ದಷ್ಟೇ ಹುರುಪು ಮತ್ತು ಉತ್ಸಾಹಗಳನ್ನು ಈ ಇಳಿವಯಸ್ಸಿನಲ್ಲಿಯೂ ಆಕೆ ಹೊಂದಿರುವರು.

ಮೀನಾಕ್ಷಿ ಅಮ್ಮನ ಕಥೆ ನಮಗೆ ಮಾನವ ನಿರ್ಮಿತ ವಲಯಗಳಿಂದ ಹೊರಬಂದು ಹೊಸತೇನನ್ನಾದರೂ ಕಲಿಯಲು ಪ್ರೇರಣೆ ನೀಡುತ್ತದೆ. ನಿಜವಾದ ಯೋಧ ಎಲ್ಲ ರೀತಿಯ ಬಂಧಗಳನ್ನು ಮುರಿದು ಧೈರ್ಯದಿಂದ ಮುನ್ನುಗ್ಗಿ ಯುದ್ಧದಲ್ಲಿ ಪಾಲ್ಗೊಳ್ಳುತ್ತಾನೆ. ಆದ್ದರಿಂದ ಎಲ್ಲ ರೀತಿಯ ಮನೋದೈಹಿಕ ಗೊಂದಲಗಳಿಂದ, ಬಂಧನಗಳಿಂದ ಹೊರಬರಲು ನಿಮ್ಮ ಧೈರ್ಯವನ್ನೇ ಸಾರಥಿಯನ್ನಾಗಿಸಿ ಮುನ್ನುಗ್ಗಿ ಎಂದು ಮೀನಾಕ್ಷಿ ಅಮ್ಮ ಎಲ್ಲರಿಗೂ ಕರೆ ನೀಡುತ್ತಾರೆ.

ಚಿಕ್ಕ ವಯಸ್ಸಿನಲ್ಲಿ ಬದುಕಿನಲ್ಲಿ ಆಗುವ ತೊಂದರೆಗಳಿಗೆ ಭರವಸೆಯನ್ನೇ ಕಳೆದುಕೊಂಡು ಹತಾಶರಾಗುವ ಇಂದಿನ ಯುವ ಜನತೆ ಮೀನಾಕ್ಷಿ ಅಮ್ಮನವರಿಂದ ಕಲಿಯಬೇಕಾದದ್ದು ಬಹಳ. ಕಷ್ಟದ ಸುರಿಮಳೆಗಳನ್ನು ಎದುರಿಸಿದ ನಂತರವೇ ಸುಖದ ಅರಿವಾಗುವುದು… ಅವುಗಳ ನಡುವಿನ ವ್ಯತ್ಯಾಸದ ಅರಿವು ಕೂಡ. ಬಿರು ಬಿಸಿಲಿನ ನಂತರ ತಂಗಾಳಿಯ ಹೊತ್ತು ತರುವ ಹಾಗೆಯೆ ನೋವು, ಸಂಕಟ, ತೊಂದರೆಗಳು ಬದುಕಿನ ಬವಣೆಯ ಭಾಗಗಳು. ಕಹಿಯನ್ನು ಅರಿತಿದ್ದರೆ ನಮಗೆ ಸಿಹಿಯ ಪ್ರಾಮುಖ್ಯತೆ ಗೊತ್ತಾಗುವುದು ಅಲ್ಲವೇ.

ಪ್ರತಿ ಸೂರ್ಯಾಸ್ತದ ಹಿಂದೆ ಒಂದು ಸೂರ್ಯೋದಯ ಇರುವಂತೆಯೇ ಪ್ರತಿಯೊಂದು ದುಃಖದ ಕಾರ್ಮೋಡವನ್ನು, ಅಂಧಕಾರವನ್ನು ಕಳೆಯಲು ಬೆಳಕು ಬಂದೇ ಬರುತ್ತದೆ. ನಾವು ಮಾಡಬೇಕಾದದ್ದು ಕೇವಲ ಭರವಸೆ ಎಂಬ ಪುಟ್ಟ ಕಿರುಹಣತೆಯನ್ನು ನಮ್ಮ ಎದೆಯಲ್ಲಿ ಹಚ್ಚಿಟ್ಟು ಕಾಯುತ್ತಿರಬೇಕು.


One thought on ““ಸಾಧನೆಗೆ ವಯಸ್ಸಿನ ಹಂಗಿಲ್ಲ”ವೀಣಾ ಹೇಮಂತ್‌ ಗೌಡ ಪಾಟೀಲ್‌ ಅವರ ಬರಹ

  1. ಲೇಖನ ತುಂಬಾ ಚೆನ್ನಾಗಿದೆ ಮೇಡಂ

Leave a Reply

Back To Top