ಪುಸ್ತಕ ಸಂಗಾತಿ

ಹುಲಿಕಡ್ಜಿಳ

ಸರಳ ಜೀವನ ಸೂತ್ರ ಪಠಿಸುವ ಕಥೆಗಳು- ಹುಲಿಕಡ್ಜಿಳ

ತೀರ್ಥಹಳ್ಳಿಯ ಒಡ್ಡಿನ ಬೈಲಿನ ಹರೀಶ ಟಿ. ಜೆ. ಎಂದೇ ಹೆಸರಾಗಿರುವ ಹರೀಶ ಮಿಹಿರ ಇವರು ಮೂಡಬಿದಿರೆ ಆಳ್ವಾಸ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ನೀಲಿನದಿ ಕಥಾ ಸಂಕಲನದಿಂದ ಈಗಾಗಲೇ ಕಥಾ ಸಾಹಿತ್ಯ ಲೋಕದಲ್ಲಿ ಪರಿಚಿತರು ಕೂಡಾ.ಅವರ ಎರಡನೇ ಕಥಾ ಸಂಕಲನ ಹುಲಿಕಡ್ಜಿಳ. ಸಂಕಲನದ ಹೆಸರೇ ಭಯ ಬೀಳಿಸುವಂತದ್ದು. ಆದರೆ ಒಳಪುಟದಲ್ಲಿ ಸಾಮಾಜಿಕ ಬದುಕಿನ ಹಲವು ತಿಕ್ಕಾಟಗಳು ಸಂಘರ್ಷಗಳು ಸಮ ಕಾಲೀನ ಜಗತ್ತು ಆಧುನಿಕತೆಯ ಜೊತೆಗೆ ನಡೆಯಬಾರದ ನಡೆಯಲ್ಲಿ ಹಾದಿ ತಪ್ಪುತ್ತಿರುವುದನ್ನು ವಿಶ್ಲೇಷಿಸುತ್ತಾ, ಬದುಕಿನ ನೈಜ ಸಾರ ಏನು? ಎಂಬುದನ್ನು ಓದುಗನಿಗೆ  ತಿಳಿಸುವ ಪ್ರಯತ್ನ ಮಾಡುತ್ತವೆ. ಬಹುತೇಕ ದಕ್ಷಿಣಕನ್ನಡ,ಉಡುಪಿಯ ಸಾಂಸ್ಕೃತಿಕ ಹಿನ್ನೆಲೆ ಜನಜೀವನದ ಒಂದು ಚಿಕ್ಕ ಒಳನೋಟಕ್ಕೆ ಈ ಕಥೆಗಳು ಸೂಡಿ ಹಿಡಿಯುತ್ತವೆ. ನಮ್ಮ ಉಚ್ಚ ಪಾರಂಪರಿಕ ನೆಲೆಗಟ್ಟು, ಹೊಸತನಕ್ಕೆ ತೆರೆದುಕೊಳ್ಳುವ ಹುಮ್ಮಸ್ಸಿನಲ್ಲಿ ತಳಪಾಯವನ್ನು ಗಟ್ಟಿ ಮಾಡದ ಮನೆಗಳಲ್ಲಿಯ ನೋವು ನಲಿವು, ಹಸಿವು ಸಂಕಟಗಳ ದರ್ಶಿಸುತ್ತವೆ . ಕಥೆಗಳು. ಹಣದ ಮದ ಅದರ ಅಟ್ಟಹಾಸದ ನಡುವೆಯೇ ಬಡವನಲ್ಲೂ ಇರಬೇಕಾದ ಆತ್ಮಾಭಿಮಾನ ಹಾಗೂ ಆತ್ಮವಿಶ್ವಾಸಭಾವದ ಪ್ರತಿಫಲನವನ್ನು ನಿರೂಪಿಸುತ್ತವೆ. ಕೆಲವು  ಕಥೆಗಳು ನಿಸರ್ಗದತ್ತ ಜೀವನ ವಿಧಾನದ ಅಗತ್ಯತೆಯನ್ನು ಮನಗಾಣಿಸುತ್ತವೆ. ಆಧುನಿಕತೆ ವರವೆಂದು ಬಗೆದು ಹೊಸ ಜಗತ್ತಿಗೆ ತೆರೆದುಕೊಳ್ಳುವ ಅನಿವಾರ್ಯತೆ ಇಂದಿನದು. ಆದರೆ ಅದು ನಿಸರ್ಗದ ನಿಯಮಕ್ಕೆ ತೀರಾ ವಿರುದ್ಧವಾಗಿ, ಮನೆಯನ್ನೇ ಪ್ರಯೋಗ ಶಾಲೆಯನ್ನಾಗಿಸಿಕೊಂಡರೇ ಒಂದಲ್ಲ ಒಂದು ದಿನ ವಿಷಾನಿಲಗಳ ಪ್ರಭಾವ ಕಟ್ಟಿಟ್ಟಿದ್ದು ಎಂಬುದನ್ನು ಮನಗಾಣಿಸುತ್ತವೆ.

ಸಂಕಲನದ ಮೊದಲ ಕಥೆ ಹುಲಿಕಡ್ಜಿಳ.

ಜೇನು ಹುಳುವಿನಂತೆ ಗೂಡು ಕಟ್ಟುವ ಕಚ್ಚಿದರೆ ಭಯಂಕರ ಉರಿ ತರುವ ಕಡ್ಜಿಳ ಹುಳುಗಳು ಬಹುತೇಕ ಉತ್ತರ ಮತ್ತು ದಕ್ಷಿಣಕನ್ನಡದ ಸಣ್ಣಪುಟ್ಟ ಕಾನುಗಳಲ್ಲೂ ಕಾಣಸಿಗುತ್ತವೆ.ಅಂತಹ ಭಯಂಕರ ಹುಳುವನ್ನು ಹೊಸಕಿ ಹಾಕುವುದು ಸಾಮಾನ್ಯದ ಕೆಲಸವಲ್ಲ. ಆದರೆ ಮನೋಬಲ ಹಾಗೂ ಅದನ್ನು ಕೊನೆಗಾಣಿಸಬಲ್ಲ ಕೆಲವು ತಂತ್ರಗಳು ತಿಳಿದಿದ್ದರೆ ಅದನ್ನು ಬುಡಸಮೇತ ನಾಶ ಮಾಡುವುದು ಕಷ್ಟವೇನಲ್ಲ. ಬಡವ ನಾಗರಾಜಣ್ಣನ ಮಗಳು ಪುಷ್ಪ ಶಾಲೆಗೆ ಹೋಗುತ್ತಿದ್ದವಳು ಒಮ್ಮೆಲೇ ಶಾಲೆಗೆ ಹೋಗಲು ಹಿಂದೇಟು ಹಾಕತೊಡಗುವುದು, ಅದಕ್ಕೆ ಕಾರಣ ಶ್ರೀಮಂತ ಯುವಕನಾದ ತಾರಗೊಳ್ಳಿಯ ನಾಗೇಶ ಎಂಬಾತ ಆಕೆಯನ್ನು ತನ್ನೊಂದಿಗೆ ಬರುವಂತೆ ಪೀಡಿಸುತ್ತಿರುವುದು, ಅದನ್ನು ತಿಳಿದ ತಂದೆ ನಾಗರಾಜಣ್ಣ ಬಹಳ ಚಾತುರ್ಯದಿಂದ ಆ ಹುಳುವನ್ನು ಹೊಸಕಿ ಹಾಕುವುದು ಇದಿಷ್ಟೇ ಕಥೆ. ನಾಗರಾಜಣ್ಣ ಇಲ್ಲಿ ಬಡತನಕ್ಕೆ ಪ್ರತಿನಿಧಿಯಾಗದೇ, ಬದುಕಿನ ಸಮಸ್ಯೆಗಳನ್ನು ಎದುರಿಸುವ ಸಮರ್ಥ ವ್ಯಕ್ತಿತ್ವಕ್ಕೆ ಪ್ರತಿನಿಧಿಯಾಗುತ್ತಾನೆ. ಪ್ರಾಣಿ ಜಗತ್ತಿನಲ್ಲೂ ಕಾಣುವುದು ಇದೇ ತತ್ವವೇ . ಹಾಗಾಗಿ ಸಾಮಾಜಿಕ ಹಿನ್ನೆಲೆಯಲ್ಲಿ ಕಟ್ಟಿದ ಪಾತ್ರವಾದರೂ ಅದು ನಿರೂಪಿಸುವುದು ಸ್ವರಕ್ಷಣೆಯ ಅಗತ್ಯತೆಯನ್ನು.ದುರಾಚಾರವನ್ನು ಸಹಿಸುವುದು ಅಪರಾಧವೇ. ಅಂತಹ ನೀಚನನ್ನು ಮಟ್ಟ ಹಾಕಲೇ ಬೇಕು.ಇಂದಿನ ಸಮಾಜದಲ್ಲೂ ಇರುವ ಇಂತಹ ಪಾತ್ರಗಳು ಅಸಹಾಯಕರ ಕಣ್ಣೀರಿನಲ್ಲೇ ಸುಖಿಸುತ್ತವೆ. ಹಾಗಾಗಿ ಕಥೆಗಾರರ ಈ ಸಂದೇಶ ಕಥೆಯ ಮಹತ್ವವನ್ನು ಹೆಚ್ಚಿಸಿದೆ.

‘ಬೇಗೆ’ ಕಥೆಯಲ್ಲಿ  ಸಾಂಸಾರಿಕ ಜೀವನದ ಅತೃಪ್ತಿಯಲ್ಲಿ ಬೆಂದು ನರಳುವ ಹೆಣ್ಣುಗಳು, ಹೊರಜಗತ್ತಿನಲ್ಲಿ ಸುಂದರ ಸಂಸಾರದ ಮೊಗವಾಡ ಹಾಕಿಕೊಂಡಿರುವುದು, ಹೆಣ್ಣುಗಳು ಜೀವನವೀಡಿ ಹೀಗೆ ಕೊರಗುತ್ತಾ ಬದುಕಬೇಕಾದ ಅನಿವಾರ್ಯತೆಯನ್ನು ಹೇಳುತ್ತಾರೆ. ಆ ಮೂಲಕ ಭಾರತೀಯ ಸಮಾಜದ ಸಾಂಸ್ಕೃತಿಕ ರೂಹುಗಳನ್ನು ಆಧುನಿಕ ನೆಲೆಯಲ್ಲಿ ಅರ್ಥೈಸಿಕೊಳ್ಳಲಾಗದ ನಮ್ಮ ಯುವಜಗತ್ತು ಸಾಂಪ್ರದಾಯಿಕ ಕಟ್ಟಳೆಗಳನ್ನು ಮುರಿಯುವ ಅಗತ್ಯವಿದ್ದರೂ ಅದು ಪರಂಪರೆಯನ್ನು ಕಳೆದುಕೊಳ್ಳದೇ ಇರುವುದೇ ಸಭ್ಯತೆ ಎಂಬುದು ಕಥೆಯಲ್ಲಿ ಧ್ವನಿತವಾಗಿದೆ. ಆಧುನೀಕರಣದ ಅವಾಂತರ, ಹೊಸ ಜೀವನ ಶೈಲಿಯ ಆಕಾಂಕ್ಷೆಗೆ ಹಣವಿದ್ದರಾಯ್ತು ಎಂದುಕೊಂಡ ಹೆಣ್ಣು ಜೀವಗಳು ಮನೆಯವರು ಒಪ್ಪಿದ ಸಂಬಂಧಕ್ಕೆ ಗೋಣು ಕೊಟ್ಟು, ಮದುವೆಯಾಗುತ್ತಾರೆ. ಆದರೆ ವಿವಾಹವಾದ ಮೇಲೆಯೇ ಆ ಗಂಡಿನ ನಿಜದ ರೂಪ ಗೊತ್ತಾಗುವುದು. ಹಾಗಾಗಿ ಕಥೆಯ ಮುಖ್ಯ ಪಾತ್ರ ಅನಿತಾ ತನ್ನೊಂದಿಗಿನ ಯಾವ ಬಂಧಗಳಿಗೂ ಬೆಲೆಕೊಡದ, ಆಕೆಯ ಆಕಾಂಕ್ಷೆಗಳನ್ನು ಅರ್ಥಮಾಡಿಕೊಳ್ಳದ ಪತಿಯನ್ನು ಬಿಡುವ ವಿಚಾರ ಮಾಡುವುದಿಲ್ಲ. ಮಕ್ಕಳಿಗಾಗಿ ಅವನೊಂದಿಗೆ ಏಗುವುದೇ ಇರುವ ಏಕೈಕ ಉಪಾಯ ಎನ್ನುತ್ತಾಳೆ. ಇದು ಭಾರತೀಯ ಸಮಾಜ ಹೇರಿದ ಅಲಿಖಿತ ಸಂವಿಧಾನಾತ್ಮಕ ಕಾನೂನು.ಮುಂದುವರೆದ ರಾಷ್ಟೃಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯ ಹಾಗೂ ಬದುಕಿಗೆ ಮಹತ್ವವಿದೆ.ಅದೇ ನಮ್ಮಲ್ಲಿ ಬಂಧನಗಳಿಗೆ ಮಹತ್ವವಿದೆ. ಹಾಗಾಗಿ  ಲೇಖಕರು ಇಲ್ಲಿಯ ಹೆಣ್ಣು ಜೀವಗಳ ತಟ್ಟಿ ಮಾಡಾಡಿಸಿದರೂ, ಅಂತಹ ಸಂದೇಶವನ್ನೂ ನೀಡಲಾರರು.

‘ಕಟೆ’್ಟ  ಕಥೆ ಕೂಡಾ ಇನ್ನೊಂದು ಪ್ರಮುಖ ಸಂದೇಶವನ್ನೇ ನಿರೂಪಿಸುತ್ತದೆ. ಶ್ರೀಮಂತ ಗಬಡಿ ನಾಗ್ರಾಜರಾಯರ ಕುಟುಂಬ ಹೇಗೆ ತೋಟದ ಮನೆಯವರೆಂದು ಕರೆಸಿಕೊಂಡಿತ್ತೋ ಹಾಗೆ ಬೇರೆಯವರಲ್ಲಿ  ಕೆಲಸಕ್ಕೆ ಹೋಗುವ ಹಾಗಾಗುವ ಚಿತ್ರಣದೊಂದಿಗೆ   ಏಕತಳಿ ಬೇಸಾಯದಿಂದಾಗುವ ಪರಿಸರದ ಮೇಲಿನ ದುಷ್ಪರಿಣಾಮ, ಭೂಮಿಯ ಫಲವತ್ತತೆಯನ್ನು ಕಸಿದುಕೊಳ್ಳುವ ಇಂತಹ ಬೇಸಾಯ ಕೇವಲ ನಿಸರ್ಗ ವಿರೋಧಿ ಮಾತ್ರ ಆಗಿರದೇ ವಾಣಿಜ್ಯ ಜಗತ್ತಿನಲ್ಲೂ ಕೆಲವೊಮ್ಮೆ ವೈಪರಿತ್ಯಗಳನ್ನು ಹುಟ್ಟಿಸಿ, ಬೆಳೆದ ರೈತನ ಮೂಲಕ್ಕೆ ಕೊಡಲಿಪೆಟ್ಟು ಹಾಕುತ್ತದೆ ಎಂಬುದನ್ನು ವಿವರಿಸುತ್ತದೆ. ಇಂತಹ ಬೇಸಾಯ ಪದ್ಧತಿ ಆತನ ಬದುಕನ್ನೆ ನಾಶ ಮಾಡಿದ ಅನೇಕ ಉದಾಹರಣೆಗಳಿವೆ. ಆದಾಗ್ಯೂ ಕುರಿಗಳಂತೆ ರೈತರು ಈ ರೀತಿಯ ಬೇಸಾಯವನ್ನು ಹಿಂದೆಮುಂದೆ ನೋಡದೇ, ಕಾರ್ಪೊರೇಟ್ ಜಗತ್ತಿನ ಆಮೀಷಕ್ಕೆ ಒಳಗಾಗಿ ಅವಲಂಬಿಸಿಕೊಂಡು ಬರುತ್ತಿದ್ದಾರೆ.ಇದ್ದ ಸೊಗಸಾದ ಗದ್ದೆ ಹೊಲಗಳನ್ನು ಕೆಲವರು ತೋಟಗಳನ್ನಾಗಿ ಪರಿವರ್ತಿಸಿ ತೆಂಗು ಕಂಗು, ಬಾಳೆ, ಹತ್ತಿ ಅಂತೆಲ್ಲ ವಾಣಿಜ್ಯ ಬೆಳೆ ಬೆಳೆಯುತ್ತಾರೆ. ಕೆಲವೊಮ್ಮೆ  ವಾಣಿಜ್ಯ ಜಗತ್ತಿನಲ್ಲಿ ಏಕಾಏಕಿ ಬೆಲೆ ಕುಸಿತಗೊಂಡು ಸಾಲಗಾರರಾಗಿ, ದುರ್ಭರ ಬದುಕನ್ನು ನಡೆಸುವಂತಾಗುತ್ತದೆ.

ಗೊಂಬೆ ಕಥೆಯ ಸುಂದರ ಹುಡುಗಿ ಶ್ರೀಲತಾ ತನ್ನ ನೀತಿಯಿಲ್ಲದ ನಡೆಯಿಂದ ಹೇಗೆ ಬದುಕಲ್ಲಿ ಹಾದಿ ತಪ್ಪಿ ದುರ್ದೆಶೆಗೆ  ಒಳಗಾದಳು ಎಂಬುದರಿಂದ ಓದಿಸಿಕೊಳ್ಳುತ್ತದೆ.ಆಧುನಿಕ ಬದುಕಿನ ಹೊಸ ಹೆಜ್ಜೆಗಳು, ಅವುಗಳ ವಿಫಲತೆ,ತಮ್ಮತನ ಇಟ್ಟುಕೊಳ್ಳಲಾಗದೇ ಆಧುನಿಕತೆಯ ಝಗಮಗಿಸುವಿಕೆಯಲ್ಲಿ  ಮೆರೆವ ಆಸೆಯಲ್ಲಿ ಆ ಬೆಂಕಿಗೆ ಬಲಿಯಾಗುವ ಶ್ರೀಲತಾ ದುರಂತ ಪಾತ್ರಕ್ಕೆ ಸಾಕ್ಷಿಯಾಗುತ್ತಾಳೆ.

‘ತವರು’ಕಥೆ ನಮ್ಮ ನಿಮ್ಮ ಮನೆಯ ಹಿರಿಯ ಜೀವಗಳ ನಡೆನುಡಿ,  ಬಂಧು ಬಾಂಧವರ ನಡುವಿನ ಬಾಂಧವ್ಯ, ಹೆಣ್ಣು ಮಕ್ಕಳ ತವರು ವ್ಯಾಮೋಹವನ್ನುತೆರೆದಿಟ್ಟಿದೆ.

ಸಂಕಲನದಲ್ಲಿ ಒಟ್ಟು ಹನ್ನೊಂದು ಕತೆಗಳಿವೆ.ಹೆಚ್ಚಿನ ಕತೆಗಳು ಸ್ತ್ರೀ ಪಾತ್ರವನ್ನೆ ಮುಖ್ಯ ನೆಲೆಯಲ್ಲಿ ಗ್ರಹಿಸುತ್ತಾ ವಿಸ್ತಾರಗೊಳ್ಳುತ್ತವೆ. ಹುಲಿಕಡ್ಜಿಳ ಕತೆಯ ಮುಗ್ಧ ಹುಡುಗಿ ಪುಷ್ಪಾ, ‘ಬೇಗೆ ‘ಕತೆಯ ದಾಂಪತ್ಯ ಜೀವನದ ಅತೃಪ್ತ ಪಾತ್ರಗಳಾದ ಅನಿತಾ ಮತ್ತು ವಾಣಿ, ತವರು ಕತೆಯ ತವರು ವ್ಯಾಮೋಹದ ಕತೆಗಾರರತಾಯಿ, ಸಾಕಲಾರದೆನ್ನ.. ಕಥೆಯ ಕರುಣಾಮಯಿ ಗೌರಿ, ಕುಡ್ಗೋಲು ಮುರ್ಗ ಕಥೆಯ ಸ್ವಾರ್ಥಮುಖಿ ಭಾವನಾ, ಗೊಂಬೆ ಕತೆಯ ಬಜಾರಿ ಶ್ರೀಲತಾ ಹೀಗೆ ಸ್ತ್ರೀ ಪಾತ್ರಗಳು ಸಂಕಲನದಲ್ಲಿ ಎದ್ದುಕಾಣುತ್ತವೆ.

ಬಹಳ ನಿರರ್ಗಳ ಮಾತುಗಾರ  ಹಾಗೂ ಹಾಸ್ಯ ಮಿಶ್ರಿತ ಮಾತಿನ ಧಾಟಿಯ ಹರೀಶ ತಮ್ಮ ಬದುಕಿನ ಅನುಭವಗಳ ಮೂಲಕವೇ ಕತೆ ಹೆಣೆಯುತ್ತಾರೆ.  ಶೀರ್ಷಿಕೆ  ಕಥೆ ‘ಹುಲಿಕಡ್ಜಿಳ’ದ  ಹೊರತಾಗಿ ಉಳಿದ ಕತೆಗಳು ಜೀವಪರ ನಿಲುವನ್ನು, ತಾಳ್ಮೆ, ಸರಳತೆ, ಸಹಜತೆ, ಕರುಣೆ, ಪ್ರೀತಿ, ಬಾಂಧವ್ಯದ ಸುತ್ತಲೇ ಗಿರಕಿ ಹೊಡೆದು, ಸಹೃದಯರಿಗೆ ಇಷ್ಟವಾಗುತ್ತವೆ. ಬದುಕಿನೊಂದಿಗೆ ಬೆಸೆದುಕೊಂಡ ಜೀವಗಳನ್ನು ಅವರು ಪ್ರೀತಿಸುವ ಬಗೆ ಅದನ್ನು ಚಿತ್ರಶಾಲೆಯಂತೆ ಒಂದೊಂದು ಪಾತ್ರದೊಳಗಣ ಅನುಬಂಧವನ್ನು ಒಟ್ಟಂದದಲ್ಲಿ ಒಪ್ಪಂದದಂತೆ ಕಟ್ಟಿಕೊಟ್ಟರೀತಿ ಸೊಗಸಾಗಿದೆ.

********

ನಾಗರೇಖಾ ಗಾಂವಕರ್

Leave a Reply

Back To Top