ಕಾವ್ಯ ಸಂಗಾತಿ
ರಾಹುಲ ಮರಳಿ
ಗಜಲ್

ಜಗಕೆ ಬೆಳಕನೀವ ಸೂರ್ಯನೇ ಕಾಣುತಿಲ್ಲ ನೀನು ಸಿಗದ ಕಾರಣ
ತಂಪಾದ ಶಶಿಯೂ ಉದಯಿಸುತಿಲ್ಲ ನೀನು ಸಿಗದ ಕಾರಣ
ದುಷ್ಟ ವಿಧಿಯ ಚೆಲ್ಲಾಟದಿಂದ ನಮಗಾಯ್ತು ಪ್ರಾಣಸಂಕಟ ಪ್ರಿಯೆ
ಧ್ಯಾನಕೆ ಕುಳಿತರೂ ಮನಸಿಗೆ ಶಾಂತಿ ಸಿಗುತಿಲ್ಲ ನೀನು ಸಿಗದ ಕಾರಣ
ದೇಹದ ಆಸೆ ತೀರಿಸಿಕೊಳ್ಳಲು ಪ್ರೀತಿ ಮಾಡುವ ದುನಿಯಾ ನಮಗಲ್ಲ
ನಿಜವಾದ ಪ್ರೀತಿ ಪದಕೆ ಅರ್ಥ ದೊರಕುತಿಲ್ಲ ನೀನು ಸಿಗದ ಕಾರಣ
ಎಲ್ಲರ ಪ್ರೀತಿಯಲೂ ಪ್ರಿಯತಮೆ ಸತಿಯಾಗಲು ಅಸಾಧ್ಯ
ಕಾಮನ ಬಿಲ್ಲು ಕೂಡ ಸಂತಸ ನೀಡುತಿಲ್ಲ ನೀನು ಸಿಗದ ಕಾರಣ
ಮಧು ಶಾಲೆಯಲಿ ಮದಿರೆ ನೀಡಲು ಇರುವಳು ಮೋಹಕ ಸುಂದರ ಸಾಕಿ
ಜೀವಕವಿ ನಿನ್ನಧರ ನೆನೆದು ಮದಿರೆ ಸೇವಿಸುತಿಲ್ಲ ನೀನು ಸಿಗದ ಕಾರಣ.
ರಾಹುಲ ಮರಳಿ
