ಕಾವ್ಯ ಸಂಗಾತಿ
ಗಜಲ್
ಜಯಂತಿ ಸುನಿಲ್
ನನ್ನೆಲ್ಲಾ ಏಕಾಂತದ ರಾತ್ರಿಗಳನ್ನು ನಿನ್ನ ನೆನಪಿನಾಸರೆಯಿಂದ ಬಿಡಿಸುವುದು ಹೇಗೆ..?
ನೋವಾಗದಷ್ಟು ಮೆತ್ತಗೆ ತಬ್ಬಿಕೊಳ್ಳುವ ನಿನ್ನ ಉಸಿರಿನ ಗುರುತನ್ನು ಉಳಿಸುವುದು ಹೇಗೆ..?
ರಾತ್ರಿ ಕತ್ತಲಲ್ಲಿ ಆಗಸದ ಚುಕ್ಕಿಗಳ ಮಧ್ಯೆ ನಿನ್ನ ಹುಡುಕುವಾಗ..
ಸದ್ದಿಲ್ಲದಂತೆ ಮಾತಿಗಿಳಿಯುವ ನಿನ್ನ ಬಿಂಬವನ್ನು ಕಣ್ಣಿನ ಗುಹೆಯೊಳಗೆ ಬಂಧಿಸುವುದು ಹೇಗೆ..?
ಕಂಗಳಲಿ ಹುಟ್ಟಿದ ಮೈತ್ರಿ ಹೃದಯಕ್ಕಿಳಿದು ಗೋರಿ ಸೇರಿತು..
ಎದೆಗೆ ಬಿದ್ದ ಈ ಹಾಳು ಬೆಂಕಿಯನ್ನು ನಂದಿಸುವುದು ಹೇಗೆ..?
ಹಂಚಿಕೊಂಡ ಕನಸುಗಳು ಬಣ್ಣ ಕಳೆದುಕೊಂಡು ಇಲ್ಲವಾದವು
ನೀನಿಲ್ಲದ ನನ್ನ ಲೋಕದಿ ಕತ್ತಲೆಯೇ ತುಂಬಿರುವಾಗ ಬಣ್ಣಗಳಿರುವ ಜಾಗವನ್ನು ಹುಡುಕುವುದು ಹೇಗೆ..?
ಏಕತಾನದಲಿ ಅಪ್ಪಳಿಸುವ ಸಮುದ್ರದ ಅಲೆಗಳೂ ಈ ಸಾಯದ ನೋವು ಎರಡೂ ಒಂದೇ ಆಗಿರುವಾಗ..
ಕೊರಳಸೆರೆಯುಬ್ಬಿ ಬಂದ ನೋವನ್ನು ನುಂಗುವುದು ಹೇಗೆ?
ನಮ್ಮ ಅನುಬಂಧ ಗಾಢವಾಗಿ ಅನಾವರಣಗೊಳ್ಳಲು ಕಾಲವು ನೆರವಾಗಲಿಲ್ಲಾ..
ಮುಲಾಜಿಲ್ಲದೆ ಮುಗಿದು ಹೋದ ಸಮಯವನ್ನು ತಡೆದು ಪ್ರಶ್ನಿಸುವುದು ಹೇಗೆ?
ನಮ್ಮ ಮಧುರ ಕ್ಷಣಗಳು ಮರಳಿ ಬಾರವೆಂದು ವರ್ತಮಾನ ಕ್ರೂರ ವಾಸ್ತವ ನುಡಿದಿದೆ..
ಬೆನ್ನಟ್ಟಿ ಬರುತಿಹ ಹಗಲು ರಾತ್ರಿಗಳ ಜೂಜಾಟದಲ್ಲಿ ನೀನಿಲ್ಲದೆ ಜಯಿಸುವುದು ಹೇಗೆ?
ಚೆನ್ನಾಗಿದೆ