ಅಂಕಣ ಸಂಗಾತಿ
ಸಕಾಲ
ಶಿವಲೀಲಾ ಹುಣಸಗಿ
ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ
ಸುಳ್ಳಿನ ಮಾಲೆಯ ಕೊರಳಿಗೆ ಸೂಡಿ
ಕಳ್ಳನೊಬ್ಬನನು ಗುರುವನು ಮಾಡಿ
ಬಡವರ ಹೊನ್ನನು ಕಾಣಿಕೆ ನೀಡಿ
ಧರ್ಮವ ಮೆರೆವರ ನೋಡಯ್ಯ!
–ಕುವೆಂಪು
ನಂಬಿಕೆ,ವಿಶ್ವಾಸಗಳು ಸಂಸಾರಕ್ಕೆ ಭದ್ರ ಬುನಾದಿಯೆಂಬುದನ್ನು ಎಷ್ಟೋ ದಂಪತಿಗಳು ಮರೆತಂತಿದೆ.ಗಂಡ,ಹೆಂಡತಿ ನಡುವೆ ಸುಳ್ಳು ತಾಂಡವನಾಡಿದಾಗ ಅದು ಗಂಡಗಾಗಲಿ,ಹೆಂಡಿಗಾಗಲಿ ಒಂದಿಷ್ಟು ದಿನ ಸುಖವೇ.ಸತ್ಯ ಗೋಚರವಾಗುತ್ತಿದ್ದಂತೆ ಇಬ್ಬರ ಮುಖಗಳು ಸಪ್ಪೆ ಅಥವಾ ಭೂಕಂಪವಾದಾಗ ಸಿಗುವ ಅವಶೇಷಗಳು. ಅನುಮಾನ, ಅವಮಾನ ದಾಂಪತ್ಯದ ಬಿರುಕಿಗೆ ಮೂಲ ಅಸ್ರ್ತ.ಸತ್ಯ ಹೇಳಲಾಗದೆ ಸುಳ್ಳಿಗೆ ಗೋಣು ಕೊಡಲಾಗದೆ ಒದ್ದಾಡುವಂತಾಗುವ ಅದೆಷ್ಟೋ ಕುಟುಂಬಗಳು ನೆಮ್ಮದಿ ಕಳಕೊಂಡು ಸುಳ್ಳಿನ ಬೇಲೆಯಲಿ ಉಸಿರು ಗಟ್ಟಿ ಸಾಯುವಂತಾಗುವ ಕ್ಷಣಗಳನ್ನು ಒಂದಲ್ಲ ಒಂದು ಕಾರಣದಿಂದ ಎಲ್ಲರೂ ಅನುಭವಿಸಿರುತ್ತಾರೆ.ಸಂಸಾರದ ಜವಾಬ್ದಾರಿ ಹೊತ್ತವರಿಗೆ ಸುಳ್ಳಿನ ಪರಿಣಾಮದ ಬಗ್ಗೆ ತಿಳಿದೆ ಇರುತ್ತೆ,ಆದರೆ ಸುಳ್ಳಿನ ಸುತ್ತಮುತ್ತ ಇರುವ ಅನೇಕ ವಿಚಾರಗಳತ್ತ ಗಮನಹರಿಸಿದಷ್ಟು ಕಡಿಮೆಯೇ
ನನಗೂ ಹಾಗನಿಸಿದ್ದಿದೆ.ಸುಳ್ಳಿಗೆ ಬಲವಿಲ್ಲವೆಂಬ ಸತ್ಯ ತಿಳಿದವಳು. ಸುಳ್ಳಾಡುವವರ ಮುಖವಾಡ ಕಣ್ಣ ಎದುರು ಬಯಲಾದ ಸನ್ನಿವೇಶದಲ್ಲಿ ಮೂಕವೇದನೆ ಹೃದಯದಲ್ಲಿ.ನಂಬಿಕೆಯು ಕಾರಣ ಕೇಳದೆ ಸುಳ್ಳನ್ನು ಅಪ್ಪಿಕೊಂಡಂತೆ.
ಎಷ್ಟೊಂದು ವಿಚಿತ್ರ ನೋಡಿ,ನಾವೆಲ್ಲರೂ ಸತ್ಯ ಹರಿಶ್ಚಂದ್ರನ ತುಣುಕುಗಳಾದರೆ ಸುಳ್ಳಿಗೆ ಎಲ್ಲಿಯ ಬೆಲೆ?. ಅವಕಾಶ ಅನುಕೂಲತೆಗೆ ಸುಳ್ಳು ವೇಷಧರಿಸಿ, ನಮ್ಮ ಆಸು ಪಾಸು ಬೆನ್ನಿಗೆ ಬಿದ್ದ ನೆರಳಂತೆ ಸುತ್ತುತ್ತಿರುತ್ತದೆ.ಸುಳ್ಳೆಂಬ ಗ್ರಹ ಒಮ್ಮೊಮ್ಮೆ ಗ್ರಹಚಾರ ಬಿಡಿಸಿದಂತೆ.ಸತ್ಯ ಮತ್ತು ಸುಳ್ಳು ನಾಣ್ಯದ ಮುಖಗಳಿದ್ದಂತೆ.ಸುಳ್ಳಿಗೂ ಒಂದು ಗತಕಾಲವಿದೆಯೆಂದರೆ ಆಶಚಸುಳ್ಳು ಹೇಳುವ ರೋಗವನ್ನು, ಮೈಥೋಮೇನಿಯಾ ಮತ್ತು ಸ್ಯೂಡೋಲಾಜಿಯಾ ಫೆಂಟಾಸ್ಟಿಕಾ ಎಂದೂ ಕರೆಯುತ್ತಾರೆ. ಇದು ಸಮಸ್ಯಾತ್ಮಕ ನಡವಳಿಕೆಯಾಗಿದ್ದು, ಈ ಕಾಯಿಲೆಗೊಳಗಾದ ವ್ಯಕ್ತಿಗೆ ಸುಳ್ಳು ಹೇಳುವುದು ಅಭ್ಯಾಸವಾಗಿರುತ್ತದೆ.ಈ ಸುಳ್ಳುಗಳು ಸಂದರ್ಭಕ್ಕೆ ಅನುಗುಣವಾಗಿ ತನ್ನನ್ನು ತಾನು ನಾಯಕ ಅಥವಾ ಬಲಿಪಶು ಎಂದು ಬಣ್ಣಿಸಿಕೊಳ್ಳುವುದನ್ನು ಹೊರತುಪಡಿಸಿ ಯಾವುದೇ ಸ್ಪಷ್ಟ ಉದ್ದೇಶವನ್ನು ಹೊಂದಿರುವುದಿಲ್ಲ. ಇದನ್ನು ವಿವರಿಸಿದ ಮೊದಲ ವ್ಯಕ್ತಿ ಆ್ಯಂಟೋನ್ ಡೆಲ್ಬ್ರಕ್.ಅವರು ೧೮೯೫ ರಲ್ಲಿ ಈ ಕುರಿತಾದ ಲೇಖನವನ್ನು ಬರೆದಿದ್ದಾರೆ.ಈ ರೋಗವುಳ್ಳವರು ಸಂಪೂರ್ಣ ಅಸಮರ್ಪಕವಾದ ಅಥವಾ ಭಾಗಶಃ ಸತ್ಯವಿರುವ ಸುಳ್ಳನ್ನು ಹೇಳುತ್ತಿರುತ್ತಾರೆ.ಈ ರೋಗನಿರ್ಣಯಕ್ಕೆ ನಿರ್ದಿಷ್ಟವಾದ ಮಾನದಂಡಗಳಲಿಲ್ಲ.ಅನೇಕ ವರ್ಷಗಳ ಕಾಲ ಅಥವಾ ಜೀವಿತಾವಧಿಯ ಕೊನೆಯವರೆಗೂ ಈ ರೋಗ ಕಾಣಿಸಿಕೊಳ್ಳಬಹುದು.ಒತ್ತಡ, ಸ್ವಾಭಿಮಾನಕ್ಕೆ ಧಕ್ಕೆ, ಮುಂತಾದುವುಗಳು ರೋಗದ ಆಂತರಿಕ ಕಾರಣಗಳಾಗಿವೆ.
ಸುಳ್ಳು ಹೇಳುವ ರೋಗದ ಲಕ್ಷಣಗಳಿವೆಯೆಂದರೆ ನಂಬಲೇ ಬೇಕು.
ಸುಳ್ಳು ಹೇಳುವ ನಡವಳಿಕೆಗೆ ಕಾರಣವಾದ ನಿರ್ದಿಷ್ಟ ಉದ್ದೇಶಗಳೇನೆಂದು ಪ್ರಾಯೋಗಿಕವಾಗಿ ವಿವೇಚಿಸಲು ಸಾಧ್ಯವಾಗಿಲ್ಲ. ದೀರ್ಘಕಾಲದ ವಂಚನೆ, ಪತಿ ಪತ್ನಿಯರ ನಡುವಿನ ಮನಸ್ತಾಪಗಳು ಸಹ ಸುಳ್ಳು ಹೇಳುವ ರೋಗಕ್ಕೆ ಕಾರಣವಾಗಬಹುದು.
ರೋಗಗ್ರಸ್ತ ವ್ಯಕ್ತಿಯು ತನಗೆ ಅನುಕೂಲವಾಗುವಂತೆ ಸುಳ್ಳು ಕತೆಯನ್ನು ಹೆಣೆಯುತ್ತಾನೆ. ತನ್ನನ್ನು ತಾನು ನಾಯಕ ಅಥವಾ ಬಲಿಪಶು ಎಂದು ಸಂದರ್ಭಕ್ಕನುಸಾರವಾಗಿ ಬಿಂಬಿಸಿಕೊಳ್ಳುತ್ತಾನೆ. ಆತ ತಾನು ಅತ್ಯಂತ ಧೈರ್ಯವಂತ, ಪ್ರಸಿದ್ಧ ವ್ಯಕ್ತಿಗಳ ಪರಿಚಿತ,ಅಧಿಕಾರವನ್ನು ಹೊಂದಿರುವವನು, ಹಣಕ್ಕೆ ಕೊರತೆಯಿಲ್ಲದವನು ಎಂಬುವುದಾಗಿ ಇತರರ ಮುಂದೆ ತನ್ನನ್ನು ಪರಿಚಯಿಸಿಕೊಳ್ಳುತ್ತಾನೆ.ಕೆಲವು ಮನೋವೈದ್ಯರುಗಳ ಪ್ರಕಾರ ಸುಳ್ಳು ಹೇಳುವಿಕೆ ಹಾಗೂ ಸುಳ್ಳು ಹೇಳುವ ರೋಗಗಳೆರಡೂ ಬೇರೆ ಬೇರೆಯಾಗಿವೆ. ಇನ್ನು ಕೆಲವರು ಇವೆರಡನ್ನೂ ಒಂದೇ ರೋಗವೆಂದು ಪರಿಗಣಿಸುತ್ತಾರೆ.
ಡಯಗ್ನೋಸ್ಟಿಕ್ ಆಂಡ್ ಸ್ಟ್ಯಾಟಿಸ್ಟಿಕಲ್ ಮಾನ್ಯುವಲ್ ಆಫ್ ಮೆಂಟಲ್ ಡಿಸಾರ್ಡರ್ಸ್ ನಲ್ಲಿ ಸುಳ್ಳುಹೇಳುವ ರೋಗವನ್ನು ಪ್ರತ್ಯೇಕ ರೋಗವೆಂದು ಉಲ್ಲೇಖಿಸಲಿಲ್ಲ; ಬದಲಿಗೆ ಇದನ್ನು ಇತರ ಮಾನಸಿಕ ಅಸ್ವಸ್ಥತೆಗಳಾದ ಸಮಾಜ ವಿರೋಧಿ ವ್ಯಕ್ತಿತ್ವ, ಮನ್ನಣೆಯ ದಾಹ ಹಾಗೂ ಹಿಸ್ಟ್ರಿಯೋನಿಕ್ ವ್ಯಕ್ತಿತ್ವ ಅಸ್ವಸ್ಥತೆ ಮುಂತಾದ ಕೆಲವು ರೋಗಗಳ ಲಕ್ಷಣವಾಗಿ ನೀಡಿದ್ದಾರೆ.ಇನ್ನೊಬ್ಬರ ಮೇಲೆ ಹರಿಹಾಯುವಿಕೆ,ಎಲ್ಲದ್ದಕ್ಕೂ ಮತ್ತೊಬ್ಬರನ್ನು ದೂಷಿಸುವುದು ಮುಂತಾದ ಪ್ರವೃತ್ತಿಗಳು ಸುಳ್ಳು ಹೇಳುವ ರೋಗದ ಲಕ್ಷಣಗಳೊಂದಿಗೆ ಸಾಮ್ಯತೆಯನ್ನು ಹೊಂದಿದೆ. ಇಂಟರ್ನ್ಯಾಷನಲ್ ಕ್ಲಾಸಿಫಿಕೇಶನ್ ಆಫ್ ಡಿಸಾರ್ಡರ್ಸ್ – ೧೦ ರ ಪ್ರಕಾರ ಹಾಲ್ಟೋಸ್ ವ್ಯಕ್ತಿತ್ವ ಅಸ್ವಸ್ಥತೆಯೊಂದಿಗೆ ಸುಳ್ಳುಹೇಳುವ ರೋಗವು ಸಹವರ್ತಿ ರೋಗವಾಗಿ ಕಂಡುಬರುತ್ತದೆ.
ಸುಳ್ಳು ಹೇಳುವ ರೋಗವುಳ್ಳ ರೋಗಿಗಳು ಇತರರ ಮೇಲೆ ಒತ್ತಡವನ್ನು ಹೇರುವ ಮೂಲಕ, ಅವರಲ್ಲಿ ಪಾಪಪ್ರಜ್ಞೆ ಉಂಟಾಗುವಂತೆ ಮಾಡುವ ಮೂಲಕ ಅವರೂ ಸುಳ್ಳಾಡುವಂತೆ ಪ್ರಚೋದಿಸುತ್ತಾರೆ ಮತ್ತು ತಮ್ಮ ಸುಳ್ಳನ್ನು ಸಾಬೀತುಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ ಎಂಬುವುದು ಸುಳ್ಳುಪತ್ತೆ ಪರೀಕ್ಷೆಯಲ್ಲಿ ಕಂಡುಬಂದಿದೆ.ಸುಳ್ಳು ಹೇಳುವ ರೋಗವುಳ್ಳವರು ಇಮನೋರೋಗಿಗಳಂತಲ್ಲ. ಸಮಾಜ ವಿರೋಧಿ ವ್ಯಕ್ತಿತ್ವ ಅಸ್ವಸ್ಥತೆಯುಳ್ಳವರು ಬಾಹ್ಯ ಹಾಗು ತಮ್ಮ ಸ್ವಂತ ಲಾಭಕ್ಕೋಸ್ಕರವಾಗಿ, ಉದಾ. ಹಣ, ಅಧಿಕಾರ ಮುಂತಾದವುಗಳಿಗಾಗಿ ಸುಳ್ಳನ್ನು ಹೇಳುತ್ತಾರೆ; ಆದರೆ ಸುಳ್ಳುಹೇಳುವ ರೋಗ ಹೊಂದಿರುವವರು ತಮ್ಮ ಆಂತರಿಕ ಲಾಭಕ್ಕೋಸ್ಕರ ಸುಳ್ಳನ್ನು ಹೇಳುತ್ತಾರೆ. ಆಂತರಿಕ ವ್ಯಕ್ತಿತ್ವ ಅಸ್ವಸ್ಥತೆಯುಳ್ಳವರು ತಮ್ಮಮೇಲಿನ ತ್ಯಜಿಸುವಿಕೆ, ದುರ್ವರ್ತನೆ ಅಥವಾ ನಿರಾಕರಣೆಯ ಭಾವನೆಗಳಿಂದ ಹೊರಬರಲು ಸುಳ್ಳು ಬೆದರಿಕೆ, ಆರೋಪ ಹಾಗೂ ಆತ್ಮಹತ್ಯಾ ಪ್ರಯತ್ನಗಳನ್ನು ಮಾಡುತ್ತಾರೆ; ಆದರೆ ಸುಳ್ಳು ಹೇಳುವ ರೋಗವುಳ್ಳವರು ನಿರಾಕರಣಾ ಭಾವನೆಗಳನ್ನು ಹೊಂದಿರುವುದಿಲ್ಲ, ಬದಲಿಗೆ ಅವರಲ್ಲಿನ ಉನ್ನತಮಟ್ಟದ ಸ್ವಯಂಭರವಸೆ ನಿರಾತಂಕವಾಗಿ ಸುಳ್ಳು ಹೇಳಲು ಸಹಾಯಮಾಡುತ್ತದೆ.
ಸುಳ್ಳುಹೇಳುವ ರೋಗವುಳ್ಳವರು ಹಿಸ್ಟ್ರಿಯೋನಿಕ್ ವ್ಯಕ್ತಿತ್ವ ಅಸ್ವಸ್ಥತೆ ಹೊಂದಿರುವವರಿಗಿಂತ ಮೇಲ್ಮಟ್ಟದಲ್ಲಿ ಮಾತು ಹಾಗು ಲೈಂಗಿಕತೆಯಲ್ಲಿ ನಾಟಕೀಯ ಪ್ರವೃತ್ತಿಯನ್ನು ತೋರುತ್ತಾರೆ. ಮನ್ನಣೆಯ ದಾಹ, ಸಮಾಜ ವಿರೋಧಿ ವ್ಯಕ್ತಿತ್ವದಂತಹ ಅಸ್ವಸ್ಥತೆ ಉಳ್ಳವರು ತಾವು ಪರಿಪೂರ್ಣತೆಯನ್ನು ಹೊಂದಿದ್ದೇವೆ ಎಂದು ಅಂದುಕೊಂಡಿರುತ್ತಾರೆ, ಅಲ್ಲದೇ ಇತರರ ಮೇಲೆ ಸಹಾನುಭೂತಿಯನ್ನು ತೋರುವುದಿಲ್ಲ. ಆದರೆ ಸುಳ್ಳುಹೇಳುವ ರೋಗವುಳ್ಳವರು ಸಮಾಜ ವಿರೋಧಿ ವರ್ತನೆಗಳನ್ನು ತೋರುವುದಿಲ್ಲ; ಬದಲಿಗೆ ತಮ್ಮ ಜೀವನ ಆಸಕ್ತಿಕರವಾಗಿಲ್ಲ ಎಂದು ಅನ್ನಿಸಿದ ಕೂಡಲೇ ಸುಳ್ಳು ಹಣೆಯಲು ಆರಂಭಿಸುತ್ತಾರೆ.ಪ್ರಸ್ತುತವಾಗಿ ಉದ್ದೇಶರಹಿತ, ಆಂತರಿಕವಾಗಿ ಪ್ರೇರಿತ ವಂಚನೆಗಳಲ್ಲಿ ಪಟ್ಟಿಮಾಡಲಾದ ಒಂದು ರೋಗ ನಿರ್ಣಯವೆಂದರೆ ವಾಸ್ತವಿಕ ಅಸ್ವಸ್ಥತೆ.
ಈ ರೋಗವಿರುವ ವ್ಯಕ್ತಿಯು ತಮ್ಮಲ್ಲಿ ಇರದ ದೈಹಿಕ ಅಥವಾ ಮಾನಸಿಕ ಅಸ್ವಸ್ಥತೆಗಳು ಇವೆ ಎಂದು, ಆ ರೋಗಗಳ ಲಕ್ಷಣಗಳನ್ನು ಉತ್ಪ್ರೇಕ್ಷಿಸಿ ಸುಳ್ಳನ್ನು ಹೇಳುತ್ತಾರೆ. ಆದರೆ ವ್ಯಕ್ತಿಯು ವಾಸ್ತವವಾಗಿ ಇತರ ಅಸ್ವಸ್ಥತೆಯನ್ನು ಹೊಂದಿಲ್ಲ ಎಂದು ಖಚಿತಪಡಿಸಲು ಸಂಶೋಧನೆಗಳಾಗಬೇಕಿದೆ. ಸುಳ್ಳುಹೇಳುವ ರೋಗದಿಂದ ಅಪನಂಬಿಕೆ ಉಂಟಾಗಿ ವ್ಯಕ್ತಿಯು ನಿರಾಕರಣೆಗೊಳಗಾಗುವ ಸಾಧ್ಯತೆಗಳಿವೆ. ಅಲ್ಲದೇ ಸುಳ್ಳು ಹೇಳುವಿಕೆಯು ವ್ಯಕ್ತಿಯ ಮೇಲೆ ಸಾಮಾಜಿಕವಾದ ಹಾಗೂ ಕಾನೂನಾತ್ಮಕವಾದ ಹಾನಿಯನ್ನು ಉಂಟುಮಾಡಬಹುದು.
ಬುದ್ಧಿವಂತಿಕೆಯ ಮಟ್ಟವು ಸರಾಸರಿ ಅಥವಾ ಸರಾಸರಿಗಿಂತ ಹೆಚ್ಚಿದ್ದವರಲ್ಲಿ, ಸುಳ್ಳು ಹೇಳುವ ರೋಗವು ಅಂದಾಜು ೨೧ ವರ್ಷ ವಯಸ್ಸಿಗೆ ಆರಂಭವಾಗುತ್ತದೆ. ಕೆಲವು ಸಂಶೋಧನೆಗಳಲ್ಲಿ ಕಂಡುಬಂದಂತೆ, ೩೦ ಪ್ರತಿಶತ ರೋಗಿಗಳ ಮನೆಯ ವಾತಾವರಣವು ಅಸಮರ್ಪಕವಾಗಿತ್ತು; ಅಂದರೆ ಪೋಷಕರು ಅಥವಾ ಸಂಬಂಧಿಕರಲ್ಲಿ ಮಾನಸಿಕ ಅಸ್ವಸ್ತತೆಗಳಿದ್ದವು.ಪುರುಷ ಹಾಗೂ ಮಹಿಳೆಯರಲ್ಲಿ ಈ ರೋಗದ ಅನುಪಾತ ಸಮಾನವಾಗಿದೆ. ನಲವತ್ತು ಪ್ರತಿಶತ ಪ್ರಕರಣಗಳು ಅಪಸ್ಮಾರವೇ ಮುಂತಾದ ನರಸಂಬಂಧೀ ದೋಷಗಳಿಂದ ಬಂದುದಾಗಿವೆ.
ಸತ್ಯವೆಂದಾಕ್ಷಣ ನಮಗೆ ಅದು ಅಪ್ರಿಯವೇ ಸರಿ. ಕಹಿಸತ್ಯ ಎಂದೇ ನಾವದನ್ನು ಕರೆಯುತ್ತೇವೆ. ಸಿಹಿಸತ್ಯಗಳು ಎಲ್ಲೋ ಅಲ್ಲೊಂದು, ಇಲ್ಲೊಂದು ಇರಬಹುದಾದರೂ ಸತ್ಯದ ರುಚಿ ಯಾವಾಗಲೂ ಕಹಿಯೇ ಪಾಪ. ಈ ಕಹಿಗೆ ಅಂಜಿಯೇ ನಾವು ಸತ್ಯವನ್ನು ಆದಷ್ಟು ದೂರವಿರಿಸಿ ಸಿಹಿಯಾದ ಸುಳ್ಳನ್ನೇ ಆಸೆ ಪಡುತ್ತೇವೆ. ‘ನ ಬ್ರೂಯಾತ್ ಸತ್ಯಮಪ್ರಿಯಂ’ ಎಂಬ ಮಾತನ್ನಷ್ಟೇ ಶಿರಸಾವಹಿಸಿ ಸತ್ಯದ ಉಸಾಬರಿಯನ್ನೇ ಬಿಟ್ಟು ಹಾಯಾಗಿ ಸುಳ್ಳಾಡಿಕೊಂಡು ಓಡಾಡಿಕೊಂಡಿದ್ದೇವೆ.ಕೆಲವರು ಸತ್ಯ ನುಡಿಯುತ್ತಾರೆ.ಆದರೆ ಸದ್ಯ ಉಳಿದವರೆಲ್ಲ ಪ್ರಿಯವನ್ನು ನುಡಿಯುತ್ತಿದ್ದಾರೆ ಎಂಬುದು ನಮ್ಮ ಸಮಾಧಾನ. ಕೆಲವರು ನೀರು ಕುಡಿದಷ್ಟೇ ಸುಲಭವಾಗಿ, ಇನ್ನು ಕೆಲವರು ಶರಬತ್ತು ಕುಡಿದಷ್ಟೇ ಆಪ್ಯಾಯಮಾನವಾಗಿ ಪ್ರೀತಿಯಿಂದ, ಸಲೀಸಾಗಿ ಸುಳ್ಳಾಡುತ್ತಾರೆ. ಅವರು ಹೇಳುತ್ತಿರುವುದು ಸುಳ್ಳು ಎಂದು ಗೊತ್ತಿದ್ದರೂ ಕೇಳುತ್ತಿದ್ದವರು ಏನೂ ಮಾಡಲಾಗದಷ್ಟು ಪ್ರಾವೀಣ್ಯವನ್ನು ತಮ್ಮದನ್ನಾಗಿಸಿಕೊಂಡಿರುತ್ತಾರೆ. ಆದರೆ ಕೆಲವರಿಗೆ ‘ಯಶಸ್ವಿ ಸುಳ್ಳು’ ಹೇಳಲು ಏನೆಂದರೂ ಬರುವುದೇ ಇಲ್ಲ. ಆಗಾಗ ಸುಳ್ಳಾಡಿ ಮೈಮೇಲೆ ಅಪಾಯ ತಂದುಕೊಳ್ಳುತ್ತಲೇ ಇರುತ್ತಾರೆ.ಕಟುಸತ್ಯಗಳನ್ನು ಅಪ್ರಿಯವೆನಿಸದಂತೆ ಹೇಳುವುದು ಒಂದು ಕಲೆಗಾರಿಕೆ.
ಮೂರ್ಖ ರಾಜನ ಬಳಿ ಬಂದ ಒಬ್ಬ ಜ್ಯೋತಿಷಿ, ‘ಅಯ್ಯೋ ನಿಮ್ಮ ಮಕ್ಕಳೆಲ್ಲ ನಿಮ್ಮೆದುರೇ ಸಾಯುತ್ತಾರೆ’ ಎಂದು ಕಟುಸತ್ಯವನ್ನು ಹೇಳಿಬಿಟ್ಟ. ಕುಪಿತಗೊಂಡ ರಾಜ ಜ್ಯೋತಿಷಿಯನ್ನು ಗಲ್ಲಿಗೇರಿಸಿದ. ಮರುದಿನ ಇನ್ನೋರ್ವ ಜ್ಯೋತಿಷಿ ಬಂದ, ‘ಆಹಾ ನೀವು ದೀರ್ಘಾಯುಷಿಗಳು. ನಿಮ್ಮ ಮಕ್ಕಳಿಗಿಂತಲೂ ಹೆಚ್ಚು ಕಾಲ ಬಾಳುತ್ತೀರಿ’ ಎಂದು ಹೇಳಿ ಸನ್ಮಾನ ಪಡೆದು ಹೊರಟುಹೋದ.
ನಿರಪಾಯಕಾರಿ ಸುಳ್ಳುಗಳನ್ನು ಕ್ಷಮಿಸಿ ನಕ್ಕುಬಿಡಬಹುದು. ಆದರೆ ಅಪಾಯಕಾರಿ ಸುಳ್ಳುಗಳ ಸರಮಾಲೆಗಳನ್ನೇ ಬಿಡುವ ಸರದಾರರನ್ನು ಎಂದಿಗೂ ನಂಬುವಂತಿಲ್ಲ, ಬಿಡುವಂತೆಯೂ ಇಲ್ಲ. ಕಳ್ಳತನಕ್ಕೆ ಇಂಥ ಶಿಕ್ಷೆ, ಕೊಲೆಗೆ ಇಂಥ ಶಿಕ್ಷೆ ಎಂದೆಲ್ಲ ಶಿಕ್ಷೆಗಳಿದ್ದಂತೆಯೇ ಸುಳ್ಳಾಡಿದ್ದಕ್ಕೆ ಇಷ್ಟು ಶಿಕ್ಷೆ ಎಂದು ನಮೂದಿಸಲ್ಪಟ್ಟಿದ್ದರೆ ‘ಸತ್ಯವಂತರಿಗಿದು ಕಾಲವಲ್ಲ, ಎಂಬ ಹಾಡನ್ನು ಹಾಡಬೇಕಾದ ಪಾಡು ಇರುತ್ತಿರಲಿಲ್ಲ.
ಕೆಲವರಿಗೆ ಸುಮ್ಮ ಸುಮ್ಮನೆ ಸುಳ್ಳು ಹೇಳುವುದು ಅಭ್ಯಾಸವಾಗಿ ಬಿಟ್ಟಿರುತ್ತದೆ. ಇನ್ನು ಕೆಲವರಿಗೆ ಸುಳ್ಳು ಹೇಳದಿದ್ರೆ ನಿದ್ದೆನೇ ಬರಲ್ಲ. ಮತ್ತೆ ಕೆಲವರು ಬಿಲ್ಡಪ್ ತೆಗೆದುಕೊಳ್ಳಲು ಸುಳ್ಳು ಹೇಳುತ್ತಾರೆ. ಮತ್ತೆ ಕೆಲವರು ಕಷ್ಟದಿಂದ ಪಾರಾಗಲು ಮತ್ತು ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಸುಳ್ಳು ಹೇಳುತ್ತಾರೆ. ಇಂದು ನಾವು ಬಿಲ್ಡಪ್ ತೆಗೆದುಕೊಳ್ಳಲು ಹೇಳಿದ ಸುಳ್ಳು ಹೇಗೆ ಅವನ ಜೀವನಕ್ಕೆ ಮುಳ್ಳಾಯಿತು ಎಂಬ ಕಥೆಯೊಂದನ್ನ ನೆನಪಿಗೆ ತಂದುಕೊಳ್ಳಬೇಕಷ್ಟೇ.ಎಷ್ಟೋ ಸಂಸಾರಗಳು ಸುಳ್ಳಿನ ಸುಳಿಯಲ್ಲಿ ಸಿಲುಕಿ ನಾಶವಾಗಿದ್ದು ಇದೆ.
ಒಮ್ಮೆ ಮೋಸ ಮಾಡಿದವನು ಮತ್ತೆ ಮೋಸ ಮಾಡುತ್ತಾನೆ. ಮತ್ತೊಂದು ದ್ರೋಹದ ನಂತರ ಮಾತ್ರ ಪ್ರೀತಿ ಅಥವಾ ದ್ವೇಷವು ಉಳಿದಿಲ್ಲ … ಆತ್ಮದಲ್ಲಿ ಖಾಲಿಯಾಗಿದೆ ಮತ್ತು ನೀವು ಬದುಕಲು ಬಯಸುವುದಿಲ್ಲ ..
ಕೆಲವೊಮ್ಮೆ ನಮ್ಮ ಜೀವನದಲ್ಲಿ ನಾವು ಅನೇಕ ವಂಚನೆಗಳು ಮತ್ತು ಸುಳ್ಳುಗಳನ್ನು ಅನುಮತಿಸುತ್ತೇವೆ, ಸತ್ಯವು ಎಷ್ಟು ಸಿಹಿ ಮತ್ತು ಜೀವ ನೀಡುವ ಸತ್ಯ ಎಂಬುದನ್ನು ನಾವು ಮರೆತುಬಿಡುತ್ತೇವೆ.
ಕೆಲವರು ಸತ್ಯದ ತಲೆಯ ಮೇಲೆ ಹೊಡೆದಂತೆಯೇ ಸುಳ್ಳು ಹೇಳುತ್ತಾರೆ. ಅವರು ಹೇಳುತ್ತಿರುವುದು ಸುಳ್ಳು ಎಂದೆನಿಸದು. ಸುಳ್ಳು ಹೇಳುವುದು ಮೋಸ ಮಾಡಿದಷ್ಟೇ ಪಾಪದ ಕೆಲಸವೆಂಬುದನ್ನು ಮರೆತಂತಿದೆ.
ಸತ್ಯಕ್ಕೆ ಸಾವಿಲ್ಲ,ಸುಳ್ಳಿಗೆ ಸುಖವಿಲ್ಲ ಎಂಬ ಗಾದೆ ನೆನಪಾದಷ್ಟು ಬದುಕು ಸುಂದರವಾಗುತ್ತೆ.
ಶಿವಲೀಲಾ ಹುಣಸಗಿ
Super article
Nice and well written
ತುಂಬಾ ಸುಂದರ ಸುಲಲಿತ ಲೇಖನ.
ಕುವೆಂಪು ಅವರ ಆಕರ್ಷಕ ಭಾವಚಿತ್ರದೊಂದಿಗೆ ಸತ್ಯಕ್ಕೆ ಸಾವಿಲ್ಲ ಲೇಖನ ಅರ್ಥವತ್ತಾಗಿ ಆಕರ್ಷಕ ಶೈಲಿಯಲ್ಲಿ ಬರೆದಿದ್ದೀರಿ. ನಿಜ ಸತ್ಯಕ್ಕೆ ಸಾವಿಲ್ಲ ಸುಳ್ಳಿಗೆ ಸುಖವಿಲ್ಲ. ಈ ಲೇಖನದಲ್ಲಿ ಸತ್ಯ ದರ್ಶನವಿದೆ
D.s.NAIK Sirsi