ಸುಲೋಚನಾ ಮಾಲಿಪಾಟೀಲ ಅವರ ಕವಿತೆ ಪ್ರಕೃತಿಯ ಸಿರಿ

ಜೀವ ಜಗತ್ತಿನಲ್ಲಿದೆ ವಿಸ್ಮಯತೆಯ ಶೃತಿ
ಪರಿಸರಕ್ಕಿರುವುದು ಪ್ರಕೃತಿಯಲ್ಲಿನ ಸ್ಪಿಕೃತಿ
ಸ್ವರ್ಗದಂತಿಹುದು ಭೂಮಡಿಲಿನ ಶೃಂಗಾರ
ತುಂಬಿಕೊಂಡು ನಿಂತಿರುವುದು ಸಿರಿಯ ಸಾರ
ಮುಳುಗಿದೆ ಇದರಲ್ಲಿ ಪಾಂಚಜನ್ಯದಾಗರ
ಆ ದೇವರು ನಮಗಾಗಿ ದಾನ ಕೊಟ್ಟ ವರ

ಹನಿಬಿಂದು ನೀ ಇಬ್ಬನಿಯಾಗಿ ಬಂದು
ಮಿನುಗುವ ನಿನ್ನ ಧರ ಮುಂಜಾವಿನಂದು
ನಿಸರ್ಗದ ಹಸಿರು ಹಾಸಿಗೆಯಲ್ಲಿ ಮಿಂದು
ಮುಟ್ಟಲು ಮನಕೆ ತರುವ ಕಚಗುಳಿಯೊಂದು
ಹಿಮಗಿರಿಯಲ್ಲಿ ಬಂಗಾರದ ಹೊಳಪೊಂದು
ಸೂರ್ಯನ ಉದಯಾಸ್ತಮದ ಪ್ರತಿದಿನದಂದು

ನೈಸರ್ಗಿಕ ವಿದ್ಯಮಾನಗಳ ಋತುಮಾನ
ಉಕ್ಕಿ ಹರಿವ ನದಿ ಜಲಪಾತಗಳ ಉದ್ಯಾನ
ಸಾಗರ ಅಪ್ಪಳಿಸಿ ಹಾಡುವ ಅಲೆಗಳ ಗಾನ
ಭೂತಾಯಿಗೆ ತಂಪೆರೆಚುವ ಅಭಿಯಾನ
ಸೃಷ್ಟಿಯ ವರ್ಣನೆಯಲಿ ಮುಳಿಗೆದ್ದ ಭವ್ಯತನ
ಕವಿಯ ದೃಷ್ಟಿಯಲ್ಲಿ ಸೆರೆಹಿಡಿದಿಡುವ ಕವನ

ದಿನ ನಿತ್ಯದ ದಿನಚರಿಗೆ ಧರೆಯ ವಾತಾವರಣ
ಓಂಕಾರದಲಿ ಝೆಂಕರಿಸುವ ಸೊಬಗುತನ
ಅನುಭವಿಸುತ ಬದುಕುವ ಜೀವಸಂಕುಲ ಬನ
ನಿಸರ್ಗದ ಸೌಂದರ್ಯಕ್ಕೆ ನಾಚಿಹುದು ಹೆಣ್ತನ
ಬಯಸಿಹುದು ಆಸರೆಗೆ ಹೊಸದೊಂದು ಚೇತನ
ಪ್ರಕೃತಿಯ ಚಲನಾ ಬಿಂದುವಿಗಿದೋ ಸಮರ್ಪಣ


Leave a Reply

Back To Top