ಎಸ್ .ನಾಗಶ್ರೀ ಅಜಯ್ ರವರ ಕಥೆ-ಮೀ ಟೂ

ಕಥಾ ಸಂಗಾತಿ

ಮೀ ಟೂ

ಎಸ್ .ನಾಗಶ್ರೀ ಅಜಯ್

ಮನು ಮಲಗಿದ್ದರೆ ಬಾ…ಟೆರೆಸ್ಸಿಗೆ ಹೋಗಿ ಸ್ವಲ್ಪ ಹೊತ್ತು ಇದ್ದು ಬರೋಣ ಎನ್ನುವ ಮೆಸೇಜ್ ಅವನು ಕಳಿಸಿ ಹತ್ತು ನಿಮಿಷವಾಗಿರಬೇಕು. ಸ್ಮಿತಾ ಎಂದಿನ ಉತ್ಸಾಹದಲ್ಲಿ ಅಭಿಯ ಆಹ್ವಾನವನ್ನು ಉತ್ತೇಜಿಸುವ ಮನಸ್ಸಿನಲ್ಲಿರಲಿಲ್ಲ. ಬೆಂಗಳೂರು ಕಳೆದ ಎರಡು ವರ್ಷದಿಂದ ವರ್ಷದ ಮೂರು ಕಾಲವೂ ಮಳೆಯಲ್ಲೇ ಮೀಯುವುದು ಸ್ವಲ್ಪ ರೇಜಿಗೆ ತಂದಿತ್ತು.ಟೆರೆಸ್ಸಿನ ಗಿಡಗಳ ನಡುವೆ, ನಿತ್ಯಮಲ್ಲಿಗೆಯ ಹಿತವಾದ ಪರಿಮಳದಲ್ಲಿ ಜೀಕಾಡುವ ಉಯ್ಯಾಲೆಯಲ್ಲಿ ಕೂತು ಸರಿರಾತ್ರಿಯವರೆಗೂ ಮಾತಾಡುತ್ತಾ ಹೊತ್ತು ಕಳೆಯುತ್ತಿದ್ದ ಸಮಯ ಅಭಿ ಮತ್ತು ಸ್ಮಿತಾಳ ಸಂಬಂಧದ ಜೀವಜಲದಂತೆ. ದಿನವಿಡೀ ಮಳೆ ಸುರಿದು ಜಾರುವ ನೆಲ, ತುಕ್ಕು ಹಿಡಿಸಿಕೊಳ್ಳುತ್ತಾ ಬಿದ್ದಿರುವ ಉಯ್ಯಾಲೆ, ಕಳೆದೆರಡು ತಿಂಗಳಿನಿಂದ ನಿಗಾ ಕಡಿಮೆಯಾಗಿ ಹುಲುಸಾಗಿ ಬೆಳೆದ ಕಳೆಗಿಡಗಳು…  ಬಿಡುವಾದಾಗ ಮಾಡಬೇಕಾದ ತುರ್ತುಕೆಲಸಗಳ ಗೋದಾಮಿನಂತೆ ಕಾಣುವ ತಾರಸಿ ತೋಟಕ್ಕೆ ಮುನಿಸಿನ ಮೂಟೆ ಹೊತ್ತು ಹೋಗುವುದೇಕೆ ಎನ್ನಿಸುತ್ತಿತ್ತು. ” ಇದು ಮನೆಯಲ್ಲ..ಹುಚ್ಚಾಸ್ಪತ್ರೆ. ಮನಸ್ವಿಯನ್ನು ಹೊಸ ಸಂಗೀತದ ಮೇಷ್ಟರ ಹತ್ತಿರ ಕರೆದುಕೊಂಡು ಹೋಗಿ ಬರೋಕೆ ಏನು ಅಡ್ಡಿ? ತನಗಂತೂ ಸಂಗೀತದ ಗಂಧಗಾಳಿ ಇಲ್ಲ. ಮಗು ಕಲಿಯುತ್ತಿರುವಾಗ ಅದನ್ನ ಮುಂದುವರೆಸುವ ತಯಾರಿ ಮಾಡಿಕೊಡೋಕೂ ಆಗದ ಸೋಂಬೇರಿತನ.ಸದಾ ನೀನಾಯ್ತು…ನಿನ್ನ ವ್ಯಾಪಾರ, ಅಲಂಕಾರ, ಫ್ರೆಂಡ್ಸು…ಅಷ್ಟೇ ಪ್ರಪಂಚ. ಎರಡು ದಿನ ಕಳಿಸಿ, ಆಮೇಲೆ  ಹತ್ತು ದಿನ ರಜೆ ತೊಗೊಂಡ್ರೆ ಅವರಾದರೂ ಏನು ಮಾಡ್ತಾರೆ? ದಸರಾ ಉತ್ಸವದಲ್ಲಿ ಹಾಡುವ ಅವಕಾಶ. ಮನೆ ಬಾಗಿಲಿಗೆ ಬಂದ ಅವಕಾಶ ನಿನ್ನಿಂದಲೇ ಸರ್ವನಾಶ ಆಯ್ತು…ಇನ್ನು ಮೇಲಿಂದ ಅವಳು ಕ್ಲಾಸಿಗೆ ಬರೋ ಅಗತ್ಯವಿಲ್ಲ ಅಂದ್ರು. ನಿನ್ನೆ ರಸ್ತೇಲಿ ಸಿಕ್ಕಾಗ. ಈಗ ಸಮಾಧಾನ ಆಯ್ತಾ? ಏನಕ್ಕಾದರೂ ಎಲ್ಲಾ ಮನೆ, ಹೆಂಡತಿ, ಮಕ್ಕಳು ಅಂತ ಸಾಯಬೇಕು?” ಅವನು ಹೀಗೆ ಕಿರುಚುತ್ತಲೇ ಬೆಳಗಿನ ಸ್ನಾನ, ಕಾಟಾಚಾರದ ಪೂಜೆ ಮುಗಿಸಿ ತಿಂಡಿಯೂ ತಿನ್ನದೆ ಬಾಗಿಲು ಬಡಿದು ಹೊರಟಿದ್ದ. ಮನಸ್ವಿ ಶಾಲೆಯ ಬಸ್ಸು ಹತ್ತಿಯಾದ ಮೇಲೆ ಶುರುವಾದ ರಂಪ. ನಿನ್ನೆ ಸಂಜೆಯಿಂದ ಬಚ್ಚಿಟ್ಟುಕೊಂಡ ಕೆಂಡದಂತಹ ಸತ್ಯದ ಹೊಡೆತದಿಂದಲೇ ಚೇತರಿಸಿಕೊಳ್ಳದೆ ಒಳಗೊಳಗೆ ನೋಯುತ್ತಿದ್ದ ನನಗೆ ಇವನ ಈ ಭರ್ತ್ಸನೆ ಸಹಿಸುವ ತಾಳ್ಮೆ, ಉತ್ತರಿಸು ವ್ಯವಧಾನ ಉಳಿದಿರಲಿಲ್ಲ. ಕಣ್ಣೀರಿಗಿಂತ ಒಳ್ಳೆ ಬಂಧುವುಂಟೆ?ಊರಿಂದ ಬಂದಿಳಿದ ಅಮ್ಮನ ಮುಂದೆ ಆದ ರಾದ್ಧಾಂತ ಜೀವ ಹಿಡಿಯಾಗುವಂತೆ ಮಾಡಿತ್ತು. ಅಳಲೂ ಸ್ವಾತಂತ್ರ್ಯವಿಲ್ಲದೆ, ಕದ್ದುಮುಚ್ಚಿ ಎರಡು ಹನಿ ಬೀಳಿಸುತ್ತಾ ದಿನ ಕಳೆದಿತ್ತು. ಅಮ್ಮನ ಮುಂದೆ ಆಡಲಾಗದ ಮಾತುಗಳು ತಾರಸಿಗೆ ನಡಿ ಎಂದು ದಬ್ಬಿದಂತಾಗಿ ಕೊಡೆ ಹಿಡಿದು ಅದರಲ್ಲೇ ತಿವಿದು ಅಭಿಯೊಂದಿಗೆ ಮೆಟ್ಟಿಲು ಹತ್ತಿದಳು. ರಾತ್ರಿ ಹನ್ನೊಂದಿರಬೇಕು. ಪಕ್ಕದ ಮನೆಯ ದೀಪವಾರಿತ್ತು. ಅಮಾವಾಸ್ಯೆಗೆ ಹತ್ತಿರದ ದಿನಗಳು. ಚಂದ್ರನೂ ಅರೆಮನಸ್ಸಿನ ಕರ್ತವ್ಯದಲ್ಲಿದ್ದ. “ಬೆಳಿಗ್ಗೆ ಬೇಸರದಲ್ಲಿ ಏನೇನೋ ಕೂಗಾಡಿ ಹೊರಟುಬಿಟ್ಟೆ. ಇತ್ತೀಚಿಗೆ ಆಫೀಸಿನ ಒತ್ತಡ, ಕೆಲಸದ ಆತಂಕ ಹೆಚ್ಚಿ ನಿನಗೆ, ಮಗುಗೆ ಸಮಯ ಕೊಡೋದಕ್ಕೇ ಆಗ್ತಿಲ್ಲ. ಆ ಪಶ್ಚಾತ್ತಾಪ ಮೂಲೆಯಲ್ಲಿ ಕೊರೆಯುತ್ತಲೇ ಇರತ್ತೆ. ಈ ಮಧ್ಯೆ ಏನಾದರೂ ಕಿರಿಕ್ ಆದರೆ ಫಟ್ಟಂತ ರೇಗಿಬಿಡ್ತೀನಿ. ಆಮೇಲೆ ಬೇಸರಾಗೋದು..ನಿನ್ನ ಹತ್ತಿರ ಕ್ಷಮೆ ಕೇಳೋದು…ಈಗೀಗ ಇದು ಜಾಸ್ತಿಯಾಗಿ ಬಿಡ್ತು. ದಯವಿಟ್ಟು ಇದೊಂದು ಸಲ ನನ್ನ ಕ್ಷಮಿಸಿಬಿಡು. ಇನ್ಮೇಲೆ ತಾಳ್ಮೆ ಕಲೀತೀನಿ.” ಹಾಗಂತ ಭುಜದ ಮೇಲೆ ಕೈಹಾಕಿ ಗಟ್ಟಿಯಾಗಿ ಹಿಡಿದು ಒದ್ದೆ ರಸ್ತೆಯನ್ನು ನೋಡುತ್ತಾ ಅಭಿ ಹೇಳುತ್ತಿದ್ದರೆ, ಬೆಳಗ್ಗಿನಿಂದ ತಡೆಹಿಡಿದ ಅಳು ಸರಾಗ ತೊಟ್ಟಿಕ್ಕುತ್ತಿತ್ತು. ಸುತ್ತಲೂ ಮೈಕೊರೆವ ಚಳಿ, ಮಳೆಯ ಇರಚಲು , ಪಕ್ಕದಲ್ಲೇ ನಿಂತು ಸಮಾಧಾನಿಸುತ್ತಿರುವ ಗಂಡ ಹಾಗಿದ್ದೂ ಈ‌ ಲೋಕದೊಂದಿಗಿನ ಸಂಪರ್ಕವೇ ಕಳೆದುಕೊಂಡಂತೆ ಎದೆ ತುಂಬಿದ ಖಾಲಿತನ. ಸದಾ ಚಿನಕುರಳಿಯಂತೆ ಮಾತಾಡುವ ನಾನು ನೋವಾದ ಕ್ಷಣವೇ ಹೆಪ್ಪುಗಟ್ಟುವ ಮೌನಕ್ಕೆ ಶರಣಾಗುವುದು ಅವನಿಗೂ ಗೊತ್ತು. ಆಡಿದರೆ ಸಂತೋಷ, ಸಂಭ್ರಮದ್ದೇ ಆಡಬೇಕೆನ್ನುವ ರಿವಾಜು ಕಲಿತಿದ್ದು ಎಲ್ಲಿಂದ? ಹೇಳಿಕೊಂಡಷ್ಟೂ, ಬಿಡಿಸಿದಷ್ಟೂ ಹರಡುತ್ತಲೇ ಹೋಗುವ ವಿಷಾದ ಆಮೇಲೆ ಹೊಳೆಸುವ ಅರ್ಥಗಳಿಗೆ ಹೆದರುವುದೇ ಕಾರಣವಾಗಿರಬಹುದು. ಹೊತ್ತಿನ ಅರಿವಿಲ್ಲದೆ ಹಾಗೆ ಮೌನವಾಗಿ ನಿಂತ ಯಾವುದೋ ಕ್ಷಣದಲ್ಲಿ ಮಾತುಗಳು  ಕೈಹಿಡಿದು  ಆಡಿಸಲು ತೊಡಗಿತ್ತು.

” ಮನು ಅಪ್ಪನ ಮಗಳೇ ಇರಬಹುದು. ಆದರೆ ಹೆತ್ತ ಕರುಳಿಗೆ ಅರಿಯದ ಸೂಕ್ಷ್ಮ ನಿನಗೆ ತಿಳಿಯುವುದಾದರೂ ಹೇಗೆ ಹೇಳು…ಮಗಳು ಚೆನ್ನಾಗಿ ಓದಲಿ. ಬರೆಯಲಿ. ಹಾಡಲಿ. ಒಳ್ಳೆಯ ಹೆಸರು ಸಂಪಾದಿಸಲಿ ಎಂಬ ಆಸೆ ಬರೀ ನಿನಗೆ ಮಾತ್ರವಲ್ಲ. ನನಗೂ ಇದೆ. ಸರಿಯಾದ ಕಾರಣವಿಲ್ಲದೆ ಯಾವುದಕ್ಕೂ ಬೇಡವೆಂದಿಲ್ಲ ನಾನು. ಹಾಗಿದ್ದೂ ಮೂರು ಕ್ಲಾಸ್ ತಪ್ಪಿಸಿದ್ದಕ್ಕೆ ಬೆಳಿಗ್ಗೆ ಅಷ್ಟು ರಾದ್ಧಾಂತ ಮಾಡಿ ಹೋದಿರಲ್ಲ..ಅದು ತುಂಬಾ ನೋವಾಗ್ತಿರೋದು.” ಉಯ್ಯಾಲೆಯಲ್ಲಿ ಕೂತರೂ ಗಟ್ಟಿಯಾಗಿ ಪಾದವನ್ನು ನೆಲಕ್ಕೆ ಊರಿ ಕದಲದೆ ಹೇಳಿದಳು.

” ವಿಷಯ ಅಷ್ಟೇ ಅಂತ ನನಗೆ ಅನ್ನಿಸ್ತಿಲ್ಲ. ಬೇಜವಾಬ್ದಾರಿ ಅಂತಲೂ ನಾನಂದುಕೊಂಡಿಲ್ಲ. ಬೆಳಗಿನ ಗಡಿಬಿಡಿಯಲ್ಲಿ ಕಾರಣ ಕೇಳದೆ ಕೂಗಾಡಿ ಹೋದೆ. ಆಫೀಸು ಸೇರಿದ ಮೇಲೆ ಬಹುಶಃ ನನಗೆ ತಿಳಿಯದ ಯಾವುದೋ ವಿಷಯ ನಿನ್ನನ್ನು ಕಾಡಿಸುತ್ತಿದೆ ಅನ್ನಿಸಿತು. ಈಗ ಹೇಳಬೇಕು ಅನ್ನಿಸಿದರೆ ಹೇಳು.ಬಲವಂತವಿಲ್ಲ. ಮನು ನಾಳೆಯಿಂದ ಕ್ಲಾಸಿಗೆ ಹೋಗದಿದ್ದರೂ ಪರವಾಗಿಲ್ಲ. ಈಗ ಸಮಾಧಾನವಾಯ್ತಾ? ಇನ್ನೂ ಎಷ್ಟು ಅತ್ತು ಕೆಂಪಾಗಬೇಕು ಹೇಳು? ” ಹಾಗೆಂದು ಅವಳ ತಲೆಯನ್ನು ಭುಜಕ್ಕೊರಗಿಸಿಕೊಂಡ.

“ಅಷ್ಟು ಸುಲಭಕ್ಕೆ ಸಮಾಧಾನವಾಗುವುದಲ್ಲ ಇದು. ಕಾರಣ ತಿಳಿಸದೆ ಈಗ ಒಂದು ನಿರ್ಧಾರಕ್ಕೆ ಬಂದರೂ ಅದು ಮುಂದೊಮ್ಮೆ ಬಡ್ಡಿ ಸಮೇತ ಸವಾಲೊಡ್ಡಿಯೇ ತೀರುತ್ತದೆ.ಅದರ ಬದಲು ಈಗ ಹೇಳುವುದೇ ಮೇಲು. ಮೊನ್ನೆ ಮಗಳಿಗೆ ದಸರಾ ಸಂಗೀತೋತ್ಸವದಲ್ಲಿ ಹಾಡಲು ಅವಕಾಶ ಕೊಡ್ತೀನಿ. ನನ್ನ ಹತ್ತಿರ ಪಾಠಕ್ಕೆ ಕಳಿಸಿ ಅಂದು ಹೋದರಲ್ಲ… ಆ ಮನುಷ್ಯನಿಗೆ ಎಪ್ಪತ್ತು ದಾಟಿದರೂ ಮಕ್ಕಳ ಮೇಲೂ ಕೈಹಾಕುವ ಚಟ. ಎಂಟು ವರ್ಷದ ನಮ್ಮ ಕೂಸಿಗೂ ಕಸಿವಿಸಿಯಾಗುವ ಹಾಗೆ ಎರಡು ಮೂರು ಸಲ ಮುಟ್ಟಿದ್ದಾರೆ. ಮನು ಮನೆಗೆ ಬಂದ ಮೇಲೆ ನಾನು ಮುಟ್ಟಿದರೂ ಕೆಲವೊಮ್ಮೆ ಬೆಚ್ಚುತ್ತಿದ್ದಳು. ನಿನ್ನೆ ಸಂಜೆ ಆಡವಾಡಿಸುತ್ತಾ ಮೆಲ್ಲಗೆ ಬಾಯಿ ಬಿಡಿಸಿದೆ. ಅವರ ಸ್ಕೂಲಲ್ಲಿ ಗುಡ್ ಟಚ್, ಬ್ಯಾಡ್ ಟಚ್ ಹೇಳಿಕೊಟ್ಟಿದ್ದಾರಲ್ಲ… ಆ ತಾತ ಮುಟ್ಟಿದ್ದು ಬ್ಯಾಡ್ ಅನ್ನಿಸ್ತು ಅಂದಳು. ಇನ್ಮೇಲೆ ಅಲ್ಲಿಗೆ ಕಳಿಸಲ್ಲ. ಹಾಗೆ ಅನ್ನಿಸಿದ ತಕ್ಷಣ ನನಗೆ ಹೇಳಿಬಿಡು. ಅಮ್ಮ ಈಸ್ ಅ ಸೇಫ್ ಪ್ಲೇಸ್ ಅಂತ ಹೇಳಿಕೊಟ್ಟೆ. ಹೋದ ವಾರವೆಲ್ಲಾ ಅದುವರೆಗೂ ಆಟವಾಡಿಕೊಂಡು ಖುಷಿಯಾಗಿದ್ದ ಮಗು ಅವರ ಹತ್ತಿರ ಹೋಗಬೇಕು ಅಂದ ತಕ್ಷಣ ಕಾಲು ನೋವು, ಹಸಿವು, ಹೊಟ್ಟೆ ನೋವು ಅಂತ ನೆಪ ತೆಗೆದು ಅಳುತ್ತಿದ್ದಳು. ಹೇಗಾದರೂ ಯಾಮಾರಿಸಿ, ಹೋಗೋದು ಬೇಡ ಅಂದಾಗ ಖುಷಿಯಾಗುತ್ತಿದ್ದಳು. ಕಲ್ಪನಾ ಮೇಡಂ ಹತ್ತಿರ ಹೋಗುವ ಸಂಗೀತ ಪಾಠಕ್ಕೆ ಅವಳೇ ನೆನಪಿಸಿ ರೆಡಿ ಆಗ್ತಾಳೆ. ಇಲ್ಲಿಗೆ ಮಾತ್ರ ಹೀಗೆ ಅಂದಾಗ ಚೂರು ಅನುಮಾನ ಬಂದಿತ್ತು. ದಿನಬೆಳಗಾದರೆ ಪೇಪರ್, ಟಿವಿ, ಮೊಬೈಲಲ್ಲಿ ಇಂತಹ ಸುದ್ದಿಗಳೇ… ನಮ್ಮ ಮಗು ಸ್ವಲ್ಪದರಲ್ಲಿ ಪಾರಾಯ್ತಲ್ಲ ಅಂತ ನೆಮ್ಮದಿ ತಂದ್ಕೋಬೇಕೋ ಎಲ್ಲರಿಗೂ ಈ ಅವಕಾಶ ಸಿಗದಿರುವ ಬಗ್ಗೆ ನೊಂದುಕೊಳ್ಳಬೇಕೋ… ತಲೆಕೆಟ್ಟು ಹೋಗಿದೆ.” ಮಾತು ಮುಗಿದಿರಲೇ ಇಲ್ಲ. ಅಭಿ ಉಯ್ಯಾಲೆಯಿಂದ ಎದ್ದು ಕಚಡಾ ಮು** ಮಗನ್ನ ತಂದು… ಹಿಡಿದು ನಾಲ್ಕು ಜಡಿದರೆ ಬುದ್ಧಿ ಬರತ್ತೆ ಎಂದು ಹಲ್ಲು ಕಚ್ಚಿ ತನ್ನ ಮುಷ್ಟಿಯನ್ನು ಬಿಗಿ ಮಾಡುತ್ತಾ ಎದುರಿಗೆ ಕಂಡ ಒಡೆದ ಕುಂಡವನ್ನು ಕಾಲಿಂದ ಒದ್ದ. ಅದು ಸ್ವಲ್ಪ ದೂರಕ್ಕೆ ಬಿದ್ದು ತಿರುಗುತ್ತಲೇ ಬೇರೆ ಕುಂಡಗಳ ಸಂದಿನಲ್ಲಿ ಮರೆಯಾಯಿತು…

” ಅವನಿಗೆ ಬುದ್ಧಿ ಕಲಿಸಬೇಕು ನಿಜ… ಆದರೆ ಹೇಗೆ? ಪೋಲೀಸು ಕೋರ್ಟು ಅಂತಾದರೆ ದಿನಪೂರ್ತಿ ಟಿವಿಯಲ್ಲಿ ಅದೇ ಬೊಂಬಡ ಹೊಡ್ಕೊಂಡು ನಮ್ಮ ನೆಮ್ಮದಿ ಹಾಳು ಮಾಡ್ತಾರೆ. ಇಷ್ಟರ ಮೇಲೆ ಅಸಭ್ಯವಾಗಿ ನಡೆದುಕೊಂಡಿದ್ದು ಅಂತಹ ದೊಡ್ಡ ಅಪರಾಧವೇನಲ್ಲ ಎಂದೋ, ಸೂಕ್ತ ಸಾಕ್ಷ್ಯಾಧಾರ ಇಲ್ಲವೆಂದೋ ಕೇಸು ಹಳ್ಳ ಹಿಡಿಯುತ್ತೆ. ಮಗುವಿಗೂ ಪ್ರಶ್ನೆ ಮೇಲೆ ಪ್ರಶ್ನೆ ಕೇಳಿ ಮಾನಸಿಕ ಹಿಂಸೆ. ಈಗ ಅವಳಿಗೆ ಆಗಿರುವ ಮುಜುಗರದ ನೆನಪನ್ನು ಕೆದಕಿ ಕೆದಕಿ ಅಸಹ್ಯ ಮಾಡೋದು ನನಗಿಷ್ಟ ಇಲ್ಲ. ಹಾಗಂತ ಅವನನ್ನು ಸುಮ್ಮನೆ ಬಿಡೋ ಉದ್ದೇಶವಿಲ್ಲ. ಹೀಗೆ ಬಿಟ್ಟರೆ ಇನ್ನೆಷ್ಟು ಜನರ ಹತ್ತಿರ ಆ ಅವಕಾಶ, ಈ ವೇದಿಕೆ, ಅವರು ಗೊತ್ತು, ಇವರು ನಮ್ಮ ನೆಂಟರು ಅಂತ ಸಿನಿಮಾ ತೋರಿಸ್ತಾ ಮಕ್ಕಳ ಜೊತೆ ಅಸಹ್ಯಗಳನ್ನು ಮಾಡ್ತಾನೋ. ಮಕ್ಕಳೆಲ್ಲಾ ಒಂದೇ ಅಲ್ವಾ ? ಯಾಕಾದರೂ ನಮಗೆ ಹೆಸರು, ಪ್ರತಿಷ್ಠೆಯ ಹಿಂದೆ ಹೋಗುವ ದುರ್ಬುದ್ಧಿ ಬಂತೋ..” ಸ್ಮಿತಾ ದನಿ ಅಳುವಿನಿಂದ ಎಂದಿಗಿಂತ ಹೆಚ್ಚು ಗೊಗ್ಗರಾಗಿ ಭಾರವಾಗಿ ಕೇಳುತ್ತಿತ್ತು. ಯಾವತ್ತೂ ಗೂನು ಬೆನ್ನು ಇಟ್ಟುಕೊಳ್ಳದ ಅವಳೂ ಗೂನು ಬೆನ್ನು, ಮುದುರಿಕೊಂಡ ಭುಜದ ಭಂಗಿಯಲ್ಲಿ ಬಹಳ ಸೋತಂತೆ, ಪೆಟ್ಟುತಿಂದ ಅಮಾಯಕಳಂತೆ ತುಸು ಅಪರಿಚಿತವಾಗಿ ಕಂಡಳು. ನಾವು ಆಡುತ್ತಿರುವ ಮಾತು ಸ್ಪಷ್ಟ ರೂಪ ತೆಳೆದು ನಮ್ಮನ್ನೇ ಹೆದರಿಸುವ ದೈತ್ಯಾಕಾರ ಪಡೆದು ಮುಂದೆ ನಿಲ್ಲಬಹುದು ಎನ್ನುವ ಭಯವೊಂದೆಡೆ, ಆಡದೆ ಉಳಿದರೆ ಕಾಡುವ ಎದೆಭಾರ ಮತ್ತೊಂದೆಡೆ. ಕಟುಮಾತುಗಳನ್ನು ಆಡಬೇಕಾದಲ್ಲಿ ಆಡದೆ ನುಂಗಿದಾಗೆಲ್ಲಾ ವಿಪರೀತ ಗಂಟಲು ನೋವು ಹುಟ್ಟುವ ಅರಿವಿದ್ದ ಅಭಿ ಈಗ ಅದರ ಮೊದಲ ಹಂತವನ್ನು ಗಂಟಲೊಳಗೆ ಗುರುತಿಸಿಕೊಳ್ಳುತ್ತಿದ್ದ. ಸ್ವಿಗ್ಗಿ, ಜೊಮಾಟೋ ಹುಡುಗರು ಎದುರು ಪಿಜಿಗೆ ಆಗಾಗ ಡೆಲಿವರಿ ಕೊಡಲು ಬರುವುದನ್ನು ಹೊರತುಪಡಿಸಿದರೆ, ಮನುಷ್ಯ ಸಂಚಾರವಿಲ್ಲದ ನಿರ್ಜನ ನೀರವತೆ ಮಾತು ಸರಾಗ ಹರಿಯಲೊಂದು ಅವಕಾಶ ನೀಡಿತ್ತು. ಮುದುರಿ ನಿಂತ ಸ್ಮಿತಾಳ ಪಕ್ಕವೇ ಜರುಗಿ ಗತವನ್ನು , ಅದು ಇಂದಿಗೆ ತಗುಲಿದ ವಿಧವನ್ನು ಅವಳಿಗೆ ಹೇಳುತ್ತಲೇ ತಾನು ಹಗುರಾಗುವ ದಾರಿಯಲ್ಲಿ ನಡೆದ. ” ನಾನು ಚಿಕ್ಕವನಾಗಿದ್ದಾಗಿನಿಂದಲೂ ಈ ವೇದಿಕೆಯ ಮೋಹ ಬಹಳವಿತ್ತು. ಸುಮಾರಾಗಿ ಹಾಡ್ತಿದ್ದೆ. ಮಾತು ಮಾತ್ರ ಅವತ್ತಿಗೂ ಇವತ್ತಿಗೂ ಏನೋ ಆಡಲು ಹೋಗಿ ಮತ್ತೇನೋ ಆಗೋದು. ಹಾಗಾಗಿ ಭಾವಗೀತೆಯೋ ಸಿನಿಮಾ ಗೀತೆಯೋ ಹಾಡಿ ಬರೋಕೆ ಮಜಾ ಬರ್ತಿತ್ತು. ಮನೆಯಲ್ಲಿ ಅಪ್ಪ ಶಾಲೆಯ ಫೀಸ್ ಹೊಂದಿಸೋದೇ ಕಷ್ಟವಿತ್ತು. ಇನ್ನು ಸಂಗೀತ, ನಾಟಕ ಅಂತ ನಮ್ಮ ಹುಚ್ಚಿಗೆ ದುಡ್ಡು ಹೊಂದಿಸಲು ಸಾಧ್ಯವೇ ಇರಲಿಲ್ಲ. ನಾನು ಕಲಿತು ಸಂಗೀತಗಾರನಾಗುವ ಅವಕಾಶ ಸಿಗಲೇ ಇಲ್ಲ. ಅದೇ ನನ್ನ ಗೆಳೆಯ ಸುಧೀರ ಕಲಿತ. ಚೆನ್ನಾಗಿ ಓದಿಯೂ ಓದಿದ. ಒಳ್ಳೆಯ ಕೆಲಸ, ಸ್ವಂತ ಮನೆ, ಮುದ್ದಾದ ಮಕ್ಕಳು… ನಾನು ಅವತ್ತಿಗೂ ಇವತ್ತಿಗೂ ಪರದಾಡುತ್ತಲೇ ಇದ್ದೀನಿ. ಆಸೆಪಟ್ಟ ಯಾವುದನ್ನೂ ದಕ್ಕಿಸಿಕೊಳ್ಳದೆ ಜೀವನದ ಬಂಡಿ ಎಳೆಯುತ್ತಿದ್ದೀನಿ. ಆದರೆ ನನ್ನ ಮಗಳು ಚೆಂದ ಕಲಿಯುತ್ತಾಳೆ. ಹಾಡುತ್ತಾಳೆ. ಭಗವಂತ ಕಂಠ ಕೊಟ್ಟಿದ್ದಾನೆ. ಈಗಿನಿಂದ ವೇದಿಕೆ ಏರಲು ಅವಕಾಶ ಮಾಡಿಕೊಡುತ್ತಾ ಹೋದರೆ ಮುಂದೆ ದೊಡ್ಡ ಹೆಸರು ಸಂಪಾದಿಸಬಹುದು. ಹೀಗೆ ಏನೇನೋ ಆಸೆಗಳು. ಆತ ಸಿಕ್ಕಾಗ ಹಿಂದೆ ಮುಂದೆ ಯೋಚನೆ ಮಾಡದೆ ಅವರ ಹತ್ತಿರ ಕಳಿಸೋಕೆ ಒದ್ದಾಡಿದೆ. ಈಗ ಮತ್ತೆ ಗುಡ್ಡ ಕುಸಿದಂತೆ…ಈ ಹೊಡೆತ ನಿನಗೆ ಮಾತ್ರ ಅರ್ಥವಾಗೋದು. ಹೊರಗೆ ಗಟ್ಟಿಗನ ಮುಖ ಹೊತ್ತು ತಿರುಗುವ ನಾನು ಒಳಗೆ ಕೊರಗುವ ನೋವು ನಿನಗೆ ಮಾತ್ರ ತಿಳಿಯೋದು. ಹೀಗೆ ನನ್ನ , ಅಮ್ಮನ, ಮಗುವಿನ ಎಲ್ಲರ ತಲೆನೋವನ್ನೂ ನಿನಗೇ ಹಚ್ಚಿ ಕೈ ಒದರಿ ಹೊರಟು ಹೋಗುವ ಸ್ವಾರ್ಥಿ ನಾನು.” ಬೆಳಿಗ್ಗೆ ಉಗ್ರಕೋಪದಲ್ಲಿ ಕಿರುಚಾಡಿ ಹೋದಾಗಲೂ ಇಷ್ಟು ನೋವಾಗಿರಲಿಲ್ಲ ಎನ್ನಿಸಿತು. ಗುಟ್ಟೊಂದನ್ನು ಎದೆಯಲ್ಲಿ ಬಚ್ಚಿಟ್ಟ ನೋವಿಗಿಂತ, ನಮ್ಮ ಅಂತರಂಗ ತೆರೆದಿಟ್ಟ ಸತ್ಯ ಹೆಚ್ಚು ವೇದನೆ ನೀಡಬಹುದೇ? ಈ ಸೋಲು-ಗೆಲುವು, ಸ್ಪರ್ಧೆ, ಅಸಹಾಯಕತೆ ನಮ್ಮ ಅಸ್ತಿತ್ವವನ್ನೇ ಪ್ರಶ್ನಿಸುವ ಮಟ್ಟಕ್ಕೆ ನಿಂತ ರೀತಿ ಎದೆನಡುಗಿಸಿತು. ಇದು ಸೋತು ಹಣ್ಣಾಗಿ,ಕೈಚೆಲ್ಲುವ ದಿಕ್ಕಿನೆಡೆಗೆ ಸಾಗಬಾರದೆನ್ನಿಸಿ, ” ಅಭಿ… ಇಲ್ಲಿ ತಪ್ಪು ನಿನ್ನದೋ, ಮಗುವಿನದೋ ಅಲ್ಲವೇ ಅಲ್ಲ. ತಪ್ಪು ಮಾಡುತ್ತಿರುವಾತ ಇಷ್ಟೊತ್ತಿಗೆ ಹಾಯಾಗಿ ಮಲಗಿ ನಿದ್ದೆ ಹೊಡೆದಿರಬಹುದು. ನಾವು ನೊಂದು, ಬೆಂದು ಸೋಲುವುದರಲ್ಲಿ ಅರ್ಥವಿಲ್ಲ. ಆ ಹುಳದ ಜೀವನಕ್ಕಿಂತ ಎಷ್ಟೋ ಸಾರ್ಥಕವಾಗಿ ನೀನು ಬದುಕುತ್ತಿದ್ದೀಯ. ಅಂತಹವರ ಜೊತೆ ನಿನ್ನ ಹೋಲಿಸುವುದೂ ತಪ್ಪು. ಆದರೂ ಈ ಹಣ, ಪ್ರತಿಷ್ಠೆ, ಅವಕಾಶ ಇದರಿಂದ ನಮ್ಮ ಜೀವನ ಸುಂದರವೋ ಸುಡುಗಾಡೋ ಆಗುವುದಿಲ್ಲವಲ್ಲ. ಅವರಿವರೊಂದಿಗೆ ಪೈಪೋಟಿಗೆ ಬಿದ್ದು ಏನಾಗಬೇಕಿದೆ? ನಮ್ಮಿಬ್ಬರ ಮಧ್ಯೆ ಇರುವ ಈ ಬಾಂಧವ್ಯ ಏನು ಕೊಟ್ಟರೆ ಸಿಗತ್ತೆ ಹೇಳು. ನಮ್ಮ ಹಾದಿಯಲ್ಲಿ ಬಿದ್ದ ಒಂದು ಕಲ್ಲು ಈ ಸಮಸ್ಯೆ. ಕಾಲಲ್ಲಿ ಒದ್ದು ಮುಂದೆ ಹೋಗುವ. ಸರಿಯಾದ ಒಂದು ದಾರಿ ಸಿಕ್ಕೇ ಸಿಗತ್ತೆ. ನಾವು ಚೆನ್ನಾಗಿಯೇ ಇರ್ತೀವಿ” ಎನ್ನುವಾಗ ಅವಳ ಹೃದಯದಲ್ಲಿ ಮೊಳೆತ ನೆಮ್ಮದಿಯ ಸೆಳಕೊಂದು ಅವನಿಗೂ ತಗುಲಿತ್ತು. ಕತ್ತಲೆ ತಲೆನೇವರಿಸಿ ಮಗ್ಗುಲು ಬದಲಿಸುತ್ತಿತ್ತು.

ಇಷ್ಟು ವರ್ಷದಿಂದ ಯಾರಲ್ಲೂ ಬಾಯಿಬಿಡದೆ ಮುಚ್ಚಿಟ್ಟುಕೊಂಡು ಬಂದ ಖಾಸಗಿ ಪುಟವೊಂದನ್ನು ಅಭಿಗೆ ತಿಳಿಸುವೆನೆಂಬ ಸುಳಿವೇ ಇಲ್ಲದೆ, ಹೇಳುತ್ತಾ ಹೋದೆ. ” ಅಭಿ, ಕೆಲವೊಮ್ಮೆ ಕೆಲವು ಅನುಭವಗಳು ನಮ್ಮ ವಯಸ್ಸು, ಬುದ್ಧಿ, ಯೋಗ್ಯತೆಗೂ ಮೀರಿ ನಮ್ಮನ್ನು ಪ್ರಭಾವಿಸಿ, ವ್ಯಕ್ತಿತ್ವದ ಆಯಾಮವನ್ನೇ ಬದಲಿಸಿಬಿಡತ್ತೆ. ಹಿಂತಿರುಗಿ ನೋಡಿ, ಆ ದಿನಗಳನ್ನು ಬೇರೆಯೇ ರೀತಿ ನೋಡಬಹುದಿತ್ತೇ ಎಂದು ಪ್ರಶ್ನಿಸಿಕೊಳ್ಳುವ ಶಕ್ತಿಯೂ ಉಳಿದಿರುವುದಿಲ್ಲ. ಇನ್ನು ಯಾರಲ್ಲಾದರೂ ಹೇಳಿದರೆ ನಮ್ಮನ್ನೇ ಅನುಮಾನಿಸಿ, ಅವಮಾನಿಸಿ, ತಿರಸ್ಕರಿಸಿ ಹೊರಟರೆ ಎಂಬ ಹಿಂಜರಿಕೆ. ನೀನು ನಂಬುತ್ತಿಯೋ ಇಲ್ಲವೋ. ನನಗೆ ವಯಸ್ಸಿನ ಹುಡುಗರು, ಮಧ್ಯ ಪ್ರಾಯದವರಿಗಿಂತ ಈ ಮುದುಕರೆಂದರೆ ಭಯವಾಗತ್ತೆ. ಅವರನ್ನು ನಂಬುವುದೇ ಕಷ್ಟವೆನಿಸುತ್ತೆ. ನನಗಾದ ಒಂದು ಅನುಭವದ ಆಧಾರದ ಮೇಲೆ ಎಲ್ಲರೂ ಹಾಗೇ ಎಂಬ ತೀರ್ಮಾನವಲ್ಲ. ಆದರೂ, ನಂಬುವುದು ಅಸಾಧ್ಯ.ಕೇಳಿಸ್ತಿದೆಯಾ?” ಅಭಿ ಹು ಎನ್ನುವಂತೆ ತಲೆಯಾಡಿಸಿದ.  ಕುತೂಹಲ, ಪ್ರಶ್ನೆ, ಭಯ ಬೆರೆತ ಬಿಡುಗಣ್ಣ ನೋಟದೊಂದಿಗೆ.

” ಪೀಠಿಕೆಯೇ ಇಷ್ಟುದ್ದ ಅಂದ್ಕೋಬಹುದು. ನಾನು ಇದನ್ನು ಎಂದಾದರೊಮ್ಮೆ ಯಾರಲ್ಲಾದರೂ ಹೇಳುವೆನೆಂಬ ಸಣ್ಣ ಸುಳಿವೂ ಇರಲಿಲ್ಲ. ಈ ಪೀಠಿಕೆ ಕೂಡ ನನ್ನೊಳಗೆ ಈ ವಿಷಯ ಹೇಳಲು ಬೇಕಿರುವ ಗಟ್ಟಿತನ, ಧೈರ್ಯವನ್ನು ತಂದುಕೊಳ್ಳಲು ಬೆಳೆಸುತ್ತಿರುವುದು. ಆಗ ಆರನೇ ಕ್ಲಾಸಲ್ಲಿದ್ದೆ. ಮನೆಯ ಹತ್ತಿರವೇ ನಿವೃತ್ತ ಕಾಲೇಜ್ ಪ್ರೊಫೆಸರ್. ಗಣಿತ, ಇಂಗ್ಲಿಷ್, ವಿಜ್ಞಾನದಲ್ಲಿ ಪ್ರಕಾಂಡ ಪಂಡಿತ.  ನನಗೋ ಗಣಿತದ ಮೂಲ ನಿಯಮಗಳನ್ನು ಗಾಳಿಗೆ ತೂರಿ ಲೆಕ್ಕ ಮಾಡುವ ಹುಡುಗಾಟಿಕೆ. ನಿಯಮಕ್ಕೆ ಅನುಸಾರವೇ ಯಾಕೆ ಮಾಡಬೇಕು? ಹೀಗೆ ಮಾಡಿದ್ರೆ ತಪ್ಪೇನು? ಎಂಬ ತಲೆಹರಟೆ ಪ್ರಶ್ನೆಗೆಲ್ಲಾ ಉತ್ತರ ಕೊಡುವ ವ್ಯವಧಾನ ಅಮ್ಮನಿಗಿರುತ್ತಿರಲಿಲ್ಲ. ಆಗಷ್ಟೇ ಮನೆ ಕಟ್ಟಿ ಆದ ಸಾಲ, ಹಬ್ಬ ಹರಿದಿನ, ತಿಥಿ, ಶ್ರಾದ್ಧದ ಖರ್ಚು, ಬೆಳೆಯುತ್ತಿರುವ ಹೆಣ್ಣುಮಕ್ಕಳು, ಇನ್ನು ಹತ್ತು ವರ್ಷಕ್ಕೆ ಮದುವೆಗೆ ಕೂಡಿಡಬೇಕೆನ್ನುವ ಜವಾಬ್ದಾರಿ, ಬಂದು ಹೋಗುವ ನೆಂಟರಿಷ್ಟರು…ಒಂದು ಆದಾಯದಲ್ಲಿ ಇವೆಲ್ಲಾ ನಿಭಾಯಿಸಬೇಕಾದ ಹೊಣೆಗಾರಿಕೆಯಿದ್ದ ಅವಳಿಗೆ ಈ ತಲೆಹರಟೆ ತಲೆಚಿಟ್ಟು ಹಿಡಿಸುತ್ತಿತ್ತು. ಮಕ್ಕಳು ಚೆನ್ನಾಗಿ ಓದಿ ಮುಂದೆ ಬರಲೆಂಬ ಆಸೆಯೂ ಇತ್ತು. ಅಂತಹ ಸಮಯದಲ್ಲೇ ಈ ಪಂಡಿತ ಬಲೆಬೀಸಿ, ಮಗಳನ್ನು ನನ್ನ ಹತ್ತಿರ ಪಾಠಕ್ಕೆ ಕಳಿಸಿ ಅಮ್ಮ. ಚುರುಕಾಗಿ ಕಾಣ್ತಾಳೆ. ಮುಂದೆ ಉಜ್ವಲ ಭವಿಷ್ಯವಿದೆ.ನಾನೇ ತಯಾರು ಮಾಡ್ತೀನಿ. ಎಂದು ಭರವಸೆಯಿತ್ತ. ತಂದೆಯ ವಯಸ್ಸಿನಾತ ಇಷ್ಟು ಹೇಳಿದ ಮೇಲೆ ಅನುಮಾನಿಸುವುದುಂಟೆ? ಅಮ್ಮ ಅವರ ಮನೆಗೆ ನಿತ್ಯ ಪಾಠಕ್ಕೆ  ಪುಸಲಾಯಿಸಿ ಕಳಿಸಿದಳು. ಒಂದೆರಡು ದಿನ ಸಭ್ಯವಾಗಿ ಪಾಠ ಹೇಳಿದ ಮನುಷ್ಯ, ಆಮೇಲೆ ವಿಚಿತ್ರವಾಗಿ ಆಡಲು ಶುರು ಮಾಡಿದ. ಆ ಕಣ್ಣಲ್ಲಿದ್ದ ಕಾಮತೃಷೆ ಈಗ ನೆನಪಾದರೂ ಅಸಹ್ಯದಿಂದ ವಾಕರಿಕೆ ಬರುತ್ತೆ. ಕೆಟ್ಟದಾಗಿ ಮುಟ್ಟುವುದು, ಜಿಗುಟುವುದು ಮಾಡ್ತಿದ್ದ ಆ ಮುದುಕನ ಬಳಿ ಹೋಗುವುದಿಲ್ಲವೆಂದು ನನಗೆ ನಾನೇ ಹೇಳಿಕೊಂಡೆ. ಪಾಠಕ್ಕೆ ಹೋಗ್ತೀನಂತ ಬ್ಯಾಗೇರಿಸಿ ಗೆಳತಿಯ ಮನೆಯಲ್ಲಿ ಕೂತು ಅವಳ ಹತ್ತಿರವೇ ಲೆಕ್ಕ ಕಲಿತು ಬಂದೆ. ಸಣ್ಣ ಊರಿನಲ್ಲಿ ಯಾವ ವಿಚಾರವೂ ಗುಟ್ಟಾಗಿ ಉಳಿಯಲ್ಲ. ಗೆಳತಿಯ ತಾಯಿ ಅಮ್ಮನಿಗೆ ಅಂಗಡಿಯಲ್ಲಿ ಸಿಕ್ಕಾಗ, “ನಿಮ್ಮ ಮಗಳು ದಿನವೂ ನಮ್ಮನೆಗೆ ಬಂದು ಓದಿ ಬರೆದು ಮಾಡಿ ಹೋಗ್ತಾಳೆ. ನನ್ನ ಮಗಳಿಗೂ ಕನ್ನಡ, ಹಿಂದಿ ಕಲಿಸಿಕೊಡ್ತಾಳೆ. ಒಳ್ಳೆ ಮಗು. ಇಬ್ಬರೂ ಒಬ್ಬರಿಗೊಬ್ಬರು ಸಹಾಯ ಮಾಡ್ತಾರೆ ನೋಡಿ. ನಮ್ಮವಳಿಗೆ ಲೆಕ್ಕ ಸಲೀಸು. ಕನ್ನಡ, ಹಿಂದಿಯಲ್ಲಿ ಹಿಂದೆ. ನಿಮ್ಮ ಮಗಳು ಭಾಷೆಯಲ್ಲಿ ಜಾಣೆ. ಗಣಿತ ಕಷ್ಟ. ಹೇಗೋ ಮಕ್ಕಳು ಜವಾಬ್ದಾರಿಯಿಂದ ಓದ್ತಾರಲ್ಲ ಅದೇ ಖುಷಿ” ಅಂದಿದ್ದಾರೆ. ಅಮ್ಮನಿಗೆ ಸಿಟ್ಟು,ಅನುಮಾನ, ಸಂತೋಷ ,ಬೇಸರ ಅಂತ ಗುರುತಿಸಲಾಗದ ಮಿಶ್ರ ಭಾವ. “ಮನೆಪಾಠಕ್ಕೆ ಹೋಗ್ತೀನಂತ ಸುಳ್ಳು ಹೇಳಿ, ಅವರಿವರ ಮನೆಯಲ್ಲಿ ಕೂತು ಬರ್ತೀಯಾ? ಅಮ್ಮನ ಹತ್ತಿರ ಮುಚ್ಚಿಡುವಂತಹ ರಾಜಕಾರ್ಯ ಏನಿರುತ್ತೆ? ನಾನಂತೂ ಹೆಚ್ಚು ಓದಿ, ಬರೆದು ಮಾಡಿ ಸೈ ಅನ್ನಿಸ್ಕೊಳ್ಳಲಿಲ್ಲ. ಮಕ್ಕಳಾದರೂ ಚೆನ್ನಾಗಿ ಓದಿ ಮುಂದೆ ಬರಲಿ ಅಂತ ಆಸೆಪಟ್ಟು ಒಳ್ಳೆ ಕಡೆ ಪಾಠಕ್ಕೆ ಹಾಕಿದರೆ ತಲೆಯಾಮಾರಿಸಿ ಓಡಾಡೋದು. ಸಣ್ಣಪುಟ್ಟ ವಯಸ್ಸಿಗೆ ಇಂತಹ ವಿದ್ಯೆ ಕಲಿತರೆ, ದೊಡ್ಡವರಾದ ಮೇಲೆ ನಿಮ್ಮನ್ನು ಹೇಗೆ ನಂಬೋದು?” ಅಮ್ಮ ದುಸುಮುಸು ಓಡಾಡುತ್ತಾ, ಕೆಲಸ ಮಾಡುತ್ತಾ ಬೈದಳು. ಅತ್ತಳು. ನನ್ನ ಬಾಯಿಂದ ಒಂದು ಶಬ್ದ ಬಂದಿದ್ದರೆ ಕೇಳಿ. ಅವಳಿಗೂ ಇದೊಂದು ವಿಷಯ ಹಿಡಿದು ರಂಪ ಮಾಡಿ ಸಾಕಾದ ಹಾಗೆ ಆಮೇಲೆ ಯಾವ ಪಾಠದ ಸುದ್ದಿಗೂ ಬರಲಿಲ್ಲ. ಅಮ್ಮನ ಕಣ್ಣಲ್ಲಿ ನೀರು ಬರದ ಹಾಗೆ ಒಳ್ಳೆ ಶ್ರೇಣಿಯಲ್ಲೇ ಓದುತ್ತಾ ಬಂದೆ.  ಓದು, ಉದ್ಯೋಗ, ಮದುವೆ, ಮಗು ಎಲ್ಲಾ ಅಧ್ಯಾಯಗಳನ್ನೂ ನೋಡಿದ್ದಾಯ್ತು. ಆಗಲೇ ಮನಸ್ಸಿಗೆ ಬಂದಿತ್ತು. ಮಗುವಾದ ಮೇಲೆ ಹೊರಗೆ ಕೆಲಸಕ್ಕೆ ಹೋಗಬಾರದು. ಅದರ ಎಲ್ಲಾ ಅಗತ್ಯಕ್ಕೂ ನಾನೇ ಹೊಣೆಯಾಗಿ ಜೋಪಾನವಾಗಿ ಕಾಯಬೇಕು ಅಂತ. ಮನು ಹುಟ್ಟಿದಂದಿನಿಂದ ಅದೆಷ್ಟು ಸಲ , ಯಾರೋ ಮುದುಕ ಅವಳನ್ನು ತಬ್ಬಿದಂತೆ, ತುಟಿ ಕಚ್ಚಿ ರಕ್ತ ಒಸರಿದಂತೆ ಕನಸು ಬಿದ್ದಿದೆಯೋ…ಅದನ್ನು ಕೂಡ ಯಾರಿಗೂ ತಿಳಿಸದೆ ಒಳಗೇ ಬಚ್ಚಿಟ್ಟುಕೊಂಡೆ. ಈ ಮುದುಕನ ಹತ್ತಿರ ಸಂಗೀತ ಅಂದಾಗಲೂ, ಮನೆಗೆ ಕರೆಸಿ ಪಾಠ ಹೇಳಿಸಿ ಅಂದಿದ್ದೆ ನೆನಪಿದೆಯಾ? ಮನೆಮನೆಗೆ ತಿರುಗಿ ಪಾಠ ಹೇಳುವ ಪೈಕಿಯಲ್ಲ ಅವರು ಅಂದಿರಿ. ಪಾಠದ ಸಮಯದಲ್ಲಿ ಅಮ್ಮ ಅಪ್ಪ ಮಕ್ಕಳ ಮುಂದೆ ಕೂತರೆ ತಿದ್ದಲಾಗುವುದಿಲ್ಲ. ನೀವು ಹೊರಗಿರಿ ಅಂತ ಆ ಕ್ರಿಮಿ ಆಚೆಗಟ್ಟುತ್ತಿದ್ದ. ನಾನು ಕಂಡ ಅಸಹ್ಯವನ್ನೇ ಮಗಳು ಕಂಡ ಹಾಗಾಯ್ತು ಎನ್ನುವ ನೋವು ಕರುಳು ಹಿಂಡತ್ತೆ ಅಭಿ. ನಾನೂ ಅಷ್ಟೇ. ಹೊರಗೆ ಎಲ್ಲರಿಗೂ, ನಿಮಗೂ ಸಮಾಧಾನ ಹೇಳ್ತೀನಿ. ನನಗೆ ನಾನು ಸಮಾಧಾನ ಹೇಳಿಕೊಳ್ಳೋದು ಕಷ್ಟವಾಗತ್ತೆ. ಆದರೆ ಈ ಪ್ರಕರಣವನ್ನ ಹೀಗೇ ಬಿಡಬಾರದು. ಅವನಿಗೆ ಶಿಕ್ಷೆಯಾಗಲೇ ಬೇಕು. ಒಂದು ಮಾರ್ಗ ಹುಡುಕೋಣ”.

ಇಷ್ಟು ಕಥೆ ಹೇಳುವವರೆಗೂ ಬಿಟ್ಟಿದ್ದೇ ಹೆಚ್ಚೆಂಬಂತೆ ಕೂತಲ್ಲಿಯೇ ಚಡಪಡಿಸುತ್ತಿದ್ದ ಅಭಿ , ಗಟ್ಟಿಯಾಗಿ ತಬ್ಬಿಕೊಂಡಿದ್ದ. ಸಂತೋಷಕ್ಕೂ, ದುಃಖಕ್ಕೂ, ಮುನಿಸಿನ ನಂತರದ ರಾಜಿಗೂ, ಸಾಂತ್ವನಕ್ಕೂ, ಪ್ರೀತಿಗೂ ಅಪ್ಪುಗೆಯೇ ಅವನ ಮೊದಲ ಹೆಜ್ಜೆ. ಇಬ್ಬರ ಹೃದಯವೂ ಕರಗಿ ಹಗುರಾದ ಹಾಗೆ. ಏನಾದರೂ ಬರಲಿ.‌ನಾವು ಒಟ್ಟಿಗಿರುವಾಗ ಎದುರಿಸಿ ಗೆಲ್ಲುವುದೇ ಸತ್ಯವೆಂಬ ಭಾವ ಹುಟ್ಟಿದ ಬೆನ್ನಲ್ಲೇ, ಅಭಿ ಮಾತನಾಡುತ್ತಿದ್ದ ” ಅನ್ನಿಸಿದ್ದನ್ನು ಸ್ಪಷ್ಟವಾಗಿ, ನಿಖರವಾಗಿ ಹೀಗೇ ಎಂದು ಹೇಳಲು ಬರದ ದಡ್ಡ ನಾನು. ನಿನಗೆ ಸಮಾಧಾನ ಹೇಳಬೇಕು. ಧೈರ್ಯ ಕೊಡಬೇಕು‌. ಇಷ್ಟು ವರ್ಷ ನಿನ್ನೊಳಗೇ ಉಳಿದು ಹಿಂಸಿಸಿದ ಆ ನೆನಪು, ಕೆಟ್ಟ ಕನಸುಗಳು ಇದೆಲ್ಲವೂ ಇರದ ಚೆಂದದ ನಾಳೆಗಳನ್ನು ನಿನಗೆ ತರಬೇಕು. ನಮ್ಮ ಪುಟ್ಟ ಕುಟುಂಬವನ್ನು ಸದಾ ಸುಖವಾಗಿರಿಸಬೇಕು‌. ಎಂದೆಲ್ಲಾ ಅನಿಸುತ್ತಿದೆ. ಕೆಟ್ಟ ಘಟನೆಗಳೇ ಸುಂದರ ಕನಸುಗಳನ್ನು ಹುಟ್ಟಿಸಬಹುದು ಎಂಬುದೇ ಈ ಕ್ಷಣದವರೆಗೂ ತಿಳಿದಿರಲಿಲ್ಲ. ನಿಜ ಹೇಳಲಾ? ಇವತ್ತು ನಾವಿಬ್ಬರೂ ಹೆಚ್ಚು ಹತ್ತಿರವಾಗಿದ್ದೇವೆ. ಇಬ್ಬರ ನಡುವಿದ್ದ ತೆರೆಯೊಂದು ಕಳಚಿ, ದೃಷ್ಟಿ ಸ್ಪಷ್ಟವಾಗಿದೆ. ಇನ್ನು ಇವತ್ತಿನ ಸವಾಲಿಗೂ ದಾರಿ ಕಂಡಾಯ್ತು. ನಮ್ಮ ವಿಮಲನ ಮಗಳು ಸ್ವಾತಿ ಇಲ್ವಾ? ಮಹಿಳಾ ಮತ್ತು ಮಕ್ಕಳ ರಕ್ಷಣಾ ವೇದಿಕೆಯಲ್ಲಿ ಕೆಲಸ ಮಾಡ್ತಿರೋದು. ಹೀಗೊಬ್ಬ ಕಿರಾತಕ ಇದ್ದಾನೆ ಅಂತ ತಿಳಿಸಿದ್ರೆ ಸಾಕು. ಮುಂದಿನದ್ದು ಅವರು ನೋಡ್ಕೋತಾರೆ. ನಮ್ಮ ಮಗು ಸ್ವಲ್ಪದರಲ್ಲಿ ಬಚಾವಾಯ್ತು ಅಂತ ಕೈಕಟ್ಟಿ ಕೂರೋದಕ್ಕಿಂತ ಅವರಿಗೆ ಪಾಪಿಯ ಬಗ್ಗೆ ತಿಳಿಸೋದು ಸರಿ. ನಾಳೆ ಆಫೀಸಿಗೆ ರಜಾ ಹಾಕ್ತೀನಿ. ಹೋಗಿ ಬರೋಣ. ಗಂಟೆ ಎರಡಾಯ್ತು. ನೀನು ಇವೆಲ್ಲ ಯೋಚನೆ ಹಚ್ಚಿಕೊಳ್ಳದೆ ನಿಶ್ಚಿಂತೆಯಿಂದ ಮಲಗು. ಬೆಳಗ್ಗಿನ ತಿಂಡಿ ಹೋಟೇಲಿಂದ ತಂದರೆ ಆಯ್ತು.” ಎಂದು ತಲೆ ನೇವರಿಸಿದ. ಅವನೊಳಗೆ ಹುಟ್ಟಿದ ವಿಶ್ವಾಸವೇ ಹಳೆಯ ಮತ್ತು ಹೊಸ ಗಾಯ ಮಾಯಿಸುವ ಮುಲಾಮಿನಂತೆ ತೋರಿ, ಕಣ್ತುಂಬಿತು.

ನಿತ್ಯಮಲ್ಲಿಗೆಯ ಗೊಂಚಲೊಂದು ಅರಳಿ ಹಿತವಾದ ಪರಿಮಳ ಚೆಲ್ಲುತ್ತಿತ್ತು.  ರಾತ್ರಿ ಅರ್ಧ ಕಳೆದಿತ್ತು.


ಎಸ್ .ನಾಗಶ್ರೀ ಅಜಯ್

3 thoughts on “ಎಸ್ .ನಾಗಶ್ರೀ ಅಜಯ್ ರವರ ಕಥೆ-ಮೀ ಟೂ

  1. ನಿಜಕ್ಕೂ ಮನ ‘ಮೀಟಿದ’ ಕಥೆ. ದಾಂಪತ್ಯಕ್ಕೆ ಇರುವ ಹಲವಾರು ಆಯಾಮಗಳಲ್ಲಿ ಗೆಳೆತನ ಎಂಬುದು ಅದ್ಭುತವಾದದ್ದು. ಇಂಥ ಸೂಕ್ಷ್ಮ ಸನ್ನಿವೇಶಗಳಲ್ಲಿ, ದಂಪತಿ ಪರಸ್ಪರರಿಗೆ ಸ್ಪಂದಿಸಬೇಕಾದ ಉತ್ತಮ ವಿಧಾನ, ಈ ಕಥೆಯಲ್ಲಿ ಆರ್ದ್ರವಾಗಿ ಮೂಡಿಬಂದಿದೆ. ಎಲ್ಲಾ ಮಕ್ಕಳಿಗೂ ಇಷ್ಟು ವಿಶಾಲವಾಗಿ, ಧೈರ್ಯವಾಗಿ ಹೆಜ್ಜೆ ಮುಂದಿಡುವ ಪೋಷಕರು ಬೇಕು.

  2. ನಿಜವಾಗಿಯೂ ಚೆನ್ನಾಗಿದೆ. ತಂದೆ ತಾಯಿ ಮಕ್ಕಳಿಗೆ ಭದ್ರತಾ ಭಾವ ತುಂಬುವುದು ಅವಶ್ಯಕ.

  3. ಕಥೆ ಚೆನ್ನಾಗಿದೆ.ನಮ್ಮ ಮಗಳು ಸ್ವಲ್ಪದರಲ್ಲಿ ತಪ್ಪಿಸಿಕೊಂಡಳು ಎನ್ನುವುದಕ್ಕಿಂತ ತಪ್ಪು ಮಾಡಿದವನಿಗೆ ಶಿಕ್ಷೆ ಆಗಲೇಬೇಕು ಎನ್ನುವ ನಿರ್ಧಾರವೇ ಮನಸ್ಸಿನ ಕ್ರೋಧವನ್ಮು ಕಡಿಮೆಯಾಗಿಸುತ್ತದೆ.ಹೇಳಿಕೊಳ್ಳಲಾಗದ ಜ್ವಲಂತ ಸಮಸ್ಯೆಯ ಬಗ್ಗೆ ಸೂಕ್ಷ್ಮವಾಗಿ ಚರ್ಚೆ ಹುಟ್ಟು ಹಾಕುವ ಕಥೆ.

Leave a Reply

Back To Top