ಕಾವ್ಯ ಸಂಗಾತಿ
ಪ್ರಭಾವತಿ ಎಸ್ ದೇಸಾಯಿ
ಗಜಲ್ (ಮಾತ್ರೆ ೨೫)
ಹೃದಯದಿ ಮುಸುಕಿದ ಮಂಜು ಬಿಸಿ ಅಪ್ಪುಗೆಯಲಿ ಕರಗಲಿ ದೊರೆ
ಬರುಡಾದ ಎದೆ ಅಂಗಳದಲಿ ಒಲವಿನ ಲತೆ ಚಿಗುರಲಿ ದೊರೆ
ಬಾಳ ಬೇಗೆಯಲಿ ಒಣಗಿದೆ ಮನದ ಸಂತಸವು ನೀ ಇರದೆ
ಮಾದಕ ನಯನ ಸರೋವರದಲಿ ಕನಸುಗಳು ಅರಳಲಿ ದೊರೆ
ಮುನಿದು ಗುಡುಗಿ ಸಿಡಿಲಾಗಿ ಮಿಂಚಿ ಮಾಯವಾದೇಕೆ ನೀನು
ನಿನ್ನ ಸಂಗದಿ ಪಡೆದ ಮಧುರ ಸುಖವ ಹೇಗೆ ಮರೆಯಲಿ ದೊರೆ
ಹುಣ್ಣಿಮೆ ಇರುಳು ಹರಿದಾಡುತಿದೆ ಪೊರೆ ಕಳಿಚಿದ ಮಿಡಿನಾಗ
ನಮ್ಮ ಪ್ರೀತಿ ಬೆಸುಗೆ ಕುಡಿ ಉಡಿಯಲಿ ತುಂಬಿ ಬೆಳೆಯಲಿ ದೊರೆ
ರಾತ್ರಿ ಪಯಣ ಜೊತೆಯಾಗದೆ ಸಾಗಿದೇಕೆ ಕವಲು ದಾರಿಗೆ
ನೀ ನಡೆವ ಹಾದಿಯಲಿ ಚಂದಿರನ “ಪ್ರಭೆ”ಯು ಬೆಳಗಲಿ ದೊರೆ
ಪ್ರಭಾವತಿ ಎಸ್ ದೇಸಾಯಿ
ಕವಿ ಪರಿಚಯ:
ಪ್ರಭಾವತಿ ಎಸ್ ದೇಸಾಯಿ ವಿಜಯಪುರ, ನಿವೃತ್ತ ಹೊಲಿಗೆಯ ಮುಖ್ಯ ಭೋದಕರು,ಪ್ರಕಟಿತ ಕೃತಿಗಳು ೨೦.
ಕವನಸಂಕನಗಳು ಎರಡು,ಹನಿಗವನ ಸಂಕಲನಗಳು ಎರಡು ,ಆಧುನಿಕ ವಚನಗಳ ಸಂಕಲನಗಳು ಮೂರು,ಪ್ರಬಂಧ ಸಂಕಲನಗಳು ಮೂರು,ಕಥಾ ಸಂಕಲನ ಒಂದು ,ಪ್ರವಾಸ ಕಥನ ಸಂಕಲನ ಒಂದು,ಗಜಲ್ ಸಂಕಲನಗಳು ಏಳು, ವೈಚಾರಿಕ ಲೇಖನ ಸಂಕಲನ,(ಸಂಪಾದಕಿ ಒಂದು) ಒಟ್ಟು ಪ್ರಕಟಿತ ಸಂಕಲನಗಳು ೨೦. ೨೧ ಒಳನೋಟ(ಗಜಲ್ ಕೃತಿಗಳ ವಿಶ್ಲೇಷಣೆ) ಅಚ್ಚಿನಲ್ಲಿದೆ,೨೨.ಸೆರಗಿಗಂಟಿದ ಕಂಪು(ಗಜಲ್ ಸಂಕಲನ) ಅಚ್ಚಿನಲ್ಲಿದೆ.