ಲಹರಿ ಸಂಗಾತಿ
ನಾಗರಾಜ ಬಿ.ನಾಯ್ಕ
“ಮುಂಜಾನೆಯ ಧ್ಯಾನ”

ಪ್ರಕೃತಿ ಎನ್ನುವ ನಮ್ಮ ಮುಂದಿನ ಕೌತುಕ. ಅನೇಕ ವಿಸ್ಮಯ ವಿಶಿಷ್ಟತೆಗಳೇ ಅದರ ಸ್ವರೂಪ. ನಾವು ಬದುಕುವ ಬದುಕು ಒಂದೆಡೆ ಆದರೆ. ಈ ಬುವಿಯಲ್ಲಿ ನಮ್ಮಂತೆ ಬದುಕುವ ಜೀವಿಗಳದ್ದೂ ಒಂದು ಸಂಭ್ರಮ ಇದೆ. ಮುಂಜಾನೆಯ ಖುಷಿಗೊಂದು ಅದ್ಭುತ ಭಾವ ಜಗತ್ತು ನಮಗಾಗಿ ತೆರೆದುಕೊಳ್ಳುತ್ತದೆ. ಅದೇ ಪುಟಾಣಿ ಹಕ್ಕಿಗಳ ಚಿಲಿಪಿಲಿ ಹಾಡು. ಪ್ರಕೃತಿಯ ನಿರೂಪಣೆಗಳಲ್ಲಿ ನಿಶ್ಯಬ್ದದ ಮೌನದಲ್ಲಿ ಹಕ್ಕಿಯ ಹಾಡು ಒಂದು ಧನಾತ್ಮಕ ಸಂವೇದನೆಯನ್ನು ನಮಗೆ ನೀಡುತ್ತದೆ. ಸಮಯವನ್ನು ನಾವೇ ಹೊಂದಿಸಿಕೊಂಡು ಆಲಿಸಿದರೆ ಗಿಡ ಮರಗಳ ತುದಿಯಿಂದ ನಾನಾ ರಾಗದ ಸಂಗೀತ ನಮಗೆ ಕೇಳಿಸುತ್ತದೆ. ಹಕ್ಕಿಗಳಿಗೆ ಬೆಳಗು ಒಂದು ಖುಷಿಯ ಕ್ಷಣ. ಸ್ವಲ್ಪ ಕತ್ತಲಿದ್ದರೆ ಗೂಡಲ್ಲಿ ಕೂತು ಹಾಡುವ ಹಕ್ಕಿಯ ಹಾಡಿಗೆ ಮನಸು ಕುಣಿಯುತ್ತದೆ. ಬೆಳಗಾದರೆ ಬೆಳ್ಳಕ್ಕಿ ಬಳಗ ಹಾರುತ್ತದೆ. ಮತ್ತೆ ಮತ್ತೆ ಸೋಜಿಗದ ಸಂತಸ ಅದರ ರೆಕ್ಕೆಗಳ ಭರವಸೆ.
ಮುಗಿಲ ಕಡೆಗೆ ಹಾರುವ, ತೂಗುವ ಮಂಚದಂತೆ ಜೋಕಾಲಿ ಹೊಡೆಯುವ, ಆ ಕಡೆ ಈ ಕಡೆ ಇಣುಕಿ ಮತ್ತೆಲ್ಲೋ ಹಾರುವ ಅದರ ಚಟುವಟಿಕೆ ಸುಮ್ಮನೇ ಕುಳಿತ ನಮ್ಮ ಮನಸ್ಸು ಗೆಲ್ಲುತ್ತದೆ. ಒಂದಕ್ಕಿಂತ ಒಂದು ಚೆಂದ ಎನ್ನುವಂತೆ ಅದರ ಹಾಡು ಸಾಗುತ್ತದೆ. ಉಸಿರು ಕೊಟ್ಟ ಹಸಿರ ಮಡಿಲಲ್ಲಿ ಮರವೇರಿ ಕುಳಿತ ಹಕ್ಕಿಗಳ ಬದುಕು ನಮಗೆ ಒಂದು ಅಪರೂಪದ ಸ್ಫೂರ್ತಿಯಾಗುತ್ತದೆ. ಹಳ್ಳಿಗಳ ಸಹಜ ಸೌಂದರ್ಯದ ಪ್ರತೀಕ ಇದು.
ಹಾರುತ್ತಾ ಹಾರುವ ಹೂಗಳೇ ಹಕ್ಕಿಗಳು. ಗಿಡ ಮರಗಳ ಒಂದು ಒಲವಿನ ಪರಿಚಯ ಅದರದ್ದು. ಪ್ರತಿ ಮರದ ಟೊಂಗೆಯೂ ಅದರದ್ದೇ. ಆದರೆ ಯಾವುದಕ್ಕೂ ಅಂಟಿಕೊಂಡಿರದ ಭಾವ ಅದರದ್ದು. ಪ್ರಕೃತಿದತ್ತ ಆಹಾರ ಅದರ ಧನ್ಯತೆ. ಒತ್ತಡದ ಬದುಕಿಗೆ ಒಂದು ಅದ್ಭುತ ಪಾಠ ಹೇಳುವ ಈ ಪುಟಾಣಿ ಬಳಗದ ಹಾಡನ್ನು ನಾವು ಒಮ್ಮೆ ಕೂತು ಕೇಳಬೇಕು ಅಷ್ಟೇ……….ಹಾಗೆ ಕೇಳಿದರೆ ಹೊಸ ದಿನದ ಮುನ್ನುಡಿಗೆ ನಾವು ಧ್ಯಾನಿಸಿದ ಅನುಭವ ಖುಷಿ ನಮ್ಮದಾಗುತ್ತದೆ. ಮನಸ್ಸು ಹಗುರವಾಗುತ್ತದೆ. ಭಾವ ಭರವಸೆ ಯಾಗುತ್ತದೆ. ಬದುಕು ಒಂದು ಒಳಿತಿನ ಗೆಲುವಾಗಿ ಸಾಗುತ್ತದೆ……….

ನಾಗರಾಜ ಬಿ.ನಾಯ್ಕ.
ಹುಬ್ಬಣಗೇರಿ.
ಕುಮಟಾ.
ನೆಮ್ಮದಿಯ ಅನುಭೂತಿ ಕಟ್ಟಿ ಕೊಡುವ ಬರಹ..ಚೆನ್ನಾಗಿದೆ ಸರ್..